ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳ ಮಾತು ಮಕ್ಕಳಾಟವಲ್ಲ !

By Staff
|
Google Oneindia Kannada News
Lakshminarayana Ganapathi‘ಒಳಿತು ಕೆಡುಕೆಂಬುದೆಲ್ಲ ; ಅವರವರ ಮಾನದಂಡ. ಒಳಿತಿಗಾಗದ್ದಕ್ಕೆ ಕೆಡುಕು; ಕೆಡುಕಿಗೆ ಕೆಡುಕೆ ಒಳಿತು; ಕೆಡುಕಿಗಾಗದ್ದಕ್ಕೆ ಒಳಿತೆ ಕೆಡುಕು’

ಐದು ವರುಷದ ಮೆದುಳಿಗೆ ಸಿಲುಕುವ
ಐವತ್ತರ ಮೆದುಳದೋ ಮರೆತೇ ಬಿಡುವ
ಝೆನ್‌.. ನಂತಹ ಜೀವನ ಮುತ್ತುಗಳು

ನಾಲ್ಕು ವರ್ಷದ ನನ್ನ ಮಗನನ್ನೊಮ್ಮೆ ಕೇಳಿದ್ದೆ , ‘ಏನೋ ಚಿನ್ನೂ ದೊಡ್ಡವನಾದ ಮೇಲೆ ಏನು ಆಗ್ಬೇಕಂತಿದ್ದೀಯ?.’ ಪೋಲೀಸು, ಕಾರ್‌ ಡ್ರೈವರ್‌ ಅಂತಲೋ, ಇನ್ನೇನೋ ಸಟ್ಟನೆ, ಸಣ್ಣ ದೃಷ್ಟಿಯ ಉತ್ತರ ಹೇಳಿ ನನ್ನನ್ನ ನಿರಾಸೆ ಮಾಡುವ ಬದಲು, ಐದು ಸೆಕೆಂಡ್‌ ಯೋಚಿಸಿದ ಮಗ, ನಿಧಾನವಾಗಿ ಉತ್ತರಿಸಿದ್ದ- ‘ ಅಪ್ಪಾ, ನಾ ದೊಡ್ಡೋನಾಗೋದೆ ಇಲ್ಲ !’.

ಆಂ ಇದೊಳ್ಳೇ ಗಸ್ತು ಕೊಟ್ಟನಲ್ಲಾ ಇವ; ಎಂದುಕೊಂಡವ ಅವನ ಹತ್ತಿರ ಹೋಗಿ ನನ್ನ ಐದೂವರೆ ಅಡಿಯ ಭರ್ಜರಿ ದೇಹವನ್ನ ಪ್ರದರ್ಶಿಸುತ್ತಾ, ಮನದಲ್ಲಿಯೇ ಯಾವಾಗ ನನ್ನ ಅಪ್ಪನಂತೆ ಅಂಕಲ್ಗಳಂತೆ ದೊಡ್ಡವನಾದೇನು ಎಂದು ತುಡಿಯುತ್ತಿದ್ದ ನನ್ನ ಯೋಚನೆಗಳನ್ನ ನೆನಪಿಸಿಕೊಳ್ತಾ , ‘ಅಲ್ವೋ ನೀನು ಅಪ್ಪನಂತೆಯೇ ದೊಡ್ಡವನಾದಾಗ ಏನಾಗ್ತೀಯೋ..’ ಅಂತ ಮತ್ತೆ ನನ್ನ ಪ್ರಶ್ನೆ ಎಸೆದಿದ್ದೆ. ಸರಿ ಈಗಲಾದರೂ ನನ್ನ ಪ್ರಶ್ನೆಯ ಆಳದ ಅರಿವಾಗಿ ಅವನ ಬಾಯಿಂದ ‘ಡಾಕ್ಟ್ರೋ, ಇಂಜಿನಿಯರೋ ಅಲ್ಲಾ ಲಾಯರ್‌..’ ಎಂಬ ಪದಗಳ ಉದ್ಭವವಾದೀತೆಂದು ಆಶೆಯಿಂದ ಕಾದವನಿಗೆ ಮತ್ತೆ ಎರಡೇ ಸೆಕೆಂಡಿನಲ್ಲಿ ಉತ್ತರಿಸಿದ್ದ ಮಗರಾಯ- ‘ಇಲ್ಲ ಅಪ್ಪಾ.. ನನಗೆ ಹೀಗಿರೊದೇ ಮಜಾ; ದೊಡ್ಡವಾನಾಗುವ ತಲೆಬಿಶಿಯೇಕೆ ಸುಂನೆ..’ ಎಂದಾಗ ಮಾತ್ರ ನಾನು ಬೆಪ್ಪಾಗಿದ್ದೆ.

