ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಲು ಬೇರೇನಿದೆ ಬಾಳಲಿ?: ಬ್ರಿಟನ್ ಯುವತಿಯ ಮಡಿಕೇರಿ ಹಾಡು!

By Staff
|
Google Oneindia Kannada News

ಕೃತಜ್ಞತೆ,ಏಕಾಗ್ರತೆ ಮತ್ತು ಸದುದ್ದೇಶಕ್ಕೆ ಬದ್ಧಳಾದ ಬ್ರಿಟನ್ನಿನ ಓರ್ವ ಯುವತಿಯ ಪರಿಶ್ರಮದಿಂದ ಸುಸಜ್ಜಿತವಾದ ಒಂದು ಆಂಬ್ಯುಲೆನ್ಸ್ ಕರ್ನಾಟಕದ ಮಡಿಕೇರಿಗೆ ಇನ್ನೇನು ಬಂದಿಳಿಯಲಿದೆ.ಬರಮಾಡಿಕೊಳ್ಳುವ ಉತ್ಸಾಹ ನಿಮ್ಮದಾಗಲಿ. ಆ ಯುವತಿ ಎಲ್ಲಾಬಿಟ್ಟು ಮಡಿಕೇರಿ ಬಗ್ಗೆ ಯಾಕೆ ಚಿಂತಿಸುತ್ತಿದ್ದಾಳೆ? ಆ ಊರಿಗೇ ಏಕೆ ಆಂಬ್ಯುಲೆನ್ಸ್ ಸೌಕರ್ಯವನ್ನು ಕಲ್ಪಿಸಿಕೊಡುತ್ತಿದ್ದಾಳೆ? ಬ್ರಿಸ್ಟಲ್ಲಿನ ತರುಣಿ ಲೀನಾ ಲ್ಯಾಂಬಿ (mailto:[email protected] )ಯ ಮಾತುಗಳಲ್ಲೇ ಕೇಳಿ.
_______________________________________________

Lena liambeyನನ್ನ ಬಾಳಸ್ನೇಹಿತ ಡೇವಿಡ್ ಮತ್ತು ನಾನು 2007ರ ಫೆಬ್ರುವರಿ 6ನೇ ತಾರೀಖು ಬ್ರಿಟನ್ನಿನಿಂದ ಮುಂಬಯಿಗೆ ಬಂದೆವು. ಅಲ್ಲಿಂದ ಗೋವಾ ನೋಡಿಕೊಂಡು ಕರ್ನಾಟಕಕ್ಕೆ ಪ್ರಯಾಣ ಬೆಳೆಸಿದೆವು. ದಾರಿಯಲ್ಲಿ ಗೋಕರ್ಣವನ್ನೂ ನೋಡಿದೆವು. ಕಾಫೀ ಮತ್ತು ಏಲಕ್ಕಿಯ ತೋಟಗಳನ್ನು ನೋಡಲು ಮತ್ತು ಸಮೀಪದಲ್ಲೇ ಇದ್ದ ಬೌದ್ಧ ವಸಾಹತುಗಳನ್ನು ನೋಡಲು ಮಡಿಕೇರಿಗೆ ಪ್ರಯಾಣಿಸಲು ತೀರ್ಮಾನಿಸಿದೆವು. ಫೆಬ್ರುವರಿಯ 22ರಡನೆಯ ತಾರೀಖಿನಂದು ಮಡಿಕೇರಿಗೆ ತಲುಪಿ ಮಾರನೆಯದಿನ ಕಾಲುನಡಿಗೆಯಲ್ಲಿ ಆಬ್ಬೆ ಫಾಲ್ಸ್ ಎಂಬ ಜಲಪಾತವನ್ನು ನೋಡಲು ಏರ್ಪಾಟು ಮಾಡಿಕೊಂಡೆವು.

