• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾಯೋಕಷ್ಟಸಾಯುವುದೇನು ಸುಲಭವಾ; ಅದೂ ಅಮೆರಿಕೆಯಂಥ ದೇಶದಲ್ಲಿ ! ‘ಸಾಯೋಕಷ್ಟ’ ಪ್ರಬಂಧ ಸಾವಿನ ಬಗೆಗಿನ ಚಿಂತನೆ ಮಾತ್ರವಲ್ಲ , ಮನುಷ್ಯ ಭಾವಪ್ರಪಂಚದ ಕುರಿತೂ ಚಿಂತಿಸುತ್ತದೆ.

By Staff
|
ಮುಖಪುಟ -->ಸಾಹಿತ್ಯ ಸೊಗಡು -->ಎನ್‌ಆರ್‌ಐ ಕನ್ನಡ ಕಲರವ -->ಸಮಾಚಾರ ಫೆಬ್ರವರಿ 27, 2003

ಸಾಯೋಕಷ್ಟ

ಸಾಯುವುದೇನು ಸುಲಭವಾ; ಅದೂ ಅಮೆರಿಕೆಯಂಥ ದೇಶದಲ್ಲಿ ! ‘ಸಾಯೋಕಷ್ಟ’ ಪ್ರಬಂಧ ಸಾವಿನ ಬಗೆಗಿನ ಚಿಂತನೆ ಮಾತ್ರವಲ್ಲ , ಮನುಷ್ಯ ಭಾವಪ್ರಪಂಚದ ಕುರಿತೂ ಚಿಂತಿಸುತ್ತದೆ.

  • ಡಾ. ಗುರುಪ್ರಸಾದ್‌ ಕಾಗಿನೆಲೆ ,

ರಾಚೆಸ್ಟರ್‌, ಮಿನೆಸೊಟ

Email : gkaginele@hotmail.com

Dr. Guruprasad Kagineleಎಪ್ಪತ್ತೈದು ವರ್ಷದ ಪ.ರ. ದೇಶಪ್ಪನವರಿಗೆ ಏನೋ ಒಂದು ಮಾರಣಾಂತಿಕ ಖಾಯಿಲೆ. ಡಾಕ್ಟರು ಹೇಳಿದ್ದರು- ಎಲ್ಲಾ ಚಿಕಿತ್ಸೆ ಮುಗಿದಿದೆ, ಇನ್ನು ನೀನು ಬದುಕುವುದಿಲ್ಲ. ಇರುವಷ್ಟು ದಿನ ಸುಖವಾಗಿರು ಎಂದು. ಪ.ರ.ದೇಶಪ್ಪನವರು ಅಂದುಕೊಂಡರು- ಮೈಸೂರಿನಲ್ಲಿದ್ದಿದ್ದರೆ ಇರುವಷ್ಟು ದಿನ ದೇವರುದಿಂಡರ ಹೆಸರು ಹೇಳಿಕೊಂಡು ಇರಬಹುದಿತ್ತು. ಸಾಧ್ಯವಾಗಿದ್ದಿದ್ದರೆ ಮಂತ್ರಾಲಯಕ್ಕೋ ತಿರುಪತಿಗೋ ಹೋಗಿಬರಬಹುದಿತ್ತು. ಸ್ವಲ್ಪ ದುಡ್ಡಿದ್ದಿದ್ದರೆ ಮೃತ್ಯುಂಜಯಹೋಮವನ್ನೂ ಮಾಡಿಸಬಹುದಿತ್ತು. ಮನೆಮಂದಿಯೆಲ್ಲರ ಜೊತೆಗೆ ಕಡೆಯದಿನಗಳನ್ನು ಕಳೆಯಬಹುದಿತ್ತು, ಅಂತ.

