• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾತಿನ ಮಂಟಪ : ಅಪೂರ್ವ ಪ್ರಬಂಧಗಳ ಅನನ್ಯ ಸಂಗ್ರಹ

By Staff
|
 • ಡಾ.‘ಜೀವಿ’ ಕುಲಕರ್ಣಿ
 • Dr. G.V. Kulakarniಎಸ್‌.ಕೆ.ಹರಿಹರೇಶ್ವರರ ‘ಮಾತಿನ ಮಂಟಪ’ದಲ್ಲಿ 23 ಪ್ರಬಂಧಗಳಿವೆ. ಇವು ಒಂದು ರೀತಿಯಲ್ಲಿ ಮಿಶ್ರ-ಪ್ರಬಂಧಗಳಾಗಿವೆ. ಲಲಿತ ಪ್ರಬಂಧ, ಹರಟೆ, ವಿಮರ್ಶೆ, ಪರಿಚಯ ಲೇಖನ ಇಂಥ ಮಾದರಿಗಳೆಲ್ಲ ಒಂದೆಡೆ ಸೇರಿವೆ.

  ಈ ಪ್ರಬಂಧಗಳನ್ನು ನಾಲ್ಕು ವಿಭಾಗದಲ್ಲಿ ವಿಂಗಡಿಸಬಹುದು.

  1. ದರ್ಶನ,
  2. ಚಿಂತನ,
  3. ಸ್ಪಂದನ,
  4. ಮಂಥನ.
  1. ದರ್ಶನ ವಿಭಾಗ

  ಇಲ್ಲಿ ಏಳು ಪ್ರಬಂಧಗಳಿವೆ. ಇದು ಗ್ರಂಥದ ಕೆನೆಯಂತಿದೆ. ನಮಗೆ ವಿಚಾರ ಮಾಡಲು ಪ್ರೇರೇಪಿಸುವ, ನಮ್ಮ ಮೇಲೆ ಪ್ರಭಾವ ಬೀರುವ ಪ್ರಬಂಧಗಳು ಇಲ್ಲಿವೆ. ಇಲ್ಲಿ ಕೆಲವು ಪ್ರಬಂಧಗಳು ಲಲಿತ ಪ್ರಬಂಧದಂತೆ ಪ್ರಾರಂಭಗೊಂಡರೂ ನಂತರ ಗಂಭೀರವಾಗಿ ವಿಷಯ ಪ್ರವೇಶ ಮಾಡುತ್ತವೆ. ಪ್ರಾರಂಭದಲ್ಲಿ ಬರುವ ಎರಡು ಪ್ರಬಂಧಗಳು ‘ಕಣ್ಣು, ನೋಟ ಮತ್ತು ಕಾಣ್ಕೆ’, ‘ಲಕ್ಷ್ಮಿ ಎಲ್ಲಿದ್ದಾಳೆ?’, ಮತ್ತು ಕೊನೆಗೆ ಬರುವ ‘ನೀರನ್ನು ಕುರಿತು ವಿಚಾರಗಳು’ ಶೀರ್ಷಿಕೆಯ ಐದು ಪ್ರಬಂಧಗಳು ನಮ್ಮ ಮನವನ್ನು ಸೆಳೆಯುತ್ತವೆ. ಇವು ಹರಿಹರೇಶ್ವರರ ಬಹುಶ್ರುತತ್ವಕ್ಕೆ ಕನ್ನಡಿ ಹಿಡಿಯುತ್ತವೆ.

