• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಾಳ-ವಾದ್ಯ-ನಿನಾದ ಮೂಡಿಸಿದ ನಾದಸೌರಭ

By Staff
|

ಶಿಶುರ್ವೇತ್ತಿ ಪಶುರ್ವೇತ್ತಿ ವೇತ್ತಿಗಾನರಸಂ ಫಣಿಃ - ಸಂಗೀತದಲ್ಲಿನ ಮಾಧುರ್ಯವನ್ನು ಶಿಶು, ಪಶು, ಅಷ್ಟೇಕೆ ಒಂದು ಹಾವು ಕೂಡ ಆನಂದಿಸಬಲ್ಲುದು! ಸಂಗೀತದಲ್ಲಿ, ತತ್ರಾಪಿ ಕರ್ಣಾಟಕ ಶಾಸ್ತ್ರೀಯ ಸಂಗೀತದಲ್ಲಿ, ತಸ್ಮಾದಪಿ ‘ಇನ್ಸ್ಟ್ರುಮೆಂಟಲ್‌ ಮ್ಯೂಸಿಕ್‌’ನಲ್ಲಿ ನನಗೆ ಅಪಾರ ಒಲವು ಇದೆ, ಪರಿಣತಿ ಏನೇನೂ ಇಲ್ಲ ! ಮೊನ್ನೆ ಶನಿವಾರ (ಜೂ 21, 2003) ನಾನು ಆನಂದಿಸಿದ ತಾಳವಾದ್ಯಕಚೇರಿ ಕಾರ್ಯಕ್ರಮವೊಂದರ ವರದಿ ಇದು; ವಿಮರ್ಶೆಯಲ್ಲ !

‘ಕಾವೇರಿ’ ಕನ್ನಡ ಸಂಘ (ಡಿ.ಸಿ-ಮೇರಿಲ್ಯಾಂಡ್‌-ವರ್ಜೀನಿಯಾ) ಮತ್ತು ‘ನಾದತರಂಗಿಣಿ’ - ಇವುಗಳ ಸಂಯುಕ್ತ ಆಶ್ರಯದಲ್ಲಿ ರಾಕ್‌ವಿಲ್‌ನ ರಿಚಾರ್ಡ್‌ ಮಾಂಟ್‌ಗೊಮೆರಿ ಹೈಸ್ಕೂಲ್‌ ಸಭಾಂಗಣದಲ್ಲಿ ಶನಿವಾರ ಸಂಜೆ ನಾಲ್ಕರಿಂದ ಏಳರವರೆಗೆ - ಮೂರು ಗಂಟೆಗಳ ಕಾಲ ಮುನ್ನೂರಕ್ಕೂ ಹೆಚ್ಚು ಸಂಗೀತಾಭಿಮಾನಿಗಳ ಮನಸೂರೆಗೊಂಡ ಸುಂದರ ಕಾರ್ಯಕ್ರಮ ‘ನಾದಸೌರಭ’. ಖ್ಯಾತ ಗಾಯಕಿ ಎಂ.ಎಸ್‌.ಶೀಲಾ ಅವರ ನೇತೃತ್ವದಲ್ಲಿ , ಅವರ ಸುಮಧುರ ಕಂಠಸಿರಿಗೆ ಹನ್ನೊಂದು ಜನ ಕಲಾವಿದರು ವಿವಿಧ ಪಕ್ಕವಾದ್ಯಗಳ ಜತೆ ನೀಡಿ ಸೃಷ್ಟಿಸಿದ ಸಂಗೀತವೃಷ್ಟಿ ! ಹಾಗೆ ನೋಡಿದರೆ ಒಂದು ಹೋಲಿಕೆಯನ್ನೂ ಇಲ್ಲಿ ಕೊಡಬಹುದು - ಕ್ರಿಕೆಟ್‌ ಅಭಿಮಾನಿಗಳಿಗೆ, ತಮ್ಮ ನೆಚ್ಚಿನ ತಂಡದ ಆಟಗಾರರೆಲ್ಲ ರನ್ನುಗಳ ಸುರಿಮಳೆಯಾಂದಿಗೆ ಅತ್ಯಮೋಘ ಪ್ರದರ್ಶನವಿತ್ತರೆ ಅದೆಷ್ಟು ಖುಷಿಯಾಗಬಹುದೋ, ಈ ಹನ್ನೆರಡು ಕಲಾವಿದರು ರೂಪಿಸಿದ ಲಯ-ವಿನ್ಯಾಸ ಚಿತ್ತಾರದ ಮೋಡಿಯಿಂದ ಶ್ರೋತೃಗಳಿಗೆ ಅಷ್ಟೇ ಆನಂದವಾಯಿತು.

