ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹ್ಯೂಸ್ಟನ್‌ ಮೇಲ್‌ ಹೊಂಜು !

By Staff
|
Google Oneindia Kannada News

ಕೊನೆಯ ಉಸಿರು ಎಳೆಯುತ್ತಿರುವ ಬೇಸಿಗೆ ಅಂತೂ ಮುಗಿಯುತ್ತ ಬಂತಪ್ಪ !

ಬೇಸಿಗೆ ಎಂದರೆ ಹೀಗೇಕೆ ಬೇಜಾರು ಎಂದುಕೊಳ್ಳಬೇಡಿ. ನಿಜ, ಬೇಸಿಗೆಯ ರಜ ಬಹಳ ಮಜ. ಸಾಲೆಗೆ ಸೂಟಿ. ಹೋಂ ವರ್ಕ್‌ ಎಂದು ತಲೆ ಕೆಡಿಸಿಕೊಳ್ಳುವುದು ಇಲ್ಲ , ಮಾಸ್ತರರಿಂದ ಬೈಯಿಸಿಕೊಳ್ಳುವುದು ಇಲ್ಲ. ದಿನವಿಡಿ ಗೆಳೆಯರ ಜೊತೆ ಆಟವೋ ಆಟ. ಅಜ್ಜಿ-ತಾತನ ಊರಿಗೆ ರೈಲಿನಲ್ಲಿ ಪ್ರಯಾಣ. ಮಲ್ಲಿಗೆಯ ಕಂಪು. ಮಾವಿನ ಹಣ್ಣಿನ ರುಚಿ. ಬಿಸಿಲಲ್ಲಿ ಆಡಿ ದಣಿದೆವು ಅಂದಾಗ ಮೋಡ ಒಡೆದು ಬೀಳುವ ಮಳೆಯಲ್ಲಿ ಮತ್ತೆ ಆಟ. ಬೇಸಿಗೆ ಅಂದಾಗ ಈ ನೆನೆಪುಗಳು ಮರುಕಳಿಸುವುದು ಸಹಜ. ಆದರೆ ಈಗ ಪರಿಸ್ಥಿತಿ ಬದಲಾಯಿಸಿದೆ. ನಾನೀಗ ಇರುವುದು ಕರ್ನಾಟಕದ ಹಳ್ಳಿಯಾಂದರಲ್ಲಿ ಅಲ್ಲ , ಲಾಸ್‌ ಎಂಜಲೀಸ್‌ನಲ್ಲಿ. ಇಲ್ಲಿ ಬೀಳುವುದು ಮಳೆ ಅಲ್ಲ, ಬರಿ ಹೊಂಜು! smoke + fog ಸೇರಿ ಆಗಿದೆ ಎಂದು ತಿಳಿದುಕೊಂಡು ಇಂಗ್ಲಿಷಿನಲ್ಲಿ ಇದು smog; ಕನ್ನಡದಲ್ಲಿ ಹೊಗೆ+ಮಂಜು = ‘ಹೊಂಜು’ ಅಥವ ಹೊಗೆಮಂಜು.

Smog in Houstonಅಮೆರಿಕೆಯ ಹೊಂಜಿನ ರಾಜಧಾನಿ ಎಂದು (ಕು)ಪ್ರಸಿದ್ಧವಾದ ಲಾಸ್‌ ಎಂಜಲೀಸ್‌ನಲ್ಲಿ , 80ರ ದಶಕದಲ್ಲಿ, ವರ್ಷಾರ್ಧವೆಲ್ಲ ಹೊಂಜಿನ ದಿನಗಳು. ದಟ್ಟ ಹೊಂಜಿನ ವಾತಾವರಣ ಕವಿದು ಬೇಸಿಗೆಯ ಸೂರ್ಯನೂ ಮಸುಕು ಕಾಣುತ್ತಾನೆ. ವಿಮಾನದಲ್ಲಿ ಹಾರಿ ಬರುವವರಿಗೆ, ಲಾಸ್‌ ಎಂಜಲೀಸ್‌ ಹತ್ತಿರ ಬಂದಂತೆ, ನೆಲ ಮಾಯವಾಗಿ ಬರಿ ಕಂದು ಬಣ್ಣದ ಮಸುಕು ಕಂಡರೆ ಅಚ್ಚರಿ ಏನಿಲ್ಲ. ಈಗ, ಎಂಜಲೀನರ ಪ್ರಯತ್ನದಿಂದ ಹೊಂಜಿನ ದಿನಗಳು ಕಡಮೆಯಾಗಿದ್ದರೂ, ಆಗಾಗ, ವರ್ಷದಲ್ಲಿ ಸುಮಾರು 35 ದಿನಗಳಾದರು, ದಟ್ಟ ಹೊಂಜು ತಲೆ ಎತ್ತುತ್ತಿದೆ. ಅತಿ ಹೊಂಜಿನ ನಗರ ಎನ್ನುವ (ಕು)ಖ್ಯಾತಿ ಈಗ ಹ್ಯೂಸ್ಟನ್ನಿಗೆ ಬಂದಿದೆ.

