• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾಷಾಭಿಮಾನ ಕುರಿತು ಕೆಲವು ಸರಳ ಅಂಶಗಳು

By Staff
|

ಒಂದು ಭಾಷೆಯನ್ನು ಬಳಸುವವರು, (‘ಸದಭಿಮಾನಿ, ಅಂಧಾಭಿಮಾನಿ, ಇತ್ಯಾದಿ ಎಲ್ಲ ಅಭಿಮಾನಿಗಳನ್ನೂ ಸೇರಿಸಿ ಬರೇ ಬಳಸುವವರು ಅಥವಾ ಅಭಿಮಾನಿಗಳು ಎಂದುಕೊಳ್ಳೋಣ’,) ಮೂಲ ಸ್ತರದಲ್ಲಿ ಅದರ ಅಗತ್ಯ ತಮಗೆ ಇದೆಯೆಂದೇ ಅದರ ಅಭಿಮಾನಿಗಳಾಗಿರುತ್ತರೆ. ಅತೀ ಸರಳೀಕೃತಗೊಂಡಂತೆ ಕಂಡರೂ, ವಸ್ತುನಿಷ್ಠವಾಗಿ ನೋಡಿದರೆ, ಇದರ ಅರ್ಥ ಗೋಚರವಾಗುವುದು ಕಷ್ಟವೇನಲ್ಲ.

ಉದಾಹರಣೆಗೆ, ಉತ್ತರ ಅಮೇರಿಕಾದ ನ್ಯೂ ಮೆಕ್ಸಿಕೋ ರಾಜ್ಯದ ಯಾವುದೋ ಮೂಲೆಯಲ್ಲಿ ಕುಳಿತು ಬೇರಾವ ಕನ್ನಡಿಗರ ಸಂಪರ್ಕವನ್ನೂ ಇಟ್ಟುಕೊಳ್ಳದೆ ಬೆಂಗಳೂರಿನ ತಿಮ್ಮನೊಬ್ಬ ಜೀವನ ನಡೆಸಿದರೆ, ತಿಮ್ಮನ ಮಕ್ಕಳಿಗಂತೂ ಕನ್ನಡದ ಬಗ್ಗೆ ಲವಲೇಶದಷ್ಟೂ ಭಾವ ಬೆಳೆಯುವುದು ಸಾಧ್ಯವಿಲ್ಲ. ಈ ಮಟ್ಟದಲ್ಲಿ ಕನ್ನಡದಿಂದ ದೂರ ಉಳಿಯದಿದ್ದರೂ, ಭಾಷೆಯನ್ನು ಬಳಸುವಲ್ಲಿ ಹೊರನಾಡ ಕನ್ನಡಿಗರ ಯಶಸ್ಸು ಒಂದೇ ತಲೆಮಾರಿಗೆ ಮುಗಿದು ಹೋಗುತ್ತಿದೆ. ಇದಕ್ಕಾಗಿ, ಯಾರೂ ಪಾಪಪ್ರಜ್ಞೆ ಬೆಳೆಸಿಕೊಳ್ಳಬೇಕಾಗಿಲ್ಲವೆಂಬುದು ಒಳಗಿನದೊಂದು ಕುಹಕದ ನುಡಿ. ಅಷ್ಟಮಿ, ಚೌತಿ, ದೀಪಾವಳಿಗಳನ್ನು ಸಡಗರದಿಂದಲೇ ಆಚರಿಸುವ ಹೊರನಾಡ ಕನ್ನಡಿಗರು (ಭಾರತೀಯರೆಲ್ಲರಿಗೂ ಈ ಮಾತು ಅನ್ವಯಿಸುತ್ತದೆಯೆನ್ನಿ) ಈ ಸಂಭ್ರಮಗಳಲ್ಲಿ ಉಳಿಸಿಕೊಳ್ಳುವ ಆಚಾರ ವಿಚಾರಗಳು ಸಂಪ್ರದಾಯಕ್ಕೆ ಸಂಬಂಧಿಸಿದ್ದಾಗಿ, ಅದಕ್ಕೂ ಹೆಚ್ಚು ಮೌಲ್ಯವುಳ್ಳ ಮೂಲ ಭಾಷೆಯ ಉಳಿಸುವಿಕೆಗೆ ಗಮನವೀಯುವುದಿಲ್ಲ. ಎಳ್ಳು ಬೀರಿ ಬಾಗಿನ ಹಂಚಿಕೊಳ್ಳುವ ಸಂಪ್ರದಾಯ ಉಳಿದುಕೊಂಡಷ್ಟು ಸುಲಭವಾಗಿ ಕನ್ನಡ ದೇವರನಾಮಗಳನ್ನು ಕನ್ನಡದಲ್ಲೇ ಬರೆದು ಓದಿ ಕೊಳ್ಳುವ ಪ್ರಯತ್ನ ನಡೆದಿಲ್ಲ.