M.S.Sheela and team performing in Virginiaಎಂ.ಎಸ್‌.ಶೀಲಾ ಸೇರಿದಂತೆ ಭಾರತದಿಂದ ಆಗಮಿಸಿರುವ ಕಲಾವಿದರೂ ಮತ್ತು ಅಮೆರಿಕೆಯಲ್ಲಿ ನೆಲೆನಿಂತೂ ತಾಯ್ನೆಲದ ಸಂಗೀತ ಸಂಸ್ಕೃತಿಯ ನಿತ್ಯಾರಾಧನೆಯಲ್ಲಿ ತೊಡಗಿರುವ ಸ್ಥಳೀಯ ಕಲಾವಿದರೂ ಒಂದೇ ವೇದಿಕೆಯಲ್ಲಿ ಕಲೆತು ಉಣಬಡಿಸಿದ ಈ ರಸದೌತಣ ಆರಂಭವಾದುದು ‘ಅಪೆಟೈಸರ್‌’ ರೂಪದಲ್ಲಿ , ಗಂಭೀರನಾಟ ರಾಗದಲ್ಲಿನ ಒಂದು ‘ಮಲ್ಲಾರಿ’ಯಾಂದಿಗೆ. ಮೊನ್ನೆಯ ತಾಳವಾದ್ಯ ಕಛೇರಿಯಲ್ಲಿ ನಾದಸ್ವರ (ಎಂ.ಕೋದಂಡರಾಮ್‌) ಕೂಡ ಇದ್ದು ಮಲ್ಲಾರಿ ಆಲಿಸುತ್ತಿದ್ದಂತೆಯೇ ಪಕ್ಕಾ ದಕ್ಷಿಣ ಭಾರತೀಯ ದೇವಸ್ಥಾನವೊಂದರ ಪ್ರಾಂಗಣದಲ್ಲಿ ದೇವರಿಗೆ ಪ್ರದಕ್ಷಿಣೆ ಬರುತ್ತಿದ್ದೇವೆಯೋ ಎಂದು ಭಾಸವಾದರೆ ಆಶ್ಚರ್ಯವಿಲ್ಲ !

ಗೌಳ ರಾಗದಲ್ಲಿ ಮೈಸೂರು ವಾಸುದೇವಾಚಾರ್ಯರ ‘ಪ್ರಣಮಾಮ್ಯಹಂ ಶ್ರೀ ಗೌರೀಸುತಂ...’ ಗಣಪತಿಸ್ತುತಿ ಮತ್ತು ಕಲ್ಯಾಣಿ ರಾಗದಲ್ಲಿ ಕನಕದಾಸರ ರಚನೆ ‘ವರವ ಕೊಡು ವಾಗ್ದೇವಿ...’ - ಇವೆರಡೂ ಚಿಕ್ಕದಾಗಿ ಚೊಕ್ಕವಾಗಿ ಮೂಡಿಬಂದುವು; ಒಂದು ‘ಸಂಗೀತ ಕಛೇರಿ’ಯ ವಾತಾವರಣ ಅದಾಗಲೇ ನಿರ್ಮಾಣವಾಗತೊಡಗಿತು.

ನಿತ್ಯಹರಿದ್ವರ್ಣವೆನ್ನಬಹುದಾದ ‘ನಗುಮೊಮು ಗನಲೇನಿ...’ (ತ್ಯಾಗರಾಜ; ಅಭೇರಿ ರಾಗ) ಔತಣದಲ್ಲಿ ಒಂದರ ನಂತರ ಇನ್ನೊಂದು ರುಚಿಕರ ಭಕ್ಷ್ಯಭೋಜ್ಯ ಎನ್ನಿಸಿದರೆ, ಆನಂತರದ ಪ್ರಸ್ತುತಿ ‘ಕದನಕುತೂಹಲ’ ರಾಗದಲ್ಲಿ. (ಇದೀಗ ಇರಾಕ್‌ ಯುದ್ಧ ಮುಗಿಸಿಬಂದ ಸೈನಿಕರು ಮುಂದಿನ ತಯಾರಿಗೆ ‘ಮಾರ್ಚ್‌ ಪಾಸ್ಟ್‌’ ಮಾಡುತ್ತಿದ್ದಾರೋ ಎಂಬಂಥ ಕಲ್ಪನೆ ಬರುವ ಕದನಕುತೂಹಲ ರಾಗ ಕರ್ನಾಟಕ ಶಾಸ್ತ್ರೀಯ ಸಂಗೀತದ ಡೈನಮಿಕ್‌ ರಾಗಗಳಲ್ಲೊಂದು. ಈ ರಾಗದ ‘ರಘುವಂಶಸುಧಾಂಬುಧಿ ಚಂದ್ರ...’ವನ್ನಂತೂ ನಾನು ಯಾವ್ಯಾವ ಇನ್ಸ್ಟ್ರುಮೆಂಟಲ್‌ಗಳಲ್ಲಿ ಲಭ್ಯವಿದೆಯೋ ಅವನ್ನೆಲ್ಲ ಸಂಗ್ರಹಿಸಿಟ್ಟಿದ್ದೇನೆ).

