ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಗವದ್ಗೀತೆಯಲ್ಲಿ ‘ಗುರು’

By Staff
|
Google Oneindia Kannada News
Santhosh Kotnisಗುರು ಎಂಬ ಶಬ್ದ ನಮ್ಮ ಕಿವಿಗೆ ಬಿದ್ದೊಡನೆಯೇ ವ್ಯಂಗ್ಯಚಿತ್ರದಂತಹ ರೂಪವು ಕಣ್ಣೆದುರು ಮೂಡುತ್ತದೆ. ಜಡೆಗಟ್ಟಿದ ಉದ್ದ ಗಡ್ಡ, ನೀಳಕಾಯದ ಕಾಷಾಯ ವಸ್ತ್ರ, ಹಿಮಾಲಯದಲ್ಲಿ ಧ್ಯಾನಮಾಡುತ್ತಿರುವ ವಿಚಿತ್ರ ಮುದುಕನ ಚಿತ್ರ ಕಾಣಿಸುತ್ತದೆ ಅಥವಾ ಆಧ್ಯಾತ್ಮಿಕ ತೃಷೆಯುಳ್ಳ ತರುಣರನ್ನು ಸುಲಭವಾಗಿ ಮರಳು ಮಾಡುವ ನಕಲಿ ಉಪದೇಶಕ ಎಂಬ ಭಾವನೆ ಬರುತ್ತದೆ. ಆದರೆ ನಿಜವಾಗಿಯೂ ಗುರು ಎಂದರೆ ಯಾರು? ನಮಗೆ ತಿಳಿಯದಿದೆ ಹೋದುದು ಅವನಿಗೆ ಏನು ತಿಳಿದಿದೆ? ಜೀವನದ ಕವಲು ದಾರಿಯಲ್ಲಿ ನಿಂತಾಗ, ಅನೇಕ ಬಾರಿ ಬದುಕಿನ ಎಲ್ಲ ದಾರಿಗಳು ಮುಚ್ಚಿಹೋದಂತೆ ಅನ್ನಿಸಿದಾಗ ಗುರು ನಿಜವಾಗಿಯೂ ಮಾರ್ಗದರ್ಶನ ಮಾಡಬಲ್ಲ. ಗುರು ಎಂದರೆ ಯಾರು? ಗುರುವಿನ ಲಕ್ಷಣಗಳೇನು? ಶಿಷ್ಯನಾದವನ ಗುಣಲಕ್ಷಣಗಳೇನು? ಎಂಬುದನ್ನು ಭಗವದ್ಗೀತೆಯ ಹಿನ್ನೆಲೆಯಲ್ಲಿ ನೋಡುವುದು ಈ ಲೇಖನದ ಉದ್ದೇಶ.

ಓಂ ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ
ಚಕ್ಷುರ್‌ ಉನ್ಮೀಲಿತಂ ಯೇನ ತಸ್ಮೈ ಶ್ರೀ ಗುರುವೇ ನಮಃ ।।
(‘ನಾನು ಅಜ್ಞಾನವೆಂಬ ಅಂಧಕಾರದಲ್ಲಿ ಜನಿಸಿದ್ದೆ, ಗುರುಗಳು ಜ್ಞಾನದ ದೀವಟಿಗೆಯಿಂದ ನನ್ನ ಕಣ್ಣು ತೆರೆಸಿದರು. ಅವರಿಗೆ ನನ್ನ ಗೌರವಪೂರ್ವಕ ನಮಸ್ಕಾರಗಳನ್ನು ಸಲ್ಲಿಸುತ್ತೇನೆ’.)

ಅಜ್ಞಾನ ಎಂದರೆ ಬುದ್ಧಿಹೀನತೆ ಅಥವಾ ಅಂಧಕಾರ. ಎಲ್ಲರೂ ಈ ಲೌಕಿಕ ಪ್ರಪಂಚದ ಒಂದಿಲ್ಲೊಂದು ಕತ್ತಲಲ್ಲಿ ಇದ್ದೇವೆ. ಕತ್ತಲಾದ ಲೌಕಿಕ ಪ್ರಪಂಚಕ್ಕೆ ತಿಂಗಳ ಬೆಳಕು ಬೇಕು. ಆದರೆ ಬೇರೊಂದು ಲೋಕವಿದೆ, ಅದು ಆಧ್ಯಾತ್ಮಿಕ ಲೋಕ. ಅದು ಈ ಅಂಧಕಾರದ ಆಚೆಗಿದೆ. ಅದನ್ನು ಶ್ರೀಕ್ರಷ್ಣನು ಹೀಗೆ ವರ್ಣಿಸಿದ್ದಾನೆ... (15.6)

