• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಜಾಪ್ರಭುತ್ವದ ಯುಗದಲ್ಲಿ ಭೋಜರಾಜ

By Prasad P Naik
|
H.K.Krishnapriyan ಕಪ್ಪಿನಿಯ*

krishnapr@comcast.net

ಇಪ್ಪತ್ತನೆಯ ಶತಮಾನದ ಎರಡನೆಯ ಅರ್ಧ. ದೇಶದಲ್ಲಿ ಪ್ರಜಾಪ್ರಭುತ್ವ ತಳವೂರಿತ್ತು. ರಾಜರ ಕಾಲ ಕಳೆದಿತ್ತು. ಅವರ ಇದ್ದಬದ್ದ ರಾಜವೇತನ ಕೂಡ ರದ್ದಾಗಿ, ಅವರು ಹೋಟಲುಗಳನ್ನು ನಡೆಸುವ ಸ್ಥಿತಿಗಿಳಿದಿದ್ದರು. ಉಜ್ಜಯಿನಿಯ ರಾಜಾಧಿರಾಜ, ಭೋಜನಿಗೂ ಈ ಕರ್ಮ ತಪ್ಪಲಿಲ್ಲ. ಅವನೂ ದಕ್ಷಿಣದೇಶಕ್ಕೆ ವಲಸೆ ಹೋಗಿ, ಅಲ್ಲಿನ ಕಲ್ಯಾಣನಗರಿಯಲ್ಲಿ ನೆಲಸಿ, ಅಲ್ಲಿನ ಹೊಸಕಾಲದ ಪ್ರಜೆಗಳ ಯಜ್ಞಗಳಾದ ಮದುವೆಗಳಿಗೆ ಅಡಿಗೆಭಟ್ಟರನ್ನು ಒದಗಿಸುವ ವ್ಯಾಪಾರದಲ್ಲಿ ತೊಡಗಿದನು. ಅವನ ಅತ್ಯಮೂಲ್ಯ ಆಸ್ತಿಯಾದ ನವಮಣಿಗಳಿಗೆ** ಅಡಿಗೆಯ ಕಲೆ ಕಲಿತುಕೊಳ್ಳುವ ಕೆಲಸ ಹಚ್ಚಿದನು. ಬಹಳ ಬೇಗನೆ ಅವರು ಈ ಹೊಸ ವಿದ್ಯೆಯಲ್ಲಿ ಪರಿಣತಿ ಗಳಿಸಿ ಪ್ರಖ್ಯಾತರಾದರು. ಎಷ್ಟಾದರೂ ಪ್ರತಿಭೆ, ಯಾವ ವಿಷಯದಲ್ಲಾದರೂ ಪ್ರತಿಭೆಯೇ ಅಲ್ಲವೇ? ಅವರು ಈ ರೀತಿ ತಮ್ಮ ಹೊಸ ಕೈಚಳಕದಿಂದ ಊರಲ್ಲೆಲ್ಲಾ ಹೆಸರು ಗಳಿಸಿ ಈ ಕೆಳಗಿನ ಶ್ಲೋಕವನ್ನು ಮನೆಮಾತಾಗಿಸಿದರು.

ಉಪಮಾ ಕಾಲಿದಾಸಸ್ಯ ಭಾರವೇರ್ಬಿರಿಯಾಣಿ ಚ।

ದಂಡಿನಸ್ಸಂಡಿಗೇಮ್‌ ಚೈವ ಮಾಘಭಕ್ಷಣಭಕ್ಷಣಂ।।

ಪ್ರತಿಪದಾರ್ಥ:

