ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಟನ್ನನ ಚಲನ ನಿಯಮಗಳು ಮತ್ತು ಕನ್ನಡಿಗರ ನಡತೆ

By Staff
|
Google Oneindia Kannada News

ನ್ಯೂಟನ್ನನ ಚಲನ ನಿಯಮಗಳು ಭೌತಿಕ ಲೋಕಕ್ಕೆ ಸೀಮಿತ. ವಸ್ತುವಿನ ಚಲನಶೀಲತೆ, ಬಲ, ಮತ್ತು ಕ್ರಿಯೆ-ಪ್ರತಿಕ್ರಿಯೆಗಳನ್ನು ವಿವರಿಸುವ ಈ ನಿಯಮಗಳು ಎಲ್ಲೆಡೆ, ಎಲ್ಲ ಕಾಲದಲ್ಲಿಯು ಅನ್ವಯಿಸುತ್ತವೆ. ಮನಸ್ಸು ಭೌತಿಕವಲ್ಲ. ಮನೋವೇಗ ಬೆಳಕಿನ ವೇಗಕ್ಕಿಂತ ಅತಿ ಹೆಚ್ಚು. ಆದರೂ, ಭೌತಿಕ ತಳಹದಿಯಾದ ದೇಹದ ಮೇಲೆ ಮನಸ್ಸು ಅವಲಂಬಿಸಿದೆ; ದೇಹವನ್ನು ಬಿಟ್ಟು ಮನಸ್ಸಿಗೆ ಸ್ವತಂತ್ರ ಅಸ್ತಿತ್ವ ಇಲ್ಲ. ಆದ್ದರಿಂದ, ನಮ್ಮ ಮನಸ್ಸು - ನಮ್ಮ ನಡವಳಿಕೆ ಮತ್ತು ಚಿಂತನೆ, ನಮ್ಮ ಮನಸ್ಸಿನ ಆಘಾತಗಳು, ನಮ್ಮ ಕ್ರಿಯೆ-ಪ್ರತಿಕ್ರಿಯೆಗಳು - ಕೂಡ ತಕ್ಕ ಮಟ್ಟಿಗೆ ಈ ಮೂರು ನಿಯಮಗಳನ್ನು ಅನುಸರಿಸಬಹುದೆ? ವಸ್ತು - ಮನಸ್ಸುಗಳ ಸಂಬಂಧ; ಬಿಡಿಸಲಾಗದ ಸಮಸ್ಯೆ; ಇದು ಒಂದು ಕಠಿಣ ತಾತ್ವಿಕ ವಿಷಯ ಎನಿಸಿದರೂ ಕನ್ನಡಿಗರ ಲೋಕದಲ್ಲಿ ಬಹಳ ಸುಲಭ!

ನ್ಯೂಟನ್ನನ ಮೊದಲನೆಯ ನಿಯಮವನ್ನು ತೆಗೆದುಕೊಳ್ಳೋಣ. ‘ವಸ್ತುವೊಂದು, ಹೊರಗಿನ ಬಲ ಇಲ್ಲದಿದ್ದರೆ, ತನ್ನ ಚಲನ ಸ್ಥಿತಿಯಲ್ಲೆ ಮುಂದುವರೆಯುತ್ತದೆ.’

