ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾರಿಗೂ ಬೇಕಿಲ್ಲದ.. ಈ ಹಿರಿಯಣ್ಣ ಮೈ ಪರಚಿಕೊಳ್ಳೋ ಯುದ್ಧ

By Super
|
Google Oneindia Kannada News

ಎಲ್ಲ ಕಡೆ ಪ್ರದರ್ಶನ ಪ್ರತಿಭಟನೆ ನಡೆಸಿಕೊಳ್ತಾ ಎಲ್ಲರಿಂದ್ಲೂ ಬಯ್ಸಿಕೊಳ್ತಾ , ವರ್ಲ್ಡ್‌ ಕಪ್‌ ಕ್ರಿಕೆಟ್ಗಿಂತಲೂ ಇಷ್ಟ ಪಟ್ಟು ಟಿ.ವಿ. ಯಲ್ಲಿ ನೋಡುವಂತಾಗುತ್ತಿರುವ ಈ ಯುದ್ಧದ ಬಗ್ಗೆ ಒಂದು ಹರಟೆ ಬರೆದರೆ ಬೇಸರಿಸಿಕೊಳ್ಳಬೇಡಿ. ನಾವೆಲ್ಲ ಒಂದಿಲ್ಲೊಂದು ಬಾರಿ ಒಂದಿಲ್ಲೊಂದು ಕಾರಣಕ್ಕೆ ಮಾತಿನಲ್ಲಾದರೂ ಮಲ್ಲರಾದೇವಲ್ಲ .. ಅಂತ. ಎಲ್ಲರೂ ದೊಡ್ಡಣ್ಣ ಬುಶ್ಗೆ ಬಯ್ತಿರುವಂತೆಯೇ ತಮ್ಮಂದಿರ ತಪ್ಪೇನು ನೋಡೋಣ ಅಂತ ಮಾಡುವ ಕುತೂಹಲಭರಿತ ನ್ಯಾಯಾನ್ವೇಷಣೆ ಅನ್ನಲೇ?

ಮನೆಯಲ್ಲಿಯ ಪುಟಾಣಿ ತುಂಟ ಪುಟ್ಟ , 'ಅಮ್ಮಾ ನಂಗೆ ಅಣ್ಣ ಹೊಡೆದ್ಬಿಟ್ಟ... ಊಂ... ಊಂ...' ಅಂತ ಅಳ್ತಾ ಬಂದಾಗ ಸಾಧಾರಣವಾಗಿ ಎಲ್ಲ ತಾಯಿಯರೂ ಮಾಡುವುದು ಅಣ್ಣನಿಗೆ ಬಯ್ಗುಳದ ಆರತಿ.' ಅಮ್ಮ ಪುಟ್ಟನೇ ನಂಗೆ ಹೋಂ ವರ್ಕ್‌ ಮಾಡಲು ಬಿಡದೆ ತೊಂದರೆ ಮಾಡಿದ್ದಲ್ಲದೆ ಆಟಕ್ಕೆ ಬರಲ್ಲ ಅಂದದಕ್ಕೆ ಮೆಲ್ಲಗೆ ಜಿಗುಟಿ ಓಡಿದ್ದ.. ಅಂತ ಅಣ್ಣ ಸಮಜಾಯಿಷಿ ನೀಡಿದರೂ ಕೊಟ್ಟ ಬಯ್ಗಳ ಹಿಂತೆಗೆದುಕೊಳ್ಳುವುದೆಂತು. ತಾಯಿಯೇನೋ ಅಣ್ಣನಿಗೊಂದು ಮುತ್ತು ಕೊಟ್ಟು, ಪುಟಾಣಿಯನ್ನೊಮ್ಮೆ ನಾಟಕೀಯತೆಯಿಂದ ಗದರಿಸಿ, ಅವನೊಡನೆ ಆಟ ಆಡಲು ಹೋದಾಗ ಸಂಸಾರ ನಕ್ಕು ಮುಂದೆ ಸಾಗಿತ್ತು.