ಹೊಂಜು = ನಂಜು

ಹೊಂಜು ನಿಮ್ಮ ಅರೋಗ್ಯಕ್ಕೆ ಅಪಾಯಕಾರಿ. ಶ್ವಾಸಕೋಶಗಳನ್ನು ಗಾಯಗೊಳಿಸಿ, ಗಂಟಲು ಉರಿಸಿ, ಕಣ್ಣು ಮೂಗು ತೂತು ಬೀಳುವಂತೆ ಸುರಿಸಬಲ್ಲದು ಈ ಹೊಂಜು. ಅತಿ ಹೊಂಜಿನ ದಿನಗಳಲ್ಲಿ, ಸೂಮೊ ಪೈಲವಾನನೊಬ್ಬ ಎದೆಯ ಮೇಲೆ ಕುಳಿತು ಸಲಿಕೆಯಿಂದ ಮೂಗು ಕೆರೆಯುವ ಅನುಭವ. ಮುದುಕರಿಗೂ ಮಕ್ಕಳಿಗೂ ತೊಂದರೆ. ದಮ್ಮು ರೋಗಿಗಳಿಗೆ ಪ್ರಾಣಸಂಕಟ. ಏನಿದು ಹೊಂಜು? ನಮ್ಮೂರಿನಲ್ಲಿ ದಿನಾಲು ಬೆಳಿಗ್ಗೆ ಎಲ್ಲರು ಸ್ನಾನಕ್ಕೆ ನೀರು ಕಾಯಿಸುವಾಗ, ತುಂತುರು ಮಳೆ ಹೊಂಜಿನಲ್ಲಿ ತೊಯ್ದ ಕಟ್ಟಿಗೆಯನ್ನು ಊದುಗೊಳವಿಯಿಂದ ಎದೆ ನೋಯುವಂತೆ ತಲೆ ತಿರುಗುವವರೆಗೂ ಊದುತ್ತ ಕಣ್ಣು ಕೆಂಪಗೆ ಮಾಡಿಕೊಂಡು, ಊರ ತುಂಬ ಹುಟ್ಟುವ ಹೊಗೆ ಮತ್ತು ಹಬೆ ಎಷ್ಟು ಕುಡಿದಿದ್ದೇವೆಯಾ! ಹೊಂಜಿಗೇಕೆ ಇಷ್ಟು ದೂರು, ಮಾರಾಯ್ರೆ?

