• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗೆಳೆಯರ ಮನೆಗೊಂದು ಗುಲಾಬಿ !

By Staff
|

ಸುಮಾರು ದಿನಗಳ ಹಿಂದೆ ಊರಿಗೆ ದೂರವಾಣಿಯಲ್ಲಿ ಮಾತನಾಡುತ್ತಿದ್ದಾಗ ಹಿಂದಿನ ದಿನ ತಾನೇ ನನ್ನ ಅಣ್ಣನ ಹುಟ್ಟಿದ ದಿನವಾಗಿತ್ತೆಂದು ತಿಳಿದುಬಂದಿತು. ಇದು ನನಗೆ ಆ ಗಳಿಗೆಯವರೆಗೂ ನೆನಪಾಗಿರಲೇ ಇಲ್ಲ. ಕೂಡಲೇ ತಡವಾಗಿಯಾದರೂ ಹುಟ್ಟಿದ ದಿನದ ಶುಭಾಶಯಗಳನ್ನು ಅಣ್ಣನಿಗೆ ತಿಳಿಸಿದೆನಾದರೂ ನನ್ನ ಮನಸ್ಸನ್ನು ಇಡಿಯಾಗಿ ಅಪರಾಧೀ ಮನೋಭಾವವೊಂದು ಆವರಿಸಿಕೊಂಡಿತು. ನಾನು ಹೇಗೆ ತಾನೇ ಇದನ್ನು ಮರೆತೆ? ಒಡಹುಟ್ಟಿದವನ ಹುಟ್ಟಿದ ದಿನವನ್ನು ನೆನೆಯಲಾರದಂತಹ ರಾಜಕಾರ್ಯವಾದರೂ ನನಗೇನಿತ್ತು? ಎಂದು ನನ್ನನ್ನು ನಾನೇ ನೂರು ಬಾರಿ ಶಪಿಸಿಕೊಂಡೆ.

ನಮ್ಮ ಮನೆಯಲ್ಲಿ ಹುಟ್ಟಿದ ದಿನಗಳನ್ನು ಎಂದಿಗೂ ಇಂಗ್ಲೀಷ್‌ ತಿಂಗಳು, ದಿನಾಂಕಗಳಿಗನುಗುಣವಾಗಿ ಆಚರಿಸುತ್ತಿರಲಿಲ್ಲ. ಅದರಲ್ಲೂ ನಮ್ಮೆಲ್ಲರ ನಿಜವಾದ ಜನನ ದಿನಾಂಕಗಳೇ ಬೇರೆ, ಶಾಲಾಕಾಲೇಜುಗಳ ದಾಖಲಾತಿಯಲ್ಲಿರುವುದೇ ಬೇರೆ. ಹೀಗಾಗಿ ಇವತ್ತಿಗೂ ನನಗೆ ನಮ್ಮ ಸಂಬಂಧಿಕರ, ಸೋದರ, ಸೋದರಿಯರ ಹುಟ್ಟಿದ ದಿನಾಂಕಗಳೊಂದೂ ತಿಳಿದೇ ಇಲ್ಲ ! ನಮ್ಮ ತಾಯಿ ಬದುಕಿರುವವರೆಗೂ ಊಟದೆಲೆಗೆ ಮೊದಲು ಒಂದು ಸೌಟು ಪಾಯಸ ಬಡಿಸಿ - ಇವತ್ತು ಹೊಳೆಹೊನ್ನೂರು ಸತ್ಯಧರ್ಮರ ಆರಾಧನೆ ನಿನ್ನ ದೊಡ್ಡಣ್ಣನ ಜನ್ಮದಿನವೆಂದೋ, ಇವತ್ತು ವಿಜಯ ದಶಮಿ ನಿಮ್ಮ ಸೋದರಮಾವನ ಹುಟ್ಟಿದ ದಿನವೆಂದೋ, ಇವತ್ತು ಭಾಗೀರಥಿ ಹಬ್ಬ, ನೀನು ಹುಟ್ಟಿದ್ದು ಇವತ್ತೇ ಎಂದು ಕರಾರುವಾಕ್ಕಾಗಿ ನೆನಪಿಟ್ಟುಕೊಂಡು ಎಲ್ಲರಿಗೂ ಸಿಹಿ ಉಣ್ಣಿಸದೆ ಬಿಡುತ್ತಿರಲಿಲ್ಲ. ಇಲ್ಲಿಗೆ ಬಂದು ಎಲ್ಲಾ ಆರಾಧನೆ, ಆಚರಣೆಗಳಿಂದ ಬಹುದೂರವಾದ ಮೇಲೆ ಆ ಸಂದರ್ಭಗಳಿಗೆ ತಳುಕುಹಾಕಿಕೊಂಡಿರುತ್ತಿದ್ದ ಹುಟ್ಟಿದ ದಿನಗಳನ್ನೂ ಕೂಡ ನಾನು ಮರೆತುಹೋಗಿದ್ದರಲ್ಲಿ ಅಂತಹ ಅಚ್ಚರಿಯೇನಿಲ್ಲ.

