• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಂಗಿದ್ದಿದ್ದು ಎಂಗಾಯ್ತಣ್ಣಾ...

By Staff
|

ಜಾಗತೀಕರಣ ಅಥವಾ ಮಣ್ಣು ಮಸಿ ಏನೋ ಒಂದು. ನಮ್ಮೂರು ಬದಲಾಗಿದೆ.. ನಮ್ಮಜನ ಬದಲಾಗಿದ್ದಾರೆ.. ಆದರೂ ಏನೋ ಒಂದು ಸೆಳೆತ ಇದ್ದೇ ಇದೆ. ಅದು ಇನ್ನೊಂದು ಇಂಡಿಯಾ ಟ್ರಿಪ್ ಗೆ ನಮ್ಮನ್ನು ಅಣಿಗೊಳಿಸುತ್ತದೆ. ಈ ಬೆಂಗಳೂರು ಕೈಬೀಸಿ ಕರೆಯುತ್ತದೆ..

Vallisha Shastriಎಂಗಿತ್ತಣ್ಣ ನಮ್ಮೂರು? ಎಂಗಾಗೋಯ್ತಣ್ಣ? ಅಲ್ಲ ಬೆಂಗ್ಳೂರ್ ಏರ್ಪೋರ್ಟ್‌ನಾಗೆ ಇಳಿದ್ರೆ ಹಾಯಾಗಿ ಬಂದು ಟ್ಯಾಕ್ಸಿ ಹತ್ಕೋತಿದ್ದೆ. ನಾಕೈದು ಜನ ಬಂದು ಟ್ಯಾಕ್ಸಿ ಬೇಕಾ ಸಾರ್ ಅಂತ ಕೇಳ್ತಾಯಿದ್ದರು. ಯಾರೋ ಒಬ್ಬ ಸಿಕ್ದೋನ್ಗೆ ಸೀರುಂಡೆ ಅಂತ ಎಳ್ಕೊಂಡು ಹೋಗಿ ಕೂರಸ್ತಿದ್ದ. 'ಕಾಸೆಷ್ಟಪ್ಪ' ಅಂದ್ರೆ, 'ನಿಮಗೊತ್ತಲ್ಲ.. ನೋಡ್ಕೊಂಡು ಕೊಡಿ ಸಾರ್' ಅನ್ನುತ್ತಿದ್ದ. ನಾವೂ ಅಷ್ಟುಇಷ್ಟು ಚೌಕಾಸಿ ಮಾಡ್ತಾಯಿದ್ವಿ. ನಾನು ಜಯನಗರ ಅಂದ್ರೆ, ಬಸ್ ಸ್ಟಾಪ್ ಹತ್ತಿರ ಅಂದ್ಕೊಂಡಿದ್ದೆ.. ನಿಮ್ಮ ಮನೆಗೆ ಒಳಗೆ ಹೋಗ್ಬೇಕು ಸಾರ್ ಅಂತಾನೋ, ಲಗ್ಗೇಜ್ ಜಾಸ್ತಿ ಇದೆ ಅಂತಾನೋ.. ಅಂತು ಇಂತು ಅವನು ಕೇಳಿದ್ದಿಕ್ಕಿಂತ ಜಾಸ್ತೀನೆ ಕೊಟ್ಟು ಬಂದ ತೃಪ್ತಿ ಈಗೆಲ್ಲಿದೆ.

ಹೋದರೆ ಪ್ರಿಪೈಡ್ ಕೌಂಟರ್ ಅಂತೆ, ದುಡ್ಡು ಮುಂಚೆನೇ ಕೊಟ್ಟು ಯಾವ ಗಲಾಟೇನೂ ಇಲ್ದಲೇ ಟ್ಯಾಕ್ಸೀಲಿ ಕೂತ್ರೆ ಮಜಾನೇ ಇಲ್ಲ. ಬೆಂಗ್ಳೂರ್ಗೆ ಬಂದಿದೀವಿ ಅನ್ಸೋದೇ ಇಲ್ಲ. ಅಮೆರಿಕದಲ್ಲಂತೂ ಚೌಕಾಸಿಗೆ ಆಸ್ಪದವೇ ಇಲ್ಲ. ನಮ್ಮೂರಿಗೆ ಬಂದಾಗ್ಲಾದ್ರೂ ಚೌಕಾಸಿ ವ್ಯಾಪಾರ ಮಾಡಿ, ಕನ್ನಡದಲ್ಲಿ ಜಗಳ ಆಡಿ ಮನಸ್ಸು ತೃಪ್ತಿ ಪಡಿಸ್ಕೊಳ್ಳೋಣ ಆಂದ್ರೆ ಅದಕ್ಕೂ ಅವಕಾಶ ಇಲ್ಲದ ಹಾಗೆ ಆಗಿದೆ ನೋಡಿ ನಮ್ಮೂರು. ಟ್ಯಾಕ್ಸೀಲಿ ಕೂತು ಬಂದ್ರೆ ಬರೂವಾಗ್ಲೇ ನಮ್ಮೂರಿನ ಮಣ್ಣಿನ ವಾಸನೇ ಕುಡೀಲಿ ಅಂತ ಎಲ್ಲಾ ಕಿಟಿಕಿ ಬಾಗಲನ್ನೂ ತೆಗೆದು ತಲೆ ಮೇಲಿರೋ ವಿಗ್ ಹಾರಿ ಹೋಗಿ ನ್ಯಾಚುರಲ್ ಆಗಿ ಕಾಣುವ ಹಾಗೆ ಮಾಡ್ತಿದ್ದ ಕಾಲ ಹೇಗಿತ್ತು, ಈಗ ನೋಡಿ, ಟ್ಯಾಕ್ಸೀಲಿ ಕೂತ್ರೆ ಏರ್ ಕಂಡಿಶನ್, ಕಿಟಿಕಿ ಬಾಗಿಲು ತೆಗೆದಾಗ ಹೊರಗಿನ ಜನಗಳ ಗಿಜಿ ಗಿಜಿಗಳು, ಕೂಗಾಟಗಳಿಂದ ಯಾವುದೋ ಲೋಕಕ್ಕೆ ಕರ್ಕೊಂಡು ಹೋಗ್ತಿದ್ದ ಕಾಲ ಎಲ್ಲಿ? ಈಗ ಬರೀ ಹಿಂದಿ, ಇಂಗ್ಲೀಷ್ ಹಾಡುಗಳ ಮಧ್ಯೆ ಒಂದೊಂದ್ಸಾರಿ ಕಂಗ್ಲೀಷ್ ರೇಡಿಯೋ ಸ್ಟೇಷನ್ ಹಾಡುಗಳು. ಎಂಗಿದ್ದಿದ್ದು ಎಂಗಾಯ್ತು ನೋಡಿ!