ಪುಟಾಣಿ ಪುಟ್ಟ ಅಣ್ಣನ ವಿರುದ್ಧ ಅದೆಷ್ಟು ಬಾರಿ ಈ ಆಟ ಹೂಡಿದ್ದನೋ ನಿಮಗೆ ಗೊತ್ತಿದ್ದ ಅಣ್ಣ ತಮ್ಮಂದಿರನ್ನ ವಿಚಾರಿಸಿ ನೋಡಿ. ಈಗ ಕೊಂಚ ಮನೆಯಿಂದ ಹೊರಗೆ ಬರೋಣವಂತೆ, ಶಾಲೆಗೆ ಹೋದ ಪುಟ್ಟ ; ಅಲ್ಲೂ ಅಷ್ಟೆ ತನಗಿಂತ ದೊಡ್ಡವರಾಗಿದ್ದವರೊಡನೆ ಸಮಯ ಬಂದಾಗ ಈ ಆಟ ನಡೆಸಿದ್ದನಂತೆ. ಅದೇ ಒಮ್ಮೆ ಬೀದಿಯಲ್ಲಿ ಸಿಕ್ಕ ಪುಂಡನೊಬ್ಬ ನಾಲ್ಕು ಬಾರಿಸಿ ಕಿಸೆಯಲ್ಲಿದ್ದ ದುಡ್ಡನ್ನು ಸಹಾ ಕಿತ್ತು ಕೊಂಡದ್ದನ್ನ ಯಾರಿಗೆ ಹೇಳುವುದೋ ತಿಳಿಯದಾಗಿದ್ದ.

ಇದು ಬರೇ ಆಟಕ್ಕಷ್ಟೇ ಸೀಮಿತವಾಗಿದ್ದರೆ ಸರಿ; ಆದರೆ ಮುಂದೆ ಪಾಠದಲ್ಲೂ ಅಷ್ಟೇ; ಅಣ್ಣ ಬುದ್ಧಿವಂತನಾಗಿ, ತಮ್ಮ ಓದಿನಲ್ಲಿ ಹಿಂದಾದರೆ, ತಗೊಳ್ಳಿ ಅಲ್ಲಿಯೂ ಬಂತು ಅಣ್ಣನ ಮೇಲೆ ತಕರಾರು. ಒಂದೊಂದು ಬಾರಿ, ಅದೇನು ನೀನೊಬ್ಬ ಬುದ್ಧಿವಂತನೆಂದು ಅಹಂಕಾರ? ತಮ್ಮನಿಗೆ ಸ್ವಲ್ಪ ಪಾಠ ಹೇಳಿ ಕೊಡಬಾರದೇನು ಅಂತ ತಮ್ಮನ ಹಿಂದುಳಿವಿಕೆಗೆ ಅಣ್ಣನನ್ನ ಬೈಯ್ದ ಹೆತ್ತವರನ್ನ ಕಣ್ಣಾರೆ ಕಂಡಿದ್ದೀರ, ಇಲ್ಲ ಅಂತ ನಿಮ್ಮ ಮನಸ್ಸಿಗೇ ಸುಳ್ಳು ಹೇಳಬೇಡಿ. ಇರಲಿ, ಅದೆಷ್ಟು ಕುಟುಂಬಗಳಲ್ಲಿ ಅಣ್ಣ ತಮ್ಮಂದಿರ ಜಗಳ ಇಂತಹದೇ ವಿಷಯಗಳ ಬಗ್ಗೆ ಇರುವುದಿಲ್ಲ. ಒಳ್ಳೆಯ ಮನಸ್ಸಿನಿಂದ ರಾಮ ಲಕ್ಷ್ಮಣರಂತೆ ಇರುವವರೆಷ್ಟೋ ಮಂದಿಯಿದ್ದರೂ, ಈಗ ನಾನು ಮುಂದೆ ಬೆಳೆಸುವ ವಿಚಾರ ಸರಣಿಗೆ ಈ ಹಿನ್ನೆಲೆಯನ್ನ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ.

ಅಣ್ಣ ತಮ್ಮಂದಿರ ಈ ಹೋಲಿಕೆ ಮನುಜರೆಲ್ಲಾ ಒಂದೇ ಎಂದು ನಂಬಿರುವ ನನ್ನ ಮಟ್ಟಿಗೆ ಬಹಳ ಔಚಿತ್ಯಪೂರ್ಣವಾಗಿಯೂ ಇದೆ. ಈಗ ಮಾತ್ರ ಬುಷ್‌ ಮತ್ತು ಅಮೇರಿಕಾನ ಅಣ್ಣ ಎಂದುಕೊಳ್ಳಿ; ಸದ್ದಾಮ, ಫ್ರೆಂಚರು, ಅಷ್ಟೇ ಯಾಕೆ ಉಳಿದವರನ್ನೆಲ್ಲ ತಮ್ಮಂದಿರೆಂದುಕೊಳ್ಳಿ. ಈಗ ನೋಡಿ ಪರಿಸ್ಥಿತಿ ಸ್ವಲ್ಪ ಸುಲಭವಾಗಿ ಅರ್ಥವಾದೀತು. ಮೊದಲೇ ಹೇಳಿದಂತೆ ಸರಿ ತಪ್ಪಿನ ನಿರ್ಣಯಕ್ಕೆ ಸಿಗುವ ವಸ್ತುವಲ್ಲ ಇದು. ಬರೇ ವಿಶ್ಲೇಷಣೆಯಷ್ಟೆ :

