• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಡುವ ಮೋಹನ ರಾಗದ ‘ನೆನಪುಗಳು’

By Staff
|

ಮುಖಪುಟ -->ಸಾಹಿತ್ಯ ಸೊಗಡು -->ಎನ್‌ಆರ್‌ಐ ಕನ್ನಡ ಕಲರವ -->ಸಮಾಚಾರ

ಮೇ 19, 2003
ನೆನಪುಗಳು ಕೇವಲ ಅವರ ಆತ್ಮಕತೆಯಾಗಿರದೆ ವಿವೇಚನಾತ್ಮಕ ಕೃತಿಯಾಗಿದೆ. ಭಾರತದ ಹಾಗೂ ಅಮೇರಿಕದ ವಿದ್ಯಾಭ್ಯಾಸ ಕ್ರಮಗಳನ್ನು ಕೂಲಂಕಷವಾಗಿ ವಿಶ್ಲೇಷಿಸಿದ್ದಾರೆ. ಪುಸ್ತಕದ ಮೊದಲನೆ ಅಧ್ಯಾಯ ಫುಟ್ಬಾಲ್‌ ಚೆಂಡಿನಿಂದ ಹಿಡಿದು ಕೊನೆಯ ಅಧ್ಯಾಯ ಅಮೇರಿಕಾಯಣದ ತನಕ ಜೀವನದ ಎಲ್ಲ ಹಂತಗಳಲ್ಲಿ ಅವರ ಉತ್ಸಾಹ, ಅಭಿರುಚಿ, ದ್ವಂದ್ವ, ಆದರ್ಶವಾದಿತನ ಹಾಗೂ ಸನ್ನಿವೇಶಗಳನ್ನು ಎದುರಿಸುವ ಎದೆಗಾರಿಕೆಯನ್ನು ನಾವು ಕಾಣುತ್ತೇವೆ.

ಬಾಲ್ಯದಲ್ಲಿ ಫುಟ್ಬಾಲ್‌ ಸಿಕ್ಕಿದ ಸಡಗರ, ಅವರ ಸ್ನೇಹಿತನ ಒದೆತಕ್ಕೆ (ಕಬ್ಬಿಣದ ಅಲಗಿನಂತಿದ್ದ ಹೆಬ್ಬೆರಳಿನ ಉಗುರಿನ ಪ್ರತಾಪ) ತೂತಾದ ಚೆಂಡಿನ ಪ್ರಕರಣ, ಕಡುಬು ತಿನ್ನುವುದರಲ್ಲಿ ಮಹಾರಥಿಯಾಗಿದ್ದ ಕಟುಗಾರು ಈರಯ್ಯನ ಮಾತಿನ ಮಲ್ಲತನ (ಶಿಕಾರಿ ಸಾಹಸ) ‘ನಂದುಬಿಡು ನಂದುಬಿಡು’ ಎಂಬ ಕೊಳೆರೋಗಕ್ಕೆ ಔಷಧಿ ಸಿಂಪಡಿಸುವ ಮೆಷಿನಿಗಾಗಿ ನಡೆದ ಹಿರಿಯರ ಜಗ್ಗಾಟ ತುಂಬಾ ಸ್ವಾರಸ್ಯವಾಗಿವೆ.

‘ಕೊಡಗೂಸು ಮತ್ತು ಇತರ ಪ್ರೌಢ ಪಾಠಗಳು’ ಅಧ್ಯಾಯ ಹೈಸ್ಕೂಲ್‌ ವಿದ್ಯಾಭ್ಯಾಸದ ರಸಮಯ ಸನ್ನಿವೇಶಗಳ ಆಗರವಾಗಿದೆ. ಕನ್ನಡ ಉಪಾಧ್ಯಾಯರ ಕೋಳೂರ ಕೊಡಗೂಸು ಪದ್ಯದ ಪದವಿಚ್ಛೇದ ಹೀಗಿದೆ:

ಪದ್ಯದ ಸಾಲು: ಕಮ್ಮಿತುವಪ್ಪ ಕಾಡ ಪೊಸಪೂಗಳಿಂ ಅರ್ಚಿಸಿ

- ಕಮ್ಮಿತುವಪ್ಪ ಎಂದ್ರೆ ಗೊತ್ತೇನ್ರೋ?...

