• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸುದೀಪೇಂದ್ರ ಪುರಾಣವೂ ಜನಾರೋಗ್ಯ ಹರಣವೂ

By Staff
|

ರವಿ ಕೃಷ್ಣಾ ರೆಡ್ಡಿ

Sudeepಪ್ರತಿಭಟಿಸಬೇಕಾದ ಸಮಯದಲ್ಲಿ ಮೌನವಾಗಿಬಿಡುವ ಪಾಪಕಾರ್ಯ ಮನುಷ್ಯರನ್ನು ಧೂರ್ತ, ಹೇಡಿಗಳನ್ನಾಗಿಸುತ್ತದೆ.

- ಅಬ್ರಹಾಂ ಲಿಂಕನ್‌

ಆಗಾಗ್ಗೆ ನಮ್ಮ ರಾಜಕೀಯ-ಸಾಂಸ್ಕೃತಿಕ-ಸಾಮಾಜಿಕ ವಲಯಗಳಲ್ಲಿ ಗಣ್ಯರಿಂದ, ಪ್ರಸಿದ್ಧರಿಂದ, ಜನರ ಸಾಮಾಜಿಕ, ಸಾಂಸ್ಕೃತಿಕ ಆರೋಗ್ಯವನ್ನು ಕದಡುವ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ. ಇಂತಹವು ಹಿಂದೆಯೂ ನಡೆದಿವೆ ಮತ್ತು ಮುಂದೆಯೂ ನಡೆಯುತ್ತಲೇ ಇರುತ್ತವೆ. ಮುಂದಿನ ಪುನರಾವರ್ತನೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಿಲ್ಲವಾದರೂ, ಅದರ ಶೇಕಡಾವಾರು ಪುನರಾವರ್ತನೆಗೆ ಕಡಿವಾಣ ಹಾಕಬಹುದು. ಇತ್ತೀಚೆಗೆ ನಮ್ಮಲ್ಲಿ ನಡೆದ ಇಂತಹ ಒಂದು ಘಟನೆ ಮತ್ತು ಆ ವಿಷಯದಲ್ಲಿ ನಾವು ಏನು ಮಾಡಬಹುದು ಎಂದು ನೋಡೋಣ.

ನಟ ಸುದೀಪ್‌: 'ಅನಾವಶ್ಯಕವಾಗಿ ನನ್ನ ತಂಟೆಗೆ ಬಂದು, ನನ್ನ ಮತ್ತು ನನ್ನ ಕುಟುಂಬದ ಹೆಸರಿಗೆ ಮಸಿ ಬಳಿದರೆ ಹುಷಾರ್‌! ನನಗೆ ನನ್ನ ಜನಾಂಗದ ಬೆಂಬಲವಿದೆ".

ಪತ್ರಕರ್ತ/ನಿರ್ದೇಶಕ ಇಂದ್ರಜಿತ್‌: 'ಆತನನ್ನು ನನ್ನ ಚಿತ್ರದಲ್ಲಿ ನಟಿಸೆಂದು ಕೋರಿದೆನೆಂದಾಗಲಿ, ಮತ್ತು ಆತ ತಿರಸ್ಕರಿಸಿದೆನೆಂಬ ಕಾರಣಕ್ಕಾಗಿಯೇ ನನ್ನ ಪತ್ರಿಕೆಯಲ್ಲಿ ಆತನ ಮಾನಹರಣ ನಡೆದಿದೆಯೆಂಬುದಾಗಲಿ ಸುಳ್ಳು".

Indrajithಇವರಿಬ್ಬರ ಜಾತಿ-ಜನಾಂಗ ಯಾವುದೆಂಬ ಕೆಟ್ಟ ಕುತೂಹಲ ಇರಿಸಿಕೊಳ್ಳದೆ ಇವರ ಹಿನ್ನೆಲೆ ಗಮನಿಸಿದರೆ:

