‘ಒಟ್ಟಾವ ಕನ್ನಡ ಸಂಘ’ದಲ್ಲಿ ಬಹುಮುಖಿ ಯುಗಾದಿ
- ವೈ.ಜೆ.ಪಾಟೀಲ್
Email : yjpatil@yahoo.com
ಯುಗ ಯುಗ ಕಳೆದರು ಯುಗಾದಿ ಮರಳಿ ಬರುತಿದೆ. ಕೆನಡಾದ ರಾಜಧಾನಿ ನಗರದ ‘ಒಟ್ಟಾವ ಕನ್ನಡ ಸಂಘ’ದ ಯುಗಾದಿ ಆಚರಣೆಗೆ ಅಂದು ಬೆಳ್ಳಿಮಹೋತ್ಸವದ ಸಂಭ್ರಮ. ಕಾರ್ಯಕ್ರಮ ನಡೆದಿದ್ದು ಏಪ್ರಿಲ್ 26 ರ ಶನಿವಾರ ಸಾಯಂಕಾಲ- ಸಂತ ರಿಚರ್ಡ್ ಆಂಗ್ಲಿಕನ ಚರ್ಚಿನಲ್ಲಿ . ಬೆಳ್ಳಿಮಹೋತ್ಸವಕ್ಕೆ ಇರಬೇಕಾದ ಎಲ್ಲಾ ಸಂಭ್ರಮವೂ ಅಲ್ಲಿತ್ತು . ಸಾಹಿತ್ಯ, ಸಂಗೀತ, ನೃತ್ಯ ಹಾಗೂ ನಾಟಕದಿಂದ ಯುಗಾದಿ ಕಾರ್ಯಕ್ರಮ ಶೃಂಗಾರವಾಗಿತ್ತು.
ಕನ್ನಡನಾಡಿನ ಮಹಾನ್ ವ್ಯಕ್ತಿಗಳ ಸಮಾಗಮ!!
ಹೌದು. ಒಟ್ಟಾವ ಕನ್ನಡ ಶಾಲೆಯ ಚಿಣ್ಣರು ಕನ್ನಡನಾಡಿನ ಮಹಾನ್ ವ್ಯಕ್ತಿಗಳ ವೇಷ ಧರಿಸಿ, ಆವರ ಹಾಡು, ಮಾತು ಹಾಗು ವಚನಗಳನ್ನು ಹೇಳುತ್ತಾ ಬಂದರು. ಅಂತಹ ಗಣ್ಯರು ಯಾರು ಯಾರೆಂದರೆ- ಕನಕದಾಸ (ಅಲೋಕ ಸ್ವಾಮಿ), ಪುರಂದರದಾಸ (ರಾಹುಲ್ ಚಕ್ರವರ್ತಿ), ಅಕ್ಕಮಹಾದೇವಿ (ಸಂತೋಶಿ ಕಶ್ಯಪ್) ಅಲ್ಲಮಪ್ರಭು (ಕಿರಣ ರಾವ್), ಕಾಳಿದಾಸ (ಅಲೋಕ ಜಾಗಿರದಾರ್), ವೀರ ಒನಕೆ ಓಬವ್ವ (ಶ್ರೇಯಾ ಪಾರ್ಥಸಾರಥಿ), ಶಾಂತಲಾ (ಶೃತಿ ಚಕ್ರವರ್ತಿ) ಮತ್ತು ಮೂಗಿನಿಂದ ಕನ್ನಡ ಪದಗಳ್ ಆಡ್ತೀನಿ ಅಂದ ಹೆಮ್ಮೆಯ ಕನ್ನಡದ ಕವಿ ಡಾ.ಜಿ.ಪಿ.ರಾಜರತ್ನಂ (ಜಿ.ಪಿ.ರಾಜರತ್ನಂ ಅವರ ಮರಿ ಮೊಮ್ಮಗ ಅಭಿಜೀತ ಅರುಣ್).
ಪ್ರೇಕ್ಷಕರಿಗೆ ಮಕ್ಕಳನ್ನು ನೋಡುವುದೆ ಒಂದು ಹಬ್ಬ. ಭಾಗವಹಿಸಿದ ಮಕ್ಕಳ ತಂದೆ-ತಾಯಿಯಂದಿರ ಸಂತೋಷ ಇಮ್ಮಡಿಯಾಗಿತ್ತು. ಆದರೆ ಮಕ್ಕಳ ಜೊತೆ ಮಕ್ಕಳಾಗಿ ಅವರನ್ನು ತಯಾರಿ ಮಾಡಿದ ಕನ್ನಡ ಶಾಲೆಯ ಶಿಕ್ಷಕಿಯರ (ನಂದಿನಿ ಶ್ರೀಕಂಠಯ್ಯ, ರಾಧಾ ಸ್ವಾಮಿ ಮತ್ತು ಶಾಂತಾ ವ್ಯಾಟಸನ್) ಆನಂದ ನೂರ್ಮಡಿಯಾಗಿತ್ತು.
