ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾವ ಅಶ್ವಿನಿ ದೇವತೆ ನನ್ನ ಮನಸ್ಸಿನ ಮಾತಿಗೆ ಅಸ್ತು ಎಂದಳೊ ಗೊತ್ತಿಲ್ಲ !

By Staff
|
Google Oneindia Kannada News

‘ದಿ ಒನ್‌’ ಅನ್ನೊದು ಒಂದು ಇಂಗ್ಲಿಷ್‌ ಫಿಲ್ಮ್‌ ಹೆಸರು, ಅದರಲ್ಲಿ ಜೆಟ್‌ ಲಿ ಅನ್ನೊ ಹೀರೊ ಡಬಲ್‌ ಅಕ್ಟಿಂಗ್‌ ಮಾಡಿದ್ದಾನೆ. ಒಬ್ಬ ಹೀರೊ ಇನ್ನೊಬ್ಬ ವಿಲನ್‌. ಇವರಿಬ್ಬರಲ್ಲಿ 23 ಜನರ ಶಕ್ತಿ ಹಂಚಿ ಹೋಗಿರುತ್ತದೆ. ಇಬ್ಬರೂ ಸಮಶಕ್ತಿಶಾಲಿ. ಫಿಲ್ಮ್‌ ಕೊನೆಯಲ್ಲಿ ವಿಲನ್ನನ್ನು ಸಾಯಿಸಲೇಬೇಕಾಗುತ್ತೆ. ಅದಕ್ಕಾಗಿ ಅವನನ್ನು ಯಾವುದೋ ಒಂದು ಬೇರೆ ಪ್ರಪಂಚಕ್ಕೆ ಕಳಿಸುತ್ತಾರೆ, ಅಲ್ಲಿ ನಮ್ಮಂತ ಮನುಷ್ಯರನ್ನು ತಿನ್ನೊ ದೊಡ್ಡ (ರಾಕ್ಷಸರಂತ) ಮನುಷ್ಯರು ಸಾವಿರಾರು ಜನ. ಅವರ ಮಧ್ಯೆ ಇವನೊಬ್ಬ. ಇವನು ಅಲ್ಲಿಗೆ ಹೋದಾಗ ಎಲ್ಲರೂ ಅವನನ್ನು ತಿನ್ನಲು ಬರುತ್ತಾರೆ. ಒಬ್ಬನನ್ನು ಸಾಯಿಸುತ್ತಾನೆ, ಇಬ್ಬರನ್ನು ಸಾಯಿಸುತ್ತಾನೆ, ಹೀಗೆ ಸುಮಾರು ಹತ್ತು ಹದಿನೈದು ಜನರನ್ನು ಸಾಯಿಸುತ್ತಾನೆ. ಕೊನೆಗೆ ಅಲ್ಲಿದ್ದ ಸಾವಿರಾರು ಜನ ಗುಂಪಾಗಿ ಬಂದಾಗ ಅವರ ಮಧ್ಯದಲ್ಲಿ ಇವನು ಕರಗಿ ಹೋಗುತ್ತಾನೆ.

ಅದನ್ನು ನೋಡಿದಾಗ ನನ್ನ ಮನಸ್ಸಿನಲ್ಲಿ ಈ ತರಹದ ಮನುಷ್ಯರು ಭೂಮಿಯ ಯಾವುದಾದರು ಭಾಗದಲ್ಲಿ ಇದ್ದಾರೆಯೆ ಅನ್ನಿಸುತ್ತಿತ್ತು. ಆಫ್ರಿಕಾಗೆ ಬಂದು ಇಲ್ಲಿಯ ಜನರನ್ನು ನೋಡಿದಾಗ ನನಗೆ ಜೆಟ್‌ ಲೀ ನೆನಪಾಗುತ್ತಾನೆ. ಜೆಟ್‌ ಲೀ ಅಂಥ ಜಟ್ಟಿಯನ್ನೇ ಮುಗಿಸಿದವರಿಗೆ ನನ್ನಂಥವನು ಯಾವ ಮೂಲೆ ಅನ್ನಿಸುತ್ತಿತ್ತು. ಪಾಪ, ಆಫ್ರಿಕಾದ ಜನ ಆ ತರಹದವರಲ್ಲವಾದರೂ ನನ್ನ ಮನಸ್ಸಿಗೆ ಏಕೊ ಅದೇ ಕಳವಳ. ಇವರ ಆಕೃತಿ ಮಾತ್ರ ಆ ರಾಕ್ಷಸ ಮನುಷ್ಯರಂತೆಯೆ ಇದೆ.

