• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಗ್ಗದ ಮಣಭಾರದ ಉಡುಗೊರೆ

By Staff
|

ನಗ್ಗದ ಮಣಭಾರದ ಉಡುಗೊರೆ

ಮದುವೆ ವಾರ್ಷಿಕೋತ್ಸವಕ್ಕೆ ಗಂಡ ಹೆಂಡತಿಗೆ ಏನೇನು ಉಡುಗೊರೆ ನೀಡಬಹುದು- ಬೆಳ್ಳಿ, ಬಂಗಾರ, ರೇಷ್ಮೆ ! ಉಹುಂ, ಇಲ್ಲಿಯ ನಾಯಕ ತನ್ನ ಪತ್ನಿಗೆ ನೀಡಿದ ಉಡುಗೊರೆ ಮಣಭಾರದ್ದು ಹಾಗೂ ಶಾಶ್ವತವಾದದ್ದು . ಅದು ಅಮರ ಮಧುರ ಪ್ರೇಮ !

  • ಆಹಿತಾನಲ (ನಾಗ ಐತಾಳ),

ಆರ್ಕೇಡಿಯ, ಕ್ಯಾಲಿಫೋರ್ನಿಯ

nagaaithal@yahoo.com

ಬಂದ ಅತಿಥಿಗಳೆಲ್ಲ ಊಟ ಮುಗಿಸಿ, ನಡು ರಾತ್ರಿಯವರೆಗೂ ಹರಟೆ ಹೊಡೆದು, ಅವರವರ ಮನೆಗೆ ಹೋಗಿಯಾಗಿತ್ತು. ನಮ್ಮ ಮಕ್ಕಳೂ ದಿಂಬಿಗೆ ಒರಗಿ ಗೊರಕೆ ಹೊಡೆಯುತ್ತಿದ್ದರು. ಆ ದಿನದ ಊಟೋಪಚಾರಗಳು ತುಂಬ ಚೆನ್ನಾಗಿ ನಡೆದಿತ್ತು. ನನ್ನಾಕೆ, ಲಕ್ಷ್ಮಿಯ ಅಡುಗೆಯಂತೂ ಅದ್ಭುತವಾಗಿತ್ತು. ಅದಕ್ಕೆಂದೇ ನಾನು ನನ್ನವಳಿಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತ ಹೇಳಿದೆ: ‘ಅಲ್ಲ ಕಣೇ.... ಈ ದಿನ ನಿನ್ನ ಅಡುಗೆಯ ಮೇಲೆ ಬೇರೆ ಮಾತೇ ಇಲ್ಲ. ಅಷ್ಟೊಂದು ಚೆನ್ನಾಗಿತ್ತು !’

‘ಅಬ್ಬಾ...! ಈಗಲಾದ್ರೂ ಬಂತಲ್ಲ ನಿಮ್ಮ ಬಾಯಲ್ಲಿ ಈ ಮಾತು, ಇಷ್ಟೊಂದು ದಿನಗಳ ಮೇಲೆ!’ ಎಂದು ಮೂದಲಿಸಿದಳು ನನ್ನಾಕೆ. ‘ಅದಿರಲಿ, ಸವಾರಿ ಸ್ವಲ್ಪ ಅಡುಗೆ ಮನೆ ಕಡೆ ಪ್ರಯಾಣ ಮಾಡಲಿ ನೋಡೋಣ. ಇದ್ದ ಪಾತ್ರೇನ ರಾತ್ರಿಯೇ ತೊಳ್ದಿಡೋಣ, ಇಬ್ಬರೂ ಸೇರಿ’

ಮಾತಿಲ್ಲದೆ ಹಿಂಬಾಲಿಸಿದೆ ಅವಳನ್ನು ಅಡುಗೆ ಮನೆ ಕಡೆಗೆ. ಅವಳು ಪಾತ್ರೆಗೆ ಸೋಪು ಹಚ್ಚಿ ಕೊಡುತ್ತಿದ್ದಂತೆ ನಾನು ಅದನ್ನು ತೊಳೆಯಲು ಶುರು ಮಾಡಿದೆ.

Naga Aithala‘ಇಲ್ಲಾ..., ಈ ಮೊದಲಾಗಿದ್ದರೆ, ಪಾತ್ರೆ ತೊಳೆಯುವುದಂತೂ ಬಿಡಿ, ಅಡುಗೆ ಮನೆಗೇ ಕಾಲಿಡುತ್ತಿರಲಿಲ್ಲ ನೀವು’ ಸೋಪು ಹಚ್ಚಿದ ಪಾತ್ರೆಯನ್ನು ನನ್ನ ಕೈಗೆ ಕೊಡುತ್ತ ಹೇಳಿದಳು ಲಕ್ಷ್ಮಿ.

‘ಸರಿ, ಇನ್ನೊಂದು ವಾದಕ್ಕೆ ಪೀಠಿಕೆಯೇ ಇದು?’

‘ನೋಡಿ..., ಅದೇನೋ ಗಾದೆ ಹೇಳ್ತಾರಲ್ಲ - ಕಂಡದ್ದನ್ನು ಕಂಡ ಹಾಗೆ ಹೇಳಿದರೆ ಕೆಂಡದಂತಹ ಕೋಪ - ಅಲ್ವಾ?’

