ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾತ್ಮ ಹುತಾತ್ಮನಾದಂದು...

By Staff
|
Google Oneindia Kannada News

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತನ್ನ ಸದಸ್ಯರು ಸತ್ತ ಮನುಷ್ಯನಿಗೆ ಗೌರವ ಸೂಚಿಸಲಿಕ್ಕಾಗಿ ಕಲಾಪವನ್ನು ಕೆಲಕಾಲ ಸ್ಥಗಿತಗೊಳಿಸಿತು. ಬ್ರಿಟಿಷ್‌ ಪ್ರತಿನಿಧಿ ಫಿಲಿಪ್‌ ನೋಯೆಲ್‌ಬೆಕರ್‌ ಗಾಂಧಿಯನ್ನು 'ಕಡುಬಡವನ, ಏಕಾಂಗಿಯ ಮತ್ತು ಸೋತವನ ಸ್ನೇಹಿತ" ಎಂದು ವರ್ಣಿಸಿ 'ಗಾಂಧಿಯ ಮಹತ್ಸಾಧನೆಗಳು ಇನ್ನು ಮುಂದೆಯೂ ಬರಲಿವೆ" ಎಂದು ಪ್ರತಿಪಾದಿಸಿದ.

ಭದ್ರತಾ ಮಂಡಳಿಯ ಅನ್ಯ ಸದಸ್ಯರು ಗಾಂಧಿಯ ಆಧ್ಯಾತ್ಮಿಕ ಗುಣಗಳನ್ನು ಶ್ಲಾಘಿಸಿ ಶಾಂತಿ ಮತ್ತು ಅಹಿಂಸೆಯಡೆಗೆ ಆತನ ನಿಷ್ಠೆಯನ್ನು ಪ್ರಶಂಸಿಸಿದರು. ಸೋವಿಯತ್‌ ಒಕ್ಕೂಟದ ಆಂಡ್ರ್ಯಿಗ್ರಾಮಿಕೊ ಗಾಂಧಿಯನ್ನು ಭಾರತದ ಉನ್ನತ ರಾಜಕೀಯ ನಾಯಕರೊಲ್ಲಬ್ಬರೆಂದು ವರ್ಣಿಸಿ ಆತನ ಹೆಸರು ಸುದೀರ್ಘ ಸಮಯ ತೆಗೆದುಕೊಂಡ ಭಾರತದ ಜನರ ರಾಷ್ಟ್ರೀಯ ವಿಮೋಚನಾ ಹೋರಾಟದ ಜೊತೆಗೆ ಎಂದಿಗೂ ಜೋಡಿಸಲ್ಪಡುತ್ತದೆ ಎಂದರು. ಸೋವಿಯತ್‌ ಉಕ್ರೇನ್‌ನ ಪ್ರತಿನಿಧಿ ಟಾರಾಸೆಂಕೊ ಸಹ ಗಾಂಧಿಯ ರಾಜಕಾರಣವನ್ನು ಒತ್ತುಕೊಟ್ಟು ಹೇಳಿದರು.

ವಿಶ್ವಸಂಸ್ಥೆ ತನ್ನ ಧ್ವಜವನ್ನು ಅರ್ಧಕ್ಕೆ ಕೆಳಗಿಳಿಸಿತು.
ಮಾನವತೆ ತನ್ನ ಧ್ವಜವನ್ನು ಕೆಳಗಿಳಿಸಿತು.

ಗಾಂಧಿಯ ಸಾವಿಗೆ ಜಗತ್ತಿನಾದ್ಯಂತದ ಪ್ರತಿಕ್ರಿಯೆಯೇ ಒಂದು ಮುಖ್ಯ ನೈಜಸಾಕ್ಷಿ; ಅದು ವ್ಯಾಪಕವಾಗಿ ಹರಡಿದ್ದ ಮನೋಭಾವ ಮತ್ತು ಅಗತ್ಯವನ್ನು ಅಭಿವ್ಯಕ್ತಗೊಳಿಸಿತು. ನ್ಯೂಯಾರ್ಕ್‌ನ ಪತ್ರಿಕೆಯ ಆಲ್ಬರ್ಟ್‌ ಡ್ಯೂಶ್ಚ್‌ 'ಗಾಂಧಿಯ ಸಾವಿಗೆ ಪೂಜ್ಯಭಾವನೆಯಿಂದ ಪ್ರತಿಸ್ಪಂದಿಸಿದ ಜಗತ್ತಿಗೆ ಇನ್ನೂ ಸ್ವಲ್ಪ ಭರವಸೆಯಿದೆ"ಎಂದು ಘೋಷಿಸಿ-

