ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಸಿದ ಡ್ರಾಗನ್,ಅಹಿಂಸೆಯ ದಲೈಲಾಮ

By Staff
|
Google Oneindia Kannada News

The World keeps mum as china roars. The biggest lies on earth is told in silence: ಇಲಿ, ಕುರಿ, ಮೊಲ, ಮೇಕೆಗಳಂತಹ ದೇಶಗಳ ಮೇಲೆ ದೈತ್ಯ ಚೀನಾದ ಅತಿಕ್ರಮಣ ನಿರಾತಂಕವಾಗಿ ನಡೆಯುತ್ತಲೇ ಇದೆ. ಈ ಯುಧ್ಧ ಪಿಪಾಸು ಚೀನದ ಇಂಗದ ಭೂಮಿದಾಹವನ್ನು ನೋಡಿಕೊಂಡು ಕಣ್ಣು ಮುಚ್ಚಿ ಕುಳಿತಿರುವ ಅಮೆರಿಕಾದ ಮೌನ ಅನೇಕ ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ. ಒಂದು ಯುದ್ಧವಿರೋಧಿ ಮತ್ತು ಶಾಂತಿ ಪ್ರೀತಿಯ ಟಿಪ್ಪಣಿ.

ಎಂ.ಆರ್. ದತ್ತಾತ್ರಿ, ಅರ್ ವೈನ್, ಕ್ಯಾಲಿಫೋರ್ನಿಯಾ

ಚೀನಾದ ಬಗೆಗಿನ ನನ್ನ ಈ ಅಪಶಕುನದ ಯೋಚನೆಗಳು ಸುಳ್ಳಾಗಲಿ ; ನನ್ನ ಈ ದುಃಸ್ವಪ್ನದಲ್ಲಿ ಚೀನಾ ಹೆಬ್ಬಾವಿನಂತೆ ತನ್ನ ವಿಕಾರವಾದ ಬಾಯಿಯನ್ನು ತೆರೆದು ಏಷ್ಯಾ ಖಂಡದ ಒಂದೊಂದೇ ದೇಶಗಳನ್ನು ಗುಳುಂ ಮಾಡಲು ಮುಂದಾಗಿದೆ!ಎಷ್ಟೇ ಎಚ್ಚರವಹಿಸಿ ಮಾತನಾಡಿದರೂ ವಾಸ್ತವ ಪ್ರಪಂಚ ಈ ಅಪಶಕುನಕ್ಕಿಂತಾ ತೀರಾ ಬೇರೆಯಾಗಿಲ್ಲ.

ಚೀನಾ ಟಿಬೆಟ್‌ನ್ನು ಆಕ್ರಮಿಸಿಕೊಂಡು ನೇಪಾಳದ ಹೊಸ್ತಿಲಲ್ಲಿ ನಿಂತಿದೆ. ನೇಪಾಳ, ಭೂತಾನ, ಬರ್ಮ ದೇಶಗಳೆಲ್ಲಾ ಹುಲಿಯೆದುರು ಸುಳಿದಾಡುತ್ತಿರುವ ಮೊಲಗಳಂತೆ ಕಾಣುತ್ತಿವೆ. ಚೀನಾದ ಡ್ರಾಗನ್‌ನ್ನು ಸ್ವಲ್ಪಮಟ್ಟಿಗಾದರೂ ತಡೆಯಬಲ್ಲ ಶಕ್ತಿಯಿರುವ ಭಾರತ ತನ್ನದೇ ಆದ ಸಮಸ್ಯೆಗಳಲ್ಲಿ ಮುಳುಗಿರುವಾಗ ತನ್ನ ಈಶಾನ್ಯ ಭೂಭಾಗವನ್ನು ಒಂದೊಂದೇ ತುತ್ತಿನ್ನಂತೆ ಈ ಡ್ರಾಗನ್‌ನ ಬಾಯಿಗೆ ಹಾಕುತ್ತಿದೆ. ಹಿಂದೂಗಳ ಪವಿತ್ರ ಯಾತ್ರಾಸ್ಥಳ ಮಾನಸ ಸರೋವರಕ್ಕೆ ಹೋಗಲು ಚೀನಾದ ವೀಸಾ ತೆಗೆದುಕೊಳ್ಳಿ ಎಂದು ತನ್ನ ನಾಗರಿಕರಿಗೆ ನಯವಾಗಿ ಸೂಚಿಸುತ್ತಿದೆ. ತುತ್ತಿನಿಂದ ತುತ್ತಿಗೆ ಡ್ರಾಗನ್ ದೈತ್ಯನ ಹಸಿವು ಮತ್ತೂ ಹೆಚ್ಚಾಗಿ ವಿಷನಾಲಿಗೆಯನ್ನು ಹೊರಚಾಚಿ ಭೀಕರವಾಗಿ ಪೂತ್ಕರಿಸುತ್ತಿದೆ.

