• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ನನ್ನ ಮದುವೆಯ ನಿಶ್ಚಿತಾರ್ಥ ಇಂಟರ್ನೆಟ್‌ ಮೂಲಕ ನಡೆಯಿತು...’

By * ಮಲ್ಲಿ ಸಣ್ಣಪ್ಪನವರ್‌
|

ಮುಂಜಾನೆ ಪೇಪರ್‌ ಹಾಕುವ ಹುಡುಗನ ಹಾದಿಯನ್ನೇ ಕಾಯುತ್ತಿದ್ದ ದಿನಗಳವು. ಮುಖಪುಟಕ್ಕಾಗಿ, ಸ್ಪೋರ್ಟ್ಸ್‌ ಪೇಜ್‌ಗಾಗಿ, ಸಿನಿಮಾ ಪುಟಕ್ಕಾಗಿ ಮನೆಯವರೆಲ್ಲಾ ಜಗ್ಗಾಟ-ಕೂಗಾಟ ಮಾಡುತ್ತಿದ್ದ ದಿನಗಳು. ಆ ದಿನಗಳನ್ನು ನಾನು ತುಂಬಾ ಮಿಸ್‌ ಮಾಡಿಕೊಳ್ಳುತ್ತೇನೆ. ಇಂಟರ್‌ನೆಟ್‌ ಇಲ್ಲದ್ದಿದ್ದರೆ ದೇಶಬಿಟ್ಟು ಬಂದಂಥ ನನ್ನಂತವರ ಸ್ಥಿತಿ ತುಂಬಾ ಕಷ್ಟವಾಗುತ್ತಿತ್ತೇನೋ!

ಬೆಳಗ್ಗೆ ಎದ್ದ ಕೂಡಲೇ ಓಡುವ ಕೆಲವರನ್ನು ನೋಡಿದ್ದೇನೆ. ಬಾತ್‌ರೂಮ್‌ ಕಡೆಗಲ್ಲಾ ಅವರು ಓಡುವುದು- ಇ-ಮೇಲ್‌ ಚೆಕ್‌ ಮಾಡಲು ಕಂಪ್ಯೂಟರ್‌ ಕಡೆಗೆ. ತುಂಬಾ ಜನ ಹೀಗೆ ಈ ಅಂತರ್‌ಜಾಲವನ್ನು ಅತಿಯಾಗಿ ಹಚ್ಚಿಕೊಂಡಿದ್ದಾರೆ. ಇದನ್ನು ‘ಇಂಟರ್‌ನೆಟ್‌ ಅಡಿಕ್ಷನ್‌’ ಎಂದು ಕರೆಯಬಹುದು. ನನ್ನ ಮಿತ್ರನೊಬ್ಬ ತನ್ನ ಒಂದು ತಿಂಗಳ ಮಗು ರಾತ್ರಿ ಎದ್ದು ಅಳುತ್ತಿದ್ದರೆ ಮಗುವನ್ನು ಮಲಗಿಸುವ ಉಪಾಯಗಳಿಗೆ ಇಂಟರ್‌ನೆಟ್‌ನ ಬಾಗಿಲು ಬಡಿಯುತ್ತಾನೆ. ಅದೇ ನಮ್ಮ ಹಳ್ಳಿಯಾಗಿದ್ದರೆ ಸೂಲಗಿತ್ತಿಯಾದ ಸೋಮಜ್ಜಿಯ ಅಥವಾ ಘಾಟಿವೈದ್ಯೆ ಗಂಗಜ್ಜಿಯ ಮನೆಯ ಬಾಗಿಲು ಬಡಿಯುತ್ತಿದ್ದರು. ಮುಂದೆ ಬರುವ ದಿನಗಳಲ್ಲಿ ಈ ಸೋಮಜ್ಜಿ-ಗಂಗಜ್ಜಿಯರ ನುರಿತ ಸಲಹೆಗಳನ್ನು ಕೇಳುವವರೇ ಇಲ್ಲವಾಗಬಹುದೇನೋ. ಹತ್ತುವರ್ಷಗಳ ಹಿಂದೆ ಹುಡುಗಿಯರಿಗೆ ಲವ್‌ಲೆಟರ್‌ ಕೊಡಲು ತಿಣುಕಾಡುತ್ತಿದ್ದ ದಿನಗಳ ಈಗೆಲ್ಲಿ ಬರಬೇಕು? ಅಂದಿನ ಶಾಲಾದಿನಗಳಂತೆ ಲೀಜರ್‌ ಬಿಡುವುದನ್ನೇ ಕಾಯ್ದು ಹುಡುಗಿಯರ ಪಸ್‌ಂನಲ್ಲಿ, ಕಂಪಾಸ್ಸು ಬಾಕ್ಸ್‌ಗಳಲ್ಲಿ ಲವ್‌ಲೆಟರ್‌ ಇಡಲು ಕಾಯುವ ಹುಡುಗರು ಈಗ ವಿರಳ. ಇಂದು ಇ-ಮೇಲ್‌, ಇ-ಗ್ರೀಟಿಂಗ್ಸ್‌, ಇ-ಗಿಫ್ಟ್‌, ಇ-ಟಿಕೆಟ್‌ , ಇ-ಪ್ರೆಂಡ್ಸ್‌, ಇ-ಡೇಟಿಂಗ್‌, ಇ-ರೋಮ್ಯಾನ್ಸ್‌... ಎಲ್ಲಾ ಕಾರ್ಯಗಳು ಇ-ಮಯವಾಗಿವೆ. ಅಂದಹಾಗೆ, ನಾನೀಗ ಹೇಳ ಹೊರಟಿರುವುದು ಇದೇ ‘ಇ’ ಕಾರದ, ಇ-ಕಾರ್ಯದ ಬಗೆಗೆ.

