ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರು ಎಂದರೆ ಬದುಕು, ನೀರು ಎಂದರೆ ಪ್ರೀತಿ!

By Staff
|
Google Oneindia Kannada News
  • ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ
    ತವರು: ಕಡೂರು-ಚಿಕ್ಕಮಗಳೂರು ಜಿಲ್ಲೆ
    [email protected]
ಜಲವಿಲ್ಲದ ಈ ಭೂಮಿಯ ಮೇಲೆ
ಸಾವು ಹಸಿವುಗಳೇ ಅಲೆಯದಿರಿ,
ಬಲವಿಲ್ಲದ ಈ ಬಳ್ಳಿಯ ಮೇಲೆ
ಘೋರ ವೃಕ್ಷಗಳೇ ಎರಗದಿರಿ
- ಸಿದ್ಧಲಿಂಗಯ್ಯ

ಅದೇಕೋ ಮೊದಲಿಂದಲೂ ನನಗೆ ನೀರನ್ನು ಕಂಡರೆ ಅಪರಿಮಿತ ಪ್ರೀತಿ. ಹೊರಗೆ ಧಾರಾಕಾರ ಮಳೆ ಸುರಿಯುವಾಗ ಅಕಾರಣ ಸಂಭ್ರಮ ಅನುಭವಿಸುವ ನನ್ನ ಮನಸ್ಸು ಬಿರು ಬಿಸಿಲಿನ ದಿನಗಳಲ್ಲಿ ಮಂಕಾಗಿ ಹೋಗಿರುತ್ತದೆ. ಪ್ರವಾಸ ಹೋಗುವಾಗಲೂ ಅಷ್ಟೇ, ನೀರು, ನದಿ ತೀರ, ತೊರೆ, ಮಡುವು, ಜಲಪಾತಗಳು ಇರುವ ಸ್ಥಳಗಳು ನನ್ನನ್ನು ಸೆಳೆಯುವಂತೆ ನೀರಿಲ್ಲದ ಒಣ ಪ್ರದೇಶಗಳು ನನ್ನನ್ನು ಆಕರ್ಷಿಸಲಾರವು. ನಯಾಗಾರದ ಆ ಅಗಾಧ ಜಲ ವೈಭವ ನನ್ನನ್ನು ಪುಳಕಗೊಳಿಸಿದಂತೆ ಡಿಸ್ನಿಲ್ಯಾಂಡ್‌ ಆಗಲೀ, ಹಾಲಿವುಡ್‌ ಆಗಲೀ ನನ್ನನ್ನು ಮರುಳುಗೊಳಿಸಲಾರದು. ಜೀವಾಧಾರ ನೀರಿಲ್ಲದೆ ನಾವಿರಲಾರೆವು. ನನ್ನ ದೃಷ್ಟಿಯಲ್ಲಿ ನೀರು ಎಂದರೆ ಚೇತನ , ನೀರು ಎಂದರೆ ಸಮೃದ್ಧಿ, ನೀರು ಎಂದರೆ ಬದುಕು, ಇನ್ನೂ ಹೇಳಬೇಕೆಂದರೆ ನೀರು ಎಂದರೆ ಪ್ರೀತಿ.