ಆದರೆ ದೇಶಪ್ಪನವರು ಇದ್ದಿದ್ದು ಅಮೆರಿಕಾದಲ್ಲಿ. ಅವರ ಶ್ರೀಮತಿಯವರು ಪುಣ್ಯಾತಗಿತ್ತಿ ಆರು ವರ್ಷ ಮುಂಚೆಯೇ ತೀರಿಕೊಂಡಿದ್ದರು. ಇಂಡಿಯಾದಲ್ಲಾಗುತ್ತದಲ್ಲ, ಮಲಗಿದವರು ಮಲಗಿದಹಾಗೆ- ಅಂಥ ಸುಖವಾದ ಸಾವು. ಇದ್ದ ಇಬ್ಬರು ಮಕ್ಕಳು ಆಕಡೆ ಒಂದೂವರೆಸಾವಿರ, ಈ ಕಡೆ ಒಂದುಸಾವಿರ ಮೈಲಿ ದೂರ ಇದ್ದರು. ದೇಶಪ್ಪನವರಿಗೆ ಸಿಕ್ಕಾಪಟ್ಟೆ ಹುಷಾರಿಲ್ಲದಿದ್ದಾಗ ಇಬ್ಬರೂ ಬಂದಿದ್ದರು. ಈ ಕಡೆಯವ ಮೂರುದಿನ, ಆ ಕಡೆಯಾಕೆ ಎರಡು ದಿನ. ಈ ಕಡೆಯಾತ ಆ ಕಡೆಯವಳಿಗೆ ಹೇಳಿದ್ದ ‘ಅಪ್ಪನಿಗೆ ಸಿಕ್ಕಾಪಟ್ಟೆ ಖಾಯಿಲೆ. ಪರಿಸ್ಥಿತಿ ಹದಗೆಟ್ಟಿದೆ. ಆತ ಇನ್ನು ಒಂಟಿ ಇರಕೂಡದು. ಇಲ್ಲೇ ನೋಡಿಕೊಳ್ಳಲು ವೃದ್ಧಾಶ್ರಮ (ನರ್ಸಿಂಗ್‌ ಹೋಂ)ದ ವ್ಯವಸ್ಥೆ ಏನಾದರೂ ಮಾಡಿಬಿಡು. ನಾನು ಮುಂದಿನವಾರ ಮತ್ತೆ ಬರ್ತೇನೆಂದ. ‘ಸರಿ’ ಎಂದಳು ಈ ಕಡೆಯಾಕೆ. ದೇಶಪ್ಪನವರಿಗೆ ಬಹಳ ಪಿರಿಪಿರಿಯಾಯಿತು. ಇದೆಂತದಪ್ಪಾ ಇದು, ನನ್ನನ್ನು ಊರಿಗೆ ಕಳಿಸಿಬಿಡ್ರಿ, ನಾನು ಅಲ್ಲೇ ಸುಖವಾಗಿ ಸಾಯುತ್ತೀನಿ ಅಂದರು. ಆದರೆ ಅವರು ಊರು ಬಿಟ್ಟು ಆಗಲೇ ನಲವತ್ತೈದು ವರ್ಷವಾಗಿತ್ತು. ಈಗ ಹೆಂಡತಿ ಸತ್ತ ಮೇಲೆ ಊರಿಗೆ ಹೋಗೇ ಇರಲಿಲ್ಲ. ಊರಿಗೆ ಹೋಗಿ ನಾನು ಸತ್ತರೆ ಸಾಯೋ ಸಮಯದಲ್ಲಿ ಬಾಯಿಗೆ ನೀರು ಬಿಡಲೂ ಯಾರೂ ಬರುವುದಿಲ್ಲ ಅನ್ನಿಸಿತ್ತು. ಆದರೆ ಖಂಡಿತಾ ನರ್ಸಿಂಗ್‌ ಹೋಂ ಸೇರಲಾರೆ. ಮನೆಗೇ ಬೇಕಾದರೆ ಯಾರಾದರೂ ಒಬ್ಬಳು ನರ್ಸ್‌ ಬಂದುಹೋಗೋ ವ್ಯವಸ್ಥೆ ಮಾಡಿಕೋತೀನಿ, ಬೇಕಾದರೆ. ಈಗ ನನ್ನ ಪಾಡಿಗೆ ನಾನಿದ್ದೇನೆ, ನೀವುಗಳು ಸುಮ್ಮನಿರಿ’ ಅಂದು ಮಕ್ಕಳ ಬಾಯಿ ಮುಚ್ಚಿಸಿದರು. ಇದರ ಮೇಲೆ, ದೇಶಪ್ಪನವರು ನರ್ಸಿಂಗ್‌ ಹೋಂಗೆ ಏನಾದರೂ ಹೋದಲ್ಲಿ ಅವರ ಒಂದೇ ಮನೆ ಸರಕಾರದ ವಶಕ್ಕೆ ಹೋಗುತ್ತಿತ್ತು. ತಾವು ಬಾಳಿ ಬದುಕಿದ ಮನೆಯಲ್ಲೇ ತಾವು ಕೊನೆಯತನಕ ಇರಬೇಕೆನ್ನುವುದು ದೇಶಪ್ಪನವರ ಆಸೆಯಾಗಿತ್ತು.