‘ಈಗ ಕೋಪ ಮಾಡ್ಕೊಂಡಿರೋರು ಯಾರು ಮಹಾರಾಯ್ತಿ ? ದಿನ ಇಡೀ ಒಳ್ಳೆ ಸಂತೋಷದಿಂದ ಕಳೆದಿದ್ದೀವಿ. ಈಗ ಇಲ್ಲದ ವಾದ ಮಾಡಿ ಅದನ್ನ್ಯಾಕೆ ಕೆಡಿಸ್ಕೋಬೇಕು ಹೇಳು?’

‘ಅಲ್ರೀ.....! ನೀವು ಈಗಲಾದ್ರೂ ಮೆಚ್ಚಿದ್ರಲ್ಲಾ ಎಂತ ಹೊಗಳಿ ಹೇಳಿದ್ದು ನಾನು. ಅಪ್ಪ ! ಹಂಗೆ ಹೊಗಳೀದ್ರೂ ತಪ್ಪೇನ್ರೀ?’

‘ಸರಿ, ಸರಿ.... ಧಾರಾಳವಾಗಿ ಹೊಗಳಮ್ಮಾ. ನಾನೂ ಅಡುಗೆ ಚೆನ್ನಾಗಿತ್ತು ಅಂತ ಹೊಗಳೋಕೆ ಶುರು ಮಾಡಿದ್ದೆ. ಅಷ್ಟರಲ್ಲೇ ಅಮ್ಮಾವ್ರು ಮತ್ತೇನೋ ಶುರು ಮಾಡ್ಕೊಂಡ್ರಿ. ಅದೇ...., ಇವತ್ತಿನ ಬಿಸಿ ಬೇಳೆ ಬಾತು ಏನ್‌ ರು.....’ ಮಾತು ಮುಗಿಸುವಷ್ಟರೊಳಗೇ, ಆಕೆ ಸೋಪು ಹಚ್ಚಿ ಕೊಟ್ಟ ನಮ್ಮ ದೊಡ್ಡ pressure cookerನ ಮುಚ್ಚಳ ನನ್ನ ಕೈ ತಪ್ಪಿ ದೊಪ್ಪನೆ ಕೆಳಗೆ ಬಿತ್ತು.

‘ಅಯ್ಯೋ...! ಕಾಲ್ಮೇಲೆ ಬಿತ್ತೇ ? ನೋವಾಯ್ತೇ ? ಅದೊಂದು ಮಣಭಾರದ್ದು....’ ನನ್ನವಳು ಗಾಬರಿಯಾಗಿ ಒಂದೇ ಸಮನೆ ಬಡಿದು ಕೊಂಡಳು.

‘ಸದ್ಯ, ನನ್ನ ಕಾಲ ಮೇಲೆ ಬೀಳಲಿಲ್ಲ ! ಗಾಬ್ರಿ ಏನೂ ಇಲ್ಲ..... ಪಾತ್ರೆ ಏನಾದ್ರೂ ನಗ್ಗಿ ಹೋಯ್ತೇ, ನೋಡೋಣ’ ಎಂದೆ ಕೆಳಗೆ ಬಿದ್ದ ಪಾತ್ರೆ ಎತ್ತುತ್ತ.

‘ಅಯ್ಯೋ, ಅದಕ್ಕೇನು ದಾಡಿ ಬಿಡಿ! ಅದು ಶಾಶ್ವತವಾಗಿ ಉಳಿಯಲು ತಂದಿದ್ದಲ್ವೇ ನೀವು?’ ಎಂದು ಕುಹಕವಾಗಿ ಕೇಳಿದಳು ಅವಳು. ಮೂದಲಿಕೆಯ ಸ್ವರ ಎದ್ದು ಕೇಳಿಸುತ್ತಿತ್ತು ಆ ಮಾತಿನಲ್ಲಿ. ಆಗ ನನ್ನ ಮನಸ್ಸು ಹಲವು ವರ್ಷಗಳ ಹಿಂದೆ ನಡೆದ ಒಂದು ಸಂಗತಿಯನ್ನು ಮೆಲುಕಲು ಹೊರಟಿತು.

* * *

ನಮ್ಮ ಮದುವೆಯ ಮೊದಲ anniversary ದಿನ ಉಡುಗೊರೆಯಾಗಿ, ನಾನು ಆ ಮಣಭಾರದ pressure cookerನ್ನು ಕೊಂಡು ತಂದಿದ್ದುದು. ದಾಂಪತ್ಯ ಜೀವನದ ಮೊದಲ ದಿನಗಳ ಹರ್ಷದಿಂದ ಆ ಉಡುಗೊರೆ ಕೊಟ್ಟಿದ್ದೆ ಅವಳಿಗೆ. ಪ್ಯಾಕೆಟ್‌ ಒಡೆದ ಮೇಲೆ ಆಕೆಯ ಮುಖದಲ್ಲಿ ಹುಮ್ಮಸ್ಸು ಕಾಣ್ಲಿಲ್ಲ. ಆಡಂಬರದ ನಗುವಿನ ಹಿಂದೆ ನಿರಾಶೆಯ ಪ್ರತಿ ಚೆನ್ನಾಗಿ ಮೂಡಿತ್ತು. ಆದರೂ ನಾನು ಕೇಳಿದ್ದೆ: ‘ಹೇಗಿದೆ ? ಒಳ್ಳೆಯ ಗಟ್ಟಿ ಪಾತ್ರೆ. ಶಾಶ್ವತವಾಗಿ ಉಳಿಯುತ್ತೆ ! ಅದೇ ರೀತಿ ನಮ್ಮ ದಾಂಪತ್ಯವೂ ಶಾಶ್ವತವಾಗಿ ಉಳಿಯಲಿ ಎಂಬ sentimentನಿಂದ ಇದನ್ನು ಕೊಂಡು ತಂದೆ. ಏನು, ನಿನಗೆ ಇಷ್ಟವಾಗ್ಲಿಲ್ವೇ?’