ಎಲಾ ಇವನ, ನಾಲ್ಕು ದಶಕಗಳು ಬದುಕು ಬಡಿಸಿದ ಇಂಗು ತಿಂದ ಮಂಗನಾದ ನನಗೇ ಹೊಳೆಯದಿದ್ದ ಆಧ್ಯಾತ್ಮಿಕದ ಸತ್ಯ, ಈ ಚಿಗುರು ಪೋರ ತಿಳಿದುಕೊಂಡಿದ್ದಾನಲ್ಲ ಎನ್ನಿಸಿ ಹೊಟ್ಟೆ ಕಿಚ್ಚಾಯಿತು. ಇನ್ನು ದೊಡ್ಡವರ ಬದುಕಿನ ಭವ್ಯತೆಯ ಬಗ್ಗೆ ಅದೆಷ್ಟು ಸುಳ್ಳು ಹೇಳಿ ಇವನನ್ನ ಬೆಳೆಸಬೇಕೋ ಎಂಬ ಯೋಚನೆಯೂ ಶುರುವಾಯಿತು. ಸ್ನೇಹಿತರೊಂದಿಗೆ ಆಗೀಗ ತಮಾಷೆಗೆ ಇದನ್ನ ಹೇಳುತ್ತಿದ್ದ ನನಗೆ ಮೊನ್ನೆ ಇನ್ನೊಂದು ಪ್ರಶ್ನೆ ಎಸೆದ ಈ ಭಂಡ. ಅದೇನಪ್ಪಾ ಅಂದರೆ-

‘ಅಪ್ಪ.. ಗುಡ್‌ ಬ್ಯಾಡ್‌ ಎಲ್ಲಾ ಸುಂನೆ ಅಲ್ವಪ್ಪ..’ ಎಂದ. ಆ ಮಾತುಗಳಲ್ಲಿನ ಒಗಚು ಕಂಡು, ಇದ್ಯಾವ ಪೀಕಲಾಟಕ್ಕೆ ತಂದು ಬಿಟ್ಟನಲ್ಲ ಈ ಮಗರಾಯ ಎಂದು ಕೊಂಡರೂ, ಸರಿ ಈಗ ನನಗೆ ಒಳ್ಳೆ ಚಾನ್ಸ್‌ ಸಿಕ್ಕಿದೆ ಎಂದುಕೊಂಡು, ಒಂದು ಪ್ರವಚನ ಕೊಡಲು ತಯಾರಾಗ್ತ - ‘ಯಾರು ಹೇಳಿದರೋ ಮರಿ ನಿನಗೆ ಅದೆಲ್ಲ..?’ ಅಲ್ದೇ ಮತ್ತೆ, ನನ್ನ ಚಿಣ್ಣಾರಿ ಯಾವಾಗ್ಲೂ ಒಳ್ಳೇವ್ನಲ್ವೆ, ಹಾಳು ಬುದ್ಧಿಯೆಲ್ಲಾ ಬರೋದು ಅವರಿವರಿಂದ ನೋಡಿ..

‘ಯಾರೂ ಇಲ್ಲಪ್ಪ , ನನ್ನ ಬ್ರೈನೇ ಹೇಳಿತು; ಬ್ರೈನು ಖಾಲೀ ಅಂದ್ರೆ ನಾವು ಖಾಲಿ ಅಲ್ವೇನಪ್ಪ ’ ಅಂತ ನನಗೇ ತಿರುಗು ಬಾಣ ಎಸೆದಿದ್ದಲ್ಲದೆ ನನ್ನ ಬ್ರೈನಿಗೊಂದು ಸವಾಲೆಸೆದಿದ್ದ. ಈ ರೀತಿಯ ಪ್ರಶ್ನೆಗಳನ್ನ ಕೇಳಿದ ಬಂಟನ ಕಣ್ಣುಗಳಲ್ಲಿ ಭಂಡ ತುಂಟತನ ಹುಡುಕುತ್ತಿದ್ದ ನನಗೆ ಆ ಕಣ್ಣುಗಳಲ್ಲಿ ನಗುವಿಲ್ಲದ ಮ್ಲಾನ ಭಾವವಿದ್ದದ್ದು ನೋಡಿ, ‘ಛೇ ಪಾಪ ಎನ್ನಿಸಿ, ಹಾಗಂದ್ರೆ ಏನರ್ಥ? ಯಾಕೆ ಹಾಗೆ ಹೇಳ್ತೀಯ?’ ಅಂತ ನನಗೆ ಅವನ ಪ್ರಶ್ನೆ ಅರ್ಥವಾಗಲಿಲ್ಲವೆಂದು ಸೋಲೊಪ್ಪಿಕೊಂಡಾಗ ಅವ ಹೇಳಿದ್ದು :