- ತುಪ್ಪ ಕಮ್ಮಿ ಆತು ಅಂತ ಸಾರ್‌

- ಲೋ ಲೋಕೇಶಿ, ಕೊಡಗೂಸು ಅಂದ್ರೇನಪಾ?...

- ... ಮದ್ವೆ ಆಗ್ದಿರೋ ಚಂದುಳ್ಳಿ ಹುಡುಗಿ ಅಂತ ಸಾರ್‌.

ಇತಿಹಾಸದ ಅಧ್ಯಾಪಕರ ತಾಜಮಹಲ್‌ ಬಗ್ಗೆ ವಿವರ :

‘... ಷಹಜಹಾನನ ಹೆಸ್ರು ಉಳ್ದಿರೋದು ತಾಜಮಹಲ್‌ ಕಟ್ಟಡದಿಂದ ಕಣ್ರಲೇ... ಹತ್ತೊಂಬತ್ತು ವರ್ಷದ ಹರೇದ ಹುಡ್ಗಿ ಮಮ್ತಾಜ ಬೀಬಿನ ಇಳಿವಯಸ್ಸಿನ ಈ ಷಹಜಹಾನ ನಿಖಾ ಮಾಡ್ಕಂಡ. ಅವ್ಳು ತೆಳ್ಳನೆ ಬೆಳ್ಳನೆ ಚೆಂದೊಳ್ಳಿ ಹೆಣ್ಣು. ಪಾಪ, ಆಕಿಗೆ ಈ ಮುದ್ಕ ಪುರುಸೊತ್ತು ಕೊಡ್ದೆ ಒಂದಾದ್ಮೇಲೆ ಒಂದ್ರಂತೆ ಹದಿನಾಲ್ಕು ಮಕ್ಳು ಮಾಡ್ದ. ಹದಿನಾಲ್ಕನೆ ಕೂಸಿನ ಹೆರಿಗೇಲಿ ಆಕಿ ಸತ್ತಾಗ ವಯಸ್ಸು ಮುವ್ವತೊಂಬತ್ತು ತುಂಬಿರ್ಲಿಲ್ಲ ! ಪಾಪ ಆಕಿ ನಿಖಾ ಆದ ಮೇಲೆ ಇಪ್ಪತ್ತು ವರ್ಷ ಪೂರ್ತ ಕಾಣ್ಲಿಲ್ಲ . ಮಕ್ಳು ಹೆತ್ತು ಹೆತ್ತು ಸುಸ್ತಾಗಿ ಸತ್ಲು ಕಣ್ರಲೆ. ನನ್ನ ಕೇಳಿದ್ರೆ ಈ ಷಹಜಹಾನನೇ ಆಕೀನ ಕೊಂದಿದ್ದು ! ಆಕೀನ ಕೊಂದು ಆಕೀ ಹೆಸ್ರಲ್ಲಿ ತಾಜಮಹಲ್‌ ಕಟ್ಟಿಸ್ದ. ಆಕಿ ಇದ್ದಾಗ ಆರಾಂ ಕೊಡ್ದೆ ಆಕೀ ಆರೋಗ್ಯ ಕೆಡ್ಸಿ ಸತ್ತಮೇಲೆ ತಾಜಮಹಲ್‌ ಕಟ್ಸಿ ಏನು ಪ್ರಯೋಜ್ನ ಆತು ಹೇಳ್ರಪ್ಪಾ...’