'ನವದೆಹಲಿಯ ದುರಂತವನ್ನು ಹಿಂಬಾಲಿಸಿದ ಆಘಾತ ಮತ್ತು ಪರಿತಾಪ ನಾವು ಸಂತತ್ವವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೂ ಅದನ್ನು ಗೌರವಿಸುತ್ತೇವೆ ಎಂಬುದನ್ನು ತೋರಿಸಿಕೊಟ್ಟಿತು" ಎಂದರು.

ಅಮೇರಿಕಾದ ಸೆನೆಟರ್‌ ಆರ್ಥರ್‌ ವ್ಯಾಂಡೆನ್‌ಬರ್ಗ್‌ ಹೇಳಿದ್ದು 'ವಿನಯಶೀಲತೆ ಮತ್ತು ಸರಳ ಸತ್ಯಗಳನ್ನು ಗಾಂಧಿ ಸಾಮ್ರಾಜ್ಯಗಳಿಗಿಂತ ಶಕ್ತಿಶಾಲಿಯನ್ನಾಗಿ ಮಾಡಿದರು". ಕಾದಂಬರಿಕಾರ ಪರ್ಲ್‌ ಬಕ್‌ ಗಾಂಧಿಯ ಹತ್ಯೆಯನ್ನು 'ಮತ್ತೊಂದು ಶಿಲುಬೆಗೇರಿಕೆ" ಎಂದು ವರ್ಣಿಸಿದರು. ನ್ಯಾಯಾಧೀಶ ಫೆಲಿಕ್ಸ್‌ ಫ್ರಾಂಕ್‌ಫರ್ಟರ್‌ ಅದನ್ನು 'ಪ್ರಪಂಚದ ಸತ್ಯ ಪಡೆಗಳ ವಿರುದ್ಧದ ಅತಿ ಕ್ರೂರ ಹೊಡೆತ" ಎಂದರು.

ಗಾಂಧಿಯನ್ನು ಪ್ರಶಂಸಿಸುತ್ತಿದ್ದ ಆಡಳಿತಗಾರ ಮತ್ತು ರಾಜಕಾರಣಿಗಳಿಗೆ ತಮ್ಮ ಸ್ವಂತವೇ ನ್ಯೂನತೆಗಳನ್ನು ಕನಿಷ್ಠ ನೆನಪಿಸುವಷ್ಟಾದರೂ ಆಗಿದ್ದರಾತ.

ಕ್ಯಾಲಿಫೋರ್ನಿಯಾದ ಹದಿಮೂರು ವರ್ಷದ ಹುಡುಗಿ ಒಂದು ಕಾಗದದಲ್ಲಿ ಬರೆದಳು: 'ಗಾಂಧಿಯ ಸಾವನ್ನು ಕೇಳಿ ನನಗೆ ನಿಜವಾಗಿಯೂ ದಾರುಣ ದುಃಖವಾಯಿತು. ನನಗೆ ಆತನಲ್ಲಿ ಅಷ್ಟು ಆಸಕ್ತಿಯಿದೆ ಎಂದು ಎಂದೂ ತಿಳಿದಿರಲಿಲ್ಲ ಆದರೆ ಆ ಮಹಾನ್‌ ವ್ಯಕ್ತಿಯ ಸಾವಿನಿಂದ ನನಗೆ ಎಷ್ಟು ಅಸಂತೋಷವಾಗಿದೆ ಎಂದು ನನಗೇ ತಿಳಿಯಿತು".

