ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಪ್ಟೆಂಬರ್‌ 11, 2001 - ಮರೆಯಲಾಗದ ನನ್ನ ಅನುಭವ

By Staff
|
Google Oneindia Kannada News
Shylaja Valakatte : My Haunting memories of 9/11ವರ್ಲ್ಡ್‌ ಟ್ರೇಡ್‌ ಸೆಂಟರಿನ ದುರಂತ ಘಟನೆ ಈಗ ದಿನಪತ್ರಿಕೆಗಳ ಮುಖಪುಟ ವಿಶೇಷ ಸುದ್ದಿ ಅಲ್ಲವಾದರೂ ಅದರಿಂದಾದ ನಷ್ಟ ಕಷ್ಟ ಎಂದೂ ಮಾಸಿಹೋಗದ ಕಹಿಕಥೆ. ಆ ದಿನ ನನ್ನ ಜೀವನದಲ್ಲೂ ಒಂದು ಮರೆಯಲಾಗದ ದಿನ ... ಒಂದು ತಿಂಗಳ ರಜೆಯಲ್ಲಿ ಇಂಡಿಯಕ್ಕೆ ಹೋಗಿದ್ದ ನಾನು ಆ ದಿನವಷ್ಟೆ ಮುಂಜಾನೆ ಏರ್‌ಇಂಡಿಯ ಮೂಲಕ ಬೆಂಗಳೂರಿನಿಂದ ಎಲ್ಲ ಸವಿನೆನಪುಗಳೊಂದಿಗೆ ನ್ಯೂಯಾರ್ಕಿಗೆ ಪುನಾ ವಾಪಸ್ಸು ಬರುತ್ತಿದ್ದೆ...

ಲಂಡನ್‌ ಹೀಥ್ರೂ ಏರ್‌ಪೊರ್ಟ್‌ನಿಂದ ನ್ಯೂಯಾರ್ಕ್‌ ಕಡೆಗೆ ಆಗಲೇ 3 ಘಂಟೆಗಳ ನಮ್ಮ ಪ್ರಯಾಣ ಮುಗಿದಿತ್ತು. ದುರಂತದ ಬಗ್ಗೆ ಕಿಂಚಿತ್ತೂ ಅರಿವಿಲ್ಲದೆ ಎಲ್ಲರೂ ಅದಾವುದೊ ಹಿಂದಿ ಸಿನೆಮಾ ನೋಡುವುದರಲ್ಲೇ ಮಗ್ನರಾಗಿದ್ದೆವು. ಆಷ್ಟರಲ್ಲೆ ಕ್ಯಾಪ್ಟನ್‌ನ ‘ನ್ಯೂಯಾರ್ಕಿನಲ್ಲಿ ಏರ್‌ಸ್ಪೇಸ್‌ ಮುಚ್ಚಿದ ಕಾರಣ ವಾಪಸ್‌ ಲಂಡನ್‌ಗೆ ಹೋಗಲಾಗುತ್ತದೆ’ ಎಂಬ ಘೋಷಣೆಗೆ ಎಚ್ಚೆತ್ತ ನನಗೆ ಹಾಗೂ ಸಹಪ್ರಯಾಣಿಕರಿಗೆ ಅನೀರೀಕ್ಷಿತವಾಗಿ ಏನಾಯಿತೋ ಎಂಬ ಹೆದರಿಕೆ, ಗಲಿಬಿಲಿ. ಎಲ್ಲ ವಿಷಯವನ್ನು ಸವಿವರವಾಗಿ ಹೇಳಿದರೆ ಎಲ್ಲಿ ಪ್ರಯಾಣಿಕರು ಗಾಬರಿಗೊಳ್ಳುವರೋ ಅಂತ ಕ್ಯಾಪ್ಟನ್‌ ಅಷ್ಟೇ ವಿಷಯ ಹೇಳಿದ್ದಿರಬಹುದು...ಕೂಡಲೆ ನನ್ನ ಮನಸ್ಸಿಗೆ ಬಂದಿದ್ದು ನ್ಯೂಯಾರ್ಕ್‌ ಏರ್‌ಪೋರ್ಟ್‌ನಲ್ಲಿ ಹವಾಮಾನ ಸರಿ ಇಲ್ವೇನೋ ಅಂತ.. ಆದ್ರೆ ಹೀಗೆ ಟೆರರಿಸ್ಟ್‌ ಅಟ್ಯಾಕ್‌ ಆಗಿರಬಹುದೆಂದು ಕನಸಲ್ಲೂ ಎಣಿಸಿರಲಿಲ್ಲ..

