• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಕ್ಷ್ಮಿ ಚಂದ್ರಶೇಖರ್‌ ಅವರ ‘ಇವಳೊಬ್ಬ ಹುಡುಗಿ’ ಏಕ ವ್ಯಕ್ತಿ ನಾಟಕ ಕಣ್ತುಂಬಿಕೊಂಡಿರುವ ಅಮೆರಿಕನ್ನಡಿಗರಿಗೆ ಈಗ ಕಂಬಾರರ ‘ಸಿಂಗಾರೆವ್ವ...’ನ ನೋಡುವ ಅವಕಾಶ. ಮೇ 25ನೇ ತಾರೀಕು ಬಿಡುವು ಮಾಡಿಕೊಳ್ಳಿ.

By Prasad P Naik
|

* ದಟ್ಸ್‌ಕನ್ನಡ ಬ್ಯೂರೊ

ಚಂದ್ರಶೇಖರ ಕಂಬಾರರ ‘ಸಿಂಗಾರೆವ್ವ ಮತ್ತು ಅರಮನೆ’ ಕಾದಂಬರಿ ಈಗಾಗಲೇ ಸಿನಿಮಾ ಆಗಿ ತೆರೆಕಂಡು, ಸೋತಿದ್ದೂ ಆಗಿದೆ. ಅದು ಯಾಕೆ ಸೋತಿತು ಅಂತ ಟಿ.ಎಸ್‌.ನಾಗಾಭರಣ ಕಾರಣ ಸಮೀಕ್ಷೆ ಮಾಡುತ್ತಿರುವ ಈ ಹೊತ್ತಲ್ಲಿ ಬೆಂಗಳೂರಿನ ರಂಗಕರ್ಮಿ ಹಾಗೂ ಎನ್‌ಎಂಕೆಆರ್‌ವಿ ಕಾಲೇಜು ವಿದ್ಯಾರ್ಥಿನಿಯರ ಮೆಚ್ಚಿನ ಇಂಗ್ಲಿಷ್‌ ಮೇಡಂ ಲಕ್ಷ್ಮಿ ಚಂದ್ರಶೇಖರ್‌ ಇದೇ ಕಾದಂಬರಿಯನ್ನು ಏಕ ವ್ಯಕ್ತಿ ನಾಟಕವಾಗಿ ಅಮೆರಿಕೆಯಲ್ಲಿ ಪ್ರದರ್ಶಿಸಲಿದ್ದಾರೆ.

ಮೇ ತಿಂಗಳು 25ನೇ ತಾರೀಕು ಶ್ರೀ ಶಿವ ವಿಷ್ಣು ದೇವಳದ ಸಭಾ ಮಂದಿರದಲ್ಲಿ ಸಂಜೆ 5.30ಕ್ಕೆ ಸರಿಯಾಗಿ ಏಕ ವ್ಯಕ್ತಿ ನಾಟಕ ಪ್ರದರ್ಶನವಿದೆ. ಕಾವೇರಿ ಕನ್ನಡ ಸಂಘ ಹಾಗೂ ಶ್ರೀ ಶಿವ ವಿಷ್ಣು ದೇವಳ ಜಂಟಿಯಾಗಿ ಈ ನಾಟಕ ಆಯೋಜಿಸಿವೆ. ನೀನಾಸಂ ಸಾಣೆಯಲ್ಲಿ ಪ್ರತಿಭೆ ಪಳಗಿಸಿಕೊಂಡಿರುವ ಸೌಮ್ಯ ವರ್ಮಾ ‘ಸಿಂಗಾರೆವ್ವ ಮತ್ತು ಅರಮನೆ’ ಏಕ ವ್ಯಕ್ತಿ ನಾಟಕವನ್ನು ನಿರ್ದೇಶಿಸಿದ್ದಾರೆ.

ನಾಟಕ ನಡೆಯುವ ಜಾಗದ ಪೂರ್ಣ ವಿಳಾಸ- Sri Siva Vishnu Temple, 6905 Cipriano Road, Lanham, MD 20706. ನೋಡಿ- http://www.ssvt.org.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ-

Sanjay Rao 7034423316 or Harish Hiremath 3013609951 or e- mail at kaveri@kaveriusa.org.

ಏನೇನಿದೆ ಈ ಸಿಂಗಾರೆವ್ವನಲ್ಲಿ ?

