• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸತ್ಯದ ಸತ್ಯ; ಕುರೋಸಾವಾನ ‘ರ್ಯಾಶೊಮೋನ್‌’

By Staff
|

ಜಪಾನಿನ ‘ಕ್ಯೊಟೋ’ದ ಪ್ರವೇಶ ರ್ಯಾಶೊಮೋನ್‌ ದ್ವಾರದಲ್ಲಿ ಮೂರು ಜನ ಕೂತಿದ್ದಾರೆ. ಒಬ್ಬ ಮರಕಟುಕ. ಇನ್ನೊಬ್ಬ ಜಪಾನಿನ ಧರ್ಮಗುರು. ಮತ್ತೊಬ್ಬ ‘ಸಾಮಾನ್ಯ’. ಮೂವರೂ ಆ ಪ್ರದೇಶದಲ್ಲಿ ನಡೆದ ಒಂದು ಬಲಾತ್ಕಾರ ಹಾಗೂ ಕೊಲೆಯ ಬಗ್ಗೆ ಚರ್ಚಿಸುತ್ತಿದ್ದಾರೆ. ಧರ್ಮಗುರು ಹಾಗೂ ಮರಕಟುಕ ಇಬ್ಬರೂ ತೀರ ಗೊಂದಲದಿಂದಿದ್ದಾರೆ. ‘ನನಗೆ ಏನೂ ಅರ್ಥವಾಗಿಲ್ಲ’ ನನಗೆ ಏನೇನೂ ಅರ್ಥವಾಗುತ್ತಿಲ್ಲ’ ಎನ್ನುತ್ತಲೇ ಚಿತ್ರ ಆರಂಭವಾಗುತ್ತದೆ. ಹೊರಗೆ ಧಾರಾಕಾರವಾಗಿ ಮಳೆ ಬೀಳುತ್ತಿದೆ. ‘ಕುರೋಸಾವಾನ ಚಿತ್ರಗಳಲ್ಲಿ ತುಂತುರು ಅಂಬುದು ಎಲ್ಲಿಯೂ ಇಲ್ಲ’ ಅನ್ನುವುದು ಪಶ್ಚಿಮದ ಜಪಾನಿ ಚಿತ್ರವಿಮರ್ಶಕರಲ್ಲಿ ಒಂದು ಮಾತಂತೆ. ತಾವೇನು ನೋಡಿದ್ದೇವೆ, ಕೇಳಿಸಿಕೊಂಡಿದ್ದೇವೆ ಅನ್ನುವುದನ್ನು ನೋಡಿಯೂ ಕೇಳಿಯೂ ಗೊಂದಲದಿಂದಿರುವ ಧರ್ಮಗುರು ಹಾಗೂ ಮರಕಟುಕ ಆಗತಾನೆ ಮಳೆತಾಳದೆ ಆಲ್ಲಿ ವಿಶ್ರಮಿಸಿಕೊಳ್ಳಲು ಬಂದ ‘ಸಾಮಾನ್ಯ’(ಕುರೋಸಾವಾನ ಮೂಲ ಚಿತ್ರಕಥೆಯಲ್ಲಿ ಈ ಪಾತ್ರಕ್ಕೆ commoner ಎಂದೇ ಕರೆಯಲಾಗಿದೆ)ನಿಗೆ ನಡೆದ ಘಟನೆಗಳನ್ನು ವಿವರಿಸುತ್ತಾ ಹೋಗುತ್ತಾರೆ.

Akiro Kurosawaಆಗಿರುವುದು ಇಷ್ಟೇ. ಸಮೀಪದಲ್ಲಿ ಒಂದು ಕೊಲೆ ನಡೆದಿದೆ. ಮತ್ತು ಕೊಲೆಗಿಂತ ಮುಂಚೆ ಕೊಲೆಯಾದವನ ಹೆಂಡತಿಯ ಬಲಾತ್ಕಾರ (ಪ್ರಾಯಶಃ) ನಡೆದಿದೆ. ಈ ಸಂಬಂಧ ಆ ಪ್ರದೇಶದ ಕುಪ್ರಸಿದ್ಧ ಡಕಾಯತ ಅಥವಾ ‘ಹಾದಿಚೋರ’ನೆನ್ನಬಹುದು, ಅಂತವನೊಬ್ಬನ ಬಂಧನವಾಗಿದೆ. ಆತನ ವಿಚಾರಣೆಯಲ್ಲಿ ಹೊರಬಂದ ಸಾಕ್ಷಿಗಳ ‘ಸತ್ಯ’ವನ್ನು ಜೀರ್ಣಿಸಿಕೊಳ್ಳಲಾಗದೇ ಸತ್ಯವೆಂಬುದೊಂದಿದೆಯೇ ಎಂದು ಎಲ್ಲರೂ ಗೊಂದಲದಲ್ಲಿ ಬಿದ್ದಿದ್ದಾರೆ, ಎಲ್ಲರೂ. ಯಾಕೆಂದರೆ, ಅಲ್ಲಿ ಸಾಕ್ಷಿ ಹೇಳಿದವರೆಲ್ಲರೂ ‘ಅವರವರ ಸತ್ಯ’ ವನ್ನು ಹೇಳಿದ್ದಾರೆ.