‘ಚೆನ್ನಾಗಿದೆರೀ,..........ತುಂಬ ಥ್ಯಾಂಕ್ಸ್‌’ ಎಂಬ ಉಪಚಾರದ, ರಾಗ ತುಂಬಿದ ಮಾತು ಬಂತು ಅವಳಿಂದ. ಆದರೆ ನನಗೆ ಅವಳ ನಿರಾಶೆ ಸ್ವಲ್ಪ ಅಸಮಾಧಾನ ತಂದಿತ್ತು. ಆದರೆ ದಿನವೂ, ಬೇಳೆ ಕಾಳು, ಅನ್ನ, ತರಕಾರಿ ಎಲ್ಲವನ್ನೂ ಒಂದೇ ಬಾರಿ ಬೇಯಿಸಲು ಉಪಯೋಗಿಸಿ ತುಂಬ ಅನುಕೂಲ ಪಡೆಯುತ್ತಲಿದ್ದಳು ಎಂಬುದರಲ್ಲಿ ಸಂಶಯವಿರಲಿಲ್ಲ.

ಒಮ್ಮೆ, ಪಾತ್ರೆ ತೊಳೆಯುತ್ತ ಆ pressure cooker ನ ‘ಮಣಭಾರ’ದ ಮುಚ್ಚಳ ಕೈ ಜಾರಿ ಲಕ್ಷ್ಮಿಯ ಕಾಲ ಮೇಲೆ ಬಿತ್ತು. ಮೊನಚಾದ ಒಂದು ಬದಿ ಆಕೆಯ ಕಿರು ಬೆರಳಿಗೆ ತಾಗಿ ಗಾಯವಾಯ್ತು. ಅಡುಗೆ ಮನೆಯಿಂದಲೇ ಅವಳು ‘ಅಯ್ಯೋ....’ ಎಂದು ಚೀರಿದಳು. Living room ನಲ್ಲಿ ಟೀವಿ ನೋಡುತ್ತಿದ್ದ ನಾನು ‘ಏನಾಯ್ತೇ ?’ ಎಂದು ಕೇಳುತ್ತ ಅಡುಗೆ ಮನೆ ಕಡೆ ಧಾವಿಸಿದೆ. ಆದರೆ ಆಕೆ ಏನೂ ಹೇಳಬೇಕಾಗಿರಲಿಲ್ಲ. ನೆಲದ ಮೇಲೆ ಹರಡಿದ್ದ ರಕ್ತವೇ ಸಂಗತಿ ಸಾರುತ್ತಿತ್ತು. ಗಾಯ ಸಾಕಷ್ಟು ದೊಡ್ಡದಾಗಿದ್ದು, ಆಸ್ಪತ್ರೆಯಲ್ಲಿ ಹಲವು ಹೊಲಿಗೆಗಳನ್ನು ಹಾಕಬೇಕಾಗಿ ಬಂತು. ಮುಂದೆ ಕೆಲವು ದಿನ ಅವಳು ನೋವಿನಿಂದ ನರಳಿದಳು, ಪಾಪ!

ಇದಾದ ಕೆಲವು ದಿನಗಳ ಮೇಲೆ anniversary ದಿನ ಹೇಳಲಾಗದ ಅಸಮಾಧಾನವನ್ನು ನನ್ನಲ್ಲಿ ತೋಡಿಕೊಂಡಳು. ಆಗ ಅವಳ ಗಾಯ ಮಾಸಿದ್ದರೂ, ಅಸಮಾಧಾನದ ಕಲೆ ಮಾತ್ರ ಉಳಿದೇ ಇತ್ತು