ಉಪಮಾ(ಉಪ್ಪಿಟ್ಟು, ಉಪ್ಪು+ ಹಿಟ್ಟು, ರವೆಯನ್ನು ಘಮಘಮಿಸುವಂತೆ ಹುರಿದು ಉಪ್ಪು, ಒಗ್ಗರಣೆ ಹಾಕಿ ತಯಾರಿಸುವ ಭಕ್ಷ್ಯ) ಕಾಲಿದಾಸಸ್ಯ(ಕಾಲಿದಾಸನದು), ಭಾರವೇಃ (ಭಾರವಿಯ) ಬಿರಿಯಾಣಿ ಚ (ಬಿರಿಯಾನಿ, ಉತ್ತರದೇಶದ ಅಕ್ಕಿಯನ್ನು ಬೇಯಿಸಿ ಮಸಾಲೆ ಹಾಕಿ ಸಿದ್ಧಪಡಿಸಿದ ಪರಮಾನ್ನ; ಆ, ರಾಷ್ಟ್ರದ ಏಕೀಕರಣದ ದಿನಗಳಲ್ಲಿ, ದಾಕ್ಷಿಣಾತ್ಯರು ಅಳವಡಿಸಿಕೊಂಡದ್ದು), ದಂಡಿನಃ (ದಂಡಿಯ) ಸಂಡಿಗೇಂ ಚೈವ (ಸಂಡಿಗೆಯನ್ನೂ, ಬೇಳೆ ಮತ್ತಿತರ ಪದಾರ್ಥಗಳನ್ನು ಅರೆದು, ನೆನೆಸಿ, ಉಪ್ಪು ಹಾಕಿ, ಬಿಸಿಲಲ್ಲೊಣಗಿಸಿ ಎಣ್ಣೆಯಲ್ಲಿ ಕರಿದ ಪದಾರ್ಥ; ಈ ದೇಶದ ಜನರ ಮೆದುಳಿನಿಂದಲೇ ಮೊಳೆತದ್ದು), ಮಾಘ (ಮಾಘನ) ಭಕ್ಷಣ (ಮದುವೆ ಮುಂತಾದ ವಿಶೇಷ ಸಮಾರಂಭಗಳಿಗೆಂದೇ ತಯಾರಾಗುವ ವಿಶಿಷ್ಟ ತಿಂಡಿಗಳು; ಇದು ಕಲ್ಯಾಣನಗರಿಯ ಪೂರ್ವ ಮತ್ತು ದಕ್ಷಿಣ ದಿಕ್ಕಿನಲ್ಲಿ ಬಳಕೆಯಿರುವ ಪದ. ಕಲ್ಯಾಣನಗರಿಯ ವಿಶಿಷ್ಟಾದ್ವೈತಿಗಳಲ್ಲಿ*** ಇದಕ್ಕೆ ‘ಪಣಿಯಾರೊ’ ಎಂದು ಹೆಸರು) ಭಕ್ಷಣಂ (ತಿನ್ನಬೇಕು).

ತಾತ್ಪರ್ಯ:

ಕಾಲಿದಾಸನ ಉಪ್ಪಿಟ್ಟನ್ನೂ, ಭಾರವಿಯ ಬಿರಿಯಾನಿಯನ್ನೂ, ದಂಡಿಯ ಸಂಡಿಗೆಯನ್ನೂ****, ಮಾಘನ ಭಕ್ಷಣಗಳನ್ನೂ ತಿನ್ನಬೇಕು.

ಟಿಪ್ಪಣಿಗಳು:

1. ಕಾಲಿದಾಸ, ಅವನ ಪೋಷಕನ ಕಷ್ಟದ ದಿನಗಳಿಗೆ ಮುಂಚೆ ಉಪಮೆಗಳಿಗೆ ಪ್ರಸಿದ್ಧನಾಗಿದ್ದದ್ದು ಎಲ್ಲರಿಗೂ ಗೊತ್ತೇ ಇದೆ. ಈ ಪದವನ್ನೇ ಉಪಯೋಗಿಸುವ ನಮ್ಮ ಕವಿಯ ಚಾತುರ್ಯ ನೋಡಿ.