ಭಾಷೆಯನ್ನು ಅಮ್ಮನೇ ಕಲಿ ಸಬೇಕು

Kids love Kannada, you need to inspire themಇದಕ್ಕೆ ಬೆಂಬಲವಾದ ವಾದಸರಣಿಯಾಂದು ಇದೆಯಾದರೂ ಸದ್ಯಕ್ಕೆ ನಮ್ಮ ಉದ್ದೇಶ, ಸಂಪ್ರದಾಯವನ್ನು ಉಳಿಸಿಕೊಂಡಷ್ಟೇ ಸುಲಭವಾಗಿ ಭಾಷೆಯಾಂದನ್ನೇಕೆ ನಾವು ಉಳಿಸಿಕೊಳ್ಳುತ್ತಿಲ್ಲ ಎಂಬ ಅಂಶದತ್ತ ಗಮನ ಹರಿಸುವುದು. ಜಾನಕಿಯವರು ನಮ್ಮ ಗಮನ ಸೆಳೆದಂತೆ, ಚಿಣ್ಣರಿಗೆ ಪದ್ಯ ಹೇಳಿಕೊಡುವ ಸಂಪ್ರದಾಯವನ್ನು ಉಳಿಸಿಕೊಳ್ಳುವ ತಾಯಿ ಇಂಗ್ಲೀಷ್‌ ಪದ್ಯಗಳಿಗೇಕೆ ಮೊರೆಹೋದಳೆಂಬ ಆತಂಕ ನಮ್ಮದಾಗಬೇಕು. ತಾಯಿ ಮಾತನಾಡುವ ಭಾಷೆಯಾಂದನ್ನು ಮಕ್ಕಳು ಶತಾಯ ಗತಾಯ ಮಾತನಾಡಿಯೇ ತೀರುತ್ತಾರೆಬುದನ್ನು ಸಾಧಿಸುವುದು ಬಹಳ ಕಷ್ಟವೇನೂ ಅಲ್ಲ. ಹೊರ ನಾಡಿನಲ್ಲಿಯೂ ಸಹ ಎಷ್ಟೋ ಮಕ್ಕಳು ಕನ್ನಡ ಬಳಸಲಿಕ್ಕೆ ಕಾರಣ ಅವರ ತಾಯಿ. ಅಪ್ಪಂದಿರು ಬೇಸರ ಪಟ್ಟು ಕೊಳ್ಳುವ ಅಗತ್ಯವಿಲ್ಲ, ಅಮ್ಮನ ಜೊತೆಗೆ ಇವರ ಪ್ರಯತ್ನವೂ ಫಲ ನೀಡುತ್ತದೆಯಾದರೂ, ಮಾತೃಭಾಷೆಯೆನ್ನಿರಿಸಿಕೊಳ್ಳುವಲ್ಲಿ ತಾಯಿಯ ಪಾತ್ರ ಮಹತ್ವದ್ದು.

