ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ನಾನು ಕಂಡಂತೆ ಎಸ್‌.ಕೆ.ಹರಿಹರೇಶ್ವರ’

By Super
|
Google Oneindia Kannada News

ಕಾರಿಪುರ ಹರಿಹರೇಶ್ವರರು ಮೂರು ದಶಕಗಳ ಕಾಲ ಅಮೇರಿಕೆಯಲ್ಲಿ ವಾಸಿಸಿದ್ದ ಕನ್ನಡಪ್ರೇಮಿ. ಇವರು 'ಮರಳಿ ಮಣ್ಣಿಗೆ','ಮರಳಿ ತನ್ನ ಊರಿಗೆ', 'ಮಲ್ಲಿಗೆಯ ಮೈಸೂರಿಗೆ' ಬಂದದ್ದು, ಮರಳಿ ಅರಳಿದ್ದು (2002, ನವೆಂಬರ್‌) ಒಂದು ಅಭೂತಪೂರ್ವ ಘಟನೆ. ಇವರು ಅಮೇರಿಕೆಯಲ್ಲಿ 'ಅಮೆರಿಕನ್ನಡ' ಪತ್ರಿಕೆಯನ್ನು ಸಂಪಾದಿಸಿದವರು, ಪರದೇಶದಲ್ಲಿ ಕನ್ನಡದ ಜೀವಸ್ವರವನ್ನು ಸಹಸ್ರಾರು ಅನಿವಾಸಿ ಭಾರತೀಯ-ಕನ್ನಡಿಗರಿಗೆ ಕೇಳಿಸಿದವರು, ಕನ್ನಡ ಹೃದಯಶಿವನಾಗಿ ಕನ್ನಡ ಡಿಂಡಿಮವನ್ನು ಬಾರಿಸಿದವರು. ಹಲವಾರು ಕನ್ನಡ ತರುಣ ಲೇಖಕ-ಲೇಖಕಿಯರಿಗೆ ಬರೆಯಲು ಪ್ರೇರಣೆಯನ್ನು ನೀಡಿದವರು, ಅವರ ಎದೆಯ ಹೊಲದಲ್ಲಿ ಸ್ಫೂರ್ತಿಯ ಬೀಜ ಬಿತ್ತಿದವರು. ಹ್ಯೂಸ್ಟನ್‌ದಲ್ಲಿ ನಡೆದ ಪ್ರಥಮ ವಿಶ್ವ (ಸಹಸ್ರಮಾನ) ಕನ್ನಡ ಸಮ್ಮೇಲನದ ಎರಡು ಸಂಗ್ರಾಹ್ಯ ಸ್ಮರಣ ಸಂಚಿಕೆಗಳನ್ನು ಪರಿಶ್ರಮ ವಹಿಸಿ ಸಂಪಾದಿಸಿದವರು.

ಹ್ಯೂಸ್ಟನ್‌ನಲ್ಲಿ ನಡೆದ ಮೊದಲ ವಿಶ್ವ ಕನ್ನಡ ಸಮ್ಮೇಲನದಲ್ಲಿ, ಹರಿಹರೇಶ್ವರ ಅವರ ಪರಿಚಯವಾಯಿತು, ಅದು ಸ್ನೇಹವಾಗಿ ಪರಿವರ್ತನೆಗೊಂಡಿತು. ನಾನು ಕ್ಯಾಲಿಫೋರ್ನಿಯಾಕ್ಕೆ ಹೋದಾಗ ನಮ್ಮ ಸ್ನೇಹ ಇನ್ನಷ್ಟು ಗಾಢವಾಯಿತು. ನಾನು ಬೇಂದ್ರೆಯವರ ಬಗ್ಗೆ ಸುದೀರ್ಘ ಭಾಷಣ ಮಾಡಿದಾಗ ಅವರೇ ಅಧ್ಯಕ್ಷತೆ ವಹಿಸಿದ್ದರು.