ಈಗ ತಿಳಿದಿರುವಂತೆ, ಹೊಂಜು ಎಂದು ಕರೆದರೂ, ಬರಿ ಹೊಗೆಯಾಡನೆ ಮಂಜು ಸೇರಿಸಿದರೆ ಹೊಂಜು ಹುಟ್ಟುವುದಿಲ್ಲ. ಹೊಂಜು ವಾಸ್ತವಿಕವಾಗಿ ನೆಲ ಮಟ್ಟದ ಓರೆkೂೕನ್‌. ಔದ್ಯಮಿಕ ಕಸ, ಬಣ್ಣ, ಕರಗಿಸಿಕೊಳ್ಳುವ ದ್ರವ ಮತ್ತಿತರ ರಾಸಾಯನಿಕಗಳು, ಸಹಸ್ರಾರು ಕಾರುಗಳು ಹೊರಕಳಿಸುವ ಕಶ್ಮಲಗಳು ಎಲ್ಲ , ಕಣಿವೆಯಲ್ಲಿ ನಿಂತ ಗಾಳಿಯಲ್ಲಿ , ಬೇಸಿಗೆಯ ಬಿಸಿಲು ಧಗೆಗಳಿಂದ ಕುದಿದಾಗ ಹುಟ್ಟುತ್ತದೆ ಓರೆkೂೕನ್‌. ರಾಸಾಯನಿಕವಾಗಿ ಹೇಳುವುದಾದರೆ, ಹೈಡ್ರೊಕಾರ್ಬನ್‌ ಮತ್ತು ನೈಟ್ರೊಜನ್‌ ಆಕ್ಸೈಡುಗಳ ರಸಕ್ರಿಯೆ ಓರೆkೂೕನ್‌ ಹುಟ್ಟಲು ಅಗತ್ಯ. ಹೊಂಜು ಅಂದರೆ ಬಹುಪಾಲು ಓರೆkೂೕನ್‌ ಸೇರಿರುವ ಈ ಕಶ್ಮಲಯುಕ್ತ ಗಾಳಿ.

ಹೊಂಜು ಬೇಕೆ ಹೊಂಜು?

ಲಾಸ್‌ ಎಂಜಲೀಸ್‌ ಸುತ್ತ ಮೂರು ದಿಕ್ಕುಗಳಲ್ಲಿ ಗುಡ್ಡಗಳು. ಮೇಲೆ ಸ್ವಾಭಾವಿಕವಾಗಿ ಹರಡಿಕೊಳ್ಳುವ ವಿಲೋಮ ಸ್ತರ. ತೆರೆದ ಪಶ್ಚಿಮದ (ಅ)ಶಾಂತ ಸಾಗರದಿಂದ ಸದಾ ಬೀಸುವ ಗಾಳಿ. ಹೀಗಾಗಿ ಇಲ್ಲಿ ಹುಟ್ಟುವ ಹೊಂಜು ಮತ್ತಿತರ ಕಶ್ಮಲಗಳಿಗೆ ಹೊರಬೀಳಲು ಅವಕಾಶವೆ ಇಲ್ಲ. ಅಂತೆ, ಲಾಸ್‌ ಎಂಜಲೀಸ್‌ ಹೊಂಜಿನ ಒಂದು ದೊಡ್ಡ ಕಾರ್ಖಾನೆ! ಕೆಲವು ಸಾಹಸಿಗಳು 80ರ ದಶಕದಲ್ಲಿ ಲಾಸ್‌ ಎಂಜಲೀಸ್‌ ಹೊಂಜನ್ನು ಸೀಸೆಯಲ್ಲಿ ಹಿಡಿದು ಮಾರುವ ದೊಡ್ಡ ಉದ್ಯಮವನ್ನೆ ನಡೆಸಿ ಶ್ರೀಮಂತರಾದರು. ಕಾಶಿಗೆ ಹೋಗಿ ಮಿಳ್ಳೆಗಳಲ್ಲಿ ಗಂಗಾಜಲ ಕೊಂಡು ತರುವಂತೆ, ಹೊಂಜು ತುಂಬಿದ ಸೀಸೆಗಳನ್ನು ಕೊಳ್ಳುವ ಪ್ರವಾಸಿಗಳನ್ನು ಕಂಡು, ಹೊಂಜು ಕುಡಿದು ಹುಣ್ಣಾದ ನನಗೆ ನಗಲು ಅಳಲು ಎರಡೂ ಸಾಧ್ಯವಿರಲಿಲ್ಲ.