ನ ತದ್‌ ಭಾಸಯತೇ ಸೂರ್ಯೋ ನ ಶಶಾಂಕೋ ನ ಪಾವಕ:
ಯದ್‌ ಗತ್ವಾ ನ ನಿವರ್ತಂತೇ ತದ್‌ ಧಾಮ ಪರಮಂ ಮಮ ।।
( ‘ನನ್ನ ಆ ಧಾಮವನ್ನು ಸೂರ್ಯನಾಗಲೀ, ಚಂದ್ರನಾಗಲೀ ಅಥವಾ ವಿದ್ಯುತಾಗಲೀ ಬೆಳಗಿಸುವದಿಲ್ಲ. ಆ ಧಾಮವನ್ನು ಸೇರಿದವನು ಎಂದೂ ಈ ಲೌಕಿಕ ಪ್ರಪಂಚಕ್ಕೆ ಮರಳಿ ಬರುವುದಿಲ್ಲ.’)

ತನ್ನ ಶಿಷ್ಯರನ್ನು ಕತ್ತಲೆಯಿಂದ ಬೆಳಕಿಗೆ ಕರೆದೊಯ್ಯುವದೇ ಗುರುಗಳ ಕೆಲಸ. ಯಾವುದೇ ವ್ಯಕ್ತಿ ಅರಿಯದೇ, ರೋಗದ ಸೋಂಕು ತಗಲಿಸಿಕೊಳ್ಳುವಂತೆ ನಾವೆಲ್ಲರೂ ಅಜ್ಞಾನದ ಕಾರಣದಿಂದ ದುಃಖ ಅನುಭವಿಸುತ್ತಿದ್ದೇವೆ. ಆರೋಗ್ಯದ ನಿಯಮಗಳು ನನಗೆ ತಿಳಿದಿಲ್ಲ ಎಂದು ಹೇಳುವಂತಿಲ್ಲ. ಆರೊಗ್ಯದ ನಿಯಮಗಳನ್ನು ಮುರಿದರೆ ತೊಂದರೆ ಪಡುವುದು ಸಹಜ.

ಯಾವುದೋ ದೇಶದಲ್ಲಿ ಕಾನೂನು ಮುರಿದು, ನನಗೆ ಕಾನೂನು ಗೊತ್ತಿರಲಿಲ್ಲ ಅದಕ್ಕೆ ತಪ್ಪಾಯಿತು ಎನ್ನುವಂತಿಲ್ಲ. ಅದಕ್ಕೆ ತಕ್ಕ ದಂಡ ಅಥವಾ ಶಿಕ್ಷೆ ಅನುಭವಿಸಲೇ ಬೇಕು. ಇದು ಕಾನೂನು ಗೊತ್ತಿಲ್ಲದೆ ಇದ್ದರೆ ಆಗುವ ಅನಾಹುತ. ಯಾವುದೇ ಒಂದು ರಾಜ್ಯದಲ್ಲಿ ಸುವ್ಯವಸ್ಥೆ ಕಾಪಾಡಲು ಕಾನೂನು ಇರುವಂತೆ, ಪ್ರಕೃತಿಯಲ್ಲಿಯೂ ಕೆಲವೊಂದು ಕಾನೂನುಗಳಿವೆ, ಕಟ್ಟಳೆಗಳಿವೆ, ನಿಯಮಗಳಿವೆ. ನಾವು ಅವನ್ನು ತಿಳಿಯದಿದ್ದರೂ ಅವು ಕಾರ್ಯ ನಿರ್ವಹಿಸುತ್ತಿವೆ. ನಾವು ಅಜ್ಞಾನದಿಂದ ಏನಾದರೂ ತಪ್ಪು ಮಾಡಿದರೆ, ನರಳಬೇಕಾಗುತ್ತದೆ, ಇದು ಪ್ರಕೃತಿ ನಿಯಮ.