ನಮ್ಮ ಮಡಿಕೇರಿ ಪ್ರವಾಸವನ್ನು "ನಿಸರ್ಗ ಪ್ರವಾಸ" ಎಂಬ ಒಂದು ಪ್ರವಾಸಕಂಪನಿಯು ಏರ್ಪಾಟು ಮಾಡಿತ್ತು. ಮಾರನೆಯ ಬೆಳಿಗ್ಗೆ ಒಬ್ಬ ಮಾರ್ಗದರ್ಶಕನೊಡನೆ ಬೆಟ್ಟಗುಡ್ಡಗಳನಡುವೆ ಕಾಲ್ನಡಿಗೆಯ ಪ್ರಯಾಣ ಮಾಡಿದೆವು. ಅಕ್ಕಪಕ್ಕಗಳಲ್ಲಿದ್ದ ಹಸುರು ಆಚ್ಛಾದಿತ ರಮಣೀಯ ತೋಟಗಳ ಮತ್ತು ಪ್ರಕೃತಿ ಸೌಂದರ್ಯದ ಪರಿಸರ ವಿಚಾರವಾಗಿ ನಮ್ಮ ಮಾರ್ಗದರ್ಶಕನಿಂದ ತಿಳಿಯುತ್ತಾ ಮುನ್ನಡೆದೆವು. ಮಧ್ಯಾಹ್ನದವೇಳೆಗೆ ಆ ಮಾರ್ಗದರ್ಶಕನ ಹೆಂಡತಿ ನಮಗೋಸ್ಕರ ಪ್ರೀತಿಯಿಂದ ತಯಾರಿಸಿದ್ದ ಸ್ಥಳೀಯ ಊಟವನ್ನು ಉಂಡೆವು.ವಿಶ್ರಾಂತಿ ಪಡೆಯಲು ಕಾಡಿನಲ್ಲಿದ್ದ ಆತನ ಒಂದು ಸಣ್ಣಮನೆಯಲ್ಲಿ ತಂಗಿದೆವು.

ವಿಶ್ರಾಂತಿಯ ನಂತರ ಮಧ್ಯಾಹ್ನ ಮತ್ತೆ ಸುತ್ತಮುತ್ತದ ಪ್ರದೇಶಗಳನ್ನು ನೋಡುವುದಿದೆ ಎಂದು ನಮ್ಮ ಮಾರ್ಗದರ್ಶಕ ಹೇಳುತ್ತಿದ್ದ. ಕುಡಿಯಬಹುದಾದ ಪಾನೀಯವನ್ನು ಕೊಡುವ ಒಂದು ಮರವನ್ನು (ಎಳನೀರು?) ನೋಡಲು ಪ್ರಯಾಣವನ್ನು ಮುಂದುವರಿಸಿದೆವು. ಈ ಪಾನೀಯವನ್ನು ಹೇಗೆ ಆ ಮರದಿಂದ ಇಳಿಸುತ್ತಾರೆ ಮತ್ತು ಅದನ್ನು ತೆಗೆಯಲು ಕಾಲಿಗೆ ಒಂದು ತುಂಡು ಬಟ್ಟೆಯನ್ನು ಕಟ್ಟಿಕೊಂಡ ಕೆಲಸಗಾರರು ಚಾಕಚಕ್ಯತೆಯಿಂದ ಹೇಗೆ ಎತ್ತರವಾದ ಮರವನ್ನು ಹತ್ತುತ್ತಾರೆಂಬುದನ್ನು ನಮಗೆ ತೋರಿಸಲು ನಮ್ಮ ಮಾರ್ಗದರ್ಶಕ ಬಹಳ ಕಾತುರನಾಗಿದ್ದ. ತರುವಾಯ ಅರಣ್ಯದ ಒಂದು ದಟ್ಟವಾದ ಸಣ್ಣಪ್ರದೇಶಕ್ಕೆ ಬಂದೆವು. ಆಲ್ಲಿ ಮತ್ತಿಬ್ಬರು ಕೆಲಸಗಾರರು ಕಾಣಿಸಿದರು. ಮರ ಹತ್ತುವ ಕೆಲಸದವರು ಇವರೇ ಎಂದು ನಮಗೆ ಗೊತ್ತಾಯಿತು. ನಾವೆಲ್ಲ ಬೆಟ್ಟದ ತಪ್ಪಲಲ್ಲಿ ಇಳಿದುಕೊಂಡೆವು. ಅಲ್ಲಿಂದ ಇನ್ನೂ ದಟ್ಟವಾದ ಅರಣ್ಯಕ್ಕೆ ನಮ್ಮನ್ನು ಕರೆದೊಯ್ಯಲಾಯಿತು. ಆ ಕೆಲಸಗಾರರಲ್ಲಿ ಒಬ್ಬ ಮರ ಹತ್ತತೊಡಗಿದ.