ಮುಂಚೆ ಮನೇಗೆ ಬಂದ್ರೆ ಕರೆಂಟ್ ಇಲ್ದೆ ಬೆವರಲ್ಲೆ ಸ್ನಾನ ಮಾಡಿ, ಆ ಕೈ ಬೀಸಣಿಗೆ ಬೀಸ್ತಾ ತಣ್ಣೀರಲ್ಲಿ ಮುಖ ತೊಳ್ಕೋತಾ ಇದ್ವು. ಈಗ ಸಾಮಾನ್ಯ ಕರೆಂಟೇ ಹೋಗೋಲ್ಲ. ಎಂತ ಅನ್ಯಾಯ ನೋಡಿ. ಬಂದ ತಕ್ಷಣ ಏರ್‌ಕಂಡಿಶನ್ ರೂಮು, ಕೋಕೋ ಇಲ್ಲಾ ಸ್ಪ್ರೈಟೋ Fridgeನಿಂದ ತೆಗೆದು ಚಿಲ್ಲಾಗಿ ಕೊಡ್ತಾರೆ. ನಮಗೆ ಊರಿಗೆ ಬಂದ ಹಾಗೇ ಆಗೊಲ್ಲಾ.

ಅಮ್ಮನ ಪ್ರೀತಿ ತುಂಬಿದ ಕೈಯಿಂದ ಮಾಡಿದ ಅನ್ನ ಸಾರು ತಿಂತಿದ್ದ ಕಾಲ ಎಲ್ಲಿ? ಮನೇಗೆ ಹೋದ ತಕ್ಷಣ ಫೀಜಾ ರೆಡಿ. ಒಗ್ಗರಣೆ ವಾಸನೇನೆ ಇಲ್ದ ಅಡಿಗೆ ಮನೆ, ತೊಳಿಬೇಕಾದ ಪಾತ್ರೆ ತುಂಬಿದ್ದ ವಾಷ್ ಬೇಸಿನ್‌ಗಳಿಲ್ಲ. ನಮ್ಮೂರ್ಗೆ ಬಂದಹಾಗೆ ಆಗೊಲ್ಲ. ಹೊಡಿಯೋಣ ಅಂದ್ರೆ ಒಂದು ನೊಣಾನು ಸಿಗೋಲ್ಲ ಅಡಿಗೇ ಮನೇಲಿ.

