ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಕಲಾವಿದರೊಂದಿಗೆ ...

By Staff
|
Google Oneindia Kannada News

My moments of Joy- Vallisha Shastryಕನ್ನಡ ಕಲಾವಿದರೊಂದಿಗೆ ...
ಡೆಟ್ರಾಯಿಟ್‌ ಸಮ್ಮೇಳನ ಯಶಸ್ವಿಯಾಯಿತೊ ಇಲ್ಲವೊ ಎನ್ನುವುದು ಬೇರೆಯ ಮಾತು ; ಆದರೀ ಸಮ್ಮೇಳನ ತವರು ಸಾಹಿತಿಗಳು- ಕಲಾವಿದರನ್ನು ಅಮೆರಿಕನ್ನಡಿಗರಿಗೆ ಪರಿಚಯಿಸುವ ವೇದಿಕೆಯಾದದ್ದಂತೂ ನಿಜ.

ಡೆಟ್ರಾಯಿಟ್‌ನಲ್ಲಿ ನಡೆದ ಎರಡನೇ ವಿಶ್ವ ಕನ್ನಡ ಸಮ್ಮೇಳನದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಹ್ಯೂಸ್ಟನ್‌ನಲ್ಲಿ ನಡೆದ ಸಮ್ಮೇಳನದಲ್ಲಿ ಭಾಗವಹಿಸಿದ ನಾನು ಈ ಸಮ್ಮೇಳನದಲ್ಲಿಯೂ ಭಾಗವಹಿಸಲೇಬೇಕೆಂದು ಬಹಳ ಉತ್ಸುಕನಾಗಿ ಹೊರಟೆ. ನಾನು ಹೊರಟಿದ್ದಷ್ಟೇ ಅಲ್ಲ ನನ್ನ ಗೆಳೆಯರನ್ನೂ ಹೊರಡಿಸಿದ್ದೆ .

ದಕ್ಷಿಣ ಕ್ಯಾಲಿಫೋರ್ನಿಯದ ಕರ್ನಾಟಕ ಸಾಂಸ್ಕೃತಿಕ ಸಂಘದ ಸ್ನೇಹಿತರನ್ನೂ, ನ್ಯೂಜೆರ್ಸಿಯ ನನ್ನ ಹಳೆಯ ಸ್ನೇಹಿತರನ್ನೂ ಸಮ್ಮೇಳನದಲ್ಲಿ ಭಾಗವಹಿಸುವಂತೆ ಒತ್ತಾಯಿಸಿದ್ದೆ. ಹಾಗಾಗಿ ಸುಮಾರು ಮೂವತ್ತು ನಲವತ್ತು ನನಗೆ ಗೊತ್ತಿರುವ ಸ್ನೇಹಿತರೇ ಸಮ್ಮೇಳನದಲ್ಲಿ ಸೇರುವುದು ಖಚಿತವಾದ್ದರಿಂದ ಸಮ್ಮೇಳನದ ಗುಣಮಟ್ಟ ಹೇಗೇ ಇದ್ದರೂ- ಗೆಳೆಯರೆಲ್ಲಾ ಸೇರುವುದೇ ಹಬ್ಬ ಎಂದು ತಿಳಿದೆ. ಮೊದಲ ದಿವಸ ಸ್ನೇಹಿತರೆಲ್ಲರನ್ನೂ ಭೇಟಿ ಮಾಡಿದಾಗ ಸಮ್ಮೇಳನಕ್ಕೆ ಬಂದಿದ್ದು ಸಾರ್ಥಕವಾಯಿತು ಎನ್ನುವ ಸಮಾಧಾನ. ಅದಕ್ಕಿಂತಲೂ ಹೆಚ್ಚಾಗಿ ಕನ್ನಡ ಕಲಾವಿದರೊಂದಿಗಿನ ಭೇಟಿ ಹಳೆಯ ನೆನಪುಗಳನ್ನು ಮರುಕಳಿಸಿದ್ದಲ್ಲದೆ, ತವರಿನ ನೆನಪಿಗೆ ಕಾರಣವಾಯಿತು.

ಡೆಟ್ರಾಯಿಟ್‌ ಸಮ್ಮೇಳನದಲ್ಲಿ ಭೇಟಿಯಾದ- ಪರಿಚಿತರಾದ ಕಲಾವಿದ- ಸಾಹಿತಿಗಳೊಂದಿಗಿನ ಅನುಭವಗಳನ್ನು ದಾಖಲಿಸುವುದು ಈ ಲೇಖನದ ಉದ್ದೇಶ.