David Lordನೋಡುನೋಡುತ್ತಿದ್ದಂತೆಯೇ ನನ್ನ ಬಾಳಸಂಗಾತಿ ಡೇವಿಡ್ ಗೆ ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆ ಶುರುವಾಯಿತು. ಅವನು ತುಂಬ ಆರೋಗ್ಯವಂತ. ಅಲ್ಲದೆ ಗಟ್ಟಿಮುಟ್ಟಾದ ಮತ್ತು ಶಕ್ತಿವಂತ ಯುವಕನಾಗಿದ್ದುದರಿಂದ ನಮಗಾರಿಗೂ ಆ ತೊಂದರೆ ಏನೆಂಬುದರ ಬಗ್ಗೆ ಕಿಂಚಿತ್ತೂ ತಿಳಿದಿರಲಿಲ್ಲ. ಆದೊಂದು ಭಯಂಕರ ಅನುಭವ. ಒಂದು ಕಡೆ ನಾನು ಕಂಗಾಲಾಗುತ್ತಿದ್ದರೆ ಇನ್ನೊಂದೆಡೆ ಡೇವಿಡ್ ನ ಸ್ಥಿತಿ ಬಹುಬೇಗನೆ ಉಲ್ಬಣಿಸಿತೊಡಗುತ್ತಿದೆ.ನಾನು ಬೆಚ್ಚಿಬಿದ್ದೆ.

ನಮ್ಮ ಪ್ರವಾಸೀ ಮಾರ್ಗದರ್ಶಕ ತಡಮಾಡದೆ ಡೇವಿಡ್ ಗೆ ಚಿಕಿತ್ಸೆ ನೀಡುವ ಸಹಾಯಕರನ್ನು ಕರೆತರಲು ಅಲ್ಲಿಂದ ಹೊರಟುಹೋದ. ಸುಮಾರು ಹತ್ತು ನಿಮಿಷವಾಯಿತು. ಉಸಿರಾಡುವುದಕ್ಕೆ ತೀರಾ ಕಷ್ಟಪಡುತ್ತಿದ್ದ ಕುಸಿದುಬಿದ್ದ ಡೇವಿಡ್ ಕುಸುದುಬಿದ್ದ. ಉಸಿರಾಡುವುದನ್ನು ನಿಲ್ಲಿಸಿಬಿಟ್ಟ. ಅವನನ್ನು ಪುನಶ್ಚೇತನಗೊಳಿಸುವುದಕ್ಕೆ ನನ್ನ ಕೈಲಾದುದನ್ನೆಲ್ಲ ಮಾಡುತ್ತಿದ್ದೆ. ಮರ ಹತ್ತುವುದಕ್ಕೆ ಬಂದಿದ್ದ ಆ ಇಬ್ಬರೂ ಕೆಲಗಾರರು ನನಗೆ ಸಹಾಯಮಾಡಲು ಯತ್ನಿಸಿದರು. ಆದರೆ ಅವ್ಯಾವೂ ನಿರೀಕ್ಷಿತ ಪ್ರಯೋಜನ ಕೊಡುತ್ತಿರಲಿಲ್ಲ. ಕೆಲಸಗಾರರಿಗೆ ಇಂಗ್ಲೀಷ್ ಮಾತಾಡಲು ಬರುತ್ತಿರಲಿಲ್ಲ. ಹಾಗಾಗಿ ನಾನು ಆ ಕಾಡಿನ ನಡುವೆ ಏಕಾಂಗಿಯಾಗಿಬಿಟ್ಟೆ.