‘ನೋಡಿ! ಅದೊಂದು ಮಣಭಾರದ pressure cooker! ಏನು ಮಹಾ ಎಂತ ಅದನ್ನು anniversary present ಆಗಿ ತಂದ್ರಿ ನೀವು? ನನ್ನ ಜೀವ ತೆಗೆಯುತ್ತಿತ್ತು ಅದು. ಎಲ್ಲ ಗಂಡಂದಿರು ಜರತಾರಿ ಸೀರೆ, ಬಂಗಾರದ romantic presents,ಇನ್ನಿತರ necklace,ಕೊಡ್ತಾರೆ. ನೀವೋ..... ಶಾಶ್ವತವಾಗಿ ಉಳಿಯ ಬೇಕಂತೆ! ಈಗ ಶಾಶ್ವತವಾಗಿ ಉಳಿಯುವುದು ಈ ಗಾಯದ scar ಅಷ್ಟೆ!’ ಅಂದಳು ಮಾಸಿದ್ದ ಗಾಯದ ಕಲೆ ತೋರಿಸುತ್ತ.‘ಅಲ್ವೇ.., ನೀನು ಅವತ್ತು ಅದನ್ನ ಸರಿಯಾಗಿ ಹಿಡ್ಕೊಂಡಿದ್ರೆ ಅದು ನಿನ್ನ ಕಾಲ ಮೇಲೆ ಬೀಳ್ತಾನೇ ಇರಲಿಲ್ಲ . ಯಾರ ತಪ್ಪಿಗೆ ಯಾರ್ಮೇಲೋ ಅಪರಾಧ! ನೀನು ಕೈ ಜಾರಿ ಬೀಳ್‌ಸ್ಕೋಂಡ್ರೆ ಅದು ನನ್ನ ತಪ್ಪೇ?‘ಅಬ್ಬಬ್ಬಾ..., ಈಗ ನನ್ಮೇಲೇ ತಪ್ಪು ಹಾಕ್ತೀರಾ?... ನೋಡಿ, ಈಗ ನಾವು ಮಾತಾಡ್ತಾ ಇರೋದು ನಿಮ್ಮ lack of romanceವಿಚಾರ. ಮಾತು ಹಾರ್ಸಿ, ನಂದೇ ತಪ್ಪು ಅಂತ ಮಾಡಿ, ಅದನ್ನೇ ದೊಡ್ಡ ಕೇಸ್‌ ಮಾಡ್ತಾ ಇದ್ದೀರಲ್ಲ ! ಏನ್‌ ಜಾಣ್ತನ ನಿಮ್ದು !’‘ಇದು ಒಳ್ಳೆ ಚೆನ್ನಾಗಿದೆ ನಿಂದು! ಈಗ ಜಾಣ್ತನ ಯಾರದ್ದು...? ಸರಿ, ಬಿಡು.... ನನ್ನಲ್ಲಿ romance ಇಲ್ಲ ಅಂತ ಒಪ್ಕೊತೀನಿ ಬಿಡು. ಇರ್ಲೀ..., ಇಷ್ಟೆಲ್ಲ ನಿಷ್ಠೂರದ ಮಾತು ಯಾಕೆ ಈಗ ? ನಿನ್ನ ಬುದ್ಧಿ ಏನಾದ್ರೂ ಕೆಟ್ಟಿದೆಯಾ?’

ನನ್ನ ನಾಲಿಗೆ ಕಚ್ಚಿ ಕೊಳ್ಳಬೇಕಾಗಿತ್ತು ! ಯಾಕೆಂದರೆ ಆ ಮಾತು ಹೇಳಿ ಅವಳ ಕೋಪಕ್ಕೆ ಇನ್ನಷ್ಟು ತುಪ್ಪ ಸುರಿದಂತಾಯ್ತು. ‘ಓಹೊಹೊ...! ಈಗ ನನ್ನ ಬುದ್ಧಿನೂ ಕೆಟ್ಟಿದೆ ಅಂತ ಮಾಡಿ ಹಾಕಿದ್ರಾ? ಆಗ್ಲಿ, ಆಗ್ಲಿ..., ಅದು ಯಾವಾಗ್ಲೂ ಕೆಟ್ಟೇ ಇರೋದು ನಿಮ್ಮ ದೃಷ್ಟಿಯಲ್ಲಿ ! ಈ ಮನೇಲಿ ಬುದ್ಧಿ ಸರಿಯಾಗಿ ಇರೋದು ನಿಮ್ಮೊಬ್ಬರಿಗೆ ಮಾತ್ರ! ಆದ್ರೆ, ಮನೇಲಿ ಕೆಲ್ಸ ಮಾಡೊಕೆ ಈ ಬುದ್ಧಿ ಇಲ್ಲದ ಹೆಂಡ್ತೀನೇ ಬೇಕು ನಿಮ್ಗೆ. ಹೆಂಡ್ತಿ ಅನ್ನೋದಕ್ಕೆ ಅಷ್ಟೇ ಬೆಲೆ ಕೊಡೋದು ನೀವು. ಆ ನಿಮ್ಮ ಸರಿಯಾದ ತಲೆ ಇಟ್ಕೊಂಡು. ಅಂತಹ ಯೋಚ್ನೆ ಮಾಡಿ..., ಮಾಡಿಯೇ ನಿಮ್ಮ ಆ ತಲೆ ಕೂದ್ಲೆಲ್ಲಾ ಉದ್ರಿ ಹೋಗಿದ್ದು. ( ಈ ಮಾತನ್ನ ಅವಳು ಖಂಡಿತ ಆಡ್ಬಾರದಾಗಿತ್ತು. ನನ್ನನ್ನು ಕೋಪ ಬರ್ಸೋದಕ್ಕೇ ಹೇಳಿದ್ದಲ್ಲವೇ ಅವಳು?) ಒಂದೇ ಒಂದು ಸಹಾಯವಿದೆಯೇ ನನಗೆ ಈ ಮನೇಲಿ ನಿಮ್ಮಿಂದ ? ಹೊತ್ತ್‌ಹೊತ್ತಿಗೆ ಊಟ ಮಾತ್ರ ನಿಮ್ಗೆ ಆಗ್ಲೇ ಬೇಕು. ಸಾಲ್ದಿದ್ದಕ್ಕೆ ಮಾಡಿದ ಅಡುಗೆ ಮೇಲೆ - ಇದಕ್ಕೆ ಉಪ್ಪು ಸಾಲದು, ಇದಕ್ಕೆ ಹುಳಿ ಕಮ್ಮಿ, ಇದಕ್ಕೆ ಮತ್ತೊಂದು ಊನ......- ಅಂತ complaints ಹೇಳೋಕೆ ಮಾತ್ರ ನಿಮ್ಮ ಆ ಸರಿ ಬುದ್ಧಿ ಎಂದಿಗೂ ಮರೆಯಾಲ್ಲ, ಅದೂ ಬಂದ ಅಷ್ಟೂ ಜನ್ರ ಮುಂದೆ!’