ಕನ್ನಡ ಕಲಾವಿದರ ಪೈಕಿ ಮೊದಲು ಮಾತಿಗೆ ಸಿಕ್ಕವರು ಖ್ಯಾತ ಚಿತ್ರನಟಿ ಉಮಾಶ್ರೀ. ಆಕೆ ನನಗೆ ಹಳೆಯ ಪರಿಚಯ. ಉಮಾಶ್ರೀ ಮತ್ತು ನಾನು ಜೊತೆಯಲ್ಲಿ ನಾಟಕ ಮಾಡುತ್ತಿದ್ದೆವು. ನ್ಯೂಜೆರ್ಸಿ ಸ್ನೇಹಿತರಾದ ಆಂಡಿ ಅಯ್ಯಂಗಾರ್‌ ನನಗೆ ಉಮಾಶ್ರೀ ಭೇಟಿ ಮಾಡಿಸಿದರು. ಆಕೆಗೆ ಫಕ್ಕನೆ ನನ್ನ ನೆನಪಾಗಲಿಲ್ಲವಾದರೂ, ನಾನು ಅವರ ಜೊತೆ ಆಡಿದ ನಾಟಕಗಳನ್ನು ಕುರಿತು ಹೇಳಿದಾಗ ‘ಏನಣ್ಣಾ ಹಿಂಗಾಗ್ಬಿಟ್ಟಿದೀಯ.....’ ಎಂದಾಗ ಅವರು ನಿಜವಾಗಲೂ ನನ್ನನ್ನು ಮರೆತಿಲ್ಲ ಅನ್ನಿಸಿತು. ಅವರು ಮಾಡಬೇಕಾಗಿದ್ದ ಹಾಸ್ಯ ತುಣುಕಿಗೆ ಬರಬೇಕಾಗಿದ್ದ ಇನ್ನೊಬ್ಬ ಕಲಾವಿದ ಮುಖ್ಯಮಂತ್ರಿ ಚಂದ್ರು ಕಾರಣಾಂತರಗಳಿಂದ ಬರದಿದ್ದಾಗ, ಆ ಪಾತ್ರವನ್ನು ನನಗೆ ಮಾಡಲು ಹೇಳಿದ್ದು ನನ್ನ ಮತ್ತು ಅವರ ಹಳೆಯ ಸ್ನೇಹಕ್ಕೆ ಸಿಕ್ಕ ಗೌರವ. ಎಲ್ಲರೊಡನೆ ತಟಕ್ಕಂತೆ ಬೆರೆದು ಬಾಯ್ತುಂಬ ಮಾತನಾಡುವ ಉಮಾಶ್ರೀಯವರು ಸಮ್ಮೇಳನದಲ್ಲಿ ಕೆಲವೇ ನಿಮಿಷಗಳಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

‘ಉಮಾಶ್ರೀಯವರೇ ದಯವಿಟ್ಟು ಲಾಸ್‌ ಏಂಜಲೆಸ್‌ಗೆ ಬನ್ನಿ’ ಎಂದು ಕೇಳಿಕೊಂಡೆ. ಉಮಾಶ್ರೀ ಅವರು ‘ಇಲ್ಲಪ್ಪ ಬೆಂಗಳೂರಿಗೆ ಹೋಗಬೇಕು. ಬೇರೆ ಕೆಲಸ ಇದೆ’ ಎಂದು ತಪ್ಪಿಸಿಕೊಂಡರು.

ನಾಟಕದಲ್ಲಿ ಎರಡು ಮುಖ್ಯ ವಿಭಾಗಗಳು. ಒಂದು ರಂಗದ ಮೇಲೆ. ಇನ್ನೊಂದು ರಂಗದ ಹಿಂದೆ. ರಂಗದ ಮೇಲಿನ ಕಲಾವಿದರು ಎಷ್ಟು ಮುಖ್ಯವೋ ರಂಗದ ಹಿಂದಿನ ಕಲಾವಿದರು ಅಷ್ಟೇ ಮುಖ್ಯ. ರಂಗದ ಹಿಂದಿನ ಕಲಾವಿದರಲ್ಲಿ ಕನ್ನಡ ನಾಟಕ ಪ್ರತಿಯಾಬ್ಬ ಕಲಾವಿದರಿಗೂ ಪರಿಚಯ ಇರುವ ವ್ಯಕ್ತಿ ನನ್ನ ಸ್ನೇಹಿತನೂ ಆದ ಕಪ್ಪಣ್ಣ.