ತಮ್ಮ (ಸದ್ದಾಮನೆನ್ನೋಣ) ಜೋರಾಗಿಯೇ ಹೊಡೆದದ್ದಕ್ಕೆ ಸ್ವಲ್ಪ ಕೋಪ ತೋರಿದೆವೆನ್ನಿ ಅವನ ಮೇಲೆ. ಹಾಗಂತ ಸಮಯದಲ್ಲಿ ಮುಂದೊಮ್ಮೆ ಬೀದಿ ಪುಂಡನೊಡನೆ ಸೇರಿ ಅಣ್ಣನಿಗೆ ಹೊಡೆದರೆ ಅದಕ್ಕೊಂದು ವಿಚಾರಣೆ ನಡೆಯಿಸಿಯೀರಿ. ಹಾಗಂತ ಸಾಕ್ಷಿ ಸಿಗದಿದ್ದರೆ ಏನು ಮಾಡ್ತೀರ, ನಿಮಗೆ ಪ್ರೀತಿಯಿದ್ದವರ ಪರ ವಹಿಸುವಿರಿ ಅಲ್ಲವೆ? ನಿಮ್ಮದೇನು ತಪ್ಪಿಲ್ಲ , ತಪ್ಪೆಲ್ಲ ಅಣ್ಣನದ್ದೇ ಅಂತ ನೀವು ಹೇಳಿದರೂ ಅವನೊಪ್ಪ ಬೇಕಲ್ಲ ; ಅಷ್ಟೇ ಅಲ್ಲ ನೀವೇ ಅಣ್ಣನಾದಾಗ ನೀವೂ ಒಪ್ಪುವುದಿಲ್ಲವೆನ್ನಿ.

ಇದೇನು ಬರೇ ಮಕ್ಕಳನ್ನ ಬೆಳೆಯಿಸೋ ತಾಪತ್ರಯ ಹೇಳಿಕೊಳ್ಳುತ್ತಿದ್ದೇನೆಂದುಕೊಳ್ಳಬೇಡಿ; ಅದೆಲ್ಲ ಮಕ್ಕಳ ತಾಯಿಗೆ ಬಿಟ್ಟಿದ್ದೇನೆಂದು ನಕ್ಕು ಬಿಡಲೇ! ಈ ಅಣ್ಣ ತಮ್ಮನ ಹೋಲಿಕೆ ಇಲ್ಲಿಗೆ ನಿಲ್ಲುವುದಿಲ್ಲವೆನ್ನಿ. ತಮ್ಮನಿಗೆ ಬಡತನವಾದರೆ ಅಣ್ಣ ಸ್ವಲ್ಪ ಕೊಡಬಾರದೆ. ಕೊಟ್ಟ ಅಂತಲೇ ಇಟ್ಟುಕೊಳ್ಳಿ ಈಗ; ಆಮೇಲೆ ನೋಡಿ ಹೇಳ್ತೀರಾ, 'ಹಾಹಾ.. ಏನೊ ನಮಗೆ ಬಡತನ ಅಂತ ನಂಗೆ ಬರೇ ಕಾಟನ್‌ ಷರ್ಟ್‌ ಕೊಟ್ಟು ಅಪಮಾನ ಮಾಡೊದೇ. ಅಲ್ಲ ನಮ್ಮ ಕಣ್ಣ ಮುಂದೆಯೇ ಜರಿ ಪಟ್ಟೆ ಉಟ್ಕೊಂಡು ನಾವು ಬಡವರು ಅಂತ ಹತ್ತಿ ಬಟ್ಟೆ ಕೊಟ್ಟಿದ್ದಾರೆ ನೋಡಿ..' ಎನ್ನುವವರು ಎಷ್ಟಿಲ್ಲ.