ಇತ್ತೀಚೆಗೆ ಊರಿಗೆ ದೂರವಾಣಿ ಕರೆ ಮಾಡಿ ಅಣ್ಣನ ಜೊತೆಗೆ ಮಾತನಾಡುತ್ತಿದ್ದೆ. ಈ ಬಾರಿ ಮಳೆಯೇ ಇಲ್ಲದೆ ಊರಿನಲ್ಲಿ ಕುಡಿಯುವ ನೀರಿಗೂ ಬಹಳ ತೊಂದರೆಯಾಗಿರುವುದಾಗಿ ಅಣ್ಣ ಹೇಳಿದ. ನಮ್ಮೂರಿನಲ್ಲಿ ಮೊದಲಿನಿಂದಲೂ ಅಂತಹ ವಿಫುಲವಾದ ಜಲ ಮೂಲವೇನಿಲ್ಲದಿದ್ದರೂ ಪರಿಸ್ಥಿತಿ ಇಷ್ಟು ಪ್ರಕೋಪಕ್ಕೆ ಹೋಗಿರಲಿಲ್ಲ. ನಲ್ಲಿಗಳಲ್ಲಿ ಇಡೀ ದಿನ ನೀರು ಸುರಿದು ಹೋಗದಿದ್ದರೂ ದಿನಕ್ಕೆ ಒಂದೆರಡು ತಾಸಾದರೂ ನೀರು ಬರುತ್ತಿತ್ತು. ಬಾವಿಗಳಲ್ಲಿ ಬಹಳ ಮೇಲು ಮಟ್ಟದಲ್ಲಿ ಅಲ್ಲವಾದರೂ ಪಾತಾಳದಲ್ಲಾದರೂ ಗಂಗೆಯ ದರ್ಶನವಾಗುತ್ತಿತ್ತು. ಹೀಗಿರುವಾಗ ಇದ್ದಕ್ಕಿದ್ದಂತೆ ನನ್ನೂರಿನ ಮಣ್ಣಿನೊಳಗಿನ ನೀರು ಕುದಿದು ಆವಿಯಾಗಿ ಹೋಗಲಿಲ್ಲ, ಅದು ಮರೆಯಾಗಿದ್ದು ಕೂಡ ನಮ್ಮ ಸ್ವಯಂಕೃತಾಪರಾಧದ ಫಲವೇ.

ನಾವು ಚಿಕ್ಕವರಾಗಿದ್ದಾಗ ನಮ್ಮ ಮನೆಗೆ ಬಹಳ ಸಮೀಪದಲ್ಲಿಯೇ ಒಂದು ಚೌಕಾಕಾರದ ದೊಡ್ಡ ಪುಷ್ಕರಣಿ ಇತ್ತು. ನಮ್ಮೂರ ಜನರೆಲ್ಲಾ ಅದನ್ನು ‘ಹೊಂಡ’ ಎಂದು ಕರೆಯುತ್ತಿದ್ದರು. ನಾಲ್ಕು ಕಡೆಯಲ್ಲಿಯೂ ಕೆಳಗಿಳಿಯಲು ನೀಟಾದ ಮೆಟ್ಟಿಲುಗಳಿದ್ದವು. ಈ ಹೊಂಡ ನಮ್ಮೂರ ಜನ ಜೀವನದ ಒಂದು ಭಾಗವೇ ಆಗಿ ಹೋಗಿತ್ತು. ಒಂದು ಭಾಗ ಮಡಿವಂತರ ಸ್ನಾನ ಘಟ್ಟವಾದರೆ, ಇನ್ನೊಂದು ಕಡೆ ಮಡಿವಾಳರು ತಮ್ಮ ಬಟ್ಟೆ, ಬರೆ ಒಗೆದು ಒಣಗಿಸಿಕೊಂಡು ಹೋಗುತ್ತಿದ್ದರು. ಇನ್ನೊಂದು ಮೂಲೆ ಸಂತೆಗೆಂದು ಬರುವ ಇತರ ಹಳ್ಳಿಯ ಜನರು ತಾವು ತಂದ ಬುತ್ತಿ ತಿಂದು, ನೀರು ಕುಡಿದು ದಣಿವಾರಿಸಿಕೊಳ್ಳಲು ಮೀಸಲಾದರೆ ಹೆಂಗಳೆಯರು ದೇವರ ಉಪಕರಣಗಳನ್ನು ತೊಳೆಯಲು ಮತ್ತೊಂದು ನಿಗದಿತ ಜಾಗವಿತ್ತು.