  ‘ಕಣ್ಣು, ನೋಟ ಮತ್ತು ಕಾಣ್ಕೆ’ಯಲ್ಲಿ ಹೇಳುತ್ತಾರೆ- ‘ಕನ್ನಡದಲ್ಲಿ ಕಣ್ಣಿಗೆ ಒಂದೇ ಪದವಿದೆ. ಆದರೆ ಸಂಸ್ಕೃತದಿಂದ ಎರವಲು ಪಡೆದ ಪದಗಳು ಸಾಕಷ್ಟಿವೆ.(ಚಕ್ಷು, ಅಕ್ಷಿ, ನೇತ್ರ, ನಯನ, ಲೋಚನ, ಈಕ್ಷಣ, ಅಂಬಕ, ದೃಕ್‌, ದೃಷ್ಟಿ).’ ಕನ್ನಡದಲ್ಲಿರುವ ಮುದ್ದುಗಣ್ಣು, ನಿದ್ದೆಗಣ್ಣು, ತೇಲುಗಣ್ಣು, ಮೇಲುಗಣ್ಣು, ವಕ್ಕರಗಣ್ಣು, ಬೆರಗುಗಣ್ಣು, ಬೆದರುಗಣ್ಣು, ಸುರೆಗಣ್ಣು, ಉರಿಗಣ್ಣು, ಜಿಂಕೆಗಣ್ಣುಗಳನ್ನು ಪ್ರಸ್ತಾಪಿಸುತ್ತಾರೆ. ಪಂಡಿತ ಜಗನ್ನಾಥ ಮೋಹಗೊಂಡು ಲವಂಗಿಯ ಜಿಂಕೆಗಣ್ಣುಗಳನ್ನು ವರ್ಣಿಸಿದ್ದನ್ನು ನೆನೆಯುತ್ತಾರೆ. ನಳ-ದಮಯಂತಿಯರ ಪ್ರಣಯದ ಕತೆಯನ್ನು ಹೇಳಿ ಅನಿಮಿಷರಾದ(ಕಣ್ಣಿನ ರೆಪ್ಪೆಯಿಲ್ಲದ) ದೇವತೆಗಳು ದಮಯಂತಿಯ ಸ್ವಯಂವರದಲ್ಲಿ ನಳನ ರೂಪದಲ್ಲಿ ವರಿಸ ಬಂದ ಮಹಾಭಾರತದ ಸನ್ನಿವೇಶವನ್ನು ಚಿತ್ರಿಸುತ್ತಾರೆ. ಕಾಳಿದಾಸನ ‘ಕುಮಾರಸಂಭವ’, ಆಂಡಯ್ಯನ ‘ಕಬ್ಬಿಗರ ಕಾವ’ ಇವುಗಳಲ್ಲಿ ಬರುವ ಪ್ರಸಂಗ, ಶಿವನ ಹಣೆಗಣ್ಣಿನಿಂದ ಕಾಮ ದಹನಗೊಂಡ ಸಂದರ್ಭ, ನೆನೆಯುತ್ತಾರೆ. ಪರಶಿವನ ಮೂರನೆಯ ಕಣ್ಣಿನ ಬಗ್ಗೆ ಬರೆಯುತ್ತಾರೆ. ‘ಪರಶಿವನ ಮೂರು ಕಣ್ಣುಗಳ ಬಗ್ಗೆ ಅನೇಕ ವ್ಯಾಖ್ಯಾನಗಳಿವೆ. ಅವನು ಶಿವೆ(ಶಕ್ತಿ)ಯಾಡನೆ ಕೂಡಿದ್ದನಾದ್ದರಿಂದ ಅವನು ಸ-ಅಂಬ ಶಿವ, ಸಾಂಬಶಿವ. ಮೂರು ಅಂಬೆಯರನ್ನು, ಲೋಕಮಾತೆಯರನ್ನು ರಕ್ಷಿಸುವುದರಿಂದ ಅವನು ತ್ರಿಯಂಬಕ ಅಥವಾ ತ್ರ್ಯಂಬಕ ಎಂದು ಒಂದು ಹೇಳಿಕೆಯಿದೆ. ಸಂಸ್ಕೃತದಲ್ಲಿ ದ್ಯೌ(=ಅಂತರಿಕ್ಷ), ಆಪ(=ನೀರು) ಮತ್ತು ಪೃಥ್ವೀ(=ಭೂಮಿ) ಶಬ್ದಗಳು ಸ್ತ್ರೀಲಿಂಗದಲ್ಲಿವೆ. ಈ ಮೂರು ದೇವಿಯರನ್ನು, ಅಂಬೆಯರನ್ನು ಆಲಿಸುವುದರಿಂದ ತ್ರ್ಯಂಬಕನಾದ.’ ಈ ಮಾತುಗಳನ್ನು ಹೇಳುವಾಗ ‘ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಪವರ್ಧನಂ’ ಎಂಬ ಶುಕ್ಲಯಜುರ್ವೇದದ ವಾಜಸನೇಯಿ ಸಂಹಿತೆಯ ಪಾಠವನ್ನು ಅಡಿ-ಟಿಪ್ಪಣಿಯಲ್ಲಿ ಕೊಡುತ್ತಾರೆ.