ತಾಯಿಯಾಬ್ಬಳು ಮಗುವಿನೊಡನೆ ಯಾವ ಭಾಷೆ ಮಾತನಾಡುತ್ತಾಳೋ ಅದನ್ನು ಮಕ್ಕಳು ಮಾತನಾಡಿಯೇ ತೀರುತ್ತಾರೆ. ಇಲ್ಲಿ ‘ತಾಯಿ’ ಒಂದು ಪ್ರತಿಮೆ ಮಾತ್ರ; ತಂದೆ ಸಹಾ ಮಕ್ಕಳೊಡನೆ ಮಾತನಾಡಲು ಕನ್ನಡವನ್ನೇ ಬಳಸಿದರೆ ಆ ಮಕ್ಕಳು ಕನ್ನಡ ಕಲಿತೇ ಕಲಿಯುತ್ತಾರೆ. ಮೊದಲೇ ಹೇಳಿದಂತೆ, ತಾವೇ ಇಂಗ್ಲೀಷ್‌ ಕಲಿಯುವ ಹುಮ್ಮಸ್ಸಿನಲ್ಲೋ ಅಥವ ಮಕ್ಕಳಿಗೆ ಕಷ್ಟವೇಕೆ ಎಂಬ ವಿಚಾರದಿಂದಲೋ ಅಥವಾ ನನ್ನಂತೆ ಶುದ್ಧ ಸೋಮಾರಿತನದಿಂದಲೋ ಮಕ್ಕಳೊಂದಿಗೆ ಇಂಗ್ಲೀಷಿನಲ್ಲಿ ಮಾತನಾಡುತ್ತಾ ನಾವೆ ಅವರನ್ನು ಕನ್ನಡದಿಂದ ದೂರವಿಡುತ್ತೇವೆ. ಇದನ್ನು ಪುಷ್ಟೀಕರಿಸುವಂತೆ, ಕನ್ನಡದಲ್ಲಿ ಮಾತನಾಡೆಂದು ಹೇಳುತ್ತಿದ್ದ ನಮ್ಮ ಯಾವ ಮಾತು ಪ್ರಯತ್ನಗಳಿಗೂ ದಕ್ಕದಿದ್ದ ನನ್ನ ಮಗರಾಯ (ಆಗ 6 ವರ್ಷ), ನನ್ನ ಅಮ್ಮನೊಂದಿಗೆ ತುಳುವಿನಲ್ಲಿ ಮಾತನಾಡುತ್ತಿದ್ದದ್ದು ಒಂದು ದಿನ ಅಚಾನಕ್ಕಾಗಿ ನನಗೆ ಗೊತ್ತಾಯಿತು. ಆಫೀಸಿನಿಂದ ಆಗಷ್ಟೇ ಮನೆಯಾಳಗೆ ಕಾಲಿಡುತ್ತಿದ್ದ ನನ್ನ ಕಿವಿಗೆ, ‘ದೊಡ್ಡ ಉಂಪು ಬೋಡು (ಅಜ್ಜಿ ಅನ್ನ ಬೇಕು)’ ಎನ್ನುವ ನನ್ನ ಮಗನ ತುಳು ಮಾತುಗಳನ್ನು ಕೇಳಿ ನಂಬುವುದೇ ದುಸ್ಸಾಧ್ಯವೆನಿಸಿತ್ತು. ಏಕೆಂದರೆ, ನಾನು, ನನ್ನವಳು, ಸ್ನೇಹಿತರು ಅವರ ಮಕ್ಕಳು ಎಲ್ಲರೂ ಸಹ ಯಾವಾಗಲೂ ಸೇರಿದಾಗ, ಕನ್ನಡದಲ್ಲಿಯೇ ಮಾತನಾಡುತ್ತಿದ್ದೆವು. ಹಾಗಾಗಿ ನಮ್ಮ ಮಕ್ಕಳ ಕಿವಿಗೆ ಕನ್ನಡವೇ ತುಳುವಿಗಿಂತ ಹೆಚ್ಚು ಬೀಳುತ್ತಿದ್ದದ್ದು. ನಾವೂ ಸಹ ಕನ್ನಡವನ್ನು ಬೆಳೆಸುವತ್ತಲೇ ಹೆಚ್ಚು ಗಮನವಿಟ್ಟಿದ್ದರಿಂದ ತುಳುವಿಗಿಂತ ಹೆಚ್ಚು ಕನ್ನಡವನ್ನೇ ಮಕ್ಕಳೊಂದಿಗೆ ಬಳಸುತ್ತಿದ್ದೆವು. ನನ್ನ ಅಮ್ಮ ಬಂದಾಗಿನಿಂದ ನಾನು, ನನ್ನವಳಿಬ್ಬರೂ ಅಮ್ಮನೊಂದಿಗೆ ತುಳುವಿನಲ್ಲೆ ಮಾತನಾಡುತ್ತಿದ್ದೆವು. ಅಮ್ಮನಿಗೆ ಇಂಗ್ಲೀಷ್‌ ಅರ್ಥವಾದರೂ, ಅವಳ ಉಚ್ಚಾರ ಮತ್ತು ಮೊಮ್ಮಕ್ಕಳ ಉಚ್ಚಾರಗಳಿಗೆ ತಾಳಮೇಳವಿಲ್ಲವಾಗಿ ಹೋಗಿ, ಅವಳೊಂದಿಗೆ ಸಂಭಾಷಿಸುವ ಏಕ ಮಾತ್ರ ಭಾಷೆಯಾಗಿ ತುಳುವಿನ ಅಗತ್ಯವನ್ನು ಕಂಡುಕೊಂಡ ನನ್ನ ಭಂಡ ಮಗರಾಯ, ನಮ್ಮ ಬೆನ್ನ ಹಿಂದೆ ಅಜ್ಜಿಯಾಡನೆ ತುಳು ಮಾತನಾಡುತ್ತಿದ್ದದ್ದು ನೋಡಿ ಹೊಟ್ಟೆ ಕಿಚ್ಚಾದರೂ, ಅದನ್ನು ಅಗತ್ಯವೆನಿಸುವಂತೆ ಮಾಡಿದ ಪರಿಸ್ಥಿತಿ ಸೃಷ್ಟಿಯಾಗಿದ್ದೇ ಎಲ್ಲದ್ದಕ್ಕೂ ಕಾರಣವೆಂಬುದು ಸಹ ಗಮನಕ್ಕೆ ಬಂತು. ಹಸಿವಿನ ನಿವಾರಣೆಗೆ ಇದ್ದ ಒಂದೇ ಉಪಾಯವೆಂದರೆ ಮೊಮ್ಮಗನಿಗೆ ಅಜ್ಜಿಯಾಡನೆ ತುಳುವಿನಲ್ಲಿ ಮಾತನಾಡುವುದೇ ಆಗಿತ್ತು.

