ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶೀ ವರ !

By Staff
|
Google Oneindia Kannada News
ವಿದೇಶ ಎಂದ ತಕ್ಷಣ ನಮ್ಮ (ಅಂದರೆ ದೇಶಿಗಳ ಅಂದರೆ ನಾವು ಭಾರತೀಯರ ) ಮನದಲ್ಲಿ ರಂಗು ರಂಗಿನ ಕೆಲಿಡೊಸ್ಕೋಪ್‌ (kaleidoscope) ಅತಿವೃಷ್ಟಿ ಪ್ರದೇಶದ ನವಿಲಿನಂತೆ ಹುಚ್ಚೆದ್ದು ಗರಿಗೆದರಿ ಕುಣಿಯುವುದು ಸಹಜ. ಇದಕ್ಕೆ ಗ್ಲೋಬಲೈಜೇಶನ್‌ ಕೂಡ ಕಾರಣವಿರಬಹುದು ಅಥವ ಇಂದಿನ ಚಲನಚಿತ್ರಗಳೂ ಕಾರಣವಿರಬಹುದು. ನೀವು ಅಂತರ್ಜಾಲದಲ್ಲಿ ಕಣ್ಣಾಡಿಸಿದರೆ ವಿದೇಶದ ಉತ್ಪ್ರೇಕ್ಷಿತ ವರದಿಗಳೂ, ಸುಂದರ ಚಿತ್ರಗಳೂ ಕಾಣಬರುತ್ತವೆ. ಹಾಗೂ ಇಂದಿನ ಬಹುತೇಕ ಚಿತ್ರಗಳಲ್ಲಿ ನಾಯಕ ಎಂತಹ ಬಡವ (ಅಥವಾ ಭಡವ !) ನಾಗಿದ್ದರೂ ಆತ ಕನಸಿನಲ್ಲಿ (ಹಗಲುಗನಸು ಅಥವ ನಾರ್ಮಲ್‌, ಇರುಳುಗನಸು ) ವಿದೇಶದ (ಯುರೋಪ್‌ ಅಥವಾ ಆಫ್ರಿಕ ಇತ್ಯಾದಿ) ಸುಂದರ ತಾಣಗಳಲ್ಲಿ ಒಂದು (ಕನಿಷ್ಠ ಪಕ್ಷ ಒಂದು!) ಹಾಡು ಹಾಡಿ ನಂತರ ಅವನ ಗುಡಿಸಿಲಿಗೆ ವಾಪಸ್‌ ಬಂದು ಬಿದ್ದುಕೊಳ್ಳೋದಿಲ್ವೇ ?

Ravi Kalmathಹೀಗಿದ್ದಮೇಲೆ ವಿದೇಶೀ ವರ ಯಾರಿಗೆ ಇಷ್ಟವಾಗುವದಿಲ್ಲ ನೀವೇ ಹೇಳಿ ? ನಿಮ್ಮ ಮಗಳನ್ನು ವಿದೇಶೀ ವರನಿಗೆ ಕೊಟ್ಟರೆ ನಿಮ್ಮ ಸ್ಟಾಟಸ್‌ ಕೂಡ ಹೆಚ್ಚಾಗುವುದಲ್ಲವೇ? ಹಾಗೂ ನೀವು ಬೀದಿಯಲ್ಲಿ ಸಾಗುವಾಗ ಜನ ನಿಮ್ಮ ಬೆನ್ನ ಹಿಂದೆ ‘ಪರವಾಗಿಲ್ಲ. ಈ ಆಸಾಮಿ ಬಹಳ ಘಾಟಿ. ಮಗಳಿಗೆ ಒಳ್ಳೇ ಇಂಪೋರ್ಟೆಡ್‌ ವರನನ್ನೇ ಹುಡುಕಿದ್ದಾನೆ’ ಎಂದು ಆಡಿಕೊಂಡರೆ ನಿಮಗೆ ಒಳಗೊಳಗೆ ಖುಷಿಯಾಗುವುದಿಲ್ಲವೆ? ಅಲ್ಲದೇ ಮಗಳನ್ನು ನೀವು ವಿದೇಶಕ್ಕೆ export ಮಾಡಿದರೆ ನಂತರ ವಿದೇಶೀ ಅಳಿಯ ನಿಮ್ಮನ್ನು ಇಂಪೋರ್ಟ್‌ ಮಾಡಿಕೊಳ್ಳೋದಿಲ್ವೇ! ‘ಹೂವಿನ ಜೊತೆ ನಾರೂ ಸ್ವರ್ಗಕ್ಕೆ ಹೋದ’ ಹಾಗೆ ನಿಮಗೂ ಭೂ ಲೋಕದ ಸ್ವರ್ಗವನ್ನು ಸಂದರ್ಶಿಸುವ ಅವಕಾಶ ದೊರೆಯುವುದಿಲ್ಲವೇ (does he have a choice)?