ಯಾವ ಮಾನವ ಜೀವಿಯೂ ಯಾತನೆಗೊಳಗಾಗದಂತೆ ನೋಡಿಕೊಳ್ಳುವುದೇ ಗುರುವಿನ ಕೆಲಸವಾಗಿದೆ. ತಾನು ದುಃಖಿಯಲ್ಲ ಎಂದು ಯಾವ ಜೀವಿಯೂ ಹೇಳಲಾಗದು, ಅದು ಅಸಾಧ್ಯ. ಒಂದು ಜೀವಿ ಮೂರು ಬಗೆಯ ಕಾರಣಗಳಿಂದ ದುಃಖ, ನೋವು ಅನುಭವಿಸುತ್ತಾನೆ. ಆಧ್ಯಾತ್ಮಿಕ, ಆಧಿಭೌತಿಕ ಮತ್ತು ಅಧಿದೈವಿಕ. ಈ ನೋವು, ದುಃಖ, ಭೌತಿಕ ದೇಹ ಮತ್ತು ಮನಸ್ಸು, ಇತರ ಜೀವಿಗಳು ಮತ್ತು ನಿಸರ್ಗದಿಂದ ಉಂಟಾಗುತ್ತವೆ. ಯಾವುದೇ ಜೀವಿಯಾದರೂ, ತನ್ನ ಅಜ್ಞಾನದಿಂದ ದುಃಖ ಅನುಭವಿಸುತ್ತಾನೆ. ತನ್ನ ಶಿಷ್ಯನನ್ನು ಈ ಅಜ್ಞಾನದಿಂದ ಪಾರು ಮಾಡುವಾತ ಗುರು. ಗುರು ತನ್ನ ಶಿಷ್ಯನನ್ನು ಜ್ಞಾನಜ್ಯೋತಿಯೆದುರು ಕೂಡಿಸುತ್ತಾರೆ, ಆ ಜ್ಞಾನಜ್ಯೋತಿ ಅಜ್ಞಾನವೆಂಬ ಕತ್ತಲೆಯ ಕೂಪದಿಂದ ಶಿಷ್ಯನನ್ನು ಪಾರು ಮಾಡುತ್ತದೆ.

ಗುರುಗಳು, ಭಗವಂತನ ನುಡಿಗಳನ್ನು ಅಪಾರ್ಥ ಮಾಡುವದಿಲ್ಲ. ಭಗವಂತನ ನುಡಿಗಳನ್ನು ತಿರುಚದೇ, ಬದಲಾಯಿಸದೇ ಶಿಷ್ಯರಿಗೆ ಬೋಧಿಸುತ್ತಾರೆ. ವಿದ್ಯುತ್ತನ್ನು ಸೋರಿಸದೇ ಮುಂದೆ ಸಾಗಿಸುವ ವಿದ್ಯುತ್‌ ಕಂಬದಂತೆ. ಗುರು-ಶಿಷ್ಯ ಪರಂಪರೆಯಲ್ಲಿ ಸಾಗಿಬಂದ ಸಂದೇಶವನ್ನು ಗುರುವಾದವರು ಬದಲಾಯಿಸಬಾರದು. ಆದ್ದರಿಂದ ಗುರುವಾಣಿ ಎಂದರೆ ಭಗವಂತನ ವಾಣಿ ಎಂದೇ ಅರ್ಥ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೀಗೆ ಹೇಳುತ್ತಾನೆ... (4.2)

ಏವಂ ಪರಂಪರಾಪ್ರಾಪ್ತಮ್‌ ಇವಂ ರಾಜರ್ಷಯೋ ವಿದುಃ
ಸ ಕಾಲೇನೇಹ ಮಹತಾ ಯೋಗೋ ನಷ್ಟ ಃ ಪರಂತಪ ।।
‘ಹೀಗೆ ಈ ಪರಮ ವಿಜ್ಞಾನವು ಗುರುಶಿಷ್ಯ ಪರಂಪರೆಯ ಸರಣಿಯಲ್ಲಿ ಒಬ್ಬರಿಂದ ಒಬ್ಬರಿಗೆ ಸ್ವೀಕಾರವಾಗುತ್ತ ಬಂದಿದೆ. ರಾಜಋಷಿಗಳು ಅದನ್ನು ಹೀಗೆಯೇ ಆರ್ಥ ಮಾಡಿಕೊಂಡಿದ್ದಾರೆ. ಆದರೆ ಕಾಲಾನುಕ್ರಮದಲ್ಲಿ ಈ ಸರಣಿಯು ಭಗ್ನವಾಯಿತು. ಆ ವಿಜ್ಞಾನವು ನಷ್ಟವಾದಂತೆ ತೋರುತ್ತದೆ.’)