ಸುಮಾರು ಒಂದು ಘಂಟೆಯ ನಂತರ ನಾವಿದ್ದಲ್ಲಿಗೆ ಸಹಾಯ ಹಸ್ತ ಬಂತು. ನಾನು ಎಣಿಸಿದಹಾಗೆ ಅದು ಆಂಬ್ಯುಲೆನ್ಸ್ ಆಗಿರಲಿಲ್ಲ. ಒಂದು ಆಕ್ಸಿಜನ್ ಟ್ಯಾಂಕ್ ಒಳಗೊಂಡ ಕೇವಲ ಒಂದು ಜೀಪು ಅದಾಗಿದ್ದಿತು.ಅವರಾರಿಗೂ ಆ ಆಕ್ಸಿಜನ್ ಟ್ಯಾಂಕ್ ಉಪಯೋಗಿಸುವುದು ಗೊತ್ತಿರಲಿಲ್ಲ. ಈ ಜೀಪಿನಲ್ಲಿ ಆಸ್ಪತ್ರೆಯನ್ನು ತಲಪುವ ವೇಳೆಗೆ ತುಂಬಾ ತಡವಾಯಿತು ಮತ್ತು ಗಳಿಗೆಗಳಿಗೆಗೂ ಕಾಲಮಿಂಚಿಹೋಗುತ್ತಿರುವಂತೆ ಭಯವಾಗುತ್ತಿತ್ತು.ಆದರೆ ಆ ಕ್ಷಣ ಬಂದೇಬಿಟ್ಟಿತು.ಡೇವಿಡ್ ಮೃತನಾದನೆಂದು ನಿರ್ಧಾರವಾಯಿತು. ಅದೇವೇಳೆಗೆ ಆಸ್ಪತ್ರೆಯಲ್ಲಿ ವಿದ್ಯುತ್ ಶಕ್ತಿ ಸರಬರಾಜು ನಿಂತುಹೋಯಿತು.ಎಲ್ಲರೂ ಕತ್ತಲೆಯಲ್ಲಿ ಮುಳುಗಿದೆವು.

ಇದೆಲ್ಲವನ್ನೂ ಕಣ್ಣಾರೆ ನೋಡಿ ಅನುಭವಿಸಿದಾಗ ಅತ್ಯಗತ್ಯ ವಸ್ತುಗಳು ಮತ್ತಿತರ ಸಂಪನ್ಮೂಲಗಳಿಗೆ ಆ ಊರಿನಲ್ಲಿ ಅಪಾರ ಕೊರತೆಯಿದೆ ಎಂಬ ಸಂಗತಿ ಮನವರಿಕೆಯಾಯಿತು. ಆ ಆಸ್ಪತ್ರೆಯಲ್ಲಿ ಒಂದು ಆಂಬ್ಯುಲೆನ್ಸ್ ಕೂಡಾ ಇರಲಿಲ್ಲ!

ಡೇವಿಡ್ ತೀರಿಕೊಂಡ ನಂತರದ ಅನುಭವ ಇನ್ನೊಂದು ತೆರನಾದದ್ದು. ಆಗ ಏನಾಯಿತು ಎಂದು ನೆನಪಿಸಿಕೊಳ್ಳುವುದಕ್ಕೂ ಈಗ ನನಗೆ ಕಷ್ಟವಾಗತ್ತೆ. ಎಲ್ಲಾ ಮಬ್ಬು ಮಬ್ಬಾಗಿ ನೆನಪಿದೆ. ಡೇವಿಡ್ ಅಸುನೀಗಿದ ನಂತರ ಅಲ್ಲಿನ ಪೊಲೀಸ್ ಠಾಣೆಯಲ್ಲಿ ಅನೇಕ ಅಧಿಕಾರೀ ಧೋರಣೆಗಳೊಂದಿಗೆ ಹೆಣಗಬೇಕಾಯಿತು. ಅಲ್ಲದೆ ಇಂಗ್ಲೆಂಡಿಗೆ ನಮ್ಮಿಬ್ಬರ ಸಾಗಣೆಯ ವ್ಯವಸ್ಥೆಯನ್ನು ಮಾಡಬೇಕಾಗಿದ್ದಿತು. ಆ ಅನುಭವ ಘನಘೋರ. ನಮ್ಮ ಪ್ರವಾಸಿ ಮಾರ್ಗದರ್ಶಕ ಮತ್ತು ಅವನ ಹೆಂಡತಿ ಮತ್ತು ಆ ಪ್ರವಾಸದ ಕಂಪನಿಯ ಮಾಲಿಕರುಗಳು ನನ್ನ ಜತೆಯಲ್ಲಿ ನಿಂತು ಆವತ್ತು ಸಹಾಯ ಮಾಡಿರದಿದ್ದರೆ ನಾನೂ ಸತ್ತುಹೋಗುತ್ತಿದ್ದೆ.