ಎರಡನೆಯ ಸಲ ನಾನು ಅಮೇರಿಕೆಗೆ ಹೋದಾಗ, ಡೆಟ್ರಾಯಿಟ್‌ನಲ್ಲಿ ನಡೆದ ಎರಡನೆಯ ವಿಶ್ವ ಕನ್ನಡ ಸಮ್ಮೇಲನದಲ್ಲಿ ನನ್ನ ಪುಸ್ತಕ 'ಜೀವಿ ಕಂಡ ಅಮೇರಿಕಾ' ಬಿಡುಗಡೆಯಾಯಿತು, ಆ ಕಾರ್ಯ ಹರಿಹರೇಶ್ವರರೇ ಮಾಡಿದರು. ನನ್ನ ಪುಸ್ತಕಕ್ಕೆ ಹರಿಹರೇಶ್ವರರೇ ಒಂದು ಮುನ್ನುಡಿಯನ್ನು ಬರೆದಿದ್ದರು, ಪುಸ್ತಕಕ್ಕೆ ಹೆಚ್ಚಿನ ಕಳೆಯನ್ನು ತಂದುಕೊಟ್ಟಿದ್ದರು.

ನಾನು ಕ್ಯಾಲಿಫೋರ್ನಿಯಾಕ್ಕೆ ಎರಡನೆಯ ಸಲ ಹೋಗುವ ಯೋಚನೆ ಮಾಡಿದಾಗ ನನ್ನ ಹೆಚ್ಚಿನ ಆಕರ್ಷಣೆ ಸ್ಟಾಕ್‌ಟನ್‌ನಲ್ಲಿರುವ ಹರಿಹರೇಶ್ವರರ ಮನೆಗೆ ಭೇಟಿ ನೀಡುವುದಾಗಿತ್ತು. ಅವರ ಅರ್ಧಾಂಗಿ ನಾಗಲಕ್ಷ್ಮಿ ಅತಿಥಿಗಳ ಆದರಾತಿಥ್ಯಕ್ಕೆ ಒಂದು ಮಾದರಿಯಾಗಿದ್ದರೆಂದು ಕೇಳಿದ್ದೆ (ಓದಿದ್ದೆ). ಕ್ಯಾಲಿಫೋರ್ನಿಯಾಕ್ಕೆ ಹೋದ ಯಾವ ಕನ್ನಡ ಸಾಹಿತಿಯ ಯಾತ್ರೆಯು ಹರಿಹರೇಶ್ವರ-ನಾಗಲಕ್ಷ್ಮಿ - ದರ್ಶನ ಇಲ್ಲದಿದ್ದರೆ ಅಪೂರ್ಣ ಎನ್ನುವ ಮಟ್ಟಿಗೆ ಅವರ ಖ್ಯಾತಿ ಇತ್ತು. ಆದರೆ ನನ್ನ ಕ್ಯಾಲಿಫೋರ್ನಿಯಾ ಪ್ರವಾಸ ಅಪೂರ್ಣವಾಯಿತು. ಅವರ ಮನೆಗೆ ಹೋಗುವುದಾಗಲಿಲ್ಲ. ಕಾರಣ ಅವರು ಅಮೇರಿಕೆಯನ್ನು ಬಿಟ್ಟು ತಾಯ್ನಾಡಿಗೆ ಮರಳಿದ್ದರು. ಇದರಲ್ಲಿ ನನಗೆ ಒಂದು ಬಗೆಯ ಪೂರ್ಣಫಲ ದೊರೆತ ತೃಪ್ತಿಯಿತ್ತು. ಯಾಕೆಂದರೆ ಕನ್ನಡಿಗರು ಅಮೇರಿಕೆಯಲ್ಲಿ ಅರಳಿದ ಮೇಲೆ, ಅಲ್ಲಿಯೇ ಸ್ಥಾಯಿಯಾಗದೆ, ತಮ್ಮ ನಾಡಿಗೆ ಮರಳಬೇಕು ಎಂಬುದು ನನ್ನ ಆಸೆಯಾಗಿತ್ತು. ಅದನ್ನು ಸಫಲಗೊಳಿಸಿದ್ದರು ಹರಿಹರೇಶ್ವರ ದಂಪತಿಗಳು.