ಮಾತು ಮಾತಿಗೆ ಬೆಳೆಯುತ್ತ , ನಮ್ಮ ವಾದ ಸರಾಗವಾಗಿ ಮುಂದುವರಿಯುತ್ತಿತ್ತು. ಬೇಸತ್ತು ನಾನೆಂದೆ: ‘ಅಲ್ವೇ.., ಮಾತು ಎಲ್ಲಿಂದ ಎಲ್ಲಿಗೋ ಹಾರ್ತಾ ಇದೆ. ಇದೇ ರೀತಿ ಜಗ್ಳ ಆಡ್ತಿದ್ರೆ, ಮುಂದೆ ಬಹಳ ವಿಕೋಪಕ್ಕೆ ಹೋದೀತು! ಸ್ವಲ್ಪ ಸಮಾಧಾನ ತಂದ್ಕೋ ನೋಡೋಣ’

‘ಹೌದೌದು! ಈಗ ಸಮಾಧಾನವಂತೆ! ನಿಮಗೆ ಸಮಾಧಾನ ಅನ್ನೋದ್ರ ಅರ್ಥ ಏನಾದ್ರೂ ಗೊತ್ತಿದೆಯಾ? ಹಾಗಿದ್ರೆ ಈ ಜಗ್ಳ ಯಾಕೆ ಶುರು ಮಾಡ್ತಿದ್ರಿ? ಹೆಂಡ್ತಿ ಮೇಲೆ ಪ್ರೀತಿ ಹ್ಯಾಗೆ ತೋರಿಸ ಬೇಕೆಂದು ನಿಮಗೆ ಗೊತ್ತಿದ್ಯಾ? ಗೊತ್ತಿದ್ರೆ ಸಮಾಧಾನ ಅನ್ನೋದ್ರ ಅರ್ಥ ಅವಾಗ ತಿಳೀತಿತ್ತು! ದಿನಾ ಬೆಳ್ಗಾದ್ರೆ ನನ್ನ ಕಷ್ಟ ನನಗೇ ಗೊತ್ತು. ಈ ಮನೇಲಿ ಬೆಳಗಿಂದ ರಾತ್ರಿವರೆಗೂ ದುಡಿಯೋಕಿರೋದು ನಾನು! ಒಂದು vacation ಇದೆಯಾ ಈ ನನ್ನ ದುಡಿತಕ್ಕೆ? ..... ನೋಡಿ, ಆ ನೇಪರ್‌ವಿಲ್ಲ್‌ ನಲ್ಲಿ ಇರೋ ಭೀಮ ರಾಯ್ರು, ಹೆಂಡ್ತಿನ ಜೊತೆಲಿ ಕರ್ಕೊಂಡು, ಮಜ್ವಾಗಿ ಎರಡು ವಾರ ಯುರೋಪ್‌ ಎಲ್ಲ ಸುತ್ತ್ಕೊಂಡು ಬಂದ್ರು. ಅವ್ರ ಹೆಂಡ್ತಿ, ಕಲಾವತಿ ಎಷ್ಟೊಂದು ಪುಣ್ಯ ಮಾಡಿರ ಬೇಕು! ನನ್ನ ಪುಣ್ಯನೋ...... ಅದೇನ್‌ ಹೇಳ್ಲಿ....? ಹಮ್ಹ್‌ .... ಯುರೋಪ್‌ ಬಿಡಿ...... ಒಂದು mall ಗೆ ಹೋಗೋಣಾಂದ್ರೆ ನಿಮ್ಮ ಅವಸ್ಥೆ ನೋಡಿದ್ರೆ.... ಮೂರ್ಹೊತ್ತೂ ಕಾಸಿಲ್ಲಾ... ಕಾಸಿಲ್ಲಾ.... ಅಂತ ಆಕಾಶ ನೋಡ್ತಾ ಹಗ್ಲು ಹೊತ್ತಿನಲ್ಲೇ ನಕ್ಷತ್ರ ಎಣಸ್ತಾ ಇರ್ತೀರಿ!’