ಆ 3 ಘಂಟೆ ಲಂಡನ್‌ ತಲುಪುವವರೆಗೆ ನನಗಂತೂ ಕತ್ತಿ ಮೊನೆ ಮೇಲೆ ಕೂತ ಅನುಭವ ಆಗಿತ್ತು.. ಒಂದು ತಿಂಗಳಲ್ಲಿ ಇಂಡಿಯಾದಲ್ಲಿ ಕಳೆದ ಒಂದೊಂದು ಸಿಹಿ ನೆನಪು ಆಗಾಗ ನೆನಪಾಗಿ ಇನ್ನೇನಾದ್ರು ಅನರ್ಥ ನಡೆದು ಪುನಾ ನನ್ನವರನ್ನು ನೊಡುವೆನೋ ಇಲ್ವೋ ಅಂತ ಗಾಬರಿಯಾಗಿ ಅಳುವಂತಾಗಿತ್ತು.. ಯಾರನ್ನಾದರೂ ಏನಾಯಿತೂಂತ ಕೇಳೋಣಾಂತಂದ್ರೆ ಎಲ್ಲರೂ ನನ್ನ ಹಾಗೆ ಗಲಿಬಿಲಿಗೊಂಡು ಚಿಂತೆಯಲ್ಲಿ ಮುಳುಗಿದವರೇ.. ಅಂತೂ ಹೀಗೆ ಏನೇನೋ ಊಹಾಪೋಹಗಳಲ್ಲಿ ಮುಳುಗಿದ ನಮಗೆ ಲಂಡನ್‌ ಏರ್‌ಪೋರ್ಟ್‌ ತಲುಪಿದ ಕೂಡಲೆ ಗಗನಸಖಿಯರಿಂದ ವಿಷಯ ತಿಳಿಯಿತು.. ಮೊತ್ತಮೊದಲು ನಂಗೆ ಕೇಳಿಸಿದ್ದು ‘ನ್ಯೂಯಾರ್ಕ್‌ ಗೆ ಬಾಂಬ್‌ ಬಿದ್ದಿದೆ’ ಅಂತ.. ಕೇಳಿದ ಕೂಡಲೆ ನನಗಲ್ಲೇ ಭೂಮಿ ಬಿರಿದಂತೆ ಅನ್ನಿಸಿತ್ತು.. ಕ್ಷಣದಲ್ಲೆ ನನ್ನ ಮನಸ್ಸಿಗೆ ಬಂದಿದ್ದು ನ್ಯೂಯಾರ್ಕ್‌ನಲ್ಲಿ ಇರೋ ನನ್ನ ಫ್ರೆಂಡ್ಸ್‌ಗಳಿಗೆ ಏನಾಯಿತೊ.. ನನ್ನ ಐಬಿಎಮ್‌ ಆಫೀಸಿಗೆ (ಆವಾಗ ನಾನು ನ್ಯೂಯಾರ್ಕ್‌ನಲ್ಲಿ ಐಬಿಎಮ್‌ ಕಾರ್ಪೋರೇಟ್‌ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದೆ.. ಆ ಆಫೀಸ್‌ ವರ್ಲ್ಡ್‌ಟ್ರೇಡ್‌ ಸೆಂಟರಿನಿಂದ 2-3 ಮೈಲು ದೂರದಲ್ಲಿದೆ) ಎಲ್ಲಿ ಬಾಂಬ್‌ ಬಿತ್ತೋ ಏನೋ ಎಂದು ನೂರೆಂಟು ಕೆಟ್ಟ ಚಿತ್ರಣ ಮೂಡಿತ್ತು.. ಕೊನೆಗೆ ವರ್ಲ್ಡ್‌ ಟ್ರೇಡ್‌ ಸೆಂಟರ್‌ ಹಾಗೂ ಪೆಂಟಗಾನ್‌ ಮೇಲೆ ಬಿತ್ತೆಂಬುದು ಗೊತ್ತಾದ ಕೂಡಲೆ ಎಲ್ಲರ ಮನದಲ್ಲೂ ಬಂದ ಮೊದಲ ಪ್ರಶ್ನೆ ‘ಅಮೆರಿಕದಂಥ ಮುಂದುವರಿದ ದೇಶಕ್ಕೆ ಇದರ ಸುಳಿವು ಸಿಗಲಿಲ್ಲವೇ ಮೊದಲು?’ ಎಂಬುದು..