‘ಅಯ್ಯಾ, ಸ್ವಲ್ಪ ಸಾವಧಾನ! ಮೇಲಿನ ಓರೆkೂೕನ್‌ ವಲಯದಲ್ಲಿ ತೂತು ಬಿದ್ದರೆ ಆಗುವ ದುಷ್ಪರಿಣಾಮ ಕೇಳಿದ್ದೇವೆ. ಭಾರತವೂ ಸೇರಿದಂತೆ ಜಗತ್ತಿನ ದೇಶಗಳು ಮೇಲ್‌ಸ್ತರದ ಓರೆkೂೕನ್‌ ರಕ್ಷಿಸಲು ಮಾಂಟ್ರಿಯಲ್‌ ಒಪ್ಪಂದ ಮಾಡಿಕೊಂಡಿರುವುದು ನಮಗೂ ಗೊತ್ತು. ಓರೆkೂೕನ್‌ ಕೆಟ್ಟ ವಿಕಿರಣಗಳನ್ನು ತಡೆಗಟ್ಟಿ ನಮ್ಮನ್ನು ಕಾಪಾಡುವ ಉಪಕಾರಿ. ಈಗ, ಓರೆkೂೕನ್‌ ಅಪಾಯಕಾರಿ ಎನ್ನುತ್ತೀರಲ್ಲಾ ?’

ನಿಜ, ಇದು ನೆಂಟರ ಪ್ರೇಮ! ದೂರ ಇದ್ದಷ್ಟೂ ಒಳ್ಳೆಯದು. ಹತ್ತಿರ ಬಂದರೆ ತೊಂದರೆ. 10-50 ಕಿ.ಮೀ. ಬಾನೆತ್ತರದಲ್ಲಿರುವ ಓರೆkೂೕನ್‌ ಒಂದು ರಕ್ಷಾ ಕವಚ ಕಲ್ಪಿಸಿದರೆ, ನೆಲಮಟ್ಟದ ಓರೆkೂೕನ್‌ ನಮ್ಮ ಶ್ವಾಸ ಕೋಶವನ್ನು ಹೊಕ್ಕು ಒಳಗಿನಿಂದ ಹೊರಗೆ ನಮ್ಮನ್ನು ಭಕ್ಷಿಸತೊಡಗುತ್ತದೆ.

ಹೊಂಜು ಯುದ್ಧ

ಅಕ್ಟೋಬರ್‌ 7, 1999 ಹ್ಯೂಸ್ಟನ್ನಿನ ಚರಿತ್ರೆಯಲ್ಲಿ ಒಂದು ಕರಾಳ ದಿನ. ಆವರೆಗು ಹ್ಯೂಸ್ಟನ್‌ ಲಾಸ್‌ ಎಂಜಲೀಸನ್ನು ಹೊಂಜು ಮಟ್ಟದಲ್ಲಿ ಮೀರಿಸಬಹುದು ಎಂದು ಯಾರಿಗೂ ಅನಿಸಿರಲಿಲ್ಲ. ಅಂದು ಡಿಯರ್‌ ಪಾರ್ಕ್‌ ಮೇಲೆ ಕೂಡಿದ ಕರಾಳ ಹೊಂಜು ಮೋಡ ದೊಡ್ಡದಾಗುತ್ತ ಮುಂದೆ ತೇಲಿತು. ಡಿಯರ್‌ ಪಾರ್ಕ್‌ ಹೈಸ್ಕೂಲಿನಲ್ಲಿ ಆಡುತ್ತಿದ್ದ ಹುಡುಗ ಹುಡುಗಿಯರ ಓಟ, ಸಾಕರ್‌, ಮತ್ತು ಫುಟ್‌ಬಾಲ್‌ ತಂಡಗಳ ಮೇಲೆ ಕೆಮ್ಮು, ಎದೆ ನೋವು, ಗಂಟಲ ಕೆರೆತ, ಉಸಿರಾಡುವ ತೊಂದರೆಗಳ ಧಾರೆ ಎರೆಯಿತು. ಆ ನಂತರ, ಹ್ಯೂಸ್ಟನ್‌ ಗಾಳಿ ಕೆಟ್ಟದಾಗಿದೆಯೆ ಎನ್ನುವ ಪ್ರಶ್ನೆಗಿಂತ ಅದರ ಗುಣಮಟ್ಟ ಹೇಗೆ ಹೆಚ್ಚಿಸಬೇಕು ಎಂದು ಕೇಳುವಂತಾಯ್ತು. ಅಂದಿನಿಂದ ನಾಗರಿಕರೆಲ್ಲ ಕಾರ್ಯೋನ್ಮುಖರಾದುದರಿಂದ ಸರಕಾರದ ಅಧಿಕಾರಿಗಳು, ಔದ್ಯಮಿಕರು, ಮತ್ತು ಪರಿಸರವಾದಿಗಳು ಆಡುತ್ತಿದ್ದ ರಾಜಕೀಯ ಚೆಂಡಾಟ ನಿಂತು ಹೋಯಿತು. ಹೊಂಜು ಪ್ರಜ್ಞೆಯನ್ನು ಹೆಚ್ಚಿಸಲು ನಾಗರಿಕರ ಕ್ಲಬ್ಬುಗಳು ನಡೆಸುವ ‘ಹೊಂಜಿನ ಓಟ’ (smog jog) ಅಂತಹ ವಾರ್ಷಿಕೋತ್ಸವಗಳು ಈಗ ಸಾಮಾನ್ಯವಾಗಿವೆ.

