• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನನ್ನ ಪ್ರೀತಿಯ ಮೇಷ್ಟ್ರು

By Staff
|

*ಶಶಿಕಲಾ ಚಂದ್ರಶೇಖರ್‌, ವಾಷಿಂಗ್ಟನ್‌ ಡಿ. ಸಿ.

Tasmai Shree Guruve Namahaನಿಮ್ಮ ತನು ಮನ ಕರಗಿತ್ತೆಂದೇ ಮಹಾದೇವ ನಿಮ್ಮಿಂದ ಮಚ್ಚಿನವೆರಸಿಕೊಂಡಿದ್ದ. ನೀವು ಹದುಳಿಗರೆಂದೇ ನಿಮ್ಮಿಂದ ಮಹಾದೇವ ಗಂಧಾಕ್ಷತೆಯ ಧರಿಸಿಕೊಂಡಿದ್ದ . ನಿಮ್ಮಲ್ಲಿ ಅರಿವು ಕಣ್ದೆರೆದಿತ್ತೆಂದೇ ಮಹಾದೇವ ಆರತಿಯನ್ನು ಅರ್ಪಿಸಿಕೊಂಡಿದ್ದ ನಿಮ್ಮಿಂದ. ನಿಮ್ಮ ಭಾವ ಶುದ್ಧವೆಂದೇ ನೀವು ಒಪ್ಪಿಸಿದ ಧೂಪವನೊಪ್ಪಿಸಿಕೊಂಡಿದ್ದ ಮಹಾದೇವ. ನೀವು ಪರಿಣಾಮಿಗಳೆಂದೇ ನಿಮ್ಮಿಂದ ನೈವೇದ್ಯವ ಸ್ವೀಕರಿಸಿದ್ದ ಮಹಾದೇವ. ನೀವು ನಿಮ್ಮ ತ್ರಿಕರಣ ಶುದ್ಧವೆಂದೇ ನಿಮ್ಮಿಂದ ತಾಂಬೂಲ ಸೇವಿಸಿದ್ದ ಮಹಾದೇವ. ನಿಮ್ಮ ಹೃದಯ ಅರಳಿದ ಕಮಲವೆಂದೇ ಅಲ್ಲಿ ನೆಲೆಸಿದ್ದ ಮಹಾದೇವ. ನಿಮ್ಮ ಕರಸ್ಥಲವನಿಂಬುಗೊಂಡ ಆ ಮಹಾದೇವನಲ್ಲಿ ನೀವು ಐಕ್ಯರಾದಿರಿ.

ನಾನು ಮೇ ತಿಂಗಳಲ್ಲಿ ಊರಿಗೆ ಬರುವವಳಿದ್ದೆ. ಊರಿಗೆ ಬಂದ ತಕ್ಷಣ ನಾನು ಮಾಡಬೇಕೆಂದಿದ್ದ ಮುಖ್ಯವಾದ ಕೆಲಸಗಳಲ್ಲಿ ನಿಮ್ಮನ್ನು ಬಂದು ನೋಡುವುದು ಒಂದಾಗಿತ್ತು . ನೀವು ನನಗಾಗಿ ಕಾಯಲಿಲ್ಲ . ಮಹಾಮನೆಗೆ ಹೊರಟು ಬಿಟ್ಟಿರಿ. ಸಾವಿರದ ನೀವು ನನ್ನಂತಹ ನೂರಾರು ಜನರ ಅಂಗೈಯ್ಯ ಲಿಂಗದೊಳಗೊಂದಾಗಿ ವಾಜ್ಯರಾದಿರಿ.

ಪದವಿಯಲ್ಲಾಗಲೀ ಸಿರಿತನದಲ್ಲಾಗಲೀ ಹಿರಿತನವಿಲ್ಲದ, ವಯಸ್ಸಿನಲ್ಲೂ ಕಿರಿಯಳಾದ ನಾನು ದೂರದೂರಿಂದ ತವರಿಗೆ ಬಂದಾಗ ಪ್ರತೀ ಬಾರಿಯೂ ನೀವೇ ಮನೆತನಕ ಬಂದು ಅಕ್ಕರೆಯಿಂದ ಹರಸಿದಿರಿ. ಹಾರೈಸಿದಿರಿ. ನಿಮ್ಮ ಹಿರಿತನದ ಸಾಕ್ಷಿಯದು. ಈ ಬಾರಿ ನಾನೇ ನಿಮ್ಮ ಮನೆ ಬಾಗಿಲಿಗೆ ಬಂದು ಹರಸಿ ಎಂದು ಕೇಳುವ ಮುನ್ನ ಮಹಾಮನೆಗೆ ತೆರಳಿಬಿಟ್ಟಿರಿ.

ಇಪ್ಪತ್ತೆೈದು ವರ್ಷಗಳಿಂದ ಬಾಂಧವ್ಯ ಹುಟ್ಟಿದ್ದೆಂತು ? ಬೆಳೆದದ್ದು ಹೇಗೆ ? ಉಳಿದ ಬಗೆ ಎಂತಹುದು ಎಂದು ಯಾರಾದರೂ ಕೇಳಿದರೆ ಹೇಳಿಯೇನು ನನ್ನನುಭವ ನಾನೇನು ? ನನ್ನಂತಹ ನೂರಾರು ಮಂದಿ ನಿಮ್ಮ ಶಿಷ್ಯರು ಹೇಳಿಯಾರು, ಅವರ ಬದುಕನ್ನು ನೀವು ತಟ್ಟಿ, ಅವರ ಬದುಕಿನ ಒಂದು ಭಾಗವೇ ಆಗಿ ಹೋದ ನಿಮ್ಮ ವ್ಯಕ್ತಿತ್ವದ ಹಿರಿಮೆಯನ್ನು .

ಕಾಲೇಜಿನ ಆವರಣದಲ್ಲಿ ಪ್ರತಿಯಾಬ್ಬರನ್ನೂ ಮಗ/ ಮಗಳು ಎನ್ನುವ ಭಾವದಿಂದಲೇ ಮುಗುಳ್ನಕ್ಕು ಮಾತನಾಡಿಸಿದವರು ನೀವು. ಅದು ನಿಮ್ಮ ಮಾತೃ ಹೃದಯದ ಪ್ರೀತಿ ಮತ್ತು ಸೌಜನ್ಯದ ಪ್ರತೀಕ. ನೀವೆಂದೂ ನನಗೆ ವಿಶ್ವವಿದ್ಯಾನಿಲಯದ ಪಠ್ಯ ಬೋಧಿಸಲಿಲ್ಲ. ಕಾರಣ ನಾನು ವಾಣಿಜ್ಯದ ವಿದ್ಯಾರ್ಥಿನಿ. ಆದರೆ ನೀವು ನನಗೆ ಅಕ್ಷರದಾಚಿನ ಬದುಕು ಕಲಿಸಿದವರು. ನನ್ನಲ್ಲಿ ಸಾಹಿತ್ಯದಾಸಕ್ತಿ ಮೊಳೆಯಿಸಿದಿರಿ. ಲೌಕಿಕ ಜಗತ್ತಿನ ವ್ಯವಹಾರ ಪರಿಚಯಿಸಿದಿರಿ. ಆಧ್ಯಾತ್ಮ, ಆದರ್ಶ ಬೋಧಿಸಿದಿರಿ. ಎಲ್ಲಕ್ಕಿಂತ ಹೆಚ್ಚಾಗಿ ನಿಸ್ವಾರ್ಥ ಪ್ರೀತಿ ಸೌಜನ್ಯ ವಿನಯ ಕಲಿಸಿಕೊಟ್ಟಿರಿ. ಇದನ್ನೆಲ್ಲಾ ನೀವು ತರಗತಿಯ ಕರಿ ಹಲಗೆಯ ಮೇಲೆ ಬರೆದು ವಿವರಿಸಲಿಲ್ಲ. ಕುರ್ಚಿಯಲ್ಲಿ ಕುಳಿತು ಬೋಧಿಸಲಿಲ್ಲ . ಒಂದು ತರಗತಿಯ ಪಾಠ ಮುಗಿಸಿ ಸ್ಟಾಫ್‌ ರೂಂಗೆ ಹೋಗುವ ಹಾದಿಯಲ್ಲಿ , ಒಂದು ತರಗತಿಯ ಪಾಠ ಮುಗಿಸಿ ಮತ್ತೊಂದು ತರಗತಿಯ ಪಾಠ ಶುರು ಮಾಡುವ ಮುನ್ನ ಮಧ್ಯಂತರದ ಅವಧಿಯಲ್ಲಿ ಹೇಳಿದಿರಿ. ನೀವು ನನಗೆ ಬೋಧಿಸಿದ ಅವಧಿ.. ವಾರಕ್ಕೆ ಆರು ದಿನ, ವರ್ಷಕ್ಕೆ ಹತ್ತು ತಿಂಗಳು, ಸತತವಾಗಿ ಐದು ವರ್ಷಗಳು. ಅದಕ್ಕೆಂದೇ ಇಂದಿಗೂ ನಾನು ನಿಮ್ಮ ಶಿಷ್ಯೆ ಎನ್ನುವ ಹೆಮ್ಮೆ ಉಳಿದು ಹೋಗಿರುವುದು ನನ್ನಲ್ಲಿ .

