• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾವೆಲ್ಲರೂ ಕೇಳಿಕೊಳ್ಳಬೇಕಾದ ಒಂದಷ್ಟು ಪ್ರಶ್ನೆಗಳಿವೆ..

By Staff
|

*ಎಚ್‌.ಆರ್‌.ಜಯಶ್ರೀ, ಬೆಂಗಳೂರು

ಒಬ್ಬರ ಮೇಲೊಬ್ಬರು ಕೆಸರು ಎರಚಾಡದೆ, ಕೆಳಗಿರುವ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ ಉತ್ತರಿಸೋಣವೇ?

 1. ಮೊದಲನೆಯದಾಗಿ, ‘ಹೊರದೇಶದಲ್ಲಿ ಕನ್ನಡದ ಸ್ಥಿತಿ-ಗತಿ’ ಎಂಬಂತಹ ವಿಚಾರ ಸಂಕಿರಣ ಹೊರನಾಡಿನಲ್ಲೇ ನಡೆದರೆ ಅರ್ಥಗರ್ಭಿತವಲ್ಲವೇ? ಕರ್ನಾಟಕದಲ್ಲಿ ನಡೆಯಬೇಕಾದದ್ದು, ‘ಇಲ್ಲಿ ಕನ್ನಡದ ಸ್ಥಿತಿ-ಗತಿ’ ಎಂಬುದರ ವಿಚಾರ ಅಲ್ಲವೇ?
 2. ಸರಿ ನಡೆಯಿತು ಎಂದೇ ಇಟ್ಟುಕೊಳ್ಳೋಣ. ಇಂಥಾ ಒಂದು ವಿಚಾರ ಸಂಕಿರಣ ನಡೆದಾಗ ಬರೀ ಹೊಗಳಿಕೆ ಇರುತ್ತದೆಂದು ಬಯಸುವುದು ಎಷ್ಟು ಸರಿ ? ಇಲ್ಲಿನ ಬಗ್ಗೆ ಹಳಿದಿದ್ದರೆ, ಕರ್ನಾಟಕದ ಬಗ್ಗೆ, ಇಲ್ಲಿನ ರಸ್ತೆ, ವ್ಯವಸ್ಥೆ, ಇತ್ಯಾದಿ ಬಗ್ಗೆ ಪದೇ ಪದೇ ಕೇಳಿಬರುವಂತಹ ತೆಗಳಿಕೆಯ ಮಾತುಗಳು ಕೇಳಿದ್ದರೆ, ಅಲ್ಲಿನ ನಮ್ಮ ಮಿತ್ರರಿಗೇ ಇಷ್ಟೇ ಕೋಪ ಬರುತ್ತಿತ್ತೆ ? ಹಾಗಾದರೆ ಅಂತಹ ಪ್ರೇಮ ಎಲ್ಲೋ ಕೊಂಚ ಎಡವಿದಂತೆ ಅನ್ನಿಸುವುದಿಲ್ಲವೇ ?
 3. ಹೋಗಲಿ, ಹೇಳುವ ಮಾತನ್ನು ಸರಿಯಾದ ರೀತಿಯಲ್ಲಿ , ಎಲ್ಲರಿಗೂ ಅರ್ಥ ಆಗುವಂತೆ, ಅಪಾರ್ಥಕ್ಕೆ ಎಡೆಯಿಲ್ಲದಂತೆ ಹೇಳುವುದು, ಅಲ್ಲಿ ಮಾತಾಡುವ ಹಿರಿಯರ ಜವಾಬ್ದಾರಿಯಲ್ಲವೇ? ಈಗಾಗಲೇ ಕನ್ನಡಿಗರಾದ ನಮ್ಮಲ್ಲಿ ಎಷ್ಟೊಂದು ‘ಒಗ್ಗಟ್ಟು’ ತುಂಬಿ ತುಳುಕಾಡುತ್ತಿದೆ...!!??!! ಇನ್ನು ಇಂತಹ ಸನ್ನಿವೇಶಗಳಿಗೆ ಆಸ್ಪದವಿದ್ದರೆ ?(!!)
 4. ಎಷ್ಟೋ ಸಲ ನಮ್ಮ ಅನಿವಾಸಿ ಗೆಳೆಯರಲ್ಲಿ ಕೆಲವರು- ಮಾತಾಡುವಾಗ, ಬರೆಯುವಾಗ, ಅಲ್ಲಿನ ಸುಖಗಳನ್ನು, ವ್ಯವಸ್ಥೆಯನ್ನು ಬಣ್ಣಿಸುತ್ತಾ ಭಾರತದಲ್ಲಿರುವ ಕೊಂಕುಗಳನ್ನು ಎತ್ತಿ ಆಡುವುದಿಲ್ಲವೇ ? ಆಗ ಇಲ್ಲಿನ ಮನಸ್ಸುಗಳಿಗೂ ಹೀಗೇ ನೋವಾಗಿರಬಹುದಲ್ಲವೇ ? ಸ್ವಾಭಿಮಾನಕ್ಕೆ ಪೆಟ್ಟಾಗಿರಬಹುದಲ್ಲವೆ ? ನಾವು ಅದನ್ನು ಸಹಜ ಎಂದು ಒಪ್ಪಿಕೊಂಡುಬಿಡಲಿಲ್ಲವೇ?