ಗೌರಿಬಿದನೂರಿನ ಶ್ರೀನಿವಾಸ ನಾಟಕರಂಗದಲ್ಲಿ ನ ಸ್ನೇಹಿತರಿಗೆಲ್ಲ ಕಪ್ಪಣ್ಣನೆಂದೇ ಪರಿಚಯ. ಅವನ ಬಣ್ಣ ನೋಡಿ ಹೆಸರು ಹೊಂದುತ್ತಾದರೂ ಅವನಿಗೆ ಆ ಅಡ್ಡ ಹೆಸರು ಯಾರಿಟ್ಟರೆಂದು ನನಗೆ ಗೊತ್ತಿಲ್ಲ. ಅವನ ತಿಳಿಹಾಸ್ಯ ಮುಂದಿದ್ದವರೆಲ್ಲರನ್ನೂ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತದೆ. ಅವನ ತಿಳಿಹಾಸ್ಯಕ್ಕೆ ಒಂದು ಉದಾಹರಣೆ-

ನನ್ನನ್ನು ಭೇಟಿಯಾದಾಗ ‘ಬೆನಕ ಬಿಟ್ಟು ಅಮೇರಿಕಕ್ಕೆ ಬಂದು ನೀನೆ ಬೆನಕ ಆಗಿದ್ದೀಯಲ್ಲಪ್ಪ’(ಬೆನಕ ನಾನು ಭಾಗವಹಿಸತ್ತಿದ್ದ ನಾಟಕ ಸಂಸ್ಥೆ). ನಾಟಕ ರಂಗಕ್ಕೆ ಕಪ್ಪಣ್ಣನ ಕೊಡುಗೆ ಅಪಾರ. ಬಹುಶಃ ಹವ್ಯಾಸಿ ನಾಟಕರಂಗದಲ್ಲಿ ಕಪ್ಪಣ್ಣ ಗೊತ್ತಿಲ್ಲ ಅನ್ನುವವರೇ ಇಲ್ಲ. ಸಮ್ಮೇಳನದಲ್ಲಿ ಕಾರಣಾಂತರದಿಂದ ಸ್ಟೇಜ್‌ ಮತ್ತು ಬೆಳಕಿನ ವ್ಯವಸ್ಥೆಯಲ್ಲಿ ಕಪ್ಪಣ್ಣನಿಗೆ ತನ್ನ ಚಾಕಚಕ್ಯತೆಯನ್ನು ತೋರಿಸಲು ಅವಕಾಶ ಸಿಗಲಿಲ್ಲ.

ಟಿ.ಎನ್‌. ಸೀತಾರಾಂ ಎಂದಾಗ ತಕ್ಷಣ ನೆನಪಿಗೆ ಬರುವುದು ಅವರ ಇತ್ತೀಚಿನ ಚಿತ್ರ ‘ಮತದಾನ’ ಹಾಗೂ ‘ಮನ್ವಂತರ’ ಧಾರಾವಾಹಿ. ಅವರ ಮುಖತಃ ಪರಿಚಯವಿಲ್ಲದಿದ್ದರೂ ಅವರ ಹಲೋ, ಹಲೋ ಭೇಟಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಗುತಿತ್ತಷ್ಟೆ. ಅವರಿಗೆ ನನ್ನ ಪರಿಚಯ ಮಾಡಿಕೊಂಡೆ. ‘ನಿಮ್ಮ ಬಗ್ಗೆ ಕೇಳಿದ್ದೇನೆ’ ಎಂದು ಹೇಳಿದರು. ‘ಆಯಿತು ನಮಸ್ಕಾರ’ ಎಂದು ಹೇಳಿ ಬಂದು ಬಿಟ್ಟೆ , ಅಷ್ಟೆ.

ಕಪ್ಪಣ್ಣ ಮತ್ತು ಸೀತಾರಾಮ್‌ ಅಮೆರಿಕಾಗೆ ಜೊತೆಯಲ್ಲಿ ಬಂದಿದ್ದಾರೆಂದು ಗೊತ್ತಾಯಿತು. ಕಪ್ಪಣ್ಣನಿಗೆ ನಮ್ಮೂರಿಗೆ ಬರಲು ಆಹ್ವಾನ ಕೊಟ್ಟೆ. ನನ್ನ ಫೋನ್‌ ನಂಬರ್‌ ತಗೊಂಡ್‌ ಫೋನ್‌ ಮಾಡ್ತೀನಿ ಅಂದ.