ಮೋಹನ್‌ ಅವರ ಹಾಸ್ಯದ ಲಹರಿ ಯಾರನ್ನೂ ಬಿಟ್ಟಿಲ್ಲ. ಶಾಲೆಗೆ ಹೋಗುವಾಗ ಮೋಹನರ ಸ್ನೇಹಿತರು ಅವರಿಗೆ ಹೇಳಿದ ಎಚ್ಚರಿಕೆ ಮಾತು ಕೇಳಿ: ‘ಲೋ ಹಳ್ಳಿ ಗುಗ್ಗು, ಯಾಕೆ ಇಷ್ಟೊಂದು ಹುಡುಗರು ನಿನ್ನ ಸ್ನೇಹ ಮಾಡಾಕೆ ಬರ್ತಾರೆ ಅಂತ ಗೊತ್ತ ? ನಿನ್ನ ಮೂತಿ ನೋಡಾಕೆ ಅಂತ ಮಾಡಿದ್ಯೇನೋ ಪೆದ್ದ ! ನಿನ್ನ ಸ್ನೇಹ ಮಾಡ್ದ್ರೆ ನಿನ್ನ ಅಕ್ಕನ್ನ ಮಾತಾಡ್ಸೋ ಅವಕಾಶ ಸಿಗಬೋದು ಅಂತ ಬಾಯಿ ಕಳಕೊಂಡು ಬರ್ತಾರೆ ಕಣೋ, ಬೆಪ್ಪ !’

ಮಹಾರಾಜ ಕಾಲೇಜಿನ ದಿನಗಳು ಅವರ ಅಂತರ್ಮುಖಿ ಜೀವನ ಹಾಗೂ ಬಹುಮುಖ ಪ್ರತಿಭೆಯ ಪರಿಚಯ ಮಾಡಿ ಕೊಡುತ್ತವೆ. ಅವರ ಸಾಹಿತ್ಯದ ಅಭಿರುಚಿ, ಕ್ರೀಡಾಪಟುತ್ವದ ವರ್ಣನೆ, ಸಾಧಿಸಬೇಕೆನ್ನುವ ಲವಲವಿಕೆ, ಸಾಧಿಸಲಾರದ ಮನೋವ್ಯಥೆ ಹಾಗೂ ಅವರ ಅನಾಮಧೇಯ ಪ್ರೇಮಿಯಾಬ್ಬಳ ಪರಿಚಯವನ್ನು ಇಲ್ಲಿ ಕಾಣುತ್ತೇವೆ. ಉದ್ಯೋಗ ಪರ್ವದಲ್ಲಿ ಅಧ್ಯಾಪಕ ವೃತ್ತಿಗೆ ಹೋರಾಡಿದ ದಿನಗಳ ವರ್ಣನೆಯಿದೆ. ಇಲ್ಲಿ ಸಿಹಿಗಿಂತಲೂ ಕಹಿ ಅನುಭವಗಳೇ ಹೆಚ್ಚು . ಚಿತ್ರದುರ್ಗದಲ್ಲಿ ಕಳೆದ ದಿನಗಳು, ಅಧ್ಯಾಪಕ ಜೀವನದ ಕಟು ಅನುಭವಗಳು, ಉದಕಮಂಡಲದಲ್ಲಿ ಅವರ ಮದುವೆ ಇತ್ಯಾದಿ ಘಟನೆಗಳನ್ನು ಹೃದಯಂಗಮವಾಗಿ ಮೋಹನರು ಚಿತ್ರಿಸಿದ್ದಾರೆ. ನಮ್ಮ ವಿದ್ಯಾಪದ್ಧತಿಯ ಕುಂದು ಕೊರತೆಗಳನ್ನು ವಿವರವಾಗಿ ವಿಮರ್ಶಿಸಿದ್ದಾರೆ. ಅವರ ಅಮೇರಿಕಾಯಣ, ವೀಸಾ ಸಮಸ್ಯೆಯಿಂದಾಗಿ ದೂರವಾಗಿದ್ದ ಪರಿವಾರದ ದುಃಖ ಹೆಜ್ಜೆ ಹೆಜ್ಜೆಗೂ ಅವರನ್ನು ಕಾಡುತ್ತವೆ.