ಮೊದಲು ಲೂಟಿಗಾರನ ವಿಚಾರಣೆ ನಡೆಯುತ್ತದೆ. ಆತನ ಪ್ರಕಾರ ಸತ್ಯವೇನೆಂದರೆ, ಆತ ಕಾಡಿನಲ್ಲಿ ಹೋಗುತ್ತಿದ್ದ ಈ ಗಂಡಹೆಂಡಿರನ್ನು ಆಕ್ರಮಿಸಿದ್ದು ನಿಜ. ತಾನು ಹೆಂಡತಿಯನ್ನು, ಬಲಾತ್ಕಾರಮಾಡಲು ಪ್ರಯತ್ನಿಸಿದ್ದೂ ನಿಜ. ಆದರೆ ಆ ಬಲಾತ್ಕಾರ, ಈತ ಆಕೆಯ ಗಂಡನಿಗಿಂತ ಹೆಚ್ಚು ‘ಗಂಡಾ’ಗಿದ್ದಿದ್ದರಿಂದ ಒಂದು ಘಟ್ಟದಲ್ಲಿ consensual ಆಗಿ ಪರಿಣಮಿಸಿದೆ. ಮತ್ತೆ ಹೇಳಿಕೇಳಿ, ತಾನೊಬ್ಬ ಗಂಡುಗಲಿ, ವೀರ, ದುಷ್ಟ ಹಾಗೂ ಲಂಪಟ. ತಾನು ಹಾದಿಚೋರನಾಗಿದ್ದಕ್ಕೆ ಆತನಿಗೆ ಯಾವರೀತಿಯೂ ಪಶ್ಚಾತ್ತಾಪವಿಲ್ಲ. ಬದಲಿಗೆ ಹೆಮ್ಮೆಯಿದೆ. ತಾನು ಹೆಣ್ಣನ್ನು ಒಲಿಸಿಕೊಂಡು ನಂತರ ನಡೆದ ವೀರ ‘ಸಮುರೈ’ ಕಾಳಗದಲ್ಲಿ ಆಕೆಯ ಗಂಡನನ್ನು ಕೊಲ್ಲಲೇಬೇಕಾಯಿತು, ಅನ್ನುತ್ತಾನೆ. ನಂತರ ಸಾಕ್ಷಿ ಹೇಳಿದ ಆಕೆಯ ಸತ್ಯ, ತನ್ನ ಸಂಸ್ಕೃತಿಯ ಪ್ರಕಾರ, ತನ್ನ ನಂಬಿಕೆಗಳ ಪ್ರಕಾರ ತನ್ನ ‘ಸ್ತ್ರೀತ್ವ’ ವನ್ನು ಕಾಪಾಡಿಕೊಳ್ಳುವ ಗಟ್ಟಿ ನೆಲೆಯ ಮೇಲೆ ನಿಂತಿದೆ. ಹಾಗಾಗಿ ಆಕೆ ತನ್ನ ಗಂಡನನ್ನು ಕೊಲೆಮಾಡಿರಬಹುದಾಗಿದ್ದರೂ ಅದಕ್ಕೊಂದು ನೈತಿಕ ಕಾರಣವಿದೆ. ಆದರೆ, ಆಕೆ ಕೊಲೆ ಮಾಡಿರಬಹುದೇ ಅನ್ನುವುದೂ ಮಸುಕಾಗಿಯೇ ಉಳಿಯುತ್ತದೆ. ನಂತರ ಸತ್ತ ವ್ಯಕ್ತಿಯ ‘ಆತ್ಮ’ ಕೂಡ ಸಾಕ್ಷಿ ಹೇಳುತ್ತದೆ. ಆತ ಕೂಡ ವೀರ ‘ಸಮುರೈ’. ಆದ್ದರಿಂದ ಆತ ತನ್ನ ಸಾವನ್ನು ವೀರೋಚಿತವಾಗಿ ಮಾಡಬೇಕಾಗಿದೆ. ತಾನು ಅಗ್ಗವಾಗಿ ಸತ್ತಿಲ್ಲವೆಂಬುದನ್ನು ಈಗ ಬದುಕಿರುವವರಿಗೆ ತೋರಿಸಿಕೊಡುವುದು ಆತನಿಗೆ ಮುಖ್ಯವೇ. ಆದ್ದರಿಂದ ಆತನ ಸತ್ಯ ಈ ‘ಪೂರ್ವಾಗ್ರಹ’ ದಿಂದಲೇ ಕೂಡಿದೆ.

A scene from Rashomonಈ ಘಟ್ಟದಲ್ಲಿ ಕೆಲವು ಮೂಲ ನಂಬಿಕೆಗಳೇ ಅಲುಗಾಡುತ್ತವೆ. ಸಾಯುವವನು ಪ್ರಾಯಶಃ ಸುಳ್ಳು ಹೇಳಲಾರ ಅನ್ನುವುದು, ಒಂದು ಸಾಮಾನ್ಯವಾದ ನಂಬಿಕೆಯಿರಬಹುದು. ಆದರೆ ಇಲ್ಲಿ ಅದೂ ಸುಳ್ಳಿರಬಹುದೆಂದು, ಮತ್ತು ಸುಳ್ಳಾಗಿದ್ದರೆ ಅದು ಸರಿಯಾದ ಕಾರಣಗಳಿಂದಲೇ ಸುಳ್ಳಾಗಿರಬಹುದೆಂದೂ ಅನ್ನಿಸುತ್ತದೆ. ಅದೂ ಅಲ್ಲದೇ ಹಾಗೆ ಮಾಡುವುದು ತಪ್ಪಿಲ್ಲವೇನೋ ಅನ್ನುವುದೋ, ಅಥವಾ ಆ ‘ಸಮುರೈ’ನ ಪರಿಗ್ರಹಣೆಯಲ್ಲಿ ಅದು ಸರಿಯಿರಬಹುದೆಂದೋ ಅನ್ನಿಸಿಬಿಡುತ್ತದೆ. ಹಾಗಾಗಿ ಇಲ್ಲಿ ಸತ್ತ ಗಂಡನ ‘ಆತ್ಮ’ದ ಸಾಕ್ಷಿಯಲ್ಲಿ ತಾರ್ಕಣೆ ವಿರೂಪವಾಗಿ ಅದು ಕೊಲೆಯಿಂದ ಆತ್ಮಹತ್ಯೆಗೆ ಬದಲಾಗುತ್ತದೆ. ಅದು ಅವನ ‘ಸತ್ಯ’. ಸಾಯುವವನಷ್ಟೇ ಅಲ್ಲ , ಸತ್ತವನೂ ಕೂಡ ಹೇಳುವ ಸತ್ಯ ಪೂರಾ ಸಾಪೇಕ್ಷ !