‘ಅಪ್ಪ ಈಗ ಗುಡ್‌ ಅನ್ಕೊಂಡೋರು, ತಾವು ಹೊಡ್ಯೋರಿಗೆ ಬ್ಯಾಡ್‌ ಅಂತ ಕರೀತಾರೆ.. ಅದೇ ಬ್ಯಾಡ್‌ ಅನ್ಕೊಂಡೊವ್ರಿಗೆ ಗುಡ್‌ ಅನ್ಕೊಂಡು ಹೊಡೆದವ್ರು ಬ್ಯಾಡ್‌ ಆಗ್ತಾರೆ.. ಮತ್ತೆ ಅವ್ರು ತಮ್ಮನ್ನೇ ಗುಡ್‌ ಅನ್ಕೊಳ್ತಾರೆ ಅಲ್ವಾ..’

ಮಕ್ಕಳಾಟದಲ್ಲಿಯೇ ಜೀವನದ ಕಟು ಸತ್ಯವನ್ನ ತಿಳಿದು ಕೊಂಡು ಈಗ ಟಿ.ವಿ. ಯಲ್ಲಿ ಬಿಟ್ಟ ಕಣ್ಣು ತೆರೆದು ನೋಡ್ತಾ ಕುಳಿತಿದ್ದ ದೊಡ್ಡವರ ಜಗಳವನ್ನ ತನ್ನ ಬಾಲಭಾಷೆಯಲ್ಲಿ ವಿಶ್ಲೇಷಿಸಿದಾಗ ಗೊತ್ತಾಯ್ತು , ಬೆಳೆಯುತ್ತಿದ್ದಂತೆ ಬರಡಾಗುತ್ತಾ ಸರಿತಪ್ಪುಗಳ ಗೋಡೆ ಕಟ್ಟಿಕೊಳ್ಳುತ್ತಾ ಸಾಗುವ ನಾವುಗಳು, ದಾರಿಯಲ್ಲಿ ಎಲ್ಲೋ ಮರೆತು ಹೋದ ಜೀವನ ಸತ್ಯ ಈ ಎಳೆಯ ಕುಡಿಗಳಲ್ಲಷ್ಟೇ ಸಿಕ್ಕೀತು ಎಂದು.

‘ಹೌದು ..’ ಎಂದು ತಲೆಯಾಡಿಸುವ ವಿನಹ ಏನೂ ತೋಚಿರಲಿಲ್ಲ. ದೂರದಲ್ಲಿ ಕೂತು ಎಲ್ಲ ಗಮನಿಸುತ್ತಿದ್ದ , ಯುದ್ಧ ಬೇಡವಂತ ಅಳುಮುಖದಿಂದಿದ್ದ ನನ್ನಾಕೆಯ ಮುಖದಲ್ಲೇನೋ ಗೆದ್ದೆನೆಂಬ ಭಾವದ ಜೊತೆಗೆ ತುಟಿಯ ಕೊನೆಯಲ್ಲಿ ನಗೆ ಚಿಮ್ಮಿತ್ತು. ಹೆಂಗಸು ಮಕ್ಕಳ ಹಿಂದೆ ಅವಿತು, ತನ್ನವರ ಮೇಲೆಯೇ ಗುಂಡು ಹಾರಿಸಿ ತಾನು ತನ್ನವರಷ್ಟನ್ನೆ ಸಾಕಿಕೊಂಡಿದ್ದ ಸದ್ದಾಮನ ವಿರುದ್ಧ , ಬುಷ್‌ ಮತ್ತು ಅಮೇರಿಕಾವನ್ನು ಈ ಯುದ್ಧದಲ್ಲಿ ಬೆಂಬಲಿಸಬೇಕೆಂದು ಅವರಿವರೊಡನೆಲ್ಲಾ ಜೋರಾಗಿ ವಾದ ಮಾಡಿ ಸಾಧಿಸುತ್ತಿದ್ದ ನಾನು, ಈ ಚಿಣ್ಣನ ಸಣ್ಣ ಪ್ರಶ್ನೆಗೆ ಏನು ಹೇಳಬೇಕೊ ತಿಳಿಯದಾಗಿದೆ.. ಸ್ವಲ್ಪ ಸಹಾಯ ಮಾಡ್ತೀರಾ ಸಾರ್‌!!