ನಂತರದ ಭೇಟಿ ವೈ.ಕೆ.ಮುದ್ದುಕೃಷ್ಣ ಮತ್ತು ಅಪ್ಪಗೆರೆ ತಿಮ್ಮರಾಜು ಅವರದು. ಅವರ ಭೇಟಿ ಆದದ್ದು ರಂಗದ ಹಿಂದೆ. ಮುದ್ದುಕೃಷ್ಣರವರ ಪರಿಚಯ ಅಷ್ಟಿಲ್ಲವಾಗಿದ್ದರೂ, ಕಲಾಕ್ಷೇತ್ರದ ಕಟ್ಟೆಯ ಮೇಲೆ ಅವರನ್ನು ನೋಡಿದ್ದು ನೆನಪಿದೆ. ಅಪ್ಪಗೆರೆಯವರದಂತೂ ಹೊಸ ಪರಿಚಯ. ಅಪ್ಪಗೆರೆಯ ಹಾಡು ಬಹಳ ಚೆನ್ನಾಗಿತ್ತು. ಸಮ್ಮೇಳನ ಮುಗಿಸಿ ಲಾಸ್‌ ಏಂಜೆಲೆಸ್‌ಗೆ ಬಂದಾದ ಮೇಲೆ ಕಪ್ಪಣ್ಣನಿಂದ ಫೋನ್‌. ‘ಏನಪ್ಪಾ ಗುರು. ನಾವು ಲಾಸ್‌ ಏಂಜಲೆಸ್‌ಗೆ ಬರ್ತಾ ಇದೀವಿ. ಏನಾದರೂ ವ್ಯವಸ್ಥೆ ಮಾಡುಕ್ಕಾಗುತ್ತಾ’ ಅಂದ.

‘ಬಹಳ ಸಂತೋಷ. ಬಾಪ್ಪ ಗುರು’ ಅಂದೆ.

ಅದಕ್ಕೆ ಅವನು ‘ಒಂದು ಸಣ್ಣ ಪ್ರಾಬ್ಲೆಮ್‌ ಇದೆ’ ಅಂದ

‘ಅದೇನ್‌ ಅಪ್ಪ.’ ಎಂದೆ

‘ನಾವು ಒಟ್ಟಿಗೆ 6 ಜನ ಇದೀವಿ. ಉಳ್ಕೊಳ್ಳೋಕೆ ವ್ಯವಸ್ಥೆ ಮಾಡೊಕ್‌ ಆಗುತ್ತಾ?’ ಅಂದ

ಸೀತಾರಮ್‌ ಕಪ್ಪಣ್ಣನ ಜೊತೆಯಲ್ಲಿದ್ದಿದ್ದು ನನಗೆ ಗೊತ್ತಿತ್ತು. ಇನ್ಯಾರು ಮತ್ತೆ ನಾಲ್ಕು ಜನ ಅಂತ ಕುತೂಹಲದಿಂದ ‘ಅದ್ಯಾರಪ್ಪ ಇನ್ನೂ ನಾಲ್ಕು ಜನ’ ಎಂದೆ.

‘ಮುದ್ದುಕೃಷ್ಣ , ಅವರಿಬ್ಬರ ಮಕ್ಕಳು ಮತ್ತು ಅಪ್ಪಗೆರೆ’

‘ಅಲ್ವೋ ಕಪ್ಪಣ್ಣ , ಅದಕ್ಕೆ ಪ್ರಾಬ್ಲಮ್‌ ಅಂತೀಯಲ್ಲ. ಅದು ನಮ್ಮ ಅದೃಷ್ಟ. ಅವರುಗಳು ನಮ್ಮ ಮನೆಗೆ ಬರ್ತಾ ಇರೋದು’ ಎಂದೆ.

ಎಲ್ಲರೂ ಬಂದು ನಮ್ಮ ಮನೆಯಲ್ಲಿ 3 ದಿವಸ ಇದ್ದರು. ಮನೆಯ ಬಾಗಿಲಿಗೆ ಬಂದಾಗಿನಿಂದ ಹೊರಡುವ ದಿವಸ ಏರ್‌ಪೋರ್ಟ್‌ವರೆವಿಗೂ ಬರೀ ಹಾಡು, ಜೋಕುಗಳು. ನಮ್ಮ ಮನೆಯ ಗಿಡಗಳೆಲ್ಲಾ ಚೆನ್ನಾಗಿ ಚಿಗುರಲು ಶುರುವಾಯಿತು. ಮುದ್ದುಕೃಷ್ಣ ಅವರ ಮಕ್ಕಳಂತೂ ನಮ್ಮ ಮನೆಯ ಮಕ್ಕಳಂತೆ ಕೆಲವೇ ನಿಮಿಷಗಳಲ್ಲಿ ಹೊಂದಿಕೊಂಡರು. ಹೊರಡುವ ದಿವಸವಂತೂ ನನ್ನ ಹೆಂಡತಿ ಅಳಲು ಶುರು ಮಾಡಿದ್ದಳು. ಸೀತಾರಾಮ್‌ ‘ಮನ್ವಂತರ’ದ ತುಣುಕಿನ ಸಿ.ಡಿ.ಗಳನ್ನೂ ನಮ್ಮ ಮನೆಯಲ್ಲಿ ಬಿಡುಗಡೆ ಮಾಡಿದ್ದು ನಮಗೆಲ್ಲಾ ಹೆಮ್ಮೆಯ ವಿಚಾರ.