Robberyನಾನು ಇಲ್ಲಿಗೆ ಬಂದು 4 ತಿಂಗಳಾಗಿತ್ತು. ಇಲ್ಲಿಗೆ ಬಂದಾಗಿಂದ ರಾತ್ರಿ ಹೊತ್ತು ಹಾಗಿರಲಿ ಸಂಜೆ 6 ಘಂಟೆಯ ಮೇಲೆ ಒಬ್ಬನೆ ಹೊರಗೆ ಹೋಗುತ್ತಿರಲಿಲ್ಲ. ನಾನು ಆಫೀಸ್‌ ಮುಗಿಸಿ ನನ್ನ ಪರಿಚಯದವರ ಇಂಟರ್‌ನೆಟ್‌ ಕೆಫೆಗೆ ಹೋಗುತ್ತಿದ್ದೆ, ಅಲ್ಲಿ ಸ್ವಲ್ಪ ಹೊತ್ತು ಕಾಲ ಕಳೆದು ಕತ್ತಲಾಗುತ್ತಿದ್ದಂತೆ ಅವರನ್ನು ಕರದುಕೊಂಡು ಮನೆಯವರೆಗು ಬರುತ್ತಿದ್ದೆ. ಅವರು ನನ್ನನ್ನು ಬಿಟ್ಟು ವಾಪಸ್‌ ಹೋಗುತ್ತಿದ್ದರು. ಇದು ನನ್ನ ನಿತ್ಯ ದಿನಚರಿ ಆಗಿತ್ತು. ನನ್ನ ಪರಿಚಯದವರಿಗೆಲ್ಲಾ ಗೊತ್ತಿತ್ತು- ನಾನು ಎಷ್ಟು ಹೊತ್ತಿಗೆ ಎಲ್ಲಿ ಸಿಗುತ್ತೇನೆ ಎಂದು.

ನನಗೆ ಒಬ್ಬನೆ ಓಡಾಡಲು ಹೆದರಿಕೆ ಇದ್ದ ಕಾರಣ ನಾನು ದಿನಾ ಕೆಫೆಯಲ್ಲಿ ಇರುವವರನ್ನು ಮನೆಯವರೆಗೂ ಜೊತೆಗೆ ಕರದುಕೊಂಡು ಬರುತ್ತಿದ್ದೆ. ಅವರೂ ಅಷ್ಟೆ , ನನ್ನನ್ನು ಒಬ್ಬನೆ ಹೋಗಲು ಬಿಡುತ್ತಿರಲಿಲ್ಲ. ಇದಕ್ಕೆಲ್ಲಾ ಕಾರಣ ಇಲ್ಲಿನ ದರೋಡೆ ಮತ್ತು ಕಳ್ಳತನ. ಯಾವುದೇ ಸಂಕೋಚವಿಲ್ಲದೆ ದಾರಿಯಲ್ಲಿ ಹೋಗುವರನ್ನು ತಡೆದು ಅವರ ಹತ್ತಿರವಿರುವ ಹಣ, ಮೊಬೈಲ್‌ ಫೋನ್‌, ಒಡವೆಗಳನ್ನು ಕಸಿದುಕೊಂಡು ನಿರ್ಭೀತರಾಗಿ ಹೋಗುತ್ತಾರೆ. ಆದುದರಿಂದಲೆ ನಾನು ಭಯಪಟ್ಟುಕೊಳ್ಳುತ್ತಿದ್ದೆ. ಕೊಲೆ, ದರೋಡೆ, ಕಳ್ಳತನದ ಸಮಾಚಾರಗಳು ಇಲ್ಲಿಯವರಿಗೆ ‘ಊಟ ಆಯಿತ’ ಎಂದು ಕೇಳುವಷ್ಟೆ ನಿರಾಳ.