ಉತ್ತರ ಕರ್ನಾಟಕದ ಒಂದು ಹಳ್ಳಿಯ ಊಳಿಗಮಾನ್ಯ ವ್ಯವಸ್ಥೆಯಲ್ಲಿ ಹೆಣ್ಣಿನ ತಾಕಲಾಟಗಳನ್ನು ಎಳೆಎಳೆಯಾಗಿ ಬಿಚ್ಚಿಡುವ ಕತೆ ‘ಸಿಂಗಾರೆವ್ವ ಮತ್ತು ಅರಮನೆ’ಯಲ್ಲಿದೆ. ಪುರುಷ ಪೌರುಷದ ಪೂರ್ವಾಗ್ರಹದ ಕಾರಣ ಹೆಂಡತಿಯರು, ಅಮ್ಮಂದಿರು, ಹೆಣ್ಣು ಮಕ್ಕಳು ಒಂದಲ್ಲ ಒಂದು ರೀತಿಯಲ್ಲಿ ಗಂಡಸರ ಶೋಷಣೆಗೆ ಸಿಲುಕುತ್ತಾರೆ. ಸಾಲದ್ದಕ್ಕೆ ಸಾಮಾಜಿಕ ಕಟ್ಟಳೆಗಳ ಕಾಟ, ಮೌಢ್ಯದ ಭೂತ. ಒಳ್ಳೆಯ ಹೆಂಡತಿ ಹಾಗೂ ಅಮ್ಮನಾಗುವ ಕನಸು ಈಡೇರದೆ, ಸಮಾಜದಿಂದ ಬಂಜೆ ಎಂಬ ಮೂದಲಿಕೆಗೆ ಗುರಿಯಾಗುವ ಸುಂದರ ಹಾಗೂ ಸೂಕ್ಷ್ಮ ಹೆಂಗಸು ಸಾಕಷ್ಟು ತಾಕಲಾಟಗಳನ್ನು ಅನುಭವಿಸುತ್ತಾಳೆ. ಕೊನೆಗೆ ಆಕೆಯ ಹತಾಶೆಯ ಪರಾಕಾಷ್ಠೆ ತನ್ನ ವಿರುದ್ಧ ಹಲ್ಲುಮಸೆದ ಗಂಡಸರ ವಿರುದ್ಧವೇ ಬಂಡೆದ್ದು, ಸೇಡು ತೀರಿಸಿಕೊಳ್ಳುವಂತಾಗುತ್ತದೆ.

ಇಂಥಾ ಕಾದಂಬರಿಯನ್ನು ಏಕ ವ್ಯಕ್ತಿ ನಾಟಕಕ್ಕೆ ಅಳವಡಿಸಿರುವುದು ಹರ ಸಾಹಸವೇ ಸರಿ. ವಿವಿಧ ನಟನಾ ಶೈಲಿ, ತಂತ್ರಗಳು, ಬಣ್ಣಬಣ್ಣದ ಉಡುಗೆ, ಸಂಗೀತ- ಇವೆಲ್ಲವುಗಳನ್ನು ಸಮರ್ಥವಾಗಿ ಬಳಸಿಕೊಂಡು, ವೇದಿಕೆ ಮೇಲೆ ಒಬ್ಬೇ ಒಬ್ಬ ಹೆಂಗಸು ನಿಂತು ಇಡೀ ಕತೆಯನ್ನು ಪ್ರೆಕ್ಷಕರಿಗೆ ಮನವರಿಕೆ ಮಾಡಿಸುವ ಸವಾಲನ್ನು ಲಕ್ಷ್ಮಿ ಚಂದ್ರಶೇಖರ್‌ ಸ್ವೀಕರಿಸಿ, ಈಗಾಗಲೇ ಗೆದ್ದಿದ್ದಾರೆ.

ನವೆಂಬರ್‌ 2001ರಲ್ಲಿ ಮೈಸೂರಿನಲ್ಲಿ ನಡೆದ ‘ದಿ ನ್ಯಾಷನಲ್‌ ವುಮೆನ್ಸ್‌ ಥಿಯೇಟರ್‌ ಫೆಸ್ಟಿವಲ್‌’ನಲ್ಲಿ ಮೂಲ ಕನ್ನಡ ರೂಪದ ನಾಟಕದ 10 ಪ್ರದರ್ಶನಗಳನ್ನು ಲಕ್ಷ್ಮಿ ಚಂದ್ರಶೇಖರ್‌ ಕೊಟ್ಟರು. ಪ್ರೇಕ್ಷಕರು ನಾಟಕವನ್ನು ಮನಸಾರೆ ಮೆಚ್ಚಿಕೊಂಡರು. ಪ್ರಸ್ತುತ ನಾಟಕವನ್ನು ಇಂಗ್ಲಿಷ್‌ ರೂಪಕ್ಕೆ ಅಳವಡಿಸುವ ಕಾರ್ಯವೂ ನಡೆಯುತ್ತಿದ್ದು, ಬರುವ ಅಕ್ಟೋಬರ್‌ನಲ್ಲಿ ಇಂಗ್ಲೆಂಡಿನಲ್ಲಿ ನಾಟಕದ ಪ್ರಯೋಗ ನಡೆಯುವ ನಿರೀಕ್ಷೆಯಿದೆ.

