ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಡ್ನಿ ಕನ್ನಡ ಸಂಘದಲ್ಲಿ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ

By ವಿಜಯಕುಮಾರ್ ಹಲಗಲಿ
|
Google Oneindia Kannada News


Rajyotsava celebrated in Sydney ಸಿಡ್ನಿ ಕನ್ನಡ ಸಂಘದ ಆಶ್ರಯದಲ್ಲಿ ನವೆಂಬರ್ 3ರಂದು ಕರ್ನಾಟಕ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಆಚರಣೆಗೆ ಸಿಡ್ನಿ ಕನ್ನಡಿಗರಿಂದ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿತ್ತು. ಎಲ್ಲೆಲ್ಲೂ ಸಂತಸದ ಬುಗ್ಗೆ ಹರಿಸಿದ್ದ ಸಮಾರಂಭದಲ್ಲಿ 300ಕ್ಕೂ ಹೆಚ್ಚಿನ ಕನ್ನಡಿಗರು ಭಾಗವಹಿಸಿದ್ದರು.

ಕನ್ನಡ ಸಂಘದ ಕಾರ್ಯದರ್ಶಿ ಸುರೇಶ್ ಬೆಂಗಳೂರ್ ಅವರು ನೆರೆದ ಸಭಿಕರನ್ನು ಸ್ವಾಗತಿಸುವದರ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಮೊದಲಿಗೆ ಮಕ್ಕಳಿಗಾಗಿ ಸಿಡ್ನಿಯ ಖ್ಯಾತ ಜಾದೂಗಾರರಿಂದ ಜಾದು ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸುಮಾರು ಒಂದು ಘಂಟೆ ಕಾಲ ಮಕ್ಕಳು ಮತ್ತು ಹಿರಿಯರು ಮಂತ್ರಮುಗ್ಧರಾಗಿ ವಿವಿಧ ಚಮತ್ಕಾರಗಳನ್ನು ಆನಂದಿಸಿದರು. ಮಕ್ಕಳು ಮತ್ತು ಪ್ರೇಕ್ಷಕರು ಸಕ್ರೀಯವಾಗಿ ಭಾಗವಸಿದರು. ಯುವತಿಯೊಬ್ಬಳ ದೇಹವನ್ನು ಕತ್ತರಿಸುವ ಚಮತ್ಕಾರವು ಎಲ್ಲರನ್ನು ಬೆರಗುಗೊಳಿಸಿತು.

ಸಿಡ್ನಿ ಕನ್ನಡ ಸಂಘದ ಆಶ್ರಯದಲ್ಲಿ ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಬ್ಲ್ಯಾಕ್ ಟೌನ್ ಸುಗಮ ಕನ್ನಡ ಶಾಲೆಯ ಮಕ್ಕಳು ಸಮೂಹ ಗಾಯನ ಹಾಗು ನೃತ್ಯ ಪ್ರದರ್ಶನ ನೀಡಿದರು. ಕೇವಲ ಒಂದು ವರ್ಷದಲ್ಲಿ ಕನ್ನಡ ಕಲಿತು ಕನ್ನಡದಲ್ಲಿ ಹಾಡಿದ್ದನ್ನು ಪ್ರೇಕ್ಷಕರು ಮೆಚ್ಚಿ ತಮ್ಮ ಅಪಾರ ಸಂತೋಷವನ್ನು ದೀರ್ಘ ಕರತಾಡನ ಹಾಗು ಶಿಳ್ಳೆ ಹಾಕುವದರ ಮೂಲಕ ವ್ಯಕ್ತಪಡಿಸಿದರು. ಯುವ ವೇದಿಕೆಯ ಸದಸ್ಯರು ಮೋಹಿನಿ ಭಸ್ಮಾಸುರ ನೃತ್ಯ ರೂಪಕವನ್ನು ಪ್ರದರ್ಶಿಸಿದರು. ಮಕ್ಕಳ ಜಾನಪದ ನೃತ್ಯ ಹಾಗು ಗುರು ಶಿಷ್ಯರು ಚಿತ್ರದ ಹಾಸ್ಯ ನೃತ್ಯಗಳು ಸಭಿಕರ ಮನಸೆಳೆದವು.

ಸಿಡ್ನಿಯ ಪ್ಯಾರ್ರಾಮಟ್ಟ ಪುರಭವನದಲ್ಲಿ ನಡೆದ ಈ ಸಮಾರಂಭಕ್ಕೆ ಪ್ಯಾರ್ರಾಮಟ್ಟ ಸಂಸತ್ ಸದಸ್ಯೆ ಜ್ಯೂಲಿ ಓವೆನ್ಸ್ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದರು ಹಾಗು ಸಿಡ್ನಿಯ ಸಂಯುಕ್ತ ಭಾರತೀಯ ಸಂಘದ ಅಧ್ಯಕ್ಷರಾದ ಕನ್ನಡಿಗ ರಾಜ್ ನಟರಾಜನ್ ಅವರು ಅಥಿತಿಗಳಾಗಿ ಭಾಗವಹಿಸಿದ್ದರು.