ನಮ್ಮ ಪ್ರೀತಿ ವಾತ್ಸಲ್ಯ ಎಲ್ಲಾ ಹಸ್ತದಲ್ಲಿ ಕೇಂದ್ರೀಕೃತವಾಗಿರುತ್ತೆ ಅಂತ ಒಂದು ಥಿಯರಿ. ಅದಕ್ಕೇನೆ, ಕಾಲ್ಮುಟ್ಟಿ ನಮಸ್ಕಾರ ಮಾಡ್ಬೇಕಾದ್ರೆ ಹಸ್ತ ತಗಲಿಸೋದು ಅಂತಾರೆ. ಅದು ನಿಜವೇ ಆಗಿದ್ರೆ ಆ ಹಸ್ತದಿಂದ ಕಲಸಿದ ಅನ್ನ ತಿನ್ನೋ ಭಾಗ್ಯಾನೇ ಕಡಿಮೆ ಆಗ್ತಿದೆ. ಕೈತುತ್ತು ಊಟ ಕನಸಿನಲ್ಲೂ ಬರೋಲ್ಲ ಅಂತ ಕಾಣ್ಸುತ್ತೆ. ಇನ್ನು ಆ ಹಂಡೆ ನೀರಿನ ಸ್ನಾನ ಹೋಗಿ ಎಷ್ಟು ದಿವಸ ಆಯ್ತಲ್ವಾ? ಆ ಹಂಡೆ ನೀರ್ನಲ್ಲಿ ಮಾಡೋ ಸ್ನಾನಕ್ಕೂ ಗೀಜರ್ ನೀರಿನ ಸ್ನಾನಕ್ಕು ಎಷ್ಟು ವ್ಯತ್ಯಾಸ ಅಲ್ವಾ? ಆ ಏರಿಳಿತದ ನೀರಿನ ತಾಪಮಾನದ ನೀರು ಮೈಮೇಲೆ ಬಿದ್ದಾಗಲೆಲ್ಲಾ ಎಷ್ಟು ಆನಂದ ಅಂತ ಯಾರ್ಗೂ ವಿವರಿಸಲಿಕ್ಕಾಗೋಲ್ಲ. ಅದನ್ನ ಅನುಭವಿಸಿದವರಿಗೇ ಗೊತ್ತು ಅದರ ಸವಿ, ಸುಖ. ಒಂದೇ ತಾಪಮಾನದ ಗೀಜರ್ ನೀರು ಒಂದ್ಸಾರಿ ಮೈಮೇಲೆ ಬಿದ್ರೆ ನಮ್ಮ ಮೈ ಆ ತಾಪಮಾನಕ್ಕೆ ಅಡ್ಜಸ್ಟ್ ಆಗುತ್ತೆ ಅಂತ ಕಾಣ್ಸುತ್ತೆ, ಅದಕ್ಕೆ ಗೀಜರ್ ಶವರ್ ಅಷ್ಟು ಮಜ ಕೊಡೋಲ್ಲ. ಎಂಗಿದ್ದಿದ್ದು ಎಂಗಾಯ್ತು ನೋಡಿ.

ಆ ಶೆಟ್ಟರ ಅಂಗಿಡೀಗೆ ಹೋಗಿ ಕೇಜೀಗೆ ಎಷ್ಟು? ಅಂತ ಕೇಳ್ಕೊಂಡು ಶೆಟ್ಟರ ಮನೆಯೋರ ವಿಚಾರ ಎಲ್ಲ ಮಾತಾಡ್ಕೊಂಡು ಪ್ರೀತಿಯಿಂದ ಹಳೇ ಪೇಪರ್ ಪೊಟ್ಟಣ ಕಟ್ತಿದ್ದ ಕಾಲ ಎಲ್ಲಿ ಹೋಯ್ತು. ಈಗ ಪೊಟ್ಟಣ ಎಲ್ಲಾ ರೆಡಿ, ಯಾವಕ್ಕಿ ಅಂತಾನೂ ಕೇಳೋ ಹಾಗಿಲ್ಲ, ಎಲ್ಲ ಪೊಟ್ಟಣದ ಮೇಲೆ ಬರೆದಿದೆ. ಚೌಕಾಸಿಗೂ ಅವಕಾಶ ಇಲ್ಲ. ತೂಕ ಕಡಿಮೆ ಅಂತ ಜಗಳ ಆಡೋಕ್ಕು ಅವಕಾಶ ಇಲ್ಲ, ಕಳಪೆ ಪದಾರ್ಥ ಅಂತ ಕೂಗಾಡೊ ಹಾಗಿಲ್ಲ. ಕೆ ಎಸ್ ಎನ್ ಈ ಕಾಲ್ದಲ್ಲಿ ಇದ್ದಿದ್ರೆ ಅಕ್ಕಿ ಆರಿಸುವಾಗ...... ಅಂತ ಬರೆಯೋಕೆ ಅವಕಾಶಾನೇ ಇರ್ತಿರ್ಲಿಲ್ಲ ಅಂತ ಕಾಣ್ಸುತ್ತೆ.

ಅಂಗಡಿ ಶೆಟ್ಟರ ಮೇಲೆ ಇದ್ದ ಆ ಸ್ನೇಹ ಬಾಂಧವ್ಯ ಆಗಲಿ ನಮ್ಮ ಶೆಟ್ಟರ ಅಂಗಡಿ ಅಂತ ಅನ್ನೋ ಒಂದು ಸೆಂಟಿಮೆಂಟಲ್ ಅಟ್ಯಾಚ್‌ಮೆಂಟ್ ಆಗ್ಲಿ ಇಲ್ಲ. grocery ಶಾಪ್ಪಿಂಗ್‌ನಲ್ಲಿ ಮಜಾನೇ ಇಲ್ಲ ಅಲ್ವೇ. ಮನೆ ಊಟ ಅನ್ನೋ ಅಟ್ಯಾಚ್‌ಮೆಂಟೇ ಹೋಗ್ತಾ ಇರೋವಾಗ ಶಾಪಿಂಗ್‌ಗೆ ಯಾಕೆ ಅಷ್ಟೊಂದು ಸೆಂಟಿಮೆಂಟಲ್ ವ್ಯಾಲ್ಯು ಕೊಡ್ಬೇಕು ಹೇಳಿ. ಎಂಗಿದ್ದಿದ್ದು ಎಂಗಾಯ್ತು ನೋಡಿ.