ನುರಿತ ಈಜುಗಾರರಾದ ನನ್ನ ತಂದೆ, ಚಿಕ್ಕಪ್ಪಂದಿರು ನೀರಿನಲ್ಲಿ ಈಜುವಾಗ ನಾವೆಲ್ಲ ಮೀನುಗಳಿಗೆ ಅಕ್ಕಿ ಕಾಳುಗಳನ್ನು ಎಸೆಯುತ್ತಾ, ಆ ಕಾಳುಗಳಿಗೆ ಧಾವಿಸಿ ಬರುವ ಹಿಂಡು ಮೀನುಗಳನ್ನು ನೋಡುತ್ತಾ ಮೈಮರೆಯುತ್ತಿದ್ದುದು ನನ್ನ ಮನಸ್ಸಿನಲ್ಲಿ ಇನ್ನು ಹಸಿರಾದ ಸಿಹಿ ನೆನಪು. ಊರಿನ ದೊಡ್ದ ಗಣೇಶನನ್ನು ನೀರಿಗೆ ಬಿಡುವ ದಿನ ಊರಿಗೆ ಊರೇ ಇಲ್ಲಿ ಕಿಕ್ಕಿರಿದು ನಿಲ್ಲುತ್ತಿತ್ತು. ಈ ತಂಪು ಕೊಳದ ಸನ್ನಿಧಾನದಲ್ಲಿ ಅದರ ಸುತ್ತಲೂ ಇರುವ ಮಾವು, ತೆಂಗು, ಹುಣಿಸೆ ಮರಗಳು, ಆ ಮರಗಳಲ್ಲಿ ಗೂಡು ಕಟ್ಟಿಕೊಂಡ ನೂರಾರು ತರದ ಪಕ್ಷಿ ಸಂಕುಲಗಳು ಕುಶಲದಿಂದ ಇದ್ದವು.

ಆದರೆ ನಮ್ಮ ಎಲ್ಲಾ ಕೆರೆ, ನದಿಗಳನ್ನು, ಪತಿತ ಪಾವನೆ ಗಂಗೆಯನ್ನೂ ಬಿಡದೆ ಕಾಡುತ್ತಿರುವ ಮಾಲಿನ್ಯತೆಯ ಶಾಪ ನಮ್ಮೂರ ಈ ಕಲ್ಯಾಣಿಯನ್ನೂ ತಟ್ಟದೆ ಬಿಡಲಿಲ್ಲ. ಇದನ್ನು ಉಪಯೋಗಿಸುವ ಜನರು ಹೆಚ್ಚಾದಂತೆ, ಜನರ ಕೊಳೆಗಳನೆಲ್ಲಾ ತನ್ನಲ್ಲಿಯೇ ಕರಗಿಸಿಕೊಳ್ಳುತ್ತಾ ಮುಂದೆ ಹರಿಯದೆ ಒಂದೇ ಕಡೆ ನಿಂತಿರುವ ಈ ನೀರು ದಿನದಿಂದ ದಿನಕ್ಕೆ ಕೆಟ್ಟು ದುರ್ವಾಸನೆ ಬರತೊಡಗಿತು. ಸಂಬಂಧಿಸಿದ ಆಡಳಿತ ವರ್ಗದವರು ಈ ನೀರನ್ನು ಶುಚಿಯಾಗಿಡಲು ಯಾವುದಾದರೂ ವಿಧಾನವನ್ನು ಯೋಚಿಸಬಹುದಿತ್ತು. ನೀರು ಕುಲಗೆಡಿಸುವ ಜನರಿಗೆ ದಂಡ ವಿಧಿಸುವ, ಅಥವಾ ಯಾರೂ ಅತ್ತ ಸುಳಿಯದಂತೆ ಕಾವಲು ಹಾಕುವಂತಹ ಏನಾದರೂ ಉಪಯುಕ್ತವಾದ ಕ್ರಮವನ್ನು ಕೈಗೊಳ್ಳಬಹುದಿತ್ತೇನೊ. ಆದರೆ ಆಗಿದ್ದ ನಮ್ಮೂರ ಪುರಸಭೆಯ ಜನರಿಗೆ ಹೊಳೆದ ಏಕೈಕ ಸುಲಭ ಉಪಾಯವೆಂದರೆ- ಈ ಹೊಂಡವನ್ನೇ ನೀರಿಲ್ಲದಂತೆ ಬತ್ತಿಸಿ ಬಿಡುವುದು! ಸರಿ, ಈ ಹೊಂಡಕ್ಕೆ ಮದಗದ ಕೆರೆಯಿಂದ ನೀರು ತಂದು ಹರಿಸುತ್ತಿದ್ದ ದೊಡ್ಡ ಕಾಲುವೆಗಳನ್ನು ಮುಚ್ಚಲಾಯಿತು.