ಇದನ್ನೆಲ್ಲ ಈಗೇಕೆ ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೆನೆಂದರೆ, ಭಾಷೆಯನ್ನು ಬಳಸುವ ಅಗತ್ಯವನ್ನು ನಾವು ಸೃಷ್ಟಿಸಿದರಷ್ಟೆ ಅದರ ಬಳಕೆಯಾದೀತು ಹಾಗೂ ಆ ಭಾಷೆ ಉಳಿದೀತು.

‘ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು’ ಎಂಬುದರ ಮಹತ್ವವನ್ನು ಪದೇ ಪದೇ ನನಗೆ ಎಚ್ಚರಿಸಿಕೊಟ್ಟವರಲ್ಲಿ ಅತೀ ಪ್ರಮುಖರೆಂದರೆ, ‘ಹೋವರ್ಡ್‌ ಹರ್ಷ್ಮನ್‌’ ಎಂಬೊಬ್ಬ ಹಿರಿವಯಸ್ಸಿನ ಯಹೂದಿ ಅಮೇರಿಕನ್‌ ಸಹೋದ್ಯೋಗಿ. ನ್ಯೂಯರ್ಕಿನಲ್ಲಿ ನನ್ನೊಂದಿಗೆ ಕೆಲಸ ಮಾಡುತ್ತಿದ್ದ ದಿನಗಳಲ್ಲಿ, ನನ್ನನ್ನು ಮತ್ತು ಇತರ ಭಾರತೀಯರನ್ನು ಮೆಚ್ಚಿಕೊಂಡ ಈ ಹಿರಿಯರು ಪದೇ ಪದೇ ಹೇಳುತ್ತಿದ್ದುದು-, ‘ನಿನ್ನ ಮಕ್ಕಳಿಗೆ ನಿನ್ನ ಮಾತೃಭಾಷೆ ಕಲಿಸುವುದನ್ನು ಮರೆಯಬೇಡ’ ಎಂದು. ನ್ಯೂಯರ್ಕಿನಲ್ಲಿಯೇ ಹುಟ್ಟಿ ಬೆಳೆದ ಈ ಹಿರಿಯರಲ್ಲಿ ಆಳವಾಗಿದ್ದ ಈ ಭಾವವನ್ನು ಗೌರವಿಸುವುದರ ವಿನಾ ನನಗೆ ಬೇರೆ ಮಾರ್ಗವೇ ಇರಲಿಲ್ಲ. ಯಹೂದಿ ಧರ್ಮದ ಬಗ್ಗೆ ನನ್ನಲ್ಲಿ ಪ್ರಚಾರ ಮಾಡದೆ, ಇಸ್ಲಾಂ ಧರ್ಮದ ಬಗ್ಗೆ ವಿನಾಕಾರಣ ನನ್ನಲ್ಲಿ ದುರಭಿಪ್ರಾಯ ಬೆಳೆಸುವ ಪ್ರಯತ್ನವನ್ನೂ ಮಾಡದ ಈ ಹಿರಿಯ ಮಿತ್ರರು ನನಗೆ ತಪ್ಪದೆ ಕಕ್ಕುಲತೆಯಿಂದ ಜ್ಞಾಪಿಸುತ್ತಿದ್ದದ್ದು, ‘ಆಕಾಶ ನಿಗೆ ಕನ್ನಡ ಗೊತ್ತಿದೆಯಷ್ಟೆ...’ ಎಂಬ ಕಳಕಳಿಯನ್ನು.