ಲೋಕವೆಲ್ಲಾ ಇ-ಮಯವಾಗಿರುವಾಗ, ಇದೇ ಲೋಕದಲ್ಲಿರುವ ನಾನು ಕೂಡಾ ಇದಕ್ಕೆ ಹೊರತಾಗಿಲ್ಲ . ನಾನು ನನಗೆ ಬೇಕಾದಷ್ಟು ಇ-ಕಾರ್ಯಗಳನ್ನು (ಇ-ಮೇಲ್‌, ಇ-ಗ್ರೀಟಿಂಗ್ಸ್‌, ಇ-ಗಿಪ್ಟ್‌, ಇ-ಟಿಕೆಟ್‌ ಇತ್ಯಾದಿ..... ನೀವು ಜಾಸ್ತಿ ಉಹಿಸಿಕೊಳ್ಳಬೇಡಿ!!!) ನಿಯಮಿತವಾಗಿ ಮಾಡುತ್ತಾ ಇರುತ್ತೇನೆ . ಇತ್ತೀಚಿಗೆ ಈ ಪಟ್ಟಿಗೆ ಇನ್ನೊಂದು ಹೊಸ ಇ-ಕಾರ್ಯವೂ ಸೇರಿಕೊಂಡಿದ್ದು ಹೀಗೆ...