ಹರಿಹರೇಶ್ವರರ ಶಿಷ್ಯರು ನನ್ನನ್ನು ಕ್ಯಾಲಿಫೊರ್ನಿಯಾದಲ್ಲಿ ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡು ಅವರ ಕೊರತೆಯನ್ನು ತುಂಬಲು ಪ್ರಯತ್ನಿಸಿದ್ದರು. ಹರಿಹರೇಶ್ವರರು ತಾವು ತಾಯ್ನಾಡಿಗೆ ಮರಳುವಾಗ ನನ್ನ ಎರಡನೆಯ ಅಮೇರಿಕಾ ಪ್ರವಾಸದ ಬಗ್ಗೆ ಅಮೇರಿಕೆಯಲ್ಲಿ ಹರಡಿದ್ದ ತಮ್ಮ ಮಿತ್ರರಿಗೆಲ್ಲ ಪತ್ರ ಬರೆದಿದ್ದರು, ನನ್ನ ವಾಸ್ತವ್ಯದ ಲಾಭ ಪಡೆಯಲು ಹೇಳಿದ್ದರು. ಅಷ್ಟೇ ಅಲ್ಲ, ನನ್ನ ಪುಸ್ತಕದ ಬಗ್ಗೆ www.thatskannada.com ನಲ್ಲಿ ಒಂದು ಲೇಖನವನ್ನೂ ಬರೆದಿದ್ದರು.

ಡಿಸೆಂಬರ್‌ನಲ್ಲಿ ನಾನು ಭಾರತಕ್ಕೆ ಮರಳಿದೆ. ಫೆಬ್ರವರಿಯಲ್ಲಿ ವರಕವಿ ಬೇಂದ್ರೆಯವರ 108 ನೆಯ ಜನ್ಮದಿನ ಹಾಗೂ ಅವರ ಸಮಗ್ರ ಕಾವ್ಯ 'ಔದುಂಬರಗಾಥಾ'ದ ಆರು ಸಂಪುಟಗಳ ಬಿಡುಗಡೆಯ ಸಮಾರಂಭ ಹುಬ್ಬಳ್ಳಿಯಲ್ಲಿತ್ತು. ಅದರಲ್ಲಿ ಭಾಗವಹಿಸಲು ಹೋಗಿದ್ದೆ. ನಂತರ ಬೆಂಗಳೂರಿಗೆ ನಾಲ್ಕು ದಿನ ಹೋದಾಗ ಹರಿಹರೇಶ್ವರರ ಫೋನ್‌ ನಂಬರ್‌ ಸಂಪಾದಕ ಮಿತ್ರ ಶಾಮಸುಂದರವರಿಂದ ಪಡೆದು ಸಂಪರ್ಕಿಸಿ 'ಶುಭಾಶಯ' ತಿಳಿಸಿದೆ. ಆಗ ಹರಿಹರೇಶ್ವರರು 'ಒಂದು ದಿನದ ಮಟ್ಟಿಗಾದರೂ ಮೈಸೂರಿಗೆ ಬಂದು ಹೋಗಲು' ಅಕ್ಕರೆಯ ಔತಣ ನೀಡಿದರು.

