ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೂಸಾದಿಂದ ಬೂರಾ ಸಕ್ಕರೆ !

By Staff
|
Google Oneindia Kannada News

‘ಕೈಗೆ ಸಿಗದ ದ್ರಾಕ್ಷಿ ಹುಳಿ ’ ಎಂದ ನರಿಯ ಬಗ್ಗೆ ನನಗೆ ಬಹಳ ಹೆಮ್ಮೆ. ನಾನಾದರೂ ಅಷ್ಟೆ, ‘ಛೇ ನೊಬೆಲ್‌ ಪ್ರೈಸ್‌ ಎಲ್ಲಾ ಏನು ಮಹಾ ಬಿಡಿ ಸ್ವಾಮಿ, ನಮ್ಮ ಕಾರಂತ ಕುವೆಂಪು ಬೇಂದ್ರೆ ಬರೆದದ್ದು ನೊಬೆಲ್‌ ಕಮಿಟಿಯವ್ರಿಗೆ ಅರ್ಥ ಆಗಬೇಕಲ್ಲಾ..’ ಅಂತ ಎಷ್ಟೋ ಸಲ ಹೇಳ್ಕೊಂಡಿದ್ದೀನಿ; ಬೇರೆಯವ್ರಿಗೆ ಹೇಳೂ ಹೇಳ್ತೀನಿ. ಹಾಗೇ, ದುಡ್ಡಿಲ್ದೇ ಇದ್ದಾಗ, ‘ಬಡತನಾನೆ ಸೊಗಸಾಗಿದೆ, ದುಡ್ಡಿನ ಬಗ್ಗೆ ಚಿಂತೇನೆ ಇರೊಲ್ಲ, .. ಆಶೆಯೇ ದುಃಖಕ್ಕೆ ಕಾರಣ..’ ಅಂತ ಬುದ್ಧನ ದಿವ್ಯ ಜ್ಞಾನದ ಆಶ್ರಯವನ್ನು ಪಡೆದೆ. ಹಾಗಂತ ಸಂಪಾದನೆಗೆ ನಿಂತು ಕೈಲಿ ಕಾಸು ಕೂಡಿದಾಗ, ಬ್ಯಾಂಕಿನಲ್ಲಿ ಕೂಡಿಹಾಕಿ ಹೆಂಡತಿ ಮಕ್ಕಳಿಗೆ, ಇನ್ನು ನನ್ನನ್ನು ನಂಬಿದ ತಂದೆ ತಾಯಿಗೆ ಕೂಡಿ ಹಾಕಿದಾಗ ಗೃಹಸ್ಥಾಶ್ರಮ ಧರ್ಮದ ಮೊರೆ ಹೊಕ್ಕೆನೆನ್ನಿ. ಬುದ್ಧನಂತೆ ಸರ್ವ ಸಂಗ ಪರಿತ್ಯಾಗ ಮಾಡಲು ಸಮಯ ಕೂಡಿ ಬಂದಿಲ್ಲ ವೆಂದು ಸಮಾಧಾನ ಹೇಳಿಕೊಂಡೆ. ಗಾಂಧೀಜಿ ಹೇಳಿದರೆಂದು ಆಗೀಗ ಖಾದಿ ಉಟ್ಟರೂ, ಪೊಲಿಯೆಸ್ಟರ್‌ ಷರ್ಟ್‌ ಧರಿಸಿ ರಸ್ತೆಯಲ್ಲಿನ ಚಿಗರೆಗಳ ಗಮನ ಸೆಳೆಯುವ ಪ್ರಯತ್ನವನ್ನೂ ಗೆಳೆಯರ ಜೊತೆ ಮಾಡಿದೆನೆನ್ನಿ. ಹಾಗೆ ನೋಡಿದರೆ, ಖಾದಿ ಉಟ್ಟಿದ್ದೂ ಒಂದು ಸ್ಟೈಲಿಗಾಗೆ ಅಂತ ಒಂದು ಅನುಮಾನವೂ ಇದೆ.