ಆಸ್ಪತ್ರೆಯ ವೈದ್ಯರು ದೇಶಪ್ಪನವರು ಮತ್ತು ಮಕ್ಕಳನ್ನು ಕೇಳಿದರು/ಹೇಳಿದರು‘ಕಾಯಿಲೆ ಉಲ್ಬಣವಾಗಿರೋದರಿಂದ ದೇಶಪ್ಪನವರು ಹೇಗೆ ಸಾಯಲು ಇಷ್ಟಪಡುತ್ತಾರೆ ಅನ್ನೋದನ್ನು ಮುಂಚೆಯೇ ಪ್ಲಾನ್‌ ಮಾಡಬೇಕು. ಕಾಯಿಲೆಯ ಸ್ವರೂಪ ತಿಳಿದಿರೋದರಿಂದ ನಾನು ಹೇಳುತ್ತಿದ್ದೀನಿ. ಯಾವುದೇ ರೀತಿಯ ಉನ್ನತ ಅಥವಾ ಸಾಧಾರಣಕ್ಕಿಂತ ಹೆಚ್ಚಾದ ವೈದ್ಯಕೀಯ ಚಿಕಿತ್ಸೆಗಳೂ ಇವರನ್ನು ಉಳಿಸಲಾರವು. ಈಗ ತೀರ ಕನಿಷ್ಟವಾದ, ಅಂದರೆ ನೋವಿರದಂತೆ, ಒದ್ದಾಡದೇ ಸಾಯುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಒಂದುವೇಳೆ, ನಿಮ್ಮ ಉಸಿರಾಟ ನಿಂತಲ್ಲಿ ಅಥವಾ ಹೃದಯದ ಬಡಿತ ನಿಂತರೆ, ನಾವು ಕೃತಕ ಉಪಕರಣಗಳನ್ನು ಬಳಸಿ ನಿಮ್ಮ ಹೃದಯವನ್ನು ಅಥವಾ ಉಸಿರಾಟವನ್ನು ಪುನಃ ಚಾಲನೆಗೊಳಿಸಬೇಕೇ. ಹಾಗೇನಾದರೂ ಚಾಲನೆಗೊಳಿಸಿದ ಪಕ್ಷದಲ್ಲಿ ಅದನ್ನು ಎಷ್ಟು ದಿನ ಹಾಗೆಯೇ ಕೃತಕವಾಗಿ ನಡೆಸಿಕೊಂಡು ಹೋಗಬೇಕು. ಹಾಗೆ ನಿಮಗೆ ಕೃತಕವಾಗಿ ಬದುಕುವುದಕ್ಕೆ ಇಷ್ಟವಿಲ್ಲದಿದ್ದರೆ ಈ ‘ಡು ನಾಟ್‌ ರಿಸಸಿಟೇಟ್‌’ ಅನ್ನೋ ಫಾರ್ಮ್‌ಗೆ ಸಹಿಮಾಡಿ’ ಅಂದರು.

ದೇಶಪ್ಪನವರು ಓದು ಬರಹ ತಿಳಿದಂತವರು. ಈ ನಡುವೆ ಹುಟ್ಟು ಸಾವುಗಳ ಬಗ್ಗೆ ಬಹಳ ಓದುತ್ತಿದ್ದರು. ಡೆರೆಕ್‌ ಹಂಫ್ರೆಯ ‘ಫೈನಲ್‌ ಎಕ್ಸಿಟ್‌’ ಓದಿದಮೇಲಂತೂ ಘನತೆಯಿಂದ ಸಾಯುವುದರ ಬಗ್ಗೆ ಅವರಿಗೆ ತೀರ ಗೌರವವಿತ್ತು. ‘ನಾನು ಬೇಕಾದಷ್ಟು ದಿನ ಬದುಕಿಯಾಗಿದೆ. ಈಗ ನನಗೆ ಹೀಗೆ ಮಶೀನ್‌ಗಳೀಂದ ಜೀವಂತವಾಗಿರಲು ನನಗಿಷ್ಟವಿಲ್ಲ’ ಎಂದು ‘ಡು ನಾಟ್‌ ರಿಸಸಿಟೇಟ್‌’ ಫಾರ್ಮ್‌ಗೆ ಸಹಿಹಾಕಿದರು. ಹಾಗೆ ಸಹಿ ಮಾಡುವುದರ ಅರ್ಥವನ್ನು ಡಾಕ್ಟರರು ಮತ್ತೊಮ್ಮೆ ಬಿಡಿಸಿ ಹೇಳಿದ್ದರು‘ಡು ನಾಟ್‌ ರಿಸಸಿಟೇಟ್‌’ ಅಂದರೆ ನಾವುಗಳು ನಿಮಗೆ ಅವಶ್ಯಕವಾದ ಚಿಕಿತ್ಸೆಯನ್ನು ಕೊಡುವುದಿಲ್ಲ ಎಂತಲ್ಲ. ನೀವು ಬದುಕಿರುವ ತನಕ ನೋವಿಲ್ಲದಂತಿರಲು ಮತ್ತು ನೀವು ಆರಾಮಾಗಿರಲು ಏನು ಬೇಕೋ ಅವನ್ನು ಮಾಡೇ ಮಾಡುತ್ತೇವೆ. ಆದರೆ, ನಿಮ್ಮ ಉಸಿರಾಟ ಅಥವಾ ಹೃದಯದ ಬಡಿತ ಇವೆರಡರಲ್ಲಿ ಯಾವುದು ನಿಂತರೂ ಪ್ರಕೃತಿ ಅದರ ಕೆಲಸ ಮಾಡಲು ಬಿಡುತ್ತೇವೆ. ಎಲ್ಲ ದೇವರಿಚ್ಚೆ’ ಎಂದು ಒಮ್ಮೆ ಆಕಾಶ ನೋಡಿದರು, ಡಾಕ್ಟರು.