ಸುದೀಪ್‌, ಶ್ರೀಮಂತ-ವ್ಯಾಪಾರಿ ಮನೆತನದಿಂದ ಬಂದಿರುವ ಮತ್ತು ಇತ್ತೀಚಿನ ವರ್ಷಗಳಲ್ಲಿ ಕನ್ನಡದ ಸಿನಿಮಾ ಲೋಕದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ನಟ. ಇವರ ಹತ್ತಾರು ಚಿತ್ರಗಳು ಸಹಜವಾಗಿ ಎಲ್ಲಾ ಚಿತ್ರಗಳಂತೆ ಸೋಲು-ಗೆಲುವು ಕಂಡಿದ್ದು, ತನ್ನ ಒರಟುತನದಿಂದಾಗಿ, ಪ್ರಯೋಗಶೀಲತೆಯಿಂದಾಗಿ, ಮತ್ತು ತಾನು ಪೋಷಿಸುವ ಪಾತ್ರಗಳ ವೈಖರಿಯಿಂದಾಗಿ ಈಗಾಗಲೇ ಸಿನಿಮಾಪ್ರಿಯರಲ್ಲಿ , ಯುವಜನಾಂಗದಲ್ಲಿ ಒಂದು ಪ್ರಭಾವಳಿಯನ್ನು, ಸ್ಥಾನವನ್ನೂ ಸಂಪಾದಿಸಿಕೊಂಡಿದ್ದಾರೆ.

ಇನ್ನು ಇಂದ್ರಜಿತ್‌ ಕನ್ನಡದ ಪ್ರಸಿದ್ಧ ಸಾಹಿತಿ, ಪತ್ರಕರ್ತ, ನಿರ್ದೇಶಕ ಲಂಕೇಶರ ಮಗ. ಲಂಕೇಶರನ್ನು ನಾನಾ ಕಾರಣಗಳಿಗಾಗಿ ಮೆಚ್ಚದವರು ಬಹಳಷ್ಟು ಜನರಿದ್ದರೂ, ವಿವಿಧ ಕ್ಷೇತ್ರಗಳಿಗೆ ಅವರ ಕೊಡುಗೆಯನ್ನೂ, ಕನ್ನಡಿಗ ಓದುಗರಲ್ಲಿ ವೈಚಾರಿಕತೆ ಬೆಳೆಸುವಲ್ಲಿ ಇತ್ತೀಚಿನ ಎರಡು ದಶಕಗಳಲ್ಲಿನ (ಕಾಲವಾಗುವವರೆಗೂ) ಪ್ರಯತ್ನವನ್ನು ಕಡೆಗಣಿಸಲಾಗದು. ಅಂತಹ ದೊಡ್ಡಾಲದ ಮರದ ನೆರಳಿನಿಂದ ಹೊರಬರಲು ಪ್ರಯತ್ನಿಸುತ್ತಿರುವ ಇಂದ್ರಜಿತ್‌, ಇನ್ನೂ ಪ್ರಭಾವಶಾಲಿಯಾಗಿ ಉಳಿದಿರುವ ಲಂಕೇಶ್‌ ಪತ್ರಿಕೆಯ ಒಡೆಯ, ಪ್ರಕಾಶಕ ಮತ್ತು ಅಂಕಣಕಾರ. ಹಾಗೆಯೆ ಸೃಜನಶೀಲತೆಯ ಕೊರತೆಯಿದ್ದರೂ, ಕೆಲವರ್ಗದ ಪ್ರೇಕ್ಷಕರಿಗೆ ಇಷ್ಟವಾಗಿದ್ದರಿಂದ ಯಶಸ್ವಿಯಾದ 'ತುಂಟಾಟ" ಚಿತ್ರದ ನಿರ್ದೇಶಕ. ಸದ್ಯ ಇವರು ಲಂಕೇಶ್‌ ಪತ್ರಿಕೆ ಎಂಬ ಇನ್ನೊಂದು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಹೀಗೆ ಮೇಲಿನವರಿಬ್ಬರೂ ತಂತಮ್ಮ ಕ್ಷೇತ್ರಗಳಲ್ಲಿ ತಮ್ಮದೇ ಆದ ಸ್ಥಾನವನ್ನೂ, ಅದರಿಂದ ಕನ್ನಡಿಗ ಸಮಾಜವನ್ನೂ (ಕೆಲವರನ್ನಾದರೂ), ಪ್ರಭಾವಿಸುವ ಶಕ್ತಿಯನ್ನು ಹೊಂದಿದ್ದಾರೆ. ಹೀಗಾಗಿ ಅವರು ಒಪ್ಪಲಿ ಬಿಡಲಿ- ನಿಜ ಅರ್ಥದಲ್ಲಿ ಅವರು ಸಮಾಜಕ್ಕೆ ಸೇರಿದವರಾಗಿ ಜಾತ್ಯಾತೀತರಾಗಿದ್ದಾರೆ. ಇಂತಹವರ ಜವಾಬ್ದಾರಿಯಾಗಲಿ, ತಡೆಯಾಗಲಿ ಇಲ್ಲದ, ಜನರ, ಸಮಾಜದ, ಆರೋಗ್ಯ ಕೆಡಿಸುವ ನಡೆ-ನುಡಿ ಯಾವುದೇ ದೊಡ್ಡ ರೀತಿಯ ಖಂಡನೆಗೆ ಒಳಪಡದೆ ತಪ್ಪಿಸಿಕೊಂಡು ಬಿಟ್ಟರೆ, ಈಗಾಗಲೆ ಜಾತಿ-ಮತಗಳಂತಹ ಸಮಾಜ ಭೇದಕಗಳಲ್ಲಿ ಇಂತಹದೂ ಒಂದಾಗುವಲ್ಲಿ ಪ್ರೋತ್ಸಾಹ ಕೊಟ್ಟಂತಾಗುತ್ತದೆ. (ದೀಸ್‌ ಥಿಂಗ್ಸ್‌ ಷುಡ್‌ ನಾಟ್‌ ಗೊ ಅನ್‌ಚೆಕ್ಡ್‌.)

