ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಕದೆಯೇ ಕುಲಗೆಟ್ಟ ಮತ !

By Staff
|
Google Oneindia Kannada News

ಮನುಷ್ಯರೆಲ್ಲಾ ಒಳ್ಳೆಯವರೆ, ಎಲ್ಲಾ ದೇಶವೂ ಒಳ್ಳೆಯದೆ. ಹಾಗಾದರೆ ಕೆಟ್ಟದ್ದು ಯಾವುದು? ಮನುಷ್ಯ ಅವನು ಮಾಡುವ ಕೆಟ್ಟ ಕೆಲಸಗಳಿಗೆ ಅವನದೆ ಆದ ಬಿಂಬವನ್ನು ಇಡುತ್ತಾನೆ. ಪರಿಶೀಲಿಸಿ ನೋಡಿದರೆ ಅದು ನಿಜ ಎಂದು ಅನ್ನಿಸುತ್ತದೆ. ಹಾಗಾದರೆ ಕೆಟ್ಟದ್ದು ಅನ್ನುವುದು ಇಲ್ಲವೆಂದ ಮೇಲೆ ತೊಂದರೆ ಎಲ್ಲಿದೆ ? ತಪ್ಪು ಎಲ್ಲಿದೆ ?

ಭಾರತೀಯರು ಹೇಗೆ ಎಂದು ಯಾವುದೇ ಭಾರತೀಯನನ್ನು ಕೇಳಿ ಅಥವ ಭಾರತಕ್ಕೆ ಭೇಟಿ ಕೊಟ್ಟ ಪ್ರವಾಸಿಗರನ್ನು ಕೇಳಿ. ‘ಭಾರತೀಯರು ಬಹಳ ಒಳ್ಳೆಯವರು, ಹೃದಯವಂತರು, ಬುದ್ಧಿಶಾಲಿಗಳು, ಮಾನವೀಯತೆ ಎತ್ತಿ ಹಿಡಿಯುವರು, ದಾನಿಗಳು’ ಹೀಗೆ ತಮಗೆ ಮನಬಂದಂತೆ ಹೊಗಳುತ್ತಾರೆ. ಭಾರತೀಯರೆಲ್ಲ ಒಳ್ಳೆಯವರು, ಹೃದಯವಂತರು, ಬುದ್ಧಿಶಾಲಿಗಳು, ಮಾನವೀಯತೆ ಎತ್ತಿ ಹಿಡಿಯುವರು, ದಾನಿಗಳೂ ಹೌದು. ಹಾಗಿದ್ದೂ ಭಾರತ ಯಾಕೆ ಹೀಗೆ ಕತ್ತಲೆಯಲ್ಲಿ, ಬಡತನದಲ್ಲಿ, ಭ್ರಷ್ಟಾಚಾರದಲ್ಲಿ, ಕೋಮು ಗಲಭೆಯಲ್ಲಿ ಅದ್ದಿ ತೆಗೆದಂತೆ ನಿಂತಿದೆ. ಎಲ್ಲಾ ದೇಶದ ಜನರು ಒಳ್ಳೆಯವರೆ ಆದರೂ ಅಲ್ಲಿಯ ದೇಶ ಉದ್ಧಾರವಾಗಿಲ್ಲ , ಎಲ್ಲಾ ದೇಶಗಳ ಜನ ಒಳ್ಳೆಯವರೆ, ಆದರೆ ಎಲ್ಲಾ ದೇಶದ ರಾಜಕೀಯ ಮಾತ್ರ ಹೊಲಸು. ಭಾರತೀಯರು ಒಳ್ಳೆಯವರು, ಅಲ್ಲಿಯ ರಾಜಕೀಯ ಅಧ್ವಾನ. ಪಾಕಿಸ್ಥಾನಿಯರು ಒಳ್ಳೆಯವರು, ಅಲ್ಲಿಯ ರಾಜಕೀಯ ಅನಿಷ್ಟ. ಆಫ್ರಿಕಾದ ಜನ ಚಿನ್ನದಂಥವರು, ಅಲ್ಲಿಯ ರಾಜಕೀಯ ಭ್ರಷ್ಟ. ಅಮೇರಿಕಾದ ಜನ ಸಾಫ್ಟ್‌, ಅಲ್ಲಿಯ ರಾಜಕೀಯ ಕನ್ನಿಂಗ್‌ ಅಂಡ್‌ ಕ್ರುಯಲ್‌! ಎಲ್ಲಾ ದೇಶದ ರಾಜಕೀಯ ಅದರದ್ದೆ ಆದ ರೀತಿಯಲ್ಲಿ ಹೊಲಸಾಗಿವೆ. ಇದನ್ನು ಆ ದೇಶದ ಜನರೂ ಒಪ್ಪಿಕೊಳ್ಳುತ್ತಾರೆ. ನಾವೂ ಅಷ್ಟೆ , ಎಲ್ಲಾ ತೊಂದರೆಗೆ ಕಾರಣ ರಾಜಕಾರಣ, ಎಲ್ಲಾ ಅನಿಷ್ಟಗಳ ಪಿತಾಮಹ ರಾಜಕಾರಣಿ- ಎಂದು ಸಾರಿ ಸುಮ್ಮನಾಗಿಬಿಡುತ್ತೇವೆ. ಯಾವತ್ತಾದರೂ ಯೋಚಿಸಿದ್ದೇವಾ, ಇಂತಹ ಭ್ರಷ್ಟರನ್ನು ಅಲ್ಲಿಗೆ ತಲುಪಿಸಿದವರು ಯಾರು ಎಂದು ? ಇಲ್ಲ. ನಾವು ಅದರ ಬಗ್ಗೆ ಯೋಚಿಸುವುದೇ ಇಲ್ಲ. ಏಕೆಂದರೆ ಅಂತಹ ಭ್ರಷ್ಟನನ್ನು ಮೇಲಕ್ಕೆ ಕೂರಿಸಿದ ದುಷ್ಟ ನಾನೆ ಎಂಬುದು ಅವರವರಿಗೆ ಅರಿವಾಗುತ್ತದೆ.