Roses for someone specialನಮ್ಮ ಹುಟ್ಟಿದ ಹಬ್ಬಗಳೂ ಕೂಡ ಅಂತಹ ಅದ್ಧೂರಿಯಾಗೇನೂ ಇರುತ್ತಿರಲಿಲ್ಲ. ಅವತ್ತಿನ ವಿಶೇಷವೆಂದರೆ ಎಣ್ಣೆಸ್ನಾನ ಮಾಡಿಕೊಂಡು ಹೊಸ ಬಟ್ಟೆ ಧರಿಸಿ, ದೇವರಿಗೆ, ಹಿರಿಯರಿಗೆ ನಮಸ್ಕರಿಸಿ ಪಾಯಸದೂಟ ಮಾಡುವುದು ಅಷ್ಟೇ. ಅದೂ ಹೊಸಬಟ್ಟೆ ತಂದಿದ್ದು ಮನೆಯಲ್ಲಿದ್ದರೆ. ಅವಿಭಕ್ತ ಕುಟುಂಬದ ಮಕ್ಕಳಾದ ನಮಗೆ ಇದಕ್ಕಿಂತ ಹೆಚ್ಚಿನ ವೈಭೋಗ ಅನುಭವಿಸಿದ ನೆನಪಿಲ್ಲ. ಈಗಿನಂತೆ ಕೇಕು ಕತ್ತರಿಸಿ ತಿಂದು, ಗೆಳೆಯ, ಗೆಳತಿಯರೊಂದಿಗೆ ಕೂಡಿಕೊಂಡು ‘‘ಹ್ಯಾಪಿ ಬರ್ತ್‌ಡೇ ಟೂ ಯೂ...’’ ಎಂದು ಹುಟ್ಟಿದದಿನ ಆಚರಿಸುವುದನ್ನು ನಾವು ಕಂಡಿದ್ದು ಸಿನಿಮಾಗಳಲ್ಲಿ ಮಾತ್ರ. ಕೇಕು ಎಲ್ಲರಿಗೂ ಕೊಟ್ಟು ಪಾರ್ಟಿ ಮಾಡುವುದಿರಲಿ, ಕೋಳಿಮೊಟ್ಟೆ ಸೇರಿಸಿರುತ್ತಾರೆಂದು ಅದನ್ನು ಮನೆಗೂ ಕೂಡ ತರಗೊಡುತ್ತಿರಲಿಲ್ಲ.

ಕಾರಣಗಳು ಏನೇ ಇರಲಿ, ಆತ್ಮೀಯರ, ಸ್ನೇಹಿತರ, ಜೀವನ ಸಂಗಾತಿಯ ಹುಟ್ಟಿದ ದಿನಗಳನ್ನು ಮರೆಯುವುದು ತಪ್ಪು. ಬೇರೆಯವರ ಹುಟ್ಟಿದ ದಿನವಿರಲಿ, ನಮ್ಮದೇ ಜೀವನದ ಪರಮ ಮಂಗಳಮಯ ಮಹೋತ್ಸವವಾದ ವಿವಾಹದ ದಿನವನ್ನು ಮರೆಯುವುದಕ್ಕಿಂತ ಕೆಟ್ಟ ಅಭ್ಯಾಸ ಇನ್ನೊಂದಿಲ್ಲ. ಇಂತಹ ಅಪರೂಪದ ದಿನಗಳನ್ನು ನೆನಪಿಟ್ಟುಕೊಂಡು ಸಂಬಂಧಿಸಿದ ಗೆಳೆಯ, ಗೆಳತಿ, ಹಿತೈಷಿ, ಸಹೋದ್ಯೋಗಿ, ಬಾಳಸಂಗಾತಿಗೆ ಮರೆಯದೆ ಒಂದು ಶುಭಾಶಯ, ಒಂದೆರಡು ಮೆಚ್ಚುಗೆಯ ನುಡಿ, ಸ್ನೇಹದ ಹಸ್ತಲಾಘವ, ಸಿಹಿ ಚುಂಬನ, ಸವಿ ಆಲಿಂಗನ, ಚಿಕ್ಕ ಉಡುಗೊರೆ, ಅರಳಿದ ಹೂಗೊಂಚಲು........ಉಹುಂ.....ಇವುಗಳಲ್ಲಿ ಯಾವುದೊಂದನ್ನು ಕೊಡಲೂ ನಿಮ್ಮಿಂದ ಸಾಧ್ಯವಾಗಲಿಲ್ಲವೆಂದರೆ ನಿಮ್ಮ ಎದೆಗೂಡು ಗರಿಕೆ ಹುಲ್ಲೂ ಕೂಡ ಬೆಳೆಯದ ಮರಳುಗಾಡು! ಹೃದಯವನ್ನು ಆವರಿಸಿರುವುದು ಗುಣವಾಗದ ದಟ್ಟ ದಾರಿದ್ರ್ಯ!