ಇರಲಿ. ಪ್ರಸ್ತುತ ವಿಷಯಕ್ಕೆ ಬರೋಣ. ಅಮೇರಿಕೆಯಲ್ಲಿ ಉನ್ನತ ವ್ಯಾಸಂಗ ಮುಗಿಸಿ ಕೆಲಸ ಹಿಡಿದ ಬೆಂಗ್ಳೂರಿನ ಯುವಕನೊಬ್ಬ (ಉರ್ಫ್‌ ಬಕರಾ ಉರ್ಫ್‌ ಆನಂದ್‌) ಮದುವೆ ಆಗಲು ತನ್ನ ಮದುವೆ ಆದ ಸಹೋದ್ಯೋಗಿಗಳ ಪಾಡನ್ನು ಕಣ್ಣಾರೆ ಕಂಡಿದ್ದರೂ (ಅಂದ್ರೆ, ಇರುಳು ಕಂಡ ಬಾವಿಯಲ್ಲಿ ಹಗಲು ಬೀಳಲು ಹೋದ ಹಾಗೆ !!) ನಿಶ್ಚಯಿಸಿದ. ತನ್ನ ಅಪ್ಪನಿಗಾದ ಅವಮಾನವನ್ನು ಕಣ್ಣಾರೆ ಕಂಡಿದ್ದರೂ ಸದ್ದಾಮ್‌ನ ಸದ್ದು ಅಡಗಿಸಲು ಹೊರಟ George (of the jungle!) bush ನಂತೆ ನಮ್ಮ ಆನಂದ್‌ ಮದುವೆ ಆಗುವ ದೃಢ ತೀರ್ಮಾನ ಮಾಡೇ ಬಿಟ್ಟ. ಅಲ್ಲ ಸ್ವಾಮಿ, ‘ಯಾರಿಗೆ ಯಾರೋ ಎರವಿನ ಸಂಸಾರ’ ಇತ್ಯಾದಿ ಸತ್ತವರನ್ನೂ ಬಡಿದೆಬ್ಬಿಸುವಂಥ ಕಟೋಕ್ತಿ ಗೀತೆಗಳನ್ನು ಈ ಕಿವಿಯಿಂದ ಕೇಳಿ ಆ ಕಿವಿಯಿಂದ ಹೊರಗೆ ಬಿಡುವವರನ್ನು (ಕೆಲವರಿಗೆ (ಅಂದ್ರೆ,ನಮ್ಮಂಥವರಿಗೆ!) ಎರಡೂ ಕಿವಿಗಳ ಮಧ್ಯೆ ಯಾವ ಘನ ಪದಾರ್ಥವೂ (ಅಂದರೆ, ಮಸ್ತಿಷ್ಕ)ಇಲ್ಲದೆ ಇರುವದರಿಂದ ಅಂತಹ ಸಾಧ್ಯತೆಗಳು ಜಾಸ್ತಿ!). ಸ್ವತಹ ಆ ಹರಿಯೇ ಏಕೋ ದಶಾವತಾರವನ್ನು ಎತ್ತಿ ಬಂದರೂ ಕಾಪಾಡುವದು ಅಸಾಧ್ಯ! ನಿದ್ದೆ ಮಾಡುತ್ತಿರುವವನ್ನು ಎಚ್ಚರಿಸುವುದು ಸುಲಭ, ಆದರೆ ನಿದ್ದೆ ಮಾಡುತ್ತಿರುವ ಹಾಗೆ ನಟಿಸುವವನನ್ನು ಎದ್ದೇಳಿಸುವದು ನಿರರ್ಥಕ ಎಂದು ಗೊತ್ತಿದ್ದ ಅವನ ತಂದೆ ಮಗನ S.O.S. ಕರೆಗೆ ಓಗೊಟ್ಟರು.