Sir Isaac Newtonಕನ್ನಡಿಗರ ವಿಷಯದಲ್ಲಿ ಇದು ಬಹಳ ವಿಚಿತ್ರ. ಕನ್ನಡದ ಪರವಾಗಿ ಏನಾದರು ಮಾಡಬೇಕಾದರೆ ಇದು ಅಕ್ಷರಶಃ ನಿಜ. ಹೊರಗಿನ ಬಲ ಇಲ್ಲದೆ ಕನ್ನಡದ ಯಾವ ಒಳ್ಳೆಯ ಕಾರ್ಯಗಳೂ ಸಾಧ್ಯವಿಲ್ಲ. ಹೇಳಿಕೊಂಡು, ಬೇಡಿಕೊಂಡು, ಲಂಚ ಕೊಟ್ಟು, ಪುಸಲಾಯಿಸಿಯಾದರೂ, ಜಡತ್ವವನ್ನು ಮೀರಿ ಸ್ಥಿತಿ ಬದಲಾಯಿಸಬೇಕು. ಅದೆ, ಕನ್ನಡೇತರ ಕಾರ್ಯಗಳಲ್ಲಾದರೆ ಒಂದು ಕ್ಷಣ ಕೂಡ ತಮ್ಮ ಸ್ಥಿತಿಯಲ್ಲಿ ಉಳಿಯುವುದಿಲ್ಲ. ಅದಕ್ಕೆ ಯಾರ ಬಲವಂತವೂ ಬೇಕಿಲ್ಲ. ಮನೆಯಲ್ಲಿ, ಕನ್ನಡದ ಗೆಳೆಯರಲ್ಲಿ, ಹಿಂದಿ ಇಂಗ್ಲಿಷ್‌ ಮಾತಾಡಲು ನಮಗೆ ಯಾರು ಬಲವಂತ ಮಾಡಿದ್ದಾರೆ? ತ್ರಿಭಾಷಾ ಸೂತ್ರವನ್ನು ಬೇರೆಯವರು ಮೊದಲೆ ಹರಿದು ಹಾಕಿದ್ದರೆ, ಕರ್ನಾಟಕ ಸರಕಾರಕ್ಕೆ ಯಾರು ಒತ್ತಡ ಹೇರಿದರು? ಮೂಲ ಕನ್ನಡ ನಾಟಕಗಳನ್ನು ನೋಡದವರು, ಅವುಗಳ ಇಂಗ್ಲಿಷ್‌ ರೂಪಾಂತರಗಳನ್ನು ನೋಡಲು ರವೀಂದ್ರ ಕಲಾಕ್ಷೇತ್ರದಲ್ಲಿ ಕಿಕ್ಕಿರಿದು ತುಂಬುವವರು ಯಾರು? ಕನ್ನಡ ಚಲಚಿತ್ರವೊಂದು ರಾಷ್ಟ್ರ ಪ್ರಶಸ್ತಿ ಗಳಿಸಿದ ನಂತರ, ಸಬ್‌ ಟೈಟಲ್‌ನಲ್ಲಿ ನೋಡುವ ಗತಿ ತಂದುಕೊಂಡವರು ಯಾರು? ಪಾರ್ಟಿಗಳಲ್ಲಿ ಕುಡಿಯುವಂತೆ ಮಕ್ಕಳನ್ನು ಒತ್ತಾಯಿಸುವವರು ಯಾರು? ಬಿಯರು ಕುಡಿದು ಓಡಾಡುವ ‘ಗುಂಡಮ್ಮ’ಗಳನ್ನು ಸೃಷ್ಟಿಸಿದವರು ಯಾರು? ಇಂಗ್ಲಿಷ್‌ ಮಾತನಾಡದಿದ್ದರೆ ದಂಡ ಹಾಕಿಕೊಳ್ಳುವವರು ಯಾರು?

ಇನ್ನು, ಎರಡನೆಯ ಚಲನ ನಿಯಮದ ಪ್ರಕಾರ, ‘ವಸ್ತುವಿನ ವೇಗೋತ್ಕರ್ಷವು (ವೇಗದಲ್ಲಿ ಬದಲಾವಣೆ) ಹೊರಗಿನ ಬಲಕ್ಕೆ ಅನುಗುಣವಾಗಿ ಮತ್ತು ತನ್ನ ದ್ರವ್ಯತೆಗೆ ವಿಗುಣವಾಗಿ ಇರುತ್ತದೆ’. ತಮ್ಮತನ ಎನ್ನುವ ದ್ರವ್ಯರಾಶಿಯೆ ಇರದ ಕನ್ನಡಿಗರಿಗೆ ಹೊರಗಿನ ಬಲದ ಅಗತ್ಯವೆ ಇಲ್ಲ. ಬೆಳಕಿನ ಕಣಗಳಂತೆ ಪ್ರತಿಫಲಿಸುತ್ತ ಬೇರೆಯವರ ಮುಖವನ್ನು ಬೆಳಗಿದರೂ ಕಣ್ಣಿಗೆ ಕಾಣದ ಕನ್ನಡಿಗಳು ನಾವು. ಕಾವೇರಿ ಬೇಕೆ ? ಕೃಷ್ಣೆಯನ್ನೂ ಕೊಳ್ಳಿ, ತುಂಗೆಯನ್ನೂ ತಳ್ಳಿ. ಬೆಳಗಾಂವಿ ಬೇಕೆ ? ಬೆಂಗಳೂರಿಗೆ ಬನ್ನಿ. ಅದೆ, ಕನ್ನಡ ಪರವಾದ ಕಾರ್ಯವಾದರೆ ಅನಂತ ದ್ರವ್ಯರಾಶಿ ಉಳ್ಳವರಂತೆ, ಎಷ್ಟು ಒತ್ತಾಯಿಸಿದರೂ, ಒಂದು ಅಂಗುಲ ಕೂಡ ಮುಂದೆ ಸರಿಯುವುದಿಲ್ಲ.

ಮೂರನೆಯದಾಗಿ, ‘ಪ್ರತಿಯಾಂದು ಕ್ರಿಯೆಗೂ ಒಂದು ಸಮ ಮತ್ತು ವಿರುದ್ಧ ಪ್ರತಿಕ್ರಿಯೆ ಇರುತ್ತದೆ. ’ ಕನ್ನಡಕ್ಕೆ ಯಾರೆ ಏನು ಕೆಟ್ಟ ಕ್ರಿಯೆ ಮಾಡಲಿ, ಹಳಿಯಲಿ, ಅಪಕಾರ ಎಸಗಲಿ, ಮೂದಲಿಸಲಿ, ತಾತ್ಸಾರ ಮಾಡಲಿ, ಸಮವೂ ಅಲ್ಲದ ವಿರುದ್ಧವೂ ಅಲ್ಲದ ಯಾವ ಪ್ರತಿಕ್ರಿಯೆ ಇಲ್ಲದೆ, ‘ಅಯ್ಯೋ ಹೋಗಲಿ ಬಿಡಿ’ ಎಂದು ಮುದುರಿಕೊಳ್ಳುವುದೆ ನಮ್ಮ ದೊಡ್ಡ ಗುಣ. ಅದೆ, ಕನ್ನಡ ಪರ ಯೋಚನೆ ಮಂಡಿಸಿದರೆ, ಪರೋಕಿಯಲ್‌ ಮತ್ತು ಸಂಕುಚಿತ ವಿಚಾರ ಎಂದು ಕೂಡಲೆ ವಿರುದ್ಧ ಮತ್ತು ಹೆಚ್ಚಿನ ಪ್ರತಿಕ್ರಿಯೆ ಸಹಜ.

