ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ಅಮ್ಮನ ‘ಅಮ್ಮತನ’

By Staff
|
Google Oneindia Kannada News

Nalini Maiya
* ನಳಿನಿ ಮೈಯ, ಶಿಕಾಗೊ

ನನ್ನ ಅಮ್ಮ ಇಪ್ಪತ್ತೆಂಟು ವರ್ಷದ ಹದಿ ಹರಯದಲ್ಲಿದ್ದಾಗ ನಾನು ಹುಟ್ಟಿದೆ. ಆಗಿನಿಂದ ಈಗಿನವರೆಗೆ ಜೀವನದಲ್ಲಿ ಅದೇನೇನೋ ಬದಲಾವಣೆಗಳು ಬಂದು ಹೋದವು. ಆದರೆ ಒಂದು ವಿಷಯ ಮಾತ್ರ ಈವತ್ತಿಗೂ ಬದಲಾಗಿಲ್ಲ. ಯಾವತ್ತೂ ಬದಲಾಗುವುದಿಲ್ಲ. ಅದು ಏನಪ್ಪಾ ಅಂದರೆ ಅವಳು ನನ್ನ ಅಮ್ಮ. ನಾನು ಅವಳ ಮಗಳು!

ಒಳ್ಳೆಯವರಲ್ಲಿ ಒಳ್ಳೆಯತನ ಇದ್ದ ಹಾಗೆ, ಹಿರಿಯರಲ್ಲಿ ಹಿರಿತನ ಇದ್ದಹಾಗೆ ನನ್ನ ಅಮ್ಮನಲ್ಲಿ 'ಅಮ್ಮತನ" ಇದೆ. ಬೇರೆಯವರ ಹಾಗೆ ನನ್ನ ಅಮ್ಮ ತನ್ನ ಮಕ್ಕಳನ್ನು ಭೋಗಾಚಾರ ಮಾಡಿ ಮುದ್ದಿಸುವವಳಲ್ಲ, ಅಥವಾ ಪ್ರಶಂಸೆ ಮಾಡುವವಳು ಅಲ್ಲ. ಅವಳ 'ಅಮ್ಮತನ" ಕಂಡೂ ಕಾಣದ ಹಾಗೆ ಕಣ್ಣುಮುಚ್ಚಾಲೆಯಾಡಿ ತನ್ನ ಇರುವನ್ನು ಗೊತ್ತು ಮಾಡಿ ಕೊಡುತ್ತದೆ. ಅದು ಹೇಗಪ್ಪಾ ಅಂದರೆ....

ಕಳೆದ ಜೂನ್‌ ತಿಂಗಳಲ್ಲಿ ನಾನು ಮತ್ತು ನನ್ನ ಮಗ ಮಧು ಮೈಸೂರಿಗೆ ಹೋಗಿದ್ದೆವು. ಆಗ ತಂಗಿ ಜಯಂತಿಯ ಮನೆಯಲ್ಲಿ ಮಹಡಿ ಮೇಲೆ ನಮಗೆ ಮಲಗುವುದಕ್ಕೆ ಸನ್ನೆ ಮಾಡಿಕೊಟ್ಟಿದ್ದರು. ಆಗ ಇದ್ದಕ್ಕಿದ್ದಂತೆ ಅಮ್ಮನ 'ಅಮ್ಮತನ" ಜಾಗೃತವಾಯಿತು! 'ಆ ಮಾಣಿನ್‌ ಹಾಕ್ಕಂಡ್‌ ಅವಳೊಬ್ಬಳೆ ಅಲ್ಲಿ ಮನ್ಕಂಬುದಾ" ಅಂದವಳೇ ಮಹಡಿ ಹತ್ತಿ ಬಂದು ತನ್ನ ಹಾಸಿಗೆಯನ್ನೂ ಅಲ್ಲೇ ಹಾಕಿಕೊಂಡುಬಿಟ್ಟಳು! ಆಗ ನನಗೂ ಪ್ರಾಯ ಮಾಸುತ್ತಿತ್ತು, ಅಮ್ಮನಿಗಂತೂ ಇಳಿ ವಯಸ್ಸು. ಕಳ್ಳ ಏನಾದರೂ ಬಂದಿದ್ದರೆ ನಮ್ಮಿಬ್ಬರನ್ನೂ ಸದೆ ಬಡಿಯುತ್ತಿದ್ದನೇನೋ! ಆದರೆ.... ನನಗೆ ನಮ್ಮ ಅಮ್ಮನ 'ಅಮ್ಮತನ" ದ ರಕ್ಷೆ ಇರುವಾಗ ಯಾವ ಕಳ್ಳ ಬಂದಾನು!