ಕರ್ನಾಟಕದ ದಿನಪತ್ರಿಕೆಗಳಲ್ಲಿ ‘ವಿದೇಶದಲ್ಲಿರುವ ಗಂಡಿಗೆ ವಧು ಬೇಕಾಗಿದ್ದಾಳೆ’ ಎಂಬ ಜಾಹೀರಾತು ಪುಂಖಾನುಪುಂಖವಾಗಿ (ಯುದ್ಧಾನಂತರ ಇರಾಕಿನಲ್ಲಿ ಅಮೇರಿಕೆಯ ಸಾಧನೆಗಳ ವಾರ್ತೆಯಂತೆ) ಮೂಡಿ ಬರತೊಡಗಿತು (ಎಷ್ಟೇ ಆದರೂ ‘ಡಾಲರ್‌’ ಗೆದ್ದ ಮಾನವ ದೇವರ ಗೆದ್ದ ಮಾನವ ಅಲ್ಲವೇ?’ ವಿದೇಶೀ ವಿನಿಮಯ ಹರಿದು ಬರುತ್ತಿರುವಾಗ ದುಡ್ಡಿಗೇನು ಕಡಿಮೆ ಹೇಳಿ?) ಜಾಹೀರಾತಿನಲ್ಲಿ ಆನಂದನ (ಉತ್ಪ್ರೇಕ್ಷಿತ) ವರ್ಣನೆ ಹಾಗೂ ಸಾಧನೆಗಳನ್ನು ಪಟ್ಟಿಸಲಾಗಿತ್ತು. ಹುಡುಗಿಯ minimum requirements ಗಳನ್ನು ವಿವರಿಸಲಾಗಿತ್ತು. ಮುಖ್ಯವಾಗಿ, ಹುಡುಗಿ BE/MBBS/CA/MBA graduate ಇರಬೇಕೆಂದೂ, ಹಾಗೂ a current Indian passport valid for at least another 3 years ಇರಬೇಕೆಂದೂ ನಮೂದಿಸಲಾಗಿತ್ತು. ವರನು ಇನ್ನು 2 ತಿಂಗಳ ನಂತರ ಬೆಂಗ್ಳೂರಿಗೆ ಬರಲಿದ್ದಾನೆಂದೂ ಹಾಗೂ ಆಸಕ್ತಿಯುಳ್ಳ ಕಪಿ(ಕನ್ಯಾ ಪಿತ್ರ) ಗಳು / ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು (2 ವಾರದೊಳಗೇ) ಕಳಿಸಬೇಕೆಂದೂ ಹಾಗೂ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಮೊದಲನೇ ಸುತ್ತಿನ ಮಾತುಕತೆಗೆ (interview) ಆಹ್ವಾನಿಸಲಾಗುವುದೆಂದೂ ತಿಳಿಸಲಾಗಿತ್ತು.

ಆನಂದನ ಈ ‘ವಧು ಬೇಕಾಗಿದ್ದಾಳೆ’ ಜಾಹಿರಾತಿಗೆ ಸಾವಿರಾರು ಅರ್ಜಿಗಳು (ಬಿ.ಡಿ.ಏ ನವರು ಸೈಟ್‌ಗಳನ್ನು ಹರಾಜು ಹಾಕಲು ಕರೆಯುವ ಜಾಹೀರಾತಿಗೆ ಬಂದ ಅರ್ಜಿಗಳಂತೆ) ಬಂದವು. ಇವರ ಬೀದಿಯ ಅಂಚೆಯ ಅಣ್ಣ (ಪೋಸ್ಟ್‌ ಮ್ಯಾನ್‌) ಅವಧಿಗಿಂತ ಮೊದಲೇ ನಿವೃತ್ತಿ ತೆಗೆದುಕೊಂಡ ಹಾಗೂ ಅನವರತ ರಿಂಗಿಸುತ್ತಿದ್ದ ಅವರ ಮೊಬೈಲ್‌ ಫೋನ್‌ ಸಂಪರ್ಕಿಸಲು ಉಪಗ್ರಹವು ಹೆಚ್ಚು ಗಿರಕಿ ಹೊಡೆಯಬೇಕಾಯಿತು ಎನ್ನುವದು ಇಲ್ಲಿ ಅಪ್ರಸ್ತುತ.