ಟಿಬೆಟ್ ಹಿಂದಿನಿಂದಲೂ ನನಗೆ ಸೇರಿದ್ದು ಎಂದು ಚೀನ ಗರ್ಜಿಸಿದರೆ ಪ್ರಪಂಚ ಭಯಪೂರಿತವಾಗಿ ಮೌನವಾಗಿದೆ. ಥೈವಾನ್ ಕೂಡ ಶತಮಾನಗಳಿಂದ ನನಗೇ ಸೇರಿದ್ದು ಎಂದು ಆರ್ಭಟಿಸಿದರೆ ಆನೆಯ ತುಳಿತವನ್ನು ಎದುರು ನೋಡುತ್ತಿರುವ ಇರುವೆಯಂತೆ ಥೈವಾನ್ ನಡುಗುತ್ತದೆ. ಚೀನಾ ಬೂತನಿಗೇಕೆ ಈ ಪಾಟಿ ಹಸಿವು?

ಆಕ್ರಮಣಶೀಲತೆ ಮತ್ತು ವಸಾಹತುಶಾಹಿಯ ಹೊಸ ಸಂಕ್ರಮಣವನ್ನು ಕಾಣುತ್ತಿದ್ದೇವೆ ನಾವು. ಲೂಟಿ ಹೊಡೆದು ಓಡಿಹೋಗುವ ದರೋಡೆಕೋರತನದಿಂದ ಬದಲಾಗಿ ನೀರು, ನೆಲ, ಖನಿಜ ಮತ್ತು ಸಂಪನ್ಮೂಲಗಳಿಗಾಗಿ ನೆಲವನ್ನು ಆಕ್ರಮಿಸಿಕೊಂಡು ಜನರನ್ನು ಅಸಹಾಯಕರನ್ನಾಗಿಸಿ ಸಮುದ್ರಕ್ಕೆ ಅಟ್ಟುವ ಹೊಸ ಆಕ್ರಮಣದ ಮಜಲಿನಲ್ಲಿ ನಾವಿದ್ದೇವೆ. ಮನೆ, ಮನೆಯಲ್ಲಿ ವಾಸಿಸುವ ನಮ್ಮವರು, ತಿಜೋರಿಯಲ್ಲಿಟ್ಟಿರುವ ಆಭರಣಗಳು ಮತ್ತು ದೇವರಮನೆಯನ್ನಷ್ಟೇ ರಕ್ಷಿಸಿಕೊಂಡರೆ ಸಾಲದು. ಮನೆಯ ಕೆಳಗೆ ಇನ್ನೂರು ಅಡಿಯಲ್ಲಿ ಹುದುಗಿರುವ ಕಬ್ಬಿಣದ ಅದಿರು, ಬೆಟ್ಟದಿಂದಿಳಿದು ಬಯಲಹಾಯ್ದು ಕಡಲ ಸೇರುವ ನದಿ, ಮರ ಗಿಡ ಹಕ್ಕಿ ನವಿಲು ಕಡೆಗೆ ಹೊಳೆಯ ಬದಿಯ ಕಪ್ಪೆಗಳನ್ನೂ ಕೂಡ ರಕ್ಷಿಸಿಕೊಳ್ಳಬೇಕು. ಕಪ್ಪೆಯನ್ನು ರಕ್ಷಿಸಿಕೊಳ್ಳಲಾಗದವರು ತಮ್ಮ ಚಿನ್ನವನ್ನೂ ರಕ್ಷಿಸಿಕೊಳ್ಳಲಾರರು. ಕಪ್ಪೆಗಳನ್ನು ರಕ್ಷಿಸಿಕೊಳ್ಳಲಾಗದವರು ತಮ್ಮ ಮಕ್ಕಳನ್ನೂ ರಕ್ಷಿಸಿಕೊಳ್ಳಲಾರರು. ರಕ್ಷಿಸಿಕೊಳ್ಳಲಾಗದ ಪರಿಣಾಮವೆಂದರೆ ನಮ್ಮ ಮರಮುಟ್ಟುಗಳೆಲ್ಲಾ ಮತ್ಯಾವುದೋ ದೇಶದ ಡೈನಿಂಗ್ ಟೇಬಲ್‌ಗಳಾಗುತ್ತವೆ, ನಮ್ಮ ಅದಿರುಗಳೆಲ್ಲಾ ಬಂದೂಕುಗಳಾಗಿ ನಮ್ಮೆಡೆಗೇ ಗುರಿಯಿಟ್ಟು ನಿಲ್ಲುತ್ತವೆ.