ನಾನು ಇಲ್ಲಿಗೆ ಬಂದು ಮೂರು ತಿಂಗಳಿಗೆ ಎಂಟು ಕಳ್ಳತನದ, ಎರಡು ಕೊಲೆಯ ಹಾಗು ನಾಲ್ಕು ದರೋಡೆಯ ಬಗ್ಗೆ ಕೇಳಿದ್ದೆ. ಅದರಲ್ಲಿ ಸುಮಾರು ನನಗೆ ಬಹಳ ಪರಿಚಯವಿರುವರಿಗೆ ಸಂಭವಿಸಿತ್ತು. ನಾನು ಕೆಲಸ ಮಾಡುವ ಕಂಪನಿಯ ಬಾಸ್‌, ಕಾರಿನಲ್ಲಿ ಹೊಗುತ್ತಿದ್ದಾಗ ಗನ್‌ ತೋರಿಸಿ ಅವರ ಹತ್ತಿರವಿದ್ದ 4000 ಡಾಲರ್‌ ಅಂದರೆ ಸುಮಾರು ಎರಡು ಲಕ್ಷ ರೂಪಾಯಿ ತೆಗೆದುಕೊಂಡು ಹೋಗಿದ್ದರು. ಆಗ ಸಮಯ ಮಧ್ಯಾನ್ಹ ಎರಡು ಘಂಟೆ, ಭಾನುವಾರ. ಅವರ ಹತ್ತಿರ ಕೂಡ ಗನ್‌ ಇತ್ತು, ಅವರು ಕಾರಿನ ಒಳಗಡೆ ಇದ್ದರು, ಮೈನ್‌ ರೋಡ್ನಲ್ಲಿ ಹೋಗುತ್ತಿದ್ದರು. ಆದರೂ ಐದು ಜನ ಗನ್‌ ತೋರಿಸಿ ಲೂಟಿ ಮಾಡಿದ್ದರು. ಇನ್ನೊಮ್ಮೆ ಇದೇ ರೀತಿ ಆದಾಗ ನಮ್ಮ ಬಾಸ್‌ ಗನ್‌ ತೆಗೆದು ಶೂಟ್‌ ಮಾಡಿದ್ದರು. ಇದೆಲ್ಲಾ ನನಗೆ ವಿಚಿತ್ರ ಎನ್ನಿಸುತ್ತಿತ್ತು.

ನನ್ನ ಸ್ನೇಹಿತ ಒಬ್ಬ ಇಲ್ಲಿಗೆ ಬಂದು ಒಂದು ತಿಂಗಳಾಗಿತ್ತು. ಅವನಿಗೆ ಮಾರ್ಕೆಟ್‌ ಪಕ್ಕದಲ್ಲಿ , ನೂರಾರು ಜನರು ಓಡಾಡುತ್ತಿರುವ ಜಾಗದಲ್ಲಿ ಆರು ಜನ ಬಂದು ಕುತ್ತಿಗೆ ಹಿಡಿದು ಕೈ ತಿರುಚಿ ಜೇಬಿನಲ್ಲಿದ್ದ ಸುಮಾರು ಡಾಲರ್‌, ಮೊಬೈಲ್‌ ಫೋನ್‌ ಕಿತ್ತುಕೊಂಡು ಹೋಗಿದ್ದರು. ಆಗ ಸಮಯ ಸಂಜೆ ಆರು ಘಂಟೆ. ಅದಾದ ವಾರಕ್ಕೆ ಅವನು ವಾಪಸ್‌ ತಮಿಳುನಾಡಿಗೆ ಯಾರಿಗೂ ಹೇಳದೆ ಕೇಳದೆ ಓಡಿ ಹೋಗಿದ್ದ. ಇಷ್ಟಾದರೂ ನನಗೆ ಯಾರನ್ನು ನೋಡಿದರೂ ಭಯ ಆಗುತ್ತಿರಲಿಲ್ಲ . ಕಾರಣ ನನ್ನನ್ನು ಯಾರು ಹಿಡಿದಿರಲಿಲ್ಲ ಹಾಗೂ ನಾನು ಅದಕ್ಕೆ ಆಸ್ಪದ ಕೊಟ್ಟಿರಲಿಲ್ಲ.