What is That Globalization Can't Destroy in Karnataka?ಈ ಸಾರಿ ನಮ್ಮ ರಜಾದಿನಗಳಲ್ಲಿ 2 ಟೀವಿ ಶೂಟಿಂಗ್‌ಗಳು, ಒಂದು ರೇಡಿಯೋ ಹರಟೆ ಸಹ ಇದ್ದಿದ್ದು ಒಂದು ಹೊಸ ಅನುಭವವೇ ಅನ್ನಬೇಕು. ಯಾಕೇಂದ್ರೆ ನಾವು ಬೆಂಗಳೂರ್ನಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ನಮ್ಮ ಖರ್ಚಲ್ಲೇ ನಾಟಕದ ಹುಚ್ಚನ್ನು ಕಳ್ಕೊಳ್ತಿದ್ದ ಕಾಲ . ಆಗ ಒಂದು ರೇಡಿಯೋದಲ್ಲಿ ರೆಕಾರ್ಡಿಂಗ್ ಅಂದ್ರೇನೇ ಒಂದು ಹೆಚ್ಚು. ನಾಟಕ ಮಾಡೋದು ಧಾರವಾಡದ ಮಾತಲ್ಲಿ ಹೇಳೋದಾದ್ರೆ ಒಂದು ತರಹದ ತಿಂಡಿ (ಕಡಿತ, ನವೆ) ಇದ್ದವರಿಗೆ ಮಾತ್ರ. ಆ ಮಾತು ಈಗಲೂ ಸತ್ಯ. ಆದರೂ ಕಲಾಕ್ಷೇತ್ರದ ಮೆಟ್ಟಿಲ ಮೇಲೆ ಸಂಜೆ ಕೂತ್ಕೊಂಡು ನಾಟಕದ ವಿಷಯಗಳ ಬಗ್ಗೆ ಮಾತಾಡ್ಕೊಂಡು, ಅಲ್ಲೇ ಮಲಯಾಳಿ ಚಹ ಅಂಗಡೀಲಿ ಚಾಯ್ ಕುಡಿದು ನಾಟಕ ಆಡಿ ಹೊರಕ್ಕೆ ಬರೋ ಹೊತ್ತಿಗೆ ಅವತ್ತಿನ ಕಾಲಕ್ಕೆ ಯಾವ ಹೋಟೆಲ್ಲೂ ತೆಗಿದಿರ್ತಿರ್ಲಿಲ್ಲ, ಅಥವಾ ಇದ್ರೂ ಅಂಥ ಹೊಟೆಲ್‌ಗಳಿಗೆ ದುಡ್ಡು ಕೊಟ್ಟು ತಿನ್ನೋ ಅಷ್ಟು ಕಾಸೂ ಇರ್ತಾನೂ ಇರ್ಲಿಲ್ಲ. ಅದಕ್ಕೆ ನಮಗೇ ಅಂತಾನೇ ಪುಣ್ಯಾತ್ಮ, ಅನ್ನದಾತ ಗಾಡಿ ಮೇಲೆ ದೋಸೆ ಇಡ್ಲಿ ಮಾರುಕ್ಕೆ ಒಬ್ಬ ಬರೋನು. ಆ ದೋಸೆ, ಆ ಇಡ್ಲಿ ತಿಂದು ಕಡೇ ಬಸ್ಸಲ್ಲಿ ನಮ್ಮ ಖರ್ಚಲ್ಲೇ ಮನೆಗೆ ಹೋಗ್ತಾ ಇದ್ರೂ, ನಾಟಕ ಆಡಿದ ಸುಖದ ಅಲೆಯಲ್ಲಿ ಮನೆ ಸೇರ್ಕೋತಾ ಇದ್ವು. ಈಗ ಅದೇ ವಿಚಾರದ ಬಗ್ಗೆ ಹೇಗೆ ಅಂತ ನಮ್ಮ ಕೆಲ ಸ್ನೇಹಿತರನ್ನ ಕೇಳ್ದೆ. ಈಗ ಆ ಕಷ್ಟದ ಸುಖ ಎಲ್ಲಿ ಬರಬೇಕು? pizza or cafe cofeday ಹಾಜರ್ ಅಂದ್ರು. ಪಾಪ ಆ ಕೈಗಾಡಿ ದೋಸೆ ಅಂಗಡೀನು ಎಲ್ಲೋ ಮುಚ್ಚಿಕೊಂಡು ಹೋಗಿದಾನೋ ಅಥವಾ ಅವನೇ pizza ಡೆಲಿವರಿ ಬಾಯ್ ಆಗಿದಾನೋ ಏನೋ ಗೊತ್ತಿಲ್ಲ. ಎಂಗಿದ್ದಿದ್ದು ಎಂಗಾಯ್ತು ನೋಡಿ.

