• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಿಶಿಗನ್ನಿನಲ್ಲಿ ಪ್ರಣವ ವಿದ್ಯಾ ಪ್ರತಿಷ್ಠಾನದ ಕನ್ನಡ ಶಾಲೆ

By Staff
|
  • ಛಾಯಾಪತಿ ಮಿರ್ಲೆ

cvmirle@cvmirle.com

ನಮ್ಮ ಚಿಕ್ಕಂದಿನ ದಿನಗಳು ಎಷ್ಟೊಂದು ಚೆನ್ನಾಗಿದ್ದವು. ಪ್ರತಿ ಸಂಜೆ ಆಟಮುಗಿಸಿ ಮನೆಗೆ ಬಂದ ಕೂಡಲೆಕೈ-ಕಾಲು ತೊಳೆದುಕೊಂಡು ಹಿರಿಯರ ಬಳಿ ಕುಳಿತು ಬಾಯಿಪಾಠ - ಶ್ಲೋಕಗಳನ್ನು ಹೇಳುವುದು, ತಿಥಿ, ವಾರ, ನಕ್ಷತ್ರಗಳು, ಮಾಸ, ಋತು, ಸಂವತ್ಸರಗಳ ಹೆಸರುಗಳನ್ನು ಹೇಳುವುದು, ಗುಣಾಕಾರ ಮಗ್ಗಿ ಇತ್ಯಾದಿ ಉಪಯುಕ್ತ ವಿಚಾರಗಳನ್ನು ಕಂಠಪಾಠ ಮಾಡುವುದು - ನಂತರ, ಶಾಲೆಯ ಪಾಠಗಳನ್ನ ಮುಗಿಸಿದ ಮೇಲೆಯೇ ನಮಗೆ ರಾತ್ರಿ ಊಟ. ಇದಲ್ಲದೆ, ರಾಮಾಯಣ-ಮಹಾಭಾರತದ, ಪುರಾಣಪುರುಷರ ಕಥೆಗಳನ್ನ ಕೇಳುವುದು - ಈ ಸಂಪ್ರದಾಯ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇತ್ತು. ಇದು ತಾಯ್ನಾಡಿನ ಮಾತು. ಆದರೆ, ಅಮೆರಿಕದಲ್ಲಿನ ಮಕ್ಕಳು ಬೆಳೆಯುವ ಪರಿಸರವೇ ಬೇರೆ. ಈ ಮಕ್ಕಳಿಗೆ ಕನ್ನಡದ ಪರಿಸರವನ್ನು ಪರಿಚಯಿಸುವುದು ಹೇಗೆ ?

ಅಮೆರಿಕದಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ಕನ್ನಡ ಸಂಸ್ಕಾರ, ಕನ್ನಡ ಭಾಷೆ ಹಾಗೂ ನಾಡನ್ನು ಪರಿಚಯ ಮಾಡಿಕೊಡುವ ಕಾಳಜಿಯಿಂದ, ಮಿಶಿಗನ್‌ ರಾಜ್ಯದ ಪಂಪ ಕನ್ನಡದ ಕೂಟದ ಆಶ್ರಯದಲ್ಲಿ ಸುಮಾರು 1985-86ನೇ ಇಸವಿಯಲ್ಲೇ ಪ್ರಯತ್ನ ನಡೆಯಿತು. ಡಾ।। ಶ್ರೀಪಾದರಾಜು, ಶ್ರೀನಿವಾಸ ಭಟ್‌, ಇಂದಿರಾ ಮುರುಳೀಧರ್‌, ವೇದ ಮಿರ್ಲೆ ಮೊದಲಾಗಿ ಅನೇಕ ಪೋಷಕರು ಕನ್ನಡ ಮಕ್ಕಳನ್ನ ವಾರಕ್ಕೊಮ್ಮೆ ಒಂದು ಕಡೆ ಸೇರಿಸಿ ಪಾಠ ಹೇಳಿಕೊಡುತ್ತಿದ್ದರು. ಕೆಲವು ವರ್ಷಗಳ ನಂತರ, ಕನ್ನಡಿಗರ ಸಂಖ್ಯೆ ಹೆಚ್ಚಾಗುತ್ತಾ ಬಂದು, ಡೆಟ್ರಾಯಿಟ್‌ ಮಹಾನಗರದ ಸರಹದ್ದುಗಳಲ್ಲೆಲ್ಲಾ ಕನ್ನಡ ಸಂಸಾರಗಳು ಹಂಚಿಹೋಗಿ, ಎಲ್ಲ ಮಕ್ಕಳನ್ನ ಒಂದೆಡೆ ಸೇರಿಸಿ ತರಗತಿಗಳನ್ನ ನಡೆಸುವುದು ದುಸ್ತರವಾಯ್ತು.