ಪ್ರತಿ ಭಾನುವಾರ ಚರ್ಚಿಗೆ ಹೋಗುವ ಧಾರ್ಮಿಕ ಭಾವನೆಗಳುಳ್ಳ ಡಾಕ್ಟರಿವರು ಎಂದು ಯಾರೋ ದೇಶಪ್ಪನವರಿಗೆ ಹೇಳಿದ್ದರು. ದಿನಾ ದೇವರ ಪೂಜೆ ಮಾಡುವ ದೇಶಪ್ಪನವರಿಗೆ ಈ ಡಾಕ್ಟರರ ನೇರ ಮಾತು ಮೊದಲು ಕಹಿಯೆನಿಸಿದರೂ ನಂತರ ಸಾಂತ್ವನವನ್ನು ತಂದಿತ್ತು. ಡಾಕ್ಟರು ಹೇಳಿದ್ದರು ‘ನಾಳೆ ಒಂದು ಕೈಬಳೆ (ಬ್ರೇಸ್‌ಲೆಟ್‌) ಬರುತ್ತದೆ. ಅದರ ಮೇಲೆ ‘ಡು ನಾಟ್‌ ರಿಸಸಿಟೇಟ್‌’ ಎಂದು ಬರೆದಿರುತ್ತದೆ. ಅದನ್ನು ನೀವು ಯಾವಾಗಲೂ ಹಾಕಿಕೊಂಡಿದ್ದರೆ ಬೇರೆ ಊರಿನಲ್ಲಿದ್ದಾಗ ಏನಾದರೂ ಹೆಚ್ಚು ಕಮ್ಮಿಯಾದರೆ ಆ ಊರಿನ ಡಾಕ್ಟರುಗಳಿಗೆ ಏನು ಮಾಡಬೇಕು, ಏನು ಮಾಡಬಾರದು ಅನ್ನುವುದು ಗೊತ್ತಾಗುತ್ತದೆ ಅಂದರು.

ಮುಂದಿನ ಮೂರು ತಿಂಗಳು ಚೆನ್ನಾಗಿಯೇ ಕಳೆದರು, ದೇಶಪ್ಪನವರು. ಮನೆಗೆ ಮಾತ್ರೆ ಕೊಡುವುದಕ್ಕೆ ನರ್ಸ್‌ ಒಬ್ಬಳು ಬರುತ್ತಿದ್ದಳು. ಸ್ಯಾಂಡ್‌ವಿಚ್‌, ಪಿಜಾಗಳು ಅಭ್ಯಾಸವಾಗಿದ್ದರೂ ದೇಶಪ್ಪನವರಿಗೆ ಒಂದು ತುತ್ತು ಅನ್ನ ಬೇಕೆನಿಸುತ್ತಿತ್ತು. ಬೇಯಿಸಿಕೊಳ್ಳಲು ಕಷ್ಟವೇನೂ ಇರಲಿಲ್ಲ. ಬೇಜಾರು ಕಳೆಯಲು ತಮ್ಮ ಬಿಳಿ ಗೆಳೆಯರೊಂದಿಗೆ ಪೋಕರ್‌ ಆಡಲು ಹೋಗುತ್ತಿದ್ದರು. ಈ ಕಡೆಯವ ತನ್ನ ಮಕ್ಕಳ ಜತೆಗೆ ಮೂರುದಿನದ ವಾರಾಂತ್ಯಕ್ಕೆ ಬಂದಿದ್ದ. ಮೊಮ್ಮಕ್ಕಳು ಅಜ್ಜನ ಜೊತೆಗೆ ಆಟವಾಡಿ ಖುಶಿಪಟ್ಟಿದ್ದರು. ಆ ಕಡೆಯಾಕೆಗೆ ವಿಪರೀತ ಕೆಲಸದಿಂದ ಬರಲಾಗಲಿಲ್ಲವೆಂದೂ ಕ್ರಿಸ್‌ಮಸ್‌ಗೆ ತಾನಿರೋ ಊರಿಗೆ ಅಪ್ಪನನ್ನು ಕರೆಸುವ ಆಲೋಚನೆ ಮಾಡುತ್ತೇನೆಂದೂ ಕೇಳಿ ಫೋನ್‌ ಮಾಡಿದ್ದಳು. ತಾವು ಏನೂ ಯೋಚನೆಯಿಲ್ಲದೆ ತನಗೆ ಬೇಕಾದುದನೆಲ್ಲಾ ಕೇಳಬೇಕೆಂದೂ ಹೇಳಿದಳು. ಹಾಗೆಂದರೆ, ತಾನು ಸಾಯುವ ದಿನಗಳು ಇನ್ನೇನೂ ದೂರವಿಲ್ಲವೆಂದುಕೊಂಡರು, ದೇಶಪ್ಪನವರು.