ಒಬ್ಬ ಕಳ್ಳ ಬಂದು ನನ್ನನ್ನು ಹಿಡಿದುಕೊಂಡು ನನ್ನ ಹತ್ತಿರ ಇರುವ ವಸ್ತುಗಳನ್ನೆಲ್ಲಾ ದೋಚುತ್ತಿದ್ದಾನೆ, ನಾನು ಏನೂ ಮಾಡಲಾಗುತ್ತಿಲ್ಲ. ಪಕ್ಕದಲ್ಲೆ ಸುಮಾರು ಜನ ಓಡಾಡುತ್ತಿದ್ದಾರೆ. ಯಾರನ್ನು ಕರೆಯಲಿ, ಏನೆಂದು ಹೇಳಲಿ ಎಂದು ಬಹಳ ಸಾರಿ ಯೋಚಿಸಿದ್ದೇನೆ. ಈ ತರಹ ಆದರೆ ನಾನು ಏನೂ ಮಾಡಲಾಗುವುದಿಲ್ಲವಲ್ಲ. ಭಾಷೆ ಬರುವುದಿಲ್ಲ, ಕೈಯಲ್ಲಿ ಗನ್‌ ಇಲ್ಲ, ಕೊನೆ ಪಕ್ಷ ಚಾಕು, ಅದೂ ಇಲ್ಲ. ಇಂಗ್ಲಿಷ್‌ನಲ್ಲಿ ಹೇಳೋಣ ಎಂದರೆ ಎಲ್ಲರಿಗು ಅದು ಅರ್ಥವಾಗುವುದಿಲ್ಲ. ಹಾಗಾಗಿ ನನಗೆ ನಾನೆ ಬಹಳ ನಿಸ್ಸಾಯಕ ಅನ್ನಿಸಿಬಿಟ್ಟಿತ್ತು. ರಾಜಕುಮಾರ್‌ ಹಾಡಿರುವ ‘ಹಾವ ಕಂಡ ಮೂಗನಂತೆ ಕೂಗಲಾರದೆ, ಕಾಡಿನೊಳು ಓಡುತಿರೆ ದಾರಿ ಕಾಣದೆ’ ಎಂಬ ಹಾಡು ಯಾವಾಗಲು ನೆನಪಿಗೆ ಬರುತ್ತಿತ್ತು. ಆದರೂ ನಾನು ಮನಸ್ಸಿನಲ್ಲಿಯೆ ಈ ತರಹದ ಒಂದು ಛ್ಡಿಟಛ್ಟಿಜಿಛ್ಞ್ಚಿಛಿ ಆಗಲಿ ಎಂದುಕೊಳ್ಳುತ್ತಿದ್ದೆ. ಯಾವ ಅಶ್ವಿನಿ ದೇವತೆ ನನ್ನ ಮನಸ್ಸಿನ ಮಾತಿಗೆ ಅಸ್ತು ಎಂದಳೊ ಗೊತ್ತಿಲ್ಲ, ಅದು ಸಂಭವಿಸಿಬಿಟ್ಟಿತು!

ಅವತ್ತು ಎಂದಿನಂತೆಯೆ ಆಫೀಸ್‌ ಕೆಲಸ ಮುಗಿಸಿ ಕೆಫೆಗೆ ಹೋದೆ. ಅಲ್ಲಿ ಅವರ ಜೊತೆಗೆ ಮಾತನಾಡಿ ಮನೆಗೆ ಹೊರಟೆ. ಆಗ ಸಂಜೆ ಆರು ಘಂಟೆ, ನಾನು ಹೊರಡುತ್ತಿದ್ದೆ . ಅಷ್ಟರಲ್ಲೆ ಕೆಫೆ ಅವರು ಒಂದು ಕಂಪ್ಯೂಟರ್‌ನಲ್ಲಿ ಏನೋ ಪ್ರಾಬ್ಲಂ ಬರುತ್ತಿದೆ ನೋಡು ಎಂದು ನನಗೆ ಹೇಳಿದರು. ನಾನು ಹೋಗಿ ಅಲ್ಲಿ ಕುಳಿತು ಅದನ್ನು ಸರಿಮಾಡಲು ನಿರ್ಧರಿಸಿದ್ದೆ.

