ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಪಾನ್ ಭೂಕಂಪ ಮತ್ತು ಸಿರಸಿಯ ಗಣಪ

By Staff
|
Google Oneindia Kannada News

Ajith hegadeಭೂಕಂಪಕ್ಕೂ ಹಾಗೂ ನಮ್ಮ ಗಣಪನಿಗೂ ಎಲ್ಲಿಯ ಬಾದರಾಯಣ ಸಂಬಂಧ ಎಂದು ಯೋಚಿಸುತ್ತಿದ್ದೀರಾ? ಶೀರ್ಷಿಕೆ ಒಂಥರಾ ವಿಚಿತ್ರ. ಹೌದು, ದಟ್ಸ್ ಕನ್ನಡ ಶೀರ್ಷಿಕೆಗಳೇ ಹಾಗೆ. ಬನ್ನಿ ಏನಿದು ನೋಡೋಣ.

ಅಜಿತ್ ಹೆಗಡೆ, ಸಿಂಗಪುರ

ಶಾಲೆಗಳಲ್ಲಿ ನಾವೆಲ್ಲ ಓದಿದ್ದೇವೆ. ಜಪಾನಿನಲ್ಲಿ ಭೂಕಂಪ ತುಂಬಾ ಸಾಮಾನ್ಯ, ಅಲ್ಲಿ ರಟ್ಟಿನ ಮನೆಗಳನ್ನು ಕಟ್ಟಿಕೊಂಡು ವಾಸ ಮಾಡೋದೇ ಜಾಸ್ತಿ ಇತ್ಯಾದಿ ಇತ್ಯಾದಿ. ಕಂಪ್ಯೂಟರ್ ಜೊತೆ ತಿರುಗುವ ನನಗೆ ಜಪಾನಿನ ಟೋಕಿಯೊದಲ್ಲಿ ಸ್ವಲ್ಪ ತಿಂಗಳುಗಳ ಕಾಲ ಇರುವ ಅವಕಾಶ ಒದಗಿತ್ತು. ಭೂಕಂಪದ ನೈಜ ಅನುಭವ ಆಗಿದ್ದು ಆವಾಗ. ನಮ್ಮ ಹಿಂದೂಗಳ ಹಬ್ಬದಂತೆ ತಿಂಗಳಿಗೆ ಎರಡು ಮೂರು ಸಲ ಕಂಪನ ಆಗಲೇ ಬೇಕು!. ತಂತ್ರಜ್ಞಾನದಲ್ಲಂತೂ ಆ ಜನಗಳು ತುಂಬ ಮುಂದು. ರಿಕ್ಟರ್ ಮಾಪನದಲ್ಲಿ 3,4 ರವರೆಗಿನ ಭೂಕಂಪಕ್ಕೆ 15,20 ಅಂತಸ್ತುಗಳ ಕಟ್ಟಡಗಳು ಅಲುಗಾಡದೇ ನಿಂತಿರುತ್ತವೆ. ಎನೋ ಒಮ್ಮೊಮ್ಮೆ ನನಗೆ ಕೊಟ್ಟಿದ್ದ 6/6ರ ಮನೆ(!)ಯಲ್ಲಿ ಪ್ಲಾಸ್ಟಿಕ್ ಗ್ಲಾಸ್ ತಟ್ಟೆಗಳು ಅಲುಗಾಡುತ್ತಿದ್ದವು ಅಷ್ಟೆ. ತಂತ್ರಜ್ಞಾನವೇ ಆ ರೀತಿಯದು. ಹಗುರ ಕಂಪನಗಳನ್ನು ನುಂಗಿ ನೀರು ಕುಡಿಯುವ ತಾಕತ್ತು. ಬೆಳಿಗ್ಗೆ ಪೇಪರಿನಲ್ಲಿ ನೋಡಿದಾಗಲೇ ಗೊತ್ತು ನಿನ್ನೆ ರಾತ್ರಿ ಭೂಕಂಪವಾಗಿತ್ತು ಎನ್ನುವುದು.