ವಿಚಿತ್ರವೆಂದರೆ, ದಶಕಗಳಿಂದಲು ಹ್ಯೂಸ್ಟನ್ನಿನ ವಾತಾವರಣ ಸುಮಾರಾಗಿ ಹಾಗೆ ಇದೆ. ಹೊಂಜಿನ ದಟ್ಟತೆ ಹೆಚ್ಚಿದೆ ನಿಜ. ಆದರೆ ಗಮನೀಯ ಬದಲಾವಣೆ ಆದದ್ದು ಲಾಸ್‌ ಎಂಜಲೀಸಿನಲ್ಲಿ. ಎಂಜಲೀನರ ಹದಿನೈದು ವರ್ಷಗಳ ಬಲವಂತ ಪ್ರಯತ್ನದಿಂದ ಕಶ್ಮಲಗಳು ಕಡಮೆಯಾಗಿ ಗಾಳಿಯ ಗುಣಮಟ್ಟ ಏರಿದೆ. ಸದ್ಯಕ್ಕೆ, ಈ ಎರಡು ನಗರಗಳ ‘ಹೊಂಜು ಯುದ್ಧ’ದಲ್ಲಿ ಯಾವುದು ಗೆಲ್ಲುತ್ತಿದೆ ಹೇಳಲಾಗದು. ವಾತಾವರಣ ಸಂರಕ್ಷಣಾ ಸಂಸ್ಥೆ ಹೊರತರುವ ಅಂಕಿಸಂಖ್ಯೆಗಳಿಗಾಗಿ ಕಾದು ನೋಡಬೇಕು.

ಗಾಲ್ವೆಸ್ಟನ್‌, ಹ್ಯೂಸ್ಟನ್‌ ಕೊಲ್ಲಿಯಲ್ಲಿರುವ, ಒಂದು ಚಿಕ್ಕ ದ್ವೀಪ. ಅದು ಒಂದಾನೊಂದು ಕಾಲದಲ್ಲಿ ಕೇಂದ್ರ ವ್ಯಾಪಾರಿ ಬಂದರವಾಗಿ ಮೆರೆದಿತ್ತು. ಈಗ ಹೊಂಜಿನಲ್ಲಿ ಮಸುಕಾಗಿದೆ. ಒಂದು ಹೊಂಜಿನ ದಿನ, ಹ್ಯೂಸ್ಟನ್ನಿನಿಂದ ಗಾಲ್ವೆಸ್ಟನ್ನಿಗೆ ಕಾರಿನಲ್ಲಿ ಹೊರಟಿದ್ದೆ. ಹ್ಯೂಸ್ಟನ್‌ ನೆಲ ಬಿಟ್ಟು ಸೇತುವೆಯ ಮೇಲೆ ಏರಿದರೆ ಮುಂದೆ ಏನಿದೆ ಕಾಣದು. ಭೂಮಿ ಅಲ್ಲಿಗೆ ಮುಗಿದು ಪಾತಾಳಕ್ಕೆ ಬೀಳುತ್ತಿದ್ದೇನೆ ಎನ್ನುವ ಭಯ.