2. ಬಿರಿಯಾಣಿ. ಋಕಾರ, ರಕಾರ, ಷಕಾರಗಳ ನಂತರ ಅದೇ ಪದದಲ್ಲಿ ಬರುವ ನಕಾರ ಣಕಾರವಾಗುತ್ತದೆ. ಈ ಬದಲಾವಣೆ ಋ, ರ್‌ ಅಥವಾ ಷ್‌ ಮತ್ತು ನ್‌ ನಡುವೆ ಸ್ವರ, ಲಕಾರದ ಹೊರತು ಇತರ ಅರ್ಧಸ್ವರ (ಅಂದರೆ ಯ್‌,ರ್‌,ಲ್‌,ವ್‌ ಗಳು) ವಿಸರ್ಗ, ಮೂರ್ಧನ್ಯ, ಓಷ್ಠ್ಯ ಬಂದರೂ ಉಂಟಾಗುತ್ತದೆ. ಇದು ಪದದ ಕೊನೆಯಲ್ಲಿ ಬರುವ ನಕಾರಕ್ಕೆ ಅನ್ವಯಿಸುವುದಿಲ್ಲ. ಭಂಡಾರ್ಕರ್‌ ಅವರ ‘ಸಂಸ್ಕೃತ ಮೊದಲನೆಯ ಪುಸ್ತಕ’ವನ್ನು ನೋಡಿ.

3. ಈ ಶ್ಲೋಕದ ಮೂಲ ಸ್ಪಷ್ಟವಾಗಿ ತಿಳಿಯದಿದ್ದರೂ, ಇದನ್ನು ಓದಿಯೇ ಇದು ಕಲ್ಯಾಣನಗರಿಯಲ್ಲಿ ಸುಮಾರು ಕ್ರಿಸ್ತ ಶಕ 1970ನೆಯ ವರ್ಷದಲ್ಲಿ ಪ್ರಸಿದ್ಧವಾದದ್ದು ಎಂದು ನಿರ್ಧರಿಸಬಹುದು. ಈ ಊರಿಗೆ ಬೆಂಗಳೂರ್‌, ಬ್ಯಾಂಗಳೋರ್‌, ಬೆಂಗಳೂರು ಇತ್ಯಾದಿ ನಾಮ ವಿಶೇಷಗಳುಂಟು. ಈ ಊರಿನ ಹೆಸರಿನ ಮೂಲವನ್ನು ಈ ಸಂದರ್ಭದಲ್ಲಿ ಜ್ಞಾಪಿಸಿಕೊಳ್ಳಿ. ಊರನ್ನು ಸ್ಥಾಪಿಸಿದ ಪಾಳೆಯಗಾರ, ಕೆಂಪೇಗೌಡ, ಬಿಸಿಲಿನಲ್ಲಿ ಹಸಿವು, ಬಾಯಾರಿಕೆಯಿಂದ ಬಳಲಿ ಬೆಂಡಾಗಿ ಈ ಜಾಗಕ್ಕೆ ಬಂದಾಗ ಅವನಿಗೆ ‘ಬೆಂದ ಕಾಳನ್ನು’ ಉಣಿಸಿದ ಬಡ ಅತಿಥೇಯಳ ಕಥೆಯ ನೆನಪಿಗಾಗಿ ಇಟ್ಟ ಹೆಸರು ಇದು*****. ತನ್ನ ಹುಟ್ಟಿನಿಂದಲೇ ಹೊಟ್ಟೆಯ ಕಡೆ ದೃಷ್ಟಿಯಿಟ್ಟಿರುವ ಊರು. ನಮ್ಮ ಹೊಸ ಗಣರಾಜ್ಯದ ಬೇರೆ ಬೇರೆ ಜಾಗಗಳ ತಿಂಡಿ-ತೀರ್ಥಗಳನ್ನು ಸ್ವೀಕರಿಸಿ, ಸ್ಥಳೀಯ ನಾಲಗೆಯ ರುಚಿಗೆ ಅಳವಡಿಸಿಕೊಂಡದ್ದು ಬೇರೆಲ್ಲೂ ಇಷ್ಟು ಯಶಸ್ವಿಯಾಗಿ ಆಗಲ್ಲಿಲ್ಲ ಎಂದು ನಾವು ಘಂಟಾಘೋಷವಾಗಿ ಹೇಳಬಹುದು. ಹೇಳಿ ಗಂಟಲೊಣಗಿದರೆ ಅಲ್ಲಿನ ಸುಪ್ರಸಿದ್ಧ ಪಬ್ಬುಗಳಲ್ಲೊಂದಕ್ಕೆ ಹೋಗಿ ತೇವ ಮಾಡಿಕೊಳ್ಳಬಹುದು. ನಮ್ಮ ಶ್ಲೋಕದ ಸಂಡಿಗೆ, ಈ ದೇಶದ ಪದಾರ್ಥ. ಬಿರಿಯಾನಿ, ಮೇಲೆ ಸೂಚಿಸಿದಂತೆ ಉತ್ತರ ದೇಶದ ಅಮದು. ಇದು ಮತ್ತು ಇದರ ಸೋದರ ಪಲಾವ್‌(ಅಥವಾ ಪುಲಾವ್‌), ಕ್ರಿಸ್ತಶಕ ಇಪ್ಪತ್ತನೆಯ ಶತಮಾನದ ಅಂತ್ಯಭಾಗದಲ್ಲಿ ಕಲ್ಯಾಣನಗರದಲ್ಲಿ ಹೆಚ್ಚಾಗಿ ಜನಪ್ರಿಯವಾದವು. ಭಾರವಿ ಈ ಭಕ್ಷ್ಯದ ಶಾಕಾಹಾರದ ಜಾತಿಗೆ ಪ್ರಸಿದ್ಧನಾಗಿದ್ದನೋ, ಇಲ್ಲ ಮಾಂಸಾಹಾರದ ಜಾತಿಗೋ ತಿಳಿದು ಬಂದಿಲ್ಲ.