ಕನ್ನಡದ ಖ್ಯಾತ ಜಾನಪದ ಗಾಯಕಿ ಬಿ.ಕೆ. ಸುಮಿತ್ರ ಅವರು ಪ್ರೇಕ್ಷಕರ ಮುಂದಿನ ಸಾಲಿನಲ್ಲಿ ಕುಳಿತಿರುವುದನ್ನು ನೋಡಿದೆ. ನಾನೇ ಹೋಗಿ ‘ನಮಸ್ಕಾರ. ನನ್ನ ಹೆಸರು ವಲ್ಲೀಶ ಶಾಸ್ತ್ರಿ ಅಂತ. ನಾನು ನಿಮ್ಮ ಅಭಿಮಾನಿ. ನಿಮ್ಮ ಹಾಡುಗಳೆಂದರೆ ತುಂಬಾ ಇಷ್ಟ’ ಎಂದೆ. ‘ನಮಸ್ಕಾರ ತುಂಬ ಒಳ್ಳೆಯದು.’ ಎಂದರು. ಕಾರ್ಯಕ್ರಮದ ನಂತರ ರಂಗದ ಹಿಂದೆ ಬಂದು ಅವರು ನಮ್ಮನ್ನು ಅಭಿನಂದಿಸಿದರು.

‘ದಯವಿಟ್ಟು ನಮ್ಮ ಮನೆಗೆ ಬನ್ನಿ’ ಎಂದು ಆಹ್ವಾನಿಸಿ ನಮ್ಮ ಮನೆಯಲ್ಲೇ ಇಳಿದುಕೊಳ್ಳಲು ಕೇಳಿಕೊಂಡೆ. ಅದಕ್ಕೆ ಒಪ್ಪಿದ ಅವರು ‘ನಾನು ನಿಮಗೆ ಫೋನ್‌ ಮಾಡ್ತೀನಿ ಡೆಟ್ರಾಯಿಟ್‌ನಿಂದ’ ಎಂದರು. ಅವರು ಬರುವ ವೇಳೆಗೆ ನನ್ನ ಹೆಂಡತಿ ಕೈ ಬೆರಳು ಮುರಿದುಕೊಂಡಿದ್ದಳು. ಅವರನ್ನು ಮನೆಯಲ್ಲಿ ಇರಿಸಿಕೊಳ್ಳಲು ತುಂಬಾ ಜನ ನನಗೆ ಭರವಸೆ ಕೊಟ್ಟಿದ್ದರು. ಅದಕ್ಕೆ ಫೋನ್‌ ಮಾಡಿ ‘ಈ ರೀತಿ ಆಗಿದೆ. ನಿಮಗೆ ಊಟಕ್ಕೆ ತೊಂದರೆ ಆಗಬಹುದು. ನಿಮಗೆ ಇನ್ನೊಬ್ಬರ ಮನೆಯಲ್ಲಿ ಏರ್ಪಾಡು ಮಾಡುತ್ತೇನೆ’ ಎಂದೆ.

‘ಅಲ್ಲ ವಲ್ಲೀಶ್‌ರವರೆ, ಅದಕ್ಯಾಕೆ ಯೋಚನೆ ಮಾಡ್ತೀರ ? ನಾನೆ ನಿಮಗೆಲ್ಲ ಅಡುಗೆ ಮಾಡ್ತೀನಿ’ ಅಂದಾಗ ಅವರ ಸರಳತೆ ಮತ್ತು ನಮ್ಮ ಮೇಲಿನ ಪ್ರೀತಿ ನೋಡಿ ಮಾತು ಮರೆತುಹೋಯಿತು. ನಮ್ಮ ಮನೆಯಲ್ಲಿ ಬಂದು ಮಕ್ಕಳಿಗೆಲ್ಲಾ ಹಾಡು ಹೇಳಿಕೊಟ್ಟು ನಮ್ಮನ್ನೆಲ್ಲಾ ಪ್ರತಿದಿನ ಗಾನಸಮುದ್ರದಲ್ಲಿ ಮುಳುಗಿಸಿದ್ದು ಮರೆಯುವುದಕ್ಕಾಗುವುದಿಲ್ಲ.