ನಾವು ನಮ್ಮ ಎಲ್ಲಾ ತಪ್ಪುಗಳಿಗೆ ದೇಶವನ್ನು ದೂಷಿಸುತ್ತೇವೆ, ರಾಜಕಾರಣಿಗಳನ್ನೇ ಬೈಯುತ್ತೇವೆ. ನನ್ನನ್ನು ಬಿಟ್ಟು ಮಿಕ್ಕವರೆಲ್ಲ ಶಿಕ್ಷೆಗೆ ಅರ್ಹರೆಂಬಂತೆ ಮಾತನಾಡುತ್ತೇವೆ. ನಾವು ಮಾಡುವ ಎಲ್ಲಾ ಕೆಲಸಕ್ಕು ಸರಿ ಎನ್ನುವ ಹಣೆಪಟ್ಟಿ ಹಚ್ಚುತ್ತೇವೆ. ದೇಶದಲ್ಲಿ ನಮ್ಮದೇನು ಜವಾಬ್ದಾರಿ ಎಂಬುದನ್ನು ಮರೆತು ದೇಶವನ್ನೆ ದೂರುತ್ತೇವೆ. ಚುನಾವಣೆ ಬಂದಾಗ ನಮಗು ಅದಕ್ಕು ಸಂಬಂದವಿಲ್ಲ ಎನ್ನುವಂತೆ ನಿಶ್ಚಿಂತೆಯಿಂದ, ಸಿಕ್ಕ ರಜದಲ್ಲಿ ಹೆಂಡತಿ ಮಕ್ಕಳನ್ನು ಸಿನಿಮಾಗೆ ಕರೆದುಕೊಂಡು ಹೋಗಿ, ಬರುವಾಗ ಶಾಪಿಂಗ್‌ ಕಾಂಪ್ಲೆಕ್ಸ್‌ ಸುತ್ತಾಡಿ, ಅಲ್ಲೆ ಶಾಂತಿಸಾಗರ್‌ನಲ್ಲಿ ಊಟ ಮುಗಿಸಿ ಮನೆಗೆ ಬಂದು, ‘ಆಬ್ಬ ಅಂತೂ ಈ ಹಾಳು ಚುನಾವಣೆ ಮುಗಿಯಿತು’ ಎಂದು ಬೈದುಕೊಂಡು ಸುಖವಾಗಿ ರಾತ್ರಿಯ ಕೆಲಸಕ್ಕೆ ಅಣಿಯಾಗುತ್ತೇವೆ. ಸಿಕ್ಕ ರಜ, ಚುನಾವಣೆಯಿಂದ ಎಂದು ಅದಕ್ಕೆ ಒಂದು ಸಣ್ಣ ಥ್ಯಾಂಕ್ಸ್‌ ಕೂಡ ಹೇಳುವುದಿಲ್ಲ. ಎಲ್ಲಕ್ಕಿಂತ ನಾಚಿಕೆ ಎಂದರೆ ಚುನಾವಣೆಗೆಂದು ಸಿಕ್ಕ ರಜದಲ್ಲಿ ಮತಚಲಾಯಿಸುವುದನ್ನೆ ಮರೆತಿರುತ್ತೇವೆ. ನೆನಪಿದ್ದರೂ ‘ಮತ ಹಾಕಿ ಏನು ಪ್ರಯೋಜನ’ ಎಂಬ ಶುದ್ಧ ಸೋಮಾರಿಯ ಚಿಂತನೆ ಮಾಡಿ ಬಹಳ ದೊಡ್ಡ ಬುದ್ಧಿಜೀವಿ ಎಂದು ಸಮರ್ಥಿಸಿಕೊಳ್ಳುತ್ತೇವೆ. ನಾವು ಮತ ಹಾಕದೆ ನಮಗೆ ನಾವೆ ಎಂತಹ ಮಹಾನ್‌ ದ್ರೋಹ ಮಾಡಿಕೊಳ್ಳುತ್ತಿದ್ದೇವೆ ಎಂದು ನಾವು ಯೋಚಿಸುವುದೆ ಇಲ್ಲ.