  Cover Page of Mathina Mantapa, a book by S.K.Harihareshwaraಇಲ್ಲಿಯವರೆಗೆ ಗಂಭೀರವಾಗಿ ನಡೆದ ಪ್ರಬಂಧ ಮತ್ತೆ ಲಲಿತಪ್ರಬಂಧದ ಧಾಟಿಯಲ್ಲಿ ಸಾಗುತ್ತದೆ. ಕನ್ನಡ ನುಡಿಗಟ್ಟಿನಲ್ಲಿರುವ ಕಣ್ಣು ಶಬ್ದದ ಸುತ್ತ ಹೆಣೆದ ಗಾದೆಗಳ ಚರ್ಚೆಯ ಕಡೆಗೆ ಹೊರಳುತ್ತದೆ. ಕಿಟೆಲ್‌ಕೋಶ, ಕನ್ನಡ ರತ್ನಕೋಶ, ಕನ್ನಡ ಕಸ್ತೂರಿ ಕೋಶಗಳ ಮೇಲೆ ಲೇಖಕರು ‘ಕಣ್ಣುಹಾಯಿಸುತ್ತಾರೆ’ , ‘ಕಣ್ಣಾಡಿಸುತ್ತಾರೆ’. ಸಂಚಿಯ ಹೊನ್ನಮ್ಮನ ‘ಕಣ್ಣುಕಾಣದ ಗಾವಿಲರು’ ಎಂಬ ಉಕ್ತಿ ನೆನಪಾಗುತ್ತದೆ. ಕೊನೆಗೆ ಕಣ್ಣಿನ ಮರ್ಮ ಭೇದಿಸುತ್ತ, ‘ಹುಟ್ಟಿದಾಗ ನಾವು ಕಣ್ಣುಮುಚ್ಚಿ ಈ ಲೋಕಕ್ಕೆ ಬಂದಂತೆ, ಈ ಭೌತ ಜಗತ್ತನ್ನು ಬಿಟ್ಟು ಅಗಲುವಾಗಲೂ ನಾವು ಕಣ್ಣುಮುಚ್ಚಿಯೇ ಹೋಗುತ್ತೇವೆ’ ಎನ್ನುತ್ತಾರೆ. ಕಣ್ಣುಗಳ picture galleryಯಿಂದ ಹಾಯ್ದುಹೋದ ಅನುಭವ ನಮಗಾಗುತ್ತದೆ.

  ‘ಲಕ್ಷ್ಮಿ ಎಲ್ಲಿದ್ದಾಳು?’ ಎಂಬ ಪ್ರಬಂಧ ಕೂಡ ಅಷ್ಟೇ ರೋಚಕವಾಗಿದೆ. ಲಕ್ಷ್ಮಿಗೆ ನೂರ ಎಂಟು ನಾಮಗಳು, ಸಾವಿರದ ಅಂಕಿತಗಳು. ಬಹು ಪರಿಚಿತ ಹೆಸರುಗಳಿಗಾಗಿ ಅಮರಕೋಶಕ್ಕೆ ಶರಣುಹೋಗುತ್ತಾರೆ. ‘ಲಕ್ಷ್ಮೀ, ಪದ್ಮಾಲಯಾ, ಪದ್ಮಾ, ಕಮಲಾ, ಶ್ರೀಃ, ಹರಿಪ್ರಿಯಾ, ಇಂದಿರಾ, ಲೋಕಮಾತಾ, ಮಾ, ರಮಾ, ಮಂಗಳ-ದೇವತಾ, ಭಾರ್ಗವೀ, ಲೋಕಜನನೀ, ಕ್ಷೀರಸಾಗರ-ಕನ್ಯಕಾ’ ನೆನೆಯುತ್ತಾರೆ. ಹಾಲಿನ ಸಮುದ್ರವನ್ನು ಕಡೆದಾಗ ಹೊರಬಂದ ಹದಿನಾಲ್ಕು ರತುನಗಳಲ್ಲಿ ಹೇಗೆ ಲಕ್ಷ್ಮಿಯ ಜನನವಾಯಿತೆಂಬುದನ್ನು ಬಣ್ಣಿಸುತ್ತಾರೆ. ಮಾರ್ಕಾಂಡೇಯ ಪುರಾಣ, ದೇವಿಮಹಾತ್ಮೆ ಇವುಗಳ ಉಲ್ಲೇಖ ಬರುತ್ತದೆ. ಲಕ್ಷ್ಮಿಯನ್ನು ತನ್ನ ಕಾವ್ಯದಲ್ಲಿ ಪಾತ್ರ ಮಾಡಿದ ರನ್ನ ಕವಿಯ ‘ಗದಾಯುದ್ಧ’ದ ಆಯ್ದ ಭಾಗ ಉದ್ಧರಿಸುತ್ತಾರೆ. ವಾಚಕರಿಗೆ ಓದಲು ಕಷ್ಟವಾಗದಿರಲಿ ಎಂದು ಹೊಸಗನ್ನಡ ರೂಪ ಕೊಡುತ್ತಾರೆ.