ಏನೋ ನೂರೆಂಟು ಕೆಲಸಗಳ ಗಡಿಬಿಡಿಯ ನಡುವೆ ಮರೆತುಹೋಯಿತು, ಅದರಿಂದಾದ ಪ್ರಮಾದವೇನು? ಎಂದು ಕೆಲವರು ಸಮರ್ಥಿಸಿಕೊಳ್ಳುವುದಿದೆ. ಆದರೆ ನನ್ನ ಪ್ರಕಾರ ಇದು ದುಶ್ಯಂತ ನೀಡಿದ ಪ್ರೇಮದುಂಗುರವನ್ನೇ ನದೀನೀರಿನಲ್ಲಿ ಕಳೆದುಕೊಂಡ ಶಾಕುಂತಲೆಯ ಔದಾಸೀನ್ಯದಷ್ಟೇ ಮಹಾ ಅಪರಾಧ. ನಾವು ಪ್ರತಿ ತಿಂಗಳು ಬರುವ ಕರೆಂಟು, ಗ್ಯಾಸು, ಟೆಲಿಫೋನ್‌ ಬಿಲ್ಲುಗಳನ್ನು ಕಟ್ಟಲು ಮರೆಯುವುದಿಲ್ಲ. ಪಾಕೇಟಿನ ತುಂಬಾ ಇರುವ ಹಲವಾರು ಕ್ರೆಡಿಟ್‌ ಕಾರ್ಡುಗಳ ಪೇಮೆಂಟುಗಳನ್ನು ರವಾನಿಸಲು ಮರೆಯುವುದಿಲ್ಲ. ನಡುದಾರಿಯಲ್ಲಿ ನಿಲ್ಲಿಸಿ ಟಿಕೇಟು ಹರಿಯುವ ಪೋಲೀಸನ ಚೆಕ್‌ ಕಳಿಸಲು ಮರೆಯುವುದಿಲ್ಲ. ಯಾಕೆ ಗೊತ್ತಾ ? ಒಂದೊಮ್ಮೆ ಮರೆತರೂ ಅವುಗಳಿಗೆ ತೆರಬೇಕಾಗಾದ ದಂಡ ಅಪಾರ!

ಆದರೆ ನಾವು ಮರೆಯುವುದೇನು? ಸ್ನೇಹಿತರ ಹುಟ್ಟಿದ ದಿನಗಳನ್ನು ಮರೆಯುತ್ತೇವೆ. ಸಾಧನೆ ತೋರಿದ ಮಿತ್ರನನ್ನು ಅಭಿನಂದಿಸಲು ಮರೆಯುತ್ತೇವೆ. ಸಂಕಟದಲ್ಲಿ ಜೊತೆಯಲ್ಲಿದ್ದ ಆಪ್ತರನ್ನು ಸಂಭ್ರಮದ ಉತ್ಸವಕ್ಕೆ ಆಹ್ವಾನಿಸಲು ಮರೆಯುತ್ತೇವೆ. ಸೆಲ್‌ಫೋನಿನಲ್ಲಿದ್ದ ಪುಟ್ಟ ಮಗಳ ಸಂದೇಶ ಆಲಿಸಲು ಮರೆತಿರುತ್ತೇವೆ. ಶುಭಾಶಯ ಪತ್ರಗಳಿಗೆ ಬರೆಯಬೇಕಾದ ವಿಳಾಸವನ್ನೇ ಎಲ್ಲೋ ಬರೆದಿಟ್ಟು ಮರೆಯುತ್ತೇವೆ. ಅಷ್ಟೆ ಏಕೆ? ನಮ್ಮದೇ ವಿವಾಹ ದಿನದ ಮಧುರ ನೆನಪನ್ನೇ ಮರೆತಿರುತ್ತೇವೆ. ಅಂತರಂಗದೊಳಗೆ ಅಡಗಿಸಿಕೊಳ್ಳಬೇಕಾದ ಮಂಗಳ ಸ್ಮೃತಿಯಾಂದನ್ನು ಅಂಗಳದಲ್ಲೆಲ್ಲೋ ಎಸೆದು ಬಂದಿರುತ್ತೇವೆ! ಯಾಕೆಂದರೆ ಇಲ್ಲಿ ಯಾರೂ ಯಾರಿಗೂ ಯಾವುದೇ ದಂಡ ತೆರಬೇಕಾಗಿಲ್ಲ. ಕ್ಷಮಾಪಣೆಯ ಪತ್ರ ಬರೆದು ಕೊಡಬೇಕಾಗಿಲ್ಲ. ಅಷ್ಟಕ್ಕೂ ಮನದೊಳಗೆ ಇಂಗಿಹೋದ ಒಂದು ನಿರಾಶೆಯ ನಿಟ್ಟುಸಿರಿಗೆ, ತುಟಿಯಂಚಿನಲ್ಲಿ ತೇಲಿ ಹೋದ ವಿಷಾದದ ನಗೆಯಾಂದಕ್ಕೆ ಬೆಲೆಕಟ್ಟುವವರಾದರೂ ಯಾರು?