ಎಂ. ಎಸ್‌. ವೆಂಕಟೇಶ್‌ ಬರೆದ ಲೇಖನ ನೋಡಿದ ಮೇಲಂತೂ ಅರ್ಧ ಬರೆದು ನಿಲ್ಲಿಸಿದ ಈ ಲೇಖನವನ್ನು ಮತ್ತೆ ಮುಂದುವರಿಸಬೇಕೆನ್ನಿಸಿತು. ಈಗಿನ ಪರಿಸ್ಥಿತಿಗೆ ತಕ್ಕಂತೆ ಚಿಣ್ಣರ ಪದ್ಯಗಳನ್ನು ಬರೆಯಬೇಕೆಂಬ ಜಾನಕಿಯವರ ಮಾತುಗಳನ್ನು ಬಹಳಷ್ಟು ಒಪ್ಪಿಕೊಂಡು ಬಿಟ್ಟಿದ್ದೆ. ಆದರೂ, ಕುರಿಯನ್ನು ಕಂಡೇ ಇರದ ಮಗುವಿಗೆ Mary had a little lamb.. ಅಥವಾ twinkle twinkle little star ಅಂತ ಮನೆಯಾಳಗೆ ಕುಳಿತೇ ಹಾಡಿದ ತಾಯಿಯರನ್ನೂ ನೋಡಿದ್ದೇನೆ. ಅಷ್ಟೇಕೆ, ಅಮೇರಿಕದಲ್ಲಿ ಪ್ರಚಲಿತವಿರುವ ‘ಡಾ. ಸ್ಯೂಸ್‌’ ರ ಪುಸ್ತಕಗಳ ವಸ್ತುಗಳಂತೂ ಕಲ್ಪಕತೆಗಷ್ಟೇ ಸಿಕ್ಕುವಂತವು. ಒಟ್ಟಿನಲ್ಲಿ ಜಾನಕಿಯವರದ್ದು ತರ್ಕ ಶುದ್ಧವಾಗಿರುವ ಅಭಿಪ್ರಾಯವಾದರೂ, ನಿಜಜೀವನದಲ್ಲಿ ಕನ್ನಡ ಮಾತನಾಡದಿರಲು ತಾಯಿಯಾಬ್ಬಳ ಕಾರಣಗಳು ಅವಳಿಗಷ್ಟೇ ಗೊತ್ತಿರಬೇಕು. ಅದಕ್ಕೇ, ಅವಳ ಮನ ಪರಿವರ್ತಿಸುವಂತಹ ಕೆಲಸ ನಾವೆಲ್ಲ ಮಾಡಬೇಕು.

ಇದರಲ್ಲೊಂದು:

ಕನ್ನಡವನ್ನು ಹತ್ತನೇ ತರಗತಿಯವರೆಗೆ ಕಡ್ಡಾಯವನ್ನಾಗಿಸುವುದು. ಕನ್ನಡವನ್ನು ಮೊದಲ ಭಾಷೆಯಾಗಿ ತೆಗೆದುಕೊಂಡವರಿಗೆ ಬೇರೆಯೇ ರಾಂಕ್‌ ಶ್ರೇಣಿಯನ್ನಿರಿಸಿ, ಸಂಸ್ಕೃತ ಮತ್ತು ಇತರ ಭಾಷೆಗಳನ್ನು ರ್ಯಾಂಕ್‌ ನಿರ್ಧರಿಸುವುದರಿಂದ ತೆಗೆದು ಹಾಕಬೇಕು. ಉದಾಹರಣೆಗೆ- ಹತ್ತನೇ ಕ್ಲಾಸಿಗೆ ರ್ಯಾಂಕ್‌ ಮತ್ತು ಮೆರಿಟ್‌ ಸ್ಕಾಲರ್ಷಿಪ್‌ ಗಳಿಗೆ (ರಾಜ್ಯ ಸರ್ಕಾರ ತನ್ನ ಅಧಿಕಾರವ್ಯಾಪ್ತಿಯಲ್ಲಿರುವ ವಿದ್ಯಾರ್ಥಿ ವೇತನಗಳಿಗೆ ಅನ್ವಯಿಸಿದರೂ ಸಾಕು) ಎಲ್ಲ ವಿದ್ಯಾರ್ಥಿಗಳೂ ಕಡ್ಡಾಯವಾಗಿ ಓದುವ ಸಮಾನ ವಿಷಯಗಳಾದ ವಿಜ್ಞಾನ, ಗಣಿತ, ಸಮಾಜಶಾಸ್ತ್ರ ಮುಂತಾದ ವಿಷಯಗಳನ್ನಷ್ಟೇ ಪರಿಗಣಿಸಬೇಕು. ಜೊತೆಗೆ. ಕನ್ನಡವನ್ನು ಕಲಿಯುವವರಿಗಾಗಿ ಇನ್ನೊಂದೇ ರ್ಯಾಂಕ್‌ ಶ್ರೇಣಿಯನ್ನಿರಿಸಿ, ಅನ್ಯ ಭಾಷೆಗಳ ಕಲಿಕೆಯನ್ನು ಕೇವಲ ಅರ್ಹತೆಗಾಗಿಯಷ್ಟೆ ಬಳಸಬೇಕು. ಅಂದರೆ ಎಲ್ಲರೂ ಮೊದಲನೆಯ ಎರಡನೆಯ ಇತ್ಯಾದಿ ಅಗತ್ಯವಿರುವ ಭಾಷೆಗಳನ್ನೆಲ್ಲಾ ಪಾಸು ಮಾಡಬೇಕೆಂಬ ನಿಯಮವಿಟ್ಟು, ಕನ್ನಡಕ್ಕೆ ಮಾತ್ರ ವಿಶೇಷವಾಗಿ ವಿದ್ಯಾರ್ಥಿ ವೇತನ ಮೊದಲಾದ ಪ್ರೋತ್ಸಾಹ ಕೊಡಬೇಕು. ಉಳಿದ ಭಾಷೆಗಳ ಕಲಿಕೆಯನ್ನು ಪ್ರೋತ್ಸಾಹಿಸುವ ಸಂಸ್ಥೆಗಳು ಸಾಕಷ್ಟಿವೆ. ಆದುದರಿಂದ ಉದಾರ ಕನ್ನಡಿಗರು ಪರಭಾಷೆಗಳಿಗಾಗಿ ನೊಂದುಕೊಳ್ಳುವ ಅಗತ್ಯವಿಲ್ಲ.