  ಇನ್ನು ನೀರಿನ ಬಗ್ಗೆ ಇರುವ ಐದು ಪ್ರಬಂಧಗಳು ಬಹಳೇ ಸೊಗಸಾಗಿವೆ. ನೀರು ಪಂಚಮಹಾಭೂತಗಳಲ್ಲಿ ಒಂದಾದ ತತ್ತ್ವ. ಸಂಸ್ಕೃತದಲ್ಲಿ ನೀರಿಗೆ ಹಲವಾರು ಶಬ್ದಗಳಿವೆ.(ಆಪ್‌, ವಾರ್‌, ವಾರಿ, ಸಲಿಲ, ಕಮಲ, ಜಲ, ಪಯಸಂ, ಕೀಲಾಲ, ಅಮೃತ, ಜೀವನ, ಭುವನ, ವನ, ಕಬಂಧ, ಉದಕ, ಪಾಥಸ್‌, ಪುಷ್ಕರ, ಸರ್ವತೋಮುಖ, ಅಂಭಸ್‌, ಅರ್ಣಸ್‌, ತೋಯ, ಪಾನೀಯ, ನೀರ, ಕ್ಷೀರ, ಅಂಬು, ಶಂಬರ, ಕೃಪೀಟ, ಕಾಂಡ, ದೇವನೀಯ, ಕುಶ, ವಿಷ, ಮೇಘಪುಷ್ಪ, ಘನರಸ ಹೀಗೆ ಮುಂ.)

  ‘ಋಗ್ವೇದದ ಅಂಬರೀಷ ಸಿಂಧುದ್ವೀಪನೆಂಬ ಋಷಿ ‘ನೀರ’ನ್ನು ತುಂಬಾ ಆತ್ಮೀಯತೆಯಿಂದ, ಭಾವುಕ ಹೃದಯದಿಂದ ಕರೆದುದು ಆ ಕಾಲದಲ್ಲಿ ಎಲ್ಲರನ್ನೂ ಆಕರ್ಷಿಸಿರಬೇಕು’ ಎನ್ನುತ್ತ ಋಗ್ವೇದದ ಮೂರು ಋಕ್‌ಗಳನ್ನು ಉದ್ಧರಿಸುತ್ತಾರೆ. ಅವು ಇಲ್ಲಿವೆ:

  ಓ ನೀರೆ, ನಮಗಿಲ್ಲಿ ಸುಖದಾಯಿಯಾಗಿಯೆ ನಿಲ್ಲು,

  ಒಳಗಣ್ಣ ತೆರೆಯಿಸುತ ನಿನ್ನ ರಮಣೀಯತೆಯತ್ತ

  ನೀ ಹೊತ್ತ ಜೀವಪೋಷಕ ರಸವ ನಮಗೀಯೆ ಬಾರ.

  (ಆಪೋಹಿಷ್ಠಾ ಮಯೋಭುವಸ್ತಾನ ಊರ್ಜೇ

  ದಧಾತನ। ಮಹೇರಣಾಯ ಚಕ್ಷಸೇ।)

  ಒಲವು ಸೂಸುವ ತಾಯಿಯೋಪಾದಿಯಲಿ ನೀರಿರಲಿ;

  ಬತ್ತದೊಲುಮೆಯ ಒರತೆ ಚಿಲುಮೆಯಾಗಿರಲಿ!

  ತುಂಬ ಸುಖವನು ಕೊಡುವ ಆ ಜೀವರಸದ ಸೆಲೆ

  ನಮ್ಮ ಪಾಲಿಗೆ ತುಂಬಿ ಹರಿದಿತ್ತ ಬರಲಿ.

  (ಯೋ ವಃ ಶಿವತಮೋ ರಸಃ ತಸ್ಯಭಾಜಯತೇ

  ಹನಃ। ಉಶತೀರಿವ ಮಾತರಃ।)

  ಯಾವ ಪ್ರಾಣಾಧಾರ ದ್ರವ ನಿನ್ನಲ್ಲಿರುತಿರಲಿಂತು

  ಸಂತಸವೆ ಉಕ್ಕಿ ಹರಿಯುತಿಹುದೋ ಅಂಥ

  ಜೀವರಸ ಬೇಡುತ್ತ ಬಂದಿಹೆವು ನಿನ್ನತ್ತ

  ನೀರೆ, ನಮ್ಮೆಲ್ಲದನು ಸೃಜಿಸು, ಉಳಿಸು!

  (ತಸ್ಮಾ ಅರಂಗಮಾಮವೋ, ಯಸ್ಯ ಕ್ಷಯಾಯ

  ಜಿನ್ವಥ। ಆಪೋ ಜನಯಥಾ ಚ ನಃ।।)

  ನೀರಿನ ಮೇಲಿನ ಒಂದು ಪ್ರಬಂಧದಲ್ಲಿ (‘ನೀರ ಹೂವು ಯಾರು, ನಿಮಗೆ ಗೊತ್ತೇನು?’) ‘ಮಂತ್ರಪುಷ್ಪ’ದ ಸರಳ ಸುಂದರ ಭಾವಾನುವಾದವಿದೆ.