ಆನಂದನ ಕುಟುಂಬದವರ ಆಪ್ತಮಿತ್ರರ ಹಾಗೂ ಬಂಧುಗಳ ಸಂಖ್ಯೆ ಇದ್ದಕಿದ್ದ ಹಾಗೆ ಜಾಸ್ತಿಯಾದದ್ದು (ಒಬ್ಬ ಪುಂಡ ಶಾಸಕನಾದ ತಕ್ಷಣ ಅವನ ಬ್ಯಾಂಕ್‌ ಬ್ಯಾಲನ್ಸ್‌ ಜಾಸ್ತಿ ಆಗೋ ಹಾಗೆ!) ಕೇವಲ ಕಾಕತಾಳೀಯ ಅಲ್ಲ ಎಂದು ನನ್ನ ಗುಮಾನಿ. ಅವರ ಮನೆಯ ಹಾಲಿನವನು ಕೂಡ (ತನಗೆ ಒಬ್ಬ ಪಾಸ್ಸೋರ್ಟ್‌ ಹೊಂದಿದ ಮಗಳಿದ್ದ ಕಾರಣ) ಇತ್ತೀಚೆಗೆ ಮುಕ್ಕಾಲು ನೀರು, ಕಾಲು ಹಾಲಿನ ಸೂತ್ರವನ್ನು ಬಿಟ್ಟು ಮುಕ್ಕಾಲು ಹಾಲು, ಕಾಲು ನೀರು ಸೂತ್ರದಂತೆ (‘ಕಳ್ಳನಿಗೂ ನಿಯತ್ತು ಇರುತ್ತೆ’ ಎನ್ನುವ ಸೂಕ್ತಿಯ ಹಾಗೆ) ಗಟ್ಟಿಯಾದ ಹಾಲನ್ನು ಕೊಡಲು ಪ್ರಾರಂಭಿಸಿದ್ದ ಎಂದರೆ ನಿಮಗೇ ಪರಿಸ್ಥಿತಿಯ ಗಹನತೆ ಅರ್ಥವಾಗಬಹುದು. ಈ ಹಾಲು ಮಾರುವವನ ಜೊತೆಗೆ ಸೊಪ್ಪು ಮಾರೋ ತಿಮ್ಮಿ ಕೂಡ ಸ್ಪರ್ಧೆಯಲ್ಲಿದ್ದಳು. ಅವಳ ಮಗಳೂ ಕೂಡ ಕಾಲ್‌ ಸೆಂಟರ್‌ನಲ್ಲಿ ಕೆಲಸದಲ್ಲಿದ್ದುದರಿಂದ ತಿಮ್ಮಿ ಈ ನಡುವೆ 2 ರೂಪಾಯಿಗೆ 3 ಕಟ್ಟು ಸೊಪ್ಪು ಕೊಡುವ ಬದಲು 5 ಕಟ್ಟು ನೀಡುತ್ತಿದ್ದಳು! ಹಾಗೂ ವಾರದಲ್ಲಿ ಒಂದು ಬಾರಿಯಾದರೂ ತನ್ನ ಮಗಳು ಅವರ ಕಣ್ಣಿಗೆ ಬೀಳುವಂತೆ ನೋಡಿಕೊಳ್ಳುತ್ತಿದ್ದಳು.

