ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನೂ ಕನ್ನಡಿಗ....

By * ಡಾ. ಗುರುಪ್ರಸಾದ್‌ ಕಾಗಿನೆಲೆ, ಮಿನೆಸೊಟಾ
|
Google Oneindia Kannada News

Dr. Guruprasad Kaginela
ನಾನೂ ಕನ್ನಡಿಗ....

ಯಾಕೆ ಅಲ್ಲವೇ? ಯಾಕೆ ಅಲ್ಲ ಅಂದು ನನ್ನ ಪ್ರಶ್ನೆ.

ಬೆಂಗಳೂರಿನವನಿದ್ದ ಹಾಗೆ, ಕಾಸರಗೋಡಿಗನ ಹಾಗೆ, ಬಳ್ಳಾರಿಯ ಮಂದಿಯ ಹಾಗೆ, ಹುಬ್ಬಳ್ಳಿಯಾಂವ ಇಲ್ಲವೇ? ಹಾಗೇ ನಾನೂ.
ಕುವೆಂಪುರವರು ಹೇಳಿದ್ದು ನನ್ನಂತವರಿಗೇ ಅನ್ನಿಸುತ್ತೆ 'ಎಲ್ಲಾದರೂ ಇರು, ಎಂತಾದರೂ ಇರು" ಅಂತ.

ದಿನ ಬೆಳಗಾದರೆ ನೀವು ಬೆಂಗಳೂರಿನವರು ಓದುವುದಕ್ಕಿಂತ ಹೆಚ್ಚು ಕನ್ನಡ ಪತ್ರಿಕೆಗಳನ್ನು ಓದುತ್ತೇನೆ. ಆಗಾಗ ಚಾರಣಿಗರ ಅಭಿಪ್ರಾಯದಲ್ಲೋ, ಓದುಗರ ಓಲೆಯಲ್ಲೋ ಬರೆಯುತ್ತೇನೆ. 'ಬರಹ"ದ ಎಲ್ಲಾ ಫಾಂಟ್‌ಗಳನ್ನೂ ಡೆಸ್ಕ್‌ಟಾಪಿನ ಮೇಲೆ ಇಳಿಸಿಕೊಂಡಿದ್ದೇನೆ. ನೀವು ದೊಡ್ಡ ದೊಡ್ಡ ಕನ್ನಡದ ಕವಿಗಳು, ಲೇಖಕರು ಕಂಪ್ಯೂಟರಿನಲ್ಲಿ ಇಳಿಸಿರುವುದನ್ನೆಲ್ಲಾ ಓದಿದ್ದೇನೆ. ನಿಯತಕಾಲಿಕಗಳ ಬೌದ್ಧಿಕ ತುಮುಲಿಗಳ ಮಿಡಿತಕ್ಕೋ ತುಡಿತಕ್ಕೋ ತಡವರಿಸುತ್ತಲಾದರೂ ನಡುಗದೆ ಸ್ಪಂದಿಸುತ್ತಿದ್ದೇನೆ ಅಂತ ಅಂದುಕೊಂಡಿದ್ದೇನೆ.