ಆ ವರ್ಷದ ಮಳೆಗಾಲದಲ್ಲಿ ಹೊಂಡಕ್ಕೆ ಹೊಸ ಕೆಂಪು ನೀರು ಬಂದು ಸುರಿಯಲಿಲ್ಲ. ಇದ್ದ ಹಳೆಯ ನೀರೆಲ್ಲಾ ಸುಡು ಬಿಸಿಲಿನ ಪಾಲಾಗಿ ಹೋಯಿತು. ಹಿಂದೆ ನೀರು ತುಂಬಿ ನಲಿದಾಡುತ್ತಿದ್ದ ಜಾಗದಲ್ಲಿ ದೊಡ್ಡ ಶೂನ್ಯವೊಂದು ನಿರ್ಮಾಣವಾಯಿತು. ಈ ಹೊಂಡದ ಒಳಗೆ ಏಳು ಬಾವಿಗಳು ಮುಳುಗಿವೆ ಎಂದು ಕಲ್ಪಿಸಿಕೊಂಡಿದ್ದ ನಮ್ಮೆಲ್ಲರ ಮುಗ್ಧ ನಂಬಿಕೆ ನಮ್ಮ ಕಣ್ಣೆದುರೇ ಬಟ್ಟ ಬಯಲಾಗಿ ಹೋಯಿತು. ಈ ಜಾಗದಲ್ಲಿ ಆಟದ ಮೈದಾನ, ಪಾರ್ಕು ಮಾಡುತ್ತೇವೆಂದು ಆಗಿದ್ದ ಅಧಿಕಾರಿಗಳು ಅಂಗೈಯಲ್ಲಿ ಆಕಾಶ ತೋರಿಸಿದ್ದರಾದರೂ ಇವತ್ತಿನವರೆಗೆ ಇದು ಮುಳ್ಳು ಗಿಡಗಳು, ಕಾಂಗ್ರೆಸ್‌ ಹುಲ್ಲುಗಳ ನೆಲೆವೀಡಾಗಿ ಸೊಳ್ಳೆ, ಹುಳು ಹುಪ್ಪಡಿಗಳ ಆಗರವಾಗಿ ಹಾಗೇ ಉಳಿದಿದೆ. ನೆಲದಾಳವನ್ನು ತಂಪಾಗಿರಿಸಿ ಎಲ್ಲರನ್ನೂ ಪೊರೆಯುತ್ತಿದ್ದ ಈ ಕೊಳ ಒಣಗಿ ಬರಡಾಗಿ ನಿಂತ ಮೇಲೆ ಅದಾವುದೋ ರಾಕ್ಷಸನ ಮಾಯೆಗೆ ಸಿಲುಕಿದಂತೆ ಸುತ್ತಲೂ ನಳ ನಳಿಸುತ್ತಿದ್ದ ಗಿಡ ಮರಗಳು ಒಣಗಿ ಸಿಡಿಲು ಬಡಿಸಿಕೊಂಡಂತೆ ಗರ ಬಡಿದು ನಿಂತು ಬಿಟ್ಟವು. ಕೊಳದ ಆಸುಪಾಸಿನಲ್ಲಿದ್ದ ಬಾವಿಗಳೆಲ್ಲಾ ಹನಿ ನೀರಿಲ್ಲದಂತೆ ಬತ್ತಿ ಹೋಗಿಬಿಟ್ಟವು. ನೂರಾರು ಅಡಿಗಳಷ್ಟು ಕೊರೆದರೂ ಬೋರ್‌ವೆಲ್ಲುಗಳಲ್ಲಿ ನೀರು ಒಸರದಾಯಿತು. ಆಗಿನಿಂದಲೇ ಶುರುವಾದದ್ದು ನಮ್ಮೂರಿನ ಜನರ ನೀರಿಗಾಗಿ ಬವಣೆ, ನೀರಿಲ್ಲದ ಹಾಹಾಕಾರ....