ಮುಂದಿನ ಭೇಟಿ ರತ್ನಮಾಲಾಪ್ರಕಾಶ್‌ ಮತ್ತು ಮಾಲತಿ ಶರ್ಮ. ನ್ಯೂಜೆರ್ಸಿಯಲ್ಲಿ ನಮ್ಮ ಆಪ್ತ ಸ್ನೇಹಿತರಾದ ಪ್ರಸನ್ನಕುಮಾರ್‌ ಅವರ ಮನೆಯಲ್ಲಿ ಎರಡು ವರ್ಷದ ಹಿಂದೆ ರತ್ನಮಾಲಾ ಅವರ ಪರಿಚಯವಾಗಿತ್ತು . ಈಗ ಮತ್ತೆ ಭೇಟಿಯಾಗಿದ್ದು ನಮಗೆಲ್ಲ ಸಂತೋಷವಾಗಿತ್ತು. ಅವರ ಜೊತೆಗೆ ಬಂದಿದ್ದವರು ಖ್ಯಾತ ಗಾಯಕಿ ಮಾಲತಿ ಶರ್ಮ ಮತ್ತು ಖ್ಯಾತ ತಬಲವಾದಕ ದೇವಾಂಬು. ನಿಮ್ಮ ಊರಿಗೆ ಬರುತ್ತಾ ಇದ್ದೇನೆ, ನನ್ನ ತಂಗಿ ಅಲ್ಲೇ ಇದ್ದಾಳೆ ಎಂದಾಗ ‘ದಯವಿಟ್ಟು ನಮ್ಮ ಮನೆಗೂ ಬನ್ನಿ’ ಎಂದು ಕೇಳಿಕೊಂಡೆ.

ಅವರು ಬಂದು ನಮ್ಮ ಮನೆಯಲ್ಲಿ ಒಂದು ಸಂಗೀತ ಸಭೆಯನ್ನೂ ನಡೆಸಿಕೊಟ್ಟರು. ಅವರ ಸಂಗೀತ ಕೇಳಲು ನನ್ನ ಸ್ನೇಹಿತರುಗಳು ಸ್ಯಾಂಡಿಯಾಗೋದಿಂದಲೂ ಬಂದಿದ್ದು ಅವರ ಪ್ರಸಿದ್ಧಿಗೆ ಸಾಕ್ಷಿ . ಅವರ ಗಾನವಂತೂ ನಮ್ಮೆಲ್ಲರನ್ನೂ ಕನಸಿನ ಲೋಕಕ್ಕೆ ಕರೆದುಕೊಂಡು ಹೋಗಿತ್ತು.

ಧಾರವಾಡದ ಮನೋಹರ ಗ್ರಂಥಮಾಲಾ ಪ್ರಕಾಶಕ ನನ್ನ ಆಪ್ತ ಸ್ನೇಹಿತ ರಮಾಕಾಂತ ಜೋಷಿ ಹಾಗೂ ನನ್ನ ಪರಿಚಯ 10 ವರ್ಷ ಹಳೆಯದು. ನಾನು ಧಾರವಾಡ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದಾಗ ದಿನಾಲೂ ಸಂಜೆ ಮನೋಹರ ಗ್ರಂಥಮಾಲಾದ ಅಟ್ಟದ ಮೇಲೆ ನಮ್ಮಿಬ್ಬರ ಹರಟೆ. ನನ್ನ ನಾಟಕದ ಚಟುವಟಿಕೆಗೆ ಚುರುಕು ಸಿಕ್ಕಿದ್ದೂ ಅಲ್ಲೇ. ರಮಾಕಾಂತ ಜೋಷಿ ಖ್ಯಾತ ಕನ್ನಡ ನಾಟಕಕಾರ ಜಡಭರತರ (ಸತ್ತವರ ನೆರಳು ಖ್ಯಾತಿ) ಮಗ.

ಡೆಟ್ರಾಯಿಟ್‌ನಲ್ಲಿ ಪರಿಚಯ ಆಗದಿದ್ದರೂ, ಲಾಸ್‌ ಏಂಜಲಿಸ್‌ನಲ್ಲಿ ಪರಿಚಯವಾದವರು ಡಾ।। ನಾಗರಾಜ್‌ ಹವಾಲ್ದಾರ್‌. ಅವರ ಹಿಂದಿನ ಪರಿಚಯ ಇಲ್ಲದಿದ್ದರೂ ಅವರನ್ನು ನೋಡಿದಾಗ ಎಲ್ಲೋ ನೋಡಿದ ನೆನಪು. ಅವರು ಓದಿದ ಕಾಲೇಜು, ವರ್ಷ ಎಲ್ಲಾ ಕೇಳಿದಾಗ ಮರುಕಳಿಸಿ ಬಂದಿದ್ದು ನಮ್ಮ ಹಳೆಯ ನೆನಪುಗಳು. ನಾನು ಕರ್ಣಾಟಕ ವಿಶ್ವ ವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದಾಗ ಇವರು ಡಾಕ್ಟರೇಟ್‌ ಮಾಡುತ್ತಿದ್ದರು. ನಾನು ಹಾಗೂ ಹವಾಲ್ದಾರ್‌ ದಿನಾಲೂ ಶಟಲ್‌ ಆಡುತ್ತಿದ್ದೆವು.