ಈ ನಡತೆಯನ್ನು ನಾವು ಉಪಕಾರಿಗಳು, ವಿಶಾಲ ಮನೋಭಾವದವರು, ಸಹಿಷ್ಣುಗಳು, ನಿಗರ್ವಿಗಳು, ಅದ್ವೈತಿಗಳು ಎಂದು ಸಮರ್ಥಿಸಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಅಭೌತಿಕ ಶಾಂತಿಯನ್ನು ಮೊದಲು ಗಳಿಸದೆ ಅಧ್ಯಾತ್ಮಿಕ ಶಾಂತಿ ಹೇಗೆ ಬಂದೀತು?

ಆದ್ದರಿಂದ, ನ್ಯೂಟನ್ನನನ್ನು ತಲೆ ಕೆಳಗೆ ಮಾಡಿ ಸೇಬು ಹಣ್ಣನ್ನು ಮತ್ತೆ ಗಿಡಕ್ಕೆ ಅಂಟಿಸುವ ಧೀರರು ನಾವು ಎಂದುಕೊಳ್ಳುವುದಕ್ಕಿಂತ, ಅವನ ನಿಯಮಗಳನ್ನು ಸ್ವಲ್ಪವಾದರೂ ಅನುಸರಿಸಿ ಭೌತಿಕ ಲೋಕವನ್ನು ಮೊದಲು ನಮ್ಮದು ಎಂದು ಆಗಿಸಿಕೊಳ್ಳುವುದು ಉಚಿತವಲ್ಲವೆ? ಮುಂದಿನ ಬಾರಿ ಶಾಂತಿ ಶಾಂತಿ ಶಾಂತಿ ಎಂದಾಗ ಈ ಮೂರು ನಿಯಮಗಳನ್ನೂ ನೆನೆಪಿಸಿಕೊಳ್ಳುತ್ತೀರಾ?

ಈಗ ಕಡ್ಡಾಯವಾಗಿ ಒಂದು ಕವಿತೆ:

ಅಯ್ಯೋ, ಹೋಗಲಿ ಬಿಡಿ!

ನೂತಣ್ಣ ಹೊಸೆದ ಚಲನ ಸೂತ್ರಗಳು ಮೂರು
ವಸ್ತು ಸ್ಥಿತಿ-ಗತಿಗಳ ನಿಖರ ವಿವರದ ಹಾರ.
ಮನಸಿಜನ ಮುಗಿಸಿ ಕಣ್ಮುಚ್ಚಿ ಕುಳಿತ ಮುಕ್ಕಣ್ಣ
ಮನುಜ ಮನಸಿನ ನಡತೆಗೆ ಏನು ಆಧಾರ?

ತನ್ನತನವಿರದ ಘನತೆ ಬರಿ ಪೊಳ್ಳು, ಮಣ್ಣು ಹುಡಿ;
ಬೆಳಗಿ ಹೆರವರ ತನ್ನ ಕಾಣದ ಕುರುಡು ಕನ್ನಡಿ.
ಕನ್ನಡಿಗ ಮನೆಯಲ್ಲೆ ಪರಕೀಯ - ಹೆರರದೇನು ಪಾತ್ರ
ತಾನಿರಲು ಬೀಸಿದೆಡೆ ಹೊರಳುವ ಗಾಳಿ ಹುಂಜ ಮಾತ್ರ?

ಕನ್ನಡಿಗ ಉಪಕಾರಿ, ಬಿಚ್ಚು ಮನಸಿನ ಉದಾರಿ,
ಸರಳ ಸಹನ ಮೂರುತಿ, ಅಧ್ಯಾತ್ಮ ಲೋಕ ಸಂಚಾರಿ!
‘ಶಾಂತಿ ಶಾಂತಿ ಶಾಂತಿ’ - ಕೋಟಿ ನ್ಯೂಟನ್‌ ಬಲದ ವೇದ ನುಡಿ
ಆಯ್ತು ಕನ್ನಡದ ಅರೆ ದೈನ್‌ ಮಂತ್ರ ‘ಅಯ್ಯೋ, ಹೋಗಲಿ ಬಿಡಿ!’


ಪೂರಕ ಓದಿಗೆ
ಕನ್ನಡಿಗನಿಗೆ ಹುಟ್ಟೇ ಶಾಪ!
ಬೆಂಗಳೂರಲ್ಲಿ ಯುವ ಗುಂಡಮ್ಮಗಳು


ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X