ಈಗಲೂ ನನ್ನನ್ನು ಕಾಡುವ ಉತ್ತರ ಸಿಗಲಾರದ ಪ್ರಶ್ನೆಗಳೆಂದರೆ- ಇದೇ ನೀರನ್ನು ನಂಬಿ ನೆಮ್ಮದಿಯಿಂದಿದ್ದ ಆ ಮೀನು, ಕಪ್ಪೆ, ನೀರ ಹಾವು, ಏಡಿ...... ಜಲಚರಗಳೆಲ್ಲಾ ಆಗೆಲ್ಲಿ ಹೋದವೊ ? ನಿಂತ ನೆಲಕ್ಕೆ ಬಿಸಿ ತಗಲಿ ಕಂಗಾಲಾದ ಗಿಳಿ, ಗುಬ್ಬಚ್ಚಿ, ಗೊರವಂಕಗಳು ಅದೆಷ್ಟು ತಬ್ಬಲಿತನ ಅನುಭವಿಸಿದವೊ ? ಮಾಮರದ ಪೊಟರೆಗಳಲ್ಲಿ ಅಡಗಿ ಕಣ್ಣು ಮುಚ್ಚಾಲೆಯಾಡುತ್ತಿದ್ದ ಅವತ್ತಿನ ಆ ಅಳಿಲ ವಂಶಜರು ಈಗೆಲ್ಲಿವೆಯೋ.......

ಹೊಸದನ್ನು ಕಟ್ಟಲು ಅಸಮರ್ಥರಾದ ನಮಗೆ ಹಳೆಯದನ್ನು ಕೆಡವಿ ಹಾಕುವ ಅಧಿಕಾರವನ್ನು ಕೊಟ್ಟವರಾದರೂ ಯಾರು? ಕೈ ತುದಿಯಲ್ಲಿದ್ದ ಅಮೂಲ್ಯ ನಿಧಿಯನ್ನು ಮಣ್ಣಿನಲ್ಲಿ ಜಾರಿ ಬಿಟ್ಟ ನಿರ್ಭಾಗ್ಯರು ನಾವು. ಹಸುರಿನ ಹೆಸರಿಲ್ಲವಾಗಿಸಿ ಮುಟ್ಟಿದ್ದೆಲ್ಲಾ ಬೂದಿಯಾಗಿಸುವ ಭಸ್ಮಾಸುರ ಸಂತತಿಯ ನಾವು ಈಗ ಮಾಡಬಲ್ಲೆವಾದರೂ ತಾನೇ ಏನು? ಜೀವ ಜಲವೇ ಬತ್ತಿ ಹೋದ ಈ ಬರಡು ನೆಲದಲ್ಲಿ ಹತಾಶರಾಗಿ ಕುಳಿತು ನಿರ್ದಯವಾಗಿ ನಡೆದು ಹೋಗುವ ಮುಗಿಲುಗಳ ಕಡೆ ನೋಡುತ್ತಾ ‘ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೇ ನಾಲ್ಕು ಹನಿಯ ಚೆಲ್ಲಿ ’ ಎಂದು ಗೋಗರೆಯುವುದನ್ನು ಬಿಟ್ಟು ?

ಮುಖಪುಟ

/ ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X