ನೀವುಗಳು ನಿಮ್ಮನ್ನು ಕನ್ನಡಿಗರು ಅಂತ ಹೇಗೆ ಕರೆದುಕೊಳ್ಳುತ್ತೀರಿ? ಬೆಂಗಳೂರಿನಲ್ಲಿ ಇದ್ದೀರಿ ಅಂತಲೇ. ನಾನೂ ಬೆಂಗಳೂರಿನಲ್ಲಿದ್ದೆ. ಆಗಿಲ್ಲದ ನನ್ನತನ, ಕನ್ನಡತನ ಈಗ ಸಾವಿರಾರು ಮೈಲಿ ದೂರ ಬಂದು, ಉಸಿರುಗಟ್ಟಿಸುವ ಕೆಲಸದ ಮಧ್ಯೆ ಜಾಗೃತವಾಗಿಬಿಟ್ಟಿತೇ? ಕಂಪ್ಯೂಟರೇ ಸ್ಫೋಟಿಸುವಷ್ಟು ಬೇರೆ ಮಾಹಿತಿಯಿದ್ದರೂ ನನ್ನ ಕೈ ಬೆರಳುಗಳು ಕೀಲಿಕೈಗಳ ಮೇಲೆ ಕನ್ನಡ ಪುಟಗಳನ್ನೇ ಟಪಟಪಿಸುತ್ತವೆ... ಮಾತಾಡುವಷ್ಟೇ ಕನ್ನಡ ಬರುವ ನನ್ನ ಹೆಂಡತಿಗೂ ಅನಂತಮೂರ್ತಿಯವರ ಕಾಫ್ಕನ ಕವನವನ್ನು ಅರ್ಥೈಸಲು ಪ್ರಯತ್ನಿಸುತ್ತೇನೆ. ಬೆಂಗಳೂರಿನಲ್ಲಿ ಅರ್ಥವಾಗದ 'ನಾಕುತಂತಿ" ಈಗ ಅರ್ಥವಾಗುತ್ತದೆ ಅನ್ನಿಸುತ್ತದೆ. ರಾಮಾನುಜನ್‌ರ 'ಅಣ್ಣಯ್ಯ" ಸುಂದರರಾಯರ ವಂಶಾವಳಿಯನ್ನು ಕಂಡುಹಿಡಿದದ್ದು ನೋಡಿ ಪುಳಕಿತನಾಗುತ್ತೇನೆ.... ನನ್ನನ್ನು ಕನ್ನಡಿಗ ಅಲ್ಲ ಅಂತೀರಾ....

ನೀವು 'ನವ್ಯ"ರು ಹೇಗೆ ಕನ್ನಡಿಗರು ಹೇಳಿ. ಪ್ರಾಣೇಶಾಚಾರ್ಯ, ಜಗನ್ನಾಥನಂತಹ ಅ-ಭಾರತೀಯ ಪಾತ್ರಗಳನ್ನು ಸೃಷ್ಟಿಸಿ ಕಥೆಯಲ್ಲೇ ಕ್ರಾಂತಿ ಮಾಡಿಸುತ್ತೀರ. ಪಾತ್ರಗಳು ಸೋತರೂ ಕಥೆ ಗೆದ್ದು ನನ್ನಂಥ ಅರೆಭಾರತೀಯ ಓದುಗರಿಗೆ ಖುಷಿಕೊಡುತ್ತೀರ. ಚಂದ್ರಿಯನ್ನು ಅನುಭವಿಸುವ ಪ್ರಾಣೇಶಾಚಾರಿ ಮಂಜುನಾಥನನ್ನು ಜರೆಯುವ ಜಗನ್ನಾಥ ಯುರೋಪಿಯನ್‌ ಸಂಸ್ಕೃತಿಯ ಅನಿವಾರ್ಯ ಪ್ರಭಾವ ಎನ್ನುತ್ತೀರ. ಕೊನೆಗೆ ಅವೆಲ್ಲಾ 'ಭವ" ಬಂಧನಗಳಿಂದ ಕಳಚಿಕೊಳ್ಳಲು 'ಅಕ್ಕು" ವನ್ನು ಭೂತಾಯಿಯಾಗಿ, ವಿಶ್ವಮಾನವಳಾಗಿ ಮಾಡಿ ತಾಯಿ ಭುವನೇಶ್ವರಿಯನ್ನು ಕೃತಾರ್ಥಳನ್ನಾಗಿ ಮಾಡಿದ್ದೀರ. ನೀವು ಬರೆಯುವುದು ಕನ್ನಡವಾದರೆ ಓದುಗ ನಾನು ಕನ್ನಡಿಗ ಹೇಗಲ್ಲ ?

