ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಡ್ನಿಯಲ್ಲಿ ಕುಮಾರಿ ವಿಭಾ ವೈಭವದ ರಂಗಪ್ರವೇಶ

By Staff
|
Google Oneindia Kannada News

Vibha Tirumalai'ಸರ್ವಂ ಕೃಷ್ಣಮಯಂ.'-ಇದು ಸಿಡ್ನಿಯ ಭರತನಾಟ್ಯ ರಂಗದಲ್ಲಿ ಮಿನುಗಲಾರಂಭಿಸಿರುವ ನವ ಪ್ರತಿಭಾವಂತ ಕಲಾವಿದೆ, ಕುಮಾರಿ.ವಿಭಾ ತಿರುಮಲೈ, ತನ್ನ ರಂಗ ಪ್ರವೇಶಕ್ಕಾಗಿ ಅಳವಡಿಸಿಕೊಂಡಿದ್ದ ಸೂತ್ರ.

ನಾಗಶೈಲ ಕುಮಾರ್, ಸಿಡ್ನಿ

ಮಾರ್ಚ್ 15 ರಂದು, ಸಿಡ್ನಿಯ ಯೂನಿವರ್ಸಿಟಿ ಆಫ್ ನ್ಯೂ ಸೌತ್ ವೇಲ್ಸ್‍ನ ಸೈನ್ಸ್ ಥಿಯೇಟರ್ ನಲ್ಲಿ ಕಿಕ್ಕಿರಿದು ನೆರೆದ ಜನಸ್ತೊಮದ ಮುಂದೆ ಕುಮಾರಿ ವಿಭಾಳ ರಂಗಪ್ರವೇಶವಾಯಿತು. ಶ್ರೀ ಕೃಷ್ಣನೇ ಪರವಶವಾಗುವಂತೆ ತನ್ನ ನಾಟ್ಯ ಕಲೆಯನ್ನು ಪ್ರದರ್ಶಿಸಿದ ವಿಭಾ,ನೆರೆದಿದ್ದ ಜನಸ್ತೋಮದ ಅಪಾರ ಮೆಚ್ಚುಗೆಗೆ ಪಾತ್ರಳಾದಳು.

ಪುಷ್ಪಾಂಜಲಿಯೊಂದಿಗೆ ಶ್ರೀ ಕೃಷ್ಣನಿಗೆ, ಗುರುಗಳಿಗೆ ವಂದಿಸಿ, ಸಭಿಕರನ್ನು ಆಹ್ವಾನಿಸುತ್ತ ವಿಭಾ ವೇದಿಕೆಯನ್ನು ಪ್ರವೇಶಿಸಿದಳು. ಮೂರು ವಿಭಿನ್ನ ಕೃತಿಗಳನ್ನು ಪೋಣಿಸಿ ಹಾರಮಾಡಿದಂತಿದ್ದ ರಾಗಮಾಲಿಕ ರಾಗದ ಪ್ರಾರ್ಥನಾ ನೃತ್ಯ, ಕಾರ್ಯಕ್ರಮದ ಆರಂಭದಲ್ಲೆ ಜನರ ಮನವನ್ನು ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಹಲವಾರು ಕರ್ತರ ಕೃತಿಗಳನ್ನು ಹೆಣೆದು ರಾಗಮಾಲಿಕ ರಾಗದಲ್ಲಿ, ವಿಷ್ಣುವಿನ ಹಲವಾರು ರೂಪಗಳನ್ನು ವರ್ಣಿಸುತ್ತ, ಶ್ರೀ ಕೃಷ್ಣನನ್ನು ಆಹ್ವಾನಿಸಿದ ಆವಾಹನ ಗೀತೆಯೆ ತೋಡಾಯ ಮಂಗಳಂ. ಸಂಸ್ಕೃತದಲ್ಲಿದ್ದ ಈ ರಚನೆಗೆ ಅಭಿನಯಿಸುತ್ತಾ, ವಿಭಾ ತನ್ನ ನರ್ತನ ಪರಿಣಿತಿ, ಭಾವ ಪ್ರದರ್ಶನ, ಪದಗತಿಗಳನ್ನು ಜನರ ಮುಂದೆ ತೆರೆದಿಡಲಾರಂಭಿಸಿದಳು.