ಕಾರ್ಯಕ್ರಮ ಆರಂಭವಾದದ್ದು ವಸುಂಧರಾ ರಾಮಚಂದ್ರನ್ ಅವರ ಪ್ರಾರ್ಥನೆಯಾಂದಿಗೆ. ಒಟ್ಟಾವ ದಲ್ಲಿ ಕನ್ನಡದ ಯುಗಾದಿ ಆಚರಣೆ ಆರಂಭಿಸಿದ ಮೊದಲ ದಿನಗಳ ಸಂಭ್ರಮವನ್ನು ಶ್ರೀಕಂಠಯ್ಯನವರು ವಿವರವಾಗಿ ತಿಳಿಸಿದರು .
ಗೀತಾ ಜಾಗಿರದಾರ್ ಕನ್ನಡ ಸಂಘದ ವತಿಯಿಂದ ಎಲ್ಲರನ್ನೂ ಸ್ವಾಗತಿಸಿದರು, ನಂತರ ಹಳೆ ಸಮಿತಿಯಿಂದ ಹೊಸ ಸಮಿತಿಯವರಿಗೆ ಕನ್ನಡಜ್ಯೋತಿಯನ್ನು ಹಸ್ತಾಂತರಿಸಲಾಯಿತು. ಜ್ಯೋತಿಯನ್ನು ಟಾರ್ಚ್ ರೂಪದಲ್ಲಿ ನೀಡಿದ್ದು ಎಲ್ಲರ ನಗೆ ಬುಗ್ಗೆ ಹರಿಯಲು ಕಾರಣವಾಗಿತ್ತು.
ನಂಜಪ್ಪನವರಿಂದ ಸಂಘದ ಆರ್ಥಿಕ ವರದಿಯಲ್ಲಿಯ ಸೆಂಟ್ಸ್ ಲೆಕ್ಕ ಮತ್ತೊಮ್ಮೆ ಹಾಸ್ಯದ ಹೊನಲು ಹರಿಸಿತು. ಉಷಾ ರಾವ್ ಅವರು ಎಲ್ಲರಿಗು ಸ್ವಭಾನು ಸಂವತ್ಸರ ಸಮೃದ್ಧಿಯ ವರ್ಷವೆಂದು ಪಂಚಾಂಗ ಪಠಣದ ಮೂಲಕ ತಿಳಿಸಿದರು.
ಯುಗಾದಿ ಕಾರ್ಯಕ್ರಮದ ಮೂರು ಮುಖ್ಯ ವಿಶೇಷಗಳಾದ ನೃತ್ಯ, ನಾಟಕ ಹಾಗೂ ಸಂಗೀತವನ್ನು ಕೆಳಗಿನಂತೆ ಬಣ್ಣಿಸಬಹುದು :
ನೃತ್ಯ: ಭಾರತದ ಪ್ರವಾಸಿ ಸ್ಥಳಗಳ ಪರಿಚಯಿಸುವ ಕುಮಾರಿ ದೀಪಾ ಮತ್ತು ಕುಮಾರಿ ಅನುಷಾ ಜಾಗಿರದಾರ್ ಅವರ ನೃತ್ಯ ಎಲ್ಲರ ಗಮನ ಸೆಳೆಯಿತು.
ಯುಗಾದಿ, ಕನ್ನಡ, ಎಂದಮೇಲೆ ಕೋಲಾಟವಿರದೆ ಆದೀತೆ ? ಹಬ್ಬದ ಸಂಭ್ರಮ, ಕೋಲಾಟದಲ್ಲಿ ಅತಿ ರಮ್ಯ ಮನೋಹರಾಗಿ ಮೂಡಿ ಬಂತು.
‘ಪರ್ವ’ ಚಿತ್ರದ ಡೋಲು-ಡೋಲು ಡಂಗುರಕ್ಕೆ ಕೋಲಾಟ ಮೇಳದವರ ಲಯಬದ್ಧ ಹೆಜ್ಜೆಗೆ ಸಭಿಕರು ಹೆಜ್ಜೆ ಹಾಕಿದ ಉತ್ಸಾಹ- ಆನಂದವನ್ನು ನೋಡಿಯೇ ಅನುಭವಿಸಬೇಕು.