ಸ್ಟಾಕ್‌ಟನ್‌ ಭೇಟಿ ತಪ್ಪಿತ್ತು, ಮೈಸೂರಿನ ಭೇಟಿ ತಪ್ಪಿಸಬಾರದೆಂದು ನಿಶ್ಚಯಿಸಿ ಹೊರಡಲನುವಾದೆ. ಅಂದು (ಫೆಬ್ರುವರಿ,13) ಏಕಾದಶಿಯಾಗಿತ್ತು. ಅವರು ತಮ್ಮ ಹತ್ತಾರು ಮಿತ್ರರನ್ನು ಕರೆದು ಸಂತೋಷ ಕೂಟ ಏರ್ಪಡಿಸಿದ್ದರೆಂದು ತಿಳಿಯಿತು. ನಾನು ಮುಂಜಾನೆ ಅವರ ಮನೆಗೆ ತಲುಪಿದಾಗ ಹೇಳಿದೆ, 'ನಾನು ಏಕಾದಶಿಯ ದಿನ ಮೊದಲು ಅಲ್ಪೋಪಹಾರ ಮಾಡುತ್ತಿದ್ದೆ. ಇತ್ತೀಚೆಗೆ ನೀರು ಕೂಡಾ ಸೇವಿಸುವುದಿಲ್ಲ. ಆದರೆ ಇಂದು ಅಲ್ಪೋಪಹಾರ ಸೇವಿಸುವೆ, ನಿಮ್ಮ ಮಿತ್ರರೆಲ್ಲ ಊಟ ಮಾಡಲಿ'ಎಂದು. ಆಗ ನಾಗಲಕ್ಷ್ಮಿಯವರು, 'ಅವಲಕ್ಕಿ ಮತ್ತೆ ಹಣ್ಣುಹಂಪಲ, ಹಾಲು ನಡೆಯುತ್ತದೆ ಅಲ್ಲವೇ?' ಎಂದು ಕೇಳಿದರು. ನಾನು ಸರಿ ಎಂದು ಹೂಂಗುಟ್ಟಿದೆ. ಅವರು ಅಡಿಗೆಯನ್ನು ಕ್ಯಾನ್ಸಲ್‌ ಮಾಡಿ, ಮಿತ್ರರಿಗೆ ಫೋನ್‌ ಮಾಡಿ 'ಏಕಾದಶಿ ಫಲಾಹಾರದ ಪಾರ್ಟಿ' ಎಂದು ಹೇಳಿದರು. ಬಂದವರಿಗೆಲ್ಲ ಅದೊಂದು ಅಭೂತಪೂರ್ವ ಅನುಭವವಾಗಿರಬೇಕು.

ಅವಲಕ್ಕಿಯಲ್ಲಿ ಇಷ್ಟೊಂದು ವಿಭಿನ್ನ ತಿನಿಸು ಮಾಡಬಹುದೆಂದು ನಾನಂತೂ ಎಣಿಸಿರಲಿಲ್ಲ. ಹಣ್ಣು, ಹಾಲು, ಕಾಫಿ, ಪಾನಕಗಳ ಜೊತೆಗೆ ಪ್ರೀತಿಯ ಹೊಳೆ ಹರಿಯಿತು. ಸಾಹಿತ್ಯ ಪ್ರೇಮದ ಜೊತೆಗೆ ಅತಿಥಿಗಳ ಆದರಾತಿಥ್ಯ ಮಾಡುವುದನ್ನೂ ಹರಿಹರೇಶ್ವರ ದಂಪತಿಗಳಿಂದ ಕಲಿಯಬೇಕು. ನನ್ನ ನಚ್ಚಿನ ವಿಷಯ ವರಕವಿ ಬೇಂದ್ರೆಯವರ ಬಗ್ಗೆ ಮಾತಾಡಲು ಹೇಳಿದರು. ಸ್ವಾರಸ್ಯಕರ ಚರ್ಚೆಯೂ ನಡೆಯಿತು. ನಂತರ ಅವರು ತಮ್ಮ ಮನೆಯಲ್ಲಿಯ ಪುಸ್ತಕ ರಾಶಿಯನ್ನು ತೋರಿಸಿದರು. ಅಮೇರಿಕೆಯಲ್ಲಿದ್ದಾಗ ಅವರು ಇಷ್ಟೊಂದು ಗ್ರಂಥ (ಇಂಗ್ಲಿಷ್‌ ಅಲ್ಲದೇ ಕನ್ನಡ ಹಾಗೂ ಸಂಸ್ಕೃತ ಗ್ರಂಥ) ಸಂಗ್ರಹಿಸಿರಬಹುದೆಂದು ನಂಬುವದು ಕಷ್ಟ. ಎರಡು ಕೋಣೆಗಳು ಪುಸ್ತಕದಿಂದ ತುಂಬಿದ್ದವು. ಮೂರನೆಯ ಕೋಣೆಯಲ್ಲಿ ಪುಸ್ತಕದ ಪಾರ್ಸೆಲ್‌ ಗಂಟುಗಳನ್ನು ಒಟ್ಟಲಾಗಿತ್ತು. 'ಇದು ಓಪನ್‌ ಮಾಡದೇ ಇರುವ ಗ್ರಂಥರಾಶಿ' ಎಂದು ತೋರಿಸಿದರು. ''ನನ್ನ ಪುಸ್ತಕ 'ಮಾತಿನ ಮಂಟಪ' ಓದಿದ್ದೀರಾ?'' ಎಂದು ಕೇಳಿದರು. 'ಇನ್ನೂ ಓದಲು ಆಗಿಲ್ಲ. ಓದಿದೊಡನೆ ಬರೆಯುವೆ' ಎಂದು ಹೇಳಿದೆ.

