• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯುದ್ಧವೆಂದರೆ ರಕ್ತಪಾತ. ಯುದ್ಧವೆಂದರೆ ಹಿಂಸೆ. ಯುದ್ಧವೆಂದರೆ ಕನಸುಗಳ ಮೇಲೆ ಕತ್ತಿಯ ಆಕ್ರಮಣ. ಯುದ್ಧವೆಂದರೆ ವಿಧವೆಯರ ಸಂತಾನ ವೃದ್ಧಿ. ಇಂಥ ಯುದ್ಧದ ವಿರುದ್ಧ ಮಾನವೀಯತೆ ಗೆಲ್ಲುವುದು ಯಾವಾಗ ?

By Staff
|
 • ಎಂ.ಆರ್‌.ದತ್ತಾತ್ರಿ, ಫಾಸ್ಟರ್‌ ಸಿಟಿ, ಕ್ಯಾಲಿಫೋರ್ನಿಯಾ
 • M.R.Dattathri , The Authorಇದು ಹಳೆಯ ಸುದ್ದಿ. ಎರಡೂವರೆ ವರ್ಷಗಳ ಹಿಂದೆ ನಡೆದದ್ದು. ಪ್ರಪಂಚದ ಬಹುತೇಕ ಪತ್ರಿಕೆಗಳಲ್ಲಿ ಕಾಣಿಸಿಕೊಂಡದ್ದು. ಕೇಬಲ್‌ನ ನ್ಯೂಸ್‌ ಚ್ಯಾನಲ್‌ಗಳಿಗೆ ಸೆನ್ಸೇಷನಲ್‌ ಆದದ್ದು. ಅರಬ್ಬರನ್ನು ಕೆರಳಿಸಿದ್ದು. ಇಸ್ರೇಲ್‌ ಉತ್ತರ ಹೇಳಲು ಹೋಗಿ ತೊದಲುವಂತೆ ಮಾಡಿದ್ದು.

  ಹನ್ನೆರಡು ವರ್ಷದ ಬಾಲಕ ಮೊಹಮದ್‌ ಅಲ್‌ದುರಾ ತನ್ನ ತಂದೆಯಾಡನೆ ಹೊರಟದ್ದು ಕಾರೊಂದನ್ನು ಕೊಂಡುಕೊಳ್ಳುವ ಸಡಗರದಿಂದ. ಒಮ್ಮೆ ಉಪಯೋಗಿಸಲ್ಪಟ್ಟು ಮತ್ತೆ ಮಾರಾಟಕ್ಕೆ ನಿಂತ ಕಾರುಗಳ ಸಂತೆ ಅಲ್ಲೆಲ್ಲೋ. ತಂದೆ ಮಗ ಅಲ್ಲೆಲ್ಲಾ ತಿರುಗಾಡಿದರು. ಮಗನಿಗೆ ಇಷ್ಟವಾಗುವ ಕಾರನ್ನೇ ತರಬೇಕೆಂಬುದು ಅವನ ತಂದೆಯ ಬಯಕೆ.

  ವಾಪಸ್ಸು ಮನೆಗೆ ಬರುವ ಹಾದಿಯಲ್ಲಿ ಗುಂಡಿನ ಚಕಮಕಿಯ ಶಬ್ದ. ಪ್ಯಾಲೆಸ್ಟೈನಿನಲ್ಲಿ ದಿವಾರಾತ್ರಿ ಬದುಕುವವರಿಗೆ ಇದು ಆಶ್ಚರ್ಯದ ವಿಷಯವೇನಲ್ಲ. ಆದರೆ ಬರುಬರುತ್ತಾ ಬುಲೆಟ್‌ಗಳು ಇವರ ಹತ್ತಿರವೇ ಹಾರತೊಡಗಿದವು. ಮತ್ತೇನೂ ತೋಚದೆ ತಂದೆ ಮಗ ರಸ್ತೆಯ ಮೂಲೆಯಾಂದರಲ್ಲಿ ಕಸದ ತೊಟ್ಟಿಯಂತಿದ್ದ ಸಿಮೆಂಟ್‌ ಬ್ಯಾರೆಲ್‌ನ ಪಕ್ಕದಲ್ಲಿ ಮುದುಡಿ ಕುಳಿತರು. ಹುಡುಗನ ಮುಖ ಭಯಭೀತವಾಗಿ ನೀಲಿಗಟ್ಟಿಹೋಗಿತ್ತು. ಮುದುಡಿ ಕುಳಿತ ಅಪ್ಪನ ಹಿಂಭಾಗದಲ್ಲಿ ಅವಿತುಕೊಳ್ಳಲು ಹೆಣಗಾಡುತ್ತಿದ್ದ.