ಹೀಗೆ ಆರ್ತವಾದ ಮನಸ್ಸಿಗೆ ಹೊಂಚಿ ಬಂದ ಭಾವಗಳಿದೋ ನೋಡಿ:

ಮರುಳು ಮನುಜನ ಮರಳುಗಾಡಿನ ಯಾನ

ಓ ನನ್ನ ಚೇತನಾ ಆಗು ನೀ ಅನಿಕೇತನಾ
ರಿಂಗಣಗುಡುತ್ತಿರೆ ಹಿರಿಯರ ಈ ಆರ್ತನ
ಯುದ್ಧ ಸಾಗುತ್ತಿದೆ ಭಯವನ್ನ
ಢಿಕ್ಕಿ ಹೊಡೆಯುತ್ತ ಭಯವೇ ಅಣ್ಣ

ನಮ್ಮ ಎಡ ನಿಮಗೆ ಬಲವಲ್ಲ
ನಿಮ್ಮ ಬಲ ನಮಗೆಡವಟ್ಟಲ್ಲ
ಎಂಬ ನಮ್ಮ ವ್ಯಾಜ್ಯವುಂಟಲ್ಲ
ಯುಗಗಳೆಷ್ಟು ಕಳೆದರೂ ಸಾಯುವ ಕಳೆಯಿದಲ್ಲ

ಎಡ ಬಲ ಎಣಿಸಿ ನೋಡದವರ
ಎಲ್ಲರ ಬಾಚಿ ಕೊಬ್ಬುವವರ
ಹಿಗ್ಗಿನ ತೇಗು ಡರ್ರಂತ
ಕಿವುಡಾಗಿಸಿದೆ ಅಳುವಿಗೆ ಚಿಣ್ಣರ

ಸಾಗುವ ಕುರುಡು ಯುದ್ಧದ ಗಾಣ
ಬೇಡಿತ್ತ ತಾಯಾಡಲು ಕಿವಿಚಿ ಸುರಿಸುವ ಗುಣ
ಬಳಿಕ ಒಸರಿದ್ದ ಅವಳ ಗರ್ಭದೆಣ್ಣೆಯ ಋಣ
ಬೇಕಾಗಿದ್ದಕ್ಕೆ ಎರಡೇ ತುತ್ತು ಅನ್ನ

ಮರಳುಗಾಡಿನ ಕುರುಕ್ಷೇತ್ರ
ಶಸ್ತ್ರಾಸ್ತ್ರಗಳ ಬಡಬಾನಲ
ಬಾಯಾಂದರ ಆರಿಕೆಯನ್ನೂ ಆರಿಸಲಾಗದ ಜಲ
ಯದಾ ಸದಾ ಬರುವೆನೆಂದವನ ಜಾಡು ಕಾಣುವುದಲ್ಲ

ಕೌರವ ಪಾಂಡುತನಯರಾರೋ
ಬರೇ ಮರಳಿನ ಮಸುಕು ಎಲ್ಲ

ಯುದ್ಧಗಾಣಕ್ಕೆ ಸಿಕ್ಕ ಶಿರಗಳ ಸಾಲು
ಹೊರತಿಲ್ಲ ನೋಡಿ ಹಾಲು ಹಸುಳೆಗಳ ಬಾಳು
ಯುಗಗಳಷ್ಟು ಹಳೆಯ ಈ ಭೂಮಿಯ ಬಾಳು
ಲೆಕ್ಕಕ್ಕೆ ಸಿಗುವುದಿಲ್ಲ ಮನುಜನ ಒಂದಾದರು ಹರಳು

ಸುರಿಸುರಿದು ಮರಳ ಎತ್ತೆತ್ತರಕ್ಕೆ
ಕಟ್ಟುವೆವೆಂದು ದೊಡ್ಡ ಪಿರಮಿಡ್ಡುಗಳಿರದ್ದಕ್ಕೆ
ಸುರಿದಾಗ ಸರಿದು ಜಾರಿ ಹೊರಳುವ ಮರಳು
ಜೊತೆಗಿಲ್ಲದಾಗ ಸುಣ್ಣ ಗಾರೆಯ ತಿರುಳು

ಮತ್ತೆ ಮತ್ತೆ ಸಾಗೀತು ಈ ಯುದ್ಧದ ಗಾಣ
ಗುರುತಿಲ್ಲದೆಯೇ ಭೂಮಿಯಲ್ಲಿ ಮನುಷ್ಯನೆಂಬೊಂದು ಯಾನ

*

ಈ ಲೇಖನದ ಕುರಿತು ನಿಮ್ಮ ಅಭಿಪ್ರಾಯ ಬರೆಯಿರಿ

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X