ಗುರುವನ್ನು ಪಡೆಯುವುದು ಹೇಗೆ?
ಗುರುವನ್ನು ಪಡೆಯುವುದು ಕೇವಲ ದೊಡ್ಡಸ್ತಿಕೆ ತೋರುವುದಕ್ಕಲ್ಲ. ಆಧ್ಯಾತ್ಮಿಕ ಜೀವನವನ್ನು ಅರಿತುಕೊಳ್ಳಲು ಗುರುವಿನ ಅಗತ್ಯವಿದೆ. ಆಧ್ಯಾತ್ಮಿಕ ಜೀವನ, ದೇವರು, ಸತ್ಕರ್ಮ ಮತ್ತು ದೇವರ ಜೊತೆಗಿನ ಸಂಬಂಧ ಅರಿತುಕೊಳ್ಳಲು ಗುರುವಿನ ಮಾರ್ಗದರ್ಶನ ಅತ್ಯಗತ್ಯ. ಜೀವನದ ದುಃಖಕ್ಕೆ ಕಾರಣಗಳನ್ನು ಹುಡುಕಾಡುವಲ್ಲಿ ಗುರು ಬೇಕೇ ಬೇಕು. ಅರ್ಜುನ ತನ್ನ ಗುರುವಾಗಿ ಶ್ರೀಕೃಷ್ಣನನ್ನು ಪಡೆದ ಹಾಗೆ, ನಾವೂ ಗುರುವನ್ನು ಪಡೆಯಬೇಕು.

ಭಗವದ್ಗೀತೆಯಲ್ಲಿ ಅರ್ಜುನ ವಿನೀತನಾಗಿ ಶ್ರೀಕೃಷ್ಣನಲ್ಲಿ ಶರಣಾಗತನಾಗುತ್ತಾನೆ.... (2.7)
ಕಾರ್ಪಣ್ಯದೋಷೋಪಹತ ಸ್ವಭಾವ ಪ್ರಚ್ಛಾಮಿ ತ್ವಾಂ ಧರ್ಮಸಮ್ಮೂಢ ಚೇತಾ
ಯಚ್ಛ್ರೇಯಃ ಸ್ಯಾನ್‌ ನಿಶ್ಚಿತಂ ಬ್ರೂಹಿ ತನ್ಮೇ ಶಿಷ್ಯಸ್ತೇಹಂ ಶಾಧಿ ಮಾಂ ತ್ವಾಂ ಪ್ರಪನ್ನಮ್‌ ।।

(‘ಈಗ ನನ್ನ ಕರ್ತವ್ಯವೇನೆಂದು ತಿಳಿಯದೇ ಗೊಂದಲಕ್ಕೀಡಾಗಿದ್ದೇನೆ. ನನ್ನ ದೌರ್ಬಲ್ಯದಿಂದಾಗಿ ಚಿತ್ತಶಾಂತಿಯನ್ನು ಕಳೆದುಕೊಂಡಿದ್ದೇನೆ. ಈ ಸ್ಥಿತಿಯಲ್ಲಿ ನನಗೆ ಅತ್ಯುತ್ತಮವಾದದ್ದು ಯಾವುದೋ ಅದನ್ನು ಸ್ಪಷ್ಟವಾಗಿ ಹೇಳಬೇಕೆಂದು ಕೇಳಿಕೊಳ್ಳುತ್ತೇನೆ. ಈಗ ನಾನು ನಿನ್ನ ಶಿಷ್ಯ, ನಿನಗೆ ಶರಣಾಗತನಾಗಿರುವ ಜೀವಾತ್ಮ. ದಯವಿಟ್ಟು ನನಗೆ ಉಪದೇಶ ನೀಡು.’)

ಇದು ಗುರುಗಳನ್ನು ಸ್ವೀಕರಿಸುವ ವಿಧಾನ. ಗುರುಗಳು ಭಗವಂತನ ಪ್ರತಿರೂಪವೇ ಆಗಿರುತ್ತಾರೆ. ‘ಯಸ್ಯ ಪ್ರಸಾದಾದ್‌ ಭಗವತ್‌ ಪ್ರಸಾದ’, ಎಂದರೆ ಗುರುಗಳ ಕ್ರಪೆಯಿಂದಲೇ ಮಾನವರಿಗೆ ಭಗವಂತನ ಅನುಗ್ರಹ ಲಭಿಸುತ್ತದೆ. ಆದ್ದರಿಂದ ಭಗವಂತನಿಗೆ ತೋರುವ ಗೌರವವನ್ನು ಗುರುಗಳಿಗೂ ತೋರಬೇಕು. ಹೀಗೆ, ನಾವು ನಿಜವಾದ ಗುರುಗಳಿಗೆ ಶರಣಾದರೆ, ಭಗವಂತನಿಗೆ ಶರಣಾದಂತೆಯೇ. ಗುರುಗಳಿಗೆ ನಾವು ಶರಣಾಗುವುದನ್ನು ಭಗವಂತ ಅನುಮೋದಿಸುತ್ತಾನೆ.