ಹೆಚ್ಚು ಜನ ಕನ್ನಡದಲ್ಲಿ ಅಂಕ ಗಳಿಸುವ ಕಷ್ಟದಿಂದಾಗಿ ಕನ್ನಡವನ್ನು ಪ್ರಥಮ ಭಾಷೆಯಾಗಿ ತೆಗೆದುಕೊಳ್ಳುವುದಿಲ್ಲ ಎಂಬುದು ಸತ್ಯವೇ ಹೊರತು ಕನ್ನಡ ಬಗೆಗಿನ ತಿರಸ್ಕಾರ ಅಲ್ಲ. ಹಾಗಾಗಿ ಕಡ್ಡಾಯವಾಗಿ ಕಲಿತ ಭಾಷೆ ಅವರಿಗೆ ಮುಂದೆ ಉಪಯೋಗಕ್ಕೆ ಬರುತ್ತದೆ. ಸದ್ಯಕ್ಕೆ ಕಡಿಮೆ ಅಂಕ ಬರಬಹುದೆಂಬ ಹೆದರಿಕೆಯಿಂದ ಕನ್ನಡದಿಂದ ಓಡಿ ಹೋಗುವವರನ್ನು ತಡೆಯಬಹುದು. ಕನ್ನಡಕ್ಕಾಗಿ ಹೊಸದಾದ ಸ್ಕಾಲರ್ಷಿಪ್‌ ಇಟ್ಟು ನಂತರ ನೋಡಿ ಬೆಂಗಳೂರಿನ ಪ್ರಜೆಗಳ ತಮಾಷೆ. ಉಳಿದ ಭಾಷೆಗಳನ್ನು ರ್ಯಾಂಕಿಗೆ ಪರಿಗಣಿಸದೆ ಬಿಟ್ಟರೆ, ಕನ್ನಡ ಭಾಷೆ ಕಲಿಯುವವರ ಸಂಖ್ಯೆ ತಂತಾನೇ ಹೆಚ್ಚಾಗಿಯೇ ಆಗುತ್ತದೆ. ಅಲ್ಲದೆ ಸಣ್ಣಂದಿನಲ್ಲಿ ಕಲಿತಷ್ಟು ಸುಲಭವಾಗಿ ಮುಂದೆ ಭಾಷೆಯನ್ನು ಕಲಿಯಲಾಗುವುದಿಲ್ಲ. ಕನ್ನಡದಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ ಬೇರೆಯೇ ವಿದ್ಯಾರ್ಥಿ ವೇತನ ಇತ್ತರೆ, ಅದಕ್ಕಾಗಿ ಕನ್ನಡ ಕಲಿಯುವವರು ಇದ್ದೇ ಇರುತ್ತಾರೆ.

ಇದೇ ರೀತಿಯಲ್ಲಿ ಮುಂದುವರಿದು ಎಲ್ಲಾ ಉದ್ಯಮಗಳೂ ಸರ್ಕಾರಕ್ಕೆ ಸಲ್ಲಿಸುವ ಕಾಗದ ಪತ್ರಗಳು ಕನ್ನಡದಲ್ಲಿ ಸಹಾ ಇರಬೇಕೆಂದು ಮಾಡಿದರೆ ಭಾಷಾಂತರ ಮಾಡುವವರಿಗೂ ಒಂದು ಅವಕಾಶ ಸಿಕ್ಕುತ್ತದೆ. ಅದಕ್ಕಿಂತ ಮುಖ್ಯವಾಗಿ ಕನ್ನಡ ಗೊತ್ತಿರುವವರಷ್ಟೇ ಕಾರಕೂನರೋ, ಮಂತ್ರಿಗಳೋ ಆಗಿದ್ದರೆ, ಅವರಿಗೂ ವ್ಯವಹಾರಗಳು ಅರ್ಥವಾಗುತ್ತದೆ. ಈ ಎಲ್ಲ ಸೂಚನೆಗಳು ಬೆಂಗಳೂರು, ಮೈಸೂರಿನಲ್ಲಿರುವ ಜನರಿಗೆ ಉಪಯುಕ್ತವಾಗದೇ ಹೋದರೂ, ಅಥವಾ ಇಂಗ್ಲೀಷ್‌ ಬಲ್ಲ ಸಹಾಯಕರಿರುವ ಮಂತ್ರಿಗಳಿಗೆ ಇದರಿಂದ ಸಹಾಯವಾಗದಿದ್ದರೂ, ಕನ್ನಡವಷ್ಟೇ ತಿಳಿದಿರುವ ಬಹು ಸಂಖ್ಯಾತ ಕನ್ನಡಿಗರು ಕರ್ನಾಟಕದಲ್ಲೇ ಅನಾಥರಾಗದೆ ಉಳಿಯಲು ಖಂಡಿತಾ ಸಹಾಯವಾಗುತ್ತದೆ.