ಮಾರ್ಚ್‌ನಲ್ಲಿ ನಮ್ಮ ಮನೆಯವರು ಮತ್ತು ಅವಳ ಮನೆಯವರು ಮಾತುಕತೆ ಮುಗಿಸಿ ಮದುವೆಗೆ ‘ಗ್ರೀನ್‌ ಸಿಗ್ನಲ್‌’ ಕೊಟ್ಟಾಯ್ತು . ಆದರೆ ಪುರೋಹಿತರು ಗಳಿಗೆಯನ್ನು ಕೂಡಿಸಿ ನೋಡಿದಾಗ ಮದುವೆ ದಿವಸ ಅಗಸ್ಟ್‌ ಕೊನೆಯವರಗೆ ಹೋಯಿತು. ಅದಕ್ಕೆ ಅವರು ಸದ್ಯಕ್ಕೆ ನಿಶ್ಚಿತಾರ್ಥ (‘ಎಂಗೇಜ್‌ಮೆಂಟ್‌’) ಮಾಡುವ ಬಗ್ಗೆ ಪ್ರಸ್ತಾಪ ಮಾಡಿದರು. ಆದರೆ ನಾವಿಬ್ಬರು ಅಲ್ಲಿ ಇಲ್ಲದೆ ಅವರಷ್ಟಕ್ಕೆ ಅವರೇ ಸೇರಿಕೊಂಡು (ನಾನು ಮತ್ತು ಅವಳು ಇಬ್ಬರೂ ಇಲ್ಲಿ , ಅಮೆರಿಕಾದಲ್ಲಿ ಕೆಲಸ ಮಾಡುತ್ತಿದ್ದೇವೆ) ಎಂಗೇಜ್‌ಮೇಂಟ್‌ ಮಾಡುವುದಕ್ಕೆ ಬೇಸರಪಟ್ಟುಕೊಳ್ಳುತ್ತಿದ್ದರು. ಆಫೀಸ್‌ನಲ್ಲಿ ಇಬ್ಬರಿಗೂ ಎಂಗೇಜ್‌ಮೇಂಟ್‌ಗೊಮ್ಮೆ-ಮದುವೆಗೊಮ್ಮೆ ಎರಡು ಸಾರಿ ರಜೆ ಸಿಗುವುದು ಕಷ್ಟಕರವಾಗಿತ್ತು.

ಆಗ ನನಗೆ ತಟ್ಟನೆ ಹೊಳೆದದ್ದು ‘ಇ-ಎಂಗೇಜ್‌ಮೆಂಟ್‌’!

ಬೆಂಗಳೂರಿನಲ್ಲಿರುವ ನನ್ನ ಸಹೋದರಿಗೆ ಮತ್ತು ನನ್ನ ಸ್ನೇಹಿತರಿಗೆ ‘ಇ-ಎಂಗೇಜ್‌ಮೆಂಟ್‌’ ಬಗೆಗೆ ಹೇಳಿದಾಗ ಅವರು ತುಂಬಾ ಉತ್ಸಾಹ ತೋರಿಸಿದರು. ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ನಾವು ಅಚ್ಚುಕಟ್ಟಾಗಿ ಮಾಡುತ್ತೇವೆ, ನೀನು ಅದರ ಚಿಂತೆ ಬಿಡು ಎಂದರು. ಎಷ್ಟೇ ಆದರೂ ಸಿಲಿಕಾನ್‌ಸಿಟಿಯಲ್ಲಿ ಇರುವವರು ನೋಡಿ! ಅವರಿಗೆ ಜಾಸ್ತಿ ಹೇಳಬೇಕಾಗಿಲ್ಲವಲ್ಲ . ಕೊನೆಯವರೆಗೂ ಈ ವಿಚಾರವನ್ನು ಗುಪ್ತವಾಗಿ ಇಡಲು ನಿರ್ಧರಿಸಿದೆವು. ಏಕೆಂದರೆ ಇದು ಎಷ್ಟರಮಟ್ಟಿಗೆ ಯಶಸ್ವಿಯಾಗುವುದೆಂದು ನಮಗೆ ಲೆಕ್ಕಹಾಕುವುದು ಕಷ್ಟವಾಗಿತ್ತು.

