• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಾಸ್ಯರಸದಲಿ ಭೋರ್ಗರೆದ ಕಾವೇರಿ...

By Staff
|

ಕನ್ನಂಬಾಡಿ ಕಟ್ಟೆಯ ಗೇಟುಗಳನ್ನೆಲ್ಲ ತೆರೆದರೆ ಕಾವೇರಿ ಹೇಗೆ ಭೋರ್ಗರೆಯಬಹುದೋ, ರಿಚರ್ಡ್ ಲೂಯಿಸ್ ಮತ್ತು ಮೈಸೂರ್ ಆನಂದ್ ಜೋಡಿಯ ಹಾಸ್ಯಲಾಸ್ಯಕ್ಕೆ ವಾಷಿಂಗ್ಟನ್‍ನ ಕಾವೇರಿಯಲ್ಲಿ ಅದಕ್ಕಿಂತಲೂ ಹೆಚ್ಚಿನ ಭೋರ್ಗರೆತ.

  • ಅಕ್ಷರ : ಶ್ರೀವತ್ಸ ಜೋಶಿ
  • ಮಸೂರ : ಹರಿದಾಸ್ ಲಹರಿ

AKKA Rasamanjari 2007ಯೂಟ್ಯೂಬ್‍ನಲ್ಲಿ ನಿಮ್ದೆಲ್ಲಾ ನೋಡ್ತಿರ್ತೇವೆ...!" ಎಂದರಂತೆ ಕೆಲ ಅಮೆರಿಕನ್ನಡಿಗರು, ಹಾಸ್ಯಕಲಾವಿದ ಮೈಸೂರು ಆನಂದ್ ಅವರನ್ನು ಮೊದಲಬಾರಿಗೆ ಭೇಟಿಯಾಗಿ ಕೈಕುಲುಕುವಾಗ. ನಮಗೇನ್ರೀ ಗೊತ್ತಾಗ್ಬೇಕು ಯೂಟ್ಯೂಬ್ ಅಂದ್ರೆ ಏನಂತ. ಟ್ಯೂಬಲ್ಲಿ ನೋಡಿದ್ದಾರಂತೆ ಟ್ಯೂಬಲ್ಲಿ, ಅದೂ ಎಲ್ಲವನ್ನೂ' ನೋಡಿದ್ದಾರಂತೆ ಅಯ್ಯಯ್ಯಪ್ಪೊ...!" - ಜಿಮ್ನಾಸ್ಟಿಕ್‌ಬಾಲೆಯಂತೆ ಹೇಗೆ ಬೇಕೋ ಹಾಗೆ ಅಂಗಾಂಗಗಳನ್ನಷ್ಟೇ ಅಲ್ಲ ಮುಖದ ಹಾವಭಾವ ಧ್ವನಿಯ ಏರಿಳಿತಗಳನ್ನೂ ಬಾಗಿ ಬಳುಕಿಸಬಲ್ಲ ಕಡ್ಡೀಪೈಲ್ವಾನ ಮೈಸೂರ್ ಆನಂದ್ ಹೀಗೆ ಜೋಕ್ ಸಿಡಿಸಿದರೆ ಇಡೀ ಉತ್ತರ ಅಮೆರಿಕಾ ನಗದಿರುವವರುಂಟೇ?