ಆ ಆಸ್ಪತ್ರೆಯಿಂದ ನಾನು ಹಿಂತಿರುಗಿ ಬಂದ ಸಮಯದಿಂದ ಆ ಮಾರ್ಗದರ್ಶಕನ ಹೆಂಡತಿಯು (ಇಂಗ್ಲೀಷಿನ ಒಂದು ಪದವನ್ನೂ ಅರಿಯದವಳು)ನಾನು ವಿಮಾನವನ್ನು ಹತ್ತುವವರೆಗೂ ನನ್ನಪಕ್ಕವನ್ನು ಒಂದು ಕ್ಷಣವನ್ನೂ ಬಿಟ್ಟಿರಲಿಲ್ಲ. ನನಗೆ ಅವಳಮನೆಯಲ್ಲೇ ಸ್ನಾನಕ್ಕೆ ಅಣಿಮಾಡಿ, ನನ್ನಪಕ್ಕದಲ್ಲಿ ಮಲಗಿ, ನಾನು ಎಲ್ಲಿಹೋದರೂ ಅಲ್ಲಿ ನನ್ನೊಡನೆ ಬರುತ್ತಿದ್ದಳು. ಆ ಟೂರಿಸ್ಟ್ ಕಂಪನಿಯ ಮಾಲಿಕನೂ ಸಹ ಶವಪರೀಕ್ಷೆಯನ್ನೂ ಒಳಗೊಂಡು ಎಲ್ಲಾ ಕಾರ್ಯಭಾರಗಳನ್ನು ನಡೆಸಿಕೊಡಲು ಸಹಾಯಮಾಡಿದ. ನಾನು ಮೂರು ದಿನಗಳ ನಂತರ ಮಡಿಕೇರಿಯಿಂದ ಇಂಗ್ಲೆಂಡನ್ನು ಸೇರಿಕೊಂಡೆ. ನನ್ನ ಈ ಬರಹವು ಮಡಿಕೇರಿಯ ಜನಗಳು ನನಗೆ ಸಹಾಯ ಮಾಡಲು ಪಟ್ಟ ಕಷ್ಟಕ್ಕೆ ನಾನು ಬರೆದುಕೊಡುತ್ತಿರುವ ಪ್ರೀತಿಯ ಉಯಿಲು.

ಕೊಡಲು ಬೇರೇನಿದೆ ಬಾಳಲಿ?: ಬ್ರಿಟನ್ ಯುವತಿಯ ಮಡಿಕೇರಿ ಹಾಡು!ನಾನು ಯುಕೆಯನ್ನು ಸೇರಿದನಂತರ ಆ ಪ್ರವಾಸ ಕಂಪನಿಯ ಮಾಲೀಕರು, ಡೇವಿಡ್ಡಿನ ಹೆಸರಿನಲ್ಲಿ ಸ್ಥಳೀಯ ಸಮುದಾಯದ ನೆರವಿಗಾಗಿ ಮತ್ತು ಮತ್ತು ಡೇವಿಡ್ಡಿನ ಜೀವಕ್ಕೆ ಗೌರವಿಸಲು ಒಂದು ಧರ್ಮಕಾರ್ಯವನ್ನು ಕೈಗೊಂಡಿದ್ದಾರೆಂದು ತಿಳಿದುಬಂತು. ಇದು ನನ್ನ ಮನಸ್ಸಿಗೆ ನೆಮ್ಮದಿಯನ್ನು ಕೊಡುವ ಒಂದು ಮೂಲವಾಯಿತು. ಅಲ್ಲದೆ ಅವರು ದೇವಿಡ್ ಹೆಸರಿನಲ್ಲಿ ಈ ದೊಡ್ಡಕಾರ್ಯವನ್ನು ಮುಂದುವರೆಸುತ್ತಾರೆಂಬ ಆಶಾವಾದವನ್ನೂ ಇಟ್ಟುಕೊಂಡಿದ್ದೇನೆ. ಈ "ಡೇವಿಡ್ ಲಾರ್ಡ್ ಚಾರಿಟಬಲ್ ಟ್ರಸ್ಟಿಗೆ" ಒಂದು ಆಂಬ್ಯುಲೆನ್ಸ್ ಕೊಳ್ಳುವ ಯೋಜನೆಯನ್ನು ಟ್ರಸ್ಟಿನವರು ಹಾಕಿಕೊಂಡಿದ್ದಾರೆಂದೂ ತಿಳಿದು ಬಂತು. ನಾನು ಮಡಿಕೇರಿಯ ಜನತೆಗೆ ಏನಾದರೂ ಒಂದು ಕೊಡುಗೆಯನ್ನು ಕೊಡಬೇಕೆಂದು ಯೋಚಿಸುತ್ತಿದ್ದೆ. ಆ ಸಮಾಜಕ್ಕೆ ನೆರವಾಗುವ ಆಂಬ್ಯುಲೆನ್ಸ್ ಅರ್ಥಪೂರ್ಣ ಕೊಡುಗೆಯಾದೀತು ಎಂದು ನನಗೆ ಅನ್ನಿಸಿತು.