Enthusiastic kannada children at Pranav Vidya Prathishtanaಪ್ರಸ್ತುತ, ಕನ್ನಡ ಮಕ್ಕಳಿಗಾಗಿ, ಕಳೆದ ಒಂಭತ್ತು ವರ್ಷಗಳಿಂದ ಡೆಟ್ರಾಯಿಟ್‌ ಮಹಾನಗರದ ಸರಹದ್ದಿನಲ್ಲಿರುವ ಟ್ರಾಯ್‌ ನಗರದಲ್ಲಿ ಕನ್ನಡ ಶಾಲೆಯಾಂದು ನಡೆಯುತ್ತಿದೆ. ಈ ಕನ್ನಡ ಶಾಲೆಯಲ್ಲಿ, 4 ರಿಂದ 15 ವರ್ಷ ವಯಸ್ಸಿನ ಸುಮಾರು 16 ಕನ್ನಡ ಮಕ್ಕಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಶಾಲೆಯನ್ನು ಇಲ್ಲಿನ ಪ್ರಣವ ವಿದ್ಯಾ ಪ್ರತಿಷ್ಠಾನದ ವತಿಯಿಂದ ನಡೆಸಲಾಗುತ್ತಿದೆ. ಪ್ರತಿ ಭಾನುವಾರ ಬೆಳಿಗ್ಗೆ 10:30 ರಿಂದ 11:30 ರವರೆಗೆ ಶಾಲೆ ನಡೆಯುತ್ತದೆ. ಶಾಲೆಯ ದಿನ ಮೊದಲ 15 ನಿಮಿಷಗಳು ಎಲ್ಲ ಮಕ್ಕಳೂ, ದೊಡ್ಡವರೂ ಸಾಮೂಹಿಕವಾಗಿ ಶ್ಲೋಕಗಳನ್ನ ಹೇಳುವರು. ನಂತರ ಕನ್ನಡ ಪಾಠ, ಕನ್ನಡದಲ್ಲಿಯೇ ಕಥೆ.

ಕನ್ನಡ ಓದುವುದು, ಬರೆಯುವುದು, ಕನ್ನಡದಲ್ಲಿ ಮಾತನಾಡುವುದು, ನಮ್ಮ ಇತಿಹಾಸ-ಪುರಾಣಗಳ ಮುಖ್ಯ ವಿಚಾರಗಳು, ಭಗವದ್ಗೀತೆಯ ಮುಖ್ಯ ಅಧ್ಯಾಯಗಳು, ಭಾರತದ ಸಂಸ್ಕೃತಿ, ಪುರಾಣಪುರುಷರುಗಳು, ಪುಣ್ಯಕ್ಷೇತ್ರಗಳು, ಇತ್ಯಾದಿ ಉಪಯುಕ್ತ ವಿಚಾರಗಳ ಪರಿಚಯವನ್ನ ಸಾಧ್ಯವಾದಷ್ಟು ಮಕ್ಕಳಿಗೆ ಮಾಡಿಕೊಡುವುದೇ ಈ ಕನ್ನಡ ಶಾಲೆಯ ಮುಖ್ಯ ಉದ್ದೇಶ.