ಅಮೇರಿಕದ ಕನ್ನಡಕೂಟ ಸಹ್ಯಾದ್ರಿಯ ಅಡಿಪಾಯ ಮೋಹನ್‌ ಅವರದು. ಅದರ ಮೊದಲ ಮೀಟಿಂಗಿನ ವಿವರಗಳನ್ನು ನಗೆಯಿಂದ ಹೊಟ್ಟೆ ಹುಣ್ಣಾಗಿಸುವಂತೆ ಬಣ್ಣಿಸಿದ್ದಾರೆ. ಮೋಹನರ ಬಾಳ ಸಂಗಾತಿ ಶ್ರೀಮತಿ ನಂದಾ ಅವರ ಮಾತೃಭಾಷೆ ತಮಿಳು. ಕನ್ನಡ ಕೂಟದ ಮೀಟಿಂಗಿಗೆ ಬೇಗನೆ ಹೊರಡಲು ಒತ್ತಾಯಿಸುತ್ತಿದ್ದ ಸಂಧರ್ಭ: ‘... ಸಭೆಗೆ ಹೊತ್ತಾಗುತ್ತದೆ ಎಂದು ನಾನು ಬೆಳಗಿನ ಉಪಹಾರ ಬೇಗ ಮಾಡಬೇಕೆಂದು ಚಡಪಡಿಸಿದೆ. ನೀವು ಹೊತ್ತಾಯ್ತು ಅಂದ್ರೆ ನಾ ಏನ್‌ ತಾ ಮಾಡ್ಲಿ ? ಶೀಗ್ರಂ ಒಂದೆರಡು ಮೊಟ್ಟೆ ಹಾಕಿ ಬಿಡ್ತೀನಿ ಆಯ್ತಾ ? ಎಂದಳು.’ ಆ ಸಭೆಗೆ ಕರ್ನಾಟಕದ ಬೇರೆಬೇರೆ ಕಡೆಗಳಿಂದ - ಬೆಂಗಳೂರು, ಬೆಳಗಾವಿ, ಬಿಜಾಪುರ, ದಕ್ಷಿಣ ಕನ್ನಡ ಜಿಲ್ಲೆಗಳಿಂದ ಇಲ್ಲಿಗೆ ಬಂದು ನೆಲೆಸಿದ ಸದಸ್ಯರು ಬಂದಿದ್ದರು. ಅವರ ವೈವಿಧ್ಯತೆಯ ಕನ್ನಡ ಮಾತುಗಳು ಓದುಗನನ್ನು ಸೆರೆಹಿಡಿಯುತ್ತವೆ. ಮಗನ ಮದುವೆಗೆ ಊರಿಗೆ ಹೋದರೂ ಅಸ್ವಸ್ಥತೆಯ ಕಾರಣದಿಂದ ಅದರಲ್ಲಿ ಅವರಿಗೆ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಬೊಂಬಾಯಿ ಹಾಗೂ ಬೆಂಗಳೂರಲ್ಲಿ ವೈದ್ಯಕೀಯ ವೃತ್ತಿಯವರ ಉಪೇಕ್ಷೆಯಿಂದ ಅವರಿಗೆ ಬೇಕಾದ ವೈದ್ಯಕೀಯ ಸಹಾಯ ಸಿಕ್ಕದಿದ್ದುದು ತುಂಬಾ ಶೋಚನೀಯ ಸಂಗತಿಯಾಗಿದೆ.

ಪಾರ್ಕಿನ್ಸನ್‌ ಕಾಯಿಲೆಯ ಬಗ್ಗೆ ಬರೆದ ಅವರ ವಾಕ್ಯಗಳು- ‘...ಪಾರ್ಕಿನ್ಸನ್‌ ಕಾಯಿಲೆಯಿಂದ ನಾನು ಬಹಳವಾಗಿ ಬದಲಾಯಿಸಿದ್ದೇನೆ. ಹಿಂದೆ ನನ್ನನ್ನು ನೋಡಿದವರು ಈಗ ಗುರುತು ಹಿಡಿಯಲಾರರು... ಪಾರ್ಕಿನ್ಸನ್‌ ಕಾಯಿಲೆ ನನ್ನನ್ನು ಪರಕೀಯತೆಗೆ ನೂಕಿ ನನ್ನ ದೇಹದ ಮೇಲೆ ಹಗಲೂ ಇರುಳು ದಾಳಿಮಾಡಿ ದೇಹವನ್ನು ಕ್ರೂರವಾಗಿ ದಂಡಿಸುತ್ತಿದೆ. ನಿಸ್ಸಾಹಯಕತೆಯಿಂದ ಅರುವತ್ತೈದು ವರ್ಷದ ಮಗುವಾಗಿದ್ದೇನೆ!’ ಎನ್ನುವ ಮಾತುಗಳು ಅವರ ಅತೀವ ವೇದನೆಯನ್ನು ವ್ಯಕ್ತ ಪಡಿಸುತ್ತವೆ. ಅವರು ತನ್ನ ಬಾಳ ಸಂಗಾತಿ ನಂದಾ ಅವರಿಗೆ ಇಂಗ್ಲಿಷಿನಲ್ಲಿ ಬರೆದ ಕವನವನ್ನೋದುವಾಗ ಹೃದಯ ಹಿಂಡಿ ಬರುವಂತಾಗುತ್ತದೆ, ಕಣ್ಣುಗಳು ಮಂಜಾಗುತ್ತವೆ.