  ಯಾರೋ ಇವರನ್ನೇ ಗುರಿ ಇಟ್ಟು ಗುಂಡು ಹಾರಿಸುತ್ತಿರುವಂತೆ ಹತ್ತಿರದ ಸಿಮೆಂಟ್‌ ಬ್ಯಾರೆಲ್‌ಗೆ ಗುಂಡುಗಳು ಬಂದು ಬೀಳತೊಡಗಿದವು. ‘ನಾವು ಯೋಧರಲ್ಲ , ಭಯೋತ್ಪಾದಕರಲ್ಲ , ಸೈನ್ಯದ ಕಡಿವಾಣ ಹಿಡಿದವರಲ್ಲ , ರಾಜಕೀಯದ ಮುಖವಾಡ ಹೊತ್ತವರಲ್ಲ , ನಮ್ಮ ಬಲಿ ಏಕೆ ?’ ಮೊಹಮದ್‌ನ ತಂದೆ ಬೊಬ್ಬೆ ಹಾಕುತ್ತಿದ್ದ. ಹುಡುಗ ಭಯದಿಂದ ಅಳತೊಡಗಿದ. ಆಗ ಎಲ್ಲಿಂದಲೋ ಬಂದ ಒಂದು ಬುಲೆಟ್ಟು ಮೊಹಮದ್‌ನ ಎದೆಯನ್ನು ಸೀಳಿ ಅವನು ಅಪ್ಪನ ತೊಡೆಯ ಮೇಲೆ ಕುಸಿಯುವಂತೆ ಮಾಡಿತು. ಜೀವ ಹೋದ ಮೇಲೆ ರಣರಂಗದಲ್ಲಿ ಎಲ್ಲವೂ ಶಾಂತ! ಗುಂಡುಗಳಿಗೆ ಹೆದರಬೇಕಿಲ್ಲ, ರಾಜ್ಯ ಯಾರ ವಶವಾಯಿತು ಎಂದು ಚಿಂತಿಸಬೇಕಿಲ್ಲ. ಯಹೂದಿಗಳೋ, ಮುಸಲ್ಮಾನರೋ ಎಂಬ ಪ್ರಶ್ನೆಗೆ ಅವಕಾಶವೇ ಇಲ್ಲ. ಮೊಹಮದ್‌ನ ದೇಹ ನಿಮಿಷದಲ್ಲಿ ಶಾಂತವಾಗಿ ಅಪ್ಪನ ತೊಡೆಯ ಮೇಲೆ ಮಲಗಿತ್ತು.