ಎಲ್ಲರೂ ಹೀಗೆಯೇ ವರ್ತಿಸುತ್ತಾರೆಂದು ಖಂಡಿತಾ ಇದರ ಅರ್ಥವಲ್ಲ . ಆದರೂ ವಿದೇಶದಿಂದ ಹಿಂದಿರುಗುವ, ಅಥವಾ ರಜೆಯಲ್ಲಿ ಭಾರತಕ್ಕೆ ಭೇಟಿನೀಡುವ ಮುಕ್ಕಾಲುವಾಸಿ ಜನರ ವರ್ತನೆ ಇದು. ನೀವೊಮ್ಮೆ ಪ್ರಾಮಾಣಿಕವಾಗಿ ಯೋಚಿಸಿದರೆ ನಿಮಗೆ ಇದರ ಸತ್ಯ ಖಂಡಿತಾ ಗೋಚರಿಸುವುದು.... ವಿದೇಶದಲ್ಲಿ ಸ್ವರ್ಗವೇ ಇದೆ ಅನ್ನುವ ಕಲ್ಪನೆ ಇಲ್ಲಿನವರ ಮನಸ್ಸಿಗೆ ಬರುವಂತೆ ಮಾಡಿದರೆ, ಇಲ್ಲಿರುವ ಅನೇಕರ ಮನಸ್ಸಿನಲ್ಲಿ ಕೀಳರಿಮೆ ಬರುವುದಿಲ್ಲವೇ? ‘ಮಾತ್ಸರ್ಯ’ ಎಂದು ಅದಕ್ಕೆ ಹೆಸರಿಡುವ ಬದಲು, ನೀವು ಇದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಇದೆಯಲ್ಲವೇ? ಸಲ್ಲದ ಅಸಹನೆ ಇದರಿಂದಲೂ ಹುಟ್ಟಿರಬಹುದು..... ಇದು ಸರಿಯೋ ತಪ್ಪೋ ಎಂಬ ಪ್ರಶ್ನೆ ಇಲ್ಲಿ ಬೇಡ, ಇದು ಮನುಷ್ಯ ಸಹಜ ಎಂದು ಅರ್ಥಮಾಡಿಕೊಳ್ಳಲು ಖಂಡಿತಾ ಸಾಧ್ಯ ಎಂದು ನನ್ನ ನಂಬಿಕೆ...ಇದಕ್ಕೆ ಪರಿಹಾರ ನಿಮ್ಮಲ್ಲೇ ಇದೆ!