ನೆನಪುಗಳು ಪುಸ್ತಕದ ಮುನ್ನುಡಿಯಲ್ಲಿ ಪ್ರಖ್ಯಾತ ಸಾಹಿತಿ ಪ್ರೊ. ಯು. ಆರ್‌. ಅನಂತಮೂರ್ತಿಯವರು ‘ಕನ್ನಡದಲ್ಲಿ ಇದೊಂದು ಅನನ್ಯ ಕೃತಿ. ಊರಿನಿಂದ ದೂರವಾಗಿ, ಎಲ್ಲೋ ಅಮೇರಿಕಾದಲ್ಲಿ ಇದ್ದು ಇವರು ಕನ್ನಡವನ್ನು ಅದರ ಎಲ್ಲ ಸೊಗಸಿನಲ್ಲೂ ಶಕ್ತಿಯುತವಾಗಿ ಮತ್ತೆ ಪಡೆದುಕೊಳ್ಳುವ ಮತ್ತು ಬಳಸುವ ಕ್ರಮ ಕೂಡ ಅನನ್ಯವಾಗಿದೆ. ಮೋಹನರು ತಮ್ಮ ಬಾಲ್ಯದ ಕನ್ನಡದಲ್ಲಿ ಮತ್ತೆ ಹುಟ್ಟಿ ಭಟ್ಟತಿರಿಯಂತೆ ಚೈತನ್ಯಪೂರ್ಣರಾಗಿ ನಮ್ಮೆದುರು ಓಡಾಡುತ್ತಿದ್ದಾರೆ, ನಗಿಸುತ್ತಿದ್ದಾರೆ, ನಗುತ್ತಿದ್ದಾರೆ, ಟೆನ್ನಿಸ್‌ ಆಟವಾಡುತ್ತಿದ್ದಾರೆ - ಎಂದು ನನಗೆ ಅನಿಸಿತು...’ ಎಂದು ಬರೆದಿದ್ದಾರೆ.

ಮೋಹನರ ನೆನಪುಗಳಲ್ಲಿ ಮಲೆನಾಡ ಮಗುವಿನ ಕನಸಿದೆ, ಸರಳತೆ, ಸಹನತೆಯ ಚಿತ್ರವಿದೆ, ಆದರ್ಶ ಜೀವನದ ಹೋರಾಟವಿದೆ. ಪಾರ್ಕಿನ್ಸನ್‌ ಅಂತಹ ಭಯಂಕರ ಕಾಯಿಲೆಯನ್ನು ಸಹಜವಾಗಿಯೆ ಎದುರಿಸುವ ಕರ್ಮಯೋಗಿಯ ನೆನಪಿನ ನುಡಿಮುತ್ತುಗಳಿವೆ. ಮೋಹನರ ಆರೋಗ್ಯ ವೃದ್ಧಿಯಾಗಲಿ, ಅವರಿಂದ ಅನೇಕ ಕೃತಿಗಳ ರಚನೆಯಾಗಲಿ ಎಂಬುದೇ ನಮ್ಮೆಲ್ಲರ ಹಾರೈಕೆ, ದೇವರಲ್ಲಿ ಬೇಡಿಕೆ!

ಪೂರಕ ಓದಿಗೆ-

ನಾನು ಓದಿದ ಪುಸ್ತಕ ವೈ.ಆರ್‌. ಮೋಹನ್‌ರ ‘ನೆನಪುಗಳು’

Click here to go to topಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more