  ‘ನೀರು’ (ಪದ) ತುಂಬಿದ ಕನ್ನಡ ನುಡಿಗಟ್ಟು , ಒಗಟು, ಗಾದೆಗಳ ಬಗ್ಗೆ ಬರೆಯುತ್ತಾರೆ. (ಒಗಟದ ಒಂದು ಸ್ಯಾಂಪಲ್‌: ಎತ್ತರದಿ ಮೇಲಿದೆ ನೀರು, ಮೋಡವಲ್ಲ ; ನಾರುಮಡಿ ಸುತ್ತಿಹೆನು, ಸನ್ಯಾಸಿಯಲ್ಲ ; ನೆತ್ತಿಯಲಿ ಕಣ್ಣುಂಟು, ಮುಕ್ಕಣ್ಣನಲ್ಲ ; ಯಾರು ಹೇಳಿರಿ ಬೇಗ, ಜಾಣರೆಲ್ಲ.(-ತೆಂಗು)

  ‘ನೀರು, ನದಿ, ‘ತೀರ್ಥ’ ಮತ್ತು ಸ್ನಾನ’ ದ ಬಗ್ಗೆ ಬರೆಯುತ್ತ ‘‘ಪವಿತ್ರ ಜಲವೇ ತೀರ್ಥ, ಅದು ಅಕಾಲ ಮೃತ್ಯುವನ್ನು ಹೋಗಲಾಡಿಸುವದು, ವ್ಯಾಧಿಗಳನ್ನು ನಿವಾರಿಸುವುದು, ಪಾಪಗಳ ತಾಪವನ್ನು ಶಮನಗೊಳಿಸುವುದು’’ ಎನ್ನುತ್ತಾರೆ. ‘ತೀರ್ಥ’ದ ಪ್ರಯೋಗವನ್ನು ‘ತೀರ್ಥರೂಪ’, ‘ತೀರ್ಥಂಕರ’ದ ವರೆಗೆ ಹಬ್ಬಿದ್ದನ್ನು ತೋರಿಸುತ್ತಾರೆ. ತೈತ್ತರೀಯ ಆರಣ್ಯಕದ ‘ಆಪಃ ಪುನನ್ತು ಪೃಥಿವೀಂ’ ಮಂತ್ರದ ಸುಂದರ ಕನ್ನಡಾನುವಾದವನ್ನು ಕೊಡುತ್ತಾರೆ.

  ಪವಿತ್ರಗೊಳಿಸುವದು ನೀರಿನ ಕಾರ್ಯ.

  ‘‘ಎಂಜಲಾದರು ತಿಂದು, ತಿನ್ನಬಾರದು ಮೆದ್ದು,

  ಅರಿವಿರದೆ ತಪ್ಪುತಪ್ಪಾಗಿ ನಾ ತುಂಬ ನಡೆದೆ;

  ಕೆಟ್ಟದರ ಒಡನಾಟ ಸಹಿಸಿ ಸುಮ್ಮನೆ ಇದ್ದೆ-

  ನನ್ನ ಮನ್ನಿಸಿ, ನೀರೆ, ನೀ ಪವಿತ್ರಗೊಳಿಸು ಮುದದೆ!’’

  (ಯದುಚ್ಛಿಷ್ಟಂ ಅಭೋಜ್ಯಂ ಯದ್ವಾ ದುಶ್ಚರಿತಂ ಮಮ

  ಸರ್ವಂ ಪುನನ್ತು ಮಾಂ ಆಪೋ, ಅಸತಾಂ ಚ ಪ್ರತಿಗೃಹಂ)

  ನೀರಿನಲ್ಲಿ ಮುಳುಗಬೇಕು, ಶುದ್ಧಿಗೊಳ್ಳಬೇಕು, ನಂತರವೇ ಧಾರ್ಮಿಕ ವಿಧಿಗಳನ್ನು ಮಾಡಬೇಕು. ಸ್ನಾನ, ಸ್ನಾತಕ ಇವುಗಳ ವಿವರಣೆಯನ್ನು ಕೊಡುತ್ತಾರೆ. ನೀರಿನಲ್ಲಿಯ ಸ್ನಾನ ‘ವಾರುಣ ಸ್ನಾನ’. ಇದಲ್ಲದೇ ವಾಯುಸ್ನಾನ, ಸೂರ್ಯಸ್ನಾನ, ಅಗ್ನಿಸ್ನಾನ, ತೇಜಸ್‌ಸ್ನಾನ, ಮೃತ್ತಿಕಾ ಸ್ನಾನ, ಭಸ್ಮ ಸ್ನಾನ, ಮತ್ತು ಅರಿಷಣ ಸ್ನಾನಗಳೂ ಇವೆ. ವಿವರ ನೀಡುತ್ತಾರೆ.