ದೇಶಪ್ಪನವರು ಇದ್ದ ಊರಿಗೆ ಲಾಸ್‌ ವೆಗಾಸ್‌ ತುಂಬಾ ಹತ್ತಿರ. ಹತ್ತಿರವೆಂದರೆ ಬೆಳಿಗ್ಗೆ ಹೋಗಿ ರಾತ್ರಿ ಬರಬಹುದು. ಲಾಸ್‌ವೆಗಾಸ್‌ನ ಕಸಿನೋಗಳು ಜೂಜಾಡುವವರಿಗೆ ಅನುಕೂಲ ಆಗೋ ಹಾಗೆ ಬೆಳಿಗ್ಗೆಯೇ ಪುಕ್ಕಟೆ ಬಸ್ಸು ಕಳಿಸುತ್ತಿದ್ದರು. ಅಲ್ಲಿ ದಿನವೆಲ್ಲಾ ಜೂಜಾಡಿ ರಾತ್ರಿ ವಾಪಸ್ಸು ಹನ್ನೊಂದರ ಸುಮಾರಿಗೆ ಬಂದುಬಿಡಬಹುದು. ದೇಶಪ್ಪನವರ ಜತೆಯಿದ್ದ ಹೊಸ ಸ್ನೇಹಿತರೆಲ್ಲರೂ ‘ಇನ್ನೆಷ್ಟು ದಿನ ಬದುಕಿರ್ತೀವಿ, ನಾವುಗಳು. ಸಾಯೋದ್ರೊಳಗೆ ಒಮ್ಮೆ ಲಾಸ್‌ವೆಗಾಸ್‌ಗೆ ಹೋಗಿ ಬರೋಣ ’ ಅಂದರು. ದೇಶಪ್ಪನವರಿಗೆ ಯಾಕೋ ಮತ್ತೆ ಊರು ನೆನೆಪಾಯಿತು. ಹಾಗೆ ನೆನಪೂ ಕೂಡ ಬರಬಾರದೆಂದು ‘ಸರಿ, ಹೋಗೋಣ’ ಅಂದರು. ಮೇಲಾಗಿ ಅವರಿಗೂ ಈ ಮಾತ್ರೆ, ಕಾಯಿಲೆಗಳಿಂದ ಸ್ವಲ್ಪ ಮುಕ್ತಿ ಬೇಕಿತ್ತು.

ಸರಿ, ಐದು ಜನ ‘ಗೈ’ಗಳು ಲಾಸ್‌ವೆಗಾಸ್‌ಗೆ ಹೊರಟರು. ದೇಶಪ್ಪನವರಿಗೆ ಲಾಸ್‌ವೆಗಾಸ್‌ ಏನೂ ಹೊಸತಲ್ಲ . ತಮ್ಮ ಹೆಂಡತಿಯಿದ್ದಾಗ ವರ್ಷಕೊಮ್ಮೆ ಬರುತ್ತಿದ್ದರು. ಅವರ ಹೆಂಡತಿ ಈ ಲಾಸ್‌ವೆಗಾಸ್‌ ಪ್ರವಾಸಕ್ಕೆ ಪ್ರತಿಬಾರಿ ತೀರ್ಥಯಾತ್ರೆ ಎಂದು ಹಾಸ್ಯ ಮಾಡುತ್ತಿದ್ದರು. ಆದರೆ, ಈ ಗುಂಪಿನೊಂದಿಗೆ ಹೊಸತು. ಐದು ‘ಗೈ’ಗಳೂ ಪೂರಾ ಉತ್ಸಾಹಿತರಾಗಿದ್ದರು. ಸ್ಟ್ರಿಪ್ನಲ್ಲಿ ಓಡಾಡಿದರು. ಊರೆಲ್ಲಾ ತಿರುಗಾಡಿದರು. ಮೊಮ್ಮಕ್ಕಳ ವಯಸ್ಸಿನ ಹುಡುಗಿಯರು ಅರೆಮೈಯಲ್ಲಿ ತಂದುಕೊಟ್ಟಿದ್ದನ್ನು ಕುಡಿದರು. ಯಾವುಯಾವುದೋ ಶೋಗಳಿಗೆ ಹೋಗಿಬಂದರು. ಒಟ್ಟಿನಲ್ಲಿ ದೇಶಪ್ಪನವರು ಖುಷಿಯಾಗಿದ್ದರು.

ಆದರೆ, ಈ ಖುಷಿಯ ಭರಾಟೆಯನ್ನು ತಡೆದುಕೊಳ್ಳಲಾಗಲಿಲ್ಲವೇನೋ, ಅವರ ಹೃದಯಕ್ಕೆ. ಪಟಕ್ಕನೆ ಕೈಕೊಟ್ಟುಬಿಟ್ಟಿತು. ಪಟಪಟನೆಂದು ತಲ್ಲಣಿಸಿತೋ, ಅಥವಾ ನಿಂತೇಹೋಯಿತೋ, ಒಟ್ಟು ದೇಶಪ್ಪನವರು ಯಾವುದೋ ಒಂದು ಕಸಿನೋದಲ್ಲಿಯೇ ಜ್ಯಾಕ್‌ಪಾಟ್‌ ಮಶೀನ್‌ ಮುಂದೆ ಧೊಪ್‌ ಎಂದು ಬಿದ್ದರು. ಲಾಸ್‌ವೆಗಾಸ್‌ನ ಕಸಿನೋಗಳಿಗೆ ಇವೇನೂ ಹೊಸದಲ್ಲ . ಸರಿಯಾಗಿರುವವರ ಹೃದಯಗಳೇ ಗಕ್ಕೆನ್ನುವ ಉದ್ರೇಕ, ಉದ್ವೇಗ. ಇನ್ನು ಎಪ್ಪತ್ತೈದು ವರ್ಷದ ಸುಸ್ತಾಗಿರುವ ಹೃದಯದ ಮಾತುಕೇಳಬೇಕೆ. ಇದನ್ನೆಲ್ಲಾ ನಿರೀಕ್ಷಿಸಿದ್ದಂತೆ ಯಾರೋ ಗೋಡೆಯ ಮೇಲೆ ನೇತುಹಾಕಿದ್ದ ಎಂತದೋ ಒಂದು ಮಶೀನ್‌ ತಂದರು. ಇನ್ನೊಂದಿಷ್ಟು ಜನ ‘ಆ್ಯಮ್ಬುಲೆನ್ಸ್‌ ಕರೀರಿ’ ಅಂದರು. ಲೈಫ್‌ ಸಪೋರ್ಟ್‌ ಗೊತ್ತಿದ್ದ ಒಂದಿಷ್ಟು ಜನ ದೇಶಪ್ಪನವರ ಪಕ್ಕದಲ್ಲೇ ಕೂತು ‘ಒಂದು, ಎರಡು, ಮೂರು’ ಎಂದು ಎದೆಗೂಡನ್ನು ಒತ್ತಿ ನಿಲ್ಲುತ್ತಿದ್ದ ಹೃದಯವನ್ನು ಮತ್ತೆ ಚಾಲನೆಮಾಡಲು ಪ್ರಯತ್ನಿಸುತ್ತಿದ್ದರು.