ಕನ್ನಂಬಾಡಿ ಕಟ್ಟೆಯ ಗೇಟುಗಳನ್ನೆಲ್ಲ ತೆರೆದರೆ ಕಾವೇರಿ ಹೇಗೆ ಭೋರ್ಗರೆಯಬಹುದೋ, ರಿಚರ್ಡ್ ಲೂಯಿಸ್ ಮತ್ತು ಮೈಸೂರ್ ಆನಂದ್ ಜೋಡಿಯ ಹಾಸ್ಯಲಾಸ್ಯಕ್ಕೆ ವಾಷಿಂಗ್ಟನ್‍ನ ಕಾವೇರಿಯಲ್ಲಿ ಅದಕ್ಕಿಂತಲೂ ಹೆಚ್ಚಿನ ಭೋರ್ಗರೆತ. ನದಿಗೆ ಉಕ್ಕಿಹರಿಯುವುದು ಮಾತ್ರವೇ ಗೊತ್ತಿರುವುದಲ್ಲ, ಮಂಜುಳ ನಿನಾದದಿಂದ ಜುಳುಜುಳು ಹರಿಯುವುದೂ ಗೊತ್ತು ಎಂದು ತೋರಿಸುವುದಕ್ಕೆ ಎಲ್.ಎನ್.ಶಾಸ್ತ್ರಿ, ಡಾ.ಶಮಿತಾ ಮಲ್ನಾಡ್ ಮತ್ತು ಸುನಿಲ್ ರಾವ್ ಸುಮಧುರ ಗಾನಧಾರೆಯ ತ್ರಿವೇಣಿ ಸಂಗಮ. ಹಾಡು ಹರಟೆ ಹಾವಭಾವ ಹೊಟ್ಟೆಹುಣ್ಣಾಗುವಷ್ಟು ಹಾಸ್ಯದ ನಂತರ ಹೊಟ್ಟೆತುಂಬ ಹಬ್ಬದೂಟದ ಪನಿವಾರ - ಕಾವೇರಿ ಕನ್ನಡ ಸಂಘದ ರಾಜ್ಯೋತ್ಸವ-ದೀಪಾವಳಿ ಸಮಾರಂಭದ ಸಂಕ್ಷಿಪ್ತ ಸಾರ.

ಜೋಕ್'ಆಲಿಯ ಜೀಕುಗಳ ನಡುವೆ, ಹಾಡುಗಳ ಹರಿವಿನ ನಡುವೆ, ರೇಷ್ಮೆಸೀರೆ ಐಪಾಡ್ ಇತ್ಯಾದಿ ಬಹುಮಾನಗಳ ಲಕ್ಕಿಡಿಪ್ ಡ್ರಾ, ಸೀರೆ ಏಲಂ - ಹೀಗೆ ಕಾರ್ಯಕ್ರಮಕ್ಕೆ ಆಕರ್ಷಣೆಯ ಅಂದವನ್ನು ಕೊಡುವುದರಲ್ಲಿ ಸ್ವಾಮಿನಾರಾಯಣ್ ನೇತೃತ್ವದ ಕಾವೇರಿ ಕಾರ್ಯಕಾರಿ ಸಮಿತಿ ಅಚ್ಚುಕಟ್ಟಾದ, ಅರ್ಥಪೂರ್ಣವಾದ ಪ್ಲಾನಿಂಗ್ ಮಾಡಿದ್ದಿರಬೇಕು. ಆದರೆ ನಗೆಹಬ್ಬದ ಈ ಕಾರ್ಯಕ್ರಮದ ಹಿಂದಿನ ಗಂಭೀರವಾದ ಸದುದ್ದೇಶವನ್ನು ಅರ್ಥೈಸಿಕೊಂಡು ಕಾವೇರಿಗರು ಇನ್ನೂ ಕೊಂಚ ಕೈಸಡಿಲಿಸುತ್ತಿದ್ದರೆ, ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರೆ ಇನ್ನೂ ಚೆನ್ನಾಗಿರ್ತಿತ್ತು. ಏಕೆಂದರೆ ಇದು ಕರ್ನಾಟಕದ ಅನಾಥಾಶ್ರಮಗಳಿಗೆ ನೆರವಿನ ಸದುದ್ದೇಶದಿಂದ ಅಕ್ಕ' ಆಶ್ರಯದಲ್ಲಿ ಅಮೆರಿಕದ ವಿವಿಧ ನಗರಗಳಲ್ಲಿ ರಸಮಂಜರಿ ಕಾರ್ಯಕ್ರಮವನ್ನು ನಡೆಸಲೆಂದೇ ಕರ್ನಾಟಕದಿಂದ ಬಂದಿರುವ ಕಲಾವಿದರ ವಿಶೇಷ ಪ್ರದರ್ಶನ, ಕಾವೇರಿ ವೇದಿಕೆಯಲ್ಲಿ. ಇರಲಿ, ಕನ್ನಡಿಗರಲ್ಲದಿದ್ದರೂ ಇಂಥದೊಂದು ಒಳ್ಳೆಯ ಕೆಲಸಕ್ಕೆ ಧನಸಹಾಯ ಮತ್ತು ಪ್ರಾಯೋಜಕತ್ವದ ಔದಾರ್ಯ ತೋರಿದವರು ಸಭೆಯಲ್ಲಿದ್ದರಲ್ಲ, ಅದೇ ಸಮಾಧಾನ.