ಹವಾಲ್ದಾರ್‌ ಸಂಗೀತ ಕಚೇರಿ ಬಹಳ ಚೆನ್ನಾಗಿತ್ತು. ಕಚೇರಿ ಮುಗಿದ ನಂತರ ಅವರನ್ನು ‘ಕವಿ ನಿಸಾರ್‌ ಅಹ್ಮದ್‌ ಅವರ ಜೊತೆಯಲ್ಲಿ ಲ್ಯಾಸ್‌ ವೇಗಾಸ್‌ಗೆ ಬರುತ್ತೀರ’ ಎಂದು ಕೇಳಿದಾಗ ಮೊದಲು ಅನುಮಾನಪಟ್ಟು ನಂತರ ತಮ್ಮ ಮಿಕ್ಕ ಕಾರ್ಯಕ್ರಮಗಳನ್ನು ಮುಂದಕ್ಕೆ ಹಾಕಿ ಬರುತ್ತೇನೆ ಎಂದು ಒಪ್ಪಿಕೊಂಡರು.

ನಂತರದ ಭೇಟಿ ಕನ್ನಡದ ಕವಿ ನಿಸಾರ್‌ ಅಹ್ಮದ್‌ ಅವರದ್ದು. ಎಲ್ಲರಿಗೂ ಕವಿಯೆಂದೇ ಪರಿಚಯವಾಗಿರುವ ಇವರು ನಮ್ಮ ಕಾಲೇಜಿನ ಪ್ರೊಫೆಸರ್ರೂ ಹೌದು. ಅವರ ಕನ್ನಡ ನುಡಿ ಕೇಳಲೇ ಒಂದು ಅಂದ. ಅವರ ಚುರುಕಾದ ತಿಳಿಹಾಸ್ಯ ತಮ್ಮ ಸುತ್ತಮುತ್ತಲಿರುವವರನ್ನು ಚಕಿತಗೊಳಿಸುತ್ತದೆ. ಅವರ ಜೊತೆ ಮಾಡಿದ ಲ್ಯಾಸ್‌ ವೇಗಾಸ್‌ ಪ್ರವಾಸ ಮರೆಯಲಾಗದ ಪ್ರವಾಸ. ತಮ್ಮ ಈ ವಯಸ್ಸಿನಲ್ಲಿ ರಾತ್ರಿಯೆಲ್ಲಾ ಲ್ಯಾಸ್‌ ವೇಗಾಸ್‌ನ ಎಲ್ಲ ಹೊಟೆಲ್‌ಗಳನ್ನು ಕಾಲು ನಡಿಗೆಯಲ್ಲಿ ನೋಡಿದ ನಂತರ ನನ್ನ ಸುಮಾರು ಕ್ಯಾಲೋರಿಗಳು ಕರಗಿದ್ದವು. ‘ಮೇಷ್ಟ್ರೆ ಸುಸ್ತಾಗಿಲ್ವಾ?’ ಅಂದರೆ ’ಅಲ್ಲಪ್ಪ , ನಾನು ಕರ್ನಾಟಕದ ಅಂದ ನೋಡಿ ನಿತ್ಯೋತ್ಸವ ಬರೆದೆ. ಇಲ್ಲಿ ನೋಡಪ್ಪ ನಿತ್ಯ ದೀಪಾವಳಿ ತರ ಇದೆ’ ಅಂತ ಅಂದ್ರು.

ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸದಿದ್ದರೂ ಅದೇ ವೇಳೆಯಲ್ಲಿ ಅಮೇರಿಕ ಪ್ರವಾಸ ಮಾಡುತ್ತಿದ್ದವರು- ಜಯುಶ್ರೀ ಮತ್ತು ಅವರ ಯಜಮಾನರಾದ ಆನಂದ ರಾವ್‌. ಇವರಿಬ್ಬರ ಪರಿಚಯ ಬೆನಕ ಕಾಲದ್ದು. ನಾನು ಅವರ ಜೊತೆ ‘ಜೋಕುಮಾರ ಸ್ವಾಮಿ’ ನಾಟಕದಲ್ಲಿ ಚಿಕ್ಕ ಪಾತ್ರ ಮಾಡಿದ್ದೆ. ಆನಂದ್‌ ನನ್ನ ರಂಗಭೂಮಿಯ ಹಿಂದಿನ ಪರಿಚಯ. ಇವರನ್ನು ನಮ್ಮ ಮನೆಗೆ ಭೋಜನಕ್ಕೆ ಆಹ್ವಾನಿಸಿದಾಗ ಮನ್ನಿಸಿ ಬಂದಿದ್ದು ಬಹಳ ಸಂತೋಷವಾಯಿತು. ಜಯಶ್ರೀ ಅವರ ‘ಬಣ್ಣದ ಬದುಕು ...’ ಏಕಪಾತ್ರಾಭಿನಯ ಕನ್ನಡ ನಾಟಕ ರಂಗಕ್ಕೇ ಒಂದು ವಿಶೇಷ ಕೊಡುಗೆ.