ಟೆಂಪರರಿ ವೀಸ ಸಿಗುವಲ್ಲಿವರೆಗೆ ನಮ್ಮೆಲ್ಲರನ್ನೂ ಏರ್‌ಪೋರ್ಟಿನ ಒಂದು ಕೋಣೆಯಲ್ಲಿ ಕೂರಿಸಿದರು. ಕೋಣೆಯ ಮೂಲೆ ಮೂಲೆಯಲ್ಲಿ ಇರುವ ಪ್ರತಿಯಾಂದು ಟಿವಿಯಲ್ಲೂ ಅದೇ ನ್ಯೂಸ್‌, ಅದೇ ದುರಂತ ವಿವರ... ಒಂದೆಡೆ ಮುಂದೇನು? ಯಾವಾಗ ಮತ್ತೆ ವಿಮಾನ ಹತ್ತುತ್ತೇವೋ? ಯಾವಾಗ ಅಮೆರಿಕಾಗೆ ವಾಪಸ್‌ ಹೋಗುತ್ತೇವೋ? ಹೀಗೆ ಪ್ರಯಾಣಿಕರ ನೂರಾರು ಪ್ರಶ್ನೆಗಳಿಗೆ ಉತ್ತರ ನೀಡಲು ಹಣಬಣಿಸುತ್ತಿರುವ ಅಧಿಕಾರಿಗಳು... ಇನ್ನೊಂದೆಡೆ ತಮ್ಮವರು ಕ್ಷೇಮದಲ್ಲಿರುವರೇ ಎಂದು ತಿಳಿದುಕೊಳ್ಳಲು ಗಾಬರಿಯಲ್ಲಿ ಫೋನ್‌ ಮಾಡಲು ನಿಂತಿರುವ ಜನರ ಕ್ಯೂ... ಪ್ರಥಮ ಬಾರಿಗೆ ಅಮೆರಿಕಾಗೆ ಮಗ-ಮಗಳನ್ನೋ ನೋಡಲು ಬಂದ ವೃದ್ಧ ದಂಪತಿಗಳು, ಮಕ್ಕಳು ಮರಿ ಹೊತ್ತ ಹೆಂಗಸರು.. ಇವೆಲ್ಲವೂ ಒಂದೊಂದರಂತೆ ಇಂದಿಗೂ ನನ್ನ ಕಣ್ಣ ಮುಂದೆ ಬಂದು ನಿಂತಂತೆ ಅನ್ನಿಸ್ತದೆ.

ಒಂದೇ ಮಾತಲ್ಲಿ ಹೇಳಬೇಕಂದ್ರೆ ನಮ್ಮೆಲ್ಲರ ಪರಿಸ್ಥಿತಿ ಕಣ್ಣು ಕಟ್ಟಿ ಯಾವುದೋ ಅರಿಯದ ಕಾಡಲ್ಲಿ ಬಿಟ್ಟಂತೆ ಆಗಿತ್ತು.. ಅಂತೂ ಕ್ಯೂನಲ್ಲಿ ನಿಂತು ಅರ್ಧ ಘಂಟೆಯ ಮೇಲೆ ಇಂಡಿಯಾಕ್ಕೆ ಲೈನು ಸಿಕ್ಕಿ ಅಪ್ಪ-ಅಮ್ಮ ಎಲ್ಲರಿಗೂ ನಾನು ಲಂಡನ್‌ನಲ್ಲಿ ಕ್ಷೇಮದಿಂದಿದ್ದೇನೆ ಅಂತ ತಿಳಿಸಿದೆ.. ನನ್ನ ಸ್ವರ ಕೇಳುತ್ತಲೆ ಅಪ್ಪ-ಅಮ್ಮ ಇಬ್ಬರೂ ಆಗಲೇ ಉದ್ವೇಗದಿಂದ ಫೋನಲ್ಲಿ ಅಳುವುದಕ್ಕೇ ಶುರು ಮಾಡಿ ಬಿಟ್ಟರು..