ನಂತರ ಅಂದಿನ ಕಾರ್ಯಕ್ರಮದ ಬಹುಮುಖ್ಯ ಭಾಗವಾಗಿದ್ದ, ಹಾಗು ಇತ್ತೀಚಿನ ದಿನಗಳಲ್ಲಿ ನೃತ್ಯರಂಗದ ಜನಪ್ರಿಯ ಆಯ್ಕೆಯಾಗಿರುವ, 'ನೃತ್ಯೋಪಹಾರ', ರೀತಿಗೌಳ ರಾಗ, ಆದಿ ತಾಳದ ವರ್ಣ, ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿತ್ತು. ಶ್ರೀಕೃಷ್ಣನ ಬಾಲ್ಯದ ವಿವಿಧ ಘಟನಾವಳಿಗಳನ್ನು ಹಂತ ಹಂತವಾಗಿ ರಂಗದ ಮೇಲೆ ಪ್ರದರ್ಶಿಸಿದ ವಿಭಾ, ಇಲ್ಲಿ ತನ್ನ ನೈಪುಣ್ಯತೆಯನ್ನು ಸಂಪೂರ್ಣವಾಗಿ ಧಾರೆಯೆರೆದಿದ್ದಳು. ಭಾವ, ರಾಗ, ತಾಳಗಳಲ್ಲಿ ತಲ್ಲೀನವಾದ ನರ್ತನ, ಕ್ಷಿಪ್ರಗತಿಯ ಪದಚಲನೆ, ಗುರುಗಳ ನಟುವಾಂಗ, ತುಂಬು ಕಂಠದ ಗಾಯನ ಎಲ್ಲವೂ ಮೇಳೈಸಿ, ಸಭಾಂಗಣವೇ ರೋಮಾಂಚನಗೊಳ್ಳುವಂತ ವಾತಾವರಣ ನಿರ್ಮಾಣವಾಗಿತ್ತು.ಇಲ್ಲಿ ಗುರುಗಳು ತಮ್ಮ ಶ್ರಮ ಸಾರ್ಥಕವಾಯಿತೆಂದು ಹೆಮ್ಮೆ ಪಟ್ಟಿರಲೇಬೇಕು.

ವಿರಾಮದ ನಂತರ ಮುಂದುವರೆದ ನೃತ್ಯ ಮೋಡಿಯಲ್ಲಿ, ರಾಗಮಾಲಿಕ ರಾಗದಲ್ಲಿ ರೂಪಕ ತಾಳದ, ಆಂಡಾಳ್ ಕೃತಿ ವಾರಣಂ ಆಯಿರಂ ಮೂಡಿಬಂದಿತು. ಇಲ್ಲಿ ಆಂಡಾಳ್ ತಾನೇ ತಾನಾಗಿ, ತನ್ನ ಪ್ರಭು ರಂಗನಾಥನನ್ನು ವರಿಸುವ ಕನಸು ಕಾಣುತ್ತಾ, ತನ್ನನ್ನು ತಾನೇ ಮೈಮರೆತ ವಿಭಾ, ನೋಡುಗರನ್ನೂ ಕನಸಿನ ಲೋಕಕ್ಕೇ ಕರೆದೊಯ್ದಳು.ಜನಪ್ರಿಯ ಕೃತಿ 'ಸ್ವಾಗತಂ ಕೃಷ್ಣಾ' ಗೆ ನರ್ತಿಸುತ್ತಾ, ಶ್ರೀ ಕೃಷ್ಣನನ್ನು ಬರಮಾಡಿಕೊಂಡು, ಭಗವಂತನ ಲೀಲೆಗಳನ್ನು ಬಣ್ಣಿಸಿ, ಆ ಲೀಲಾಮಯನಿಗೆ ತನ್ನನ್ನೇ ಅರ್ಪಿಸಿಕೊಳ್ಳುವ ಭಕ್ತೆಯಾಗಿ ಮೈಮರೆತಳು. 'ಪುರಂದರ ದಾಸರ 'ಪಿಳ್ಳಂಗೋವಿಯ ಚೆಲ್ವ ಕೃಷ್ಣನ' ಗೀತೆಯನ್ನು ಎಂದೂ ಇಷ್ಟು ಸೊಗಸಾಗಿ ರಂಗದ ಮೇಲೆ ಪ್ರಸ್ತುತ ಪಡಿಸಿದ್ದನ್ನು ಕಂಡಿರಲಿಲ್ಲ',ಇದು ಅಂದು ಅಲ್ಲಿ ನೆರೆದಿದ್ದವರೆಲ್ಲರೂ ಆಶ್ಚರ್ಯದಿಂದ ನುಡಿದ ಮಾತು. ಅಷ್ಟು ಸೊಗಸಾಗಿ ವಿಭಾ, ಎಲ್ಲೆಡೆಯೂ ಇರುವ ಸರ್ವಾಂತರ್ಯಾಮಿ ಕೃಷ್ಣನಿಗಾಗಿ ಎಲ್ಲೆಲ್ಲೂ ಅರಸಿದಳು. ಕ್ಷಿಪ್ರಗತಿಯ ಪದಚಲನೆ, ಮನಸೆಳೆವ ಭಂಗಿಗಳನ್ನು ಒಳಗೊಂಡ ಕಾಳಿಂಗಮರ್ಧನ ಕೃಷ್ಣನ ಲೀಲೆಯನ್ನು ತೋರುವ, ಗಂಭೀರ ನಾಟ್ಟೈ ರಾಗ, ಆದಿ ತಾಳದ, ಕಾಳಿಂಗ ನರ್ತನ ತಿಲ್ಲಾನದಲ್ಲಿ, ಕಾಳಿಂಗನ ಮೇಲೆ ಬಾಲಕೃಷ್ಣನ ವಿಜಯೋತ್ಸವದ ನಿರೂಪಣೆಯಲ್ಲಿ ವಿಭಾ ವಿಜೃಂಭಿಸಿದಳು.

