• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೊಂದ ಕನ್ನಡಿಗನಿಂದ ಅಕ್ಕಳಿಗೊಂದು ಬಹಿರಂಗ ಪತ್ರ

By Staff
|

ಗೆಳೆಯರೇ,

ನನಗೆ ‘ಅಕ್ಕ’ದ ಪರಿಚಯವಾದದ್ದು ಹ್ಯೂಸ್ಟನ್‌ನಲ್ಲಿ . ನೂಯಾರ್ಕ್‌ನಲ್ಲಿ ಸಮ್ಮೇಳನ ನಡೆಸಲು ಓಡಾಡುತ್ತಿದ್ದ ಕೆಲವೇ ಕೆಲವು ಉತ್ಸಾಹಿಗಳಲ್ಲಿ ನಾನೂ ಒಬ್ಬ. ಆದರೆ ನನ್ನ ವೃತ್ತಿಯ ಸಲುವಾಗಿ ಕ್ಯಾಲಿಫೋರ್ನಿಯಾಗೆ ಬರಬೇಕಾದುದರಿಂದ ಆ ಕೆಲಸದಲ್ಲಿನ ಉತ್ಸಾಹ ಕಡಿಮೆ ಆಯಿತು. ಇದಲ್ಲದೆ ಸೆಪ್ಟಂಬರ್‌ 11ರ ಘಟನೆ ನಮ್ಮೆಲ್ಲ ಉತ್ಸಾಹವನ್ನು ತಣ್ಣಗಾಗಿಸಿತ್ತು.

ಅಮೆರಿಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ‘ಅಕ್ಕ’ ಇತ್ತೀಚೆಗೆ ಹೋಳಾದದ್ದು ಸರಿಯಷ್ಟೇ. ‘ಅಕ್ಕ’ ಬಳಗದಲ್ಲಿನ ಈ ರಾಜಕಾರಣ ಚಟುವಟಿಕೆಗಳು ಅಮೆರಿಕನ್ನಡಿಗನಲ್ಲಿ ಗೊಂದಲ ಮೂಡಿಸಿವೆ. ತವರು ಕನ್ನಡಿಗರೆದುರು ಅಮೆರಿಕನ್ನಡಿಗ ಮುಜುಗರಕ್ಕೆ ಒಳಗಾಗಿದ್ದಾನೆ. ಈ ಸಂದರ್ಭದಲ್ಲಿ ನಾವು ಮಾಡಬೇಕಾದುದಾದರೂ ಏನು ? ಆತ್ಮಾವಲೋಕನ ಮಾಡಿಕೊಳ್ಳಲು ಇದು ಒಳ್ಳೆಯ ಸಮಯ!

Golden Shake hand !!‘ಅಕ್ಕ’ ಅಮೇರಿಕಾದಲ್ಲಿ ನಮ್ಮನ್ನು ಗುರುತಿಸಿಕೊಳ್ಳಲು, ಕನ್ನಡ ಸಂಘಟನೆಗಳೆಲ್ಲಾ ಏಕಛತ್ರಿಯಡಿ ಸೇರಲು ಒಂದು ವೇದಿಕೆಯಾಗಿ ಒದಗಿತು ಎಂದು ಎಲ್ಲರಿಗೂ ಸಂತೋಷವಾಗಿದ್ದು ಹ್ಯೂಸ್ಟನ್‌ ಸಮ್ಮೇಳನದ ನಂತರ. ಅಖಿಲ ಅಮೇರಿಕಾ ಸಮ್ಮೇಳನ ಅರಿಜೋನಾದಲ್ಲಿ 1998ರಲ್ಲಿ ನಡೆದಿದ್ದರೂ, ಅದು ಅರಿಜೋನ ಕನ್ನಡ ಸಂಘದ ಅಡಿಯಲ್ಲಿ ನಡೆದಿತ್ತು. (ನಾನು ಆ ಸಮ್ಮೇಳನಕ್ಕೆ ಹೋಗಿರಲಿಲ್ಲ, ಏಕೆಂದರೆ ಆಗಿನ್ನೂ ನಾನು ಅಮೇರಿಕೆಗೆ ಕಾಲಿಟ್ಟ H1 Software Engineer.). ಈ ಸಂದರ್ಭದಲ್ಲಿ ಕೆಲವು ಕನ್ನಡಿಗರು ದೂರಾಲೋಚನೆಯಿಂದ ಒಂದು ಮಹಾನ್‌ ಸಂಸ್ಥೆಗೆ ಬುನಾದಿ ಹಾಕಿದರು. ಅದರ ಫಲವೇ ಅಕ್ಕ ! ಆ ಕನ್ನಡದ ಹುರಿಯಾಳುಗಳಿಗೆ ನಮನ. (ಕನ್ನಡದ ಸಂಸ್ಥೆಯಾಂದೇ ಈ ಕೆಲಸವನ್ನು ಮಾಡಿದೆ ಎಂತಲ್ಲ. ತೆಲುಗು, ತಮಿಳು ಭಾಷೆಯ ನಮ್ಮ ಸೋದರ ಸೋದರಿಯರೂ ಸಹ ಇಂತಹ ಸಂಸ್ಥೆಗಳನ್ನು ಕಟ್ಟಿದ್ದಾರೆ. ನಮ್ಮ ಹಾಗೆ ಜಗಳವನ್ನೂ ಆಡಿದ್ದಾರೆ. ಎರಡೆರಡು ಸಂಘಗಳನ್ನು ಕಟ್ಟಿಕೊಂಡಿದ್ದಾರೆ.)