ನಂತರದ ಸಾಕ್ಷಿ ಮರಕಟುಕ. ಅವನ ಸಾಕ್ಷಿ, ಬೇರೆ ಮೂವರ ಸಾಕ್ಷಿಗಳ ವಿವಿಧ ಭಾಗಗಳನ್ನು ಹೊಸೆದಂತಿದ್ದರೂ ಅವನಿಗೆ ಅವನದೇ ಆದ ಒಂದು ‘ದೃಷ್ಟಿ’ಯಿದೆ. ಅವನ ಪ್ರಕಾರ ಮನುಷ್ಯ ಮೂಲಭೂತವಾಗಿ ದುಷ್ಟ. ಆತನ ಸತ್ಯ ಯಾವಾಗಲೂ ಅವನ ಅನುಕೂಲಕ್ಕೆ ತಕ್ಕಂತಿರುತ್ತದೆ. ಆದ್ದರಿಂದ ಅವನ ದೃಷ್ಟಿಯಲ್ಲಿ ಲೂಟಿಗಾರ ಬಣ್ಣಿಸಿದ ಅವರುಗಳ ವೀರಕಾಳಗ, ಇಬ್ಬರ ಲಾಲಚೀ ಬೀದಿರಂಪವಾಗಿ ಕಾಣಿಸುತ್ತದೆ. ಒಂದು ಹೆಣ್ಣಿಗೋಸ್ಕರ ಧೂಳಿನಲ್ಲಿ ಬಿದ್ದು ಹೊಡೆದಾಡುವ ಇಬ್ಬರು ಕೀಳುಮನುಷ್ಯರ ಗುದ್ದಾಟವಾಗುತ್ತದೆ. ಅಲ್ಲಿ ಯಾವ ‘ಸಮುರೈ’ ಅಂಶವೂ ಇಲ್ಲ. ಆದರೆ, ಕಾಳಗವಾದ, ಕೊಲೆಯಾದ ಜಾಗದಿಂದ ಒಂದು ಬೆಲೆಬಾಳುವ ಕತ್ತಿ ಕಾಣೆಯಾಗಿದೆ. ಅದನ್ನು ಈ ಮರಕಟುಕ ಕದ್ದನೇ? ಉತ್ತರ ಕಪ್ಪುಬಿಳುಪಲ್ಲ. ಹಾಗಾಗಿ, ಇವನ ಸಾಕ್ಷಿ ಕೂಡ ನಂಬಲರ್ಹವಲ್ಲ.

ಕೊನೆಗೆ ಉಳಿಯುವುದು ನೋಡುಗನ ಗ್ರಹಿಕೆಗೆ ಬಿಟ್ಟಿದ್ದು. ಎಷ್ಟುಬಾರಿ ನೋಡಿದರೂ ನಿಮಗೆ ನಿಜವಾಗಿ ಅಲ್ಲಿ ನಡೆದದ್ದೇನೆಂಬುದು ತಾರ್ಕಿಕವಾಗಿ ಗೊತ್ತಾಗುವುದಿಲ್ಲ. ಹಾಗಾಗಬೇಕೆಂಬುದು ನಿರ್ದೇಶಕನ ಆಶಯವೂ ಅಲ್ಲ. ಸತ್ಯವೆನ್ನುವುದು ಗ್ರಹಿಕೆ ಮಾತ್ರ. ನೀವು ಹೇಳುವ ಸತ್ಯ ನಿಮ್ಮ ಸಾಮಾಜಿಕ ಸ್ಥಾನಮಾನ, ಹಾಗೆ ಹೇಳುವುದರಿಂದ ನಿಮಗಾಗಬಹುದಾದ ಲಾಭ ಅಥವಾ ನಷ್ಟ ಮತ್ತು ಮುಖ್ಯವಾಗಿ ಹಾಗೆ ಹೇಳುವುದು ನಿಮಗೆ ಅನುಕೂಲಕರವೋ ಅಲ್ಲವೋ ಅನ್ನುವುದರ ಮೇಲೆ ಅವಲಂಬಿತವಾಗಿರುತ್ತದೆಯೇ? ಪ್ರಶ್ನೆ ಪ್ರಶ್ನೆಯಾಗೇ ಉಳಿಯುತ್ತದೆ.