ಮೇ ತಿಂಗಳಲ್ಲಿ ಮೂರು ವಾರ ಪ್ರವಾಸದ ಕಾರ್ಯಕ್ರಮ ಇಟ್ಟುಕೊಂಡೆ. ಓದಲು ಕೆಲ ಪುಸ್ತಕ ತೆಗೆದುಕೊಂಡೆ. ಅದರಲ್ಲಿ 'ಮಾತಿನ ಮಂಟಪ' ಒಂದಾಗಿತ್ತು. ಅದನ್ನು ಓದಿದಾಗ ನನಗೆ ಆನಂದದೊಂದಿಗೆ ಅಶ್ಚರ್ಯವೂ ಆಯಿತು. ನನ್ನ ನಚ್ಚಿನ ಪ್ರಬಂಧಕಾರರಲ್ಲಿ 'ಹಗಲುಗನಸಿನ' ಎ.ಎನ್‌.ಮೂರ್ತಿರಾವ್‌, 'ಗಾಳಿಪಟ'ದ ರಾಕು (ಆರ್‌.ಬಿ.ಕುಲಕಕರ್ಣಿ), 'ಸಾಬರಮತಿ, ಸೇವಾಗ್ರಾಮ'ದ ಸಿದ್ದವನಹಳ್ಳಿ ಕೃಷ್ಣಶರ್ಮ ನೀಡಿದಂತಹ ಅನನ್ಯ ಸಂತಸವನ್ನು ವಿಭಿನ್ನ ರೀತಿಯಿಂದ ನೀಡಿದ ಹರಿಹರೇಶ್ವರರ ಬಗ್ಗೆ ನನ್ನ ಗೌರವ ಆದರ ಇಮ್ಮಡಿಗೊಂಡಿತು. ಇವರು ಈ ಪ್ರಬಂಧಗಳನ್ನು ಮಿತ್ರ ಎಸ್‌.ಕೆ.ಶಾಮಸುಂದರರಿಗಾಗಿ ಮೊದಲು 'kannada.india.com'ಗೆ ನಂತರ www.thatskannada.com ಗೆ ಬರೆದರು. ಅಮೇರಿಕೆಯ ಪ್ರವಾಸದಲ್ಲಿದ್ದ ಡಾ।ಸಾ.ಶಿ.ಮರುಳಯ್ಯ(ಕ.ಸಾ.ಪ.ದ ಮಾಜಿ ಅಧ್ಯಕ್ಷರು) ಈ ಪ್ರಬಂಧಗಳನ್ನು ಓದಿ, ಸಪ್ನ ಬುಕ್‌ ಹೌಸ್‌ನಿಂದ ಪ್ರಕಟನೆಯ ವ್ಯವಸ್ಥೆ ಮಾಡಿದರಲ್ಲದೆ ಒಂದು ಅಚ್ಚುಕಟ್ಟಾದ ಮುನ್ನುಡಿಯನ್ನು ಬರೆದರು. ಅದಕ್ಕೆ ಉತ್ತಮ ವಿಮರ್ಶಕ-ಕವಿ ಡಾ।ಲಕ್ಷ್ಮೀನಾರಾಯಣ ಭಟ್ಟರು ತೂಕದ ಬೆನ್ನುಡಿ (blurb)ಬರೆದರು.