ನ್ಯೂಯಾರ್ಕಿನಲ್ಲಿ, ಹನ್ನೆರಡು ವರ್ಷದ ಹುಡುಗಿ ಅಡಿಗೆ ಮನೆಗೆ ಉಪಹಾರ ಸ್ವೀಕರಿಸಲು ಹೋಗಿದ್ದಳು. ಚಾಲನೆಯಲ್ಲಿದ್ದ ರೇಡಿಯಾ ಗಾಂಧಿಗೆ ಗುಂಡಿಟ್ಟ ಸುದ್ದಿ ತಂದಿತು. ಅದೇ ಕ್ಷಣದಲ್ಲಿ, ಆ ಚಿಕ್ಕ ಹುಡುಗಿ, ಮನೆಕೆಲಸದವಳು, ಮತ್ತು ತೋಟದ ಮಾಲಿ ಪ್ರಾರ್ಥನಾ ಸಭೆ ನಡೆಸಿದರು, ಪ್ರಾರ್ಥಿಸಿದರು ಮತ್ತು ಅತ್ತರು. ಅದೇ ರೀತಿ, ಪ್ರಪಂಚದಾದ್ಯಂತ ಲಕ್ಷಾಂತರ ಜನ ಗಾಂಧಿಯ ಸಾವನ್ನು ವೈಯುಕ್ತಿಕ ನಷ್ಟವೆಂಬಂತೆ ಶೋಕಿಸಿದರು. ಅವರಿಗೆ ಯಾಕೆಂದು ಅಷ್ಟೇನೂ ಸರಿಯಾಗಿ ತಿಳಿದಿರಲಿಲ್ಲ; ಆತ ಏನನ್ನು ಪ್ರತಿನಿಧಿಸಿದ್ದ ಎಂದೂ ಸಹ ಚೆನ್ನಾಗಿ ಗೊತ್ತಿರಲಿಲ್ಲ. ಆದರೆ ಆತ 'ಒಳ್ಳೆಯ ಮನುಷ್ಯ"ನಾಗಿದ್ದ ಮತ್ತು ಒಳ್ಳೆಯವರು ವಿರಳ.

ಸರ್‌ ಸ್ಟಾಫರ್ಡ್‌ ಕ್ರಿಪ್ಸ್‌ ಬರೆಯುತ್ತಾರೆ, 'ಲೌಕಿಕ ವಸ್ತುಗಳ ಮೇಲೆ ಶಕ್ತಿಯುತ ಚೈತನ್ಯವನ್ನು ಇಷ್ಟು ಬಲಯುತವಾಗಿ ಮತ್ತು ಸಮಂಜಸವಾಗಿ ಯಾವುದೇ ಸಮಯದಲ್ಲಾಗಲಿ ಅಥವ ಕನಿಷ್ಠ ಇತ್ತೀಚಿನ ಇತಿಹಾಸದಲ್ಲಾಗಲಿ ಪ್ರದರ್ಶಿಸಿದ ಮತ್ತೊಬ್ಬ ವ್ಯಕ್ತಿ ನನಗೆ ತಿಳಿದಿಲ್ಲ". ಇದನ್ನೇ ತಾವು ಶೋಕಿಸುತ್ತಿದ್ದಾಗ ಜನ ಗ್ರಹಿಸಿದ್ದು. ಅವರ ಸುತ್ತಮುತ್ತೆಲ್ಲ ಲೌಕಿಕ ವಸ್ತುಗಳು ಅಲೌಕಿಕ ಚೈತನ್ಯಕ್ಕಿಂತ ಬಲವಾಗಿದ್ದವು. ಆತನ ಮಿಂಚಿನಂತಹ ದಿಢೀರ್‌ ಸಾವು ವಿಶಾಲ ಕತ್ತಲನ್ನು ಅನಾವರಣಗೊಳಿಸಿತು. ಆತನ ನಂತರ ಜೀವಿಸಿದ ಯಾರೂ ಸತ್ಯವಂತ ಜೀವನವನ್ನು ಜೀವಿಸುವುದಕ್ಕಾಗಿ, ಕಕ್ಕುಲತೆ, ಸ್ವವ್ಯಕ್ತಿನಾಶ, ವಿನಯಶೀಲತೆ, ಸೇವೆ ಮತ್ತು ಅಹಿಂಸೆಯನ್ನು ಸುದೀರ್ಘ ಕಾಲ, ಪ್ರಬಲ ಶತ್ರುಗಳ ವಿರುದ್ಧದ ಕಷ್ಟಮಯ ಹೋರಾಟವನ್ನು, ಆತನಷ್ಟು ಕಠಿಣವಾಗಿ ಪ್ರಯತ್ನಿಸಲಿಲ್ಲ ಮತ್ತು ಅಷ್ಟು ಯಶಸ್ಸು ಪಡೆಯಲಿಲ್ಲ. ತನ್ನ ದೇಶದಲ್ಲಿನ ಬ್ರಿಟಿಷ್‌ ಆಡಳಿತದ ವಿರುದ್ಧ ಮತ್ತು ತನ್ನ ದೇಶದ್ದೇ ಜನರ ದುಷ್ಟತೆಯ ವಿರುದ್ಧ ಆತ ತೀವ್ರವಾಗಿ ಮತ್ತು ನಿರಂತರವಾಗಿ ಹೋರಾಡಿದ. ಆದರೆ ಯುದ್ದದ ಮಧ್ಯದಲ್ಲಿ ತನ್ನ ಕೈಗಳನ್ನು ಪವಿತ್ರವಾಗಿಟ್ಟುಕೊಂಡ. ಮತ್ಸರವಿಲ್ಲದೆ, ಢೋಂಗಿತನವಿಲ್ಲದೆ, ಅಥವ ದ್ವೇಷವಿಲ್ಲದೆ ಹೋರಾಡಿದ.