ಕುಮಾರಿ ಅಂಬಿಕಾಳ taekwondo ನೃತ್ಯ, ಕುಮಾರಿ ಶೃತಿಯ ಕೊರವಂಜಿ ವೇಷದ ನೃತ್ಯ ಕೂಡಾ ಮನ ತಣಿಸುವಂತಿತ್ತು. ಪ್ರೇಕ್ಷಕರ ಬುದ್ದಿಗೆ ಕಸರತ್ತು ನೀಡಲು ನಿಖಿಲ್ ಹಾಗು ಶೃತಿ ಚಕ್ರವರ್ತಿಯ ಒಗಟುಗಳಿದ್ದವು.
ಪುಟಾಣಿ ಕಿರಣ ಮತ್ತು ಅಖಿಲಾ ರಾವ್ ಹಾಡಿದ ಯುಗಳ ಗೀತೆ ಎಲ್ಲರ ಚಪ್ಪಾಳೆ ಗಿಟ್ಟಿಸಿದವು.
ನಾಟಕ : ಯುಗಾದಿಯ ಕಾರ್ಯಕ್ರಮದ ಮತ್ತೊಂದು ವಿಶೇಷವಾಗಿ ‘ಪಯಣ’ ನಾಟಕ ಮೂಡಿಬಂತು. ಜೀವನದ ಪಯಣವನ್ನು ರೂಪಿಸುವಂತೆ ನಿಜವಾದ ‘ಪಯಣ’ ಉಪಯೋಗಿಸಿದ, ಈ ನಾಟಕ ಪ್ರತಿ ಕ್ಷಣಕ್ಕು ನಗೆ ಬುಗ್ಗೆಯನ್ನೆ ಉಕ್ಕಿಸುತ್ತಿತ್ತು. ಕನ್ನಡದ ಹಳೆ-ಹೊಸ ಹಾಡುಗಳನ್ನು ಅಲ್ಲಲ್ಲಿ ಉಪಯಾಗಿಸಿದ್ದರಿಂದ ನಾಟಕ ಚಿತ್ರ-ಮಂಜರಿಯಂತೆ ಮಧುರವೂ ಆಗಿತ್ತು. ನಾಟಕ ಮುಗಿದಾಗ ಪ್ರೇಕ್ಷಕರೆಲ್ಲ ಇಷ್ಟು ಬೇಗ ಮುಗಿಯಿತೆ ಎನ್ನುವಂತಾಯಿತು. ನಾಟಕವನ್ನು ಒಟ್ಟವಾ ಕನ್ನಡಿಗರೆ ಬರೆದಿದ್ದು ಇನ್ನೊಂದು ವಿಶೇಷ.
ಸಂಗೀತ : ಅಂಬಿಕಾ ಅರುಣಳ ಜೋಗುಳ ಹಾಡಿಗೆ ಪುಟಾಣಿ ಪ್ರೇರಣಾ ಪಾಟೀಲ್ ನಿದ್ದೆ ಹೋದ ಪ್ರಸಂಗ ಸೊಗಾಗಿತ್ತು . ‘ಮಧುರವಾಣೀ’ ಬಳಗದವರಿಂದ ಕನ್ನಡದ ಪದಗಳು ಮಧುರವಾಗಿ ಮೂಡಿಬಂದವು.
ಸಂಗೀತದ ಜೊತೆಗೆ ಹಬ್ಬದೂಟದ ಸುವಾಸನೆ ಎಲ್ಲರನ್ನು ಎಳೆಯುತ್ತಿತ್ತು. ಆಗಲೆ ಶೈಲಾ ಮೆಣಸಿನಕಾಯಿ ವಂದನೆ ಹೇಳಿಯಾಗಿತ್ತು . ರಾಮಚಂದ್ರನ್ ಅವರು ‘ರಾಮ ಭಜನೆ ಮಾಡು ಎಲೆ ಮನುಜಾ’ ಎಂದು ಕಾರ್ಯಕ್ರಮವನ್ನು ಮುಗಿಸಿದಾಗ, ಎಲ್ಲರೂ ಹೋಳಿಗೆ ಊಟಕ್ಕೆ ನಡೆದರು.
ಕನ್ನಡಸಂಘದ ಸಮಿತಿಯ- ಗೀತಾ ಜಾಗಿರದಾರ್, ಶೈಲಾ ಮೆಣಸಿನಕಾಯಿ, ದೀಪಾಲಿ ಅರುಣ್ ಮತ್ತು ನಂಜಪ್ಪ ಎಂ. ಆರ್. ಅವರ ಶ್ರಮ, ಕಾಳಜಿ ಕಾರ್ಯಕ್ರಮದ ಯಶಸ್ಸಿನಲ್ಲಿ ಎದ್ದು ಕಾಣಿಸುತ್ತಿತ್ತು.
ಮುಖಪುಟ / ಸಾಹಿತ್ಯ ಸೊಗಡು