ಪೋರಸ್‌ ನಾಟಕದಲ್ಲಿನ ‘ಉತ್ತರೆ’ಯಾಗಿ, ಮುಕ್ತಾಯಕ್ಕ ನಾಟಕದ ‘ಮುಕ್ತಾಯಿ’ಯಾಗಿ, ‘ಮೂಲಂಗಿ ಕಾಳು ಕೆಂಪಕ್ಕನ ಕೇಳು’ ನಾಟಕದ ‘ಕಲ್ಲಮ್ಮ’ನಾಗಿ, ವೇಷ ಧರಿಸಿ ವೇದಿಕೆಯ ಮೇಲಿದ್ದಾಗ ರಂಗದ ಹಿಂದೆ ಚೇತನವಾಗಿ ನಿಂತಿದ್ದಿರಿ. ವಿವೇಕಾನಂದ ವಿಚಾರಧಾರೆ ಮೆದುಳಿಗಿಳಿಸಿ ವಿವೇಕಾನಂದ ಜಯಂತಿಯ ಆಚರಣೆಯ ಮುಖ್ಯ ಕಾರ್ಯ ನಿರ್ವಾಹಕಳನ್ನಾಗಿ ಮಾಡಿ ನನ್ನಿಂದ ಆ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವಂತೆ ಮಾಡಿದಿರಿ.

ಚರ್ಚಾ ಸ್ಪರ್ಧೆಗಳಲ್ಲಿ ಎದುರು ಸಾಲಿನಲ್ಲಿ ಕುಳಿತು ಧೈರ್ಯ ತುಂಬಿದ್ದೀರಿ. ಶಿವಾನುಭವ ಪರೀಕ್ಷೆ ತೆಗೆದುಕೊಳ್ಳಲು ಪ್ರೋತ್ಸಾಹಿಸಿದಿರಿ. ಆ ಪರೀಕ್ಷೆಯಲ್ಲಿ ಅಂಕಗಳನ್ನು ನೋಡಿ ನನ್ನ ಹೆತ್ತವರಷ್ಟೇ ನೀವೂ ಸಂತೋಷ ಪಟ್ಟಿರಿ. ನನ್ನ ವ್ಯಕ್ತಿತ್ವ ರೂಪುಗೊಳ್ಳುತ್ತಿದ್ದ ಆ ವಯಸ್ಸಿನಲ್ಲಿ ನನ್ನ ತಂದೆ ತಾಯಿಯಂತೆ ತಿದ್ದಿ ತೀಡಿ ಸಲಹಿದಿರಿ. ಬೇವಿನ ಪುತ್ಥಳಿಯಾಗದೆ, ಬೆಲ್ಲದ ಪುತ್ಥಳಿಯಾಗಿ ಬೆಳಸಿದಿರಿ ನನ್ನನ್ನು. ನಂಬಿದ್ದನ್ನು ಧೈರ್ಯವಾಗಿ ಆಚರಿಸುವ ದಾಷ್ಟಿಕತೆ ನನ್ನಲ್ಲಿ ಬಂದದ್ದು ಹೇಗೆ ? ನಿಮ್ಮಿಂದ ಹಾಗೂ ನಿಮ್ಮಂತಹ ಇತರ ಗುರುಗಳ ಒತ್ತಾಸೆಯಿಂದ.

ಮನೆಯ ಒಳ ಹೊರಗೆ ಅಮ್ಮ ಅಪ್ಪನ ರಕ್ಷಣೆಯಂತೆ ಕಾಲೇಜು ಆವರಣದಲ್ಲಿ ನಿಮ್ಮ ರಕ್ಷಣೆ ಇತ್ತು. ಕಾಲೇಜು ಅಭ್ಯಾಸ ಮುಗಿಸಿ, ವಧುವಾಗಿ ನಿಂತವಳ ತಲೆಯ ಮೇಲೆ ಅಕ್ಷತೆ ಹಾಕಿ, ಹಾಲು ಸುರಿದು ಧಾರೆ ಎರೆದು ಕೊಟ್ಟಿರಿ. ನಿಮ್ಮ ಮಗಳಾದ ಶಿಷ್ಯೆ ನಾನು.