ಡೀಸೆಲ್‌ ಇಂಜಿನುಗಳು ಹೊಂಜಿಗೆ ಮುಖ್ಯ ಕಾರಣವಾದರೆ ಪೆಟ್ರೊಲಿಯಂ ವಾಹನಗಳು ಎರಡನೆಯದಾಗಿವೆ ಎಂದು ರೈಸ್‌ ವಿಶ್ವವಿದ್ಯಾಲಯದ ಸಂಶೋಧಕರು ನಿರ್ಧರಿಸಿದ್ದಾರೆ. ಈ ಮೂಲಗಳನ್ನು ಕಡಮೆಗೊಳಿಸಲು ಮತ್ತು ಗಾಳಿಯ ಗುಣಮಟ್ಟವನ್ನು ಹೆಚ್ಚಿಸಲು ಹ್ಯೂಸ್ಟನ್‌ ನಗರಪಾಲಿಕೆ, ನಗರವಾಸಿಗಳು, ಮತ್ತು ಪರಿಸರವಾದಿಗಳು ಶ್ರಮಿಸುತ್ತಿದ್ದಾರೆ.

ಬೆಂಗಳೂರಲ್ಲಿ ಹೊಂಜು ?

ಭಾರತದ ಉದ್ಯಾನ ನಗರ ಎಂದು ಹೆಸರಾದ ಬೆಂಗಳೂರಿನ ಪರಿಸ್ಥಿತಿ ಹೇಗಿದೆ? ಸಿಲಿಕಾನ್‌ ಕಣಿವೆ ಎಂದು ಹೆಸರು ಗಳಿಸುತ್ತ ವಾಹನಗಳಿಂದ ಕಿಕ್ಕಿರಿದು, ಕನ್ನಡ ರಾಜಧಾನಿ ಭಾರತದ ಹೊಂಜಿನ ಊದುಗೊಳವೆ ಆಗದಂತೆ ನೋಡಿಕೊಳ್ಳಲು ಮುಂದಾಲೋಚನೆ ಅಗತ್ಯ. ಬೆಂಗಳೂರಿನ ಗಾಳಿಯ ಗುಣಮಟ್ಟ ಕಾಪಾಡಿಕೊಳ್ಳಲು ಕೇಂದ್ರದಿಂದ ಕರ್ನಾಟಕ ಸರಕಾರಕ್ಕೆ ಮೊನ್ನೆ ತಾನೆ ಆದೇಶ ಬಂದಿದೆ. ಬೆಂದಕಾಳೂರಿನ ನಿವಾಸಿಗಳೆ, ಇದು ಕೇವಲ ಸರಕಾರದ ತಲೆ ನೋವಲ್ಲ, ಎಲ್ಲರ ಉಸಿರಿನ ಪ್ರಶ್ನೆ. ನಾವು ಏನೂ ಮಾಡದಿದ್ದರೆ, ‘ದೇವಾಲಯವೀ ಹೂವಿನ ತೋಟಂ’ ಎಂದು ಹೇಳಿಕೊಳ್ಳುವ ಊರು ದೇವರು ಪರಾರಿಯಾದ ಹಾಳು ದೇಗುಲವಾದೀತು.

ಈಗ ಕಡ್ಡಾಯವಾಗಿ ಒಂದು ಕವಿತೆ:

ಬೇಕು ಒಬ್ಬ ಹೊಂಜುಂಡ

ಹೊಗೆ ಮಂಜುಗಳು ಕೂಡಿದರೆ ಹೊಂಜೆ ?
ಕಡೆದ ಕಸಾಯನವು ಹೊಂಜು, ನಿಜ ನಂಜು.