ಸಮಾರಂಭದಲ್ಲಿ ಕಾವೇರಿಯ ಪ್ರತಿವರ್ಷದ ಸತ್ಸಂಪ್ರದಾಯದಂತೆ ಕನ್ನಡ ನುಡಿ ಸಂಸ್ಕೃತಿಗಳ ಉಳಿವು ಏಳಿಗೆಗಳಿಗೆ ಶ್ರಮಿಸಿದ ಕೆಲ ಕಾವೇರಿ ಪ್ರತಿಭೆಗಳನ್ನು ಅಭಿನಂದಿಸಿ ಸನ್ಮಾನಿಸುವ ಕಾರ್ಯಕ್ರಮವೂ ಇತ್ತು. ಕರ್ನಾಟಕ ಸಂಗೀತಕ್ಷೇತ್ರದಲ್ಲಿ ಮೃದಂಗವಾದನದಲ್ಲಿ ಅಪ್ರತಿಮ ಸಾಧನೆ ತೋರಿರುವ ಸ್ಥಳೀಯ ಯುವಪ್ರತಿಭೆ ಗೌತಮ್ ಸುಧಾಕರ್, ಕನ್ನಡ-ಕಲಿ ಪಾಠಶಾಲೆಯ ಮೂಲಕ ಎರಡನೇ ತಲೆಮಾರಿನ ಅಮೆರಿಕನ್ನಡಿಗ ಚಿಣ್ಣರಿಗೆ ಕನ್ನಡ ಓದು ಬರಹ ಕಲಿಸುತ್ತಿರುವ ನೆಚ್ಚಿನ ಶಿಕ್ಷಕಿ ಶಾಂತಿ ತಂತ್ರಿ, ಇಲ್ಲಿಯೇ ಹುಟ್ಟಿಬೆಳೆದರೂ ಪಟಪಟನೆ ಕನ್ನಡ ಮಾತಾಡುತ್ತ ಕನ್ನಡ ಸಿನೆಮಾವೊಂದನ್ನು ನಿರ್ದೇಶಿಸಿ ಇದೀಗ 'ಅಮೆರಿಕನ್ನಡ' ಟಿವಿ ಕಾರ್ಯಕ್ರಮ ಸರಣಿಯ ರೂವಾರಿಯಾಗಿರುವ ಯುವ ಕನ್ನಡತಿ ಶಿಲ್ಪಾ ಜಗದೀಶ್, ಐದು ವರ್ಷಗಳ ಕಾಲ ಸತತವಾಗಿ ಅಂತರ್ಜಾಲದ ಆಗಸದಲ್ಲಿ ಅಕ್ಷರಸಮಾರಾಧನೆ ಮಾಡಿದ ವಿಚಿತ್ರಾನ್ನದ ಶ್ರೀವತ್ಸ ಜೋಶಿ - ಇವಿಷ್ಟು ಮಂದಿ ಈ ಸಲ ಸನ್ಮಾನಿತರಾದ ಕಾವೇರಿಗರು.

ಒಟ್ಟಿನಲ್ಲಿ ದೀಪಾವಳಿಗೆ ನಗೆಪಟಾಕಿಯ ಆನಂದ'ವನ್ನು ತಂದುಕೊಂಡು, ಅನಾಥಮಕ್ಕಳ ಬಾಳಲ್ಲಿಯೂ ದೀವಳಿಗೆಯ ಬೆಳಕು ಹರಿಸುವ ಯತ್ನಕ್ಕೆ ಕೈಜೋಡಿಸಿ ಕೃತಾರ್ಥವಾಯ್ತು ಕಾವೇರಿ ಕನ್ನಡ ಸಂಘ.

ಕಾರ್ಯಕ್ರಮದ ಚಿತ್ರಪಟಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ :

http://kannadaphotos.filmibeat.com/v/album05/NRI_Activities/akka-rasamanjari/akka-rasamanjari8.jpg.html

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more