ಈ ಶಾಲೆಯ ವೈಶಿಷ್ಟ್ಯವೆಂದರೆ ಇದರ ಆಡಳಿತ ಶೈಲಿ. ಇಲ್ಲಿ ಆಡಳಿತ ಮಂಡಲಿ, ಅಧಿಕಾರಿಗಳು, ಕಾರ್ಯಕಾರಿ ಸಮಿತಿಗಳು, ಇವ್ಯಾವುವೂ ಇಲ್ಲ. ಹಣಕಾಸಿನ ಮಾತೇ ಇಲ್ಲ. ನೇಮಕ ಮಾಡಿಕೊಂಡ ಉಪಾಧ್ಯಾಯರುಗಳಿಲ್ಲ. ಪೋಷಕರೆಲ್ಲಾ ನಮ್ಮ ಸಂಸ್ಕೃತಿಯನ್ನ, ನಮ್ಮ ಭಾಷೆಯನ್ನ, ತಮ್ಮ ಮಕ್ಕಳಿಗೆ ಪರಿಚಯಿಸಿಕೊಡುವ ಕಾಳಜಿಯಿಂದ ಹಾಗೂ ಜವಾಬ್ದಾರಿಯಿಂದ ಈ ಶಾಲೆಯನ್ನ ನಡೆಸುತ್ತಿದ್ದಾರೆ. ಎರಡು ತಿಂಗಳಿಗೊಮ್ಮೆಯಂತೆ ಸರದಿಯಿಂದ ತಮ್ಮ ತಮ್ಮ ಮನೆಗಳಲ್ಲೇ ಶಾಲೆಯನ್ನ ನಡೆಸುತ್ತಾರೆ. ಮಕ್ಕಳನ್ನ ಪ್ರತಿ ಭಾನುವಾರ ತಪ್ಪದೆ ಶಾಲೆಗೆ ಕರೆತರುವುದೇ ಅಲ್ಲದೆ ಶಾಲೆಯ ಕಾರ್ಯಕಲಾಪಗಳನ್ನ ಪರಸ್ಪರ ಸಹಕಾರದಿಂದ ನಡೆಸಿಕೊಂಡು ಬರುತ್ತಿದ್ದಾರೆ.

ಶಾಲೆಯ ಮಕ್ಕಳನ್ನು ಮೂರು ವಿಭಾಗಗಳನ್ನಾಗಿ ಮಾಡಿ, ಪ್ರತಿ ವಿಭಾಗಕ್ಕೂ ತಕ್ಕ ಪಠ್ಯಕ್ರಮಗಳನ್ನ ನಿಯೋಜಿಸುವುದು, ಕೆಲವು ಪಾಠಗಳನ್ನ ತಾವೇ ರಚಿಸುವುದು, ವಿಭಾಗಗಳನ್ನು ತಾವುಗಳೇ ಹಂಚಿಕೊಂಡು ಪಾಠ ಹೇಳಿಕೊಡುವುದು ಇದೆಲ್ಲಾ ಪೋಷಕರದೇ ಕೆಲಸ. ಈ ಕನ್ನಡ ಪರಿಸರದಲ್ಲಿ ಇತರ ಸ್ನೇಹಿತರ ಪ್ರೋತ್ಸಾಹ, ಸಲಹೆ, ಸಹಕಾರಗಳು ಸದಾ ಲಭ್ಯವಿದೆ. ವಾರಕ್ಕೊಮ್ಮೆ ಒಂದು ತಾಸು ಮುಗ್ಧ ಮಕ್ಕಳೊಡನೆ ಬೆರೆತು, ಅವರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಹಲವರಿಗೆ ಸಂತಸದ ವಿಷಯ.