De.Javaregowdaಇಷ್ಟೆಲ್ಲ , ಬದುಕಿನ ಪಾಠ ನನ್ನದೇ ಸ್ವಂತ ಬುದ್ಧಿ ಅಂತ ನೀವು ‘ಇಂಪ್ರೆಸ್‌’ ಆಗಿ ನನ್ನನ್ನು ಉಬ್ಬಿಸುವ ಮೊದಲೇ ಹೇಳಿ ಬಿಡ್ತೀನಿ. ಇದೆಲ್ಲ ನಾನು ನನ್ನ ಗುರು ಹಿರಿಯರನ್ನ ನೋಡಿಯೇ ಕಲಿತಿದ್ದು. ದಿನವೂ ಪತ್ರಿಕೆಗಳಲ್ಲಿ ಓದುತ್ತಾ, ಶಾಲೆಯಲ್ಲಿ ಪಾಠ ಕೇಳುತ್ತಾ ಬೆಳೆದ ನಮಗೆಲ್ಲ ಬದುಕಿನ ಬಗ್ಗೆ ಇಂತಹ ಅಮೂಲ್ಯ ‘ಪ್ರಾಕ್ಟಿಕಲ್‌ ಪಾಠ’ ಗಳಿಗೇನೂ ಕೊರತೆಯಿಲ್ಲ. ಹಾಗೆಂದೇ ನೋಡಿ, ಅವಕಾಶಗಳಿಗೆ ಕೊರತೆಯಿದ್ದಲ್ಲಿ ಹೋರಾಟವೇಕೆಂದು ಹೆಚ್ಚಿನ ಅವಕಾಶಗಳನ್ನು ಹುಡುಕುತ್ತಾ ಸಾಗರ ದಾಟಿ ಬಂದೆ. ಈಗಲೂ ಅಷ್ಟೆ ; ನನ್ನವರಿಂದ ದೂರವಿದ್ದರೂ, ತಮ್ಮವರ ನಡುವೆ ಸುಖವಾಗಿರುವವರ ಬಗ್ಗೆ ಹೊಟ್ಟೆ ಕಿಚ್ಚಿದ್ದರೂ, ಅಲ್ಲಿರಲಾಗದ್ದಕ್ಕೆ, ಅಲ್ಲಿನ ರಾಜಕೀಯ ಲಂಪಟತೆಯ, ಲಂಚ ಭ್ರಷ್ಟಾಚಾರಗಳ ಹಾವಳಿಗಳನ್ನು ಜರೆದು, ನನ್ನ ಬದುಕಿನ ಆಯ್ಕೆಗಳನ್ನು ಸಮರ್ಥಿಸಿಕೊಳ್ಳುತ್ತೇನೆ.

‘ಸರಿ ಸರಿ ಅದೆಲ್ಲ ಮಾಮೂಲು ವಿಚಾರ ಈಗೇನು? ಅಂತೀರಾ?’ ನೋಡಿ ನಮ್ಮ ಮಂತ್ರಿ, ತಂತ್ರಿ, ಫುಡಾರಿಗಳಿಂದ ಕಲಿತುದ್ದುದು ಬಹಳಷ್ಟಿದ್ದು, ಸುಲಭವಾಗಿ ಅರ್ಥವಾಗುತ್ತದೆಯಾದರೂ, ಇತ್ತೀಚೆಗೆ ನಮ್ಮ ‘ದೇಜಗೌ’ ಮರುವಾಚಿಸಿದ ‘..ವಚನ ಸಾಹಿತ್ಯವಂ ಬಿಟ್ಟೆಲ್ಲವೂ ಬರೇ ಬೂಸಾ ಇರ್ಕುಂ...’ ಎಂದುದರ ಮರ್ಮ ಅರ್ಥವಾಗಿಲ್ಲವಾಗಿ ಚಿಂತೆ ಉತ್ಸಾಹ ಎಲ್ಲವೂ ಒಟ್ಟಿಗೇ ಆಗಿದೆ. ಚಿಂತೆ ಏಕೆಂದರೆ, ‘ಅವರ ಮಾತಿನ ಪಾಠ ಇಷ್ಟು ದಿನ ಗೊತ್ತಿಲ್ಲದೆ ಎಷ್ಟೊಂದು ಅವಕಾಶಗಳು ವ್ಯರ್ಥವಾದುವೋ ತಿಳಿಯದೆ ಹೋಯಿತಲ್ಲಾ...’ ಎಂದಾದರೆ, ‘ಸದ್ಯ ನನ್ನ ಕೆಲಸದಲ್ಲಿನ ಹಲವಾರು ಸಮಸ್ಯೆಗಳಿಗೆ, ನನಗೆ ದಿನವೂ ಸವಾಲಾಗಿ ಬೆಳೆಯುತ್ತಿರುವ ನನ್ನ ಎರಡು ಎಳೆ ಮಂಗಗಳನ್ನು ಹತೋಟಿಗಿಡುವ ಪರಿಹಾರಗಳು ಅವರ ಈ ಮಾತಿನ ಮರ್ಮ ಅರಿತಾಗ ನನಗೆ ದೊರಕೀತು ಎಂಬ ಉತ್ಸಾಹವೂ ಬಂತೆನ್ನಿ.