2-3 ಘಂಟೆ ಕಾದ ಮೇಲೆ ವೀಸಾ ಸಿಕ್ಕಿ ನಮ್ಮೆಲ್ಲರನ್ನೂ ಏರ್‌ಬಸ್‌ನಲ್ಲಿ ಹೋಟೆಲ್‌ಗೆ ಕರೆದುಕೊಂಡು ಹೋದ್ರು.. ರಾಣಿ ಡಯಾನಳ ಸಮಾಧಿ ಇದ್ದ ಕೆನ್ಸಿಂಗಟನ್‌ ಅರಮನೆಯ ಎದುರಿಗೇ ಇತ್ತು ಆ ಹೋಟೆಲ್‌ .. ಏರ್‌ಇಂಡಿಯಾ ಅಧಿಕಾರಿ ನಮಗೆ ಪರಿಸ್ಥಿತಿಯ ವಿವರ ನೀಡಿದ ಮೇಲೆ ಹೇಗೂ 2-3 ದಿನಗಳಿಗಂತೂ ಹೋಟೆಲ್‌ನಲ್ಲೇ ಇರಬೇಕಾಗಬಹುದೆಂಬುದು ಖಾತ್ರಿಯಾಗಿತ್ತು ..

ಸಿಟಿ ಟೂರ್‌ ಟಿಕೆಟ್‌ ತೆಗೊಂಡು (ರೆಡ್‌ ಟೂರ್‌/ಬ್ಲೂ ಟೂರ್‌/ಯೆಲ್ಲೊ ಟೂರ್‌ ಹೀಗೆ 3 ವಿಧದ ಬಸ್‌ ಲೇನ್ಸ್‌ಗಳಿವೆ. ಈ ಮೂರು ಲೇನ್ಸ್‌ ಉಪಯೋಗಿಸಿ ಸಂಪೂರ್ಣ ಲಂಡನ್‌ ಸಿಟಿ ನೋಡಬಹುದು) ಇದ್ದ 3 ದಿನ ಎಡೆಬಿಡದೆ ಲಂಡನ್‌ ನಗರವಿಡೀ ಸುತ್ತಿದೆ... ಲಂಡನ್‌ ಸೇತುವೆ, ಮೇಡಮ್‌ ತುಷ್ಹಾಡ್ಸ್‌ ಮ್ಯೂಸಿಯಂ, ಲಂಡನ್‌ ಐ, ಜುವೆಲ್‌ ಹೌಸ್‌, ಬಿಗ್‌ ಬೆನ್‌ ಹೀಗೆ ಹತ್ತಾರು ಪ್ರಸಿದ್ಧ ಸ್ಥಳಗಳನ್ನು ನೋಡುವ ಅವಕಾಶ ದೊರೆಯಿತು. ಆ ತಿರುಗಾಟ ಮನಸ್ಸಿನ ಮರುಭೂಮಿಗೆ ಓಯಸಿಸ್‌ ಸಿಕ್ಕಂತೆ ಸ್ವಲ್ಪ ತಂಪು ನೀಡಿತ್ತು.