A scene from Rashomonಇದು 1951ರಲ್ಲಿ ಅಂದರೆ ಐವತ್ತು ವರ್ಷದ ಹಿಂದೆ ಬಿಡುಗಡೆಯಾದ ಜಪಾನಿನ ಅಖಿರ ಕುರೋಸವಾನ ‘ರ್ಯಾಶೊಮೋನ್‌’ ಚಿತ್ರದ ಸ್ಥೂಲಕಥೆ. ಇದನ್ನು ಕುರೋಸವಾ ಹೇಳುವ ರೀತಿ ಎಷ್ಟು ಪರಿಣಾಮಕಾರಿಯಾಗಿದೆಯೆಂದರೆ, ನಿಮಗೆ ಅದೇ ಕಥೆ ನಾಲ್ಕು ಬಾರಿ ಬೇರೆಬೇರೆ ರೀತಿ ಹೇಳಲ್ಪಡುತ್ತಿದೆ ಅನ್ನಿಸುವುದೇ ಇಲ್ಲ. ಪ್ರತಿಯಾಂದರಲ್ಲೂ ಅದೇ ನಟನಟಿಯರು, ಅದೇ ಹೊರಾಂಗಣ ಮತ್ತೆ ಅದೇ ಕಥೆ. ಆದರೆ ಹೇಳುತ್ತಿರುವವರು ಮಾತ್ರ ಬೇರೆ. ಹಾಗಾಗಿ ಅದು ನಿಮಗೆ ಕೊಡುವ ಅನುಭವವೂ ಬೇರೆಯೇ. 2003 ರಲ್ಲಿ ಹಾಲಿವುಡ್‌ನ ಥ್ರಿಲ್ಲರ್‌ ಗಳನ್ನು ನೋಡಿ ಪ್ರಭಾವಿತನಾಗಿರುವ ನೋಡುಗ ಕಥೆಯ ಎಲ್ಲ ತುಂಡುಗಳನ್ನೂ ಸೇರಿಸಿ ಯಾವ ಅನುಕ್ರಮಣದಲ್ಲಿ ಘಟನೆಗಳು ನಡೆದಿರಬಹುದು ಮತ್ತು ಕೊಲೆಯನ್ನು ಯಾರು ಮಾಡಿರಬಹುದು ಎನ್ನುವ ಒಂದು ವಿಫಲ ಪ್ರಯತ್ನದಲ್ಲಿ ತೊಡಗಿಕೊಂಡುಬಿಡುವ ಅಪಾಯವಿದೆ. ಆದರೆ, ‘ರ್ಯಾಶೊಮೋನ್‌’ ಇವ್ಯಾವುದರ ಬಗ್ಗೆಯೂ ಅಲ್ಲ. ಇಲ್ಲಿ ತಪ್ಪು , ಮುಗ್ಧತೆಗಳ ನಡುವಿನ ಗೆರೆಕಾಣದ ವ್ಯತ್ಯಾಸಗಳನ್ನು ನೋಡಲು ಹೊರಟಿಲ್ಲ. ಅದು ಒಂದೇ ಘಟನೆಯನ್ನು ನೋಡುವ ಬೇರೆ ಬೇರೆ ನೋಟದ ಮೇಲೆ, ಹಾಗೆ ನೋಡುವ ನೋಟದಲ್ಲಿನ ತರ್ಕಬದ್ಧ ವ್ಯತ್ಯಾಸದ ಮೇಲೆ ಮತ್ತು ಒಬ್ಬ ವ್ಯಕ್ತಿಗೆ ಒಂದು ಘಟನೆಯನ್ನು ಎಷ್ಟು ಕೂಲಂಕಶವಾಗಿ ನೋಡಿದರೂ ಅವನಿಗೆ ಕಾಣಸಿಗುವುದು ‘ಅರ್ಧಸತ್ಯ’ ಮಾತ್ರವಾಗಿರುತ್ತದೆ ಎನ್ನುವುದರ ಬಗ್ಗೆ ನೋಡಸಿಗುವ ಒಳನೋಟವಾಗಿದೆ. ಒಂದು ಘಟನೆಯ ಸತ್ಯದ ‘ಮಟ್ಟ’ಗಳು, ಅವುಗಳ ನಡುವೆಯೇ ಇರುವ ವಿಸಂಗತಿಗಳು ಮತ್ತು ಈ ವ್ಯತ್ಯಾಸಗಳ ತರ್ಕಬದ್ಧತೆ ಹಾಗೂ ನ್ಯಾಯಸಮ್ಮತೆಗಳು, ಒಬ್ಬ ಮನುಷ್ಯನಿಗೆ ಸತ್ಯವನ್ನು ನೋಡಬಲ್ಲ ಸಾಧ್ಯತೆಯನ್ನು ಕಿತ್ತುಕೊಂಡು ಒಂದು ಘಟನೆಯನ್ನು ಕೇವಲ ಯಥಾದೃಶ ವರದಿಯನ್ನಷ್ಟೇ ಮಾಡಿಬಿಡುತ್ತದೆ. ಹಾಗಾಗಿ ತಾತ್ವಿಕವಾಗಿ ‘ಸತ್ಯ’ವೆಂಬುದು ಇಲ್ಲವೇ ಇಲ್ಲ.- ಬಹುಶಃ ಹಾಗೆ ಹೇಳುವುದೂ ತಾರ್ಕಿಕವಾಗಿ ಕಷ್ಟವಾಗಬಹುದೇನೋ. ಯಾಕೆಂದರೆ ಸತ್ಯವೆಂಬುದು ಇಲ್ಲ ಅನ್ನುವುದೂ ಒಂದು ನಂಬಿಕೆಯೇ ಹೊರತು ‘ಸತ್ಯ’ವಾಗುವುದಿಲ್ಲ. (ಎಲ್ಲೋ ಕೇಳಿದ್ದು- If one believes that there is no truth and everything is just a perspective, then one believes that it is true that "truth doesnt exist" which is a logical contradiction).