ಹಾಗೆಂದೇ ನನ್ನಂತೆ ಇರುವ ಹಲವರಿಗೆ ನನ್ನ ಅನುಮಾನ ಮತ್ತು ನನಗೆ ತೋಚಿದ ಸಾಧ್ಯತೆಗಳನ್ನು ಹೇಳುತ್ತಿದ್ದೇನೆ. ದಯವಿಟ್ಟು ನಿಮ್ಮ ‘ಐಡಿಯಾ’ ಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವಂತವರಾಗಿ.

ನನ್ನ ಅನುಮಾನಗಳಿಷ್ಟೇ: ‘ದೇಜಗೌ ಹೇಳಿದ ಬೂಸಾ ಸಾಹಿತ್ಯಕ್ಕೆ ಏಳು ಜ್ಞಾನಪೀಠ ಪ್ರಶಸ್ತಿ ಬಂದಿರಬೇಕಾದರೆ, ಅವರ ಜೀವನದುದ್ದಕ್ಕೂ ಈ ಬೂಸಾ ಸಾಹಿತ್ಯಗಳ ವಾಚನ ಪ್ರವಚನ ಮಾಡುತ್ತಲೇ ತನು ಮನಗಳನ್ನ ತೃಪ್ತಿಯಾಗಿಸಿಕೊಂಡು ಸಾಕಷ್ಟು ಧನಾರ್ಜನೆಯನ್ನು ಮಾಡಿದವರು ಈಗ ಈ ಇಳಿ ವಯಸ್ಸಿನಲ್ಲಿ ಬೂಸಾ ಸಾಹಿತ್ಯ ಹುಳಿಯೆಂದುದರ ಅರ್ಥ ಏನು? ಈವರೆಗೂ ತಾವು ಓದಿದ ಬೂಸಾ ಸಾಹಿತ್ಯದಿಂದ ತಮಗಿನ್ನೇನೂ ಲಾಭವಾಗದೆಂಬ ದಿವ್ಯ ಸತ್ಯ ಅವರಿಗಾಗಿರಬಹುದೇ? ಇದು ನಿಜವಾದರೆ, ಅವರು ಯಾವ ಗಾಳಿಯ ಹಿಂದೆ ಹೋಗುತ್ತಿದ್ದಾರೆನ್ನುವುದು ತಿಳಿದುಕೊಳ್ಳುವುದು ಉಳಿದೆಲ್ಲ ಉದಯೋನ್ಮುಖ ಸಾಹಿತ್ಯ ತಾರೆಗಳಿಗೆ ಅಗತ್ಯವಲ್ಲವೆ! ಈ ದೃಷ್ಟಿಯಿಂದ ಗೌಡರು ತಮಗಿರುವ ಪಟ್ಟದಿಂದ ಮುಂದಿನ ಜನಾಂಗಕ್ಕೆ ಉಪಯೋಗವಾಗುವಂತೆ, ನನ್ನಂತ ತರಲೆ ತಿಮ್ಮಪ್ಪರಿಗೆ ಅರ್ಥವಾಗುವಂತೆ ಒಂದು ‘ಸರಳೀಕೃತ ಸೂತ್ರ’ ಗಳ ಪಟ್ಟಿ ಕೊಟ್ಟರೆ ಬಹಳ ಉಪಯುಕ್ತವಾದೀತೆಂದು ವಿನಮ್ರನಾಗಿ ಕೇಳಿಕೊಳ್ಳುತ್ತೇನೆ.

