ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆವರಣದೊಳಗಿನ ಸತ್ಯಗಳ ಅನಾವರಣ

By Staff
|
Google Oneindia Kannada News


ಪ್ರೊ.ಶಾಸ್ತ್ರಿ ಎನ್ನುವ ಪಾತ್ರಕ್ಕೆ ಆವರಣದುದ್ದಕ್ಕೂ ಕುತೂಹಲಕಾರಿ ಸ್ಥಾನವೊಂದಿದೆ. ಈ ಪಾತ್ರವನ್ನು ಯು.ಆರ್.ಅನಂತಮೂರ್ತಿಯವರನ್ನು ಅವಮಾನಿಸಲೆಂದೇ ಚಿತ್ರಿಸಿರುವುದು ಎಂಬ ಆಪಾದನೆ ಭೈರಪ್ಪನವರ ಮೇಲಿದೆ.


About the novel 'Avarana', by L.Ganapathi "ಆವರಣ" ದ ಬಗ್ಗೆ ಬಹಳಷ್ಟು ಚರ್ಚೆ, ವಾದ ವಿವಾದ ನಡೆದಿರುವುದು ಕನ್ನಡ ಸಾಹಿತ್ಯಾಸಕ್ತರಿಗೂ ಅಥವಾ ಕರ್ನಾಟಕದ ಸುದ್ಧಿ-ಸಮಾಚಾರಗಳನ್ನು ಓದುವವರಿಗೂ ತಿಳಿದ ವಿಚಾರವೇ ಆಗಿದೆ. ಆವರಣದ ವಿಮರ್ಶೆಗಳಲ್ಲಿ ಹೆಚ್ಚಿನವು ಕಾದಂಬರಿಯನ್ನು ಬಹಳವಾಗಿ ತೆಗಳಿ, ಇಲ್ಲವೇ ಬಹಳವಾಗಿ ಹೊಗಳಿ ಬರೆದವುಗಳು. ಕಾದಂಬರಿಯನ್ನು ಹೊಗಳಿ ಅಥವಾ ತೆಗಳಿ ಬರೆದವು ಎನ್ನುವುದಕ್ಕಿಂತ ಕಾದಂಬರಿಕಾರನನ್ನು ಹೊಗಳಲು ಅಥವಾ ತೆಗಳಲು ಬರೆದವು ಎನ್ನುವುದು ಹೆಚ್ಚು ಸಮಂಜಸ.

ಕಳೆದ ಸೆ.9ರಂದು ಮೇರಿಲ್ಯಾಂಡಿನ ಭೂಮಿಕಾ ವೇದಿಕೆಯ ಮೇಲೆ ಎಸ್.ಎಲ್.ಭೈರಪ್ಪನವರ ಇತ್ತೀಚಿನ ಕಾದಂಬರಿ "ಆವರಣ"ದ ಅನಾವರಣ ಮಾಡಿದವರು ಡಾ.ಲಕ್ಷ್ಮೀನಾರಾಯಣ ಗಣಪತಿಯವರು. ವೃತ್ತಿಯಿಂದ ನಾರ್ತ್ ಕೆರೋಲಿನಾದಲ್ಲಿ ಕಂಪ್ಯೂಟರ್ ಪ್ರೋಗ್ರಾಮರ್ ಆಗಿರುವ ಡಾ.ಗಣಪತಿ ಭೂಮಿಕಾದ ಕಾರ್ಯಕರ್ತರೂ ಆಗಿದ್ದಾರೆ. ಅವರು "ಯುಗಾಂತ್ಯ" ಹಾಗೂ "ಕರ್ಣ ಪ್ರಸವ" ಎಂಬ ನಾಟಕಗಳನ್ನು ಬರೆದಿದ್ದಾರೆ. ಅವರ ಅನೇಕ ಕವನಗಳು thatskannada.comನಲ್ಲಿ ಪ್ರಕಟವಾಗಿವೆ.