ನಿಗದಿಪಡಿಸಿದ ನಿಶ್ಚಿತಾರ್ಥದ ದಿನ- ಮೇ 2, 2004ರ ಮಧ್ಯಾಹ್ನ 12:30 ಗಂಟೆಗೆ ಅದು ಭಾರತೀಯ ಕಾಲಮಾನದ ಪ್ರಕಾರ, ಆದರೆ ನ್ಯೂಯಾರ್ಕ್‌ ವೇಳೆಯ ಪ್ರಕಾರ ನಮಗೆ ಮೇ 2, 2004ರ ಬೆಳಗಿನ ಜಾವ 3:00 ಗಂಟೆ, ರಾತ್ರಿಯೆಲ್ಲಾ ಜಾಗರಣೆ ಮಾಡುವುದು ನಮಗೆ ಕಷ್ಟದ ಕೆಲಸವಾಗಲಿಲ್ಲ . ಏಕೆಂದರೆ ಸುಮಾರು 10 ಗೆಳೆಯರು ನಮಗಿಂತ ಜಾಸ್ತಿ ಉತ್ಸಾಹದೊಂದಿಗೆ ಈ ಹೊಸ ‘’ಇ-ಕಾರ್ಯ’ ನೋಡುವುದಕ್ಕಾಗಿ ಕಾಯುತ್ತಿದ್ದರು. ಹರಟೆಯಲ್ಲಿ ಮಗ್ನರಾಗಿದ್ದ ನಮಗೆ ಸುಮಾರು 3:00 ಗಂಟೆಗೆ ಇವಳ ಸಹೋದರ ಭಾರತದಿಂದ ಪೋನ್‌ ಕರೆ ಮಾಡಿ, ‘ಬೇಗ ರೆಡಿಯಾಗಿ ಬನ್ನಿ, ಇಲ್ಲಿ ಎಲ್ಲಾ ನಿಮಗೊಸ್ಕರ ಕಾಯುತ್ತಾ ಇದ್ದಾರೆ’ ಎಂದಾಗ ನನಗೆ ಒಂದು ಕ್ಷಣ ಬೆಂಗಳೂರಿನಲ್ಲೇ ಇದ್ದ ಅನುಭವವಾಯಿತು. ಮೊದಲೇ ಹೇಳಿದ ಪ್ರಕಾರ ನನ್ನ ಸಹೋದರಿ ಮತ್ತು ನನ್ನ ಸ್ನೇಹಿತರು ಎಂಗೇಜ್‌ಮೇಂಟ್‌ ನಡೆಯುತ್ತಿದ್ದ ಹಾಲ್‌ನಲ್ಲಿ ಕಂಪ್ಯೂಟರ್‌ ತಂದು ಇಂಟರ್‌ನೆಟ್‌ಗೆ ಕನೆಕ್ಟ್‌ ಮಾಡಿಕೊಂಡು ನಮಗೊಸ್ಕರ ನೆಟ್‌ನಲ್ಲಿ ಕಾಯುತ್ತಿದ್ದರು.

ತಕ್ಷಣ ನಾವು ಕೂಡಾ ನಮ್ಮ ಕಂಪ್ಯೂಟರ್‌ನ್ನು ಇಂಟರ್‌-ನೆಟ್‌ಗೆ ಕನೆಕ್ಟ್‌ ಮಾಡಿದೆವು, ‘ಯಾಹೊ’, ‘ಎಂ.ಎಸ್‌.ಎನ್‌’ ಹರಟೆಕಿಟಕಿಗಳ ಮೂಲಕ ಬೆಂಗಳೊರಿಗೆ ಸಂಪರ್ಕ ಕಲ್ಪಿಸಿಕೊಂಡೆವು. ಅದಾದ ಮೇಲೆ ‘ನಿಮ್ಮ ಕ್ಯಾಮರಾ ಆನ್‌ ಮಾಡಿಕೊಳ್ಳಿ’ ಎಂಬ ಬರಹ ಸಂದೇಶ ಅವರಿಂದ ಬಂದಿತು. ನಾವು ಕ್ಯಾಮರಾ ಆನ್‌ ಮಾಡಿದ ತಕ್ಷಣ ಅಷ್ಟೊತ್ತು ನಮಗಾಗಿ ಹಾಲ್‌ನಲ್ಲಿ ಕಾಯ್ದು ಕುಳಿತಿದ್ದ ನಮ್ಮ ಸುಮಾರು 200 ಜನ ಸಂಬಂಧಿಕರು ಹಾಗೂ ಸ್ನೇಹಿತರು ನಮ್ಮ ಮುಖಗಳನ್ನು ಕಂಪ್ಯೂಟರ್‌ನಲ್ಲಿ ನೋಡುತ್ತಿದ್ದ ಹಾಗೆ ಕೂಗು ಮತ್ತು ಚಪ್ಪಾಳೆಗಳ ಮೂಲಕ ನಮ್ಮನ್ನು ಸ್ವಾಗತಿಸಿದರು. ಆ ಕ್ಷಣದ ಚಪ್ಪಾಳೆ-ಗಲಾಟೆ ಇಂದು ಕೂಡಾ ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತಿವೆ. ಬೆಂಗಳೂರಿನಿಂದ ಪುರೋಹಿತರ ಮಂತ್ರಗಳು ಜೋರಾಗಿ ಕೇಳಲಾರಂಭಿಸಿದವು,