ವೇದಾನುದ್ದರತೆ.....ಕೃಷ್ಣಾಯತುಭ್ಯಂ ನಮಃ, ಎಂದು ಹೇಳುತ್ತಾ ಮಂಗಳದ ಹಾಡಿಗೆ ಹೆಜ್ಜೆ ಹಾಕುವುದರೊಂದಿಗೆ, ವಿಭಾ ಪ್ರೇಕ್ಷಕರನ್ನು ಮರಳಿ ನಿಜಸ್ಠಿತಿಗೆ ತಂದಳು. 'ರಂಗ ವೈಭವ' ಎಂದು ಶೀರ್ಷಿಕೆಯಿದ್ದ ಅಂದಿನ ರಂಗ ಪ್ರವೇಶ ಬಲು ವೈಭವದಿಂದ ಸಂಪೂರ್ಣವಾಗಿತ್ತು.

ಗುರು ಶ್ರೀಮತಿ ಪದ್ಮರಂಜಿನಿ ಉಮಾಶಂಕರ್ ನೃತ್ಯನಿರ್ದೇಶನ ಹಾಗೂ ನಟುವಾಂಗದ ಹೊಣೆ ಹೊತ್ತು, ತಾವು ಕಲಿಸಿದ ವಿದ್ಯೆ ಸಾರ್ಥಕವಾಗುವುದನ್ನು ಹೆಮ್ಮೆಯಿಂದ ವೀಕ್ಷಿಸಿದರು. ಬೆಂಗಳೂರಿನಿಂದ ಆಗಮಿಸಿದ್ದ ಪ್ರತಿಭಾವಂತ ಯುವ ಗಾಯಕ ವಿದ್ವಾನ್, ಶ್ರೀ ಬಾಲಸುಬ್ರಮಣ್ಯ ಶರ್ಮರ ಕಂಠಸಿರಿಯಂತೂ ಅಂದು ವಿಜೃಂಭಿಸಿ, ಈಗ ಅವರು ಸಿಡ್ನಿಯಲ್ಲಿ ಸಂಗೀತಪ್ರಿಯರ ಮನೆಮಾತಾಗಿದ್ದಾರೆ.