ನಿಜ, ಇದು ವೇಗದ ಜೀವನ. ಸ್ಪರ್ಧೆಯ ಬದುಕು. ಇಲ್ಲಿ ಭಾವನೆಗಳಿಗೆ ಸ್ಥಾನವಿಲ್ಲ. ಎಲ್ಲರಿಗೂ ಓಟವೊಂದೇ ಗುರಿ, ಗಡಿಯಾರವೇ ದೇವರು! ಒಂದೆರಡು ಕ್ಷಣ ಅತ್ತಿತ್ತ ನೋಡುತ್ತಾ ಮೈಮರೆತರೂ ಸಾಕು, ಈ ಇಲಿಪಂದ್ಯದಾಟದಲ್ಲಿ ನಾವು ಎಲ್ಲರಿಗಿಂತ ಎಲ್ಲಿ ಬಹು ಹಿಂದೆ ಉಳಿದು ಹೋಗಿರುತ್ತೇವೋ ಎಂಬ ಅವ್ಯಕ್ತ ಭಯ! ಹಾಗೆಂದು ಈ ಬಾಳಿನ ಚಿಕ್ಕ ಚಿಕ್ಕ ಸಂಗತಿಗಳು ಕೊಡುವ ಬಹು ದೊಡ್ಡ ಖುಷಿಗಳನ್ನು ಕಳೆದುಕೊಂಡು ಬಿಡುವುದರಲ್ಲಿ ಏನಾದರೂ ಅರ್ಥವಿದೆಯೇ? ಬಿಡುವಿರದ ದುಡಿತದಲ್ಲಿ ಬದುಕಿನ ಬೆಡಗು ಬಲಿಯಾಗಲು ಬಿಡಬಾರದು. ತಲೆ ತುಂಬಿಕೊಂಡ ಬಗೆಹರಿಯದ ಸಮಸ್ಯೆಗಳು ನಮ್ಮ ಮೊಗದ ನಗೆಯನ್ನು ಕರಗಿಸಿ ಬಿಡಲು ನಾವು ಅವಕಾಶ ಕೊಡಬಾರದು. ಎಷ್ಟೇ ಕೆಲಸದ ಒತ್ತಡವಿರಲಿ, ಶರವೇಗದಲ್ಲಿ ಓಡುವ ಕಾರಿಗೆ ಒಂದು ನಿಮಿಷ ಬ್ರೇಕ್‌ ಹಾಕಿ ಗೆಳೆಯರ ಮನೆಗೊಂದು ಗುಲಾಬಿ, ಗೆಳತಿಯ ಮುಡಿಗೊಂದು ಮಲ್ಲಿಗೆ ತರುವುದು ಮರೆಯಬಾರದು!

ನನ್ನ ಪ್ರೀತಿಯ ಓದುಗರೇ, ಕೊನೆಯದಾಗಿ ನಿಮಗೊಂದು ಗುಟ್ಟನ್ನೂ ಹೇಳಿಬಿಡುತ್ತೇನೆ ಕೇಳಿ. ಇದನ್ನೆಲ್ಲಾ ನಾನು ಯಾಕೆ ಬರೆದು ನಿಮ್ಮ ಮುಂದೆ ತಲೆಚಚ್ಚಿಕೊಳ್ಳಬೇಕಾಯಿತೆಂದರೆ ಇದೇ ತಿಂಗಳ ಕೊನೆಯಲ್ಲಿ ಬರಲಿರುವ ನಮ್ಮ ಮದುವೆಯ ವಾರ್ಷಿಕೋತ್ಸವದ ದಿನವನ್ನು ನನ್ನವರಿಗೆ ನೆನಪು ಮಾಡಿಕೊಡಲು! ಅದೇನೋ ಹೇಳುತ್ತಾರಲ್ಲ, ರಾತ್ರಿಯೆಲ್ಲಾ ರಾಮಾಯಣ ಕೇಳಿ ಬೆಳಗಾಗೆದ್ದು... ಹಾಗಾಗದಿದ್ದರೆ ಸಾಕು ನನ್ನ ಪಾಡು! ಈ ಬಾರಿ ಹಾಗಾಗಲಾರದು ಅಲ್ಲವೇ?

ಮುಖಪುಟ / ಎನ್‌ಆರ್‌ಐ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more