ಏನು ಮಾಡುತ್ತೀರಿ? ಸಾಹಿತ್ಯ ಸೃಷ್ಟಿಯ ತಿರುತಿರುಗುವ ಸಕೇಂದ್ರ ವೃತ್ತಗಳಲ್ಲಿ ಬಿಂದುವಿನ ದೂರಕ್ಕೆ ಹತ್ತಿರವಿರುವ ಫಣಿಯಮ್ಮ, ಹೆಗ್ಗಡಿತಿಯರೇ ದೂರವಾಗುತ್ತಿರುವ ನನ್ನಂತವರಿಗೆ ಈ ವೃತ್ತವನ್ನು ರಸೆಲ್‌, ರಶ್ದೀಗಳು ಎಲ್ಲೋ ಬೇಧಿಸಿ ಒಳನುಗ್ಗಿದಂತೆನ್ನಿಸಿದರೂ ಅವರುಗಳ ಕಣ್ಣುತಪ್ಪಿಸಿ ತೇಜಸ್ವಿ, ಚಿತ್ತಾಲೇತರರನ್ನು ಸೇರಲು ಪ್ರಾಮಾಣಿಕವಾದ ಪ್ರಯತ್ನವೇನೋ ನಡೆದಿದೆ, ನನ್ನ ಮನದಲ್ಲಿ. ಆದರೇನು ಮಾಡಲಿ, ನೈಪಾಲನಂತೆ ಗಡ್ಡ ತುರಿಸಿಕೊಂಡರೂ ಅವನ ಕನ್ನಡಕದೊಳಗಿನಿಂದ ಕವಿರಾಜಮಾರ್ಗ ಓದಲು ಕಷ್ಟವಾಗುತ್ತಿದೆಯಲ್ಲ . ಗಾರ್ಸಿಯನ ಮ್ಯಾಜಿಕಲ್‌ ರಿಯಲಿಸಂ ಗದುಗನ್ನೂ ನಾರಣಪ್ಪನನ್ನೂ ಬಿಡಿಸಿಬಿಟ್ಟಿತಲ್ಲ , ಅಷ್ಟಕ್ಕೇ ನನ್ನನ್ನು ಕನ್ನಡಿಗ ಅಲ್ಲ ಅಂದುಬಿಟ್ಟರೆ ಅದು ನ್ಯಾಯವೇ ಸ್ವಾಮೀ?

ಜಾಗತೀಕರಣ ಸ್ವಾಮೀ, ಯಾವುದೇ ನಿಯಮಕ್ಕೆ, ಚೌಕಟ್ಟಿಗೆ ಕಟ್ಟುಬೀಳದಿರುವುದೇ ನಮ್ಮ ಸ್ಟೈಲು. ಕಾನೂನಿಲ್ಲದಿರುವುದೇ ನಿಯಮ. ಲಘು ಗುರುವಿನ ಲೆಕ್ಕಾಚಾರ ಹಾಕಿ, ಷಟ್ಪದಿ ಛಂದಸ್ಸುಗಳ ಫ್ರೇಮಿನಲ್ಲೋ, ಕಂದಪದ್ಯ ತ್ರಿಪದಿಗಳ ಮೂಲಕವೋ ರಚಿಸುವ ಸಾಹಿತ್ಯದ ಸಂಶೋಧನೆ, ವಿಶ್ಲೇಷಣೆ ಫ.ಗು. ಹಳಕಟ್ಟಿಗಳಿಗಿರಲಿ. ಹಾಗೆ ನಿಯಮದ ಹೊರಗಿರುವುದೇ ಸರಿ ಎಂದು ನೀವೇ ಹಲವರು ಹೇಳಿದ್ದೀರ. ಸಂತೋಷಿಸುವುದಕ್ಕೆ ಕಷ್ಟಪಡಬಾರದ ಸಾಹಿತ್ಯ ಪ್ರಬುದ್ಧವಲ್ಲವೆಂದು ಹೇಳಿ ಎಡಪಂಥ, ಬಲಪಂಥವೆಂದು ನನ್ನಂತವರನ್ನು ಗೊಂದಲಗೊಳಿಸುವುದೂ, ಬ್ರಾಹ್ಮಣಿಕೆಗೆ ಸಮಾಜವಾದ ಸೇರಿಸಿ ಲಿಬರಲ್‌ ಆಗಿರುವುದೂ ತಿಳಿಯುತ್ತದೆ. ಇಷ್ಟಿದ್ದ ಮಾತ್ರಕ್ಕೋ ಅಥವಾ ಕರ್ವಾಲೋನ 'ಮಂದಣ್ಣ" ಮುದಕೊಟ್ಟಷ್ಟೇ ಕಾರ್ನಾಡರ ಪುರು ಹಿಂಸಿಸದ ಮಾತ್ರಕ್ಕೋ, ವೈದೇಹಿ ಸ್ತ್ರೀವಾದಿ ಹೌದೋ ಅಲ್ಲವೋ ಅನ್ನುವ ಗೊಂದಲದಲ್ಲಿದ್ದ ಮಾತ್ರಕ್ಕೋ ನಾನು ಕನ್ನಡಿಗನಲ್ಲವೇ.