ಮೊನ್ನೆ ಡಿಸೆಂಬರ್‌ನಲ್ಲಿ ಬಂದಾಗ ಒಂದು ಸಂಗತಿ ನಡೆಯಿತು. ರಾಣೀ ಚಂದ್ರಮತಿಯ ಕರಿಮಣಿ ರಾಜ ಹರಿಶ್ಚಂದ್ರನಿಗೆ ಮಾತ್ರ ಕಾಣಿಸುತ್ತಿತ್ತಂತಲ್ಲ. ಹಾಗೇ ನನ್ನ ಕೊರಳಲ್ಲಿದ್ದ ಕರಿಮಣಿ ಕೊಳೆ ಕೂತು ಕಪ್ಪಾಗಿದ್ದು ಇನ್ಯಾರಿಗೂ ಕಾಣಿಸದೇ ಇದ್ದಿದ್ದು ಅಮ್ಮಂಗೆ ಮಾತ್ರ ಕಾಣಿಸಿಬಿಟ್ಟಿತು! ಕಂಡ ಮೇಲೆ ಅವಳ 'ಅಮ್ಮತನ" ಸುಮ್ಮನೆ ಇರುತ್ತಾ ? 'ನಿನ್‌ ಕರಿಮಣಿ ಕಾಣ್‌ ಹ್ಯಾಂಗಾಯಿತ್ತು !" ಅಂದವಳೇ ಅಲ್ಲಿ ಇಲ್ಲಿ ತಡಕಾಡಿ ಬ್ರಷ್ಷು, ಸೋಪು ಕೈಯಲ್ಲಿ ಹಿಡಿದು ಬಂದುಬಿಟ್ಟಳು. 'ಅದನ್‌ ತೆಗ್ದು ಸೊಲ್ಪ ತೊಳಿ ಕಾಂಬೊ" ಅಂತ ಬಾಯಲ್ಲಿ ಹೇಳಿದ್ದಷ್ಟೇ ಹೊರತು ನನಗೆ ತೊಳೆಯೋಕೆ ಬಿಟ್ರೆ ತಾನೆ? ಕರಿಮಣಿ ಬಿಚ್ಚಿದ ತಕ್ಷಣ ತಾನೇ ಅದನ್ನು ತಿಕ್ಕಿ ಥಳ ಥಳ ಮಾಡಿ ಕೊಟ್ಟ ಮೇಲೇ ಅವಳಿಗೆ ತೃಪ್ತಿ!

ಅದೇ ದಿನ ರಾತ್ರಿ ನಾನು ಮಲಗಿದ್ದೆ. ಸೆಖೆಯಾಗ್ತಾ ಇತ್ತು. ಮೇಲೆ ಫ್ಯಾನ್‌ ತಿರುಗುತ್ತಾ ಇತ್ತು. ನಾನು ಸೆಖೆ ಅಂತ ಹೊದಿಕೆ ಇಲ್ಲದೆ ಹಾಗೇ ಮಲಗಿದ್ದೆ. ಅಮ್ಮ ಅದನ್ನ ಕಂಡುಬಿಟ್ಟಳು! ಆಗಲೇ ಹೆಡೆ ಎತ್ತಿತು ಅವಳ 'ಅಮ್ಮತನ"! ಎಲ್ಲಿಂದಲೋ ಒಂದು ಹೊದಿಕೆ ಸಂಪಾದಿಸಿ ತಂದು ನನಗೆ ಹೊದಿಸಿದಳು. ನಾನ್ಯಾಕೆ ಬೇಡ ಅನ್ನಲಿ? ಅಮ್ಮನ ಕೈಯಲ್ಲಿ ಹೊದಿಸಿಕೊಳ್ಳುವ ತೃಪ್ತಿ ನನ್ನದಾಗಿರುವಾಗ! ಇಂತಹ ನೆನಪಿನ ಅಣಿಮುತ್ತುಗಳನ್ನೆಲ್ಲ ಜೋಪಾನವಾಗಿ ಜೋಡಿಸಿ ಮನಸ್ಸಿನ ತಿಜೋರಿಯಲ್ಲಿ ಭದ್ರ ಪಡಿಸಿ ಇಡುವವಳು ನಾನು. ಇನ್ನೊಂದು ಅಣಿಮುತ್ತು ಸಿಕ್ಕಿರುವಾಗ ಬಿಟ್ಟೇನೇ?