ಇದ್ಯಾಕೋ ಮಿತಿ ಮೀರಿ ಹೋಗ್ತಾ ಇದೆ ಅಂತ ಅನಿಸಿತು. ನನಗೂ ಕೊಂಚ್‌ ಕೋಪ ಬಂತು! (ಕೊಂಚ ಏನು? ಸ್ವಲ್ಪ ಜಾಸ್ತೀನೇ ಬಂತು; ಅದೇನೂ ಹೊಸದಲ್ಲ ಅನ್ನಿ!) ನಾನೂ ಸ್ವಲ್ಪ ಸ್ವರ ಏರಿಸಿ: ‘ಏನಿದು?.... ಬಾಯಿಗೆ ಬಂದ ಹಾಗೆ ಒಂದೇ ಸಮನೆ ಒದರುತ್ತಿದ್ದೀಯಲ್ಲ ! ಯುರೋಪ್‌ಗೆ ಹೋಗ್ಬೇಕು, ಬಂಗಾರ ಬೇಕು, ಜರ್ತಾರಿ ಸೀರೆ ಬೇಕು ಅಂತೆಲ್ಲ ಇದ್ದಿದ್ರೆ, ನೀನು ಅಂಥವ್ರನ್ನೇ ಮದ್ವೆ ಮಾಡ್ಕೊಬೇಕಾಗಿತ್ತು ! ಈ ದರಿದ್ರನ್ನ ಯಾಕೆ ಮದ್ವೆ ಮಾಡ್ಕೊಂಡೆ? ಅಷ್ಟಕ್ಕೂ ಈಗ ಆಗಿರೋದಾದ್ರೂ ಏನು? ಏನೋ... ಮಹಾ... ನರಕ ಯಾತನೆ ಅನುಭವಿಸುತ್ತಿರುವವರ ಹಾಗೆ ಮಾತಾಡ್ತಿಯಲ್ಲ......!

‘ಒಂದ್ತರದಲ್ಲಿ ಇದು ನರಕ ಯಾತನೆಯೇ! ’ ಸುಲಭದಲ್ಲಿ ಬಿಟ್ಟು ಕೊಡುವಳಲ್ಲ ಅವಳು! ಮಾತಿನಲ್ಲಿ ಅವಳನ್ನು ಸೋಲಿಸಲು ನನ್ನಿಂದ ಸಾಧ್ಯವೇ ಇಲ್ಲ. ಹಾಗೆಂತಲೇ, ನಾನು ಅಲ್ಲಿಂದ ದೂರ ಸರಿದೆ. ಅವಳ ‘ವಟ-ವಟ’ ಮಾತ್ರ ಇನ್ನೂ ಕೇಳಿಸುತ್ತಲೇ ಇತ್ತು.

ಇವೆಲ್ಲದರ ಪರಿಣಾಮವೆಂದರೆ, ಎರಡು ವಾರಕ್ಕೂ ಮೇಲೆ ನಮ್ಮಿಬ್ಬರೊಳಗೆ ಮಾತು-ಕತೆ ನಿಂತಿದ್ದು. ಮನೆಯೆಲ್ಲ ಆ ಸಮಯ ನಿಶಬ್ದ! ಇವೆಲ್ಲ ನಡೆದುದು ಹಲವು ವರ್ಷಗಳ ಹಿಂದೆ. ಇಂತಹ ಎಷ್ಟೋ ಜಗಳಗಳು ನಮ್ಮಿಬ್ಬರೊಳಗೆ ನಡೆಯುತ್ತಲೇ ಇತ್ತು. ಹಾಗೇ, ಅನೇಕ ಸಲ ನಮ್ಮಿಬ್ಬರೊಳಗೆ ಮಾತೂ ನಿಲ್ಲುತ್ತಿತ್ತು. ಇಲ್ಲದ ವೈಭವ, ಕೈಗೆ ಸಿಗಲಾರದ ಬಂಗಾರದ ಹಾರ, ಕೊಳ್ಳಲಾಗದ ಜರ್ತಾರಿ ಸೀರೆ, ಮಾಡಲಾಗದ vacation- ಹೀಗೆ ಎಟುಕಲಾರದ ಕನಸುಗಳನ್ನು ಅವಳೇಕೆ ಕಾಣುತಿದ್ದಾಳೆ ಎಂಬುದು ನನಗೆ ಅರ್ಥವಾಗುತ್ತಿರಲಿಲ್ಲ . ಅಂತೆಯೇ, ಅವಳನ್ನು ರೇಗಿಸಿ, ನನ್ನನ್ನೇ ಅಸಮಾಧಾನ ಪಡಿಸಿಕೊಳ್ಳುವುದರ ಕಾರಣ ನನಗೂ ಹೊಳೆಯುತ್ತಿಲ್ಲ. ಇವಕ್ಕೆಲ್ಲ ಅವಳೇ ಕಾರಣಳು ಎಂಬ ಆಲೋಚನೆ ಮಾತ್ರ ನನ್ನನ್ನು ಕಾಡುತ್ತಲೇ ಇದ್ದಿತ್ತು. ಆದರೆ, ಬರುತ್ತ ಬರುತ್ತ, ನಮ್ಮ ಸರಸ-ವಿರಸ-ಮೌನದ cycle ಗಳ frequency ವಿರಳವಾಗುತ್ತ ಬಂದಿದೆ. ಆಕೆಗೂ ಯುರೋಪ್‌ ಟ್ರಿಪ್ಪಿನ ಆಸೆ ಕಮ್ಮಿಯಾಗಿದೆ; ಬಂಗಾರದ ಮೇಲಿನ ಮೋಹ ಮಾಸುತ್ತಿದೆ. ನನಗೂ ಈಗೀಗ ಅವಳಲ್ಲಿ ನಗು, ಸಮಾಧಾನ ಕಾಣಿಸುತ್ತಿದೆ.