ಗಣಪತಿ ಆವರಣದ ಕಥೆಯ ಸಂಕ್ಷಿಪ್ತ ಪರಿಚಯದೊಂದಿಗೆ ಮಾತನ್ನು ಆರಂಭಿಸಿದರು. ಸಾಕ್ಷ್ಯಚಿತ್ರಗಳಿಗೆ ಸಂಭಾಷಣೆ, ವ್ಯಾಖ್ಯಾನ ಬರೆಯುವ ರಜಿಯಾ ಹಾಗೂ ನಿರ್ದೇಶಕ ಅಮೀರ್ ಹಂಪೆ ಮೇಲೆ ಚಿತ್ರ ತೆರೆಯುವ ಸಿದ್ಧತೆಯಲ್ಲಿರುತ್ತಾರೆ. ಚಿತ್ರದ ಉದ್ದೇಶ ಹಂಪೆಯ ದೇವಾಲಯಗಳ ನಾಶಕ್ಕೆ ಮುಸ್ಲಿಂ ದೊರೆಗಳ ದಾಳಿ ಕಾರಣವಲ್ಲ; ಶೈವರು ಹಾಗೂ ವೈಷ್ಣವರು ತಮ್ಮತಮ್ಮಲ್ಲಿ ಕಾದಾಡಿ ಪರಸ್ಪರರ ದೇವಾಲಯಗಳನ್ನು ನಾಶಮಾಡಿದ್ದೇ ಕಾರಣ ಎಂದು ನಿರೂಪಿಸುವ ಪ್ರಯತ್ನ. ಅಲ್ಲಿಯವರೆಗೂ ಅಂತಹ ಅನೇಕ ಸಾಕ್ಷ್ಯಚಿತ್ರಗಳನ್ನು ಉತ್ಸಾಹದಿಂದ ಮಾಡಿದ್ದ ರಜಿಯಾಳಿಗೆ, ಇದು ಸರಿಯಲ್ಲವೆನಿಸತೊಡಗುತ್ತದೆ; ಚಾರಿತ್ರಿಕನ ಗುರಿ ನಿಜವನ್ನು ಹುಡುಕುವುದು; ಸಮಾಜ ನಿಜವನ್ನು ಎದುರಿಸಿ, ಒಪ್ಪಿ, ಅದರಿಂದ ಕಲಿತು, ತಿದ್ದಿಕೊಂಡಾಗಲೇ ಪ್ರಗತಿ ಹೊಂದಲು ಸಾಧ್ಯ ಎಂಬ ವಿಚಾರಸರಣಿಯಿಂದ ಚಿತ್ರನಿರ್ಮಾಣದಲ್ಲಿ ಸಹಕರಿಸಲು ನಿರಾಕರಿಸುತ್ತಾಳೆ.

ಒಕ್ಕಲಿಗರ ಲಕ್ಷ್ಮಿ ಹಾಗೂ ಮುಸ್ಲಿಂ ಅಮೀರ್ 30 ವರ್ಷಗಳ ಹಿಂದೆ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಓದುತ್ತಿದ್ದಾಗ ಪ್ರೀತಿಸಿ ಮದುವೆಯಾಗಿರುತ್ತಾರೆ. ಧರ್ಮ, ಆಚಾರ-ವಿಚಾರಗಳಲ್ಲಿ ನಂಬಿಕೆಯಿರದ ಲಕ್ಷ್ಮಿಗೆ ಅಮೀರ್ ತನ್ನ ಮನೆಯವರಿಗಾಗಿ ತೋರಿಕೆಗೆ ಮುಸ್ಲಿಂ ಆಗುವಂತೆ, ಪ್ರೀತಿಯೇ ಮುಖ್ಯ ಗುರಿಯೆಂದು ಪ್ರೇರೇಪಿಸುತ್ತಾನೆ. ರಜಿಯಾಳಾಗಿ ಪರಿವರ್ತನೆ ಹೊಂದಿ ಮದುವೆಯಾದ ಲಕ್ಷ್ಮಿಗೆ ಅಮೀರ್ ಸಂಪೂರ್ಣವಾಗಿ ತನ್ನ ಧರ್ಮದ ಪ್ರಭಾವದಿಂದ ಹೊರಗಿಲ್ಲ ಎನ್ನುವುದು ಮದುವೆಯ ನಂತರ ಅರಿವಾದರೂ, ಮಗನ ಸಲುವಾಗಿ ಅನುಸರಿಸಿಕೊಂಡು ಹೋಗುತ್ತಾಳೆ. ಅಲ್ಲದೇ, ಮುಸ್ಲಿಮನನ್ನು ಮದುವೆಯಾದ ಕಾರಣದಿಂದ ಮಗಳ ಜೊತೆ ಸಂಬಂಧವನ್ನೇ ಕಡಿದು ಹಾಕಿದ, ಮೊಮ್ಮಗನನ್ನು ಹೆತ್ತಾಗಲೂ ಭೇಟಿಯಾಗಲು ನಿರಾಕರಿಸುವ ತನ್ನ ತಂದೆಯಂತಹವರಿರುವ ಹಿಂದೂ ಸಮಾಜಕ್ಕಿಂತ ಸಮಾಜವಾದಿ ತತ್ವವಿರುವ, "ರಜಿಯಾ"ಳಾದ ತನ್ನನ್ನು ಒಪ್ಪಿಕೊಂಡ ಅಮೀರನ ತಂದೆತಾಯಿಯಂತಹರಿರುವ ಇಸ್ಲಾಂ ಧರ್ಮವೇ ಪ್ರಗತಿಶಾಲಿ ಎಂಬ ಭಾವನೆಯೂ ಲಕ್ಷ್ಮಿಗಿರುತ್ತದೆ.