4. ಭೋಜನ ಕವಿಗಳ ಕವಿತ್ವವನ್ನು ಕುರಿತೂ ಈ ರೀತಿಯ ಶ್ಲೋಕವೊಂದು ಜನಜನಿತವಾಗಿದೆ. ಉಪಮಾ ಕಾಲಿದಾಸಸ್ಯ ಎಂದೇ ಆರಂಭವಾಗುವ ಇದು ಮುಂದಕ್ಕೆ ಭಾರವೇರರ್ಥಗೌರವಂ। ದಂಡಿನಃ ಪದಲಾಲಿತ್ಯಂ ಮಾಘೕ ಸಂತಿ ತ್ರಯೋಗುಣಾಃ।। ಎಂದು ಪೂರ್ಣವಾಗುತ್ತದೆ.

5. ಭೋಜರಾಜನ ಪಾಕವಿಶೇಷಗಳು ಕಲ್ಯಾಣನಗರಿಯ ಕವಿಶ್ರೇಷ್ಠರ ಸ್ವಪ್ನ ಸಾಮ್ರಾಜ್ಯದ ವಸ್ತುಗಳಾಗಿದ್ದುವೆಂಬುದು ತಿಳಿದು ಬಂದಿದೆ. ಉದಾಹರಣೆಗೆ ಕಪ್ಪಿನಿಯನ ‘ವ್ಯಂಜನಮಾಲೆ’ಯನ್ನು ನೋಡಿ.