ಇರಲಿ ನಮ್ಮ ಈಗಿನ ಅಣ್ಣನಿದ್ದಾನಲ್ಲ ಅವನಿಗೋ ಬಹಳ ಸ್ವಾರ್ಥ, ಜಗತ್ತಿನಲ್ಲಿನ ಎಣ್ಣೆಯ ಮೇಲಷ್ಟೇ ಅವನ ಕಣ್ಣು. ಅದಕ್ಕಾಗೇ ಹೀಗೆಲ್ಲ ಏನೇನೋ ಆಟ ಹೂಡಿದ್ದಾನೆ ನೋಡಿ... ಅಂತೀರಾ? ನನಗಂತೂ ಗೊತ್ತಿಲ್ಲ ; ಹಾಗಂತ ಅವನಿಗಿಂತ ನಿಸ್ವಾರ್ಥಿ ಯಾರನ್ನುವುದೂ ಗೊತ್ತಿಲ್ಲ ನೋಡಿ. ಈಗ ನೋಡಿ ಒಂದು ವಿಷಯ, ಬುಷ್‌ ಅಣ್ಣ ನೆಂದು ಉಳಿದವರೆಲ್ಲ ತಮ್ಮನೆಂದೆನೆಲ್ಲ , ಇಲ್ಲೆ ಎಡವಟ್ಟಾಗಿದ್ದು. ಈಗ ನಮ್ಮನ್ನ ನೋಡಿಕೊಳ್ಳೋ ತಾಯಿ ಯಾರು? ಯುನೈಟೆಡ್‌ ನೇಶನ್ಸ್‌ ಅಂತೀರೇನು. ಅದು ಹೇಗಾದೀತು, ಅದನ್ನ ಸೃಷ್ಟಿ ಮಾಡಿದವರು ನಾವೇ ಅಲ್ಲವೇ- ನಮ್ಮ ಅನುಕೂಲಕ್ಕಾಗಿ. ಅದಕ್ಕೇ ಅಲ್ವೆ ಅನುಕೂಲ ಆಗ್ಲಿಲ್ಲ ಅಂದ್ರೆ ಕೇಳೋವ್ರ್ಯಾರು? ಏನ್ಮಾಡೋದು ನಮ್ಮ ಈ ಪರಿಸ್ಥಿತಿಯಲ್ಲಿ ನಿಜವಾದ ತಾಯಿ ಇರಲಿಕ್ಕೆ ಸಾಧ್ಯವಿಲ್ಲದೇ ನಾವೇ ಹುಟ್ಟಿಸಿಕೊಂಡ ತಾಯಿಯೇ ಗತಿ.

ಈಗ ಮಾತ್ರ ತಿಳಿದುಕೊಳ್ಳಿ, ಜನ್ಮ ಕೊಟ್ಟ ತಾಯಿಯಿಂದಲೇ ಬಗೆ ಹರಿಯಲಾರದ ಪರಿಸ್ಥಿತಿಯನ್ನ ಬೇರೆ ಯಾರು ಪರಿಹರಿಸಿಯಾರು. ಇದೇ ನೋಡಿ ಈಗಿನ ರಾಜಕಾರಣದಲ್ಲಿನ ಕಷ್ಟ. ದೊಡ್ಡ ಧಾಂಡಿಗನಾದ ಅಣ್ಣ ಯಾರ ಮೇಲೆ ಕೈಯೆತ್ತಿದರೂ ತಪ್ಪೆ. ಪುಟ್ಟ ತಮ್ಮ ಕೈ ಕಾಲು ಮುರಿಯುವಂತೆ ಬಾರಿಸಿದರೂ ಅವನ ಮೇಲಿನ ನಮ್ಮ ನಿಮ್ಮ ಕೋಪ ಬಹಳ ಬೇಗನೇ ತಣ್ಣಗಾಗಿ ಬಿಡುತ್ತದೆ. ಅದೇ ತಮಗೆ ಯಾರಾದರೊಬ್ಬ ತಮ್ಮ ಹೊಡೆದರೆ ಮತ್ತೆ ಆ ಅಣ್ಣನೇ ಏನಾದರೂ ಮಾಡಬೇಕಿತ್ತು ಅನ್ನುವವರೂ ಇದ್ದಾರೆ. ಇರಲಿ, ಇದಕ್ಕೂ ಇರಾಕ್‌ ಯುದ್ಧಕ್ಕೂ ಈಗ ಅದಾವ 'ಗೋಕುಲಾಷ್ಟಮಿ.. ಇಮಾಂ ಸಾಬಿ ನಡುವಣ ಸಂಬಂಧ ..' ಅನ್ನುತ್ತೀರಾ.