ರ್ಯಾಶೊಮೋನ್‌ ಚಿತ್ರ ಪಶ್ಚಿಮದಲ್ಲಿ ಎಷ್ಟು ಪ್ರಭಾವಬೀರಿತ್ತೆಂದರೆ, ಈಗಲೂ ಕೋರ್ಟಿನಲ್ಲಿ ಲಾಯರ್‌ಗಳು ಒಂದೇ ಘಟನೆಯನ್ನು ಬೇರೆಬೇರೆ ಸಾಕ್ಷಿಗಳು ಬೇರೆಬೇರೆ ರೀತಿಯಿಂದ ವಿವರಿಸಿದಾಗ ‘ಓ, ಇದು ರ್ಯಾಶೊಮೋನ್‌ ಎಫೆಕ್ಟ್‌’ ಎನ್ನುತ್ತಿದ್ದಾರಂತೆ.

ಇದು ಐವತ್ತು ವರ್ಷದ ಹಿಂದೆ ತೆಗೆದ ಚಿತ್ರ. ಫ್ಲಾಶ್‌ಬ್ಯಾಕ್‌ ತಂತ್ರವನ್ನು ಪರಿಣಾಮಕಾರಿಯಾಗಿ ಮೊದಲಬಾರಿ ಉಪಯೋಗಿಸಿಕೊಂಡಿದ್ದು ಈ ಚಿತ್ರದ ಹೆಗ್ಗಳಿಕೆ. ಎಲ್ಲ ವಿಮರ್ಶಕರೂ ಹೇಳುವ ಚಿತ್ರದ ಹೈಲೈಟ್‌ ಆಂದರೆ, ಚಿತ್ರದ ಆರಂಭದಲ್ಲಿ ಆ ಮರಕಟುಕ ಹೆಣವನ್ನು ನೋಡುವ ಮುಂಚೆ ಇಡೀ ಕಾಡಿನಲ್ಲಿ ಒಬ್ಬನೇ ಸುಮಾರು ದೂರ ಸುಮ್ಮನೇ ನಡೆದು ಹೋಗುತ್ತಾನೆ. ಎರಡೂವರೆ ನಿಮಿಷದಷ್ಟು ಸಮಯದಲ್ಲಿ ಚಿತ್ರೀಕರಣವಾಗಿರುವ ಈ ದೃಶ್ಯದಲ್ಲಿ ಆತ ಸುಮ್ಮನೇ ನಡೆಯುವುದು ಬಿಟ್ಟರೆ ಬೇರೇನೂ ಇಲ್ಲ. ನೇರವಾಗಿ ಸೂರ್ಯಕಿರಣಗಳಿಗೇ ಕಣ್ಣುಬಿಡುವ ಕ್ಯಾಮರಾ, ಅವನ ಮುಖದ ಮೇಲೆ ಬೀಳುತ್ತಿರುವ ಕಾಡಿನ ಸಸ್ಯರಾಶಿಯ ನೆರಳು, ಮುಖದಲ್ಲಿ ಅಸಂಗತ ನಿರ್ಲಿಪ್ತತೆ, ಮುಂದೆ ತಾನು ಯಾವುದೋ ಕಾಣಲಾಗದ ಕೂಪದಲ್ಲಿ , ಅರ್ಥೈಸಲಾಗದ ಸತ್ಯದ ಹುಡುಕಾಟದಲ್ಲಿ ತೊಡಗಿಕೊಳ್ಳಬಹುದೇನೋ ಅನ್ನುವ ಅರಿವೂ ಇರದ ಆತನ ಮುಗ್ಧತೆ ಎಲ್ಲವೂ ಕುರೊಸಾವಾನ ಕೈಯಲ್ಲಿ ಒಂದು ಕವಿತೆಯಂತೆ ಚಿತ್ರಿತವಾಗಿದೆ.

ಇದರ ನಂತರ ಬಂದ ಅನೇಕ ಹಾಲಿವುಡ್‌ ಚಿತ್ರಗಳು ಇದೇ ರೀತಿಯ ಸತ್ಯದ ವಿವಿಧ ಮಟ್ಟಗಳನ್ನು, ಘಟ್ಟಗಳನ್ನು ಪರಿಣಾಮಕಾರಿಯಾಗಿಯೇ ತೋರಿಸಿವೆ. ಆದರೆ ಬಹುಪಾಲಿನ ಚಿತ್ರಗಳಲ್ಲಿ ಸತ್ಯವೆನ್ನುವ ಸತ್ಯವೊಂದಿದ್ದೇ ಇದ್ದು, ಅದರ ಸಾಕ್ಷಾತ್ಕಾರಕ್ಕೆ ನೋಡುಗನನ್ನು ತನ್ನ ಅತಿತಿರುವಿನಿಂದ ಬೆಚ್ಚುಬೀಳಿಸುವ ಅಂಶಗಳೇ ಹೆಚ್ಚಿದ್ದು, ಅವುಗಳು ಒಂದು ಉತ್ತಮ ಥ್ರಿಲ್ಲರ್‌ ಮಾತ್ರ ಆಗುತ್ತವೆ. ಆದರೆ, ಎಷ್ಟು ಬಾರಿ ನೋಡಿದರೂ ಸತ್ಯವೆಂಬುದಿದ್ದರೆ ಅದರ ಸಮೀಪ ಮಾತ್ರ ಹಾದುಹೋಗುವ ‘ರ್ಯಾಶೊಮೋನ್‌’ ಒಂದು ಉತ್ತಮ ಕಲಾಕೃತಿಯಾಗುತ್ತದೆ.