ನಮ್ಮ ಕಾಲದಲ್ಲಿ ಒಂದು ಜೋಕಿಗೆ shelf life ತುಂಬಾ ಇರ್ತಿತ್ತು ಯಾಕಂದ್ರೆ ಒಬ್ಬರಿಂದ ಒಬ್ಬರಿಗೆ ಬರ್ಬೇಕಾದ್ರೆ ಒಬ್ಬ ಜೋಕ್ ಹೇಳಿ ಅದನ್ನ ಅವನು enjoy ಮಾಡಿ ಚೆನ್ನಾಗಿದ್ರೆ ಇನ್ನೊಬ್ಬನಿಗೆ ಹೇಳ್ತಿದ್ದ. ಹೀಗೆ ಒಳ್ಳೆ ಜೋಕಿಗಳಿಗೆ ಮಾತ್ರ ಒಬ್ಬರಿಂದ ಒಬ್ಬರಿಗೆ ಪ್ರವಾಸ ಮಾಡುವ ಅವಕಾಶ ಇತ್ತು. ಈಗೇನ್ರಿ ಜೋಕು ಹೇಗೇ ಇರ್ಲಿ SMS ಮೂಲಕ ಕಣ್ಣುಮಿಟಿಕಿಸೋದ್ರೊಳ್ಗೆ ಎಲ್ಲರ ಮುಂದೆ ಇರುತ್ತೆ. ಅದೂ ಅಲ್ದೇ ಒಂದು ಜೋಕನ್ನ ಹೇಳ್ಕೊಂಡು ಅದನ್ನ ಸವೀಬೇಕು ಅನ್ನೊಷ್ಟ್ರೊಳ್ಗೆ ಇನ್ನೊಂದು ಜೋಕ್ ಹಾಜರ್. ಜೋಕನ್ನ ಜೀರ್ಣಿಸ್ಕೊಳ್ಳೊಕು ಟೈಮ್ ಇಲ್ಲ. ಈಗ ಜೋಕ್‌ಗಳಿಗೆ shelf life ಇಲ್ವೇ ಇಲ್ಲ. ಕೆಲವು ಜೋಕುಗಳಿಗೆ life ಇರೋಲ್ಲ. ಎಂಗಿದ್ದಿದ್ದು ಎಂಗಾಯ್ತು ನೋಡಿ.

ನನ್ನ ಈ ಸಲದ ಪ್ರವಾಸದಲ್ಲಿ ನಮ್ಮ ಹಳ್ಳೀಗೂ ಹೋಗಿದ್ದೆ. ಬೆಂಗಳೂರಿನ ಟ್ರ್ಯಾಫಿಕ್ ಸಾಕು, ಹಾಯಾಗಿ ಎರಡು ದಿವಸ ನಿಶ್ಯಬ್ಧವಾಗಿ ಇದ್ದು ನಿದ್ದೆ ಮಾಡುಬರೋ ಉದ್ದೇಶ ನನ್ನದಾಗಿತ್ತು. ನಮ್ಮ ಹಳ್ಳಿ ನಾನು ಬಿಟ್ಟಾಗ ಇದ್ದಿದ್ದು 45 ಸಂಸಾರಗಳು, 18 ಎತ್ತಿನ ಗಾಡಿ, ಒಂದು ಸಾರ್ವಜನಿಕ ರೇಡಿಯೋ. ಅದೇ ಕನಸಿನ ಮೇಲೆ ಹೋದ ನನಗೆ ಆದ ನಿರಾಶೆ ಅಷ್ಟಿಷ್ಟಲ್ಲ. ಈಗ 100ಕ್ಕೂ ಹೆಚ್ಚು ಸಂಸಾರಗಳು, 18 ಮೋಟರ್ ಬೈಕುಗಳು, 35 ಸೆಲ್ ಫೋನ್‌ಗಳು.

ನಮ್ಮ ಮನೆ ರಸ್ತೆಯೇ ಹಳ್ಳಿಯ ಮುಖ್ಯರಸ್ತೆ, ಎಲ್ಲಾ ವಾಹನಗಳು ಅಲ್ಲೇ ಓಡಾಡಬೇಕು. ರಾತ್ರಿ 12ಘಂಟೆಯಾದರೂ ಮೋಟಾರ್ ಬೈಕುಗಳು, ಆಟೋಗಳೂ ಓಡಾಡುತ್ತಿದ್ದವು. ಟ್ರ್ಯಾಕ್ಟರ್‌ಗಳ ಓಡಾಟ ಕೇಳಲೇ ಬೇಡಿ. ಯುವಕರ ಬಾಯಲ್ಲಿ ತುಂಡು ಬೀಡಿ ಹೋಗಿ ಉದ್ದನೆಯ ಸಿಗರೇಟುಗಳು ಬಂದಿದ್ದವು. ನಮ್ಮ ಕಾಲದಲ್ಲಿ ರೈತರು ತುಂಡು ಬೀಡಿಯಿಂದ ತುಂಡು ಬೀಡಿಗೆ ಬೆಂಕಿಹಚ್ಚಿಸಿಕೊಳ್ಳುವ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು. ಈಗ ಎಲ್ಲರ ಕೈಯಲ್ಲಿ ಒಂದೊಂದು ಲೈಟರ್‌ಗಳು. ರಜದ ವೇಳೆಯಲ್ಲಿ ನಮ್ಮೂರಿನ ಹತ್ತಿರ ಒಂದು ಸಿನೆಮಾ ಟೆಂಟ್ ಬರ್ತಿತ್ತು. ಅದರಲ್ಲಿ ಚಿತ್ರ ನೋಡುವುದೇ ಒಂದು ವಿಶೇಷ ಅನುಭವ. ಚಿತ್ರದ ವಿರಾಮದ ವೇಳೆಯಲ್ಲಿ ಬರುವ ಕಡ್ಲೇಕಾಯಿ ತಿನ್ನುವುದು, ಆ ಸೋಡ ಒಡೆಯುವಾಗ ಬರುವ ಆ ಶಬ್ಧ, ಕರೆಂಟ್ ಹೋದಾಗ ಎಲ್ಲರ ಬಾಯಿಂದ ಮಿಣುಕು ಹುಳದ ಹಾಗೆ ಕಾಣುತ್ತಿದ್ದ ಬೀಡಿ ಸೇದುವ ದೃಶ್ಯ, ಎಲ್ಲವೂ ಮಾಯ. ಯಾಕೆ ಅಂದ್ರೆ ಈಗ ಊರಿಗೆ ಟೆಂಟ್‌ಗಳೇ ಬರುವುದಿಲ್ಲವಂತೆ. ಎಲ್ಲರ ಮನೆಯಲ್ಲಿ ಡಿವಿಡಿ ಪ್ಲೇಯರ್‌ಗಳಿವಿಯಂತೆ. ಅದೂ Made in China. ಎಂಗಿದ್ದಿದ್ದು ಎಂಗಾಯ್ತು ನೋಡಿ.