ನನ್ನ ಬುದ್ಧಿಯೆ ಹಾಗೆ, ಕಂಪ್ಯೂಟರ್‌ ವಿಷಯದಲ್ಲಿ, ಸರಿಪಡಿಸುವವರೆಗೂ ಎದ್ದು ಹೋಗುತ್ತಿರಲಿಲ್ಲ. ಅದು ಯಾರದೇ ಕಂಪ್ಯೂಟರ್‌ ಆಗಿದ್ದರೂ ಸರಿ. ಈ ಬುದ್ಧಿ ನನಗೆ ಕಂಪ್ಯೂಟರ್‌ ಸರಿಪಡಿಸುವುದನ್ನು ಕಲಿತಾಗಿನಿಂದ ಬಂದಿತ್ತು. ಬೆಂಗಳೂರಲ್ಲಿ ಇದ್ದಾಗ ಎಷ್ಟೋ ರಾತ್ರಿಗಳನ್ನು ನಾನು ಕೆಟ್ಟುಹೋಗಿರುವ ಕಂಪ್ಯೂಟರ್‌ಗಳ ಜೊತೆಗೆ ಮೈಥುನಕ್ಕೆ ಬಿದ್ದವನ ಹಾಗೆ ಮುಗಿಯುವವರೆಗೂ ಏಳದೆ ಕುಳಿತು ಕಳೆದಿದ್ದೇನೆ. ಹಗಲೆಲ್ಲಾ ಸುತ್ತಾಡಿ ರಿಪೇರಿಗೆ ತಂದ ಕಂಪ್ಯೂಟರ್‌ಗಳ ಜೊತೆಗೆ Night Out ಮಾಡಿ ಸರಿಪಡಿಸಿದ್ದೇನೆ. ಹಾಗಾಗಿ ಅವತ್ತು ಅಲ್ಲಿ ಕುಳಿತು ಸರಿಪಡಿಸುತ್ತಾ ಘಂಟೆ 7:30 ಆಗಿತ್ತು. ಮನೆಗೆ ಹೋಗೋಣ ಎಂದು ಯೋಚಿಸಿ ನಾನು ಹೋಗುತ್ತೇನೆ ಎಂದು ಹೇಳಿ ಹೊರಟೆ. ನನ್ನನ್ನು ದಿನಾ ಬಿಟ್ಟು ಬರುತ್ತಿದ್ದ ಕೆಫೆಯ ಸೆಫು ಎನ್ನುವರು ಮಸೀದಿಯಲ್ಲಿ ಏನೋ ಫಂಕ್ಷನ್‌ ಇದೆ ಅಂತ ಹೋಗಿದ್ದರು. ಅವರ ಹೆಂಡತಿ, ನನ್ನ ಬಾಯಿ ಮಾತಿನ ಅಕ್ಕ, ‘ಅವರು ಬರುವ ತನಕ ಇಲ್ಲೆ ಇರು. ಅವರು ಬಂದಮೇಲೆ ನಿನ್ನನ್ನು ಬಿಟ್ಟುಬರುತ್ತಾರೆ’ ಎಂದು ಹೇಳಿದರು. ಅದೇನೊ ನನ್ನ ಮನಸ್ಸಿನಲ್ಲಿ ಕೆಟ್ಟ ಧೈರ್ಯ, ‘ಪರವಾಗಿಲ್ಲ ಒಬ್ಬನೆ ಹೋಗುತ್ತೇನೆ ಅಕ್ಕ’, ಎಂದು ಹೇಳಿ ನಾನು ಹೊರಟೆ. ಇಷ್ಟು ದಿನ ಏನೂ ಆಗದಿದ್ದುದು ಇವತ್ತು ಆಗಿಬಿಡುತ್ತಾ ಎಂದು ನನಗೆ ಏನೋ ಕಳವಳ.