ಇಷ್ಟೇ ನೋಡಿ, ಧಾಂಡಿಗ ಅಣ್ಣನ ಮನೆಗೇ ನುಗ್ಗಿ ಅವನ ಮೀಸೆಗೆ ಬೆಂಕಿ ಹಚ್ಚಿದಾಗ ಅಣ್ಣನಿಗೆ ರೋಸಿಹೋಯಿತಷ್ಟೇ ಅಲ್ಲ , ತಮ್ಮ ಕೈಗೆ ಸಿಗದೆ ಓಡಾಡಿಕೊಂಡಿದ್ದರೆ, ಅವನಿಗೆ ಆಶ್ರಯ ಕೊಟ್ಟವರ ಮೇಲೆಲ್ಲಾ, ಕೊಟ್ಟಿರಬಹುದೆಂಬ ಅನುಮಾನ ಬಂದವರ ಮೇಲೆಲ್ಲ ಎಗರಾಡಿಯಾನೆ. ಸರಿ ತಪ್ಪಿಗಿಂತ ಹೆಚ್ಚಾಗಿ, ಎಲ್ಲಿ ಇನ್ನೊಮ್ಮೆ ಮನೆಗೆ ನುಗ್ಗಿ ಇನ್ನೇನು ಮಾಡಿಯಾನೋ ಎಂಬ ಒಂದು ರೀತಿಯ ಭಯವೇ ಅನ್ನಿ. ಅರೆ ಇದೇನು ಬಲಾಢ್ಯ ಅಣ್ಣನಿಗೇತರ ಭಯ ಅನ್ನಬೇಡಿ, ನಿಮ್ಮ ಮನಸ್ಸನ್ನೇ ಕೇಳಿ ನೋಡಿ. ಇರಲಿ ನಿಮಗ್ಯಾರಿಗೂ ಉಪದೇಶ ಹೇಳಲಿಕ್ಕೆ ನಾನ್ಯಾರು ಹೇಳಿ? ನಾ ಹೇಳುವುದು ಇಷ್ಟೇ- ಅಣ್ಣ ತಮ್ಮಂದಿರ ಜಗಳದ ನಡುವೆ ನ್ಯಾಯ ಹೇಳುವುದು ಕಷ್ಟ . ಅಣ್ಣ ನೆಂದು ಬರೇ ಒಬ್ಬರದೇ ತಪ್ಪಿದೆಯೆಂದುಕೊಳ್ಳಬೇಡಿ. ತಮ್ಮನ ಕಿಡಿಗೇಡಿತನಕ್ಕೆ ಎಲ್ಲಿ ಕೊನೆಯಂತ ನಿಮಗೇನಾದರೂ ಗೊತ್ತ?

ಒಂದು ಮಾತ್ರ ತಿಳಿದುಕೊಳ್ಳಿ- ಈ ಅಣ್ಣನ ಮನೆಯ ಪ್ರಜೆಗಳೇ ಮನುಷ್ಯನ ಮೇಲಿನ ಪ್ರೀತಿಯಿಂದ ಯುದ್ಧದ ಮೇಲಿನ ಭೀತಿಯಿಂದ ಪ್ರದರ್ಶನ ನಡೆಸಿದ್ದಾರೆ. ಪ್ರಜಾತಂತ್ರದ ಇವರ ರೀತಿಗೆ ಮೆಚ್ಚಿ ಕೊಂಡೇ ನಾವು ನಮ್ಮ ವಾಜಪೇಯಿ ಮಾಡಿದಂತೆ ಮೌನ ವ್ರತ ಮಾಡಿದರೆ ಹೇಗೆ? ಏನೋ ಹೆಚ್ಚು ತಿಳಿಯದವ ನಾನು; ಎರಡು ಮಕ್ಕಳ ತಂದೆಯಾಗಿದ್ದಕ್ಕೆ ಹೇಳಿದೆ. ಪಾಪದ ಅಣ್ಣಂದಿರ ಸ್ಥಿತಿ ನೋಡಿ, ಅದರಲ್ಲೂ ತಮ್ಮ ಬರೇ ಕಿಡಿಗೇಡಿ ಪುಂಡ ಎಂದು ತಿಳಿದು ನೋಡಿ ಅಷ್ಟೆ.

English summary
Laxminzrayana Ganapathy writes a light peace on war scenario
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X