One more Karnataka classical vocal by M.S.Sheela and Teamನಾದಸೌರಭ ಕಾರ್ಯಕ್ರಮದ ಪ್ರಧಾನ ಅಂಶವಾಗಿ ಮುಂದಿನ ಐಟಂ ‘ಮೋಹನ’ ರಾಗದಲ್ಲಿ. ಸ್ವರಪ್ರಸ್ತಾರ, ತನಿ-ಆವರ್ತನ ಎಲ್ಲ ಸೇರಿ ಸರಿಸುಮಾರು ಒಂದು ಗಂಟೆ ಅವಧಿಯ ಪ್ರಸ್ತುತಿ. ವಿವರಿಸಲು ಒಂದೇ ಶಬ್ದ - ಅತ್ಯಮೋಘ! ಈ ತಾಳವಾದ್ಯ ಕಛೇರಿಯ ನಿರ್ದೇಶಕ ಮತ್ತು ಮೊನ್ನೆಯ ಕಾರ್ಯಕ್ರಮದಲ್ಲಿ ತಬಲಾ ನುಡಿಸಿದ ಅನೂರ್‌ ಅನಂತಕೃಷ್ಣ ಶರ್ಮಾ (‘ಶಿವು’ ಎಂದು ಪ್ರಖ್ಯಾತಿ) ಅವರಿಗೆ ‘ಹ್ಯಾಟ್ಸ್‌ ಆಫ್‌’! ಚಾರುಲತಾ ರಾಮಾನುಜಂ (ವಯಲಿನ್‌), ರಾಧಿಕಾ ಚಾರ್‌ (ವಯಲಿನ್‌), ಅನೂರ್‌ ದತ್ತಾತ್ರೇಯ ಶರ್ಮಾ (ಮೃದಂಗ), ಗೌತಮ್‌ ಸುಧಾಕರ್‌ (ಮೃದಂಗ), ತಿರುಗ್ನಾನ ಷಣ್ಮುಗಂ (ತವಿಲ್‌), ಎ.ವಿ.ಕಾಶಿನಾಥ್‌ (ಗೆಟ್ಟುವಾದ್ಯ), ಶ್ರೀನಾಥ್‌ ಬಾಲಾ (ಪಕ್ವಾಜ್‌), ಸುಧೀಂದ್ರ ರಾವ್‌ (ಖಂಜೀರ) - ಇವರೆಲ್ಲ ತಂತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿ ಕರತಾಡನ ಗಿಟ್ಟಿಸಿದರೆ, ವೆಸ್ಟರ್ನ್‌ ಡ್ರಮ್ಸ್‌, ರಿಥಂ ಪ್ಯಾಡ್ಸ್‌ ಮತ್ತು ಜತೆಯಲ್ಲೇ ಮೋರ್ಚಿಂಗ್‌ ನುಡಿಸಿ ಕೈಚಳಕ ತೋರಿಸಿದ ಬಿ.ಎಸ್‌.ಅರುಣ್‌ ಕುಮಾರ್‌ ಈ ಲಯವಿನ್ಯಾಸಕ್ಕೆ ನೀಡಿದ ಅಬ್ಬರ ಅದ್ಭುತವಾದುದು. ತಾಳವಾದ್ಯ ಮೇಳದಲ್ಲಿ ಎದ್ದುಕಾಣುತ್ತಿದ್ದ ಅನುಪಸ್ಥಿತಿಯೆಂದರೆ, ವಿಕ್ಕು ವಿನಾಯಕರಾಮ್‌ರಂತಹ ಘಟಾನುಘಟಿಗಳಿಂದ ಅಪಾರ ಜನಪ್ರಿಯವಾಗಿರುವ ಇನ್ನೊಂದು ಪಕ್ಕವಾದ್ಯ ‘ಘಟಂ’. ಅದಿರುತ್ತಿದ್ದರೆ ಬಹುಶಃ ‘ಸೋನೇ ಪೆ ಸುಹಾಗ್‌...’ ಆಗುತ್ತಿತ್ತು.