ಅಂದು ದೇಶಪ್ಪನವರು ಎರಡು ತಪ್ಪುಗಳನ್ನು ಮಾಡಿದ್ದರು. ಒಂದು ತಮ್ಮ ‘ಡು ನಾಟ್‌ ರಿಸಸಿಟೇಟ್‌’ ಎಂದು ಬರೆದಿರೋ ಬ್ರೇಸ್‌ಲೆಟನ್ನು ಕಟ್ಟಿಕೊಂಡಿರಲಿಲ್ಲ . ಇನ್ನೊಂದು ಅವರು ಯಾವಾಗಲೂ ಮಾಡುವ ತಪ್ಪೇ. ತಮ್ಮ ಮಕ್ಕಳ ಫೋನ್‌ ನಂಬರು ವಿಳಾಸಗಳನ್ನು ಹತ್ತಿರ ಇಟ್ಟುಕೊಂಡಿರಲಿಲ್ಲ. ಅವರಿಗೆ ಅವರ ನೆನಪಿನ ಶಕ್ತಿಯ ಮೇಲೆ ಅಪಾರ ನಂಬಿಕೆ. ಇನ್ನು ಜತೆಯಲ್ಲಿದ್ದವರಿಗಾರಿಗೂ ಇವರ ಮನೆಮಂದಿಯ ಬಗ್ಗೆ ಹೆಚ್ಚೇನೂ ಗೊತ್ತಿರಲಿಲ್ಲ. ಎಷ್ಟಾದರೂ ಸ್ನೇಹಿತರು ತಾನೇ?

ಸರಿ, ಶುರುವಾಯಿತು ಆ್ಯಮ್ಬುಲೆನ್ಸಿಗರಿಂದ ದೇಶಪ್ಪನವರ ಮರುಹುಟ್ಟಿನ ಕ್ರಿಯೆ. ಎಲ್ಲರೂ ಶಕ್ತಿಮೀರಿ ಪ್ರಯತ್ನಿಸುತ್ತಿದ್ದರು. ಕೈಗಳ ರಕ್ತನಾಳಗಳಲ್ಲಿ ಡ್ರಿಪ್‌ ಏರಿತು. ಎದೆಯ ಮೇಲಿನ ಕೂದಲನ್ನು ಸರಸರನೆ ಶೇವ್‌ ಮಾಡಿ ಹೃದಯದ ಮಾನಿಟರ್‌ನ ಸ್ಟಿಕರ್‌ಗಳನ್ನು ಅಂಟಿಸಿದರು. ‘ದೂರ, ದೂರ ಸರಿಯಿರಿ’ ಎಂದು ಜೋರಾಗಿ ಕೂಗಿ ಯಾವುದೋ ಒಂದು ಮಶೀನಿನ ಗುಂಡಿಯನ್ನೊಮ್ಮೆ ಗಕ್ಕೆಂದು ಒತ್ತಿದರು. ‘ಫಟೀಲ್‌’ ಎಂದು ಹೊಡೆಯಿತು ದೇಶಪ್ಪನವರ ದೇಹಕ್ಕೆ ಶಾಕ್‌.