http://www.thatskannada.com ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಅಮೇರಿಕನ್ನಡಿಗರಲ್ಲಿ ಮನೆ ಮನೆಯ ಮಾತಾಗಿರುವ ಅಂತರ್ಜಾಲ ಪತ್ರಿಕೆಯಿದು. ಈ ಪತ್ರಿಕೆಯ ಸಂಪಾದಕರು ಮನೆಗೆ ಬಂದರೆ ಎಷ್ಟು ಆನಂದವಾಗಬೇಕು !? ನಿಮಗೀಗಾಲೇ ಹೊಳೆದಿರಬೇಕು, ನಾನು ಶಾಮಸುಂದರ್‌ ಅವರ ಬಗ್ಗೆ ಹೇಳುತ್ತಿದ್ದೇನೆನ್ನುವುದು. ಶಾಮ್‌ ಅವರ ಮಾತನ್ನು ಕೇಳಲು, ದಟ್ಸ್‌ಕನ್ನಡ ಅಂತರ್ಜಾಲ ಪತ್ರಿಕೆಯ ಬಗ್ಗೆ ಪ್ರಶ್ನೆಗಳನ್ನು ಕೇಳಲು ಎಲ್ಲರಿಗೂ ಕಾತುರ. ಇದರ ಅವಕಾಶ ಮಾಡಿಕೊಟ್ಟವರು ನಮ್ಮೆಲ್ಲರ ಪರಿಚಿತರಾದ ಹರಿಹರೇಶ್ವರ ಅವರು. ಶಾಮ್‌ ಅವರೊಂದಿಗಿನ ನನ್ನ ಇ-ಮೇಲ್‌ ಪರಿಚಯ ಆಗ್ಗೆ ಒಂದು ವರ್ಷ ಕಾಲದ್ದು. ಆದರೆ ಮುಖತಃ ಭೇಟಿ ಆದದ್ದು ಕನ್ನಡ ಸಮ್ಮೇಳನದಲ್ಲೇ. ಸರಳ ಸ್ವಭಾವಿ. ಬುದ್ಧಿವಂತರು. ಶಾಮ್‌ ಅವರೊಂದಿಗಿನ ಭೇಟಿ ಒಂದು ಅವಿಸ್ಮರಣೀಯ ಅನುಭವ.

ಸಮ್ಮೇಳನದ ನೆವದಲ್ಲಿ ನಮಗೆ ಪರಿಚಿತರಾದ ಸಾಹಿತಿ ಕಲಾವಿದರು ಒಬ್ಬಿಬ್ಬರಲ್ಲ . ಇವರೆಲ್ಲರ ಪರಿಚಯ- ಸಹವಾಸ ನಮಗೆಲ್ಲ ಸಂತೋಷವನ್ನು ತಂದಿದೆ. ಅವರಲ್ಲಿ ಅನೇಕರು ನಮ್ಮ ಮನೆಗೆ ಬಂದಿದ್ದು ನಮಗೆ ಕನ್ನಡಮ್ಮನ ಸೇವೆ ಮಾಡಿದಷ್ಟು ತೃಪ್ತಿ ನೀಡಿತ್ತು. ಈ ಎಲ್ಲ ಕಲಾವಿದರು ಈಗ ನಮ್ಮ family friends ಆಗಿದ್ದಾರೆ. ನಮ್ಮ ಬೆಂಗಳೂರಿನ ಭೇಟಿ ಇವರೆಲ್ಲರನ್ನು ಭೇಟಿಯಾಗದೆ ಮುಗಿಯುವುದೇ ಇಲ್ಲ. ಇದರಿಂದಾಗಿ ನಮ್ಮ vacation ಅವಧಿ ಸ್ವಲ್ಪ ದೊಡ್ಡದಾಗಿದೆ.

ಮುಂಬರುವ ಫ್ಲಾರಿಡಾ ಸಮ್ಮೇಳನದ ಬಗೆಗೆ ಕನಸು ಕಾಣಲಿಕ್ಕೆ ಆಗಲೇ ಶುರು ಮಾಡಿದ್ದೇನೆ. ಮುಂದಿನ ಸಮ್ಮೇಳನಕ್ಕೆ ಯಾರು ಯಾರು ಬರುತ್ತಾರೆ ಎನ್ನುವುದನ್ನು ಕಲ್ಪಿಸಿಕೊಳ್ಳುತ್ತಿದ್ದೇನೆ. ಸಾಹಿತಿ- ಕಲಾವಿದರ ಸಂಗ ಹೆಜ್ಜೇನು ಸವಿದಂತೆ ಎನ್ನುವುದು ನಾನು ಕಂಡುಕೊಂಡ ಸತ್ಯ.

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X