'ಕಣ್ಣು, ನೋಟ ಮತ್ತು ಕಾಣ್ಕೆ', 'ಲಕ್ಷ್ಮಿ ಎಲ್ಲಿದ್ದಾಳು?', 'ನೀರಿನ ವಿಚಾರ ಲಹರಿ'- ಇವನ್ನೆಲ್ಲ ದೂರದ ಅಮೇರಿಕೆಯಲ್ಲಿ ಕೂತ ಒಬ್ಬ ಕನ್ನಡಿಗ ಬರೆದನೇ ಎಂದು ನಾನು ಮತ್ತೆ ಮತ್ತೆ ವಿಸ್ಮಯಗೊಂಡಿದ್ದೇನೆ. ಅವುಗಳ ಹಿಂದೆ ಇರುವ ಅಸಾಧಾರಣ ವಿದ್ವತ್ತು ನಮ್ಮ ಹುಬ್ಬೇರಿಸುವಂತೆ ಮಾಡುತ್ತದೆ. ವೇದ, ಉಪನಿಷತ್ತು, ರಾಮಾಯಣ, ಭಾರತ, ಭಾಗವತ- ಇಂಥ ಪ್ರಾಚೀನ ಸಂಸ್ಕೃತ ವಾಙ್ಮಯದಿಂದ ಇಲ್ಲಿ ಪುಂಖಾನುಪುಂಖವಾಗಿ ಸಮುಚಿತ ಉದ್ಧರಣಗಳು ಬರುತ್ತವೆ. ವಿಷ್ಣುಪುರಾಣ, ಮತ್ಸ್ಯಪುರಾಣ- ಹೀಗೆ ಪುರಾಣಲೋಕದಿಂದ ಮಾಹಿತಿಗಳು ಒದಗುತ್ತವೆ. ಪಾಣಿನಿ, ಪತಂಜಲಿ, ಪಂಪ, ರನ್ನ, ಹರಿಹರ, ಕುಮಾರವ್ಯಾಸರಂಥ ಅನೇಕ ಕವಿಗಳು ಇಲ್ಲಿ ಓಡಿಯಾಡುತ್ತಾರೆ. ಸಾಹಿತ್ಯದಲ್ಲಿ ಡಾಕ್ಟರೇಟ್‌ ಮಾಡಿದವರಿಗೂ ಕೀರ್ತಿ ತರುವಂಥ ಈ ಬಗೆಯ ವಿದ್ವತ್ತನ್ನು ಪಶ್ಚಿಮಾರ್ಧಗೋಳದಲ್ಲಿ ನೆಲೆನಿಂತ ಒಬ್ಬ ಇಂಜಿನಿಯರ್‌ ಸಾಧಿಸಿದ್ದಾರೆನ್ನುವುದನ್ನು ಈ ಬರೆಹ ನೋಡಿರುವುದರಿಂದ ನಾನು ಒಪ್ಪಲೇಬೇಕಾಗಿದೆ...' ಎನ್ನುತ್ತಾರೆ ಡಾ। ಭಟ್‌.