ಹೀಗೆ ಮೂರು ತಿಂಗಳು "ಅಲುಗಾಡುವ" ದೇಶದಲ್ಲಿ ಕಳೆದು ವಾಪಸ್ ಭಾರತಕ್ಕೆ ಬಂದೆ. ಎರಡೇ ದಿನ. ಸಿರಸಿಯ ಮನೆಯಲ್ಲಿ ಕಾಲು ಚಾಚಿ ಟಿವಿ ನೋಡುತ್ತಿರುವಾಗ ಗೊತ್ತಾದ ಸುದ್ದಿ. ಜಪಾನಿನಲ್ಲಿ ಭಾರೀ ಭೂಕಂಪ ಅಪಾರ ಸಾವು ನೋವು. ಬದುಕಿದೆಯಾ ಬಡಜೀವವೇ ಅಂದುಕೊಂಡೆ. ಮರುದಿನ ನಾನು ಹಾಗೂ ತಂದೆಯವರು ಪಂಪನ ಬೀಡಾದ ಬನವಾಸಿಗೆ ಬಂದಿದ್ದೆವು. ನಮ್ಮ ರೈತಮಿತ್ರ ಗಣಪ "ರಾಯರೇ ರಾಯರೇ" ಎನ್ನುತ್ತ ಓಡೋಡಿ ಬರುತ್ತಿದ್ದ. (ರಾಯ, ನಮ್ಮ ಕುಟುಂಬದ ಹೆಸರು). ಇದಕ್ಕೆ ಮುಂಚೆ ನಮ್ಮ ಗಣಪನ ಕೊಂಚ ಪರಿಚಯ ಮಾಡೋಣ.

ಈತ ನಮ್ಮ ಭತ್ತದ ಗದ್ದೆಗಳನ್ನು ನೋಡಿಕೊಳ್ಳುವ ಮನುಷ್ಯ. ಅಜ್ಜನ ಕಾಲದಿಂದಲೂ ನಡೆಸಿಕೊಂಡು ಬಂದ ಪದ್ಧತಿ. ಗಣಪ ನಮ್ಮ ಗದ್ದೆ ಕೆಲಸಗಳನ್ನು ನೋಡಿಕೊಂಡು ಖರ್ಚುವೆಚ್ಚ ಕಳೆದು ಮಿಕ್ಕಿದ ಭತ್ತವನ್ನು ನಮಗೆ ಕೊಡುವುದು ರೂಢಿ. ಹಳೆಯ ಜಮೀನ್ದಾರರ ತರಹ ವಿಶೇಷ ಕಟ್ಟುಪಾಡುಗಳಿಲ್ಲ. ಲಾಭದ ದೃಷ್ಟಿಕೋನವಿಲ್ಲದ ಸೀದಾ ವ್ಯವಹಾರ. ಆ ದಿನ ಬನವಾಸಿಯಲ್ಲಿ ಗಣಪ ನಿಟ್ಟುಸಿರು ಬಿಡುತ್ತ ನಮ್ಮ ತಂದೆಯವರ ಹತ್ತಿರ ಓಡೋಡಿ ಬರುತ್ತಿದ್ದ. " ಸಣ್ಣ ರಾಯರು ಹೇಗಿದ್ದಾರೆ? ನಿನ್ನೆ ನನ್ನಾಕಿ ಟಿವಿಲಿ ನೋಡಿದಾಳೆ. ಜಪಾನಿನಲ್ಲಿ ಭೂಕಂಪ ಅಂತೆ. ಬಹಳ ಮಂದಿ ಸತ್ತಾರಂತೆ. ನನ್ನ ಹತ್ರ ರಾತ್ರಿನೇ ರಾಯರ ಮನೆಗೆ ಫೋನ್ ಮಾಡಿ ಅಥವಾ ಖುದ್ದಾಗಿ ಹೋಗಿ ಸುದ್ದಿ ಮುಟ್ಟಿಸು. ಅವರಿಗೆ ಈ ಸುದ್ದಿ ಗೊತ್ತದೋ ಇಲ್ಲೋ ? ಪಾಪ ನಮ್ಮ ರಾಯರು ಹೇಗೆ ಅದಾರೋ ಏನೋ? ಅಂತ ಕಣ್ಣೀರಿಟ್ಟಳು. ರಾತ್ರಿ ತಡ ಆಗಿದ್ದರಿಂದ ಈಗ ನಿಮ್ಮ ಮನೆ ಕಡಿನೇ ಹೊರಟಿದ್ದೆ. ನೀವೇ ಸಿಕ್ಕಿದ್ದು ಚೊಲೋ ಆತು ನೋಡ್ರಿ " ಅಂತ ನಮ್ಮ ತಂದೆಯವರ ಹತ್ತಿರ ಒಂದೇ ಉಸಿರಿಗೆ ಹೇಳಿದನಂತೆ. ಆಷ್ಟರಲ್ಲಿ ನಾನು ಆತನ ಮುಂದೆ ಪ್ರತ್ಯಕ್ಷನಾದೆ. ಗಣಪನ ಮುಖದಲ್ಲಿನ ಆತಂಕ ಗೊಂದಲ ಗಳು ಮಾಯವಾಗಿ ಮಂದಹಾಸ ಮಿನುಗಿತ್ತು.