ಹಂಪೆಯ ಬಗ್ಗೆ ಗೊಂದಲದಲ್ಲಿದ್ದಾಗಲೇ, ತಂದೆ ತೀರಿಕೊಂಡ ಸುದ್ಧಿ ತಿಳಿದು, ಲಕ್ಷ್ಮಿ ಹಳ್ಳಿಗೆ ಹೋಗುತ್ತಾಳೆ. ತಂದೆ ಇಸ್ಲಾಂ ಧರ್ಮದ ಬಗ್ಗೆ, ಮುಸ್ಲಿಂ ಸಾಮ್ರಾಜ್ಯ, ದೊರೆಗಳ ಬಗ್ಗೆ ಅನೇಕ ಪುಸ್ತಕಗಳನ್ನು ಸಂಗ್ರಹಿಸಿ ಸಂಶೋಧನಾ ಗ್ರಂಥವನ್ನು ಬರೆಯುತ್ತಿದ್ದುದನ್ನು ಅರಿತ ಲಕ್ಷ್ಮಿಗೆ, ಅವರ ಕಾರ್ಯವನ್ನು ಪೂರ್ಣಗೊಳಿಸುವ ಅದಮ್ಯ ಬಯಕೆ ಮೂಡುತ್ತದೆ. ಮುಂದಿನ ೫ ವರ್ಷ ಹಳ್ಳಿಯಲ್ಲಿ ಉಳಿದು, ಕಲಾವಿದೆಯಾದ ತಾನು ಕಾದಂಬರಿ ಬರೆಯಬಲ್ಲೆ, ಸಂಶೋಧನಾಗ್ರಂಥ ಬರೆಯಲಾರೆ ಎಂದು ಅರಿವಾಗಿ, ಔರಂಗಜೇಬ ಕಾಲದಲ್ಲಿ ಯುದ್ಧದಲ್ಲಿ ಸೆರೆಸಿಕ್ಕಿ ಮತಾಂತರ ಹೊಂದುವ ರಾಜಕುಮಾರನೊಬ್ಬನ ಕಥೆಯನ್ನು ಬರೆಯಲಾರಂಭಿಸುತ್ತಾಳೆ.