ಚೀನಾದಂತಹ ದೊಡ್ಡ ದೇಶ ಟಿಬೆಟಿನಂತಹ ಸಣ್ಣದೇಶವನ್ನೇಕೆ ಕಬಳಿಸಬೇಕು? ಇದಕ್ಕೆ ಹಲವು ಸಾಧ್ಯತೆಗಳು ಗೋಚರಿಸುತ್ತವೆ. ಮೇಲೆ ತಿಳಿಸಿದಂತೆ ಸಂಪನ್ಮೂಲಗಳ ತೀರದ ಹಸಿವು. ಹಿಂಸೆಯನ್ನು ಎದುರಿಸುವಲ್ಲಿ ಮತ್ತು ವಿರೋಧಿಸುವಲ್ಲಿ ಅಹಿಂಸೆಯನ್ನು ನಂಬಿದ ಜನಾಂಗದ ಅಸಹಾಯಕತೆ, ನೇಪಾಳ ಮತ್ತು ಈಶಾನ್ಯ ಭಾರತದ ನೆಲವನ್ನು ಕಬಳಿಸುವುದಕ್ಕೆ ಸಹಾಯವಾಗುವ ಟಿಬೆಟಿನ ಆಯಕಟ್ಟು ಮತ್ತು ಈ ವಿಷಯದಲ್ಲಿ ಉತ್ತೇಜಿಸುವಷ್ಟು ಮೌನವಹಿಸಿರುವ ಪ್ರಪಂಚ!

ಇಂದು ಔದ್ಯೋಗಿಕ ರಾಷ್ಟ್ರಗಳಿಗೆ ಬಾತ್‌ರೂಮಿನ ಪೇಪರಿನಿಂದ ಹಿಡಿದು ವಿಮಾನದ ಭಾಗಗಳವರೆಗೆ ಎಲ್ಲವನ್ನೂ ಚೀನಾದೇಶವೇ ಒದಗಿಸಿಬೇಕು. ಆಟಿಕೆಯ ಅಂಗಡಿಗೆ ಹೊಕ್ಕು ನೀವು ಕಣ್ಣುಮುಚ್ಚಿ ಯಾವ ಆಟಿಕೆಯನ್ನೂ ಹಿಡಿದು ಅದು ಎಲ್ಲಿ ತಯ್ಯಾರಾದದ್ದು ಎಂದು ಹೇಳಲು ನೀವು ಕಣ್ಣು ಬಿಡಬೇಕಾಗಿಯೇ ಇಲ್ಲ. ಮುಂದುವರೆದ ದೇಶಗಳ ಅರ್ಥವ್ಯವಸ್ಥೆ ಚೀನಾದಿಂದಾಗುವ ಆಮದಿನ ಮೇಲೆ ನಿಂತಿದೆ. ಹಾಗೆಯೇ, ಚೀನಾದ ಅರ್ಥವ್ಯವಸ್ಥೆ ಈ ಔದ್ಯೋಗಿಕ ದೇಶಗಳಿಗೆ ಸರಂಜಾಮುಗಳನ್ನು ರಫ್ತು ಮಾಡುವುದರಲ್ಲಿಯೇ ಅವಲಂಬಿತವಾಗಿದೆ. ಈ ಆಮದು ಮತ್ತು ರಫ್ತಿನ ಬಂಧನ ಯಾವ ಮಟ್ಟದಲ್ಲಿದೆಯೆಂದರೆ ಔದ್ಯೋಗಿಕ ದೇಶಗಳು ಔದ್ಯೋಗಿಕ ದೇಶಗಳಾಗಿಯೇ ಉಳಿಯಲು ಚೀನಾದಿಂದ ಪದಾರ್ಥಗಳು ಬಂದು ಸುರಿಯುತ್ತಲೇ ಇರಬೇಕು. ಅದೇರೀತಿ ಚೀನಾದೇಶ ತನ್ನ ಅರ್ಥವ್ಯವಸ್ಥೆಯ ಗಮನಾರ್ಹ ಬೆಳವಣಿಗೆಯನ್ನು ಅದೇ ರೀತಿ ಉಳಿಸಿಕೊಳ್ಳಲು ನಿರಂತರವಾಗಿ ವಸ್ತುಗಳನ್ನು ತಯ್ಯಾರಿಸಿ ಔದ್ಯೋಗೀಕರಣಗೊಂಡ ರಾಷ್ಟ್ರಗಳಿಗೆ ಸುರಿಯುತ್ತಲೇ ಇರಬೇಕು.