ತೊಂಬತ್ತು ನಿಮಿಷ ಅವಧಿಯ ನಾಟಕದ ಸರಿ ಸುಮಾರು ಒಂದು ಡಝನ್ನು ಪಾತ್ರಗಳನ್ನು ಲಕ್ಷ್ಮಿ ಒಬ್ಬರೇ ಆಡಿ ತೋರುತ್ತಾರೆ.

ಕಲಾವಿದೆ ಲಕ್ಷ್ಮಿ ಚಂದ್ರಶೇಖರ್‌- ಒಂದು ಟಿಪ್ಪಣಿ

Lakshmi Chandrashekharಮೂವತ್ತು ವರ್ಷಗಳ ಕಾಲ ರಂಗ ಜಗತ್ತಿನಲ್ಲಿ ಅನುಭವ ಮೊಗೆದುಕೊಂಡಿರುವ ಲಕ್ಷ್ಮಿ ಚಂದ್ರಶೇಖರ್‌, ‘ಸಮುದಾಯ’ ತಂಡದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಸಾಮಾಜಿಕ ಬದಲಾವಣೆಯ ವಸ್ತುಗಳಿರುವ ನಾಟಕವನ್ನು ಹೆಚ್ಚಾಗಿ ನಿರ್ಮಿಸಿರುವ ‘ಸಮುದಾಯ’ದ ಅನೇಕ ನಾಟಕಗಳ ಮುಖ್ಯ ಪಾತ್ರಗಳಲ್ಲಿ ಮಿಂಚಿದ್ದಾರೆ. ದೂರದರ್ಶನದಲ್ಲಿ ಪ್ರಸಾರವಾದ ಟಿ.ಎನ್‌.ಸೀತಾರಾಂ ನಿರ್ದೇಶನದ ‘ಮಾಯಾಮೃಗ’ ಧಾರಾವಾಹಿಯ ಕಮಲು ಪಾತ್ರದ ಮೂಲಕ ಮನೆಮಾತಾದ ಲಕ್ಷ್ಮಿ ಚಂದ್ರಶೇಖರ್‌ ಅವರ ಒಳಗಿನ ಕಲಾವಿದೆಯ ಶಕ್ತಿ ಜನ ಮನ ಮುಟ್ಟಿದ್ದು ‘ಗೃಹಭಂಗ’ ಧಾರಾವಾಹಿಯಲ್ಲಿ. ಭೈರಪ್ಪನವರ ಕಾದಂಬರಿ ಆಧರಿಸಿದ ಈ ಧಾರಾವಾಹಿಯ ನಿರ್ದೇಶಕ ಸ್ವರ್ಣ ಕಮಲ ಬುಟ್ಟಿಗೆ ಹಾಕಿಕೊಂಡಿರುವ ಗಿರೀಶ್‌ ಕಾಸರವಳ್ಳಿ. ಈ- ಟಿವಿಯಲ್ಲಿ ಪ್ರತಿ ಶನಿವಾರ ರಾತ್ರಿ 9 ಗಂಟೆಗೆ ಈ ಧಾರಾವಾಹಿ ಪ್ರಸಾರವಾಗುತ್ತಿದ್ದು, ಭಲೆ ಮೆಚ್ಚುಗೆ ಪಡೆದಿದೆ.