  ಮನೆಗೆ ಕಾರುತರುವ ಬಣ್ಣದ ಕನಸುಗಳ ಹುಡುಗನನ್ನು ಮಣ್ಣು ಮಾಡಿದವರು ಯಾರು? ಇಂದಿಗೂ ವಿವಾದ ನಡೆಯುತ್ತಲೇ ಇದೆ. ಇಸ್ರೇಲ್‌ ಟ್ರಾಜೆಕ್ಟರಿಗಳನ್ನು ಎಳೆದು ನನ್ನ ಸೈನ್ಯ ಇಲ್ಲಿತ್ತು , ಗುಂಡು ಈ ಕೋನದಿಂದ ಬಿದ್ದಿತ್ತು , ನಾವು ಹೊಡೆಯಲು ಸಾಧ್ಯವೇ ಇಲ್ಲ ಎಂದು ವಿವರಣೆಗಳನ್ನು ಕೊಡುತ್ತಿದೆ. ನಮ್ಮವರನ್ನು ನಾವೇ ಹೊಡೆಯುತ್ತೇವೆಯೋ ? ನುಣುಚಿಕೊಳ್ಳುವ ಮಾತಿದು ಎಂದು ಪ್ಯಾಲೆಸ್ಟೈನ್‌ ಹೂಂಕರಿಸುತ್ತಿದೆ. ಆದರೆ ನಮಗೆ ಮೊಹಮದ್‌ನನ್ನು ಯಾರು ಕೊಂದರು ಎನ್ನುವುದು ಮುಖ್ಯವೇ?

  ಎಷ್ಟೋ ಮೊಹಮದರು, ಎಷ್ಟೋ ಶ್ರೀರಾಮರು, ಎಷ್ಟೋ ಮೋಸಸ್‌ರು ಕನಸಿನ ಕಣ್ಣನ್ನು ಬಿಡುವ ಮುನ್ನವೇ ತುಟಿಯಿಂದ ಜಾರಿದ ಜೊಲ್ಲನ್ನು ಒರೆಸಿಕೊಳ್ಳುವ ಮುನ್ನವೇ ಹತ್ತಿರದ ಆಟಿಕೆಯನ್ನು ಗಟ್ಟಿಯಾಗಿ ಹಿಡಿದುಕೊಳ್ಳುವ ಮುನ್ನವೇ ಯಾರದೋ ಜಿಹಾದಿಗೆ, ಯಾರದೋ ಹುಲಿಸೈನ್ಯ ಕಟ್ಟುವ ಬಯಕೆಗೆ, ಯಾರದೋ ಕಣ್ಣಲ್ಲಿ ಹೊಳೆಯುವ ವಜ್ರದ ಗಣಿಗಳ ಉನ್ಮಾದದ ಹೊಳಪಿಗೆ, ಯಾವುದೋ ತೈಲಬಾವಿಯ ಆಳದ ರಾಜಕೀಯಕ್ಕೆ ತಮಗರಿವಿಲ್ಲದಂತೆ ಆಟದ ಪಗಡೆಯಾಗುತ್ತಿದ್ದಾರೆ. ಬೆಳೆದು ನಿಂತ ಹೆಮ್ಮರಗಳ ಪಿತೂರಿಗೆ ಬುಡದಲ್ಲಿನ ಚಿಗುರುಗಳು ಮುದುಡಿಹೋಗುತ್ತಿವೆ. ಚಿತ್ತಾರದ ಹೂವುಗಳ ಹೊತ್ತ ಪುಟ್ಟ ಅಂಗಿಯನ್ನು ಭೇದಿಸಿ ಹಾಲ್ಗನಸುಗಳ ಎದೆಯನ್ನು ಅಗ್ನಿಯುಂಡೆಗಳು ಹೊಕ್ಕುತ್ತಿವೆ. ನಾವು ಮಾತ್ರ ಅವಕಾಶ ಸಿಕ್ಕಾಗಲೆಲ್ಲಾ ವೇದಿಕೆಯ ಪೋಡಿಯಂಗೆ ಎರಡು ಮೊಣಕೈಗಳನ್ನೂ ಹಿತವಾಗಿ ಊರಿಕೊಂಡು ಗಟ್ಟಿಯಾದ ಸ್ವರದಲ್ಲಿ ‘ನಮ್ಮ ಭಾವೀ ಜನಾಂಗದ ಆಶೋತ್ತರ’ಗಳ ಬಗ್ಗೆ ಭಾಷಣ ಮಾಡುತ್ತೇವೆ, ವಿಚಾರ ಸಂಕಿರಣಗಳನ್ನು ನಡೆಸುತ್ತೇವೆ. ಮನೆಯ ಅಂಗಳದ ಕುಂಡದಲ್ಲಿ ನಗುವ ಗುಲಾಬಿ ಹೂವಿನಂತೆ ಸುಖವಾಗಿದ್ದಾರೆ ಎಂದುಕೊಳ್ಳುತ್ತೇವೆ. ಮೊಹಮದ್‌ ಅಲ್‌ದುರಾ ನೆನಪಿಗೆ ಬರುವುದಿಲ್ಲ.