ಜಾಗತೀಕರಣದ ಹೆಸರಲ್ಲಿ ಪಾಶ್ಚಿಮಾತ್ಯ ಸಂಸ್ಸೃತಿಯ ಆಕ್ರಮಣದ ಬಗ್ಗೆ ಏನೂ ಹೇಳ್ಬೇಕಾಗಿಲ್ಲ. ಅದು ಜಾಗತೀಕರಣದ ಬೆಲೆ ಅಂತ ಒಪ್ಪಿಕೊಳ್ಳೋಣ. ಆದರೆ ನಮ್ಮ ಜನಕ್ಕೆ ಮೆಚ್ಚಿ ಬಹುಮಾನ ಕೊಡಬೇಕಾದಂತ ವಿಚಾರ ಅಂದ್ರೆ ಕೆಲವು ವಿಚಾರಗಳಲ್ಲಿ ಮಾತ್ರ ಯಾವುದೇ ಬದಲಾವಣೆಗೆ ಅವಕಾಶ ಕೊಟ್ಟಿಲ್ಲ. ಈಗ ನೋಡಿ, civic sense , media responsibility, personal space, respect others first, courtesy, ಇಂತಹ ವಿಚಾರಗಳಲ್ಲಿ ಯಾವುದೇ ಜಾಗತೀಕರಣ ತನ್ನ ಪ್ರಭಾವವನ್ನು ಬೀರದ ಹಾಗೆ ಕಾಪಾಡಿಕೊಂಡು ಬಂದಿರೋದು ಇರಲಿ, ಅಂತಹ ವಿಚಾರಗಳಲ್ಲಿ ಬಹಳ ಪ್ರಗತಿಯನ್ನೂ ಕಂಡಿದ್ದಾರೆ.

ಒಂದಿವ್ಸ ಒಂದು ಪ್ರೈವೇಟ್ ಟ್ರಾವೆಲ್ಸ್‌ನಿಂದ ಒಂದು ಪಾರ್ಸೆಲ್ ಬಂದಿತ್ತು. ಅದಕ್ಕಾಗಿ ಅವರ ಆಫೀಸ್ ಮುಂದೆ ಕಾಯ್ತಾ ಇದ್ದೆ. ಒಬ್ಬ ತನ್ನ ಯಾವುದೋ ಒಂದು ಪಾರ್ಸೆಲ್ ತಗೊಂಡು ಬಂದು ತನ್ನ ಸ್ಕೂಟರ್ ಹತ್ತಿರ ಬಂದು ತೆಗೀತಾ ಇದ್ದ. ತನ್ನ ಕೀ ಚೈನ್‌ನಲ್ಲಿ ಇದ್ದ ಒಂದು ಚಾಕುವಿನಿಂದ ಪ್ಯಾಕೆಟ್ ಮೇಲಿದ್ದ ಕಾಗದಗಳನ್ನು ಕತ್ತರಿಸಿ ಹಾಕ್ತಾ ಇದ್ದ. ಅವನು ಹಾಕ್ತಿದ್ದ ರೀತಿ ನೋಡ್ಬೇಕಿತ್ತು. ಹಳ್ಳಿ ಕಡೆ ಕೋಳಿ ಪುಕ್ಕ ಕೆರೆಯೋದು ಅಂತಾರೆ. ಎಡಗೈಯಿಂದ ಬಲಗೈಯಿಂದ ಸುಮ್ಮನೆ ಕಿತ್ತು ಎಸೆಯೋದು. ಹಾಗೆ ಎಲ್ಲಾ ಕಾಗದದ ಚೂರನ್ನು ತೆಗೆದು ತಾನು ಸ್ಕೂಟರ್ ನಿಲ್ಲಿಸಿದ್ದ ಜಾಗದಲ್ಲೇ ಹಾಕಿದ. ಕಡೇಗೆ ಒಂದು ಸಣ್ಣ ಔಷಧಿ ಬಾಟಲ್ಲೋ ಎನೋ ಇತ್ತು, ಅದನ್ನ ಇಟ್ಟಿಕೊಂಡು ಕಸ ಎಲ್ಲಾ ಅಲ್ಲೇ ಹಾಕಿ ಹೋದ. ಈ ವಿಚಾರದಲ್ಲಿ ಕಸ ಬೀದಿಗೆಸೆಯುವ ತನ್ನ ಸ್ವಾತಂತ್ರ್ಯವನ್ನು ಬಿಟ್ಟುಕೊಟ್ಟಿಲ್ಲ. ಹಾಗೇ media responsibility ಕೂಡ. ಕ್ಯಾಮರ ಸೆರೆಹಿಡಿಯುವವ ದೈವವಶನಾದವನ ಕರಕಲು ದೇಹ ಪ್ರದರ್ಶಿಸುವ, ಹುಡುಕಿ, ಹುಡುಕಿ ಅಪಘಾತಗಳಲ್ಲಿ ರಸ್ತೆಯ ಮೇಲೆ ಬಿದ್ದಿರುವ ಮೃತ ದೇಹಗಳ ಚಿತ್ರಗಳನ್ನು ಪ್ರಕಟಿಸುವ ಸ್ವಾತಂತ್ರ್ಯವನ್ನು ನಮ್ಮವರು ಬಿಟ್ಟುಕೊಟ್ಟಿಲ್ಲ. ಅಮೆರಿಕದ ಪತ್ರಿಕೆಗಳಿಗೆ ಸೆ. 11 ದುರಂತದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನ ಸತ್ತಿದ್ದರೂ ಒಂದು ಹೆಣವನ್ನು ಪ್ರಕಟಿಸುವ ಸೌಜನ್ಯ ಎಲ್ಲಿತ್ತು ಹೇಳಿ? ಅವರಿಗೆ ದುಡ್ಡುಮಾಡೋಕೆ ಗೊತ್ತಿಲ್ಲ.