ಕಳೆದ ನವೆಂಬರ್‌ 2ರ ಭಾನುವಾರ ಶಾಲೆಯ ವಾರ್ಷಿಕೋತ್ಸವ ನಡೆಯಿತು. ಮೊದಲಿಗೆ ಸಾಮೂಹಿಕ ಪ್ರಾರ್ಥನೆ. ಆನಂತರ ಎಲ್ಲ ವಿದ್ಯಾರ್ಥಿಗಳೂ ಸ್ವಹಸ್ತದಿಂದ ಮಾಡಿದ ಸಂಕ್ಷಿಪ್ತ ಶೋಡಷೋಪಚಾರ ಪೂರ್ವಕ ದೇವರ ಪೂಜೆ. ಮಕ್ಕಳ ಪೂಜೆ ಎಂದಮೇಲೆ ಅಲ್ಲಿ ಭಕ್ತಿಗೇನು ಕೊರೆ ? ಪೂಜೆಯ ನಂತರ ಪ್ರತಿಯಾಬ್ಬರೂ ತಾವು ಈ ಶಾಲೆಯಲ್ಲಿ ಕಲಿತ ವಿವಿಧ ವಿಚಾರಗಳನ್ನ ತಮ್ಮದೇ ಆದ ಶೈಲಿಯಲ್ಲಿ ಪ್ರದರ್ಶಿಸಿದರು. ಮುಗ್ಧ ಮಕ್ಕಳ ಈ ಕಾರ್ಯಕ್ರಮಗಳನ್ನ ನೋಡುತ್ತಿದ್ದಂತೆ, ಆ ತಾಸು ಪೋಷಕರೂ ಮಕ್ಕಳೇ ಆಗಿಬಿಟ್ಟು ಆನಂದಿಸುವುದನ್ನು ನೋಡಬೇಕಿತ್ತು ! ಅದೊಂದು ಸಾರ್ಥಕ ಕನ್ನಡ ಕ್ಷಣ.

ಈ ಶಾಲೆಯ ಸಾಧನೆಗಳ ಬಗ್ಗೆ ವಿದ್ಯಾರ್ಥಿಗಳಿಗೆಲ್ಲ ತುಂಬು ಹೆಮ್ಮೆ . ಕಳೆದ 6 ವರ್ಷಗಳಿಂದ ಕನ್ನಡ ಶಾಲೆಯಲ್ಲಿ ಕಲಿಯುತ್ತಿರುವ 13ರ ಬಾಲಕಿ ಆರತಿ ಕೃಷ್ಣ , ನ.2ರ ವಾರ್ಷಿಕೋತ್ಸವದಲ್ಲಿ ಶಾಲೆಯ ಬಗ್ಗೆ ಏನು ಹೇಳಿದಳು ಗೊತ್ತಾ ? ಅವಳ ಮಾತುಗಳಲ್ಲೇ ಕೇಳಿ :

***

Arthi Krishnaನಂಸ್ಕೂಲು ಹೇಗಿದೆ ಗೊತ್ತಾ ?

- ಆರತಿ ಕೃಷ್ಣ

ಕನ್ನಡ ಕ್ಲಾಸಿಗೆ ನಾನು ಸೇರಿ ಸುಮಾರು ಆರು ವರ್ಷಗಳಾಯಿತು. ಒಮ್ಮೆ ನನ್ನ ಅಮ್ಮನ ಕಾರಿನ ಗ್ಯಾಸ್‌ ಛಾಯಾಪತಿ ಅವರ ಮನೆಯ ಹತ್ತಿರದಲ್ಲೇ ಮುಗಿದು, ಸಹಾಯಕ್ಕೆಂದು ಅವರ ಮನೆಗೆ ಹೋದ ಕಾರಣದಿಂದ ಈ ಕ್ಲಾಸಿನ ವಿಚಾರ ನನ್ನ ಅಮ್ಮನಿಗೆ ಗೊತ್ತಾಯಿತು. ಆಗಿನಿಂದ ನಾನು ಈ ಕ್ಲಾಸಿಗೆ ಬರುತ್ತಿದ್ದೇನೆ. ಈ ಕ್ಲಾಸಿನಲ್ಲಿ ನಾನು ನಿತ್ಯ ಪ್ರಾರ್ಥನೆಯ ಹಲವು ಶ್ಲೋಕಗಳನ್ನು ಕಲಿತಿದ್ದೇನೆ. ಭಗವದ್ಗೀತೆಯ ಕೆಲವು ಅಧ್ಯಾಯಗಳನ್ನು ಅಭ್ಯಾಸ ಮಾಡಿದ್ದೇನೆ. ತಿಥಿಗಳು, ಹಬ್ಬಗಳು, ಮಾಸಗಳು, ನಕ್ಷತ್ರಗಳು, ವಾರಗಳು, ಸಂವತ್ಸರಗಳು, ಅಂಕೆಗಳು ಮತ್ತು ಋತುಗಳನ್ನೂ ಕಲಿತಿದ್ದೇನೆ. ರಾಮಾಯಣ, ಮಹಾಭಾರತದ ಕತೆಗಳನ್ನು ತಿಳಿದುಕೊಂಡಿದ್ದೇನೆ. ಕನ್ನಡ ಓದಲು, ಬರೆಯಲು ಬರುತ್ತದೆ. ಈಗ ಕೆಲವು ಸಮಯದಿಂದ ಕನ್ನಡ ವ್ಯಾಕರಣ ಕಲಿಯುತಿದ್ದೇವೆ.