ಫರ್ಗ್ಯುಸನ್ನಿನ ಹಿಂದೂ ಸಂಸ್ಕೃತಿಯ ಅಧ್ಯಯನ, ಕಿಟೆಲ್‌ನ ಅರ್ಥಕೋಶ ಮ್ಯಾಕ್ಸ್‌ ಮುಲ್ಲರ್‌ ಎಷ್ಟು ಭಾರತೀಯವೋ/ರೋ ನಾನೂ ಅಷ್ಟೇ ಹೊರಗಿನವ. ನಿಮ್ಮಗಳ ಪಾತ್ರಗಳು ಕನ್ನಡವಷ್ಟೇ. ಕ್ರಿಯೆ ತೀರ ಜಾಗತಿಕ. ನಾನೂ ನಿಮ್ಮಗಳ ಪಾತ್ರಗಳ ಹಾಗೆ ಜಾಗತಿಕವಂದುಕೊಂಡರೆ ಅದನ್ನು ಸೊಕ್ಕು ಅಂತೀರಾ?

-ಏನು ಹೇಳಿದಿರಿ? ಬರೀ ಸಾಹಿತ್ಯವನ್ನು ಅರ್ಧಂಬರ್ಧ ಓದಿಬಿಟ್ಟರೆ ಕನ್ನಡಿಗನಾಗುವುದಿಲ್ಲ. ಅದೂ ಓದಿರುವುದಕ್ಕಿಂತ ಓದಿದ್ದೇನೆಂಬ ತೋರಿಕೆಯೇ ಜಾಸ್ತಿಯಾದಾಗ ಏನೂ ಆಗುವುದಿಲ್ಲ . ಬಾ ನಮ್ಮ ಕರುನಾಡಿಗೆ. ನಮ್ಮ ಸಮಸ್ಯೆಗಳನ್ನು ನೋಡು ಅಂತೀರಾ. ಕನ್ನಡ ಭಾಷೆ ಉಳಿಯುವುದು 'ದಿವ್ಯ" ಓದುವುದರಿಂದ ಅಲ್ಲ , ಪ್ರತಿ ಕನ್ನಡಿಗ ಕನ್ನಡದಲ್ಲೇ ಮಾತಾಡಿ ಕನ್ನಡ ಆಡಳಿತ ಭಾಷೆಯಾಗಿ ಪ್ರತಿ ಮೂಲೆಮೂಲೆಯಲ್ಲಿನ ಕನ್ನಡಿಗ ಕನ್ನಡ ಉಸಿರು ಅಂದುಕೊಂಡಾಗ ಅಂದಿರಾ. ಈ ಜಾಗತೀಕರಣದ ಯುಗದಲ್ಲಿ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಕೊಟ್ಟರೆ ಮಾತ್ರ ಅಂತೀರಾ? ನಾನೂ ಅನಂತಮೂರ್ತಿಯವರ ಭಾಷಣ ಓದಿದ್ದೀನಿ. ಈಗ ಕರ್ನಾಟಕದಲ್ಲಿ ಕನ್ನಡ ಉಳಿದುಕೊಂಡಿದ್ದರೆ ಎಲ್ಲೋ ಬಿಜಾಪುರದ ಮೂಲೆಯಲ್ಲಿರುವ ಕನ್ನಡಿಗ ಕನ್ನಡ ಓದುತ್ತಿದ್ದರೆ ಮಾತ್ರ. ಅವರಿಗೆ ಅರ್ಥವಾಗುವ ಸಾಹಿತ್ಯ ಅವರನ್ನು ಮುಟ್ಟುತ್ತಿರುವುದರಿಂದ ಮಾತ್ರ. 'ದಿವ್ಯ" ಓದುವ ನನ್ನಂತವರಿಂದಲ್ಲ, ಅಂತೀರಾ. ಭಾಷೆ, ಸಾಹಿತ್ಯ ಉಳಿಯಬೇಕು ಮೊದಲು, ಸಮೃದ್ಧವಾಗುವುದು ನಂತರ, ಸಾಮಾಜಿಕ ಕ್ರಾಂತಿ ಎಲ್ಲಾ ಸಾಹಿತ್ಯದಿಂದ ಆಗುವುದಿಲ್ಲ ಅಂತೀರಾ. ಅದನ್ನು ಇಪ್ಪತ್ತು ವರ್ಷದ ಹಿಂದೆಯೇ ದೊಡ್ಡವರೊಬ್ಬರು ಹೇಳಿದ್ದರು, ಕೂಡ. ಆದರೆ ಬರೇ ಅಂತದ್ದನ್ನು ಬರೆದರೆ ಮಾತ್ರ ಜ್ಞಾನಪೀಠ ಬರುತ್ತದಲ್ಲ. ಪ್ರಬುದ್ಧತೆ ಜನಪ್ರಿಯ ಸಾಹಿತ್ಯದ ಲಕ್ಷಣವಲ್ಲ ಅಂದರೆ ಬರೆಯುವ ಬುದ್ಧಿವಂತರು ತಮ್ಮ ಗುಣವನ್ನು ಇಳಿಸಿಕೊಳ್ಳಬೇಕೋ ಅಥವಾ ಓದುಗರು ಇನ್ನೂ ಬುದ್ಧಿವಂತರಾಗಬೇಕೋ. ಒಂದು ಭಂಡವಾದ ಮಾಡುತ್ತೀನಿ, ನೀವು ಏನಾದಾರೂ ಅಂದುಕೊಳ್ಳಿ. ರಿಚ್‌ ಆಗಿದೆ ಅಂತ ತೋರಿಸಿಕೊಳ್ಳೋಣ, ಆಗ ಬದುಕಿದ್ದೇನೆ ಅನ್ನುವ ಭ್ರಮೆಯಾದರೂ ಇರುತ್ತದೆ. ಇನ್ನೊಂದಿಷ್ಟು ಜ್ಞಾನಪೀಠ ತೆಗೆದುಕೊಳ್ಳೋಣ, ಆಗ ಬೆಂಗಳೂರಲ್ಲಿ ಒಬ್ಬರನ್ನೊಬ್ಬರು 'ವಣಕ್ಕಂ"ರಿಸಿದರೂ ಕನ್ನಡ ರಾಷ್ಟ್ರೀಯವಾಗುತ್ತದೆ, ಅಷ್ಟೇ ಏಕೆ ಜಾಗತಿಕವೂ ಆಗುತ್ತದೆ. ಬರೀ ಭಂಡ ಮಾತ್ರ ಅಲ್ಲ, ಮೂರ್ಖ ಕೂಡ ನಾನು ಅಂತ ನಿಮಗೆ ಅನಿಸಿದರೆ ಅದು ನನ್ನ ತಪ್ಪಲ್ಲ.