ನಮ್ಮ ನಡುವಿನ ಕುಹಕಿಯಾಬ್ಬ ಹೇಳಿದ ಐಡಿಯಾದಂತೆ, ‘ ಗೌಡರು ರಾಜಕೀಯ ಪ್ರವೇಶ ಮಾಡುವುದಕ್ಕಾಗಿ ಮಾಡುವ ಮಹಾಯಾಗದ ಒಂದು ಪ್ರಮುಖ ಐಡಿಯಾ’ ಅಂತೆ. ಅವನ ವಿಶ್ಲೇಷಣೆ ಹೀಗಿದೆ : ‘ಗೌಡರಾಗಿದ್ದರಿಂದ ಸರಿ ಸುಮಾರು ಒಕ್ಕಲಿಗ ಬಳಗದವನ್ನೆಲ್ಲ ಬಯ್ಯುವ ಹಕ್ಕು ಹುಟ್ಟಿನಿಂದಲೇ ಬಂದಿದ್ದರಿಂದ, ಉಳಿದ ಅತೀ ಪ್ರಮುಖ ಬಣದವರ ಬಗ್ಗೆ ಒಂದೆರಡು ಒಳ್ಳೇ ಮಾತು ಆಡುವುದಲ್ಲದೆ, ಓಟಿನ ಲೆಕ್ಕಕ್ಕೆ ಸಿಕ್ಕದೇ ಹೋಗುವವರನ್ನು ಬಯ್ದು ಮಾತನಾಡಿದರೆ ತಾವು ಕ್ರಾಂತಿಕಾರಿ ಬಸವಣ್ಣನವರ ನಿಷ್ಠ ಅನುಯಾಯಿಯಾದಂತಾಗಿ ಓಟು ಗಿಟ್ಟಿಸುವಲ್ಲಿ ಕಷ್ಟವಾಗಲಾರದೆಂಬ ಅತೀ ಚಾಣಾಕ್ಷ ಸೂತ್ರ ಅವರದಂತೆ. ಜೊತೆಗೆ, ವಾನಪ್ರಸ್ತದಲ್ಲಿರುವಾಗಿನ ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳಲಿಕ್ಕಾಗಿ ಕೊನೆಯ ಅಸ್ತ್ರವಾಗಿ ಈ ಬೊಂಬಾಟ್‌ ಐಡಿಯಾ ಯೋಚಿಸಿದರಂತೆ.

ಇನ್ನೊಬ್ಬ ತರಲೆ ತಿಮ್ಮರ ಬಳಗದ ಸದಸ್ಯ ಉವಾಚ : ‘ಇಲ್ಲ ಕಣೋ, ವಿ. ಪಿ. ಸಿಂಗ್‌ ಮಾಡಿದ ಐಡಿಯಾ ನೆನಪಿಲ್ವಾ? ಕಿಡಿ ಹಚ್ಚಿ ಬಿಟ್ರೆ, ಪಡ್ಡೆ ಹುಡುಗ್ರು, ಜನ ಹೊಡದಾಡ್ಕೋತಾರೆ, ಪೇಪರ್ನಲ್ಲಿ ಸುದ್ದಿ ಬರುತ್ತೆ, ಗೊತ್ತಿಲ್ದವ್ರಿಗೆ ಗೊತ್ತಾಗುತ್ತೆ, ಮರೆತುಹೋದವ್ರಿಗೆ ನೆನಪಾಗುತ್ತೆ, ಗುಂಡಿನ ಮತ್ತಿನಲ್ಲೂ ಗೌಡರ ಹೆಸರೇ ಗುಣುಗುಣಿಸಿದರೆ ಮತ್ತಿನ್ನೇನು ಬೇಕು?’ ಹಾಗೆ ನಾವು ಜನರ ನೆನಪಿನಿಂದ ಮರೆಯಾಗಿ ಹೋಗಿ ಬಿಡುವ ಮೊದಲೇ ಇಂತಹ ಕ್ರಾಂತಿಕಾರಿ ಹೇಳಿಕೆಗಳನ್ನು ಕದ್ದು ಅಥವಾ ಸೃಷ್ಟಿಸಿ ಉವಾಚಿಸಿದರೆ, ಜನರ ಮನದಲ್ಲಿ ಮತ್ತೆ ಅಚ್ಚಾಗಿ ಉಳಿಯುವುದಕ್ಕೆ ಸಹಾಯವಾಗುತ್ತದೆ. ಐವತ್ತಾರು ವರ್ಷಗಳ ಹಿಂದೆಯಷ್ಟೇ ಬ್ರಿಟಿಷರು ನಮ್ಮ ಮೇಲೆ ಪ್ರಯೋಗಿಸಿದ, ಅದಕ್ಕೂ ಮೊದಲೇ ಪಂಚತಂತ್ರ ಕಥೆಗಳಲ್ಲಿ ಬಂದಿದ್ದ, ‘ಭೇದೋಪಾಯದ ’ ಪ್ರಯೋಗವನ್ನು ಮಾಡಿಯಾದರೂ ನಾವುಗಳು ನಮ್ಮ ಪ್ರತಿಷ್ಠೆ ಹೆಚ್ಚಿಸಿಕೊಳ್ಳಬಹುದೆಂಬ ಜ್ಞಾಪಕ ಇದೀಗ ಬಂದಿರಬೇಕು, ಎಂದ ಮತ್ತೊಬ್ಬ ತಿಮ್ಮ.