ಯಾವ ರಾಜಕಾರಣಿ ಬಂದರೂ ಅವನು ಮಾಡುವುದು ಅದೇ ಅನ್ಯಾಯ, ಅದೇ ಭ್ರಷ್ಟತೆ, ಅದೇ ನಂಬಿಕೆ ದ್ರೋಹ ಎಂದು ಸುಮ್ಮನಾಗಿ ನಮಗೆ ನಾವೆ ದ್ರೋಹ ಬಗೆದುಕೊಳ್ಳುತ್ತೇವೆ. ನಾವ್ಯಾಕೆ ನಮಗೆ ಸಿಕ್ಕ ಅವಕಾಶದಿಂದ ಒಬ್ಬ ಕಡಿಮೆ ಅನ್ಯಾಯಿಯನ್ನು, ಕಡಿಮೆ ಭ್ರಷ್ಟನನ್ನು, ಕಡಿಮೆ ನಂಬಿಕೆ ದ್ರೋಹಿಯನ್ನು ಆರಿಸಲು ಹೋಗುವುದಿಲ್ಲ ? ನಮಗೆ ಸಿಕ್ಕ ಅವಕಾಶವನ್ನು ಗಾಳಿಗೆ ತೂರಿ ಮತ್ತೆ ಅದೇ ಕಟುಕರಿಗೆ ನಮ್ಮ ತಲೆಯೇಕೆ ಕೊಡಬೇಕು. ಲಾಲ್‌ ಬಹದ್ದೂರ್‌ ಶಾಸ್ತ್ರಿಜೀಯಂಥ ಮಹಾನ್‌ ಪ್ರಧಾನ ಮಂತ್ರಿಯನ್ನು ಕಂಡಿರುವ ನಾವು ಅವರಂತವರನ್ನು ಅಥವ ಅವರ ನಡತೆಗೆ ಹತ್ತಿರವಾದವರನ್ನು ಮತ್ತೆ ಗದ್ದುಗೆಗೆ ಕೂರಿಸಲು ಏಕೆ ಪ್ರಯತ್ನಿಸುವುದಿಲ್ಲ ? ಹೊಲಸು ರಾಜಕಾರಣಿಗಳು ಇರಬಹುದು. ಆದರೆ ಅವರ ಮಧ್ಯೆ ಪ್ರಾಮಾಣಿಕರೂ ಇದ್ದಾರೆ. ಅವರನ್ನು ಹುಡುಕಿ ಮೇಲೆ ತರಲು ನಮಗೆ ಇರುವ ಒಂದೇ ಅವಕಾಶ ಈ ಚುನಾವಣೆ. ಇರುವ ಇಂತಹ ಒಂದೇ ಅವಕಾಶವನ್ನು ನಾವು ಮರೆತು ದೇಶ ದ್ರೋಹದ ಜೊತೆಗೆ ನಾಳಿನ ಭವಿಷ್ಯವನ್ನೆ ಕತ್ತಲು ಮಾಡುತ್ತೇವೆ.