ಇಡೀ ದೇಹವೇ ಗಲಗಲ ಅಲುಗಾಡಿದರೂ ಅವರ ಹೃದಯ ಜಗ್ಗಲಿಲ್ಲ . ಮೂರುಬಾರಿ ಶಾಕ್‌ ಕೊಟ್ಟಮೇಲೆ, ಸರಿ ಹತ್ತಿರದ ಆಸ್ಪತ್ರೆಗೆ ಹೋಗೋಣ’ ಎಂದರು, ಜೀವರಕ್ಷಕರು. ದೇಶಪ್ಪನವರು ಉಸಿರಾಡುತ್ತಿಲ್ಲ, ಉಸಿರಾಡಿಸಬೇಕು’ ಅಂದರು, ಇನ್ನೊಬ್ಬರು. ‘ಸರಿ’ ಒಂದು ಬಾಯಿಂದ ಶ್ವಾಸನಾಳದೊಳಗೆ ಒಂದು ಪ್ಲಾಸ್ಟಿಕ್‌ ನಳಿಕೆಯನ್ನು ಇಳಿಸಿ ಉಸಿರಾಡಿಸಹತ್ತಿದರು. ದೇಶಪ್ಪನವರು ಇದಾವುದಕ್ಕೂ ಗಮನ ಕೊಡದೆ ಸುಮ್ಮನೆ ಮಲಗಿದ್ದರು. ಜೀವವಿತ್ತೊ , ಇಲ್ಲವೋ ಅವರಿಗೇ ಗೊತ್ತಿರಲಿಲ್ಲ . ಅಕ್ಕಪಕ್ಕದವರು ಈ ಬಣದ ಕಾರ್ಯವೈಖರಿಗೆ ದಂಗಾಗಿಹೋಗಿದ್ದರು. ಆಸ್ಪತ್ರೆಗೆ ಸಾಗಿಸುವ ಮುನ್ನ ‘ಯಾರಾದರೂ ಕುಟುಂಬದವರಿದ್ದರೆ ಪತ್ತೆಮಾಡಿ. ಇಲ್ಲವೇ, ಇವರ ಡಾಕ್ಟರರ ಜತೆಗಾದರೂ ಸಂಪರ್ಕ ಬೆಳೆಸಿ. ನಾವು ಇಂತಹ ಆಸ್ಪತ್ರೆಗೆ ದೇಶಪ್ಪನವರನ್ನು ಕರೆದುಕೊಂಡು ಹೋಗುತ್ತಿದ್ದೇವೆ’ ಎಂದು ಹೇಳಿ ಬಣ್ಣಬಣ್ಣದ ದೀಪಗಳೊಂದಿಗೆ ಶಬ್ದದ ಜೊತೆಗೇ ಮಿಂಚಿನಂತೆ ಮಾಯವಾದರು, ಜೀವರಕ್ಷಕರು.

ಆ್ಯಮ್ಬುಲೆನ್ಸಿನಲ್ಲಿಯೂ ಮುಂದುವರೆದಿತ್ತು ಈ ಜೀವರಕ್ಷಕರ ಸಾಹಸ. ಇದುವರೆಗೆ ಆರುಬಾರಿ ಶಾಕ್‌ ಕೊಟ್ಟಿದ್ದರು. ಏನೇನೂ ಉಪಯೋಗವಿಲ್ಲ. ಅಲ್ಲೊಮ್ಮೆ, ಇಲ್ಲೊಮ್ಮೆ ಮಿಂಚಿದಂತೆ ಒಂದೊಂದು ನಾರ್ಮಲ್‌ ಹೃದಯದ ಬಡಿತ. ನಂತರ ಉಪಯೋಗಕ್ಕೆ ಬಾರದ ತಲ್ಲಣ, ಮತ್ತೆ ಶಾಕ್‌, ಮತ್ತೆ ರಕ್ತನಾಳಗಳಿಗೆ ಔಷಧಿ, ಬಾಯಾಳಗಿನಿಂದ ಹೋಗುತ್ತಿರುವ ಟ್ಯೂಬಿನಿಂದ ತಿದಿ ಒತ್ತಿದಂತೆ ಇನ್ನೊಬ್ಬಾತ ಶ್ವಾಸಕೋಶದೊಳಗೆ ಪ್ರಾಣವಾಯುವನ್ನು ತುಂಬಲು ಪ್ರಯತ್ನಿಸುತ್ತಲೇ ಇದ್ದಾನೆ.. ದೇಶಪ್ಪನವರು ಗಟ್ಟಿಯಾಗಿ ಮಲಗಿದ್ದಾರೆ.

ಸರಿ, ಆಸ್ಪತ್ರೆ ಬಂದೇಬಿಟ್ಟಿತು. ಮುಂಚೆಯೇ ಹೇಳಿದ್ದರಿಂದ ಡಾಕ್ಟರುಗಳ ದಂಡೇ ಅಲ್ಲಿ ನೆರೆದಿತ್ತು. ಈ ಪ್ರಯತ್ನ ಅಲ್ಲೂ ಮುಂದುವರೆದೇ ಇತ್ತು. ಟ್ರಾಲಿಯ ಮೇಲೆ ದೇಶಪ್ಪನವರ ಪಕ್ಕ ಯಾರೋ ಕೂತು ಎದೆಗೂಡನ್ನು ಒತ್ತುತ್ತಲೇ ಇದ್ದರು. ಪ್ರಾಣವಾಯು ಸೇರಿದರೂ ದೇಶಪ್ಪನವರ ಮುಖ ನೀಲಿಗಟ್ಟುತ್ತಿತ್ತು. ಮೈಯಾಳಗೆ ಸೇರುವ ಔಷಧಿಗಳ ಡೋಸ್‌ ಅವುಗಳ ಗರಿಷ್ಠ ಮಿತಿಯನ್ನು ಮುಟ್ಟಿತ್ತು. ಕೊನೆಗೆ ಇದ್ದಕ್ಕಿದ್ದಂತೆ ದೇಶಪ್ಪನವರ ಹೃದಯ ನಿಂತೇಹೋಯಿತು. ಹೃದಯದ ಮಾನೀಟರ್‌ನಲ್ಲಿ ಒಂದು ಸರಳರೇಖೆ ಬಂದಿತ್ತು . ಈ ಜೀವ ಉಳಿಸುವ ಕ್ರಿಯೆ ಶುರುವಾಗಿ ಮೂವತ್ತೈದು ನಿಮಿಷಗಳಾಗಿವೆ ಎಂದು ತಿಳಿದ ನಂತರ ಆಸ್ಪತ್ರೆಯ ವೈದ್ಯರುಗಳು ದೇಶಪ್ಪನವರನ್ನು ಅಧಿಕೃತವಾಗಿ ‘ಸತ್ತಿದ್ದಾರೆ’ ಎಂದು ಘೋಷಿಸಿದರು.