  ಹೇಗೆ ಬಂದಾನು? ಒಬ್ಬ ಅನಾಮಿಕ ಪತ್ರಕರ್ತನ ಕ್ಯಾಮೆರಾದ ಕಣ್ಣಿಗೆ ಅವನು ಮತ್ತು ಅವನಪ್ಪನ ದುರ್ದೆಶೆ ಬೀಳದಿದ್ದರೆ ಮಹಮದ್‌ ಅಲ್‌ದುರಾ ಪ್ರತಿದಿನಾ ಯುದ್ಧಕ್ಕೆ ಸಾಯುವ ಸಾವಿರಾರು ಮಕ್ಕಳಲ್ಲಿ ಒಬ್ಬನಾಗಿ ನಿಶ್ಯಬ್ದವಾಗಿ ಹೋಗುತ್ತಿದ್ದ . ಕ್ಯಾಮೆರಾದ ರೀಲಿಗೆ ಚಿತ್ರವಾಗಿದ್ದಕ್ಕೆ ಆದದ್ದಾದರೂ ಏನು? ಒಬ್ಬರನ್ನೊಬ್ಬರು ದೂರುವ ರಾಜಕೀಯವಾಗುವುದ ಬಿಟ್ಟು.

  ನಾನು ಹಿಂದೆ ಕೆಲಸಮಾಡುತ್ತಿದ್ದ ಕಂಪನಿಯಲ್ಲಿ ಸಹೋದ್ಯೋಗಿಯಾಗಿದ್ದ ಸುರೀಂದ್ರ ಎನ್ನುವ ಕಾಶ್ಮೀರಿ ಪಂಡಿತ ಮನೆತನದವರು ಒಮ್ಮೆ ಇತರ ಭಾರತೀಯರೊಂದಿಗೆ ಯಾವುದೋ ಚರ್ಚೆಯ ಸಂದರ್ಭದಲ್ಲಿ ತಮ್ಮ ಬಾಲ್ಯದ ಅನುಭವವನ್ನು ಹಂಚಿಕೊಂಡಿದ್ದರು. ಸುರೀಂದ್ರ ಆಗಿನ್ನೂ ಹೈಸ್ಕೂಲ್‌ ಓದುತ್ತಿರುವ ಹುಡುಗ. ಶ್ರೀನಗರದ ಹತ್ತಿರದ ಒಂದು ಸಣ್ಣ ಊರಿನವರು. ಒಮ್ಮೆ ಶಾಲೆಯಿಂದ ಮನೆಗೆ ಹಿಂತಿರುಗುವಾಗ ಇಬ್ಬರು ದಾಂಡಿಗರು ಅಡ್ಡಗಟ್ಟಿದರಂತೆ. ಅವರಿಬ್ಬರ ಕೈನಲ್ಲೂ ಬಂದೂಕು. ನೋಡಿದೊಡನೆಯೇ ಭಯೋತ್ಪಾದಕರೆಂದು ಹೇಳಲು ಬಹಳಷ್ಟು ಬುದ್ಧಿಶಕ್ತಿ ಬೇಕಿಲ್ಲ. ಕಾಶ್ಮೀರದಲ್ಲಿ ಭಯೋತ್ಪಾದನೆ ಉಚ್ಛ್ರಾಯಗೊಳ್ಳುತ್ತಿದ್ದ ಕಾಲವದು. ಹೆಸರು ಕೇಳಿದರು. ಇವನ್ಯಾರೆಂದು ಗೊತ್ತಾಯಿತು. ಕೊಂದೇ ಹಾಕುತ್ತಾರೆ ಎಂದುಕೊಂಡಿದ್ದನಂತೆ, ಆದರೆ ಅವರು ಕೊಲ್ಲಲಿಲ್ಲ ! ಅವನ ಶಾಲೆಯ ಕೈಚೀಲವನ್ನು ಕಿತ್ತುಕೊಂಡರು. ಬಟ್ಟೆಯನ್ನು ಕಳಚಿ ಮನೆಯ ತನಕ ಬರೀ ಮೈಯಲ್ಲಿ ನಡೆಯುವಂತೆ ಮಾಡಿದರಂತೆ! ಹುಡುಗ ಎಷ್ಟು ಹೆದರಿದನೆಂದರೆ ಮೂರು ದಿನ ಜ್ವರ ಬಂದು ಮಲಗಿದ. ಭಯ, ನಾಚಿಕೆ, ಅವಮಾನಗಳಿಂದ ಕುಗ್ಗಿಹೋದ. ಅದರ ಮುಂದಿನ ವಾರವೇ ಅವನ ಇಡೀ ಸಂಸಾರ ಕಾಶ್ಮೀರವನ್ನು ತ್ಯಜಿಸಿ ದೆಹಲಿಗೆ ವಲಸೆ ಹೋಯಿತಂತೆ.