ನಾನು ಮೊದಲು ಮಾಡಿದ ಕೆಲಸವೆಂದರೆ http://www.davelord.org.uk/ ಎಂಬ ಅಂತರಜಾಲ ನಿವೇಶನವನ್ನು ಸ್ಠಾಪಿಸಿದೆ. ಇದು ನನ್ನ ಸ್ನೇಹಿತರು,ಡೇವಿಡ್ಡಿನ ಮನೆಯವರಿಂದ ಮತ್ತು ನನ್ನಿಂದ ದಾನವನ್ನು ಗಳಿಸಿತು. ಆಮೇಲೆ ಇತರ ವಿಧಾನಗಳಿಂದ ದಾನಗಳಿಸಲು ಯೋಚಿಸಿದೆ. ಅನೇಕ ಉತ್ಸುಕ ದಾನಿಗಳ ಭರವಸೆಯಿಂದ ಇದೇ ವರ್ಷದ ಜುಲೈ ಒಂದನೆಯತಾರೀಖು ನಾನು ಮತ್ತು ನನ್ನ ಸ್ನೇಹಿತರೆಲ್ಲರೂ ಲಂಡನ್ನಿನ 10 ಕಿಲೋಮೀಟರುಗಳ ಓಟವನ್ನು ಓಡಿದೆವು. ಇದು ಸುಮಾರು 5,000ಪೌಂಡುಗಳಷ್ಟು ದಾನವನ್ನು ಗಳಿಸಿತು.

ಆದರೆ ಆಂಬ್ಯುಲೆನ್ಸ್ ಕೊಳ್ಳಲು ಇನ್ನೂ ಹೆಚ್ಚು ಹಣಬೇಕು. ಆದುದರಿಂದ ಮಡಿಕೇರಿಯ ಅಂಬುಲೆನ್ಸ್ ಉದ್ದೇಶಕ್ಕಾಗಿ ಬ್ರಿಸ್ಟಲ್ ನಲ್ಲಿ ಕರ್ನಾಟಕ ಇವೆಂಟ್ ಒಂದನ್ನು ಬರುವ ನವೆಂಬರ್ 3 ನೇ ತಾರೀಖಿನಂದು ಏರ್ಪಡಿಸಿದ್ದೇನೆ. ಇದರಿಂದ ಬರುವ ಹಣವನ್ನು ಈ ಆಂಬ್ಯುಲೆನ್ಸನ್ನು ಕೊಳ್ಳಲು ಉಪಯೋಗಿಸುತ್ತೇನೆ. ಈ ಸಮಾರಂಭ ಅದೃಷ್ಟವಶಾತ್ ಆಂಬ್ಯುಲೆಂಸಿಗೆ ಬೇಕಾಗುವ ಬಾಕಿ ಹಣವನ್ನು ದೊರಕಿಸಬಹುದೆಂದು ನಂಬಿದ್ದೇನೆ.

