ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೂರಕ ಓದಿಗೆ-

By Staff
|
Google Oneindia Kannada News

* ಜಾನಕಿ

ಪ್ರಿಯ ಶಾಮ್‌,

ದಿನೇಶ್‌ ಕೆ. ನಂಜೇಗೌಡರ ಮಾತಿನಲ್ಲಿ ಅರ್ಥವಿದೆ. ಅವರು ‘ಅನಂತಮೂರ್ತಿಯವರು ಇಂಥ ರಗಳೆಗಳನ್ನೆಲ್ಲ ಮಾಡುವುದನ್ನು ಬಿಟ್ಟು ಸಂಸ್ಕಾರದಂಥ ಒಳ್ಳೆಯ ಕಾದಂಬರಿಗಳನ್ನು ಬರೆಯಲಿ. ನಾನು ಸಂಸ್ಕಾರ ಓದಿದ್ದೇನೆ’ ಎಂದು ಬರೆದಿದ್ದಾರೆ.

ಅವರು ಸಂಸ್ಕಾರ ಓದಿದ್ದಕ್ಕೆ ಸಂತೋಷ. ಆದರೆ ಸಮಸ್ಯೆ ಇರುವುದೂ ಅಲ್ಲಿಯೇ. ನಂಜೇಗೌಡರು ಮತ್ತು ಅವರಂಥ ಅನೇಕರು ಸಂಸ್ಕಾರವನ್ನಷ್ಟೇ ಓದಿದ್ದಾರೆ. ಅನಂತರ ಬಂದ ಭವವನ್ನಾಗಲೀ ದಿವ್ಯವನ್ನಾಗಲೀ ಅವರು ಓದುವುದಕ್ಕೆ ಹೋಗಿಲ್ಲ . ಹೀಗಾಗಿ ನಂಜೇಗೌಡರ ಅನಂತಮೂರ್ತಿ ಅರಿವು ಮತ್ತು ಕನ್ನಡ ಸಂಸ್ಕಾರ 1965ನೇ ಇಸವಿಯದ್ದು. ಆ ಸವಕಲು ನೆನಪನ್ನಿಟ್ಟುಕೊಂಡು ಇವತ್ತು ವ್ಯಾಪಾರ ಮಾಡಿದರೆ ಹ್ಯಾಗೆ ನಂಜೇಗೌಡರೇ ?

ಇನ್ನು ಟೆಕ್ಸಾಸ್‌ನ ಬೇ ಸಿಟಿಯ ವತ್ಸಕುಮಾರ್‌ ಕನ್ನಡಿಗರ ಸಾಧನೆಗೆ ನಾವು ಹೆಮ್ಮೆ ಪಡಬೇಕು ಅಂದಿದ್ದಾರೆ. ಪಡೋಣವಂತೆ. ಆದರೆ ಕನ್ನಡಿಗರ ಸಾಧನೆ, ಶಿಕ್ಷಣ ಮತ್ತು ಆರ್ಥಿಕ ಅಭಿವೃದ್ಧಿ ಅಂತಿಮವಾಗಿ ಅವರಿಗೆ ಕನ್ನಡದ ಬಗ್ಗೆ ಅಲರ್ಜಿ ಮೂಡಿಸುವಂತಾಗಬಾರದು ಅಲ್ಲವೇ ?

ಕನ್ನಡ ಲೇಖಕರಷ್ಟೇ ಅಮೆರಿಕನ್ನಡ ಲೇಖಕರೂ ಪ್ರತಿಭಾಪೂರ್ಣರು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆ ವಿಚಾರದಲ್ಲಿ ನಮಗೂ ಅಭಿಪ್ರಾಯಭೇದವಿಲ್ಲ.