ಇಲ್ಲಿ ಕುರೋಸಾವಾ ತನ್ನ ನಟನಟಿಯರನ್ನು ದುಡಿಸಿಕೊಂಡಿರುವುದೂ ಅಷ್ಟೇ ಅರ್ಥಪೂರ್ಣವಾಗಿದೆ. ಕ್ರೂರ ಲೂಟಿಗಾರನ ಪಾತ್ರ ಮಾಡಿರುವ ‘ತೋಶಿರೋ’ನ ದುಷ್ಟತನವೂ ಖುಷಿಕೊಡುತ್ತದೆ. ಆತ ಬೆವರುತ್ತಾನೆ, ಮೈ ಕೆರೆಯುತ್ತಾನೆ, ಗಂಟಲು ಹರಿಯುವಂತೆ ಕೂಗುತ್ತಾನೆ, ಹೆಣ್ಣನ್ನು ಆಕೆಯ ಗಂಡನ ಮುಂದೆಯೇ ಬಲಾತ್ಕಾರ ಮಾಡುತ್ತಾನೆ. ತಾನು ಮಾಡುವುದಕ್ಕೆ ಯಾವ ಪಶ್ಚಾತ್ತಾಪವೂ ಆತನಿಗಿಲ್ಲ. ಮತ್ತೆ, ಬೇರೆಬೇರೆಯವರ ಪ್ರಕಾರ ಈತ ಬೇರೆಬೇರೆಯಾತ, ಆದರೂ ಮೂಲದಲ್ಲಿ ಒಬ್ಬನೇ. ಒಂದೇ ಪಾತ್ರವನ್ನು ನಾಲ್ಕು ಬೇರೆ ಶೈಲಿಯಲ್ಲಿ ಮಾಡಿರುವುದು ಈತನ ಹೆಚ್ಚುಗಾರಿಕೆ. ನಂತರ ಬಲಾತ್ಕಾರಗೊಳ್ಳುವ ಹೆಂಗಸಾದ ‘ಮಚೀಕೋ’ ಮುಗ್ಧ ಹೆಣ್ಣಾಗಿ, ಪರಿಪೂರ್ಣ ಹೆಂಡತಿಯಾಗಿ, ಮಾದಕ ಭ್ರಷ್ಟೆಯಾಗಿ, ಅವಿಧೇಯ ಅವಕಾಶವಾದಿಯಾಗಿ ಹಾಗೂ ಸಮುರೈನ ವೀರಪತ್ನಿಯಾಗಿ ಪಾತ್ರಕ್ಕೆ ಸಲ್ಲಿಸಿರುವ ನ್ಯಾಯ ಅಭಿನಂದನಾರ್ಹ.

ಆದರೆ, ಈ ಚಿತ್ರ ಪೂರ್ತಿಯಾದಾಗ ಕುರೋಸಾವನಿಗೆ ಇದು ಅಪ್ಪಟ ನಿರಾಶಾವಾದದ ಸಂದೇಶವನ್ನು ಕೊಡುತ್ತಿದೆ ಅನ್ನಿಸಿತಂತೆ. ಮೂಲ ಈ ಚಿತ್ರ ಹೇಳುವುದು ಏನು? ಸತ್ಯವೆನ್ನುವುದೊಂದಿಲ್ಲ. ಮನುಷ್ಯ ಮೂಲತಃ ಸುಳ್ಳುಗಾರ, ಹಾಗೂ ದುಷ್ಟ. ಈ ರೀತಿಯ ಸಂದೇಶ ಆ ಕಾಲಕ್ಕೆ ಜಪಾನಿನ ಸಮಾಜದ ಮೇಲೆ (ಆಗತಾನೇ ಜಪಾನ್‌ ಎರಡನೇ ಮಹಾಯುದ್ಧದಿಂದ ಚೇತರಿಸಿಕೊಳ್ಳುತ್ತಿತ್ತು) ಪ್ರತಿಕೂಲ ಪರಿಣಾಮವನ್ನು ಬೀರಬಹುದು ಅನ್ನುವ ಕಳಕಳಿಯಿಂದ ಆತ ಚಿತ್ರದ ಮೂಲಕಥೆಯಲ್ಲಿಲ್ಲದ ಒಂದು ಭಾಗವನ್ನು ಚಿತ್ರದಲ್ಲಿ ಸೇರಿಸಲು ಒಪ್ಪಿಕೊಂಡನಂತೆ. (‰‰ಡೊನಾಲ್ಡ್‌ ರಿಚಿ, ಅಮೆರಿಕಾದ ಜಪಾನಿ ಚಿತ್ರ ವ್ಯಾಖ್ಯಾನಕಾರ)