  ಬಾಹ್ಯ ಶುಚಿಯಾಂದಿಗೆ ಆಂತರಿಕ ಶುಚಿಯೂ ಅಷ್ಟೇ ಆವಶ್ಯಕ. ತೀರ್ಥವಾವುದು ಎಂದು ಹೇಳುವಾಗ ಪರಿಶುದ್ಧವಾದ ಮನಸ್ಸೇ ‘ತೀರ್ಥ’ ಎನ್ನುತ್ತಾರೆ. ಸತ್ಯ, ಕ್ಷಮೆ, ಇಂದ್ರಿಯನಿಗ್ರಹ, ಸರ್ವ ಪಶು-ಪ್ರಾಣಿಗಳ ಮೇಲಿನ ದಯೆ, ಪ್ರಾಮಾಣಿಕತೆ, ದಾನ, ಸಂಯಮ, ಸಂತೋಷ, ಬ್ರಹ್ಮಚರ್ಯ, ಹಿತನುಡಿ, ತಿಳುವಳಿಕೆ, ಎದೆಗಾರಿಕೆ ಮತ್ತು ತಪಸ್ಸು ‘ತೀರ್ಥ’ಕ್ಕೆ ಉದಾಹರಣೆಯಾಗಿವೆ ಎಂಬ ನಮ್ಮ ಪೂರ್ವಜರ ವಿಚಾರ ವಿಸ್ತರಿಸುತ್ತಾರೆ. (ಸತ್ಯಂ ತೀರ್ಥಂ, ಕ್ಷಮಾ ತೀರ್ಥಂ...)

  ಶತರುದ್ರೀಯದಲ್ಲಿ ಬರುವ ನೀರಿನ ವರ್ಣನೆಯನ್ನು ಚರ್ಚಿಸುತ್ತಾರೆ. ವಿಪುಲ ಉದಾಹರಣೆಗಳನ್ನು ಕೊಡುತ್ತಾರೆ. ಶಿವನಿಗೆ ಅಭಿಷೇಕ ಮಾಡುವಾಗಿನ ಮಂತ್ರಗಳ ವಿವರ ನೀಡುತ್ತಾರೆ.

  2. ಚಿಂತನ ವಿಭಾಗ

  ಇಲ್ಲಿ ಮೂರು ಪ್ರಬಂಧಗಳಿವೆ. ‘ಸಂತ ರಾಮಾನುಜರು ವರ್ಣಿಸುವ ದೇವರು’ ಎಂಬ ಪ್ರಬಂಧದಲ್ಲಿ, ‘‘ ಆಚಾರ್ಯ ಶ್ರೀ ರಾಮಾನುಜರ ಮನಸ್ಸಿನಲ್ಲಿ ಒಡಮೂಡುವುದು ನಿರಾಕಾರ, ನಿರ್ಗುಣ, ಸರ್ವಶಕ್ತ ಬ್ರಹ್ಮತತ್ವವಲ್ಲ ; ಅವರು ಕಾಣುವುದು ಸಾಕಾರ ಸುಂದರ, ಸರ್ವಗುಣೋಪೇತ ಶ್ರೀಮನ್‌ ನಾರಾಯಣನ ದಿವ್ಯ ಮಂಗಳ ಮೂರ್ತಿಯನ್ನು’’ ಎನ್ನುತ್ತ ಶ್ರೀ ರಾಮಾನುಜರು ಬಣ್ಣಿಸಿದ ಮಂಗಳ ಮೂರ್ತಿಯನ್ನು ವರ್ಣಿಸುತ್ತಾರೆ. ‘ಸಮಯ ಪದದ ಬಗ್ಗೆ ಒಂದು ವಿವೇಚನೆ’ ಎಂಬ ಪ್ರಬಂಧದಲ್ಲಿ ಹೇಳುತ್ತಾರೆ, ‘‘ಸೋಜಿಗವೆಂದರೆ, ಕಾಲಸೂಚಕವಾದ ‘ಸಮಯ’ ಪದ ವೇದಗಳಲ್ಲಿ ಬಂದಿಲ್ಲ , ಉಪನಿಷತ್ತುಗಳಲ್ಲಿ ಕಂಡುಬರುವದಿಲ್ಲ, ಭಗವದ್ಗೀತೆಯಲ್ಲಿ ಕಾಣಿಸುವದಿಲ್ಲ’’ ಎನ್ನುತ್ತ ಆ ಶಬ್ದ ‘ಕಾಲ’ಕ್ಕೆ ಸಂವಾದಿಯಾಗಿ ಹೇಗೆ ಬಳಸಲ್ಪಟ್ಟಿದೆ ಎಂಬುದರ ವಿವರ ಕೊಡುತ್ತಾರೆ. ವೈಯ್ಯಾಕರಣಿಗಳಾದ ಪಾಣಿನಿ, ಕೇಶಿರಾಜರನ್ನು ಉದ್ಧರಿಸುತ್ತಾರೆ. ವಿಷ್ಣುಸಹಸ್ರನಾಮದಲ್ಲಿ ಭಗವಂತನನ್ನು ‘ಸಮಯಜ್ಞ’ ಎಂದು ಕರೆದುದನ್ನು ನೆನೆದು, ‘ಸಮಯ’ದ ಸುತ್ತು ತಿರುಗಾಡಿ ಚಿಂತಿಸುವ ಈ ಪ್ರಬಂಧದ ಹಿಂದೆ ಇದ್ದ ಲೇಖಕರ ಅಭ್ಯಾಸ, ಅನ್ವೇಷಣೆ ನಮ್ಮನ್ನು ದಿಗ್‌ಭ್ರಮೆಗೋಳಿಸುತ್ತದೆ. ‘ಬಿಡುಗಡೆ’ ಎಂಬ ಪ್ರಬಂಧ ಇವರ ಚಿಂತನೆಗೆ ಇನ್ನೊಂದು ಉದಾಹರಣೆ. ಬಾಳಿನ ಕೊನೆಯೆ ‘ಬಿಡುಗಡೆ’ ಎನ್ನುತ್ತ ಭಾಸನ ‘ಪಂಚರಾತ್ರ’, ಮೈತ್ರಿ ಉಪನಿಷತ್‌, ಯೋಗವಾಸಿಷ್ಠ, ಅಷ್ಟಾವಕ್ರಗೀತಾ, ವಿಷ್ಣುಸ್ಮೃತಿಗಳನ್ನು ಉದ್ಧರಿಸಿದ ಚಿಂತನೆ ಬಹಳೇ ಮಾರ್ಮಿಕವಾಗಿ ಮೂಡಿದೆ.