ಇನ್ನೊಬ್ಬ ಚಡ್ಡಿ ತಿಮ್ಮನ ‘ನಾಸ್ಟ್ರಡಾಮಸ್‌’ ನನ್ನೂ ನಾಚಿಸುವಂತ ಭಯಂಕರ ಭವಿಷ್ಯದಂತೆ, ‘ಸದ್ಯದಲ್ಲಿಯೇ ನಮಗೆಲ್ಲ ದೇಜಗೌ ವಚನಗಳ ಮಾಲೆ ಸರಮಾಲೆಗಳ ಪರಿಚಯವಾಗಲಿದ್ದು, ತಮ್ಮ ಜೀವನದ ಅನುಭವಾಮೃತಗಳನ್ನು ಸರ್ವಜ್ಞ್ನನ ತ್ರಿಪದಿಗಳೋಪಾದಿಯಲ್ಲಿ ಕೊಡಬಹುದು, ಇಲ್ಲ ವೇ ಚತುಷ್ಪಾದ ಬ್ರಹ್ಮರಾಗಿ ಪಂಚಮವೇದದ ಸಷ್ಟಿಗೆ ತೊಡಗಿದ್ದಾರೆಂದೂ, ಅದರಲ್ಲಿಯೇ ಮನುಕುಲದ ಏಳಿಗೆ ಎಂದೂ, ಮನುಕುಲದ ಹೊಸ ಪ್ರವಾದಿಯಾಗಲಿದ್ದಾರೆಂದೂ ಉವಾಚಿಸಿದ.

ಬರೇ ತಿಂಡಿಪೋತನೆಂದೇ ಪ್ರಖ್ಯಾತಿ ಪಡೆದ ಪುಡಿ ತ.ತಿ. ಯಾಬ್ಬನ ಪ್ರಕಾರ, ‘ಇದು ಬರಗಾಲ ಪೀಡಿತ ರೈತರುಗಳಿಗೆ ಗೌಡರ ಕಾಣಿಕೆ ; ಬೂಸಾ ಎಂದಾದ ಮೇಲೆ ಸಾಕಷ್ಟಿರುವ ಈ ಸಾಹಿತ್ಯವನ್ನಾದರೂ ನಮ್ಮ ದನಕರುಗಳು ತಿಂದು ನೆಮ್ಮದಿಯಿಂದಿರಲಿ ಎಂಬ ಅವ್ಯಕ್ತ ಪ್ರಾಣಿ ಪ್ರೇಮದ ದ್ಯೋತಕವಂತೆ.

‘ನೋಡಿದಿರಾ? ಎಷ್ಟೆಲ್ಲಾ ಸಾಧ್ಯತೆಗಳಿವೆ, ಮಸಲತ್ತುಗಳಿವೆ! ಸ್ವಲ್ಪ ಯೋಚನೆ ಮಾಡಿದರೆ ನಮಗೂ ನಿಮಗೂ ಈ ಬೂಸಾ.. ದಿಂದ ಒಳ್ಳೆ ಬೂರಾ ಸಕ್ಕರೆಯಂತಹ ಒಂದು ಫಲ ಸಿಕ್ಕುವ ಸಾಧ್ಯತೆ ಇರ್ಕುಂ..’


ಬೂಸದ ಧೂಳು-
ಬೂಸ ಬರಿ ಮೋಸ
‘ಬೂಸಾ’ ಎಂಬುದು ಪಶು ಆಹಾರವೂ ಕನ್ನಡ ಸಂಸ್ಕೃತಿ ಸೂಚಕವೂ !
ವಚನ ಸಾಹಿತ್ಯಬಿಟ್ಟರೆ ಉಳಿದ ಕನ್ನಡ ಸಾಹಿತ್ಯವೆಲ್ಲ ಬೂಸಾ -ದೇಜಗೌ


ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X