ಶ್ರೀಕೃಷ್ಣನ ಅನುಸಾರ...(18.66)
ಸರ್ವಧರ್ಮಾನ್‌ ಪರಿತ್ಯಜ್ಯ ಮಾಮ್‌ ಏಕಂ ಶರಣಂ ವ್ರಜ
ಅಹಂ ತ್ವಾಂ ಸರ್ವಪಾಪೇಭ್ಯೊ ಮೋಕ್ಷಾಯಷ್ಯಾಮಿ ಮಾ ಶುಚಃ ।।
(‘ಎಲ್ಲ ಬಗೆಯ ಧರ್ಮಗಳನ್ನು ಪರಿತ್ಯಜಿಸಿ ನನಗೆ ಮಾತ್ರ ಶರಣಾಗು, ನಿನ್ನನ್ನು ಸರ್ವ ಪಾಪಗಳಿಂದ ಮುಕ್ತನನ್ನಾಗಿ ಮಾಡುತ್ತೇನೆ. ಭಯಪಡಬೇಡ.’)

ದೇವರು ಎಲ್ಲಿದ್ದಾನೆ, ನಾನು ಅವನಿಗೆ ಶರಣಾಗುತ್ತೇನೆ ಎಂದು ವಾದಿಸಬಹುದು. ಆದರೆ ಮೊದಲು ದೇವರ ಪ್ರತಿನಿಧಿಯಾದ ಗುರುವಿಗೆ ಶರಣಾಗಬೇಕು. ಗುರುವಿಗೆ ಶರಣಾದರೆ, ಭಗವಂತನಿಗೇ ಶರಣಾದಂತೆ, ಅಂತಹ ಜೀವಿ ಭಯಪಡುವ ಯಾವದೇ ಕಾರಣಗಳೇ ಇಲ್ಲ. ಗುರುಗಳನ್ನು ಅರಸಿ ಬಳಿ ಸಾರುವುದು ಹೇಗೆಂದು ಶ್ರಿಕೃಷ್ಣನು ಹೇಗೆ ಹೇಳಿದ್ದಾನೆ... (4.34)

ತದ್‌ ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ
ಉಪದೇಕ್ಷಂತಿ ತೇ ಜ್ಞಾನಂ ಜ್ಞಾನಿನಸ್‌ ತತ್ವದರ್ಶಿನಃ ।।

(‘ಗುರುಗಳ ಬಳಿಗೆ ಹೋಗಿ ಸತ್ಯವನ್ನು ಅರಿಯಲು ಪ್ರಯತ್ನಿಸು. ಅವರಲ್ಲಿ ವಿನೀತನಾಗಿ ಪ್ರಶ್ನೆ ಕೇಳು, ಅವರಿಗೆ ಸೇವೆ ಸಲ್ಲಿಸು. ಆತ್ಮಸಾಕ್ಷಾತ್ಕಾರ ಪಡೆದ ಜೀವಿಯು ಜ್ಞಾನವನ್ನು ನೀಡಬಲ್ಲರು, ಏಕೆಂದರೆ ಅವರು ಸತ್ಯದರ್ಶನವನ್ನು ಮಾಡಿರುತ್ತಾರೆ.’)

ಹೀಗೆ ಗುರುವಾದವರು ಅಮರತ್ವವೆಂಬ ಪರಿಪೂರ್ಣ ಸ್ಥಿತಿಗಾಗಿ ಶಿಷ್ಯನನ್ನು ತಯಾರು ಮಾಡಬೇಕು, ಮಾರ್ಗದರ್ಶನ ಮಾಡಬೇಕು. ಶಿಷ್ಯನಾದವನು, ಗುರುವೇ ಭಗವಂತ ಎಂದು ತಿಳಿದು, ಅವರಲ್ಲಿ ಸಂಪೂರ್ಣ ಶರಣಾಗತನಾಗಬೇಕು.


ಗೀತಾ ಜಿಜ್ಞಾಸೆ
ಅರ್ಜುನನ ಧಾರ್ಮಿಕ ಪ್ರಜ್ಞೆಯೂ ವರ್ಣಸಂಕರವೂ
ಕೃಷ್ಣನನ್ನು ಗುರುವೆಂದು ಸ್ವೀಕರಿಸಿದ್ದೇ ತಪ್ಪಾಯಿತೇ


ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X