  3. ಸ್ಪಂದನ

  ಸ್ಪಂದನ ವಿಭಾಗದಲ್ಲಿ ಆರು ಪ್ರಬಂಧಗಳಿವೆ. ‘ವಿದೇಶಗಳಲ್ಲಿ ಕನ್ನಡ ಉಳಿಸಿ, ಬೆಳಸುವ ಬಗೆ’(ಕೆನಡಾ ಕನ್ನಡ ಸಮ್ಮೇಲನದ ಅಗ್ರ ಭಾಷಣ), ‘ಕನ್ನಡ ದಿಗ್ವಿಜಯದ ಒಂದು ಸ್ಥಾನ’, ‘ಮಧುಮಾಸದಲ್ಲಿ ನೆಟ್ಟ ಮರದ ಶಾಖೋಪಶಾಖೆಗಳು’, ‘ಇಂದು ಸಂಜೆ ಒಂದು ನಾಟಕ ಇದೆ’(ಅಮೇರಿಕೆಯಲ್ಲಿ ಕನ್ನಡ ನಾಟಕ ಪ್ರಯೋಗಿಸುವ ಹವ್ಯಾಸಿ ನಾಟಕ ತಂಡಗಳ ಪರಿಚಯ ಲೇಖನ), ‘ಬರೆಯಬಲ್ಲವರಿಗೆ ಪ್ರೋತ್ಸಾಹದ ಪೋಷಣೆ’, ‘ದರ್ಶನದ ಪ್ರಸ್ತಾವನೆ’,(ಹ್ಯೂಸ್ಟನ್‌ನಲ್ಲಿ ನಡೆದ ಪ್ರಥಮ ವಿಶ್ವ ಕನ್ನಡ ಸಮ್ಮೇಲನದ ಸ್ಮರಣ ಸಂಚಿಕೆ ಸಂಪಾದಕರಾಗಿ ಬರೆದ ಪ್ರಸ್ತಾವನೆ)- ಈ ಎಲ್ಲ ಲೇಖನಗಳು ಅಮೇರಿಕೆಯಲ್ಲಿ ವಾಸಿಸುವ ಕನ್ನಡಿಗರು ಕನ್ನಡ ನುಡಿ ಹಾಗೂ ಸಂಸ್ಕೃತಿಯನ್ನು ಉಳಿಸಲು, ಬೆಳಸಲು ಮಾಡಿದ ಕೆಲಸವನ್ನು ಬಿಂಬಿಸುತ್ತವೆ.