ಚಿತ್ರದ ಕೊನೆಯಲ್ಲಿ, ಘಟನೆಯ ನಾಲ್ಕೂ ವ್ಯಾಖ್ಯೆಗಳು ಮುಗಿದ ಮೇಲೆ, ಧರ್ಮಗುರು, ಮರಕಟುಕ ಹಾಗೂ ಸಾಮಾನ್ಯ ಅದೇ ‘ರ್ಯಾಶೊಮೋನ್‌’ ದ್ವಾರದ ಪಾಳಿನಲ್ಲಿ ಅಳುತ್ತಿರುವ ಒಂದು ಮಗುವನ್ನು ನೋಡುತ್ತಾರೆ. ಮರಕಟುಕ ಆ ಮಗುವನ್ನು ಮನೆಗೆ ತೆಗೆದುಕೊಂಡು ಹೋಗುವ ಇಂಗಿತವನ್ನು ವ್ಯಕ್ತಪಡಿಸುತ್ತಾನೆ. ಆದರೆ, ಧರ್ಮಗುರುವಿಗೆ ಈ ಮರಕಟುಕನ ಮೇಲೆ ಅವನದೇ ಆದ ಅನುಮಾನಗಳಿವೆ. ಆಗ ಮರಕಟುಕ ಹೇಳುತ್ತಾನೆ. ‘ನನಗೆ ಇನ್ನೂ ಆರು ಮಕ್ಕಳಿವೆ. ಈ ಮಗುವಿಗೆ ನಾನೇನೂ ಕೇಡು ಮಾಡುವುದಿಲ್ಲ’. ನಂತರ, ಮಗುವನ್ನು ಆತ ಮನೆಗೆ ಕರೆದುಕೊಂಡು ಹೋಗುತ್ತಾನೆ. ಇಲ್ಲಿ ಕುರೊಸಾವ ಸೂಚಿಸಲು ಪ್ರಯತ್ನಿಸುವುದು , ಮನುಷ್ಯ ಎಷ್ಟೇ ಕೆಟ್ಟವನಾಗಿದ್ದರೂ, ಸುಳ್ಳುಗಾರನಾಗಿದ್ದರೂ ಕೆಲವೊಂದು ಒಳ್ಳೆಯ ‘ಅಂಶ’ಗಳು ಬದಲಾಗುವುದಿಲ್ಲ, ಅನ್ನುವುದು. ಒಂದು ಪಕ್ಷ ಆ ಮರಕಟುಕ ಕೆಟ್ಟವನಾಗಿದ್ದರೂ ಈ ಪ್ರಪಂಚದಲ್ಲಿ ಮಗುವಿನಂತ ಸಂತೋಷವಿದ್ದೇ ಇದೆ. ಅದನ್ನು ಯಾರೂ ದ್ವೇಷಿಸುವುದಿಲ್ಲ. ಇದು, ಕುರೋಸಾವಾನ ಅಶಾವಾದದ ಕಲಾತ್ಮಕ ಮಂಡನೆ. ಇದು ಮಾತ್ರ ಚಿತ್ರದ ಮೂಲ ‘ಫ್ಲೇವರ್‌’ ನಿಂದ ಹೊರನಿಲ್ಲುತ್ತದೆ. ನಂತರ ಬಂದ ಈ ಪ್ರಭೇದದ ಅನೇಕ ಚಿತ್ರಗಳಲ್ಲಿ ಕೆಟ್ಟವ ಕೊನೆತನಕ ಕೆಟ್ಟವನಾಗಿಯೇ ಉಳಿಯುತ್ತಾನೆ ಅನ್ನುವುದು ನಮಗೆ ಗೊತ್ತಿರುವ ಹಾಲಿವುಡ್‌ ಸತ್ಯ.

ಕುರೊಸಾವನ ಪ್ರತಿಭೆಯ ಬಗ್ಗೆ ಹೇಳಬೇಕಾಗಿಲ್ಲ. ಜಗತ್ತಿನ ಪ್ರತಿಭಾವಂತ ಚಿತ್ರತಯಾರಕರುಗಳ ಜತೆಗೆ ಈತನ ಹೆಸರು ಯಾವತ್ತೂ ಕೇಳಿಬರುತ್ತದೆ. ಬರ್ಗಮನ್‌, ರೇ, ವೆಲ್ಸ್‌ ಗಳ ಮಟ್ಟಿನಲ್ಲಿ ನಿಲ್ಲಬಹುದಾದ ಈತನ ಚಿತ್ರಗಳು ಎಂದೂ ಎಲೀಟ್‌ ನೋಡುಗರನ್ನು ಉದ್ದೇಶಿತವಾಗಿಟ್ಟುಕೊಂಡು ತೆಗೆದವುಗಳಲ್ಲ. ಆದರೆ ಸಾಮಾನ್ಯ ನೋಡುಗನನ್ನೂ ವಿಚಾರ ಮಾಡುವಂತೆ ಮಾಡಬಲ್ಲ ಕಲಾತ್ಮಕತೆಯನ್ನು ಇವು ಹೊಂದಿರುತ್ತಿದ್ದವು. ಆದರೆ, ನಮ್ಮಲ್ಲಿ ಹೇಗೆ ಸತ್ಯಜಿತ್‌ ರೇ ತಮ್ಮ ಚಿತ್ರಗಳಿಂದ ಭಾರತದ ದಾರಿದ್ರ್ಯ ಹಾಗೂ ಸಂಕಟಗಳನ್ನು ಮಾರಾಟಕಿಟ್ಟು ತಮ್ಮ ಬೇಳೆ ಬೇಯಿಸಿಕೊಂಡರು ಅನ್ನುವ ಟೀಕೆಯನ್ನು ಎದುರಿಸಬೇಕಾಯ್ತೋ, ಹಾಗೆಯೇ ಜಪಾನಿನಲ್ಲಿ ಕುರೊಸಾವಾನ ಚಿತ್ರಗಳು ಬರೀ ಪಶ್ಚಿಮದವರಿಗೆ ಮಾತ್ರ ಅನ್ನುವ ಟೀಕೆಯೂ ಇದೆ. ಜಪಾನಿನಲ್ಲಿ ಕುರೊಸಾವನ ಸಮಕಾಲೀನರು ಪಶ್ಚಿಮದವರಿಗೆ ಆತನ ಮೇಲಿದ್ದ ಮೋಹವನ್ನು ಅರಿಯಲು ಪ್ರಯತ್ನಪಟ್ಟಿದ್ದರು ಹಾಗೂ ಅದರ ಬಗ್ಗೆ ಸೋಜಿಗಗೊಳ್ಳುತ್ತಲೇ ಅಸೂಯೆಪಟ್ಟಿದ್ದರು.