ಊರ ಸುತ್ತುವ ಹಾವು ಹೆದ್ದಾರಿ ನೂರು,
ನಾಗರಿಕತೆಯ ಕುರುಹು ಕಾರು
ಕಾರುವುದು ಹಗಲಿರುಳು ಕಾಳ್ಗಸವನ್ನು,
ಸಾರಜನಕದ ಆಕ್ಸೈಡು, ಹೈಡ್ರೊಕಾರ್ಬನ್ನು

ಬೇಸಿಗೆಯ ಸುಡು ಬಿಸಿಲ ಧಗೆ,
ನಿಂತ ಗಾಳಿಯಲಿ ದಟ್ಟ ಹೊಗೆ,
ಔದ್ಯಮಿಕ ಕಸ ರಸಾಯನಗಳ ಬೇಗೆ,
ವಿಲೋಮಸ್ತರ ಗುಡ್ಡಗಳ ವಿಕಟ ನಗೆ.

ಶಾಂತ ಸಾಗರದ ಅಶಾಂತ ತೂಫಾನು.
ಕುದಿಕುದಿದು ಒಸರುತಿರೆ ಓರೆkೂೕನು
ಬಂತು ಗಾಳಿಗೆ ನಾಗರಿಕತೆಯ ಬೇನೆ.
ಲಾಸ್‌ ಎಂಜಲೀಸಿಗೆ ಆದೀತೆ ಇದೆ ಕೊನೆ?

ಕಂದು ಬಣ್ಣದ ಗೂಡಾರ ರವಿಗೆ ಮಸುಕೆಳೆಯೆ
ಕತ್ತಲೆಯ ಒಳಗೆ ಉಸಿರು ಚೀಲಗಳ ಹಟಭೋಗ,
ಮೆದುಳ ಹಿಂಡಿದ ಹನಿ ಕಣ್ಣಲ್ಲಿ ಇಳಿಯೆ
ಅಳು ನಗೆಗಳೆರಡಕ್ಕು ಖಾಲಿ ರೋಗ.

ಯಾವ ಸುಖಾಮೃತ ಕಳಶಕ್ಕೆ ಕಾದಿಹೆವೊ!
ಎಲ್ಲಿರುವೆ ಗರಲ ಗಂಟಲ ನಂಜುಂಡ ?
ನಮ್ಮಿಂದ ನಮ್ಮನುಳಿಸಲು ನಮಗೀಗ
ಬೇಕು ಒಬ್ಬ ಹೊಂಜುಂಡ.

ಹೆಚ್ಚಿನ ಮಾಹಿತಿಗಾಗಿ ಈ ಜಾಲ ಕೊಂಡಿಗಳನ್ನು ಹಿಡಿದು ಈಜಿ :

1. Southern California Air Quality Management District:
http://www.aqmd.gov

2. United States Environmental Protection Agency: Arizona, California, Hawaii, Nevada
http://www.epa.gov/region09/air/acontact.html.

3. Texas Commision on Environmental Quality.
http://www.tceq.state.tx.us/index.html

4. The Galveston-Houston Association for Smog Prevention
http://www.ghasp.org/issues/smog.html

( 100 ಕ್ಕು ಹೆಚ್ಚು ಇಂತಹ ಕೇಂದ್ರ, ರಾಜ್ಯ, ಸ್ಥಳೀಯ ಸರಕಾರಿ ಸಂಸ್ಥೆ ಮತ್ತು ಲಾಭರಹಿತ ಜನತಾ ಸಂಘಗಳ ಜಾಲತಾಣಗಳು ಇವೆ. ಈ ಯಾದಿ ನೋಡಿ:
http://www.epa.gov/epapages/statelocal/envrolst.htm )

5. About Ozone: http://www.epa.gov/ozone/science/sc_fact.html

6. Houston-Galveston Outranks LA; Becomes "U.S. Smog Capital", GMC Gazzette October 4, 2000,
http://www.energyalliance.com/GMC/GMC00/wednesday/smog.html

7. Smog Jog participants protest pollution by Matt Cuddihy, Rice Thresher
http://www.rice.edu/projects/thresher/issues/88/00.10.27/current/news/story8.html


ಪೂರಕ ಓದಿಗೆ-
ಋತುವಿಲಾಸವೆನೆ ಇದೇನ ಹಾ !
ಶಶಿಕಲಾ ಅವರ ಕವಿತೆ- ಇಬ್ಬನಿ


ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X