 • ಒಬ್ಬರು ಮಿತ್ರರು ಕಳಕಳಿಯಿಂದ ‘ಒಬ್ಬಿಬ್ಬರ ಅಭಿಪ್ರಾಯಗಳಿಗೆ ಸಾರ್ವತ್ರಿಕ ಸ್ವರೂಪ ಕೊಡಬಾರದು’ ಎಂದು ಮನವಿ ಮಾಡಿದ್ದಾರೆ... ಆದರೆ ಅದೇ ಮಿತ್ರರು ಇಲ್ಲಿರುವವರ ನುಡಿಗಳಿಗೆ ‘ಮಾತ್ಸರ್ಯ-ವಿಷ’ ಎಂದು ಹೆಸರಿಟ್ಟುಬಿಟ್ಟಿದ್ದಾರೆ.... ಅವರ ಮೊದಲನೆಯ ವಿಚಾರವನ್ನೇ ನಾವು ಇಲ್ಲಿಯೂ ಅಳವಡಿಸಿಬಿಡೋಣ... ಇಲ್ಲೂ ಅಲ್ಲೂ ಅನೇಕ ರೀತಿಯ ಜನ ಇರುತ್ತಾರೆ... ಇಲ್ಲಿಯವರ ಬಗ್ಗೆ ಅವರೂ ಹಾಗೆ ಸಾರಾಸಗಟಾಗಿ ನೊಂದುಕೊಳ್ಳದಿದ್ದರೆ ಸಂತೋಷ...
 • ಇಲ್ಲಿ ಭಾರತದಲ್ಲಿರುವ ಮಂದಿ ಒಂದು ಮಾತನ್ನು ನೆನಪಿನಲ್ಲಿಡಬೇಕು. ಅನಿವಾಸಿ ಕನ್ನಡಿಗರು ಭಾಷಾ ಪ್ರೇಮವನ್ನು ಕೊಂಚ ಹೆಚ್ಚಾಗೇ ವ್ಯಕ್ತಪಡಿಸುವುದು ತೀರ ಸ್ವಾಭಾವಿಕ. ತವರಿನಿಂದ ದೂರವಿರುವ ಅವರಿಗೆ ಅದರ ನೆನಪು ಹೆಚ್ಚು , ಕೆಲವೊಮ್ಮೆ ಅದರ ಬೆಲೆ ಕೂಡ ನಮಗಿಂತ ಚೆನ್ನಾಗಿ ಗೊತ್ತಿರುತ್ತದೆ. ಅದು ಸಹಜ. ಇರುವಾಗ ವಸ್ತುವಿನ ಬೆಲೆ ನಮಗೆ ತಿಳಿಯುವುದಿಲ್ಲ , ಕಳೆದಾಗಲೆ ಅದರ ಅರಿವು. ಇದು Universal Truth. ಅದಕ್ಕೇ ಅವರು ತಮ್ಮ ಕೃತಿಗಳಲ್ಲಿ, ಮಾತಲ್ಲಿ ಈ ಭಾವನೆಯನ್ನು ಕೊಂಚ ಹೆಚ್ಚಾಗೇ ವ್ಯಕ್ತಪಡಿಸಿದರೆ, ನಾವದನ್ನು ಅರ್ಥಮಾಡಿಕೊಂಡುಬಿಡೋಣ, ಆಗದೆ ?
 • ಅಲ್ಲಿರುವ ಅನಿವಾಸಿ ಕನ್ನಡಿಗರೇ, ನೀವು ನಿಮ್ಮ ಪರಿಸರದ ಬಗ್ಗೆ ಬರೆಯುವುದು, ಅದನ್ನು ಪ್ರೀತಿಸುವುದು ಹೊಗಳುವುದು ಸಹಜ. ಆದರೆ ಕೆಲವೊಮ್ಮೆಯಾದರೂ ಅಲ್ಲಿನ ಬವಣೆಗಳನ್ನು, ನೀವು ಎದುರಿಸುವ ಒಂಟಿತನವನ್ನು, ಇಲ್ಲಿನ ನಿಮ್ಮ ಮಿತ್ರರಿಗೆ ಮನದಟ್ಟು ಮಾಡುವ ಪ್ರಯತ್ನ ಮಾಡುವಿರಾ ? ನಿಮ್ಮ ನೋವನ್ನು ಮರೆಯಲು, ನಿಮ್ಮತನವನ್ನು ಹೇಗೋ ಆ ಅಪರಿಚಿತ ದೇಶದಲ್ಲಿ ಕಾಪಾಡಿಕೊಳ್ಳಲು ನೀವು ಶತಪ್ರಯತ್ನ ನಡೆಸುತ್ತಿರುವುದು ನಿಜ ಅಲ್ಲವೇ? ಹಾಗಾದರೆ ಅದನ್ನೊಮ್ಮೆ ಇಲ್ಲಿನ ನಿಮ್ಮ ಮಿತ್ರರ ಮುಂದೆ ಒಪ್ಪಿಕೊಂಡುಬಿಡಿ, ಅದರಲ್ಲಿ ತಪ್ಪೇನಿದೆ ? ಅವಮಾನವೇನಿದೆ ? ಅದು ಸಹಜ ಅಲ್ಲವೇ? ಅದು ಬಿಟ್ಟು, ಕನ್ನಡದ ಮೇಲೆ ನಿಮಗಿರುವ ಪ್ರೀತಿಯನ್ನು ಇಲ್ಲಿನವರಿಗಿಂತಾ ಹೆಚ್ಚು ಎಂದು ವಾದಿಸಿದರೆ, ಇಲ್ಲಿನವರಿಗೆ ಅದು ಕೃತಕ ಎನ್ನಿಸುವುದು ಅಷ್ಟೇನೂ ಆಶ್ಚರ್ಯ ಅಲ್ಲ... ನಿಮಗೆ ಪ್ರೀತಿ ಹೆಚ್ಚಾಗಿ ಇರುವುದಕ್ಕೆ ಕಾರಣವಿದೆಯಲ್ಲವೇ ? ನೀವು ಇಲ್ಲೇ ಉಳಿದಿದ್ದರೆ ಇಷ್ಟೇ ಪ್ರೀತಿ ಉಕ್ಕಿಬರುತ್ತಿತ್ತೇ ? (ಹಾಗೆ ಇರುವವರೂ ಇದ್ದಾರೆ, ಅಲ್ಲಗಳೆಯುವಂತಿಲ್ಲ...ಆದರೆ ಬಹುತೇಕ ಜನರಿಗೆ ಈ ಮಾತು ಅನ್ವಯಿಸುತ್ತದೆ...) ನೀವು ಇಲ್ಲಿ ಇದ್ದಿದ್ದರೆ ಇಲ್ಲೇ ಇರುವ ಜನರ ಹಾಗೆ ಕೊಂಚ ಉಡಾಫೆ-ಮಿಶ್ರಿತ ಪ್ರೀತಿ ಇರುತ್ತಿತ್ತು ಎಂದು ಒಪ್ಪುತ್ತೀರ ತಾನೆ ? ಅದು ತಪ್ಪೂ ಅಲ್ಲ, ಒಪ್ಪೂ ಅಲ್ಲ, ಅದನ್ನು ಅಳೆಯುವ ಅಗತ್ಯ ಏನಿದೆ ? ಅದು ವಾಸ್ತವ ಸತ್ಯ ಅಷ್ಟೆ... ಅದನ್ನು ಹಾಗೇ ಒಂದೆಡೆಗೆ ಒತ್ತರಿಸೋಣ..
  ನೀವು ನಿಮ್ಮ ಕನ್ನಡ ಪ್ರೇಮವನ್ನು ಇಲ್ಲಿನ ಜನ ಎಲ್ಲರೂ ಕೊಂಡಾಡಬೇಕು ಎಂದು ಯಾಕೆ ಬಯಸಬೇಕು? ಮೆಚ್ಚುವ ಮನಸಿರುವ ನಾವು ಹಲವರು ನಿಮ್ಮ ಹಾಗೂ ಇಲ್ಲಿನವರ ಒಳ್ಳೆಯ ಕೃತಿಗಳನ್ನು, ಕೆಲಸವನ್ನು ಸಮಾನ ದೃಷ್ಟಿಯಿಂದ ಮೆಚ್ಚಿಲ್ಲವೇ? ‘ಅನಿವಾಸಿ’ ಆದ ಮಾತ್ರಕ್ಕೆ ನಿಮ್ಮ ಸಾಧನೆಗೆ ಹೆಚ್ಚಿನ ಪ್ರಾಮುಖ್ಯತೆ ಬಯಸುವುದು ಸರಿಯಾಗಲಾರದು ಅಲ್ಲವೇ?
 • ಇಷ್ಟು ರಾದ್ಧಾಂತವಾಗುತ್ತಿದ್ದರೂ ಇದಕ್ಕೆ ಕಾರಣರಾದ ಹಿರಿಯರೆಲ್ಲ ಏನೂ ಮಾತಾಡದೆ ಸುಮ್ಮನಿದ್ದಾರೆ ಯಾಕೆ ?
 • ಕಡೆಯದಾಗಿ.... ಸದ್ಯಕ್ಕೆ ಎದ್ದು ಕಾಣುತ್ತಿರುವುದು ನಮ್ಮೆಲ್ಲರಲ್ಲೂ ತುಂಬಿದ ನಮಗೊಂದು ನೀತಿ, ಪರರಿಗೊಂದು ನೀತಿ.... ಮುಕ್ತ ಮನಸ್ಸು ಎಂಬುವುದು ಸತ್ತುಹೋಯಿತೇ ? ಯಾವಾಗ ? ನಮಗೆ ತಿಳಿಯಲೇ ಇಲ್ಲ ಅಲ್ಲವೆ?
 • ಮುಖಪುಟ / ಸಾಹಿತ್ಯ ಸೊಗಡು

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more