ಲಕ್ಷ್ಮಿ ಕಲಾವಿದೆಯಷ್ಟೇ ಅಲ್ಲ. ಎನ್‌ಎಂಕೆಆರ್‌ವಿ ಕಾಲೇಜು ವಿದ್ಯಾರ್ಥಿನಿಯರ ಮೆಚ್ಚಿನ ಇಂಗ್ಲಿಷ್‌ ಪಾಠ ಹೇಳುವ ಮೇಡಂ. ಕನ್ನಡದ ಅನೇಕ ಸಣ್ಣಕತೆಗಳನ್ನು ಇಂಗ್ಲಿಷ್‌ಗೆ ಸಮರ್ಥವಾಗಿ ಅನುವಾದಿಸಿರುವ ಅಗ್ಗಳಿಕೆ ಪಡೆದಿರುವ ಈಕೆ ತನ್ನದೇ ಆದ ‘ಇವಳೊಬ್ಬ ಹೆಂಗಸು’ ಎಂಬ ಏಕ ವ್ಯಕ್ತಿ ನಾಟಕವನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ‘ಜಸ್ಟ್‌ ಎ ವುಮೆನ್‌’ ಎಂಬ ಈ ಅನುವಾದಕ್ಕೂ ಅನೇಕರು ಬೆನ್ನು ತಟ್ಟಿದ್ದಾರೆ. ‘ಸಿಂಗಾರೆವ್ವ ಮತ್ತು ಅರಮನೆ’ಯನ್ನೂ ಇಂಗ್ಲಿಷ್‌ಗೆ ಅನುವಾದ ಮಾಡಿದ್ದು, ಅದು ‘ಕಥಾ’ದಲ್ಲಿ ಇತ್ತೀಚೆಗೆ ಪ್ರಕಟವಾಗಿತ್ತು. ‘ದಿ ಹಿಂದೂ’ ಇಂಗ್ಲಿಷ್‌ ಪತ್ರಿಕೆಯಲ್ಲಿ ರಂಗ ಚಟುವಟಿಕೆಗಳನ್ನು ಕುರಿತು ಪ್ರತಿ ವಾರ ಅಂಕಣವನ್ನೂ ಲಕ್ಷ್ಮಿ ಬರೆಯುತ್ತಾರೆ. ನಾಟಕ ಮತ್ತು ಸಾಹಿತ್ಯ ಕುರಿತು ಹಲವಾರು ಲೇಖನಗಳನ್ನು ಬರೆದಿರುವ ಲಕ್ಷ್ಮಿ ಚಂದ್ರಶೇಖರ್‌, ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆಯ ಸಚಿವೆ ಪ್ರೊ.ಬಿ.ಕೆ.ಚಂದ್ರಶೇಖರ್‌ ಈಕೆಯ ಪತಿ. ಇಬ್ಬರು ಮಕ್ಕಳ ಪುಟ್ಟ ಮುದ್ದಿನ ಅಮ್ಮನಾದ ಈಕೆ, ಹಲವು ವಿದ್ಯಾರ್ಥಿನಿಯರ ಮೆಚ್ಚಿನ ಟೀಚರ್ರೂ ಹೌದು.

ಸೌಮ್ಯ ವರ್ಮಾ ನಿಮಗೆ ಗೊತ್ತೆ ?

ಹೆಗ್ಗೋಡಿನ ನೀನಾಸಂ ರಂಗ ಸಂಸ್ಥೆಯಲ್ಲಿ ಪದವಿ ಪಡೆದಿರುವ ಸೌಮ್ಯ ವರ್ಮಾ , ಅನೇಕ ರಂಗ ನಿರ್ದೇಶಕರು ಮತ್ತು ಕಲಾವಿದರ ಜತೆ ಸಹಾಯಕಿಯಾಗಿ ಕೆಲಸ ಮಾಡಿದ್ದಾರೆ. ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ನಾಟಕಗಳನ್ನು ನಿರ್ದೇಶಿಸಿದ ಅನುಭವ ಇರುವಾಕೆ ಸೌಮ್ಯ. ಬೆಂಗಳೂರು ಹಾಗೂ ಮದ್ರಾಸ್‌ನ ವಿದ್ಯಾರ್ಥಿಗಳು ಸೌಮ್ಯ ಅವರಿಂದ ರಂಗ ತರಪೇತಿ ಪಡೆದಿದ್ದಾರೆ. ಇವರು ನಿರ್ದೇಶಿಸಿದ ಅನೇಕ ನಾಟಕಗಳಿಗೆ ಪ್ರಶಸ್ತಿಗಳು ಸಿಕ್ಕಿವೆ. ನಾಟಕ ನಿರೂಪಣೆಯಲ್ಲಿ ತೀವ್ರತೆ ಹಾಗೂ ಸಣ್ಣ ಸಣ್ಣ ವಿವರಗಳನ್ನೂ ಸಮರ್ಥವಾಗಿ ಹಿಡಿದಿಡಬಲ್ಲ ಛಾತಿಗೆ ಸೌಮ್ಯ ಹೆಸರುವಾಸಿ. ಸದ್ಯಕ್ಕೆ ಈಕೆ ಸಿಂಗಪೂರ್‌ನ ಲಾ ಸಲ್ಲೆ ಎಸ್‌ಐಎ ಕಲಾ ಶಾಲೆಯಲ್ಲಿ ನಾಟಕ ಪಾಠ ಮಾಡುತ್ತಿದ್ದಾರೆ.

ಇದನ್ನೂ ಓದಿ

ಲಕ್ಷ್ಮೀ ಚಂದ್ರಶೇಖರ್‌ ಸಂದರ್ಶನ

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more