ಆದರೆ ಪದಾರ್ಥಗಳು ಆಕಾಶದಿಂದ ಹುಟ್ಟಿಬರಲಾರವು. ಅವುಗಳನ್ನು ಕಾರ್ಖಾನೆಗಳಲ್ಲಿ ತಯ್ಯಾರು ಮಾಡಬೇಕು. ಬರೀ ಜನಸಂಖ್ಯೆಯೊಂದರಿಂದಲೇ ಉತ್ಪಾದನೆಯ ಚಕ್ರವನ್ನು ತಿರುಗಿಸಲು ಸಾಧ್ಯವಿಲ್ಲ. ಪ್ರಪಂಚಕ್ಕಾಗುವಷ್ಟು ವಸ್ತುಗಳನ್ನು ಉತ್ಪಾದಿಸಲು ಪ್ರಪಂಚದ ಕಚ್ಛಾವಸ್ತುಗಳೆಲ್ಲಾ ಬೇಕು. ಮರಬೇಕು, ನೀರುಬೇಕು, ಖನಿಜಗಳು ಬೇಕು, ಲವಣಗಳು ಬೇಕು, ಮರಳು, ಹರಳು, ಲೋಹ, ಮೃಗ, ಪಕ್ಷಿ, ಕೀಟಗಳೆಲ್ಲಾ ಬೇಕು. ಚೀನಾ ತನ್ನ ಪರಿಸರವನ್ನು ಕೊಂದು ಬಹಳ ದಿನಗಳಾದವು. ತನ್ನೆಲ್ಲಾ ಅರಣ್ಯಗಳನ್ನು ನಾಶಪಡಿಸಿಕೊಂಡಿದೆ. ವಿಶ್ವಸಂಸ್ಥೆಯ ಪ್ರಕಾರ ಚೀನಾದ ಗಾಳಿ ಮತ್ತು ನೀರು ಸರಿಪಡಿಸಲಾಗದಷ್ಟು ಕಲುಷಿತಗೊಂಡಿದೆ. ಭೂಮಿಯ ಪರಿಸರವನ್ನು ನಾಶಮಾಡುತ್ತಿರುವ ದೇಶಗಳಲ್ಲಿ ಚೀನಾ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಹಾಗೆ ಮಾಡದಿದ್ದರೆ ವಿಧಿಯೇ ಇಲ್ಲ ಎನ್ನುವ ಪರಿಸ್ಥಿತಿಗೆ ಚೀನಾ ತಲುಪಿಬಿಟ್ಟಿದೆ. ಈಗಿನ ಗತಿಯಲ್ಲೇ ವಸ್ತುಗಳನ್ನು ಉತ್ಪಾದಿಸಿ ಪ್ರಪಂಚಕ್ಕೆ ಮಾರದಿದ್ದರೆ ಅರ್ಥವ್ಯವಸ್ಥೆ ಕುಸಿದುಬೀಳುತ್ತದೆ. ಕೋಟಿ ಕೋಟಿ ಜನ ನಿರ್ಗತಿಕರಾಗಿ ಬೀದಿಗಿಳಿಯಬಹುದು. ಕಳೆದ ಕೆಲವು ದಶಕಗಳಲ್ಲಿ ಚೀನಾ ತನ್ನ ಜನಸಂಖ್ಯೆಯನ್ನು ಬಹಳಷ್ಟರ ಮಟ್ಟಿಗೆ ನಿಯಂತ್ರಿಸಿದೆಯಾದರೂ ಏರಿದ ಅರ್ಥವ್ಯವಸ್ಥೆಯಿಂದ ಬದಲಾದ ಭೋಗ ಜೀವನ ಶೈಲಿಯನ್ನು ನಿಭಾಯಿಸಲು ಅರ್ಥವ್ಯವಸ್ಥೆ ಏರುತ್ತಲೇ ಇರಬೇಕು.