*ಕಪಿನಯ್ಯ ಅಲ್ಲ

** ಮಣಿಗಳನ್ನು ಮಾಣಿಗಳೆಂದು ತಪ್ಪಾಗಿ ತಿಳಿದುಕೊಳ್ಳಬೇಡಿ. ಮಾಣಿಗಳು, ಊರಲ್ಲಿ ಓಡಿಯಾಡುವ ಜನ ಹೋಟಲ್ಲುಗಳಿಗೆ ನುಗ್ಗಿ ಬೇಗ ತಮ್ಮ ನಾಲಗೆಯ ಚಪಲ ತೀರಿಸಿಕೊಳ್ಳಲು ಸಹಾಯ ಮಾಡುವುದಕ್ಕಾಗಿ, ತಿಂಡಿ ಮತ್ತು ಊಟದ ಪದಾರ್ಥಗಳನ್ನು ಅಡಿಗೆಮನೆಯಲ್ಲಿ ಅವುಗಳನ್ನು ತಯಾರಿಸುವ ನಳ ಸಂತತಿಯ ಧೀಮಂತರ ಕೈಯಿಂದ ತೆಗೆದುಕೊಂಡು ಟೇಬಲ್ಲುಗಳ ಮೇಲೆ ತಂದಿಟ್ಟು, ಅದನ್ನು ತಿನ್ನುವವರ ಮೇಲೆ ಅವರ ಮಾರನೆಯ ದಿನದ ಸ್ಥಿತಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಕರುಣಾರಸಾರ್ದ್ರ ದೃಷ್ಟಿಯನ್ನು ಬೀರುವ ಜೀವಿಗಳು. ಅಂದರೆ, ಅಡಿಗೆ ಮಾಡುವ ಕಲಾಕಾರರ ಮತ್ತು ಅದನ್ನು ಅನುಭವಿಸುವವರ ಮಧ್ಯದ ದಳ್ಳಾಳಿಗಳು, ಅಷ್ಟೆ.

*** ವಿಶಿಷ್ಟಾದ್ವೈತಿಗಳು ಈ ತಿಂಡಿಗಳ ವಿಚಾರ ಮಾತ್ರ ‘ಏನು ತಿಂದರೂ ಒಂದೇ’ ಎನ್ನುವ ಅದ್ವೈತವನ್ನು ತೋರಲಿಲ್ಲವೆಂದೇ ಇವರನ್ನು ವಿಶಿಷ್ಟಾದ್ವೈತಿಗಳು ಎನ್ನುತ್ತಾರೆ, ಕೆಲವು ಕುತಂತ್ರಿಗಳು.

**** ಕವಿ, ಯಾರ ಹಪ್ಪಳ ತಿನ್ನಬೇಕು ಎಂಬ ವಿಷಯದಲ್ಲಿ ಮೌನಿಯಾಗಿದ್ದಾನೆ.

***** ನಮ್ಮ ಕೆಂಪೇಗೌಡ ಹೇಗೆ ಮೈಯೆಲ್ಲಾ ಧೂಳಾಗಿ ಇಲ್ಲಿ ಬಂದ ಎಂಬುದನ್ನು ನೋಡಬೇಕೆಂಬ ಸಹಜವಾದ ಚಾರಿತ್ರಿಕ ಕುತೂಹಲವಿರುವರು ಬೇಕಾದರೆ, ಬೆಂಗಳೂರು ನಗರ ಪಾಲಿಕೆಯ ಮುಂದಿರುವ ವೃತ್ತದಲ್ಲಿ ಪ್ರತಿಷ್ಠಿತವಾಗಿರುವ ಅವನ ಕುದುರೆ ಸವಾರಿ ಮಾಡುತ್ತಿರುವ ವಿಗ್ರಹವನ್ನು ಹೋಗಿ ನೋಡಬಹುದು. ಬಹಳ ಸಹಜವಾಗಿ ಅವನ ಮೈಮೇಲಿದ್ದ ಧೂಳನ್ನೂ ಮರೆಯದೆ ಬಿಡಿಸಿರುವ ಪ್ರತಿಮೆ ಇದು.

ಪೂರಕ ಓದಿಗೆ-

ಕರ್ನಾಟಕದ ಅಡುಗೆಮನೆ

ಮುಖಪುಟ / ಎನ್‌ಆರ್‌ಐ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more