ಸಿನಿಮೀಯ ಶೈಲಿಯಲ್ಲಿ ಆಸ್ಪತ್ರೆಯ ಫ್ಯಾಕ್ಸ್‌ ಮಶೀನಿಗೆ ಆಗತಾನೆ ಒಂದು ಸಂದೇಶ ಬಂದಿತ್ತು. ಅದರಲ್ಲಿ ದೇಶಪ್ಪನವರ ಡಾಕ್ಟರು ಕಳಿಸಿದ್ದ, ದೇಶಪ್ಪನವರ ಸಹಿ ಇದ್ದ’ ಡು ನಾಟ್‌ ರಿಸಸಿಟೇಟ್‌’ ಫಾರ್ಮ್‌ ಇತ್ತು. ಜತೆಗೇ ಒಂದು ಸಣ್ಣ ಒಕ್ಕಣಿಕೆ ‘ದೇಶಪ್ಪನವರು ತಮ್ಮ ಸ್ವ ಇಚ್ಚೆಯಿಂದಲೇ ಈ ‘ಡು ನಾಟ್‌ ರಿಸಸಿಟೇಟ್‌’ ಫಾರ್ಮ್‌ಗೆ ಸಹಿಹಾಕಿದ್ದಾರೆ. ಅವರ ಬಳಿ ಯಾವಾಗಲೂ ಒಂದು ಬ್ರೇಸ್‌ಲೇಟ್‌ ಇರಬೇಕು. ಅವರಿಗೆ ತೀವ್ರ ಸ್ವರೂಪದ ಕಾಯಿಲೆಯಿರುವುದರಿಂದ ಈ ಅಸಾಧಾರಣ ಪುನರ್ಜನ್ಮ ಪ್ರಯತ್ನಕ್ಕೆ ಅವರು ಅರ್ಹರಲ್ಲ . ಆದ್ದರಿಂದ ನೀವುಗಳು ನಿಮ್ಮ ಪ್ರಯತ್ನವನ್ನು ತಕ್ಷಣ ನಿಲ್ಲಿಸಬೇಕು. ದೇಶಪ್ಪನವರ ಗೈರುಹಾಜರಿಯಲ್ಲಿ ಅವರ ಮುಂದಿನ ಹತ್ತಿರದ ಸಂಬಂಧಿಗಳಾದ ಮಕ್ಕಳಿಂದ ನಾವು ಪರವಾನಗಿ ಪಡೆದು ನಿಮಗೆ ಈ ಫಾರ್ಮ್‌ ಅನ್ನು ಕಳುಹಿಸಲು ಸ್ವಲ್ಪ ತಡವಾಯಿತು. ದಯವಿಟ್ಟು ಕ್ಷಮಿಸುವುದು’.

ಡಾಕ್ಟರುಗಳು ‘ಛೆ! ಛೆ!’ ಅಂದರು. ಒಂದು ನಿಮಿಷದನಂತರ ‘ಹೋಗಲಿ, ಸತ್ತರಲ್ಲ. ಬದುಕಿದ್ದರೆ ಇನ್ನೂ ಏನೇನು ಅನುಭವಿಸಬೇಕಾಗಿತ್ತೋ. ಅದಲ್ಲದೆ, ಈ ಮುದುಕನ ಒಂದು ಸಣ್ಣ ತಪ್ಪಿನಿಂದ ಸುಮ್ಮನೇ ಎಷ್ಟು ಖರ್ಚು ನಮ್ಮಂತ ತೆರಿಗೆದಾರರಿಗೆ.’ ಅಂದರು.

ಅನಂತದಲ್ಲಿ ಲೀನವಾಗುತ್ತಿದ್ದ ಪ.ರ.ದೇಶಪ್ಪನವರ ಆತ್ಮ ‘ಸಾಯೋದು ಎಷ್ಟು ಕಷ್ಟವಪ್ಪ’ ಎಂದು ಹಳಹಳಿಸಿತು.

ಕಾಗಿನೆಲೆಯವರ ಎರಡು ಬರಹ :

ಡಾಕ್ಟರಾದ ಮೇಲೆ....

ವಿಶ್ವ ಕನ್ನಡ ಸಮ್ಮೇಳನದಲ್ಲಿ ‘ಯಯಾತಿ’

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more