***

ಈ ಮೇಲಿನ ಸಾಲುಗಳು 1950ರಲ್ಲಿ ಪ್ರಕಟವಾದ, ಲೂಯಿ ಫಿಷರ್‌ ಎಂಬ ಪಾಶ್ಚಾತ್ಯ ಲೇಖಕ ಬರೆದ The Life of Mahatma Gandhi ಎಂಬ ಜೀವನಚರಿತ್ರೆ ಪುಸ್ತಕದ ಒಂದೆರಡು ಪುಟಗಳಲ್ಲಿ ಬರುವ ವಾಕ್ಯಗಳು. ಈ ಪುಸ್ತಕವನ್ನು ಆತ ಬರೆದದ್ದು ಇಂಗ್ಲೀಷ್‌ ಬಲ್ಲ ಅಮೇರಿಕನ್‌ ಹಾಗೂ ಪಾಶ್ಚಾತ್ಯ ಓದುಗರನ್ನು ಗಮದಲ್ಲಿಟ್ಟುಕೊಂಡು. ಆದ್ದರಿಂದ ಅಮೇರಿಕನ್ನರಿಗೆ ಅಥವ ಪಾಶ್ಚಾತ್ಯರಿಗೆ ಪ್ರಸ್ತುತ ಮತ್ತು ಪರಿಚಿತವಿರುವ, ಅವರಿಗೆ ಮುಖ್ಯವೆನಿಸುವ ವ್ಯಕ್ತಿ-ವಿಷಯಗಳನ್ನು ತೆಗೆದುಕೊಂಡು ಆ ದೃಷ್ಟಿಕೋನದಲ್ಲಿ ನಿರೂಪಿಸಿರುವುದು.

ಶರಣರ ಗುಣವನ್ನು ಮರಣದಲ್ಲಿ ನೋಡೆಂಬಂತೆ, ಮೋಹನದಾಸ ಗಾಂಧಿ ಸತ್ತಾಗ ಜಗತ್ತು ಪ್ರತಿಕ್ರಿಯಿಸಿದ ರೀತಿ ಅನನ್ಯ. ಆದರೆ ಇಲ್ಲಿ ಆ ಅನನ್ಯತೆಗೆ ಕೇವಲ ಒಳ್ಳೆಯವರು ವಿರಳ ಎಂಬುದಷ್ಟೇ ಕಾರಣವಲ್ಲ ಎನ್ನುವುದು ಸ್ವಲ್ಪ ಆಲೋಚಿಸಿದರೆ ಎಲ್ಲರಿಗೂ ತಿಳಿಯುವ ಸರಳ ಸತ್ಯ. ಐವತ್ತಾರು ವರ್ಷಗಳ ಹಿಂದೆ ಗಾಂಧಿ ಸತ್ತ ದಿನವನ್ನು ಹುತಾತ್ಮರ ದಿನಾಚರಣೆಯನ್ನಾಗಿಸಿ ಕೈತೊಳೆದುಕೊಳ್ಳುವುದಕ್ಕಿಂತ ಸಮಕಾಲೀನ ಅಗತ್ಯಗಳಿಗೆ ತಕ್ಕಂತೆ ಗಾಂಧೀವಾದವನ್ನು ಸಾಣೆ ಹಿಡಿದುಕೊಂಡರೆ ಎಷ್ಟೋ ಸಮಸ್ಯೆಗಳಿಗೆ ನೀತಿಯುಕ್ತ, ಸತ್ಯ ಉತ್ತರ ಸಿಗುತ್ತದೆ.