ಅದುವರೆಗೂ ಅವಳ ಕಡೆ ಸಂಬಂಧಿಕರನ್ನು ನಾನು, ನನ್ನ ಕಡೆ ಸಂಬಂಧಿಕರನ್ನು ಅವಳು ನೋಡಿರಲಿಲ್ಲ . ಹಾಗಾಗಿ ಶುರುವಾಯಿತು ನೋಡಿ ‘ಇ-ಇಂಟ್ರೊಡಕ್ಷನ್‌’ ವಿಭಾಗ. ನಾನೆಂದೆ, ‘ಇವಳು ನಮ್ಮತ್ತೆ ತಂಗಿಯ ಭಾವನ ಅಕ್ಕನ ಗಂಡನ ಸೊಸೆ’. ಅವಳೆಂದಳು, ‘ಇವನು ನಮ್ಮಜ್ಜನ ತಾಯಿಯ ಗಂಡನ ಅಣ್ಣನ ಮಗನ ಬಾಮೈದ’. ಹೀಗೆ ಸ್ವಲ್ಪ ಹೊತ್ತು ಸಂಬಂಧಿಕರ ಸಂಬಂಧಗಳ ಸಮೀಕರಣಗಳನ್ನು ಬಿಡಿಸಿ ತಿಳಿದುಕೊಳ್ಳಲು ಪ್ರಯತ್ನಿಸಿ ಸುಸ್ತಾಗಿ ಸುಮ್ಮನಾದೆವು. ಇಲ್ಲಿರುವ ನಮ್ಮ ಸ್ನೇಹಿತರೆಲ್ಲಾ ಅಲ್ಲಿಂದ ಬರುತ್ತಿದ್ದ ಅಚ್ಚುಕಟ್ಟಾದ ನೇರ ಪ್ರಸಾರವನ್ನು ನೋಡಿ ಆಶ್ಚರ್ಯಪಟ್ಟರು, ನಮ್ಮೆಲ್ಲರಿಗೂ ಇದೆಲ್ಲಾ ಒಂದು ರೀತಿಯ ಅಪರೂಪದ ಹೊಸ ಅನುಭವದ ಕ್ಷಣಗಳಾಗಿದ್ದವು ಎಂದರೆ ತಪ್ಪಾಗಲಾರದು.