ಎಲ್ಲ ಅಭ್ಯರ್ಥಿಗಳೂ ಹಾಗೂ ಅವರ ಆಯ್ಕೆಯ ವಿವರಗಳನ್ನೂ ವರ್ಣಿಸಿದರೆ ಅದು ‘ಮಹಾಜನ್‌ ಆಯೋಗ’ ದ ವರದಿಗಿಂತ ದೀರ್ಘವಾಗುವ ಕಾರಣದಿಂದ ಅದನ್ನು ಕೈ ಬಿಡಲಾಗಿದೆ. ಒಟ್ಟಿನಲ್ಲಿ ಯಾರೋ ಒಬ್ಬ ಅದೃಷ್ಟವತಿ ತನ್ನ ಪ್ರತಿಸ್ಪರ್ಧಿಗಳನ್ನು ಬಹಳ ಕಡಿಮೆ ಮತಗಳ ಅಂತರದಿಂದ ಸೋಲಿಸಿ ಆನಂದನ ಕೈ ಹಿಡಿದಳು. ವುಡ್‌ ಲ್ಯಾಂಡ್ಸ್‌ (ಎನ್‌.ಆರ್‌.ಐ ) ಕಲ್ಯಾಣ ಮಂಟಪದಲ್ಲಿ ಅದ್ದೂರಿ ವಿವಾಹವೂ ನೆರವೇರಿತು. ಮದ್ರಾಸಿನಲ್ಲಿ ವೀಸಾ ತೆಗೆದುಕೊಂಡು (ಹಾಗೂ 2 ದಿನದ ಹನಿ ಮೂನ್‌ ಮುಗಿಸಿಕೊಂಡು) ನವ ದಂಪತಿಗಳು ಬೆಂಗ್ಳೂರಿಗೆ ಬಂದರು. ಒಂದು ವಾರದಲ್ಲೇ ಅಮೇರಿಕೆಗೆ ಹಾರಿದರು.

ಆನಂದ ನ್ಯೂಯಾರ್ಕಿನ ಮ್ಯಾನ್‌ ಹಾಟ್ಟನ್‌ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ಹಾಗೂ ಕ್ವೀನ್ಸ್‌ನಲ್ಲಿ ವಾಸಿಸುತ್ತಿದ್ದ. ಅವರು ಶುಕ್ರವಾರ ಸಾಯಂಕಾಲ ಜೆ.ಎಫ್‌.ಕೆ ವಿಮಾನ ನಿಲ್ದಾಣ ತಲುಪಿದಾಗ ಆನಂದನ ಸ್ನೇಹಿತರು ಅವರನ್ನು ಸ್ವಾಗತಿಸಿ ತಮ್ಮ ಮನೆಗೆ ಕರೆದೊಯ್ದರು. ವೀಕೆಂಡ್‌ ಎಲ್ಲ ಸ್ನೇಹಿತರ ಮನೆಯಲ್ಲೇ ಊಟವಾಯಿತು. ಸೋಮವಾರ ಬೆಳಿಗ್ಗೆ ಮನಸ್ಸಿಲ್ಲದ ಮನಸ್ಸಿನಿಂದ ಕೆಲಸಕ್ಕೆ ಹೊರಟ ಆನಂದ ತನ್ನ ಧರ್ಮಪತ್ನಿ ಲಕ್ಷ್ಮಿ ಗೆ ಹೇಳಿದ- ‘ನನಗೆ ಬಿಸಿಬೇಳೆಭಾತ್‌ ಅಂದ್ರೆ ಬಹಳ ಇಷ್ಟ. ಫ್ರಿಡ್ಜ್‌ನಲ್ಲಿ ಎಲ್ಲ ತರಕಾರಿ ಇದೆ. ರಾತ್ರಿಯ ಊಟಕ್ಕೆ ಬಿಸಿಬೇಳೆ ಭಾತ್‌ ಮಾಡಿಬಿಡು’ ಎಂದು ಅರ್ಧ ಎಚ್ಚರ, ಅರ್ಧ ನಿದ್ದೆಯಲ್ಲಿದ್ದ ಹೆಂಡತಿ ಗೆ ಹೇಳಿ ಸಬ್‌ ವೇ ಕಡೆಗೆ ಓಡಿದ.