ಹರಿಹರೇಶ್ವರರು ವೇದ, ಉಪನಿಷತ್ತು, ರಾಮಾಯಣ, ಮಹಾಭಾರತ, ಭಾಗವತ, ಪುರಾಣಗಳ ಜೊತೆಗೆ ಸಂಸ್ಕೃತ ಕಾವ್ಯ, ನಾಟಕ, ಅಲಂಕಾರ, ಲಕ್ಷಣ ಗ್ರಂಥಗಳನ್ನೂ ಚೆನ್ನಾಗಿ ಓದಿದ್ದಾರೆಂಬುದು ಅವರ ಬರವಣಿಗೆ ನೋಡಿದಾಗ ಮನದಟ್ಟಾಗುತ್ತದೆ. ಕನ್ನಡ ಕವಿಗಳಲ್ಲಿ ಪಂಪ, ರನ್ನ, ಹರಿಹರ, ಕುಮಾರವ್ಯಾಸರಲ್ಲದೇ ಕನ್ನಡದಲ್ಲೇ ಮಹಾಕಾವ್ಯ ಬರೆಯಲು ಹಟತೊಟ್ಟ ಆಂಡಯ್ಯನನ್ನೂ, ಆದಿ ವ್ಯಾಕರಣಕಾರ ಕೇಶಿರಾಜನನ್ನೂ ಬೇಸರವಿಲ್ಲದೇ ಓದಿದ್ದು ಯಾರಿಗಾದರೂ ಅಚ್ಚರಿಯನ್ನು ಉಂಟುಮಾಡದೇ ಬಿಡದು. ಕನ್ನಡ ಪಂಡಿತರಿಗೆ ಸಂಸ್ಕೃತದ ಗಂಧವಿರುವುದಿಲ್ಲ , ಸಂಸ್ಕೃತ ಪಂಡಿತರಿಗೆ ಕನ್ನಡ ಸಾಹಿತ್ಯದಲ್ಲಿ ಗತಿ ಇರುವದಿಲ್ಲ. ಸಾಹಿತ್ಯ ಪ್ರೇಮಿಗಳಿಗೆ ವ್ಯಾಕರಣ ತಲೆಶೂಲೆ. ಇವೆಲ್ಲ ಬಲ್ಲವರಾದರೆ ವಿಜ್ಞಾನದಲ್ಲಿ ಆಸಕ್ತಿ ಇರುವದಿಲ್ಲ. ಹರಿಹರೇಶ್ವರರ ಬಹುಮುಖ ಆಸಕ್ತಿ, ವ್ಯಾಸಂಗಶೀಲತೆ, ಅಭ್ಯಾಸದ ಶಿಸ್ತು, ಎಲ್ಲಕ್ಕೂ ಹೆಚ್ಚಾಗಿ ಅಭಿಜಾತ ಪ್ರತಿಭೆ ವಿನೂತನ ಪ್ರಬಂಧಗಳ ರಚನೆಗೆ ಕಾರಣವಾಗಿದೆ ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಕನ್ನಡದಲ್ಲಿ ಅಪರೂಪದ ಕೃತಿಯಾದ ಬಿ.ಜಿ.ಎಲ್‌.ಸ್ವಾಮಿ ಅವರ 'ಹಸಿರು ಹೊನ್ನು' ರಚನೆಯ ಹಿಂದಿರುವ ಪ್ರತಿಭೆಯ ಮಿಂಚು ಇಲ್ಲಿ ಕಂಡುಬರುತ್ತದೆ.

ಹರಿಹರೇಶ್ವರರ ಬರವಣಿಗೆಯ ಇನ್ನೊಂದು ವಿಶಿಷ್ಟ್ಯವೆಂದರೆ ಅವರು ತಮ್ಮ ಬರವಣಿಗೆಯ ಮಧ್ಯೆ ಸಂಸ್ಕೃತ ಸೇರಿಸಿ 'ನೀರಿಳಿಯದ ಗಂಟಲೊಳ್‌ ಕಡುಬು' ತುರುಕುವ ಪ್ರಯತ್ನ ಮಾಡುವದಿಲ್ಲ. ಎಲ್ಲ ಅಚ್ಚ ಕನ್ನಡದಲ್ಲೇ ಬರೆದುಬಿಡುತ್ತಾರೆ. ಫುಟ್‌-ನೋಟ್‌ನಲ್ಲಿ ಮೂಲ ಸಂಸ್ಕೃತ ಅವತರಣಿಕೆಗಳನ್ನು ಕೊಡುತ್ತಾರೆ. ಇವರ ಬರವಣಿಗೆ ನಾರಿಕೇಳಪಾಕವಲ್ಲ , ದ್ರಾಕ್ಷಾಪಾಕ. ಇವರ ಗದ್ಯ ಹೃದ್ಯವಾಗಿದೆ, ಭಾವ ಬಂಧುರವಾಗಿದೆ, ಕಲ್ಪನೆ ವಿಲಾಸದಿಂದ ಕೂಡಿದೆ.