ಎಲ್ಲೋ ಓದಿದ ನೆನಪು- ಎಂಪತಿ ಹ್ಯಾಸ್‌ ಲಿಮಿಟ್ಸ್‌ ಅಂತ. ಸಾಧನೆಗೆ ಬೇಕು ಕರ್ಮಭೂಮಿ ಅಂತ. ಬಿಳಿಯರು ಎಷ್ಟೇ ಸೂಕ್ಷ್ಮವಾಗಿ ಕರಿಯರ ಸಮಸ್ಯೆಗಳಿಗೆ ಮಿಡಿದರೂ, ಬ್ರಾಹ್ಮಣ ಶೂದ್ರರ ಮೇಲೆ ಬರೆದರೂ ಅದು ಪ್ರಾಮಾಣಿಕವಾದ ಕರಿ ಅಥವಾ ಶೂದ್ರ ಸಾಹಿತ್ಯವಾಗುವುದಿಲ್ಲ ಅಂತ. ಹಾಗೇ ನಾನು ಅಮೆರಿಕದಲ್ಲಿ ಕೂತು ಎಷ್ಟೇ ಕನ್ನಡದ ಬಗ್ಗೆ ಕಳಕಳಿ ಇಟ್ಟುಕೊಂಡರೂ ಕನ್ನಡನಾಡಿನ ಸಮಸ್ಯೆಗಳಿಗೆ ಸ್ಪಂದಿಸಲಾಗುವುದಿಲ್ಲ ಅಂತ. ಕರಾಲರಿ ಮಾಡಿಕೊಳ್ಳಿ ಬೇಕಾದರೆ. ಯಾಕೆಂದರೆ ಉಪಮೆಗೆ ಮಾತ್ರವಷ್ಟೆ ಉಪಮೆಯನ್ನು ಉಪಯೋಗಿಸಿದ್ದು. ಎಂಟು ಸಾವಿರ ಮೈಲಿ ದೂರ ಕೂತು ಕನ್ನಡದ ಬಗ್ಗೆ ಮಾತಾಡುವುದಕ್ಕೆ ಇವನಿಗ್ಯಾರು ಕೊಟ್ಟರು ಹಕ್ಕು ಅಂತ. ನಿನಗೇನು ಗೊತ್ತು ಕಾವೇರಿ ಹೊಡೆದಾಟ, ಪ್ರಾದೇಶೀಕರಣ, ಬೆಂಗಳೂರು ಬೇಡ ಹುಬ್ಬಳ್ಳಿ ಬೇಕು ವಾದ, ಪರಿಸರ ಜಾಗೃತಿ, ಬೆಂಗಳೂರನ್ನು ಉಳಿಸುವುದು, ಕಾವಲುಪಡೆಗಳು, ರೀಮೇಕ್‌ ಸಿನೆಮಾ, ಕಸಾಪದ ಹೋಟೆಲ್‌ ರಾಜಕೀಯ, ಅನಂತಮೂರ್ತಿಯವರ ನೋಬೆಲ್‌ ಲಾಬಿ, ದೇವೇಗೌಡರ ಕನಕಪುರ ಮತ್ತು ವೀರಪ್ಪನ್‌ ಅಂತ.

