• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಾಮಾಣಿಕತೆ

By Staff
|
 • ಆಹಿತಾನಲ, ಆರ್ಕೇಡಿಯ, ಕ್ಯಾಲಿಫೋರ್ನಿಯ
 • ಸ್ನೇಹಿತರೊಬ್ಬರು ಮೊನ್ನೆ, ಮೊನ್ನೆ ಹೇಳಿದ ಕತೆಯಾಂದು ಹೀಗಿತ್ತು : ಮೂರು ವರ್ಷದ ಹೆಣ್ಣು ಮಗುವೊಂದು ತನ್ನ ತಾಯಿಯ ಹುಟ್ಟಿದ ಹಬ್ಬದ ದಿನದಂದು ಕೊಟ್ಟ ಮುಗ್ಧ ಉಡುಗೊರೆಯ ವಿಚಾರವಿದು. ಹಿರಿಯ ಸಹೋದರ-ಸಹೋದರಿಯರು ತಾಯಿಗೆ ವಿವಿಧ ಉಡುಗೊರೆ ಕೊಡುತ್ತಿರುವುದು ಆ ಮಗುವಿನ ಮನಸ್ಸಿನಲ್ಲಿ ತಾನೂ ಅದೇ ರೀತಿ ಮಾಡುವ ಆಕಾಂಕ್ಷೆ ಮೂಡಿಸಿತ್ತು. ಆದರೆ, ಆ ಮಗುವಿನ ಉಡುಗೊರೆ ಅನನ್ಯವಾಗಿತ್ತು. ತನ್ನ ಅಣ್ಣ-ಅಕ್ಕಂದಿರು ತಮ್ಮ ಉಡುಗೊರೆ ಕೊಡುತ್ತಿದ್ದಂತೆ, ಅವಳೂ ಒಂದು ಲಕೋಟೆಯನ್ನು ಭದ್ರವಾಗಿ ಮುಚ್ಚಿ, ಅಂಟಿಸಿ ತಾಯಿಗೆ ಕೊಟ್ಟಳು!

  ಮಕ್ಕಳು ಪ್ರಕಟಿಸಿದ ಪ್ರೀತಿಗೆ ತಾಯಿಯ ಹೃದಯ ತುಂಬಿ ಬಂತು. ಕಿರಿಯ ಮಗುವಿನ ಉಡುಗೊರೆಯನ್ನು ಆಕೆ ಬಹುವಾಗಿ ಮೆಚ್ಚಿಕೊಂಡಳು. ಮಗು ಕೊಟ್ಟ ಲಕೋಟೆಯನ್ನು ಒಡೆದಾಗ ಅದು ಖಾಲಿಯಾಗಿದ್ದುದು ಅವಳು ಗಮನಿಸಿಯೇ ಇದ್ದಳು. ಆದರೂ, ಮಗುವಿಗೆ ಬೇಸರವಾಗದಿರಲೆಂದು ಏನೊಂದೂ ಹೇಳದೆ, ಮಗುವನ್ನು ತಬ್ಬಿ ಕೊಂಡು ಥ್ಯಾಂಕ್ಸ್‌ ಹೇಳಿದಳು.

  Naga Aithalಆಗ ಮಗುವು - ‘ಅಮ್ಮಾ, ಆ ಲಕೋಟೆಯಲ್ಲಿ ನನ್ನ ಪ್ರೀತಿಯ ಮುತ್ತುಗಳನ್ನು ಎರೆದು, ಅದು ಹಾರಿ ಹೋಗದ ಹಾಗೆ ಭದ್ರವಾಗಿ ಅಂಟಿಸಿದ್ದೆ; ಆ ಮುತ್ತುಗಳು ನಿನಗೆ ಕಾಣಿಸಿತೇ?’ - ಎಂದು ಕೇಳಿದಳು. ಇದನ್ನು ಕೇಳಿದ ತಾಯಿ, ಆ ಮಗುವಿನ ಮುಗ್ಧತೆಗೆ ಮನಸೋತು, ಆನಂದ ಭರಿತಳಾದಳು. ಅವಳು ಮಗುವನ್ನು ಇನ್ನೊಮ್ಮೆ ತಬ್ಬಿಕೊಂಡು, ‘ಅಯ್ಯೋ, ನೀನು ಆ ಲಕೋಟೆಯಲ್ಲಿ ಕೂಡಿಟ್ಟ ಮುತ್ತುಗಳು ಅದನ್ನು ಒಡೆಯುತ್ತಲೇ ಹಾರಿ ಬಂದು, ನನ್ನನ್ನು ಮುದ್ದಿಸಿತು. ಎಷ್ಟೊಂದು ಸವಿಯಾಗಿತ್ತು , ಆ ಮುತ್ತುಗಳು’ ಎಂದು ಮಗುವನ್ನು ಹತ್ತಾರು ಬಾರಿ ಮುದ್ದಿಕ್ಕಿದಳು. ಹುಡುಗಿಯಂತೂ, ಸಂತೋಷದಿಂದ ಕುಣಿದಾಡಿದಳು. ಮಗುವು ಕೊಟ್ಟ ಆ ಉಡುಗೊರೆ ಅಪಾರ ಮಹತ್ವ ಪಡೆದಿತ್ತು.