ಯಾವ ದೇಶವೂ ಸ್ವಚ್ಛ ರಾಜಕಾರಣಿಗಳನ್ನು ಹೊಂದಿಲ್ಲ . ಆದರೆ ಕಡಿಮೆ ಭ್ರಷ್ಟರನ್ನು ಹೊಂದಿರುವ ದೇಶ ಯಾವುದರಲ್ಲೂ ಹಿಂದಿಲ್ಲ. ನಮ್ಮ ದೇಶದಲ್ಲಿ ಬುದ್ಧಿವಂತರಿಗೇನು ಕಡಿಮೆ ಇಲ್ಲ, ಆದರೆ ಬುದ್ಧಿವಂತಿಕೆ ಉಪಯೋಗಿಸುವುದರಲ್ಲಿ ತಪ್ಪಿದ್ದೇವೆ. ಒಂದು ದೇಶ ಮುಂದುವರೆಯಲು ಅಲ್ಲಿಯ ರಾಜಕೀಯ ಬಹಳ ಮುಖ್ಯವಾದ ಪಾತ್ರವಾಗುತ್ತದೆ. ಆ ಮುಖ್ಯವಾದ ಪಾತ್ರ ಸೃಷ್ಟಿಸುವಲ್ಲಿ ಸಾರ್ವಜನಿಕರ ಪಾತ್ರ ಮಹತ್ವವಾದದ್ದು. ಸಾರ್ವಜನಿಕರು ಈ ಕೆಲಸದಿಂದ ಹಿಂದೆ ಸರಿದರೆ ಅಥವ ತಪ್ಪಿಸಿಕೊಂಡರೆ, ಅವರು ದೇಶಕ್ಕೆ ಅದಕ್ಕಿಂತ ದೊಡ್ಡ ದ್ರೋಹ ಬಗೆಯಲಾರರು.