ಈ ಕ್ಲಾಸಿನಿಂದ ನನಗೆ ತುಂಬಾ ಸಹಾಯವಾಗಿದೆ. ಬೇಸಿಗೆ ರಜೆಯಲ್ಲಿ ಊರಿಗೆ ಹೋದಾಗ ನಾನು ನನ್ನ ಅಜ್ಜಿ, ದೊಡ್ಡಮ್ಮ, ಚಿಕ್ಕಮ್ಮ, ದೊಡ್ಡಪ್ಪ, ಚಿಕ್ಕಪ್ಪ ಇವರುಗಳೊಂದಿಗೆ ಕನ್ನಡದಲ್ಲಿ ಮಾತನಾಡಲು ಸಾಧ್ಯವಾಯಿತು. ಕೆಲವು ಶಬ್ದಗಳು ತಪ್ಪಾದರೂ ನಾನು ಹೇಳಿದ್ದು ಅವರಿಗೆ ಅರ್ಥವಾಯಿತು. ಅವರು ಮಾತನಾಡಿದ್ದು ಅರ್ಥ ಮಾಡಿಕೊಳ್ಳಲು ನನಗೆ ಕಷ್ಟವಾಗಲಿಲ್ಲ. ನನಗೂ ಕನ್ನಡದಲ್ಲಿ ಮಾತನಾಡಲು ಯಾರಾದರೂ ಸಿಕ್ಕಿದ್ದರಿಂದ ಸಮಯ ಕಳೆಯಲು ಕಷ್ಟವಾಗಲಿಲ್ಲ.

ಬೆಂಗಳೂರಿನಲ್ಲಿ ತಿರುಗಾಡಲು ಹೋದಾಗ, ಬಸ್ಸಿನಲ್ಲಿ ಮಂಗಳೂರಿಗೆ ಹೋದಾಗ, ಅಂಗಡಿಯ ಮುಂದೆ ಇದ್ದ ಬೋರ್ಡುಗಳನ್ನು ನಾನೂ ನನ್ನ ತಂಗಿಯೂ ಸೇರಿ ಓದಿದೆವು. ದೇವಸ್ಥಾನದ ಪೂಜಾರಿಗಳ ಜೊತೆ ಕನ್ನಡದಲ್ಲಿ ಮಾತನಾಡಿದೆವು. ನನ್ನ ದೊಡ್ಡಮ್ಮನ ಮನೆಯನ್ನು ಗುಡಿಸಲು ಬರುವ ಪ್ರೇಮಳ ಜೊತೆ ನಾನು ಹರಟೆ ಹೊಡೆದೆನು. ಊರಿನಲ್ಲಿ ನಾವು ಕನ್ನಡ ಮಾತನಾಡುವುದು ಕೇಳಿ ಎಲ್ಲರಿಗೂ ತುಂಬಾ ಸಂತೋಷವಾಯಿತು.

ನಾವು ಇಲ್ಲಿಗೆ ಬಂದ ಮೇಲೆ ಮನೆಯಲ್ಲಿ ಕನ್ನಡದಲ್ಲೇ ಮಾತನಾಡಲು ಪ್ರಯತ್ನಿಸುತ್ತೇವೆ. ಆದರೆ ಸುತ್ತು ಮುತ್ತ ಇರುವವರೆಲ್ಲ ಇಂಗ್ಲೀಷ್‌ನಲ್ಲಿ ಮಾತನಾಡುವುದರಿಂದ ನಮಗೆ ಕನ್ನಡದಲ್ಲಿ ಮಾತನಾಡಲು ಕಷ್ಟ ಆಗುತ್ತದೆ. ನಾವೆಲ್ಲರೂ ಕನ್ನಡ ಕಲಿತು ಕನ್ನಡದಲ್ಲೇ ಮಾತನಾಡಬೇಕೆಂದು ನನ್ನ ಕೋರಿಕೆ. ನನ್ನ ಅಜ್ಜಿಗೆ ಕನ್ನಡದಲ್ಲೇ ಪತ್ರ ಬರೆಯಬೇಕೆಂದು ನನಗೆ ತುಂಬಾ ಆಸೆ.