ಅಮೇರಿಕೆಯಲ್ಲಿ 'ಚಿನ್ಮಯ ಮಿಶನ್‌'ನ ಸದಸ್ಯರಾದ ಕೆಲವು ಮಿತ್ರರು ವೇದ ಮಂತ್ರಗಳ ಪಠಣ ಮಾಡುತ್ತಾರೆ. ಆ ಮಂತ್ರಗಳ ಕನ್ನಡ ಅರ್ಥ ಕಳಿಸಲು ನನಗೆ ಕೇಳಿದ್ದಾರೆ. ಮಂತ್ರಗಳ ಕೊನೆಗೆ ಮಹತ್ವದ 'ಮಂತ್ರಪುಷ್ಪ' ಇರುತ್ತದೆ. ಅದರ ಪೂರ್ತಿ ಕನ್ನಡ ಅನುವಾದ ಹರಿಹರೇಶ್ವರರು ಮಾಡಿದ್ದಾರೆ. ಅದನ್ನು ಮಿತ್ರರಿಗೆ ಕಳಿಸಿ, ಇತರ ಮಂತ್ರಗಳ ಅನುವಾದ ಅವರಿಂದ ಪಡೆಯಿರಿ ಎಂದು ಹೇಳಬೇಕೆಂದೆನಿಸಿದೆ. ಹರಿಹರೇಶ್ವರರು ಮನಸ್ಸು ಮಾಡಿದರೆ, ಪ್ರಯತ್ನಿಸಿದರೆ, ಅದೇ ಛಂದಸ್ಸಿನಲ್ಲಿ ಸಂಸ್ಕೃತ ಮಂತ್ರಗಳನ್ನು ಕನ್ನಡಕ್ಕೆ ತರಬಹುದು. ಶಾಮ ಬೆನಗಲ್‌ ಅವರ 'ಭಾರತ ಏಕ ಖೋಜ್‌' ಟೆಲಿಚಿತ್ರಕ್ಕಾಗಿ ವಸಂತ ದೇವ ಅವರು ಕೆಲವು ವೇದ ಮಂತ್ರಗಳನ್ನು ಹಿಂದಿಗೆ ಅನುವಾದಿಸಿದ್ದರು. ಅಂಥ ಪಯತ್ನ ಕನ್ನಡದಲ್ಲಿ ಆಗಿಲ್ಲ. ಹರಿಹರೇಶ್ವರರು ಮಾಡಲು ಸಮರ್ಥರಾಗಿದ್ದಾರೆ.

ಹರಿಹರೇಶ್ವರರ ಅನುವಾದದ ಪ್ರಾರಂಭದ ಸಾಲು ಹೀಗಿವೆ:

'ನೀರ ಹೂವೇನೆಂದು ನೀ ಬಲ್ಲೆಯೇನು?
ಅದನರಿಯೆ ಹೂವಿನೊಲು ರಸದ ಸೆಲೆ ನಲಿವಿನೆಡೆ
ಪಶು-ಪುತ್ರ ಸಂಪದವ ಪಡೆವೆ ನೀನೆಲ್ಲವನು;
ತಂಗದಿರ ಚಂದಿರನೆ ನಭದ ನೀರಿನ ಹೂವು
- ಇದ ನೀ ತಿಳಿದು, ನೀ ನೀರಲಿರುವುದನೆಲ್ಲ ಗ್ರಹಿಸೆ, ಇಂಬು ನಿನ್ನಲ್ಲೆ!''

(''ಯೋ sಪಾಂ ಪುಷ್ಪಂ ವೇದ।
ಪುಷ್ಪವಾನ್‌ ಪ್ರಜಾವಾನ್‌ ಪಶುಮಾನ್‌ ಭವತಿ।।
ಚಂದ್ರಮಾ ವಾ ಅಪಾಂ ಪುಷ್ಪಮ್‌।
ಪುಷ್ಪವಾನ್‌ ಪ್ರಜಾವಾನ್‌ ಪಶುಮಾನ್‌ ಭವತಿ।।
ಯ ಏವಂ ವೇದ।
ಯೋ sಪಾಂ ಆಯತನಂ ವೇದ।
ಆಯತನವಾನ್‌ ಭವತಿ।।'' )

ನಾಳೆ (ಜೂನ್‌ 26) : 'ಮಾತಿನ ಮಂಟಪ' ಕೃತಿ ಸಮೀಕ್ಷೆ

English summary
Dr. G.V. Kulakarni intimate glimses of his friend , writer Shikaripura Harihareshwara
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X