‘ಬಿಸಿಯಾಗದೆ ಬೆಣ್ಣೆ ಕರಗದು..’ ಎಂಬಂತೆ, ಅನಗತ್ಯವಾದುದನ್ನು ಕಲಿಯಲು ಯಾರೂ ತಯಾರಿರುವುದಿಲ್ಲ. ನಾವು ಅಭ್ಯಸಿಸಿದ ಭಾಷೆಯಾಂದು, ನಮಗೆ ಅಗತ್ಯವಿದೆಯೆಂದೇ ನಾವು ಅದರ ಅಭಿಮಾನಿಗಳಾಗುತ್ತೇವೆ. ಇಲ್ಲದಿದ್ದರೆ ನಿಧಾನವಾಗಿ, ಕರ್ನಾಟಕದ ಜನರ ಬದುಕಿನ ತಂತುಗಳು ಇಂಗ್ಲಿಷಿನಲ್ಲಿ ಯಾವುದೋ .. ರೈ ಅಥವಾ .. ನಾರಾಯಣನ್‌ ಕೈಲಿ ಅಚ್ಚಾಗಿ ಕೋಟ್ಯಾಂತರ ರೂಪಾಯಿ ಸಂಪಾದಿಸಿದರೆ ಅಚ್ಚರಿಯೇನಿಲ್ಲ. ಫ್ರೆಂಚ್‌ ಮತ್ತು ಸ್ಪೈನ್‌ನಂತಹ ಸಣ್ಣ ರಾಷ್ಟ್ರಗಳ ಭಾಷೆಗಳು ಉಳಿದದ್ದು ಅದನ್ನು ಮಾತನಾಡಿ ಬಳಸುವ ಜನ ಎಲ್ಲೆಡೆ ಇದ್ದುದರಿಂದ. ಕೋಟಿಗಟ್ಟಲೆ ಕನ್ನಡಿಗರ ಬಳಗವಿರಬೇಕಾದರೆ ಕನ್ನಡ ತಿಳಿದವರಿಗೆ ಯಥೇಚ್ಛ ಅವಕಾಶಗಳಿರುವಂತಾಗಬೇಕು. ಕನ್ನಡಿಗ ಖರ್ಚು ಮಾಡುವ ಹಣ ಕನ್ನಡವನ್ನು ಬಯಸಿದರೆ, ಕನ್ನಡ ಉಳಿದೇ ಉಳಿಯುತ್ತದೆ.

ಹಾಗೆಯೇ ಸರ್ಕಾರೀ ಜಾಹೀರಾತುಗಳೆಲ್ಲವನ್ನೂ ಬರೇ ಕನ್ನಡದ ಪತ್ರಿಕೆ ಮತ್ತು ಪೋರ್ಟಲ್ಗಳಿಗೆ ಸೀಮಿತ ಗೊಳಿಸಿದರೆ ಹೇಗೆ? ವಿದ್ಯಾವಂತರಾದವರು ಯಶಸ್ಸಿಗಾಗಿ ಯಾವ ಭಾಷೆಯನ್ನಾದರೂ ಕಲಿಯುವರೆನ್ನುವುದನ್ನು ಸಾಧಿಸಬಹುದು ನೋಡಿ. ನಮ್ಮ ವ್ಯವಹಾರ ಬೇಕಾಗಿರುವ ಜನ ನಮ್ಮ ಭಾಷೆ ಕಲಿತೇ ಕಲಿಯುತ್ತಾರೆ. ಕನ್ನಡದ ಅಭಿಮಾನ ಬೇರೆ ಭಾಷೆಗಳ ದ್ವೇಷವಲ್ಲವೆಂದು ತೋರಿಸಿ ಕೊಡಲು ಇಂತಹ ಕಾರ್ಯಕ್ರಮಗಳ ಅಗತ್ಯವಿದೆ.