ನಮ್ಮಲ್ಲಿ ಎಲ್ಲಾ ರಾಜಕಾರಣಿಗಳ ಮೇಲೂ ಒಂದಲ್ಲಾ ಒಂದು ಆರೋಪ ಇದೆ. ಲಲ್ಲೂ ಮೇಲೆ ಹುಲ್ಲು ತಿಂದ ಆರೋಪ, ಗೌಡರ ಮೇಲೆ ಪೆಟ್ರೋಲ್‌ ಪಂಪಿನ ಆರೋಪ, ಜಯ ಮೇಲೆ ಆರೋಪಗಳ ಸರಮಾಲೆ, ಅಡ್ವಾಣಿಯ ಮೇಲೆ ಮಸೀದಿ ಕೆಡವಿದ ಆರೋಪ. ಇದು ದೊಡ್ಡ ದೊಡ್ಡ ಮಹನೀಯರ ಮೇಲಿನದಾದರೆ, ಅದೇ ರೀತಿ ಚಿಕ್ಕ ಚಿಕ್ಕ ಪುಡಿ ರಾಜಕಾರಣಿಗಳಾದ ಎಮ್‌ಎಲ್‌ಎ, ಸಣ್ಣ ಮಂತ್ರಿಗಳು, ಜಿಲ್ಲಾ ರಾಜಕಾರಣಿಗಳು, ತಾಲ್ಲೂಕಿನ ಕಣ್ಮಣಿಗಳು, ಕೊನೆಗೆ ನಗರಪಾಲಿಕೆಯ ಸಣ್ಣ ಕರಿಮಣಿಗಳು ಕೂಡ ಅವರವರ ನೇರಕ್ಕೆ ಅವರವರದೆ ಅರೋಪಗಳನ್ನು ಕಾಪಾಡಿಕೊಂಡಿದ್ದಾರೆ. ನಮ್ಮಲ್ಲಿ ಎಂತಹ ರಾಜಕಾರಣಿಗಳಿದ್ದಾರೆ ಎಂದರೆ, ಪ್ರಧಾನ ಮಂತ್ರಿ ಹೆಂಡತಿಗೆ ಏನೂ ಆಸ್ತಿ ಇಲ್ಲ, ಅವರ ಸೊಸೆ ಬಡತನದ ಜೀವನ ನೆಡೆಸುವ ಹೆಂಗಸು ಎಂದು ಸಾಕ್ಷಾತ್‌ ಪ್ರಧಾನಮಂತ್ರಿಗಳೆ ಘೋಷಿಸಿ ಅವರಿಗೆ ಪೆಟ್ರೋಲ್‌ ಪಂಪ್‌ ನೀಡುತ್ತಾರೆ. ಅಂತಹ ಪ್ರಧಾನ ಮಂತ್ರಿಗೆ ಕರ್ನಾಟಕದ ಎಲ್ಲಾ ನಗರಗಳಲ್ಲೂ ಎಣಿಸಲಾರದಷ್ಟು ಕೋಟಿಗಳಷ್ಟು ಆಸ್ತಿ ಕೊಳೆಯುತ್ತಿದೆ. ಯಾರದೋ ಅಭಯದಿಂದ ಪ್ರಧಾನ ಮಂತ್ರಿಗಳಾಗಿದ್ದವರನ್ನು, ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬ ಮಾತಿನಂತೆ ಧೂಳಿನಿಂದ ಬಂದವರನ್ನು ಧೂಳಿಗೆ ಹಾಕಿದೆ ಈ ರಾಜಕೀಯ. ಒಳ್ಳೆಯ ರಾಜಕಾರಣಿಗಳು ಬರುವ ತನಕ ಈ ರಾಜಕೀಯಕ್ಕೆ ಒಳ್ಳೆಯ ಅರ್ಥ ಬರುವುದಿಲ್ಲ. ಯಾರು ಏನೇ ಕೆಟ್ಟದ್ದು ಮಾಡಿದರೂ, ಅದಕ್ಕೆ ರಾಜಕೀಯ ಎನ್ನುವ ಹೆಸರು ಬರುತ್ತದೆ. ಹಿಂದಿನ ಕಾಲದ ರಾಜರು ಮಾಡುತ್ತಿದ್ದ ರಾಜಕೀಯಕ್ಕೂ, ಇಂದಿನ ರಾಜಕಾರಣಿಗಳು ಮಾಡುತ್ತಿರುವ ರಾಜಕೀಯಕ್ಕೂ ಹೋಲಿಸಲಾಗದಂತಹ ವ್ಯತ್ಯಾಸ. ಆ ವ್ಯತ್ಯಾಸವನ್ನು ಕಡಿಮೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸರಿಯಾಗಿ ನೋಡಿದರೆ ನಮಗೆ ಎಲ್ಲಾ ಕಡೆಯಲ್ಲೂ ಒಬ್ಬ ಒಳ್ಳೆಯ, ಕಡಿಮೆ ದುಷ್ಟ ರಾಜಕಾರಣಿ ಸಿಗುತ್ತಾನೆ. ಅವನನ್ನು ಗುರುತಿಸಿ ಅವನಿಗೆ ಮತ ಹಾಕಿ ಗೆಲ್ಲಿಸಿದರೆ, ಅವನಿಂದ ಒಳ್ಳೆಯ ಕೆಲಸ ನಿರೀಕ್ಷಿಸಬಹುದು. ನಾವು ಮತವನ್ನೇ ಹಾಕದಿದ್ದರೆ ಯಾರೋ ಅತೀ ದುಷ್ಟ, ಮತಿ ಭ್ರಷ್ಟ ಕಳ್ಳ ಮತಗಳಿಂದ ಗೆದ್ದು ನಮ್ಮನ್ನು ಆಳುತ್ತಾನೆ, ದೇಶವನ್ನು ಹಾಳು ಮಾಡುತ್ತಾನೆ.