ಅಧ್ಯಕ್ಷೆ ಡಾ. ನಾಗಮ್ಮ ಪ್ರಕಾಶ್ ಅವರು ಅತಿಥಿಗಳನ್ನು ಸ್ವಾಗತಿಸಿ ಅವರನ್ನು ಸಭಿಕರಿಗೆ ಪರಿಚಯಿಸಿದರು. ಸಂಘದ ಕಾರ್ಯಕ್ರಮಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಮುಂಬರುವ ರಜತ ಮಹೋತ್ಸವದ ಹಾಗು ಏಶಿಯಾ ಪೆಸಿಫಿಕ್ ಕನ್ನಡ ಒಕ್ಕೂಟದ ಪ್ರಪ್ರಥಮ ಕನ್ನಡ ಅಧಿವೇಶನದ ಬಗ್ಗೆ ತಿಳಿಸಿ ಕನ್ನಡಿಗರೆಲ್ಲರು ಉತ್ಸಾಹದಿಂದ ಈ ಆಚರಣೆಯಲ್ಲಿ ಭಾಗಿಗಳಾಗಬೇಕೆಂದು ಕರೆ ನೀಡಿದರು.

ಜ್ಯೂಲಿ ಓವೆನ್ಸ್ ಅವರು ಸಿಡ್ನಿ ಕನ್ನಡ ಸಂಘದ ಬೆಳ್ಳಿ ಹಬ್ಬದ ಆಚರಣೆಗೆ ಚಾಲನೆ ನೀಡಿದರು. ಸಿಡ್ನಿ ಕನ್ನಡ ಸಂಘ ಮುಂದಿನ ವರ್ಷ ರಜತ ಮಹೋತ್ಸವವನ್ನು ಆಚರಿಸುತ್ತಿದೆ. ಜ್ಯೂಲಿ ಓವೆನ್ಸ್‌ರವರು ಕನ್ನಡ ಸಂಘದ 25 ವರ್ಷಗಳ ಸಮಾಜ ಸೇವೆಯನ್ನು ಶ್ಲಾಘಿಸಿದರು. ಮಕ್ಕಳಿಗೆ ಕನ್ನಡವನ್ನು ಕಲಿಸಿ ಭಾಷೆಯನ್ನು ಉಳಿಸಿ ಬೆಳೆಸಿಕೊಂಡು ಬರುವನಿಟ್ಟಿನಲ್ಲಿ ಕನ್ನಡ ಸಂಘದ ಪ್ರಯತ್ನವನ್ನು ಅವರು ಕೊಂಡಾಡಿದರು.

ಸಂಯುಕ್ತ ಭಾರತೀಯ ಸಂಘದ ಅಧ್ಯಕ್ಷರಾದ ರಾಜ್ ನಟರಾಜನ್ ಅವರು ಮಾತನಾಡಿ, ಕನ್ನಡ ಸಂಘವು ಕನ್ನಡ ಸಮುದಾಯಕ್ಕೆ ಮಾತ್ರವಲ್ಲದೆ ಇತರ ಭಾರತೀಯ ಸಮುದಾಯದ ಕಾರ್ಯಗಳಲ್ಲಿ ಸೇವೆ ಸಲ್ಲಿಸುತ್ತಿರುವದನ್ನು ತಿಳಿಸಿದರು. ಕನ್ನಡಿಗರು ಸಂಯುಕ್ತ ಭಾರತೀಯ ಸಂಘದ ಕಾರ್ಯಗಳಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿರುವದನ್ನು ಸ್ಮರಿಸಿದರು.

ರಜತ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಡಾ. ಸಿದ್ಧಲಿಂಗೇಶ್ವರ ಓರೆಕೊಂಡಿಯವರು ಬೆಳ್ಳಿ ಹಬ್ಬದ ಯಶಸ್ಸಿಗೆ ಎಲ್ಲ ಕನ್ನಡಿಗರ ಸಹಾಯ, ಸಹಕಾರ ಹಾಗು ಸಲಹೆಗಳನ್ನು ಕೋರಿದರು. ಈಗಾಗಲೆ ಕಾರ್ಯಕ್ರಮಕ್ಕೆ ಸಿದ್ಧತೆಗಳು ಶುರುವಾಗಿದ್ದು ಬರುವ ದಿನಗಳಲ್ಲಿ ಹೆಚ್ಚಿನ ವಿವರಗಳನ್ನು ನೀಡುವುದಾಗಿ ಹೇಳಿದರು.

ಜ್ಯೂಲಿ ಓವೆನ್ಸ್ ಅವರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಶಂಸಾ ಪತ್ರಗಳನ್ನು ನೀಡಿದರು. ಕು|| ಸಾರಂಗ ಕಾರ್ಯಕ್ರಮದ ನಿರೂಪಣೆಯನ್ನು, ಕನ್ನಡ ಸಂಘದ ಉಪಾಧ್ಯಕ್ಷೆ ಗೀತಾ ಗೋಪಿನಾಥ್ ಅವರು ವ೦ದನಾರ್ಪಣೆ ಮಾಡಿದರು.

ಸಿಡ್ನಿ ಕನ್ನಡ ರಾಜ್ಯೋತ್ಸವದ ಗ್ಯಾಲರಿಗೆ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X