ಲಂಕೇಶರು ಒಂದುಕಡೆ ಹೇಳುತ್ತಾರೆ ‘‘ಇವತ್ತಿಗೂ ಯುರೋಪಿನಲ್ಲಿ ಅಮೆರಿಕಾದ ಚಿತ್ರಗಳೇ ಜನಪ್ರಿಯ; ಫ್ರೆಂಚ್‌ ಜನ ಈ ಬಗ್ಗೆ ಅಸೂಯೆಪಟ್ಟುಕೊಂಡು ‘ಅಮೆರಿಕಾ ಸಾಂಸ್ಕೃತಿಕವಾಗಿ ನಮ್ಮನ್ನೆಲ್ಲಾ ನಾಶ ಮಾಡುತ್ತಿದೆ’ ಎಂದು ಹೇಳುತ್ತಾರೆ. ಚಲನಚಿತ್ರ ನೋಡುವವರಲ್ಲಿ ಶೇ. 75 ಭಾಗದಷ್ಟು ಜನ ಅಮೆರಿಕಾದ ಚಿತ್ರಗಳನ್ನೇ ನೋಡಿದರೆ ಸಾಂಸ್ಕೃತಿಕವಾಗಿ ಸ್ವಾಭಿಮಾನಿಗಳಾದ ಫ್ರೆಂಚರು ಏನು ಮಾಡಬೇಕು?

.... ನಾವು ಎಷ್ಟು ಟೀಕಿಸಿದರೂ, ಗೇಲಿ ಮಾಡಿದರೂ ಹಾಲಿವುಡ್‌ ಚಿತ್ರಗಳ ವೈಶಿಷ್ಟ್ಯವೆಂದರೆ ಅವುಗಳ ಬಾಹ್ಯರೂಪ, ಹೆಚ್ಚು ವೈಯುಕ್ತಿಕವಾಗಿರದ ಗುಣ, ಅವು ಒಬ್ಬ ಲೇಖಕನ, ನಿರ್ದೇಶಕನ ಆಳದಿಂದ ಬಂದಿರುವುದಿಲ್ಲ; ಹಾಲಿವುಡ್‌ನ ಟೆಂಕ ಹೊತ್ತು, ಒಂದು ಗುಂಪಿನ ಜನರಿಂದ ರೂಪಿತವಾಗಿ ನಿರ್ಮಾಣವಾಗಿರುತ್ತದೆ....... ಅವು ವ್ಯಕ್ತಿನಿಷ್ಠವಾಗಿರುವುದಿಲ್ಲ. ಘಟನೆಗೆ ಹೆಚ್ಚು ಪ್ರಾಮುಖ್ಯ ಕೊಡುವ ಹಾಲಿವುಡ್‌ ಜನ ಮಾನಸಿಕ ತುಮುಲ ಹಾಗೂ ಸಂಭಾಷಣೆಗೆ ಹೆಚ್ಚು ಒತ್ತು ಕೊಡುವುದಿಲ್ಲ...... ಇನ್ನೊಂದು ಗುಣ, ಯಾವುದೇ ಕಲಾತ್ಮಕತೆಗಾಗಿಯೂ ಪ್ರಯತ್ನಿಸದೇ ನೇರವಾಗಿ ಚಿತ್ರ ಮಾಡುವುದು..... ಮತ್ತು ಹೊಸಹೊಸ ಕನಸುಗಳನ್ನು ನೀಡುವುದು, ಅಮೆರಿಕಾದಂತ ದೊಡ್ಡ ದೇಶದ ಚೇತನವನ್ನೇ ಮಂಡಿಸುವುದು......’’

ಇದೇ ಅಮೆರಿಕನ್ನರು ಇಷ್ಟಪಡುವಂತಹ ಚಿತ್ರ ಮಾಡುತ್ತಾರೆಂದು ಟೀಕೆಗೊಳಗಾದವರು ಕುರೋಸಾವ ಮತ್ತು ರೇ....

ಪೂರಕ ಓದಿಗೆ-

ಸತ್ಯಜಿತ ರೇ ಎಂಬ ಮಾಂತ್ರಿಕ ಮತ್ತು ಪಥೇರ್‌ ಪಾಂಚಾಲಿ ಎಂಬ ಮಂತ್ರ

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more