***

‘ನೋಡಿ....., ಈ pressure cooker ಬಗ್ಗೆ ನಮ್ಮಿಬ್ಬರಲ್ಲಿ ನಡೆದ ಜಗಳ ಜ್ಞಾಪಕವಿದೆಯೇ?’, ಎಂದು ನಮ್ಮ ದೀರ್ಘ ಮೌನವನ್ನು ಮುರಿದಳು ಲಕ್ಷ್ಮಿ.

‘ಎಲ್ಲಿ ಮರೆಯೋಕಾಗತ್ತೆ ? ಅದನ್ನೇ ನಾನೂ ಯೋಚಿಸ್ತಾ ಇದ್ದೆ. ಎಷ್ಟು ಸಿಲ್ಲಿ ಆಗಿತ್ತಲ್ವ ಆ ಜಗಳ?’

‘ಹೂಂ, ತುಂಬ ಸಿಲ್ಲಿಯಾಗಿ ವರ್ತಿಸಿದೆವು ಆವತ್ತು ! ನೀವು ಹೇಳಿದ್ದೂ ನಿಜಾರೀ! ನೋಡಿ...... ಈ pressure cookerಚೂರೂ ನಗ್ಗಲಿಲ್ಲ.’ ಅಬ್ಬಾ! ಇಷ್ಟೊಂದು ದಿನಗಳ ಮೇಲಾದ್ರೂ ಬಂತಲ್ಲ, ಅವಳ ಬಾಯಲ್ಲಿ ಈ ಮಾತು ಅಂತ ತುಂಬ ಸಂತೋಷ ಪಟ್ಟೆ.

ಈ ಹಲವು ವರ್ಷಗಳ ನಮ್ಮ ದಾಂಪತ್ಯ ಜೀವನದಲ್ಲಿ ಅವಳಲ್ಲಿ-ನನ್ನಲ್ಲಿ ಪರಿಣಮಿಸಿದ ಬದಲಾವಣೆಗಳನ್ನು ಗಮನಿಸುತ್ತ ಬಂದಿರುತ್ತೇನೆ. ಆಗಾಗ, ಪಾತ್ರೆ ತೊಳೆಯುವುದಕ್ಕೆ ಸಹಾಯ ಮಾಡುವೆನೆಂಬ ಸೋಗು ಹಾಕಿಕೊಂಡಾದರೂ, ಅಡುಗೆ ಮನೆ ಕಡೆ ಟ್ರಿಪ್‌ ಮಾಡುತ್ತಲಿದ್ದೇನೆ. ಅಲ್ಲದೆ, ಅವಳ ಹುಟ್ಟಿದ ಹಬ್ಬ, ನಮ್ಮ ಮದುವೆಯ anniversary ದಿನಗಳಲ್ಲಿ ಜರತಾರಿಯಲ್ಲದಿದ್ದರೂ, Devon street ನಿಂದ ನೈಲಾನ್‌ ಸೀರೆ ಅಥವಾ perfume ಮುಂತಾದ ಉಡುಗೊರೆ ಕೊಟ್ಟು, ಮನಸ್ಸಿನಲ್ಲೇ, ನನ್ನ romance ವ್ಯಕ್ತ ಪಡಿಸುತಿದ್ದೇನೆ ಎಂಬ ಹೆಗ್ಗಳಿಕೆ ಪಟ್ಟುಕೊಳ್ಳುತ್ತಲೂ ಇದ್ದೇನೆ.