  ಮಕ್ಕಳ ನಿರ್ಮಲ ಹೃದಯವನ್ನು ವ್ಯಕ್ತ ಪಡಿಸುವ ಮೇಲಿನ ಘಟನೆ, ನನಗೆ ಈ ಹಿಂದೆ ನನ್ನ ಮಗ, ಅರವಿಂದ ತನ್ನ ತಾಯಿಗೆ ಕೊಟ್ಟ ಉಡುಗೊರೆಯ ನೆನಪನ್ನು ತಂದುಕೊಟ್ಟಿತು. ಆ ಉಡುಗೊರೆ ಕೊಟ್ಟ ಸಂದರ್ಭ ನನಗೆ ಜ್ಞಾಪಕವಿಲ್ಲ - ಲಕ್ಷ್ಮಿಯ ಹುಟ್ಟಿದ ಹಬ್ಬವೋ, ಅಥವಾ ಆಗಷ್ಟೆ ಶಸ್ತ್ರ ಚಿಕಿತ್ಸೆಯಿಂದ ಚೇತರಿರಿಸಿಕೊಂಡ ತಾಯಿಯಲ್ಲಿ ಉತ್ಸಾಹ ತುಂಬಲೆಂದೋ - ಅದು ಇಲ್ಲಿ ಮುಖ್ಯವಲ್ಲ. ಆದರೆ, ಅವನು ಪ್ರಕಟಿಸಿದ ಪ್ರೀತಿ ಇಲ್ಲಿ ಮಹತ್ವವಾದುದುದು. ಆಗ ಅರವಿಂದ 12 ವರ್ಷದ ಬಾಲಕ. ನಾವು ಶಿಕಾಗೊ ಸಮೀಪದ ಬಡಾವಣೆ, ಓಕ್‌ಪಾರ್ಕ್‌ನಲ್ಲಿ ವಾಸವಾಗಿದ್ದೆವು. ಅಲ್ಲಿಯ ಡೌನ್‌ಟೌನ್‌ ಅಂಗಡಿಯಾಂದರಲ್ಲಿ ಒಂದು ಮಣಿಸರ ಅವನ ಗಮನ ಸೆಳೆದಿತ್ತು. ದಿನವೂ ಆ ಅಂಗಡಿಯ ಮುಂದೆ ಹಾದುಹೋಗುತ್ತ, ಅದನ್ನು ನೋಡಿ, ತನ್ನ ತಾಯಿಗೆ ಉಡುಗೊರೆ ಕೊಡಬೇಕೆಂದು ಹಂಬಲಿಸುತ್ತಿದ್ದ. ಅದರ ಬೆಲೆಯನ್ನೂ ವಿಚಾರಿಸಿದ್ದ. ಆದರೆ, ಅದಕ್ಕೆ ಬೇಕಾಗುವಷ್ಟು ಹಣ ಅವನಲ್ಲಿದ್ದಿರಲಿಲ್ಲ. ನಾವು ಕೊಡುತ್ತಿರುವ ಅಲೋಯನ್ಸೇ (allowance) ಅವನ ಮುಖ್ಯ ಬಂಡವಾಳವಾಗಿತ್ತು. ಏನಾದರೂ ಮಾಡಿ, ಅದನ್ನು ಕೊಂಡುಕೊಳ್ಳುವಷ್ಟು ಹಣ ಕೂಡಿಸಿ, ತನ್ನ ತಾಯಿಗೆ ಉಡುಗೊರೆ ಕೊಡಬೇಕೆಂಬ ಅವನ ಹಂಬಲ ಬಲವಾಗಿತ್ತು. ದಿನವೂ ಆ ಅಂಗಡಿಯ ಮುಂದೆ ಹಾದು ಹೋಗುತ್ತ , ಅದು ಇನ್ನೂ ಮಾರಾಟವಾಗದಿದ್ದುದನ್ನು ಖಚಿತ ಪಡಿಸಿಕೊಳ್ಳುತ್ತಲೇ ಇದ್ದ. ಅವನ ಈ ಚಲನೆಯನ್ನು ಅಂಗಡಿಯ sales woman ಕೂಡ ಗಮನಿಸಿದ್ದಳು.