ಸಂಜೆಯಾಯಿತು. ದುಡಿದು ದಣಿದ ಹಕ್ಕಿಗಳು ತಮ್ಮ ಗೂಡು (ಅಂದರೆ ಗೂಡಿನಂಥ ಅಪಾರ್ಟ್‌ಮೆಂಟ್‌) ಸೇರಲು ಧಾವಿಸುತ್ತಿದ್ದವು. ಆನಂದ ತನ್ನ ಮೆಚ್ಚಿನ ಬಿಸಿಬೇಳೆಭಾತ್‌ನ ಕನಸು ಕಾಣುತ್ತ ಮನೆಗೆ ಸಾಗಿದ. ಹಲವು ವಿಧದ ತರಕಾರಿಗಳನ್ನು ಸಣ್ಣಗೆ ಹೆಚ್ಚಿ, ಒಳ್ಳೇ ಮಸಾಲೆ ಪುಡಿಯನ್ನು ಹಾಕಿ, ಮಂದವಾದ ಹುಣಿಸೇ ಹಣ್ಣಿನ ರಸ ಹಿಂಡಿ, ಗೋಡಂಬಿ, ಕಡಲೇಕಾಯಿ ಬೀಜ ಇತ್ಯಾದಿಗಳನ್ನು ಯಥೇಚ್ಚವಾಗಿ ಸುರಿದು, ಆಗತಾನೇ ಕಾಯಿಸಿದ ಬಿಸಿತುಪ್ಪವನ್ನು ಭಾತ್‌ನ ಮೇಲೆ ಅರ್ಧ ಇಂಚಿನಷ್ಟು ಹರಡಿ, ಘಮ ಘಮ ಕಂಪು ಸೂಸುತ್ತಿದ್ದ, ಬಿಸಿ ಬಿಸಿ ಹಬೆಯೇಳುತ್ತಿದ್ದ (ಎಂ. ಟಿ. ಆರ್‌. ಗಿಂತ ರುಚಿಯಾದ) ಬಿಸಿಬೇಳೆಭಾತ್‌ನ ಕಲ್ಪನೆಯಲ್ಲಿ ಆನಂದನಿಗೆ ಮನೆಯ ದಾರಿ ಸಾಗಿದ್ದೇ ತಿಳಿಯಲಿಲ್ಲ.

ಅಪಾರ್ಟ್‌ಮೆಂಟ್‌ ತಲುಪಿ ಬಾಗಿಲು ತೆಗೆದು ಒಳಗೆ ಅಡಿಯಿಟ್ಟ. ಅವನು ಅಂದುಕೊಂಡ ಹಾಗೆ ಯಾವ ಘಮ ಘಮ ವಾಸನೆಯೂ ಮೂಗಿಗೆ ಬಡಿಯಲಿಲ್ಲ. ಆದರೂ ಛಲ ಬಿಡದ ತ್ರಿವಿಕ್ರಮನಂತೆ (ಇಸ್ರೇಲ್‌ ಹಾಗೂ ಪಾಲೆಸ್ಟೈನ್‌ ಮಧ್ಯೆ ಒಂದಲ್ಲ ಒಂದು ದಿನ ಶಾಂತಿ ಸಂಧಾನ ಆಗುವುದು ಎಂದು ನಂಬಿದ ಆಶಾವಾದಿಯಂತೆ) ಆನಂದ ಅಡಿಗೆ ಮನೆಗೆ ನುಗ್ಗಿದ. ಅಲ್ಲಿಯ ದೃಶ್ಯವನ್ನು ನೋಡಿ ಆನಂದನಿಗೆ ‘ಮೈ ಪ್ರೇಮ್‌ ಕಿ ದೀವಾನೀ ಹೂಂ’ ಚಿತ್ರದ ಮೊದಲ ವಾರದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಕಂಡು ಸೂರಜ್‌ ಬಾರ್ಜಾತ್ಯಗೆ ಆದದ್ದಕ್ಕಿಂತ ಹೆಚ್ಚು ನಿರಾಶೆ ಆಯಿತು ಎಂದರೆ ಅತಿಶಯೋಕ್ತಿಯೇನಲ್ಲ. ಅಡಿಗೆ ಮನೆ ಅನಾಥವಾಗಿತ್ತು. ಅಡಿಗೆಯ ಒಲೆ ತಣ್ಣಗೆ ಜುಣು ಜುಣು ಎನ್ನುತ್ತಿತ್ತು. ಅಲ್ಲಿನ ಯಾವುದೇ ಪಾತ್ರೆಯೂ ಬಿಸಿ ಇರಲಿಲ್ಲ ಹಾಗೂ ಆನಂದನ ಬೇಳೆ ಬೆಂದಿರಲಿಲ್ಲ ಎಂದರೆ ನಿಮಗೆ ಆನಂದನಿಗಾದ ಆಘಾತದ ಅರಿವು ಮೂಡಬಹುದು. ಪರಿಸ್ಥಿತಿ ಹೀಗೇ ಮುಂದುವರೆದಲ್ಲಿ ಇನ್ನು ಹಲವು ವರ್ಷಗಳಾದ ನಂತರ ಈ ಅಪಾರ್ಟ್‌ಮೆಂಟಲ್ಲಿ ಅತ್ಯಂತ ಬೆಲೆ ಬಾಳುವ ವಸ್ತು ಈ ಅಡಿಗೆ ಒಲೆ ಮಾತ್ರ ಎನ್ನುವ ವಿಷಾದನೀಯ ಸತ್ಯ ಆನಂದನ ಮನದಲ್ಲಿ (ಸೀತೆ ಕಂಡ ಮಾಯಾ ಮೃಗದಂತೆ) ಮೂಡಿ ಮರೆಯಾಯಿತು.