ನನ್ನ ಪುಸ್ತಕ ಬಿಡುಗಡೆಯ ದಿನ ತಂಗಿ ಶ್ಯಾಮಲನ ಮನೆಯಲ್ಲಿ ದೇವರ ಕೋಣೆಯಲ್ಲಿ ನಾವಿಬ್ಬರೂ ಕುಳಿತು. ಅಮ್ಮ ಪುಸ್ತಕದ ಕಟ್ಟು ಒಡೆದು ನಮ್ಮದೇ ಒಂದು ಚಿಕ್ಕ ಬಿಡುಗಡೆ ಸಮಾರಂಭ ಮಾಡಿದ್ದೆವು. ಆಮೇಲೆ ನಡೆದ ಅದ್ದೂರಿ ಸಮಾರಂಭಕ್ಕಿಂತ ಹೆಚ್ಚು ಅರ್ಥಪೂರ್ಣವಾಗಿತ್ತು ಈ ಪುಟ್ಟ ಸಮಾರಂಭ.

ಆಗ ನಾವಿಬ್ಬರೂ ಒಂದೊಂದು ಅರ್ಧ ವಾಕ್ಯ ಮಾತಾಡಿದ್ದೆವು.

ನಾನು ಅಮ್ಮನಿಗೆ ನಮಸ್ಕಾರ ಮಾಡಿ 'ನೀವು ನಂಗೆ ಅಷ್ಟೊಂದು ಪ್ರೀತಿಯಿಂದ ವಿದ್ಯಾ ಬುದ್ಧಿ ಕೊಟ್ಟಿದ್ದಕ್ಕೆ ಈ ದಿನ...." ಅಂದೆ. ನನಗೆ ಕಂಠ ಬಿಗಿದು ಬಂದಿತ್ತು.

ಅವಳು 'ಅವರು ಹೇಳಿದ್ರು ಈ ಹೆಣ್ಣು ಹೀಂಗಾತ್ತು ಅಂತ...." ಅಂದಳು.

ಯಾರೋ! ಏನಂತ ಹೇಳಿದ್ದರೋ! ಅವಳಿಗೂ ಕಣ್ಣು ತುಂಬಿ ಬಂದಿತ್ತು. ಅರ್ಧ ವಾಕ್ಯಗಳ ಆ ಪುಟ್ಟ ಸಂಭಾಷಣೆ ಎಷ್ಟೊಂದು ಭಾವಗರ್ಭಿತವಾಗಿತ್ತು ! ಗಂಟೆಗಟ್ಟಲೆಯ ಮಾತಿಗಿಂತ ಹೆಚ್ಚು ತೂಕವಾಗಿತ್ತು ಅದು. ನನ್ನ ಮನಸ್ಸಿನಲ್ಲಿ ತುಂಬಿಕೊಂಡ ಅತ್ಯಮೂಲ್ಯ ನೆನಪುಗಳಲ್ಲಿ ಅದು ಒಂದು ಮುಖ್ಯವಾದ ನೆನಪು.

ಕಳೆದ ಮೇ ತಿಂಗಳಲ್ಲಿ ನನ್ನ ಅಮ್ಮ ಸ್ವರ್ಗಸ್ಥಳಾದಳು. ಅವಳು ಈ ಪ್ರಪಂಚದಲ್ಲಿ ಯಾವ ದಾಖಲೆಯನ್ನೂ ಸ್ಥಾಪಿಸಿರಲಿಲ್ಲ. ಮನುಷ್ಯ ಮಾತ್ರರು ತಮ್ಮ ಪರಿಮಿತಿಯಲ್ಲಿ ಮಾಡಬಹುದಾದ ಎಲ್ಲವನ್ನೂ ನಮ್ಮ ಏಳಿಗೆಗಾಗಿ ಮಾಡಿ ಶ್ರಮಿಸಿದ್ದಳು ಅಷ್ಟೆ ! ಯಾವ ವೃತ್ತ ಪತ್ರಿಕೆಯಲ್ಲೂ ಅವಳ ಹೆಸರು ಅಚ್ಚಾಗಿರಲಿಲ್ಲ. ಆದರೆ ನಮ್ಮ ಹೃದಯದಾಳದಲ್ಲಿ ನೆನಪುಗಳ ಹಾಳೆಯಲ್ಲಿ ಬರೆದ ಅವಳ ಹೆಸರು ಎಂದಿಗೂ ಮಾಸುವುದೇ ಇಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X