ತನ್ನ ಅರ್ಥವ್ಯವಸ್ಥೆಯ ಮತ್ತು ಸಾಮಾಜಿಕ ರಚನೆಯ ಉಳಿವಿಗಾಗಿ ಚೀನಾ ಕಚ್ಛಾಪದಾರ್ಥಗಳ ಬೇಟೆಗೆ ಇಳಿದಿದೆ. ಆಫ್ರಿಕಾ ಖಂಡದ ಮರಮುಟ್ಟು ಖನಿಜ ಲೋಹಗಳೆಲ್ಲಾ ಚೀನಾದ ಪಾಲಾಗುತ್ತಿದೆ. ದಿನ ಬೆಳಗಾದರೆ ತಮ್ಮತಮ್ಮಲ್ಲೇ ಹೊಡೆದಾಡುವ ಮತ್ತು ಜನಾಂಗ ದ್ವೇಷದಲ್ಲೇ ಶತಮಾನಗಳನ್ನು ಕಂಡ ಅನೇಕ ಆಫ್ರಿಕಾ ಖಂಡದ ದೇಶಗಳು ನಾ ಮುಂದು ತಾ ಮುಂದು ಎನ್ನುವಂತೆ ಪೈಪೋಟಿಯಲ್ಲಿ ತಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ಚೀನಾಕ್ಕೆ ಮಾರುತ್ತಿವೆ. ಸರ್ವಾಧಿಕಾರಿಗಳ ರಾಜ್ಯಭಾರದ ದೇಶಗಳಲ್ಲಿ ಇದು ಮತ್ತೂ ಸುಲಭ. ಆ ದೇಶಗಳ ಯಾವ ಏಳಿಗೆಯೂ ಚೀನಾಕ್ಕೆ ಬೇಕಿಲ್ಲ. ಬದಲಾಗಿ, ಕಾಲಿಗಂಟಿದ ಜಿಗಣೆಯೊಂದು ಗೊತ್ತೇ ಆಗದಂತೆ ರಕ್ತ ಹೀರಿದಂತೆ ಆಫ್ರಿಕಾವನ್ನು ಚೀನಾ ಹೀರುತ್ತಿದೆ.

ಆಫ್ರಿಕಾದ ಕಥೆಯೇ ಟಿಬೆಟಿನದೂ ಕೂಡ. ವ್ಯತ್ಯಾಸವೆಂದರೆ ಆಫ್ರಿಕಾದಂತೆ ಮಾರಾಟಕ್ಕಿಲ್ಲದ ಟಿಬೆಟನ್ನು ಚೀನಾ ಬಲತ್ಕಾರವಾಗಿ ಕಬಳಿಸಿಕೊಂಡಿತು. ಕಬಳಿಸಲು ಎಲ್ಲಾ ಅಂಶಗಳೂ ಸುಸೂತ್ರವಾಗಿದ್ದವು. ಹಿಮಾಲಯದ ಬದಿಯಲ್ಲೇ ತನಗಂಟಿಕೊಂಡಂತೆ ಬಿದ್ದ ನಿಶ್ಯಕ್ತ ರಾಷ್ಟ್ರ. ತನ್ನದೇ ಸೇನೆಯನ್ನು ಹೊಂದದ ಮತ್ತು ಬೌದ್ಧಧರ್ಮದ ಅಹಿಂಸೆಯನ್ನು ಬಲವಾಗಿ ನಂಬಿರುವ ದೇಶ. ಸೇನೆ ಹೊಂದಿದ್ದರೂ ಚೀನಾದ ಅಗಾಧತೆಯ ಮುಂದೆ ಅದೇನೂ ಲೆಕ್ಕಕ್ಕೆ ಇಲ್ಲ. ನಿಶ್ಯಕ್ತ ನೆರೆಹೊರೆ. ರಾಜರಹಿತ ರಾಜ್ಯ! ಚೀನಾ ಟಿಬೆಟಿನೆಡೆಗೆ ಬಂದೂಕು ಹಿಡಿದಾಗ ಟಿಬೆಟಿನ ಆಡಳಿತವನ್ನು ನೋಡಿಕೊಳ್ಳುತ್ತಿದ್ದುದು ಟಿಬೆಟಿನ ಧರ್ಮಗುರು ಮತ್ತು ಹದಿನೈದರ ಹರೆಯದ ಹುಡುಗ ದಲೈಲಾಮ.