ಸತ್ಯದ ಬೆನ್ನೇರಿ ಹೊರಟ ಲಾರ್ಡ್‌ ಹಟ್ಟನ್‌ನಂತೆ ಆನಂದ ತನ್ನ ಕೋಣೆಯೆಡೆಗೆ ಹೊರಟ. ಅಲ್ಲಿಯ ಬಾಗಿಲು ತೆಗೆದು ಇಣುಕಿದರೆ ಲಕ್ಷ್ಮಿ ನಿದ್ದೆ ಮಾಡುತ್ತಿದ್ದಳು! ನಾಲ್ಕು ತಿಂಗಳಿನಿಂದ ಇರಾಕ್‌ನ ಮರಳು ಗುಡ್ಡೆಗಳನ್ನು ಕೈಯಿಂದ ಅಗೆದೂ ಅಗೆದೂ WMD ಸಿಗದೇ ಹತಾಶನಾದ ಬುಷ್‌ನಂತೆ ಆನಂದನಿಗೆ ಮೈಯೆಲ್ಲ ಉರಿದುಹೋಯಿತು (ಯಾವುದೋ ಅಲರ್ಜಿ ಯುಕ್ತ ಸೋಪ್‌ ನಿಂದ ಮೈ ಉಜ್ಜಿಕೊಂಡ ಹಾಗೆ!). ಲಕ್ಷ್ಮಿಯನ್ನು ಅಲುಗಾಡಿಸಿ ಎಬ್ಬಿಸಿದ. ಅವಳು ‘ಹೋಟೆಲ್‌ ನಿಂದ ಊಟ ಕಟ್ಟಿಸಿಕೊಂಡು ಬಂದ್ರಾ’ ಎಂದು ಕೇಳಿದಳು. ಪ್ರತಿದಿನ ಮಿಲಿಯನ್‌ ಟನ್‌ಗಟ್ಟಲೆ ಫ್ರೆಂಚ್‌ ಫ್ರೆೃಸ್‌ ತಿನ್ನುವ ಅಮೇರಿಕೆಗೆ ಇರಾಕ್‌ ಯುದ್ಧವನ್ನು ಫ್ರಾನ್ಸ್‌ ವಿರೋಧಿಸಿದಾಗ ಬಂದದ್ದಕ್ಕೂ ಹೆಚ್ಚು ಕೋಪ ಆನಂದನಿಗೆ ಬಂದಿತು. ‘ನಿನಗೆ ಬಿಸಿಬೇಳೆ ಭಾತ್‌ ಮಾಡು ಎಂದು ಹೇಳಿದ್ದೆನಲ್ಲ’ ಎಂದು ಲಕ್ಷ್ಮಿಗೆ ಕೇಳಿ (ಕಿರುಚಿ) ದ. ‘ರೀ, ನಂಗೆ ಅಡುಗೆ ಮಾಡೋದಿಕ್ಕೆ ಬರೋದಿಲ್ಲಾ’ ಎಂದುತ್ತರಿಸಿದಳು ಅವನ ಧರ್ಮ ಪತ್ನಿ. ‘ಅಂಧಾ ಕಾನೂನ್‌’ ಸಿನೆಮಾದ ನಾಯಕನಂತೆ ತಾನು ನಿರಪರಾಧಿಯಾದರೂ ತನಗೆ ಜೀವಾವಧಿ ಶಿಕ್ಷೆ ದೊರೆತಂತೆ ಆನಂದನಿಗೆ ಭಾಸವಾಯಿತು. ‘ಏನು? ನಿಂಗೆ ಅಡಿಗೆ ಮಾಡೋಕ್ಕೆ ಬರೋಲ್ವೆ? ಹಾಗಾದರೆ ನಿಮ್ಮ ಅಪ್ಪ ಅಮ್ಮ ನಿನ್ನನ್ನು ಮೋಸದಿಂದ ನನ್ನ ತಲೆಗೆ ಕಟ್ಟಿದರಾ’ ಎಂದು ಆನಂದ ಚೀರಿದ.