ತನ್ನ ದೇವಾಲಯವನ್ನೇ ರಕ್ಷಿಸಿಕೊಳ್ಳಲಾರದ ಹಿಂದೂ ದೇವರುಗಳ ಮೇಲೆ ನಂಬಿಕೆ ಕಳೆದುಕೊಂಡ ಹದಿವಯಸ್ಸಿನ ರಾಜಕುಮಾರ, ಕೆಲವು ಸಲಿಂಗಕಾಮಿ ಮೊಘಲ್ ಸೇನಾಧಿಪತಿ ಕಾಮಕ್ಕೆ ಬಲಿಯಾಗಿ, ಗುಲಾಮನಾಗಿ, ಕಡೆಗೆ ಬೀಜ ಒಡಿಸಿಕೊಂಡು ಜನಾನಾದ ಕೆಲಸಕ್ಕೆ ನೇಮಿಸಲ್ಪಡುತ್ತಾನೆ. ಇಷ್ಟರಲ್ಲೇ, ಸತೀ ಹೋಗಿದ್ದಳೆಂದು ನಂಬಿದ್ದ ಪತ್ನಿ ತನ್ನಂತೆಯೇ ಮತಾಂತರ ಹೊಂದಿ, ಜನಾನಾವೊಂದರಲ್ಲಿ ಗುಲಾಮಳಾಗಿ, 3 ಮಕ್ಕಳ ತಾಯಿಯಾಗಿ ಬಾಳುತ್ತಿರುವುದನ್ನು ಕಾಣುತ್ತಾನೆ. ಮುಂದೆ, ಔರಂಗಜೇಬ್ ಕಾಶಿಯ ದೇವಸ್ಥಾನವನ್ನು ಆಕ್ರಮಿಸುವ ಆದೇಶ ನೀಡಿದಾಗ, ದೇವಾಲಯ ನಾಶವನ್ನು ಪ್ರತ್ಯಕ್ಷ ನೋಡಲು ತಾನೂ ಹೋಗುತ್ತಾನೆ. ಅವನ ಪಾತ್ರದ ಮೂಲಕ ಲಕ್ಷ್ಮಿಯ ಕಾದಂಬರಿ ಮೊಘಲರ ಕಾಲವನ್ನು ಚಿತ್ರಿಸುತ್ತಾ, ವಿಶ್ಲೇಷಿಸುತ್ತಾ ಸಾಗುತ್ತದೆ.

ಯಾವ ಪ್ರಕಾಶಕರೂ ಪ್ರಕಟಿಸಲು ಒಪ್ಪದ ಕಾದಂಬರಿಯನ್ನು ಲಕ್ಷ್ಮಿ ತಾನೇ ಪ್ರಕಟಿಸುತ್ತಾಳೆ. ಅಷ್ಟರಲ್ಲಿ, ಅಮೀರ್ ರಜಿಯಾಳ ಬದಲಾವಣೆಯನ್ನು ಇಸ್ಲಾಂ ಬಗ್ಗೆ ಆಕೆಗೆ ದ್ವೇಷವುಂಟಾಗಿರುವುದೇ ಕಾರಣ ಎಂದು ಅರ್ಥೈಸಿ, ಅವಳಿಗೆ ತಲ್ಲಾಕ್ ಕೊಡದಿದ್ದರೂ, ಇನ್ನೊಂದು ಮದುವೆಯಾಗುತ್ತಾನೆ. ಸರ್ಕಾರ ಲಕ್ಷ್ಮಿಯ ಕಾದಂಬರಿಯನ್ನು ಮುಟ್ಟುಗೋಲು ಹಾಕುವ ಮಟ್ಟಕ್ಕೆ ಬರುವ ಹೊತ್ತಿಗೆ, ಅಮೀರನಿಗೂ ಕಾದಂಬರಿಯ ಉದ್ದೇಶ ಅರ್ಥವಾಗಿ, ಅವಳನ್ನು ಅರೆಸ್ಟಿನಿಂದ ಉಳಿಸಲು ಹಳ್ಳಿಗೆ ಬರುವ ಆಶಾಭಾವನೆಯೊಂದಿಗೆ ಕಾದಂಬರಿ ಮುಕ್ತಾಯವಾಗುತ್ತದೆ.