ಹೌದುಬಿಡಿ, ಎಲ್ಲರೂ ಹೇಳುವಂತೆ ನಾನೂ ಹೇಳಿಬಿಡುತ್ತೇನೆ. ಇಲ್ಲಿ 'ಕಮಿಟ್‌" ಆಗಿಬಿಟ್ಟಿದ್ದೇನೆ. ಬಹಳಷ್ಟು 'ಲೊಜಿಸ್ಟಿಕ್ಸ್‌" ನನ್ನನ್ನು ಅಮೆರಿಕಾ ಬಿಡುವುದಕ್ಕೆ 'ಪರ್ಮಿಟ್‌" ಮಾಡುತ್ತಿಲ್ಲ.

ಆದರೆ ನಾನು ಕಳೆದುಹೋಗಬಾರದಲ್ಲ. ಸಾಗರದಲ್ಲಿರುವ ಪುಟ್ಟ ಮೀನು, ಜಲಕನ್ಯೆಯ ನೀಟಾದ ಉಬ್ಬುತಗ್ಗುಗಳನ್ನು ಕದ್ದು ಅನುಭವಿಸಿದರೂ ಅನನ್ಯವಾಗುವುದು ತನ್ನ ಸಖರ ಜೊತೆಯಲ್ಲಿ ಮಾತ್ರವೇ ಅಲ್ಲವೇ? ಏನು ಮಾಡಲಿ. ಸಾಗರಕ್ಕೆ ಬಿದ್ದಾಗಿದೆ. ಜಲಕನ್ಯೆಯಾಂದಿಗೇ ಇತರ ಮೀನುಗಳನ್ನೂ ಬಯಸಬೇಕಾಗಿದೆ. ಕಂಪ್ಯೂಟರಿನ ಸ್ಕಿೃೕನಿನ ಮೇಲೆ, ಅಂತರ್ಜಾಲದ ಹರಟೆಯ ಚಾವಡಿಗಳಲ್ಲಿ ನನ್ನಂತಹ ಅಥವಾ ನನಗಿಂತ ದೊಡ್ಡ, ಪುಟ್ಟ ಮೀನುಗಳನ್ನು ಹುಡುಕುತ್ತೇನೆ. ಕನ್ನಡ ಸಮ್ಮೇಳನಕ್ಕೆ ಹೋಗುವುದರಿಂದ ಕನ್ನಡತನ ಉಳಿಸಿಕೊಳ್ಳುತ್ತಿದ್ದೇನೆ ಅಂದುಕೊಳ್ಳುತ್ತೇನೆ. ಸಮ್ಮೇಳನಕ್ಕೆ ಹೋಗಲು ಹೆಂಡತಿ ಸೀರೆ ಒಡವೆ ಜೋಡಿಸಿಕೊಳ್ಳುವುದನ್ನು ನೋಡಿ ನಾನೂ ಸೂಟು ಬೂಟು ಜೋಡಿಸಿಕೊಳ್ಳುತ್ತೇನೆ. ಮನಸ್ಸಿನೊಳಗೇ ನಗುತ್ತೇನೆ.