ಕೆರಳಿದ ಲಕ್ಷ್ಮಿ ಸೂಟ್‌ಕೇಸ್ನಿಂದ ಒಂದು ದಿನ ಪತ್ರಿಕೆಯನ್ನು ತೆಗೆದು ಅವನ ಮುಂದೆ ಎಸೆದಳು. ‘ಏನಿದು’ ಎಂದು ಆನಂದ ಭುಸುಗುಟ್ಟಿದ. ‘ನೀವು ವಧು ಬೇಕಾಗಿದ್ದಾಳೆ ಎಂದು ಕೊಟ್ಟ ಜಾಹೀರಾತು. ಸರಿಯಾಗಿ ಓದಿ’ ಎಂದು ತಿವಿದಳಾ ನಾರೀಮಣಿ. ನೇಣುಗಂಬ ಏರುವ ಮುನ್ನ ನಿನ್ನ ಕೊನೆಯ ಆಸೆ ಏನು ಎಂದು ಒಬ್ಬ ಖೈದಿಗೆ ಕೇಳಿದಾಗ ಅವನು ಎಷ್ಟು ಉತ್ಸುಕತೆಯಿಂದ ಪ್ರತಿಕ್ರಿಯಿಸುತ್ತಾನೋ ಹಾಗೆ ಆನಂದ ಆ ಜಾಹೀರಾತಿನ ಮೇಲೆ ಕಣ್ಣೋಡಿಸಿದ. ವಧುವಿನ ಅರ್ಹತೆಗಳ ಪಟ್ಟಿಯನ್ನು ವಜ್ರ ಸಾಣೆ ಹಿಡಿಯುವ ಕುಶಲಿಗನಂತೆ ಸೂಕ್ಷ್ಮವಾಗಿ 7-8 ಬಾರಿ ಮತ್ತೆ ಮತ್ತೆ ಓದಿದ. ಅದರಲ್ಲಿ ಹುಡುಗಿಗೆ ಅಡಿಗೆ ಗೊತ್ತಿರಬೇಕು ಎಂದು ಪಟ್ಟಿಸಿರಲಿಲ್ಲ (ಬ್ರಿಟಿಷ್‌ ಇಂಟೆಲಿಜೆನ್ಸ್‌ ರಿಪೋರ್ಟ್‌ ನಿಂದ ಇರಾಕ್‌ನ ನ್ಯೂಕ್ಲಿಯರ್‌ ಕೇಪೆಬಿಲಿಟಿ ಇನ್ಫರ್ಮೇಶನ್‌ ಮಾಯವಾದ ಹಾಗೆ). ಲಕ್ಷ್ಮಿಯು ತನಗಾಗದಿರುವವರ ರುಂಡ ಚೆಂಡಾಡುವ ಝಾನ್ಸಿ ಲಕ್ಷ್ಮಿಯಂತೆ ಕಂಡಿದ್ದರೆ ಹಾಗೂ ಹಾಲಾಹಲವನ್ನು ಕುಡಿದಷ್ಟು ಆನಂದನಿಗೆ ಪರಮಾನಂದ (!) ವಾಗಿದ್ದರೆ ಅದರಲ್ಲಿ ಅವನ ತಪ್ಪು ಏನು ಹೇಳಿ?

ಮುಖಪುಟ

/ ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X