ಆದರೆ ಅವರ ಮಾತಲ್ಲೇ ವೈರುಧ್ಯವೂ ಇದೆ. ಉತ್ತರ ಅಮೆರಿಕಾದ್ಯಂತ 26 ಕನ್ನಡ ಕೂಟಗಳಿವೆ ಎಂದಿದ್ದಾರೆ ಅವರು. ಕನ್ನಡಿಗರೆಲ್ಲ ಒಂದೇ ಎಂಬ ಭಾವನೆ ಅವರಲ್ಲಿ ಅಷ್ಟು ಗಾಢವಾಗಿ ಇರುತ್ತಿದ್ದರೆ 26 ಕನ್ನಡ ಕೂಟಗಳೇಕೆ ಬೇಕಿತ್ತು ? ಒಂದು ಕೂಟ ಸಾಕಿತ್ತಲ್ಲ ? ಇಪ್ಪತ್ತಾರೂ ಕೂಟಗಳೂ ಒಂದೇ ಕನ್ನಡ ಕೂಟದ ಶಾಖೆಗಳೆಂದು ಸಮರ್ಥಿಸಿಕೊಳ್ಳಬೇಡಿ. ಒಂದೇ ‘ಅಕ್ಕ’ನ ದುಃಖ ಎಷ್ಟೆಂಬುದು ಕಳೆದ ಎರಡು ವರ್ಷಗಳಲ್ಲಿ ನಮಗೆ ಅರಿವಾಗಿದೆ.

ನಿಮಗೆ ಕನ್ನಡದ ಅಗತ್ಯ ಮತ್ತು ಪ್ರೀತಿ ಇರುವುದು ಈ ಕಾರಣಗಳಿಗೆ :

  1. ಕನ್ನಡ ನಾಡನ್ನು ಬಿಟ್ಟು ಹೋಗಿದ್ದೇವೆ ಎಂಬ ಪಾಪ ಪ್ರಜ್ಞೆಯನ್ನು ಮುಚ್ಚುವುದಕ್ಕೆ.
  2. ಅಷ್ಟು ದೂರ ಹೋದರೂ ಕನ್ನಡವನ್ನು ಮರೆತಿಲ್ಲ ಎಂದು ನಿಮ್ಮ ಹಮ್ಮನ್ನು ನೀವೇ ತೃಪ್ತಿ ಪಡಿಸಿಕೊಳ್ಳುವುದಕ್ಕೆ.
  3. ಕ್ರೆೃಸಿಸ್‌ ಬಂದಾಗ ನಾವು ಕನ್ನಡಿಗರು ಎಂಬ ಕೊಡೆಯಡಿ ಒಂದಾಗಿ ಹೋರಾಡಿ ಬೇಳೆ ಬೇಯಿಸಿಕೊಳ್ಳುವುದಕ್ಕೆ.
  4. ಎಲ್ಲಕ್ಕಿಂತ ಮುಖ್ಯವಾಗಿ ಒಂದು ಅಘಟಿತ ಪ್ರೇಮಕ್ಕೆ ತುತ್ತಾದ ಭಗ್ನ ಪ್ರೇಮಿಯ ವಿಷಾದದ ಸುಖವನ್ನು ಕನ್ನಡನೆಲದಿಂದ ದೂರವಿರುವ ಕಷ್ಟಕ್ಕೆ ತಾಳೆ ಹಾಕಿಕೊಂಡು ಕೊರಗಿ ಖುಷಿಪಡುವುದಕ್ಕೆ !
ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಅಂತ ಅದ್ಯಾವಾಗ ಬರೆದರೋ ಕುವೆಂಪು, ಅಲ್ಲಿಂದಾಚೆಗೆ ಕನ್ನಡವಾಗಿರುವುದಕ್ಕೋಸ್ಕರ ನಾವು ಎಲ್ಲಾದರೂ ಎಂತಾದರೂ ಇರೋದಕ್ಕೆ ಶುರು ಹಚ್ಚಿಕೊಂಡಿದ್ದೇವೆ !

ಜೈ ಕನ್ನಡ ತಾಯೇ
ಅಮೆರಿಕನ್ನಡಿಗರನ್ನೂ ಕಾಯೇ !

ಪೂರಕ ಓದಿಗೆ-
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X