ಅದೇನ್ರಿ ಅಮೆರಿಕದಲ್ಲಿ personal space ಅಂತ ಹೊಡ್ಕೋತಾರೆ. ಒಂದು ಚೂರು ಮೈ ಸೋಕಿದರೆ excuse me ಅಂತಾರೆ. ಹುಡುಗೀರು ಇನ್ನೂ ಮೂರಡಿ ಜಾಗ ಇರುತ್ತೆ, ಅಲ್ಲಿಂದಲೇ ಮುಟ್ಟಿದರೆ ಮುಟ್ಟು ನಿಂತುಹೋಗುತ್ತೇ ಅನ್ನೋ ತರ excuse me ಅಂತ ಕೂಗ್ಕೋತಾರೆ. ಪರಿಚಯ ಇರ್ಲಿ ಬಿಡ್ಲಿ ದಾರೀಲಿ ಕಂಡೋರ್ಗೆಲ್ಲಾ ಹಲ್ಲು ಕಿಸಿತಾರೆ. good morning ಅಂತಾರೆ. ಅದೇ ಬೆಂಗಳೂರಿಗೆ ಬನ್ನಿ ಏನು ಸೌಹಾರ್ದತೆ, ತುಂಬಾ ಹತ್ತಿರದೋರು ಆದ್ರೆ ಅಪ್ಪಿಕೋತಾರೆ, official ಪರಿಚಯ ಇದ್ರೆ shake hand ಮಾಡ್ತಾರೆ, ಬರಿ ಪರಿಚಯ ಅಂದ್ರೆ ದೂರದಿಂದಾನೇ ನಮಸ್ಕಾರ ಮಾಡ್ತಾರೆ. ಅದೇ ನೀವೇನಾದ್ರೂ ಪರಿಚಯ ಇಲ್ಲಾಂದ್ರೆ ತಳ್ಕೊಂಡು ಹೋಗ್ತಾ ಇರ್ತಾರೆ. ಗಂಡ ಹೆಂಡ್ತಿ ಒಟ್ಟಿಗೆ ಹೋಗಿ ಯಾವ ಬೇಧ ಭಾವಾನೂ ತೋರ್ಸೊಲ್ಲ. ಅವರನ್ನೂ ತಳ್ಕೊಂಡು ಮುಂದೆ ಹೋಗ್ತಾರೆ. ಬರೀ ಮನುಷ್ಯರಲ್ಲೇ ಅಲ್ಲ, ವಾಹನಗಳಲ್ಲೂ ಇದೇ ಸ್ವಭಾವ ಇಟ್ಕೋಂಡು ಬಂದಿದಾರೆ.