ತುಮಕೂರಿನ ಯುವಕ ಡಾ.ಪವನ್ ತುಮಕೂರ್ ಫಣೀಂದ್ರ ಕೊಳಲು, ನಾರಾಯಣದಾಸ್ ಗೋಪತಿದಾಸ್ ವಯೋಲಿನ್, ಕ್ರಿಸನ್ ಸೇಗರಮ್ ಮೃದಂಗ, ಸೆಂತೂರನ್ ದೇವರಾಜ ತಬಲಾ, ಘಟಂ, ಖಂಜಿರ ಹಾಗು ಧೋಲಕ್ ನಲ್ಲಿ, ಹಿತಕರವಾದ ಪಕ್ಕವಾದ್ಯ ನೀಡಿದರು. ಹಿತಮಿತವಾಗಿ ಕಾರ್ಯಕ್ರಮ ನಿರೂಪಿಸಿದವರು ಅಪರ್ಣ ರಾಮಚಂದ್ರನ್. ಅಚ್ಚುಕಟ್ಟಾದ ಕಾರ್ಯಕ್ರಮ ನಿರ್ವಹಣೆ, ಅತ್ಯುತ್ತಮ ಮಟ್ಟದ ಬೆಳಕು ಹಾಗು ಧ್ವನಿ ಸಂಯೋಜನೆ ಎಲ್ಲವೂ ಸೇರಿ ಅಂದಿನ ಕಾರ್ಯಕ್ರಮ ಬಹುಕಾಲ ನೆನಪಿನಲ್ಲಿ ಉಳಿಯುವಂತಿತ್ತು.

ಇನ್ನು ವಿಭಾಳ ಬಗ್ಗೆ ಎರಡು ಮಾತು : ತನ್ನ ಎಂಟನೆಯ ವಯಸ್ಸಿನಲ್ಲಿ ಗುರು ಶ್ರೀಮತಿ ಜಯಲಕ್ಷ್ಮಿ ಕಂದಯ್ಯ ಅವರಲ್ಲಿ ಭರತನಾಟ್ಯ ಕಲಿಕೆ ಆರಂಭಿಸಿದ ವಿಭಾ ನಂತರ ಗುರು ಶ್ರೀಮತಿ ಪದ್ಮರಂಜಿನಿ ಉಮಾಶಂಕರ್ ಅವರಲ್ಲಿ ಸತತವಾಗಿ ಅಭ್ಯಾಸ ನಡೆಸುತ್ತಿದ್ದಾಳೆ. ಅಲ್ಲದೆ ರಜಾದಿನಗಳಲ್ಲಿ ಬೆಂಗಳೂರಿಗೆ ಬಂದಾಗಲೆಲ್ಲ ಗುರು ಶ್ರೀಮತಿ ಜ್ಯೋತಿ ಪಟ್ಟಾಭಿರಾಮ್ ಅವರಲ್ಲಿ ವಿಶೇಷವಾಗಿ ಅಭ್ಯಸಿಸಿ ಅವರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಪ್ರಸ್ತುತ ಬ್ಯಾಚುಲರ್ ಆಫ್ ಇಂಟರ್ನ್ಯಾಷನಲ್ ಸ್ಟಡೀಸ್ ನಲ್ಲಿ ಭಾಷಾ ಶಾಸ್ತ್ರವನ್ನು ಪ್ರಮುಖ ವಿಷಯವನ್ನಾಗಿ ಆರಿಸಿಕೊಂಡು, ಮೂರನೇ ವರ್ಷದಲ್ಲಿ, ಯೂನಿವರ್ಸಿಟಿ ಆಫ್ ನ್ಯೂ ಸೌತ್ ವೇಲ್ಸ್, ಸಿಡ್ನಿ, ಇಲ್ಲಿ ಓದುತ್ತಿದ್ದಾಳೆ. ಶ್ರೀ ಜಯಂತ್ ಮತ್ತು ಶ್ರೀಮತಿ ರಂಜನಿ ತಿರುಮಲೈ ಇವರ ಹೆಮ್ಮೆಯ ಪುತ್ರಿ, ಬಹುಮುಖ ಪ್ರತಿಭೆ, ಕುಮಾರಿ ವಿಭಾ, ತನ್ನ ಸಾಧನೆಯ ಹಾದಿಯಲ್ಲಿ ಅತಿ ಹೆಚ್ಚಿನ ಯಶಸ್ಸು ಗಳಿಸಿ ಯಶೋವಂತಳಾಗಲಿ ಎಂದು ಹಾರೈಸೋಣ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X