ನಾವು ಮತ ಹಾಕಿದರಷ್ಟೆ ಸಾಲದು, ಮತ ಚಲಾಯಿಸುವ ಹಕ್ಕು ನಮಗಿದೆ ಹಾಗು ಇದರಿಂದ ನಮಗಾಗುವ ಉಪಯೋಗ ತಿಳಿಸಿ ಎಲ್ಲರಿಂದ ಮತ ಹಾಕಿಸಬೇಕು. ನಿಜಕ್ಕು ಬಹಳಷ್ಟು ಜನ ಈ ಕೆಲಸದಲ್ಲಿ ತೊಡಗಿದ್ದಾರೆ. ರವಿ ಬೆಳೆಗೆರೆಯಂತವರು ದಿನದ ಎಲ್ಲಾ ನಿಮಿಷಗಳಲ್ಲು ಕೆಲಸವಿದ್ದರೂ ಅದರಲ್ಲಿ ಬಿಡುವು ಮಾಡಿಕೊಂಡು ಮತ ಹಾಕುವಂತೆ ಪ್ರಚಾರ ಮಾಡುತ್ತಾರೆ, ವಿನಂತಿಸಿಕೊಳ್ಳುತ್ತಾರೆ. ನಾವುಗಳು ದಿನದಲ್ಲಿ ಕಡಿಮೆ ಅಂದರೂ ಒಂದು ಗಂಟೆಯಾದರೂ ಬಿಡುವು ಮಾಡಿಕೊಳ್ಳಬಹುದು. ಅದರಲ್ಲಿ ಮತದಾನ ಮಾಡುವ ವಿಚಾರ ಸಾರಬಹುದು. ಯಾರಿಗೆ ಯಾವ ಥರದಲ್ಲಿ ಅದರ ಪ್ರಚಾರ ಮಾಡಲು ಆಗುತ್ತದೊ, ಆ ರೀತಿಯಲ್ಲಿ ಎಲ್ಲಾ ಜನರಿಗು ಮತ ಚಲಾಯಿಸಿ ಎಂದು ತಿಳಿ ಹೇಳುವುದು ನಮ್ಮೆಲ್ಲರ ಕರ್ತವ್ಯ. ನಮ್ಮದೆ ಭವಿಷ್ಯಕ್ಕಾಗಿ ನಾವು ಇಷ್ಟು ಮಾಡುವುದಿಲ್ಲ ಎನ್ನುವಷ್ಟು ಮೂರ್ಖರಲ್ಲ. ಎಲ್ಲರಿಗು ಎಲ್ಲಾ ವಿಷಯ ತಿಳಿದಿರುತ್ತದೆ, ಆದರೂ ನಮಗೆ ಅದನ್ನು ನೆನಪಿಸುವರು ಬೇಕು. ನೆನಪಿಸುವ ಕೆಲಸವನ್ನು ನಾವೆಲ್ಲರೂ ಮಾಡೋಣ.

ಇನ್ನೇನು ಬಂದೆ ಬಿಟ್ಟಿತು ಮತ್ತೊಮ್ಮೆ ಚುನಾವಣೆ. ನಿಮ್ಮ ಮನೆಗೆ ಎಲ್ಲರೂ ಕೈ ಮುಗಿದು, ಕೈ ಕುಲಕಿ, ಸೀರೆ ಕೊಟ್ಟು, ಕುಂಕುಮವಿಟ್ಟು, ಪಂಚೆ ಕೊಟ್ಟು ಹೋಗುತ್ತಾರೆ. ರಾತ್ರಿ ಹೋದರೆ ತಿನ್ನಲು ಚಿತ್ರಾನ್ನ ಕೊಟ್ಟು, ಕುಡಿಯಲು ‘ಪ್ಯಾಕೆಟ್‌’ ಕೊಟ್ಟು ತೇಲಾಡಿಸುತ್ತಾರೆ. ಹರ್ಷದ ಊಟ ನಂಬಿ ವರ್ಷದ ಊಟ ಕಳೆದುಕೊಂಡ ಎಂಬಂತೆ ಎಲ್ಲರಿಗೂ ನಾಲ್ಕೈದು ದಿನ ಚೆನ್ನಾಗಿ ತಿನ್ನಿಸಿ-ಕುಡಿಸಿ ಬರುವವರು ಐದು ವರ್ಷ ಎಲ್ಲರಿಂದ ಕಕ್ಕಿಸುತ್ತಾರೆ. ಯಾವುದೆ ಅಮಿಷಗಳಿಗೆ ಬೀಳದೆ ಚೆನ್ನಾಗಿ ಯೋಚಿಸಿ, ಯೋಗ್ಯ ಅಭ್ಯರ್ಥಿಗೆ ಮತ ಹಾಕಿ ಗೆಲ್ಲಿಸುವುದು ನಮ್ಮೆಲ್ಲರ ಒಳಿತಿಗೆ ದಾರಿ. ರಾಷ್ಟ್ರಪತಿ ಕಲಾಂ ಅಂತವರೆ ಸಾಲಲ್ಲಿ ನಿಂತು ಮತ ಹಾಕಿರುವಾಗ ನಾವು ಹಾಕುವುದು ಬೇಡವೆ ?