ಗಾಂಧಿ ತಾತನ ಸ್ವದೇಶಿವಾದ

ನಮ್ಮ ಪ್ರೀತಿಯ ಗಾಂಧಿ ತಾತ ಹೇಳಿದ್ದ ಅನೇಕ ಮಂತ್ರಗಳಲ್ಲಿ ಮುಖ್ಯವಾದದ್ದು ‘ಸ್ವದೇಶಿ’. ನನಗೆ ಗೊತ್ತಿದ್ದಂತೆ, ಗಾಂಧೀಜಿ ಇಂದು ಬದುಕಿದ್ದರೆ, ಭಾರತದಲ್ಲಿ ತಯಾರಾದ ಪೊಲಿಯೆಸ್ಟರ್‌ ಬಟ್ಟೆಗಳನ್ನೂ ಉಡುತ್ತಿದ್ದರು ಎನಿಸುತ್ತದೆ. ಹಳ್ಳಿಯವರ ಬೆವರಿಗೆ ಬೆಲೆ ಬರಲೆಂದು ಹೋರಾಡಿದ ಈ ಮಹಾತ್ಮ, ಪಟ್ಟಣದ ಬಡ ಕಾರ್ಮಿಕನ ಬಗ್ಗೆಯೂ ಅಷ್ಟೇ ಆಸ್ಥೆಯಿಂದ ಹೋರಾಡುತ್ತಿದ್ದರು ಎಂಬುದರಲ್ಲಿ ನನಗೇನೂ ಸಂದೇಹವಿಲ್ಲ. ಅದೇ ಕಾರಣಕ್ಕೆ, ಕರ್ನಾಟಕದಲ್ಲಿ ಕನ್ನಡವಿರಬೇಂಬುದನ್ನು ಸಹಾ ಆತ ಹೇಳುತ್ತಿದ್ದರು ಎನ್ನುವುದರಲ್ಲಿಯೂ ಸಂದೇಹವಿಲ್ಲ. ಈ ಮಹಾತ್ಮನ ಆಚರಣೆಗಳಷ್ಟೇ ವಿಚಾರಗಳೆಂದುಕೊಂಡು, ವಿಚಾರಗಳನ್ನು ಮೂಲೆಗೊತ್ತಿ ಕೇವಲ ಖಾದಿ ಧರಿಸಿದ್ದಷ್ಟಕ್ಕೆ, ದೇಶ ಭಕ್ತರಾದೆವೆನ್ನುವರ ಮೌಡ್ಯಕ್ಕೊಂದು ಧಿಕ್ಕಾರ.

ತನ್ನವರ ಉಳಿವಿಗಾಗಿ ಅಗತ್ಯವಾಗಿದ್ದ ರೈಲ್ವೆಯನ್ನು ಸ್ವಾಗತಿಸಿದ ಗಾಂಧಿ, ಅಷ್ಟೇ ನಿಷ್ಠುರತೆಯಿಂದ, ಹೊಟ್ಟೆಗೆ ಹಿಟ್ಟಿಲ್ಲದ ತನ್ನವರ ಬಾಳಿನಲ್ಲಿ ಸಾಹಿತ್ಯ, ಸಂಗೀತ ಕಲೆಗಳಿಗಿಂತ ಹೆಚ್ಚಾಗಿ ಬಡತನ ಅಳಿಸುವ ಅಗತ್ಯವನ್ನು ಗುರುತಿಸಿದವರು. ತನ್ನವರ ಬಡತನ ನಿವಾರಿಸುವ ಮಾನವೀಯ ಉದ್ಯಮವೊಂದಿದ್ದರೆ ಅದನ್ನು ಖಂಡಿತಾ ಬೆಂಬಲಿಸಲು ತಯಾರಿದ್ದರೆಂದರೆ ವಿಜ್ಞಾನ ಮತ್ತು ಪ್ರಗತಿಯಲ್ಲಿ ನಂಬಿಕೆಯಿದ್ದ ನೆಹರೂ ನಮ್ಮ ದೇಶದ ಪ್ರಧಾನಿಯಾಗಲಿ ಎಂದು ಆಶಿಸಿದ್ದರು ಗಾಂಧೀಜಿ.

ಈಗ ಗಾಂಧಿಯೂ ಇಲ್ಲ . ಅವರ ಸ್ವದೇಶಿ ವಾದಕ್ಕೆ ಕಿಮ್ಮತ್ತೂ ಇಲ್ಲ . ಇಂಥ ಪರಿಸ್ಥಿತಿಯಲ್ಲಿ ಕನ್ನಡ ನುಡಿ ತನ್ನ ಉಳಿವಿಗಾಗಿ ಹೋರಾಟ ನಡೆಸಬೇಕಾಗಿದೆ. ಭಾಷೆಯಾಂದು ಎದುರಿಸಬೇಕಾದ ಅಗ್ನಿದಿವ್ಯವಿದು. ಫಲಿತಾಂಶ ಕಾಲಗರ್ಭದಲ್ಲಿದೆ.

ಕನ್ನಡ ಭಾಷೆ ಮುಂದಿನ ಪೀಳಿಗೆಗೂ ಉಳಿಯುವುದಾ ?

ಮುಖಪುಟ / ಎನ್‌ಆರ್‌ಐ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more