ಕನ್ನಡದಲ್ಲಿ ಕಲಿ, ಇಂಗ್ಲೀಷ್‌ ಅನ್ನೂ ಕಲಿ ಅಂದರು ಮಹನೀಯರೊಬ್ಬರು. ಅದು ಹೇಗೆ ಸಾಧ್ಯ ಈ ಜಾಗತಿಕ ಯುಗದಲ್ಲಿ ಅಂದರು ಇನ್ನೊಬ್ಬರು. ಕನ್ನಡ ಜಾಗತಿಕವಾಗಿರುವುದೇ ಮಾಹಿತಿ ಸ್ಫೋಟದಿಂದ. ಜಗತ್ತಿನ ಮೂಲೆಮೂಲೆಯಲ್ಲಿ ಕೂತು ಮಿದುಳಿನ ಅಡಿಯಲ್ಲಿ ಕೂತಿದ್ದ ಕನ್ನಡ ವರ್ಣಮಾಲೆ 'ಬರಹ" ಬಂದಮೇಲೆ ತಟಕ್ಕನೆ ಜಾಗೃತವಾದದ್ದರಿಂದ. ಕವಿಯಾಗಲು ಪ್ರಯತ್ನಿಸಿ ಸೋತು ಈಗ ದೇಶ ಬಿಟ್ಟಮೇಲೆ ಕಂಪ್ಯೂಟರಿನಲ್ಲಿ ಕನ್ನಡ ಕಂಡು ನನ್ನಂತವರಲ್ಲಿನ ಕನ್ನಡಿಗ ಅವರಂತವರನ್ನು ಹುಡುಕಿಕೊಂಡಿದ್ದರಿಂದ. ದೇಶದ ಹೊರಗೆ ಕನ್ನಡ ಓದೋ ಬರಿಯೋ ಶೇಕಡಾ ಎರಡೋ ಮೂರೋ ಇರುವ ನನ್ನಂತವರನ್ನು ಕನ್ನಡಿಗನಲ್ಲ ಅನ್ನಲು ನಿಮಗೆ ಹೇಗೆ ಮನಸ್ಸು ಬರುತ್ತದೆ ಹೇಳಿ?

ಇಷ್ಟೇ ನೋಡಿ ನಾನು. ಜೀನ್ಸ್‌ ಪ್ಯಾಂಟು ಹಾಕಿಕೊಂಡು 'ಯುನೈಟೆಡ್‌ ವಿ ಸ್ಟ್ಯಾಂಡ್‌" ಅನ್ನೋ ಅಮೆರಿಕನ್‌ ಬಾವುಟವಿರುವ ಟೀ ಶರ್ಟ್‌ ಹಾಕಿಕೊಂಡು, ಲ್ಯಾಪ್‌ಟಾಪಿನಲ್ಲಿ ಸ್ನೇಹಿತರೊಂದಿಗೆ ಕನ್ನಡ ಹೇಗೆ ಉಳಿಸಬೇಕು ಎಂದು ಇಂಗ್ಲೀಷಿನಲ್ಲಿ 'ಚಾಟ್‌" ಮಾಡುತ್ತಾ ಅಡಿಗರ 'ರಾಮನವಮಿಯ ದಿವಸ" ಅರ್ಥವಾಗದಿದ್ದರೇನು ಕಾರಂತರ 'ಕೇವಲ ಮನುಷ್ಯರು" ಅರ್ಥವಾಗಿದೆ ಅಂದು ತಿಳಿದುಕೊಂಡಿರುವ ಡಿಸೈನರ್‌ ಕನ್ನಡಿಗ- ಅಮೆರಿಕನ್ನಡಿಗ.

ಬೆಂಗಳೂರಲ್ಲಿ ಎಷ್ಟು ಜನ ನನ್ನಂತವರು ಸಿಗುತ್ತಾರೆ, ಹೇಳಿ.

English summary
When I am one among the 3% people who write and read Kannada abroad, how could you call me a non Kannadiga?... Short story writer Dr. Guruprasad Kaginele writes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X