ಬೆಂಗಳೂರಲ್ಲಿ ಒಂದ್ಸಾರಿ ಡ್ರೈವ್ ಮಾಡಿ, ಹ್ಯಾಗೆ ರಿಕ್ಷಾದೋರು, ಸ್ಕೂಟರ್‌ನೋರು ಬಂದು ಬಂದು ಮುತ್ತು ಕೊಡ್ತಾರೆ ಅಂತ ಗೊತ್ತಾಗುತ್ತೆ. ನೀವು ಏನಾದರು ಸಿಗ್ನಲ್‌ನಲ್ಲಿ ನಿಂತ್ಕೊಂಡು ಅಕ್ಕ ಪಕ್ಕ ಸ್ವಲ್ಪ ಜಾಗ ಬಿಡಿ, ಪಾಪ ನಿಮಗೆ ಎಂತಾ protection ಸಿಗುತ್ತೆ ಅಂತೀರ, ಎಡಗಡೆ, ಬಲಗಡೆ, ಮುಂದೆ ಎಲ್ಲಾ ಕಡೆ ಸ್ಕೂಟರ್‌ನೋರು ಇರುವೆ ಮುತ್ತಿದ ಹಾಗೆ ಮುತ್ಕೊಂಡು ನಿಮ್ಮನ್ನ ಅಲುಗಾಡದ ಹಾಗೆ ಮಾಡ್ತಾರೆ. ಅವರಿಗೆ ನಿಮ್ಮ ಮೇಲೆ ಎಷ್ಟು ಪ್ರೀತಿ ಅಂದ್ರೆ, ಅವರು ನಿಮಗೆ ಎಷ್ಟು ಬೇಕಾದ್ರೂ ಮುತ್ತು ಕೊಡಬಹುದು, ಆದರೆ ಅಪ್ಪಿ ತಪ್ಪಿ ನೀವೇ ಏನಾದರು ಮುತ್ತು ಕೊಟ್ರೆ ಮೂಗೀತು ನಿಮ್ಮ ಕೆಲಸ. ಚಿಕ್ಕ ಗಾಡಿಯೋರು ದೊಡ್ಡ ಗಾಡೀಗೆ ಮುತ್ತು ಕೊಟ್ರೆ ಅದು ಪ್ರೀತಿ, ಅದೇ ದೊಡ್ಡ ಗಾಡಿಯೋರು ಏನಾದ್ರು ಚಿಕ್ಕ ಗಾಡಿಗೆ ಮುತ್ತು ಕೊಟ್ರೆ ಅದು ಮಹಾ ಅಪರಾಧ. ಇದು India ನಿಯಮ. ಈ ನಿಯಮವನ್ನ ಯಾವುದೇ ಜಾಗತೀಕರಣ ಬದಲಾಯಿಸಲು ಸಾಧ್ಯವಿಲ್ಲ.

ಅನಿವಾಸಿಗಳು ಬರುವ ಒಂದು ತಿಂಗಳು ರಜದಲ್ಲಿ ಎಲ್ಲರನ್ನೂ ಭೇಟಿ ಮಾಡ್ಬೇಕು ಅನ್ನೋ ಆಸೆ ಇರುತ್ತೆ. ಆ ದೃಷ್ಟಿಯಿಂದ ಒಂದು party ಮಾಡ್ತಾರೆ ಅಥವಾ ಸಂಬಂಧಿಕರ ಮದುವೆ ಇದ್ರೆ ತಪ್ಪದೇ attend ಮಾಡ್ತಾರೆ. ಯಾಕೆ ಅಂದ್ರೆ ಆದಷ್ಟು ಜನನ್ನ ಒಂದೇ ಜಾಗದಲ್ಲಿ ಭೇಟಿ ಮಾಡ್ಬೋದು ಅಂತ. ಆದರೆ ಅದು ಆಗೋದೇ ಬೇರೆ. ಅದಕ್ಕೇ ಹೇಳೋದು ನಮ್ಮೋರ ಪ್ರೀತಿ ವಿಶ್ವಾಸ ಎಷ್ಟು ಅಂತ.

ಭೇಟಿಯಾದ ಪ್ರತಿ ಸ್ನೇಹಿತರಾಗಲಿ, ಸಂಬಂಧಿಕರಾಗಲಿ ಹೇಳೋದು ಒಂದೇ ಮಾತು ; ದಯವಿಟ್ಟು ನಮ್ಮ ಮನೇಗೆ ಬರ್ಲೇ ಬೇಕು. ಕಾಫೀನಾದ್ರೂ ಕುಡ್ಕೊಂಡು ಹೋಗ್ಬೇಕು. ಯಾವಾಗ ಬರ್ತೀರ್ ಹೇಳಿ?

ಎಲ್ಲರ ಮನೇಗೆ ಹೋಗೋಕ್ಕಾಗುಲ್ವಲ್ಲಾ.. ಇಲ್ಲೇ ಎಲ್ಲರನ್ನೂ ಭೇಟಿ ಮಾಡಿ ಹೋಗೋಣ ಅಂತ ನಮ್ಮ ಅಂಬೋಣ. ಆದರೆ ನಮ್ಮಜನರ ಇಂತಹ ಮಾತುಗಳಿಂದಾಲೇ ನಮಗೆ ಎಷ್ಟೇ ಕಷ್ಟ ಆದರೂ ವರ್ಷಕ್ಕೊ ಎರಡು ವರ್ಷಕ್ಕೊಮ್ಮೆಯಾದರೂ ನಮ್ಮ ಬೆಂಗಳೂರ ಪ್ರವಾಸವಿರುತ್ತೆ. ಜಾಗತೀಕರಣ ಏನೇ ಮಾಡಿದರೂ ನಮ್ಮ ಜನಗಳಲ್ಲಿ ಉಕ್ಕಿ ಬರುವ ಪ್ರೀತಿ ಕುಗ್ಗದಿರಲಿ. ಬೇರೆ ವಿಷಯಗಳಲ್ಲಿ ಎಂಗಿದ್ದಿದ್ದು ಎಂಗಾದ್ರೂ ಪರವಾಗಿಲ್ಲ, ಈ ವಿಷಯದಲ್ಲಿ ನಮ್ಮ ಸ್ನೇಹಿತರು, ಬಂಧುಗಳು ಎಂಗಾದ್ರೂ ಇಂಗೇ ಇರ್ಲಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more