ಕೆಫೆಯಿಂದ ಮನೆಗೆ ಸುಮಾರು ಮುನ್ನೂರು ಮೀಟರ್‌. ಕೆಲವು ಕಡೆ ಬೆಳಕು, ಕೆಲವು ಕಡೆ ಕತ್ತಲು, ಮತ್ತೆ ಉಳಿದ ಕಡೆ ಕಗ್ಗತ್ತಲು. ಹೀಗೆ ಮನೆಗೆ ಬರುತ್ತಿದ್ದೆ. ಕೊನೆಯ ತಿರುವು, ಅದರ ಪಕ್ಕದಲ್ಲೆ ಒಂದು ಬಾರ್‌. ಇನ್ನೊಂದು ಕಡೆ ಕಳ್ಳಿಯ ಕಾಂಪೌಂಡ್‌. ಇನ್ನೇನು ಮನೆಯ ಕಡೆ ತಿರುಗಬೇಕು, ದೂರ ದೂರ ಹೆಜ್ಜೆ ಹಾಕಿಕೊಂಡು ಬಂದಿದ್ದೆ.

ಅಷ್ಟರಲ್ಲಿ ನನ್ನ ಹಿಂದೆ ಒಬ್ಬ ಓಡಿ ಬಂದ, ಅವನನ್ನು ನೋಡಲು ತಿರುಗಿದೆ ಅಷ್ಟರಲ್ಲಿ ನನ್ನ ಕೊರಳಿಗೆ ಒಂದು ಕೈ ಸುತ್ತಿಕೊಂಡಿತ್ತು. ಇನ್ನೊಂದು ಕೈ ಕಾಣಿಸಿತು, ಅದರಲ್ಲಿ ಸುಮಾರು ನಾಲ್ಕು ಅಡಿ ಉದ್ದದ ಚಾಕು. ಏನಾಗುತ್ತಿದೆ ಎಂದು ತಿಳಿಯುವುದರೊಳಗೆ ಇನ್ನೊಬ್ಬ ಬಂದು ನನ್ನನ್ನು ದಬ್ಬಿ ಮತ್ತೆ ಅವನೆ ಹಿಡಿದುಕೊಂಡ. ಆ ಕಗ್ಗತ್ತಲಲ್ಲಿ ನನಗೆ ಅವರ ಮುಖ ಕಾಣಿಸುತ್ತಿರಲಿಲ್ಲ. ಅವರ ಕಣ್ಣು ಕೆಂಪಗಿತ್ತು. ನಾನು ಒಬ್ಬನನ್ನು ದೂಡಿದೆ, ಬಿತ್ತು ನೋಡಿ ಹಣೆಗೆ ಒಂದು. ಚಾಕುವಿನ ಅಗಲವಾದ ಭಾಗದಿಂದ ಹೊಡೆದಿದ್ದ. ಅವನ ಬಾಯಿಂದ ಹೆಂಡದ ವಾಸನೆ ಅವನ ಹೊಡೆತಕ್ಕಿಂತ ಜೋರಾಗಿ ಮೂಗಿಗೆ ತಾಗಿತ್ತು. ಕುಡಿದವನ ಹತ್ತಿರ ಜಗಳ ಸರಿ ಅಲ್ಲ ಎಂದು ಸುಮ್ಮನೆ ನಿಂತೆ. ಒಬ್ಬ ನನ್ನನ್ನು ಹಿಡಿದುಕೊಂಡಿದ್ದರೆ ಇನ್ನೊಬ್ಬ ನನ್ನ ಜೇಬಿಗೆ ಕೈ ಹಾಕಿ ಅದರಲ್ಲಿ ಇದ್ದ ದುಡ್ಡು, ಮೊಬೈಲ್‌ ಫೋನ್‌ ಹಾಗು ಕೆಲವು ಕಾಗದಗಳನ್ನು ತೆಗೆದುಕೊಂಡ. ಹಿಂದಿನ ಜೇಬಿನಲ್ಲಿ ನನ್ನ ಪರ್ಸ್‌ ಇಟ್ಟಿದ್ದೆ. ಅದರಲ್ಲಿ ನನ್ನ ಕೆಲವು ನೆನಪಿನ ಪತ್ರ, ಇಷ್ಟ ಪಡುವ ಕೆಲವು ವಸ್ತು, ಹಲವು ದೇಶದ ಕಾಯಿನ್‌ಗಳು. ಅದರ ಜೊತೆಗೆ ನನ್ನ ಸ್ನೇಹಿತರೊಬ್ಬರಿಗೆ ಕೊಡಲು ನೂರೈವತ್ತು ಡಾಲರ್‌ ಇಟ್ಟಿದ್ದೆ. ಅದ್ಯಾವುದೂ ಬಿಡದಂತೆ ಎಲ್ಲವನ್ನೂ ತೆಗೆದುಕೊಂಡು, ಅದೂ ಸಾಲದು ಎಂಬಂತೆ ಶರ್ಟಿನ ಜೇಬಿಗೆ ಕೈ ಹಾಕಿ ಅಲ್ಲಿದ್ದ ಕೆಲವು ಕಾಗದಗಳನ್ನು ತೆಗೆದು ಏನೋ ಹುಡುಕಿ ಅವೆಲ್ಲಾ ಬರಿ ಪೇಪರ್‌ ಎಂದು ತಿಳಿದ ಮೇಲೆ ವಾಪಸ್‌ ಇಟ್ಟು ನನಗೆ ಹೋಗಲು ಹೇಳಿದ. ನಾನು ಹೆದರಿದ್ದೆ, ಆದರೆ ಅವರು ಮಾತ್ರ ಏನೂ ಕಾತುರವಿಲ್ಲದೆ ನಿಧಾನವಾಗಿ, ನಿರ್ಭಯವಾಗಿ ಕತ್ತಲಲ್ಲಿ ಮಾಯವಾದರು.