  ಸುರೀಂದ್ರ ಇಂದಿಗೂ ಬೆಚ್ಚಿಬೀಳುತ್ತಾರಂತೆ. ಯಾರೋ ಬಂದು ರಟ್ಟೆ ಹಿಡಿದಂತೆ, ಬಟ್ಟೆಗಳನ್ನು ಕಿತ್ತಾಡಿದಂತೆ. ಗನ್ನಿನ ಕೀಲುಗಳಿಗೆ ಆರೈಕೆ ಮಾಡಿ ಕೊಳೆಯಿಂದ ಕಪ್ಪುಗಟ್ಟಿದ ಉಗುರುಗಳು ಬೆನ್ನಿನ ಮೇಲೆ ಚುರುಕ್‌ ಎಂದು ಪರಚಿದಂತೆ! ಗಹಗಹಿಸುವ ನಗು, ವ್ಯಂಗ್ಯ, ದ್ವೇಷಗಳು ಮಾಡಿದ ಹಸಿಗಾಯಗಳ ಚುಮು ಚುಮು ನೋವು......

  ಸುರೀಂದ್ರನ ಕೈಚೀಲದಲ್ಲಿ ಏನು ಸಿಕ್ಕರಬಹುದು ಆ ಕೊಲೆಪಾತಕಿಗಳಿಗೆ ? ಚಾರ್ಲ್ಸ್‌ ಸಿಮಿಕ್‌ನ ಆರ್ಫನ್‌ ಫ್ಯಾಕ್ಟರಿ (‘ತಬ್ಬಲಿಗಳ ಕಾರ್ಖಾನೆ!’) ಎನ್ನುವ ಪ್ರಬಂಧವನ್ನು ಓದಬೇಕು ನೀವು. ಯುದ್ಧ ಪ್ರದೇಶದ ಮಕ್ಕಳ ಕೈಚೀಲವನ್ನು ತೆರೆದರೆ ಎದೆ ಒಡೆಯುತ್ತದೆ ಎನ್ನುತ್ತಾನೆ. ತಾನೇನಾದರೂ ಸತ್ತರೆ ಆ ವೇಳೆಗೆ ತನ್ನ ಬಳಿ ಇರಲಿ ಎಂದು ತಾನು ಪ್ರೀತಿಸುವ ಕೆಲವು ವಸ್ತುಗಳನ್ನು ಇಟ್ಟುಕೊಂಡಿರುತ್ತವಂತೆ. ಒಂದು ಕಾಲು ಮುರಿದು ಹೋಗಿರುವ ಸೂಪರ್‌ ಮ್ಯಾನ್‌ನ ಗೊಂಬೆ, ಬಚ್ಚೆಯಂತಿರುವ ನುಣ್ಣನೆಯ ಬಳಪದ ಕಲ್ಲು , ತಾನೇ ಬರೆದ ಅಮ್ಮ ಅಪ್ಪನ ಚಿತ್ರ, ಅಮ್ಮನ ಒಂದು ಗಾಜಿನ ಬಳೆ! ಸುರೀಂದ್ರನ ಬ್ಯಾಗಿನೊಳಗೆ ಇಣುಕಿದ ಮೇಲೆ ಆ ಭಯೋತ್ಪಾದಕರಿಗೆ ಎದೆ ಬಿರಿಯಲಿಲ್ಲವೆ? ಯಾವುದಕ್ಕೂ ಎದೆ ಬಿರಿಯದ ಸ್ಥಿತಿಗೆ ಹೋದವರನ್ನು ರಿಪೇರಿ ಮಾಡುವುದಾದರೂ ಹೇಗೆ? ‘ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ?’