ಆವರಣದ ವಾದವಿವಾದಗಳ ಬಗ್ಗೆ ಗಣಪತಿಯವರ ವಿಚಾರದ ಮುಖ್ಯ ತಿರುಳು ಈ ಕಾದಂಬರಿ ಈ ಕಾಲಕ್ಕೆ ಪ್ರಸ್ತುತವಾಗುವುದು ಹೇಗೆ ಎನ್ನುವುದು. ಸುಮಾರು 15 ವರ್ಷಗಳ ಹಿಂದೆ ಹಿಂದುತ್ವವಾದಿಗಳು ಬಾಬ್ರಿ ಮಸೀದಿಯನ್ನು ದಾಳಿಮಾಡಿ ಬೀಳಿಸಿದ್ದನ್ನು ಹಿಂದುತ್ವವಾದಿಗಳ ಹೊರತಾಗಿ ಎಲ್ಲರೂ ಖಂಡಿಸುವವರೇ. ನಮ್ಮಲ್ಲಿ ಅನೇಕರಿಗೆ ತಾವು ಪ್ರಗತಿಶೀಲರೆಂದು, ಜಾತ್ಯಾತೀತರೆಂದು, ನಿರೀಶ್ವರವಾದಿಗಳೆಂದು ನಂಬಿಕೆ, ಹೆಮ್ಮೆ. ಹಾಗಿದ್ದರೂ ಬಾಬ್ರಿ ಸುದ್ಧಿ ಕೇಳಿದಾಗ ಒಂದೇ ಒಂದು ಕ್ಷಣವಾದರೂ ಸಮಾಧಾನವಾಗಿದ್ದರೆ, "ಆಹಾ" ಅನ್ನಿಸಿದ್ದರೆ, ಮರುಕ್ಷಣವೇ ಬುದ್ಧಿ ಜಾಗೃತವಾಗಿ ತಿದ್ದಿಕೊಂಡಿದ್ದರೂ ಸಹಾ, ಆ ಒಂದು ಕ್ಷಣದ ಮಹತ್ವದ ಬಗ್ಗೆ ಪ್ರಶ್ನಿಸಿಕೊಳ್ಳುವ ಅಗತ್ಯವಿದೆ. ಆ ಪ್ರಶ್ನೆಗೆ ಉತ್ತರ ಹುಡುಕುವ ಅನಿವಾರ್ಯತೆಯಿದೆ. ಅಲ್ಲದೇ ನಮ್ಮ ಸುತ್ತಮುತ್ತಲಿನ ಎಷ್ಟೋ ಮಂದಿ, ಸ್ನೇಹಿತರು, ಬಂಧುಗಳು, ನೆರೆಹೊರೆಯವರು - ಬಹುತೇಕ ಶಾಂತಿಪ್ರಿಯ ಶ್ರೀಸಾಮಾನ್ಯರು - ಅಂತಹ ಭಾವನೆಯಿಂದ ಇನ್ನೂ ಹೊರಬರದಿರುವ ಉದಾಹರಣೆಗಳನ್ನೂ ನೋಡಿರಬಹುದು. ಹೀಗೇಕೆ? ಎಂಬ ಪ್ರಶ್ನೆಯ ದೃಷ್ಟಿಯಿಂದ ನೋಡಿದಾಗ, ಆವರಣದ ಪ್ರಸಕ್ತತೆಯ ಪರಿಚಯವಾಗುತ್ತದೆ.

ಪ್ರೊ.ಶಾಸ್ತ್ರಿ ಎನ್ನುವ ಪಾತ್ರಕ್ಕೆ ಆವರಣದುದ್ದಕ್ಕೂ ಕುತೂಹಲಕಾರಿ ಸ್ಥಾನವೊಂದಿದೆ. ಈ ಪಾತ್ರವನ್ನು ಯು.ಆರ್.ಅನಂತಮೂರ್ತಿಯವರನ್ನು ಅವಮಾನಿಸಲೆಂದೇ ಚಿತ್ರಿಸಿರುವುದು ಎಂಬ ಆಪಾದನೆ ಭೈರಪ್ಪನವರ ಮೇಲಿದೆ. ಈ ಆಪಾದನೆಯಲ್ಲಿ ಸತ್ಯವೆಷ್ಟು ಎಂಬುದು ಹೇಳಲು ಸಾಧ್ಯವಿಲ್ಲ, ಏಕೆಂದರೆ ಆ ಪಾತ್ರದಲ್ಲಿ ಇನ್ನೂ ಕೆಲವರ ಛಾಯೆಯನ್ನು ಕಾಣಬಹುದು. ಅಲ್ಲದೇ, ಸಾಹಿತಿ ಎಷ್ಟೇ ಪ್ರಾಮಾಣಿಕತೆಯಿಂದ ಕಾಲ್ಪನಿಕ ಪಾತ್ರವನ್ನು ಚಿತ್ರಿಸಲು ಹೊರಟರೂ, ನಿಜಜೀವನದ ಅನುಭವಗಳ ಪ್ರಭಾವವನ್ನು ಮೀರುವುದು ಕಷ್ಟವೆಂದು ಸ್ವತಃ ಬರಹಗಾರರಾದ ಗಣಪತಿ ಅಭಿಪ್ರಾಯಪಟ್ಟರು.


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X