  4. ಮಂಥನ

  ಈ ವಿಭಾಗದಲ್ಲಿ ಆರು ಪ್ರಬಂಧಗಳಿವೆ. ‘ಹರಿಹರನು ಬೆಳಗಿದ ಚಿತ್ರ: ಇಳಿಯಾಂಡ ಗುಡಿಮಾರ’, ‘ಕೆಲವು ಕವಿಗಳ ದೃಷ್ಟಿಯಲ್ಲಿ ವಸಂತ’, ‘ಸೀಳ್ಗವನಗಳು-ಕಾರಂತರ ಅಪೂರ್ವ ಕವನಗಳು’, ‘ಅಡಿಗರ ‘ನನ್ನ ಅವತಾರ’ ಕವನದ ಒಂದು ಅಧ್ಯಯನ’, ‘ಡಾ। ಜಿ.ಎಸ್‌.ಶಿವರುದ್ರಪ್ಪನವರ ಕಾವ್ಯದಲ್ಲಿ ವಿಡಂಬನೆಯ ಸೊಬಗು’, ‘ಪು.ತಿ.ನ. ಅವರ ಕಾವ್ಯ- ಒಂದು ಸಮೀಕ್ಷೆ’, ಈ ಪ್ರಬಂಧಗಳಲ್ಲಿ ಸಾಹಿತ್ಯ ವಿಮರ್ಶೆಯಲ್ಲಿ ಕೈಹಾಕಿದ್ದಾರೆ. ಈ ಕ್ಷೇತ್ರದಲ್ಲಿ ಹರಿಹರೇಶ್ವರರು ಸಿದ್ಧಹಸ್ತರಲ್ಲ. ಒಳ್ಳೆಯದನ್ನು ಮೆಚ್ಚುವ ಗುಣ ಅವರಲ್ಲಿದೆ ಎಂಬುದನ್ನು ಇವು ತೋರುತ್ತವೆ.

  ಒಂದು ಪ್ರಬಂಧವು ಯಾವ ವಿಭಾಗದಲ್ಲೂ ಸರಿಹೊಂದುವುದಿಲ್ಲ. ಅದನ್ನು ಪರಿಶಿಷ್ಠದಲ್ಲಿ ಹಾಕಬಹುದು ಅದು, ‘ಜುಲೈ ನಾಲ್ಕು: ಅಮೇರಿಕಾದ ಸ್ವಾತಂತ್ರ್ಯ ದಿನ’.

  ನನ್ನ ಈ ಲೇಖನದ ಉದ್ದೇಶ ‘ಮಾತಿನ ಮಂಟಪ’ದ ವಿಮರ್ಶೆ ಮಾಡುವುದಾಗಿಲ್ಲ. ಅದರ ವೈಶಿಷ್ಟ್ಯ, ಅನನ್ಯತೆ, ಉತ್ತಮಿಕೆಯ ಬಗ್ಗೆ ರಸಿಕ ಕನ್ನಡ ವಾಚಕರ ಗಮನ ಸೆಳೆಯುವುದಾಗಿದೆ. ಕನ್ನಡ ಸಾಹಿತ್ಯ ಕನ್ನಡ ಪಂಡಿತರ, ಮೇಷ್ಟ್ರುಗಳ, ಪ್ರಾಧ್ಯಾಪಕರ ಸೊತ್ತಲ್ಲ . ಜೀವನದ ಬೇರೆ ಕ್ಷೇತ್ರಗಳಲ್ಲಿ ಪರಿಣತರಾದವರೂ ಉತ್ತಮ ಸಾಹಿತ್ಯ ರಚಿಸಬಹುದೆಂದು ಹರಿಹರೇಶ್ವರರು ತೋರಿಸಿಕೊಟ್ಟಿದ್ದಾರೆ. ಅವರಿಗೆ ಕನ್ನಡ ರಸಿಕರ ಪರವಾಗಿ ನಾನು ಅಭಿನಂದಿಸುತ್ತೇನೆ.

  ಪೂರಕ ಓದಿಗೆ-

  ಜೀವಿ ಕಂಡಂತೆ ಎಸ್‌.ಕೆ.ಹರಿಹರೇಶ್ವರ

  ‘ಮಾತಿನ ಮಂಟಪ’ದಲ್ಲೊಂದು ಜಗಲಿ !

  ‘ಮಾತಿನ ಮಂಟಪ’ದ ಕೆಲವು ಆಧಾರ ಸ್ತಂಭಗಳು...

  ಮಾತಿನ ಮಂಟಪದ ಲೇಖನಗಳು

  ಜೀವಿ ಕಂಡ ಅಮೆರಿಕಾ

  ಮುಖಪುಟ / ಎನ್‌ಆರ್‌ಐ

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more