  ಯುದ್ಧ ಒಂದು ರೀತಿಯಲ್ಲಿ ವೈರಸ್‌ನಂತೆ. ಒಂದು ದೇಹ ಕ್ಷಿತಿಲವಾದರೆ ಗಾಳಿಯಲ್ಲಿ ಹಾರುತ್ತಾ ಮತ್ತೊಂದಕ್ಕೆ ನಡೆಯುತ್ತದೆ. ಒಂದು ತಲೆಮಾರಿನವರು ಮುದುಕರಾದರೆ ಆ ವೇಳೆಗಾಗಲೇ ಯುವ ಪೀಳಿಗೆಯ ಬೆನ್ನು ಹತ್ತಿರುತ್ತದೆ. ಒಂದು ಜನಾಂಗ ಅಳಿದು ಹೋದರೆ ಮತ್ತೊಂದು ಜನಾಂಗಕ್ಕೆ ಹುಚ್ಚು ಹಿಡಿಸಿರುತ್ತದೆ. ದ್ವೇಷ, ಕೋಪ, ಸೇಡುಗಳನ್ನು ಮಾಂತ್ರಿಕನ ಮಂತ್ರದಂಡದಷ್ಟು ಸುಲಭವಾಗಿ ಹಿಂದುಮುಂದಾಡಿಸುತ್ತದೆ. ನಮ್ಮ ನಿಮ್ಮೆನ್ನೆಲ್ಲಾ ಸೂತ್ರದ ಗೊಂಬೆಗಳಷ್ಟು ಸುಲಭವಾಗಿ ತನ್ನ ವಶದಲ್ಲಿ ಇಟ್ಟುಕೊಳ್ಳುತ್ತದೆ.

  ಪುರಾಣಗಳಿಂದ ಕಲಿಯಲಿಲ್ಲ ಎಂದರೆ ಚಿಂತೆ ಇಲ್ಲ , ಏಕೆಂದರೆ ಬಾಲಕನನ್ನು ಕುರುಕ್ಷೇತ್ರಕ್ಕೆ ಅಟ್ಟಿ ಕೈಕಟ್ಟಿ ಕುಳಿತ ದೊಡ್ಡಪ್ಪಂದಿರಿದ್ದಾರೆ ಅಲ್ಲಿ . ಇತಿಹಾಸವೂ ಕಲಿಸದಿರಬಹುದು, ಸ್ವಾತಂತ್ರ್ಯಕ್ಕೆ, ತಾನು ನಂಬಿಕೊಂಡ ಆದರ್ಶಗಳಿಗೆ ತನ್ನ ಮಕ್ಕಳನ್ನು ಪಣವಿಟ್ಟ ಸುಲ್ತಾನರಿದ್ದಾರೆ, ವೀರಾಧಿವೀರರಿದ್ದಾರೆ. ಆದರೆ ಮಾನವೀಯತೆಯಿಂದಲಾದರೂ ನಾವು ಕಲಿಯಬೇಕು!

  ಕಲಿಯುತ್ತೇವೆಯೇ?

  Click here to go to topಮುಖಪುಟ / ಸಾಹಿತ್ಯ ಸೊಗಡು

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more