ಹಗಲಲ್ಲಿ ನಾನು ಓಡಾಡುವಾಗಲೂ ಆ ಜಾಗಕ್ಕೆ ಬಂದಾಗ ಏನೋ ಹೆದರಿಕೆ, ಯಾರೇ ಬಂದರೂ ಅವರು ಕಳ್ಳರೇನೊ ಎಂಬ ಭಾವನೆ. ಯಾರನ್ನೇ ನೋಡಿದರೂ ಅವರು ನನ್ನನ್ನು ಹಿಂಬಾಲಿಸುತ್ತಿದ್ದಾರೆ ಎನ್ನುವ ಅನುಮಾನ. ಕರಿಯರ ಬಗ್ಗೆ ಕೀಳಾಗಿ ಮಾತನಾಡುವ ಅಭ್ಯಾಸ ಶುರುವಾಗಿತ್ತು. ನನಗಾದ ಅನುಭವ ಯಾರಿಗೆ ಹೇಳಿದರೂ ಅದನ್ನು ಬಹಳ ಸಾಮಾನ್ಯ ವಿಷಯದಂತೆ ಕೇಳುತ್ತಿದ್ದರು. ಮೊದಮೊದಲು ನಾನು ಎಲ್ಲರಿಗೂ ಹೇಳುತ್ತಿದ್ದೆ, ಆಮೇಲೆ ಅದನ್ನು ಹೇಳಿಯೂ ಉಪಯೋಗವಿಲ್ಲ ಎಂದು ಸುಮ್ಮನಾದೆ. ಆದರೂ ಮನಸ್ಸು ತಡೆಯಲಾಗದೆ ನಿಮ್ಮೊಂದಿಗೆ ಹೇಳಿಕೊಂಡೆ.


ಪ್ರಶಾಂತ್‌ ಬರವಣಿಗೆಯ ಇನ್ನೊಂದು ಸ್ಯಾಂಪಲ್‌
‘ನಾನು ಕಂಡಂತೆ ತಾನ್ಜಾನಿಯ’


ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X