  ಕೊನೆಗೂ, ಆ ಹಾರವನ್ನು ಕೊಳ್ಳುವಷ್ಟು ಹಣ ಶೇಖರಿಸಿ, ಅದನ್ನು ಕೊಳ್ಳಲು ಬಲು ಉತ್ಸಾಹದಿಂದ ಆ ಅಂಗಡಿಗೆ ಕ್ವಾರ್ಟರ್ಸ್‌, ಡೈಮ್ಸ್‌ , ನಿಕ್ಕಲ್ಸ್‌ ಮತ್ತು ಪೆನ್ನಿಸ್‌ (quarters, Dimes nickles, pennies) ತುಂಬಿದ ಪುಟ್ಟ ಚೀಲದೊಂದಿಗೆ ಹೋದನು. ಶೋ ಕೇಸಿನಿಂದ ಅದನ್ನು ತೆಗೆಸಿದ್ದೂ ಆಯ್ತು ; ಇನ್ನು ಹಣ ಕೊಡುವುದೊಂದು ಬಾಕಿ. ತನ್ನ ಪುಟ್ಟ ಚೀಲದಿಂದ ಚಿಲ್ಲರೆಯನ್ನೆಲ್ಲ ಎಣಿಸಿ ಆ sales womanಗೆ ಇನ್ನೇನು ಕೊಡಬೇಕು ಎನ್ನುವಷ್ಟರಲ್ಲಿ , ಒಂದು ಪೆನ್ನಿ (ಅಂದರೆ, cent) ಕಡಿಮೆಯಾಗಿದ್ದುದು ಅವನ ಗಮನಕ್ಕೆ ಬಂತು. ತಾನು ಎಣಿಸಿದುದು ತಪ್ಪಾಗಿರಬಹುದೆಂದು, ಸ್ವಲ್ಪ ಬದಿಗೆ ಸರಿದು ಇನ್ನೊಮ್ಮೆ ಎಣಿಸಿದನು; ಮತ್ತೊಮ್ಮೆ ಎಣಿಸಿದನು. ಎಷ್ಟು ಬಾರಿ ಎಣಿಸಿದರೂ, ಒಂದು ಪೆನ್ನಿ ಕಮ್ಮಿಯೇ ಆಗಿತ್ತು. ಅವನಿಗೆ ತೀರ ನಿರಾಶೆಯಾಯ್ತು. ಆ ಅಂಗಡಿಯವಳ ಹತ್ತಿರ ತನ್ನ ಬಳಿ ಇರುವ ಹಣ ಸ್ವಲ್ಪ ಕಡಿಮೆ ಎಂದು ಕ್ಷಮೆ ಕೇಳಿ ಅಂಗಡಿಯಿಂದ ಹೊರ ಬಿದ್ದನು. ಹೊರಗೆ ಬಂದೂ, ಇನ್ನೊಮ್ಮೆ ಎಣಿಸಿದನು. ಇದನ್ನು ನೋಡಿದ ಆ ಅಂಗಡಿಯವಳು ಇವನನ್ನು ಕರೆದು, ಕಡಿಮೆ ಬಿದ್ದ ಹಣವೆಷ್ಟೆಂದು ಕೇಳಿದಾಗ ಇವನು ಇದ್ದ ಸಂಗತಿ ತಿಳಿಸಿದ. ಅವಳು ‘ಅಷ್ಟೇ ತಾನೆ? ಪರವಾಗಿಲ್ಲ ಬಿಡು. ಈ ಹಾರವನ್ನು ಕೊಂಡು ಹೋಗು’ ಎಂದು ಅದನ್ನು ಅವನ ಕೈಗಿತ್ತಳು. ನಿರಾಶೆ ಅಳಿದು ಅರವಿಂದನ ಮುಖ ಸಂತೋಷದಿಂದ ಅರಳಿತು. ಹೆಮ್ಮೆಯಿಂದ ಹಾರದೊಂದಿಗೆ ಮನೆಗೆ ಮರಳಿ, ತಾಯಿಗೆ ಕೊಟ್ಟಾಗ ಅವನಲ್ಲಿ ಮೂಡಿದ ತೃಪ್ತಿ , ಸಂತೋಷಗಳನ್ನು ಇಲ್ಲಿ ಹೇಳಬೇಕಾದುದಿಲ್ಲ !