ನಮ್ಮ ಕ್ಲಾಸಿಗೆ ಭಾರತದಿಂದ ಬಂದ ಕೆಲವು ಅತಿಥಿಗಳು ಬಂದಿದ್ದರು. ಲಕ್ಷ್ಮೀನಾರಾಯಣ ಭಟ್ಟರು, ರಾಣಿ ಸತೀಶ್‌ ಇವರೆಲ್ಲ ಬಂದು ನಮ್ಮ ಕ್ಲಾಸು ನಡೆಯುವ ಕ್ರಮವನ್ನು ನೋಡಿ ತಮ್ಮ ಮೆಚ್ಚಿಗೆ ತಿಳಿಸಿದರು.

ಕನ್ನಡ ಕ್ಲಾಸಿನಲ್ಲಿ ನಾವು ಹಿಂದೂ ಧರ್ಮದ ವಿಚಾರ ಆಗಾಗ ಮಾತನಾಡುತ್ತೇವೆ. ಹಬ್ಬಗಳ ವಿಶೇಷ ಏನೆಂದು ನಮಗೆ ತಿಳಿಯಪಡಿಸುತ್ತಾರೆ. ಭಾರತದಲ್ಲಿ ಹಬ್ಬಗಳನ್ನು ಹೇಗೆ ಆಚರಿಸುತ್ತಾರೆ ಎಂದು ನಮಗೆ ಹೇಳುತ್ತಾರೆ. ರಾಮಾಯಣ, ಮಹಾಭಾರತದ ಕಥೆಗಳನ್ನು ಕೇಳುವುದು ಎಂದರೆ ನಮಗೆಲ್ಲ ತುಂಬಾ ಖುಷಿ. ನಾವೆಲ್ಲ ಸೇರಿ ಕನ್ನಡ ಕೂಟದ ಕಾರ್ಯಕ್ರಮದಲ್ಲಿ ದಶಾವತಾರ ನಾಟಕವನ್ನು ಆಡಿ ತೋರಿಸಿದೆವು.

ಕನ್ನಡ ಕ್ಲಾಸಿನಿಂದಾಗಿ ನನಗೆ ಕೆಲವು ಸ್ನೇಹಿತರಾಗಿದ್ದಾರೆ. ಕನ್ನಡ ನಮ್ಮ ಮಾತೃಭಾಷೆ. ಈ ಕ್ಲಾಸಿನಲ್ಲಿ ಕಲಿತ ಭಾಷೆ, ನಮ್ಮ ಸಂಸ್ಕೃತಿಯ ಬಗ್ಗೆ ತಿಳಿದುಕೊಂಡ ವಿಚಾರಗಳು ನಾನು ದೊಡ್ಡವಳಾದ ಮೇಲೂ ನನ್ನ ನೆನಪಿನಲ್ಲಿ ಇರುತ್ತದೆ. ಈ ಸವಿ ಅನುಭವವನ್ನು ನನಗೆ ಒದಗಿಸಿ ಕೊಟ್ಟ ನಿಮಗೆಲ್ಲ ನನ್ನ ಕೃತಜ್ಞತೆಗಳು.

(ಈ ನನ್ನ ಅನಿಸಿಕೆಗಳನ್ನು ಕನ್ನಡಕ್ಕೆ ಭಾಷಾಂತರಿಸಲು ಮತ್ತು ಪ್ರಕಟಣೆಗೆ ತಯಾರು ಮಾಡಲು ನನ್ನ ತಂದೆಯವರು ಸಹಕರಿಸಿದ್ದಾರೆ).

ಮುಖಪುಟ / ಎನ್‌ಆರ್‌ಐ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more