ನಮ್ಮ ಹೆತ್ತವರು ಫಲತಾಂಬೂಲಗಳನ್ನು ವಿನಿಮಯ ಮಾಡಿಕೊಂಡರು. ನನಗೆ ಉಡುಗೊರೆಯಾಗಿ ಬಂದ ಬಟ್ಟೆಯನ್ನು, ಅವಳಿಗೆ ಬಂದ ಸೀರೆ, ಬಳೆ, ಆಭರಣಗಳನ್ನು ಕ್ಯಾಮರಾದಲ್ಲಿ ಡಬ್ಬಲ್‌ ಫೋಕಸ್‌ ಮಾಡಿ ನಮ್ಮ ಸಮಾಧಾನಕ್ಕಾಗಿ ತೋರಿಸುವುದನ್ನು ಅವರು ಮರೆಯಲಿಲ್ಲ. ಒಬ್ಬರಾದ ಮೇಲೆ ಒಬ್ಬರಂತೆ ಸಾಲಾಗಿ ಕ್ಯಾಮರಾದ ಮುಂದೆ ಬಂದು ಫೋಸ್‌ ಕೊಟ್ಟರು. ಸಮತೋಲನವಾಗಿ ಇಲ್ಲಿ ನಮ್ಮ ‘ಇ-ಇಂಟ್ರೊಡಕ್ಷನ್‌’ ಕಾರ್ಯಕ್ರಮ ಸಾಗಿತ್ತು . ಆಮೇಲೆ ಬಂದ ವರದಿಗಳ ಪ್ರಕಾರ ಕೆಲವೊಂದಿಷ್ಟು ಸಂಬಂಧಿಕರು ಕಂಪ್ಯೂಟರ್‌ಗೆ ಅಕ್ಷತೆ ಹಾಕಿ, ಕುಂಕುಮ ಹಚ್ಚಿ ಆರತಿ ಬೆಳಗಿ ಸಂತೋಷ ಪಟ್ಟರಂತೆ. ನಾವು ಕೂಡಾ ಇಲ್ಲಿಂದ ನಿಯಮಿತವಾಗಿ ನಮಸ್ಕಾರಗಳನ್ನು ಮಾಡಿದೆವೆನ್ನಿ . ‘ನಿನ್ನ ಸೀರೆ ಕಲರ್‌ ಚೆನ್ನಾಗಿದೆ’, ‘ಹೇರ್‌ ಸ್ಟೈಲ್‌ ಚೆನ್ನಾಗಿದೆ’, ‘ಬಳೆಗಳು ಚೆನ್ನಾಗಿವೆ’..... ಹೀಗೆ ಹೆಂಗಸರ ಮಾಮೂಲಿ ಮಾತುಕತೆ ಇ-ಮಯವಾಗಿತ್ತು.

ಅಲ್ಲಿಯವರೆಗೂ ವೀಕ್ಷಕರಾಗಿದ್ದ ನಾವು ಪುರೋಹಿತರ ಆದೇಶದಂತೆ ಒಬ್ಬರಿಗೊಬ್ಬರು ಕುಂಕುಮ ಹಚ್ಚಿ, ಸಿಹಿಯನ್ನು ಹಂಚಿಕೊಂಡೆವು. ನಂತರ ಉಂಗುರ ವಿನಿಮಯ ಮಾಡಿಕೊಂಡೆವು. ಎಲ್ಲರಿಗೂ ಕ್ಯಾಮರಾ ಕಿಂಡಿಯಿಂದ ಇ-ಪುರೋಹಿತರ ಆದೇಶದಂತೆ ನಮಸ್ಕಾರ ಮಾಡಿದೆವು. ಕಿರಿಯರಿಗೆ ಕೈ ಬೀಸಿದೆವು. ಪ್ರತಿಹಂತದಲ್ಲೂ ಚಪ್ಪಾಳೆಯಿಂದ ನಮ್ಮನ್ನು ಆ ಕಡೆಯಿಂದ ಎಲ್ಲರೂ ಹುರಿದುಂಬಿಸಿದರು. ಅಂದು ಎಲ್ಲರಿಂದ ದೂರವಿದ್ದಂತೆ ನಮಗೆ ಅನಿಸಲೇ ಇಲ್ಲ . ಅಲ್ಲಿಯವರ ಪ್ರಕಾರ ಒಂದು ವೇಳೆ ನಾವು ಖುದ್ದಾಗಿ ಅಲ್ಲಿಗೆ ಹೋಗಿದ್ದರು ಕೂಡಾ ಇಷ್ಟೊಂದು ಕುತೂಹಲ ಭರಿತ ರೊಮಾಂಚನಕಾರಿ ನಿಶ್ಚಿತಾರ್ಥ ಆಗುತ್ತಿರಲ್ಲಿಲ್ಲವಂತೆ.