ಆ ಬಳಿಕ ‘ತಂಬೂರಿ ಮೀಟಿದವ...’ (ಪುರಂದರ ದಾಸರ ಕೃತಿ, ಸಿಂಧೂಭೈರವಿ ರಾಗದಲ್ಲಿ), ‘ಕಡಲೆಯೆಂಬುದು ತಾನು...’ (ಅಕ್ಕಮಹಾದೇವಿ ವಚನ), ಪೀಲೂರಾಗದಲ್ಲಿ ‘ಕರುಣಾಜಲಧೆ...’ - ಇವಿಷ್ಟೂ ಚೆನ್ನಾಗಿ ಮೂಡಿಬಂದುವು. ಕಾರ್ಯಕ್ರಮದ ಸಮಾಪನ ಸಮೀಪಿಸುತ್ತಿದ್ದಂತೆ ‘ನಾದತರಂಗಿಣಿ’ಯ ಹದಿನೆಂಟು ಜನ ಕಲಾವಿದೆಯರೂ ವೇದಿಕೆಯಲ್ಲಿ ಈ ತಂಡವನ್ನು ಜತೆಗೂಡಿ ಸುಮನಸರಂಜಿನಿ ರಾಗದಲ್ಲಿ ಶಿವು ಅವರದೇ ಕಲ್ಪನೆಯ ತಿಲ್ಲಾನವೊಂದನ್ನು ಪ್ರಸ್ತುತಪಡಿಸಿ ಶ್ರೋತೃಗಳ ಮೈಮನದಲ್ಲಿ ವಿದ್ಯುತ್‌ಸಂಚಾರವಾಗುವಂತೆ ಮಾಡಿದರು. ಇಷ್ಟು ಮಂದಿ ಕಲಾವಿದರು ವೇದಿಕೆಯಲ್ಲಿ ಜತೆಸೇರಿ ಕರ್ಣಾಟಕ ಸಂಗೀತ ಗಾನಾಮೃತವನ್ನು ಹರಿಸಿದ್ದು ಪ್ರಾಯಶಃ ಅಮೆರಿಕದಲ್ಲಿ ನಡೆದ ಸಂಗೀತಕಾರ್ಯಕ್ರಮಗಳಲ್ಲೆಲ್ಲ ಅನನ್ಯ.

ನಾದತರಂಗಿಣಿಯ ವತಿಯಿಂದ ಮೈ.ಶ್ರೀ.ನಟರಾಜ್‌ ಅವರಿಂದ ಎರಡು ಮಾತುಗಳು, ಕಲಾವಿದರಿಗೆಲ್ಲ ಹೂಗುಚ್ಛ ಸಮರ್ಪಣೆ, ಕಾವೇರಿಯ ವತಿಯಿಂದ ಕಾರ್ಯಕ್ರಮ ಸಂಚಾಲಕ ಶಿವಸ್ವಾಮಿ ಶ್ರೀನಾಗೇಶ್‌ ಅವರ ವಂದನಾರ್ಪಣೆ ಮತ್ತು ಕೊನೆಯಲ್ಲಿ ಮೂವತ್ತು (ಹನ್ನೆರಡು ಪ್ಲಸ್‌ ಹದಿನೆಂಟು) ಕಲಾವಿದರ ಮೇಳೈಸುವಿಕೆಯ ಕ್ಲೈಮಾಕ್ಸ್‌ - ಮಧ್ಯಮಾವತಿ ರಾಗದಲ್ಲಿ ಪುರಂದರದಾಸರ ‘ಭಾಗ್ಯದ ಲಕ್ಷ್ಮೀ ಬಾರಮ್ಮಾ...’; ಕಾರ್ಯಕ್ರಮವನ್ನು ಅನುಭವಿಸಿ ಆನಂದಿಸಿದವರ (ಕನ್ನಡೇತರ ಭಾರತೀಯರೂ ಅಷ್ಟು ಮಾತ್ರವಲ್ಲ, ಸಾಕಷ್ಟು ಸಂಖ್ಯೆಯಲ್ಲಿದ್ದ ಅಮೆರಿಕನ್ನರೂ ಸೇರಿ) ಎಲ್ಲರ ಮನದಲ್ಲೂ - ‘ಇಂಥ ರಸದೌತಣ ಸವಿಯುವ ಭಾಗ್ಯವ ನೀಡಮ್ಮಾ...’!

ಎನ್‌ಆರ್‌ಐ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more