ಮತ ಹಾಕುವುದು ನಮಗೆ ಸಿಗುವ ಒಂದು ಸುವರ್ಣ ಅವಕಾಶ. ದೇಶದ ದಿಕ್ಕನ್ನು ಬದಲಿಸುವ ಹಕ್ಕು ನಮಗಿದೆ. ಅದನ್ನು ಕಳೆದುಕೊಂಡರೆ ಪೂರ್ತಿ ಐದು ವರ್ಷ ಅನುಭವಿಸಬೇಕಾಗುತ್ತದೆ. ಕೆಲವು ಮುಖ್ಯಮಂತ್ರಿಗಳು ವರ್ಷಾನುಗಟ್ಟಲೆ ಗದ್ದುಗೆಯಲ್ಲಿ ಕುಳಿತು ರಾಜ್ಯದ ಬಗ್ಗೆ ಯೋಚಿಸದೆ, ಹೆಂಡ ಹೆಣ್ಣು ಎಂದು ಕಳೆದರು. ಕರ್ನಾಟಕವೆಂಬುದು ಅಲುಗಾಡದ ಕಲ್ಲಾಗಿ ಮೂರು ವರ್ಷ ಕಳೆಯಿತು. ಅಂತಹ ಮಹಾನುಭಾವರನ್ನು ಗದ್ದುಗೆಗೆ ಕೂರಿಸಿದ್ದು ನಾವು ಚಲಾಯಿಸದಿರುವ ಮತಗಳು! ನಿಮ್ಮ ಮತ ನಿಮ್ಮ ಹಕ್ಕು. ನಿಮಗಿರುವ ಅಸ್ತ್ರ. ತಿಳಿದ ಜನರೆ ಮತ ಚಲಾಯಿಸದಿದ್ದರೆ ಹೇಗೆ? ಸ್ವಲ್ಪ ಯೋಚಿಸಿ, ದೇಶಕ್ಕಾಗಿ, ನಾಳಿನ ಮಕ್ಕಳಿಗಾಗಿ, ನಮ್ಮ ಭವಿಷ್ಯಕ್ಕಾಗಿ ನಮ್ಮ ಮತ ನಾವು ಚಲಾಯಿಸಲೆ ಬೇಕು ಹಾಗೂ ಎಲ್ಲರಿಗು ಮತ ಚಲಾಯಿಸುವಂತೆ ತಿಳಿಸಬೇಕು. ನಾವು ಮಾಡುವ ಮುವತ್ತು ನಿಮಿಷದ ಕೆಲಸಕ್ಕೆ ನಮಗೆ ಪೂರ್ತಿ ದಿನ ರಜೆ ಸಿಗುತ್ತದೆ. ಆ ರಜದ ಅರ್ಥ ಅರಿತು ಮತ ಹಾಕುವ ಕೆಲಸ ಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ.

ಇಷ್ಟೆಲ್ಲಾ ತಿಳಿದ ಮೇಲೂ ‘ಅಯ್ಯೋ ನಾನೊಬ್ಬ ವೋಟು ಹಾಕದಿದ್ದರೆ ಏನು ತಲೆ ಹೊಗೋಲ್ಲ’ ಎಂದು ಹೇಳುವ ಅವಿವೇಕಿಗಳಿದ್ದಾರೆ. ಅವರಿಗೆ ಏನು ಹೇಳೋಣ ? ಬುದ್ಧಿ ಹೇಳಲು ನೀವೆಲ್ಲ ಇದ್ದೀರಲ್ಲ.


ಪೂರಕ ಓದಿಗೆ-
ಅಕ್ಕ ಚುನಾವಣೆ -2003 : ನಿಮ್ಮ ಓಟು ಯಾರಿಗೆ ?


ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X