ಇದೇ ನವೆಂಬರ್ 18ನೇ ತಾರೀಖು ಮತ್ತೆ ಇಂಡಿಯಾಕ್ಕೆ ಪ್ರಯಾಣಿಸಲು ಸಿದ್ಧಳಾಗಿದ್ದೇನೆ. ಆಮೇಲೆ ಆಂಬುಲೆಂಸನ್ನು ಕೊಂಡು ಆ ಮಡಿಕೇರಿಯ ಆಸ್ಪತ್ರೆಗೆ ಕೊಡುತ್ತೇನೆ.ಇವೆಲ್ಲವೂ ನನಗೆ ಒಂದು ದಿಗ್ಭ್ರಾಂತವಾದ ಅನುಭವವೆ. ಆದರೆ, ಇದೀಗ ನಾವೆಲ್ಲರೂ ಅನಿರೀಕ್ಷಿತವಾಗಿ ಬಂದ ಆಪತ್ತನ್ನು ಎದುರಿಸಲು ಶಕ್ತರಾಗುತ್ತಿದ್ದೇವೆ.

ಶವಪರೀಕ್ಷೆಯಿಂದ ಡೇವಿಡ್ಡನು ಹೃದಯಾಘಾತದಿಂದ ಮೃತನಾದನೆಂದು ಗೊತ್ತಾಯಿತು. ಆತನಿಗೆ ಕೇವಲ 33ವರ್ಷವಾಗಿದ್ದಿತು. ಆತನಿಗೆ ಹೃದಯದ ಸಂಬಂಧಿ ಯಾವಕಾಯಿಲೆಯ ಲಕ್ಷಣಗಳೂ ಇರಲಿಲ್ಲ. ಇದರಿಂದ ನನಗೆ ಅರಿವಾದದ್ದು ಏನೆಂದರೆ ಯುವಕರಲ್ಲಿ ಹಠಾತ್ತನೆ ಮರಣ ನಾವು ತಿಳಿದಷ್ಟು ಅಸಾಧಾರಣ ಸಂಗತಿಯೇನಲ್ಲ. ಆದುದರಿಂದ ನಮಗೆ ದಾನಿಗಳಿಂದ ಬಂದ ಹಣದಲ್ಲಿ ಸ್ವಲ್ಪ ಹಣವನ್ನು CRY (Cardiac Risk in the Young) ಸಂಸ್ಥೆಗೆ ಕೊಡಲು ತೀರ್ಮಾನಿಸಿರುತ್ತೇನೆ. http://www.c-r-y.org.uk

ಸಂಪಾದಕರ ನುಡಿ : ದಟ್ಸ್ ಕನ್ನಡ ವಾಚಕವೃಂದ http://www.davelord.org.uk/ ಜಾಲತಾಣಕ್ಕೆ ಭೇಟಿಕೊಡಬೇಕೆಂದು ಕೋರಲಾಗಿದೆ. ಲೀನಾ ಲ್ಯಾಂಬಿ ಹಮ್ಮಿಕೊಂಡಿರುವ ಸ್ವಾರ್ಥರಹಿತ ಕಾರ್ಯಕ್ರಮವನ್ನು ಬೆಂಬಲಿಸುತ್ತಾ, ಉದಾತ್ತ ಚಿಂತನೆಗಳಲ್ಲಿ ತಾವೂ ಕೂಡ ಒಂದಲ್ಲ ಒಂದು ರೀತಿ ಭಾಗಿಯಾಗುತ್ತೀರೆಂಬ ವಿಶ್ವಾಸ ವ್ಯಕ್ತಪಡಿಸಲಾಗಿದೆ. ಲೀನಾ ಅವರ ಇಂಗ್ಲಿಷ್ ಲೇಖನವನ್ನು ಕನ್ನಡಕ್ಕೆ ಭಾವಾನುವಾದ ಮಾಡಿದ ಬ್ರಿಸ್ಟಲ್ಲಿನವರೇ ಆದ ಕನ್ನಡಿಗ ಡಾ.ರಾಜಾರಾಮ್ ಕಾವಳೆ ಅವರಿಗೆ ದಟ್ಸ್ ಕನ್ನಡ ಉಪಕೃತ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X