  ಮಗನು ಕೊಟ್ಟ ಉಡುಗೊರೆ, ಅದರ ಹಿಂದಿದ್ದ ಪ್ರೀತಿ, ನನ್ನಾಕೆಯ ಹೃದಯ ತಟ್ಟಿತ್ತು. ಅದನ್ನು ಸ್ವೀಕರಿಸುತ್ತ ಅವಳ ಕಣ್ಣು ಒದ್ದೆಯಾಗಿದ್ದಲ್ಲಿ ಆಶ್ಚರ್ಯವೇನಿಲ್ಲ ! ಅರವಿಂದನಿಗೂ ಅಪಾರ ತೃಪ್ತಿ ದೊರಕಿತ್ತು. ಲಕ್ಷ್ಮಿಯ ಜೊತೆಗೆ ನಾನೂ, ಅವನ sentiment ಗೆ ಹೆಮ್ಮೆ ಪಟ್ಟೆ. ಆದರೂ, ಇದಕ್ಕೂ ಹೆಚ್ಚಿನ ಹೆಮ್ಮೆಯನ್ನು ಅವನ ಈ ಕೆಳಗಿನ ವರ್ತನೆ ತಂದುಕೊಟ್ಟಿತು.

  ಅಂದು ಉಡುಗೊರೆ ಕೊಟ್ಟ ಮೇಲೆ, ಕಳೆದು ಹೋದ ಪೆನ್ನಿಗಾಗಿ ತನ್ನ ರೂಮನ್ನೆಲ್ಲ ಹುಡುಕಿದನು. ಅದು ಸಿಕ್ಕಿದ ಮರುದಿನವೇ ಅದನ್ನು ಆ ಅಂಗಡಿಗೆ ಹೋಗಿ, ಕೊಟ್ಟು ತನ್ನ ಸಾಲದ ಹೊರೆಯನ್ನು ಇಳಿಸಿದನು. ಆ ಅಂಗಡಿಯವಳು ಇವನ ಪ್ರಾಮಾಣಿಕತೆಗೆ ತಲೆದೂಗಿರಬೇಕು. ಅಂದಿನ ಅವನ ವರ್ತನೆ ನಮಗೆ ಹೆಮ್ಮೆ ಕೊಡುವುದರ ಜತೆಗೇ ಅವನ ಮೇಲೆ ಗೌರವವನ್ನೂ ತಂದಿತ್ತು. ಲಕ್ಷ್ಮಿ, ಅಂದು ಮಗನು ಕೊಟ್ಟ ಹಾರವನ್ನು ‘ನಿಧಿ’ಯಂತೆ ಇಂದಿಗೂ ಉಳಿಸಿಕೊಂಡು ಬಂದಿರುತ್ತಾಳೆ. ಅದನ್ನು ತೊಡುವಾಗಲೆಲ್ಲ ಅವಳ ಹೃದಯ ತುಂಬಿ ಬಂದು ಮಗನ ಪ್ರಾಮಾಣಿಕತೆಯ ಬಗ್ಗೆ ಹೆಮ್ಮೆ ಪಡುತ್ತಲಿದ್ದಲ್ಲಿ ಅದೇನೂ ಆಶ್ಚರ್ಯವಲ್ಲ ! ಇತ್ತೀಚೆಗೆ, ನಮ್ಮ ಆತ್ಮೀಯರೊಬ್ಬರೊಡನೆ ಈ ವಿಚಾರವನ್ನು ಹೆಮ್ಮೆಯಿಂದ ಹೇಳುತ್ತಿದ್ದಾಗ, ಅದು, ಅವಳ ಮುಖದಿಂದ ಸೂಸುತ್ತಿರುವುದನ್ನು ನಾನು ಗಮನಿಸಿದ್ದೇನೆ. (ಅದು ಸ್ವಾಭಾವಿಕವಲ್ಲವೇ?) ಆ ಹೆಮ್ಮೆಯಲ್ಲಿ ನಾನೂ ಭಾಗಿಯಾಗಿದ್ದೇನೆಂದು ಬೇರೆ ಹೇಳಬೇಕಾಗಿಲ್ಲವಷ್ಟೆ !

  ಮುಖಪುಟ / ಎನ್‌ಆರ್‌ಐ

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more