ಶಾಂತಿ ಮತ್ತು ಅಹಿಂಸೆ ಎಂತಹ ಉನ್ನತ ತತ್ವಗಳೆಂದರೆ ಬಹಳಷ್ಟು ದೇಶ ಮತ್ತು ಜನಾಂಗಗಳಿಗೆ ಕಾಲಕಾಲಕ್ಕೆ ಅವು ಅರ್ಥವೇ ಆಗದಿದ್ದರೆ ಆಶ್ಚರ್ಯವಿಲ್ಲ. ಆಕ್ರಮಣಕಾರಿಗಳಾಗಿ ಬರುವವರಿಗೆ ಶಾಂತಿ ಮತ್ತು ಅಹಿಂಸೆಯ ಗಂಧಗಾಳಿಗಳಿರುವುದಿಲ್ಲ. ಹಾಗೆ ನೋಡಿದರೆ ವಸಾಹತುಶಾಹಿಗಳಾದರೂ ಬ್ರಿಟೀಷರು ಅಪವಾದವೆನ್ನುವಂತೆ ನಾಗರಿಕ ಸಮಾಜದಿಂದ ಬಂದವರಾಗಿದ್ದರು. ತಮ್ಮ ಸಾಮ್ರಾಜ್ಯಕ್ಕೆ ವಿರುದ್ಧವಾಗಿದ್ದರೂ ಗಾಂಧೀಜಿಯನ್ನು ಮತ್ತು ಗಾಂಧೀಜಿ ಹುಟ್ಟುಹಾಕಿದ ಸತ್ಯಾಗ್ರಹಗಳನ್ನು ಕೊಲ್ಲುವ ಮಟ್ಟಕ್ಕೆ ಅವರು ಇಳಿಯಲಿಲ್ಲ. ಆದರೆ ಚೀನಾಕ್ಕೆ ಅವು ಯಾವ ಧರ್ಮಕರ್ಮಗಳಿಲ್ಲ. ಟಿಬೆಟಿನ ನೆಲವನ್ನು ಕಬಳಿಸಲು ಮತ್ತು ಕಬಳಿಸಿದ್ದನ್ನು ತನ್ನದಾಗಿಸಿ ಕೊಂಡಿರಲು ಅದು ಏನನ್ನು ಬೇಕಾದರೂ ಮಾಡಲು ತಯ್ಯಾರಿದೆ. ಚೀನಿಯರನ್ನು ಟಿಬೆಟಿನ ನೆಲದಲ್ಲಿ ದೊಡ್ದ ಪ್ರಮಾಣದಲ್ಲಿ ನೆಲೆಯೂರಲು ಬಿಡುತ್ತಿದೆ. ಇಂದು ಟಿಬೆಟಿನಲ್ಲಿ ಟಿಬೆಟಿಯನ್ನರಿಗಿಂತಾ ಚೀನಿಯರೇ ಸಂಖ್ಯೆಯಲ್ಲಿ ಹೆಚ್ಚಾಗಿದ್ದಾರೆ.

ಶಾಂತಿಯ ಮಂತ್ರವನ್ನು ಜಪಿಸುತ್ತ ಪರಕೀಯರಿಗೆ ನೆಲವನ್ನು ಕಳೆದುಕೊಂಡ ಮೊದಲ ರಾಷ್ಟ್ರವಲ್ಲ ಟಿಬೆಟ್. ಘೋರಿ ಘಸ್ನಿಗಳೂ ಭಾರತವನ್ನು ಆಕ್ರಮಿಸಿಕೊಂಡದ್ದು ಭಾರತದ ಇಂತಹ ಸಂಧರ್ಭದಲ್ಲಿಯೇ. ಕಾಡುಮೃಗದೆದುರು ವೇದಾಂತವನ್ನು ಓದಿದರೆ ಅದು ನಿಮ್ಮನ್ನು ತಿನ್ನದೇ ಬಿಟ್ಟೀತೆ? ಅಹಿಂಸೆಯನ್ನು ನಂಬಿಕೊಂಡ ಜನಾಂಗಗಳಿಗೆ ಕಾಲಕಾಲಕ್ಕೂ ಎದುರಾಗುತ್ತಿರುವ ದ್ವಂದ್ವವಿದು.

ಮುಂದಿನ ಪುಟದಲ್ಲಿ. . .

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X