ಸಾರ್ವಜನಿಕ ಜೀವನದಲ್ಲಿರುವವರು ಸಹಜವಾಗಿಯೇ ಪ್ರಭಾವಶಾಲಿಗಳು ಮತ್ತು ಆ ಕಾರಣಕ್ಕಾಗಿಯೇ ತಮ್ಮ ನಡವಳಿಕೆಗಳಿಗೂ ಬಾಧ್ಯರು. ಇಲ್ಲಿ ನಾವು, ಒಬ್ಬ ವ್ಯಕ್ತಿಯ ಜನಪ್ರಿಯತೆಗೂ ಆತನ ಹಣಕಾಸಿನ ಆದಾಯಕ್ಕೂ ನೇರ ಸಂಬಂಧ ಉಂಟು ಎಂಬುದನ್ನು ಮರೆಯಬಾರದು. ಇದು ಹೇಗೆಂದರೆ, ಒಬ್ಬ ನಟನ ಜನಪ್ರಿಯತೆ ಹೆಚ್ಚಿದಷ್ಟೂ, ಹೆಚ್ಚಾಗುವ ಆತನ ಸಂಭಾವನೆ; ಲೇಖಕನ ಪ್ರಸಿದ್ಧಿಯಿಂದ ಆತನ ಪ್ರಕಟಣೆಗಳಿಗೆ ಸಿಗಬಹುದಾದ, ಕೇಳಬಹುದಾದ ಹಣ, ಇತ್ಯಾದಿ,.