ಅಂದು ನಮ್ಮೊಂದಿಗೆ ಇದ್ದ ಇಲ್ಲಿನ ಸ್ನೇಹಿತರ ಹಾಗೂ ಅಂದು ನಮ್ಮೆಲ್ಲರಿಗೆ ಹಿರಿಯರಾಗಿ ಮಾರ್ಗದರ್ಶನ ಮಾಡಿದ ಸುಶ್ಮಾ ಆಂಟಿಯ ಸಹಾಯವನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ . ನಾನು ‘ಇ-ಎಂಗೇಜ್‌ಮೇಂಟ್‌’ನ ಒಂದು ಚಿಕ್ಕ ಪಾತ್ರಧಾರಿಯಾಗಿದ್ದೆ ಮಾತ್ರ. ಆದರೆ ಅದರ ನಿಜವಾದ ಯಶಸ್ಸಿನ ಪಾಲು ನನ್ನ ಸಹೋದರಿ, ನಮ್ಮ ಕಾರ್ಯಕ್ಕೆ ಸಹಾಯ ಮಾಡಿದ ಸ್ನೇಹಿತರಿಗೆ ಸಲ್ಲುತ್ತದೆ. ಅಂತರ್‌ಜಾಲದಲ್ಲಿ ಪುಕ್ಕಟೆಯಾಗಿ ಸಿಗುವ ‘ಯಾಹೊ’ ಮತ್ತು ‘ಎಂ.ಎಸ್‌.ಎನ್‌’ ಹರಟೆ ಕಿಡಕಿಗಳ ಪಾತ್ರವನ್ನು ಕೂಡಾ ನಾವು ಮರೆಯುವಂತಿಲ್ಲ.

ನೀವು ಕೂಡಾ ಮನೆಯವರಿಂದ ದೂರ ಇರುವಿರಾ ? ನಿಮ್ಮ ಮಗನ ಹುಟ್ಟುಹಬ್ಬವಿದೆಯಾ ? ನಿಮ್ಮ ಮಡದಿಯ ಸೀಮಂತವಿದೆಯಾ ? ನಿಮ್ಮ ಮನೆಯಲ್ಲಿ ಸಂಭ್ರಮದ ಸಮಯವೇ ? ನಿಮ್ಮ ಮನೆಯವರೆಲ್ಲಾ ನಿಮ್ಮೊಂದಿಗೆ ಈ ಸಂತೋಷದ ಕ್ಷಣಗಳಲ್ಲಿ ಜೊತೆಗಿಲ್ಲ ಎಂಬ ಕೊರಗು ನಿಮಗಿದೆಯಾ ? ಹಾಗಾದರೆ ನಿಮ್ಮ ಮುಂದೆ ಇರುವ ಕೆಲವೇ ದಾರಿಗಳಲ್ಲಿ ‘ಇ-ಕಾರ್ಯ’ ಕೂಡಾ ಒಂದು. ನಿಮ್ಮ ಮನೆಯ ಇ-ಮಯವಾದ ಸಂದರ್ಭಗಳನ್ನು ಮತ್ತು ನಿಮ್ಮ ‘ಇ-ಆಶೀರ್ವಾದ’, ‘ಇ-ಅಭಿಪ್ರಾಯ’ಗಳನ್ನು ‘ಇ-ಮೇಲ್‌’ ಮೂಲಕ ನಮಗೆ ತಿಳಿಸಿ. (sannams@hotmail.com)

ಈ ಲೇಖನವನ್ನು ಓದಿರುವಿರಾ?

ಅದುವೆಕನ್ನಡಬಿಂದುಕಾಮಿನಲ್ಲಿ ಅರಳಿದ ಒಂದು ಪ್ರೇಮ !

English summary
Eengagement : First Live real time event ever attempted on the internet. Malli Sannappanavar shares experience of his E-Engagement!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X