ನಿಜ! ನಾನು ನಮ್ಮ ಮೊದಲ ಆ್ಯನಿವರ್ಸರಿ ದಿನ ಕೊಟ್ಟ ಉಡುಗೊರೆ ರೊಮ್ಯಾಂಟಿಕ್‌ ಆಗಿದ್ದಿರಲಾರದು. ಆದರೆ, ಅದೊಂದು ತೀರಾ ಸೆಂಟಿಮೆಂಟಲ್‌ ಉಡುಗೊರೆ ಎಂಬುದರಲ್ಲಿ ನನಗಿನ್ನು ಸಂಶಯವಿಲ್ಲ. ಇದುವರೆಗೂ ಆ ಪಾತ್ರೆ ನಗ್ಗದೆ ಉಳಿದಿದೆ. ನಾನು ಅಂದು ಹೇಳಿದ ಮಾತು ತಿರುಗಿ ಜ್ಞಾಪಕಕ್ಕೆ ಬಂತು. - ‘ಒಳ್ಳೆಯ ಗಟ್ಟಿ ಪಾತ್ರೆ; ಶಾಶ್ವತವಾಗಿ ಉಳಿಯುತ್ತದೆ; ಅದೇ ರೀತಿ ನಮ್ಮ ದಾಂಪತ್ಯವೂ ಶಾಶ್ವತವಾಗಿರಲಿ......’ ನನ್ನ ಬಯಕೆ ಇದುವರೆಗೂ ಕೂಡಿ ಬಂದಿದೆ. ಪಾತ್ರೆಯೂ ಹಾಳಾಗದೆ ದಿನವೂ ಉಪಯೋಗಕ್ಕೆ ಬರುತ್ತಿದೆ. ಮುಖ್ಯವಾಗಿ, ನಮ್ಮ ದಾಂಪತ್ಯ ಜೀವನ ಏರು-ಪೇರುಗಳನ್ನು ದಾಟಿ, ಸರಸ-ವಿರಸಗಳ ಮಧ್ಯೆ ಸಾಗುತ್ತ ಬಂದಿದೆ. ಇನ್ನು ಮುಂದೂ ಅದೇ ರೀತಿಯಲ್ಲಿ ನಡೆದುಕೊಂಡು ಬರುತ್ತದೆ ಎಂಬುದರಲ್ಲಿ ಚೂರೂ ಸಂದೇಹವಿಲ್ಲ. ಮತ್ತಿನ್ನೇನು ಬೇಕು ಈ ಬದುಕಿನಲ್ಲಿ ? ಆ ಕ್ಷಣದಲ್ಲಿ ನನ್ನ ಮನಸ್ಸಿಗೆ ಬಂತು (ಅಲ್ಲ ! ಜ್ಞಾನೋದಯವಾಯ್ತು!) - ನಾನೆಷ್ಟು ಅದೃಷ್ಟವಂತ ನನ್ನ ಲಕ್ಷ್ಮಿಯನ್ನು ಪಡೆದು - ಎಂದು. ಪರಿಣಾಮವಾಗಿ, ಹೃದಯ ತುಂಬಿ ಬಂದು, ಅವಳನ್ನು ಮಂದಹಾಸದಿಂದ ಕಣ್ತುಂಬಾ ನೋಡುತ್ತಿದ್ದೆ.

‘ಏನ್ರೀ..? ಹಾಗೆ, ಒಂದೇ.. ಸಮನೆ ನನ್ನ ದುರ-ದುರಾ ನೋಡ್ತಿದ್ದೀರಲ್ಲಾ...? ಏನ್‌ ಸಮಾಚಾರ ರಾಯ್ರೇ...’ ಎಂದು ವಯ್ಯಾರದಿಂದ ಕೇಳಿದಳು ನನ್ನವಳು.

‘ಏನಿಲ್ಲಾ ಅಮ್ಮಾವ್ರೇ.... ನೀವು ಇಷ್ಟೊಂದು ಚೆನ್ನಾಗಿ ಕಾಣಿಸ್ತಿದ್ದೀರಲ್ಲಾ ಅಂತ ಅದನ್ನೇ ನನ್ನ ಕಣ್ಣಿಂದ ಹೀರ್ಕೊಳ್ತಾ ಇದೀನಿ, ಅಷ್ಟೆ !’ ಎಂದು ಹೇಳುತ್ತ, ರೋಮ್ಯಾಂಟಿಕ್‌ ನಗು ನಗುತ್ತ , ಆಕೆಯ ತುಟಿಯ ಮೇಲೆ ಮೂಡಿದ ಮಂದಹಾಸವನ್ನು ತುಟಿಯಿಂದ ಜಾರಿ ಬೀಳದಂತೆ ಅವಸರದಲ್ಲಿ ಹಿಡಿದೆ.

***

ಪಿ. ಎಸ್‌ : (ಮತ್ತೆ ಸೇರಿಸಿದ ಮಾತು; ಡಿಕ್ಲೇರೇಷನ್‌ ಅಂದರೂ ಅನ್ನಿ!): ಇಲ್ಲಿ ‘ನಾನು’ ಎಂದು ಹೇಳಿಕೊಂಡಿರುವ ವ್ಯಕ್ತಿ ಖಂಡಿತ ನಾನಲ್ಲ ; ಅಂತೆಯೇ ಇಲ್ಲಿ ಬರುವ ‘ಲಕ್ಷ್ಮಿ’ಯೂ ನನ್ನ ಧರ್ಮ ಪತ್ನಿ ಲಕ್ಷ್ಮಿ ಅಲ್ಲ. ಏನಾದರೂ ಹೋಲಿಕೆಗಳು ಕಂಡು ಬಂದಲ್ಲಿ ಅದು ತೀರ ಆಕಸ್ಮಿಕವೆಂದೇ ತಿಳಿಯಬೇಕು. ಆದುದರಿಂದ, ನಾನು, ಅಂದರೆ, ನಾಗ ಐತಾಳ (ಆಹಿತಾನಲ), ಮತ್ತು ಲಕ್ಷ್ಮಿ (ನನ್ನ ಹೆಂಡತಿ) ಈ ಲೇಖನದಲ್ಲಿ ವಿವರಿಸಿದ ಸನ್ನಿವೇಶಗಳಲ್ಲಿ ಭಾಗಿಗಳಲ್ಲವೆಂದೂ, ಆ ಬಗ್ಗೆ ಯಾವ ರೀತಿಯಲ್ಲೂ ಜವಾಬ್ದಾರರಲ್ಲವೆಂದೂ ಅಧಿಕೃತವಾಗಿ ಹೇಳುತ್ತಲಿದ್ದೇನೆ.)

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X