ಇಲ್ಲಿ ವಾಕ್‌ಸ್ವಾತಂತ್ರ್ಯ, ಪತ್ರಿಕಾಧರ್ಮದ ಪ್ರಶ್ನೆಗಳೂ ಉದ್ಭವಿಸುತ್ತವೆ. ವಾಕ್‌ಸ್ವಾತಂತ್ರ್ಯದ ನೆಪದಲ್ಲಿ ಜನರ ಭಾವನೆಗಳನ್ನು ಕೆರಳಿಸುವುದು, ಲಾಭ ಮಾಡಿಕೊಳ್ಳುವುದು (ಅಥವಾ ಬೇರೆಯವರನ್ನು ಹೆದರಿಸುವುದು) ತಪ್ಪು ಮತ್ತು ಕಾನೂನು ಬಾಹಿರ. ಎಲ್ಲಕ್ಕಿಂತ ಹೆಚ್ಚಾಗಿ 'ಅನೈತಿಕ" ಮತ್ತು 'ಖಂಡನೀಯ". ಹಾಗೆಯೇ ಒಟ್ಟಾರೆ ಸಮಾಜದ ಮೇಲೆ ಅಂತಹ ಪ್ರಭಾವ ಬೀರದ ಕೇವಲ ಒಬ್ಬರ ದಾಂಪತ್ಯ ಸಮಸ್ಯೆಯಂತಹ ವೈಯುಕ್ತಿಕ ಸಮಸ್ಯೆಯನ್ನು, ಅವರನ್ನು ಹಳಿಯಲು ಪತ್ರಿಕೆಯಲ್ಲಿ ಬರೆಯುವುದು, ಬರೆಸುವುದು. ಇವೆಲ್ಲಾ ಒಂದು ಒಳ್ಳೆಯ ವ್ಯವಸ್ಥೆಯನ್ನು ಕೆಟ್ಟದಾಗಿ, ಕೆಟ್ಟದ್ದಕ್ಕಾಗಿ ಉಪಯೋಗಿಸಿಕೊಳ್ಳುವ ರೀತಿ. ಹಾಗೆಂದ ಮಾತ್ರಕ್ಕೆ ಸಾರ್ವಜನಿಕ ಜೀವನದಲ್ಲಿರುವವರನ್ನು ಪ್ರಶ್ನಿಸಬಾರದು, ಅವರ ಕುಕೃತ್ಯಗಳನ್ನು ಬಯಲಿಗೆ ಎಳೆಯಬಾರದು ಎಂದಲ್ಲ . ಸತ್ಯಶೋಧನೆ ಮತ್ತು ಅದರ ಪ್ರಕಟಣೆ, ಯಾವುದೇ ಸಮಯದಲ್ಲಿ , ಎಷ್ಟೇ ಕಹಿಯಾಗಿದ್ದರೂ ರಾಜಿ ಮಾಡಿಕೊಳ್ಳಬಹುದಾದ ವಿಷಯವಲ್ಲ.

ಈ ಎಲ್ಲಾ ವಿಷಯಗಳನ್ನು ನಾನು ಮೇಲಿನ ಇಬ್ಬರು ವ್ಯಕ್ತಿಗಳ ಬಗ್ಗೆ ಗೌರವವಿರಿಸಿಕೊಂಡೇ, ಅವರ ಸಾಧನೆ, ಕೊಡುಗೆಗಳನ್ನು ಪರಿಗಣಿಸಿ, ಗೌರವಿಸಿಯೇ ಬರೆದಿದ್ದೇನೆ. ಕೆಲವು ಸಮಯಗಳಲ್ಲಿ ಇಂತಹ ಕಸರತ್ತು , ಕಹಿ ಔಷಧಿ ಸೇವನೆ, ಸಮಾಜದ ಮಾನಸಿಕ ಸ್ವಸ್ಥತೆಗೆ ಅವಶ್ಯಕ. ನಾವು ಈ ರೀತಿಯ ಕ್ರಮಗಳನ್ನು ತೆಗೆದುಕೊಳ್ಳದೆ, ಇತಿ-ಮಿತಿಗಳನ್ನು ಹೇರಿಕೊಳ್ಳದಿದ್ದರೆ, ಸಮಾಜ ನಾಯಿನರಿಗಳ ಪಾಲಾಗುತ್ತದೆ (ಇಂಗ್ಲೀಷ್‌ನಲ್ಲಿ ಹೇಳುವಂತೆ, ಇಟ್‌ ವಿಲ್‌ ಗೋ ಟು ಡಾಗ್ಸ್‌). ಇದು ಭವಿಷ್ಯದ ಸಮಾಜದ ಬಗ್ಗೆ ಕಾಳಜಿ ಹೊಂದಿರುವವರಿಗಾಗಲಿ, ಆರೋಗ್ಯವಂತ ಸಮಾಜದಿಂದಾಗಬಹುದಾದ ಸರ್ವ ಜನರ ಅಭಿವೃದ್ಧಿಗಾಗಿ ಹಂಬಲಿಸುವವರಿಗಾಗಲಿ ಮೌನವಾಗಿಬಿಡುವ ಮಾತಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more