ನಮ್ಮ ಅನಂತಾನಂತ ಅವತಾರಾಚಾರ್ಯ ಪುರುಷರು(?) ಹೇಳಿದಷ್ಟು ಕಠಿಣವಾಗಲಿ, ಅಮೂರ್ತವಾಗಿಯಾಗಲಿ ಗಾಂಧಿಯ ಚಿಂತನೆಗಳು ಇಲ್ಲ. ಹಾಗೆಯೇ ಗಾಂಧಿ ಹೇಳಿದ ಪ್ರತಿ ಅಕ್ಷರವೂ ಸರಿ, ಅದನ್ನು ಸಮಕಾಲೀನಕ್ಕೆ ತಕ್ಕಂತೆ ಪರಿಷ್ಕರಿಸಿ ಅಳವಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂಬ ಮುಲ್ಲಾ ಮಠಾಧೀಶರ ಸ್ವತ್ತಾಗಿಯೂ ಗಾಂಧಿ ಉಳಿದಿಲ್ಲ. ತನ್ನೆಲ್ಲ ಹುಳುಕಗಳ ಜೊತೆಗೆ ಸಾರ್ವಜನಿಕವಾಗಿ ಜೀವಿಸಿದ, ಲೇಖಕ ಫಿಷರ್‌ ಹೇಳುವಂತೆ ಸ್ವವ್ಯಕ್ತಿನಾಶಕ್ಕೆ (self-effacement) ಶ್ರಮಿಸಿದವನ ವ್ಯಕ್ತಿಪೂಜೆ ಮಾಡುವವರು ಅಪಹಾಸ್ಯಕ್ಕೆ ಹೀಗಾಗುವುದು ಸಹಜ. ಆದ್ದರಿಂದ ಗಾಂಧಿ-ಬುದ್ಧರ ಪುನರವತಾರಕ್ಕಾಗಿ ಕಾಯಬೇಕು ಎಂಬ ನಿರಾಶಾ ಮತ್ತು ಅಸಹಾಯಕ ಸ್ಥಿತಿಯಲ್ಲಿ ಬಿದ್ದು ಹೊಸ ಮಾರ್ಗಗಳನ್ನು ಹುಡುಕುವ, ಹುಟ್ಟು ಹಾಕುವ ಕೆಲಸ ಮಾಡದೆ ಗಾಂಧಿ-ಬುದ್ಧರಿಗೆ ಕಾಯುವುದು ಕರುಣಾಜನಕವೆನಿಸುವ ಸ್ಥಿತಿ. ಇತಿಹಾಸದ ಮಟ್ಟಿಗೆ ಹೇಳುವುದಾದರೆ ಮತ್ತೆ ನಾ ಬರುವೆ ಎಂದು ಇವರ್ಯಾರೂ ಹೇಳಿಲ ್ಲ!!! ಸತ್ತವರಿಗೆ ಕಾಯುತ್ತಾ ಕೂರುವುದು ಮನುಷ್ಯಜಾತಿಯ ಕ್ರಿಯಾಶಕ್ತಿಯನ್ನೇ ಶಂಕಿಸಿದಂತೆ.

ನಮ್ಮ ದಾರಿ ನಾವೇ ಹುಡುಕಿಕೊಳ್ಳಬೇಕು. ಯಾಕೆಂದರೆ ಹುತಾತ್ಮರು ಪ್ರೇತಾತ್ಮರಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X