ನಮ್ಮ ತಂದೆಯವರಿಂದ ಈ ವಿಷಯ ನನಗೆ ತಿಳಿದಾಗ ನನ್ನಾಣೆಗೂ ಕಣ್ಣು ತೇವವಾಗಿತ್ತು. ಗಣಪನಿಗೆ ನಾವು ಏನು ಉಪಕಾರ ಮಾಡಿದ್ದೇವೋ ಆ ದೇವರಿಗೇ ಗೊತ್ತು. ಆದರೆ ಆತನ ಮನದ ಮಿಡಿತ ಆ ಅಂತಃಕರಣಕ್ಕೆ ನನ್ನ ಕಣ್ಣಲ್ಲಿ ನೀರು ಜಿನುಗುತ್ತಿತ್ತು. ಮನಸ್ಸು ಇತ್ತಕಡೆ ಏನೇನೋ ವಿಚಾರ ಮಾಡುತ್ತಿತ್ತು. ಈ ಯಾಂತ್ರಿಕ ಯುಗದಲ್ಲಿ ಮನುಷ್ಯ ಮನುಷ್ಯರ ಪರಿಚಯವಿಲ್ಲದೆ ಜೀವಿಸುವ ಸ್ಥಿತಿಗೆ ಬಂದಿದ್ದೇವೆ. "ಅಪಾರ್ಟ್ ಮೆಂಟ್" ಕಲ್ಚರ್ ಬಂದಾಗಿಂದ ಪಕ್ಕದ ಮನೆಯವರ ಪರಿಚಯವೇ ಇಲ್ಲವಾಗಿದೆ. ಎಲ್ಲ ಭೇಟಿ ಮಿಲನ ಪಾರ್ಟಿಗಳೆಲ್ಲ ಯಾವುದೋ ಬಿಸಿನೆಸ್ ಆಂಗಲ್ ನಿಂದಲೇ ಅಯೊಜಿತ. ಎಲ್ಲರದೂ ಲಾಭದ ದೃಷ್ಟಿಕೋನ. ನಮ್ಮತನ, ಸ್ವಚ್ಚಂದ ಮನಸ್ಸಿನ ಬಾಂಧವ್ಯ ಗೆಳೆತನ ಗಳು ನಶಿಸುತ್ತಿದೆ. ಈ ರೀತಿಯ ವಾತಾವರಣದಲ್ಲಿ ನಮ್ಮ ಗಣಪ ಆ ದಿನ ಮರುಭೂಮಿಯ ಓಯಸಿಸ್ ನಂತೆ ಗೋಚರಿಸುತ್ತಿದ್ದ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X