ಮೊದಲ ಬಾರಿ ನನ್ನ ಬರಹವೊಂದು ಸುಧಾದಲ್ಲಿ ಪ್ರಕಟವಾದಾಗ ಹೆಮ್ಮೆ ಪಟ್ಟಿರಿ, ಬರಹದ ಸಾಲುಗಳನ್ನು ನೆನಪಿನಿಂದ ಉಚ್ಛರಿಸಿ, ನನ್ನಲ್ಲಿ ಆತ್ಮವಿಶ್ವಾಸ ಹುಟ್ಟಿಸಿದಿರಿ. ಕಳೆದ ವರ್ಷದ ಭೇಟಿಯಲ್ಲಿ ‘ಒಂದೇ ಒಂದು ಆಸೆ ಇದೆಯಮ್ಮಾ.. ನಿನ್ನದೊಂದು ಪುಸ್ತಕ ಪ್ರಕಟ ಮಾಡಿ ಬಿಡಬೇಕು..’ ಎಂದಿರಿ. ಮತ್ತೇನನ್ನೂ ಎಂದೂ ಬಯಸದವರು, ನನ್ನಿಂದ ಪುಸ್ತಕವೊಂದರ ಪ್ರಕಟಣೆ ಬಯಸಿದ್ದಿರಿ. ಮೇ ತಿಂಗಳಲ್ಲಿ ನಾನು ಬಂದಾಗ ಹೇಳಬೇಕೆಂದಿದ್ದೆ, ‘ಸರ್‌ ನಾನು ಈ ವರ್ಷ ಪುಸ್ತಕ ಬಿಡುಗಡೆ ಮಾಡಲು ತಯಾರಿರುವೆ...’ ಎಂದು. ನಾನು ಹೇಳುವ ಮುನ್ನ, ಅದ ನೀವು ಕೇಳುವ ಮುನ್ನ ಹೊರಟು ಬಿಟ್ಟಿರಿ ಮಹಾ ಮನೆಗೆ.

ಈ ಜಗತ್ತಿನಲ್ಲಿ ಅನೇಕರು ಒಳ್ಳೆಯವರಾಗಿರಲು ಪ್ರಯತ್ನ ಪೂರ್ವಕ ಶ್ರಮ ಪಡುವರು. ನೀವಾದರೋ ಯಾವ ಶ್ರಮವನ್ನೂ ಪಡಬೇಕಿರಲಿಲ್ಲ.

ಒಳ್ಳೆಯತನ ನಿಮ್ಮ ಸಹಜ ಗುಣ. ನಿಮ್ಮ ಪ್ರೀತಿಯ ಛತ್ರಿಯಡಿಯಲ್ಲಿ ನೆರಳು ಪಡೆದ ನಮ್ಮೆಲ್ಲರ ಬದುಕು ಎಂದೆಂದಿಗೂ ತಂಪು. ನೀವಿಂದು ಕಣ್ಣಿಗೆ ಕಾಣುವ ಜಗತ್ತಿನಲ್ಲಿ ಇಲ್ಲದೆಯೂ ಇದ್ದೀರಿ. ಪ್ರೀತಿ ಪ್ರೇಮ ಸೌಜನ್ಯದ ಸಂಕೇತವಾಗಿ, ನೀವು ತಟ್ಟಿ ಮುಟ್ಟಿ ಹೋದ ಪ್ರತಿಯಾಬ್ಬರಲ್ಲೂ ಉಳಿದಿದ್ದೀರಿ.

ಈ ಗಳಿಗೆ ನಾನಲ್ಲಿಲ್ಲ . ಸಾವಿರ ಸಾವಿರ ಮೈಲುಗಳಾಚೆ ಕುಳಿತು ಈ ಸಾಲುಗಳನ್ನು ಬರೆಯುತ್ತಿರುವೆ. ಅಮೂಲ್ಯವಾದ ನಿಮ್ಮ ಬದುಕಿಗೆ, ನಿಮ್ಮ ಜೀವನ ಪ್ರೀತಿಗೆ, ನೀವಿತ್ತ ಅಕ್ಕರೆಗೆ, ನಿಮ್ಮೆಲ್ಲಾ ಅನೇಕಾನೇಕ ಶಿಷ್ಯರ ಪರವಾಗಿ ಶರಣು ಶರಣಾರ್ಥಿ.

ಪೂರಕ ಓದಿಗೆ-

‘ಗುರುವಿನ ಕರೆ’ : ಕರ್ಮಸಿದ್ಧಾಂತಕ್ಕೆ ಕನ್ನಡ ಭಾಷ್ಯ

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more