ನಾಲ್ಕನೆ ದಿನ ನಮ್ಮನ್ನೆಲ್ಲಾ ಬಾಂಬೆಗೆ ವಾಪಸ್‌ ಕರೆದುಕೊಂಡು ಹೋಗಲು ಏರ್‌ಇಂಡಿಯ ನಿಶ್ಚಯಿಸಿದಂತೆ ಬಾಂಬೆಗೆ ವಾಪಸ್‌ ಬಂದೆವು. ಅಷ್ಟರವರೆಗೆ ನ್ಯೂಯಾರ್ಕ್‌ ಏರ್‌ಪೋರ್ಟ್‌ ಯಾವಾಗ ತೆರೆಯಬಹುದೆಂಬ ವಿಷಯ ಇನ್ನೂ ಗೊತ್ತಿರಲಿಲ್ಲ.. ಅಂತೂ ಅಷ್ಟು ದೂರ ಪುನಾ ಬಾಂಬೆಗೆ ವಾಪಸ್‌ ಬಂದು ಇನ್ನೂ ಏರ್‌ಪೋರ್ಟಿನಿಂದ ಚೆಕ್‌ ಔಟ್‌ ಆಗಿಲ್ಲ , ಆಗಲೇ ಮರುದಿನವೇ ವಾಪಸ್‌ ನ್ಯೂಯಾರ್ಕ್‌ಗೆ ಹೋಗಲಾಗುತ್ತೆ ಅಂತ ಘೋಷಣೆ ಮಾಡಿಬಿಟ್ರು!!.. ಹಾಗೆ ಆ ರಾತ್ರಿ ಸೆಂಟೂರ್‌ ಹೋಟೆಲ್‌ನಲ್ಲಿ ಉಳಿದು ಮರುದಿನ ಬಾಂಬೆ ಏರ್‌ಪೋರ್ಟ್‌ನಲ್ಲಿ ಪುನಾ ಚೆಕ್‌-ಇನ್‌ ಮಾಡುವಾಗ ಲಗ್ಗೇಜಲ್ಲಿ ಏನೇನು ತಿಂಡಿ ಸಾಮಾನು ಇದೆಯೋ ಅದನ್ನೆಲ್ಲಾ ಹುಡುಕಿ ಹುಡುಕಿ ಕಸ್ಟಂ ಅಧಿಕಾರಿಗಳು ಕಸದಬುಟ್ಟಿಗೆ ಎಸೆದಿದ್ದನ್ನು ನೆನೆಸಿದರೆ ಈಗಲೂ ಅಳು ಬರುತ್ತೆ.. ಪ್ರೀತಿಯಿಂದ ಅಮ್ಮ ಮಾಡಿ ಕೊಟ್ಟ ಉಪ್ಪಿನಕಾಯಿ, ಹಪ್ಪಳ, ಸಂಡಿಗೆ, ಸ್ವೀಟ್ಸ್‌ ಎಲ್ಲ ಕಣ್ಣೆದುರೇ ಏರ್‌ಪೋರ್ಟ್‌ನಲ್ಲಿ ಕೆಲಸ ಮಾಡೋ ಕೂಲಿಗಾರರ ಪಾಲಾಗಿತ್ತು..!! ಒಂದೊಂದು ಮೀಟರುದ್ದಕ್ಕೂ ಎಲ್ಲಾ ಲಗೇಜುಗಳ ದೀರ್ಘ ತಪಾಸಣೆ.. ಪ್ರತಿಯಾಬ್ಬ ಪ್ರಯಾಣಿಕರನ್ನೂ ಸಂಶಯಾಸ್ಪದ ದೃಷ್ಟಿಯಲ್ಲಿ ನೋಡುವ ಪೋಲೀಸರು.. ಇವೆಲ್ಲದರಿಂದ, ಅಮೆರಿಕಾ ವಾಪಸ್‌ ಕ್ಷೇಮವಾಗಿ ತಲುಪಿದರೆ ಸಾಕಪ್ಪಾ ಅಂತ ಅನ್ನಿಸಿಹೊಗಿತ್ತು ನನಗೆ...ಜೆ ಎಫ್‌ ಕೆ ಏರ್‌ ಪೋರ್ಟಿಗೆ ತಲುಪಿದ ಕೂಡಲೆ ಅದೇನೋ ದೊಡ್ಡ ಆಪತ್ತಿನಿಂದ ಪಾರಾದಷ್ಟು ಖುಷಿ..

ಅಂತೂ ನನ್ನ ಆ ಪ್ರಯಾಣ ಸಿಹಿ-ಕಹಿಯ ಮಿಶ್ರ ಅನುಭವವಾಗಿತ್ತು ...


ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X