ಈ ರೀತಿ ಹುಟ್ಟಿದ ಅಕ್ಕ ಬಳಗದಲ್ಲಿನ ಭಿನ್ನಮತ ಮೊಟ್ಟ ಮೊದಲ ಬಾರಿಗೆ ಹ್ಯೂಸ್ಟನ್‌ನಲ್ಲಿ ಬಯಲಿಗೆ ಬಿತ್ತು . ಹ್ಯೂಸ್ಟನ್‌ ಸಮ್ಮೇಳನ ಎಲ್ಲ ರೀತಿಯಿಂದ ಭೇಷ್‌ ಎನಿಸಿಕೊಂಡ ಸಮ್ಮೇಳನ. ಇದು ಅಕ್ಕದ ಸಮ್ಮೇಳನವಲ್ಲ, ಅಕ್ಕ ತನ್ನ ಸಂವಿಧಾನವನ್ನೇ ಅಳವಡಿಸಿಲ್ಲ. ಅಕ್ಕದ ಪದಾಧಿಕಾರಿಗಳು ಈ ಸಮ್ಮೇಳನದಲ್ಲಿ ಕೆಲಸ ಮಾಡಿಲ್ಲ ಎಂಬ ಆರೋಪ ಹೊರಿಸಿ ಹ್ಯೂಸ್ಟನ್‌ ಸಮ್ಮೇಳನವನ್ನು Millennium ವಿಶ್ವ ಕನ್ನಡ ಸಮ್ಮೇಳನ ಎಂದು ಕೆಲವರು ಕರೆದರು. ಆದರೆ ಜನಸಾಮಾನ್ಯರಿಗೆ ಈ ಒಳಜಗಳದ ಬಗ್ಗೆ ಸುಳಿವೂ ಇರಲಿಲ್ಲ.

ಇಷ್ಟಾದರೂ ಅಕ್ಕ ಸಂಘಟನೆ ಜನಪ್ರಿಯತೆಯನ್ನೇನೂ ಗಳಿಸಿರಲಿಲ್ಲ !

ಅಶ್ವಥ್‌ ಪ್ರಕರಣದಿಂದ ಮನೆ ಮಾತಾದ ಅಕ್ಕ

ಒಂದು ಸಂಘಟನೆ ಮನೆಮಾತಾಗಬೇಕಾದರೆ ಬಹಳಷ್ಟು ಸಿಹಿ ಸುದ್ದಿಗಳು ಬರುತ್ತಿರಬೇಕು. ಅಥವಾ ಒಂದು ಕಹಿ ಸುದ್ದಿ ಬಂದರೆ ಸಾಕು, ಪಾದರಸದಂತೆ ವಿಷಯ ಹಬ್ಬುತ್ತದೆ. ಅಂಥದೊಂದು ಕಹಿ ಪ್ರಕರಣ ಗಾಯಕ ಸಿ.ಅಶ್ವಥ್‌ರ ಪ್ರಕರಣದ ಮೂಲಕ ದೊರೆಯಿತು. ಅಶ್ವಥ್‌ರ ಪ್ರಕರಣ ಅಮೇರಿಕಾಗಿಂತ ಹೆಚ್ಚಾಗಿ ಬೆಂಗಳೂರಿನಲ್ಲಿ ಹೆಚ್ಚು ಸುದ್ದಿಯಾಯಿತು. ಇಲ್ಲಿಂದ ಯಾರೇ ಫೋನ್‌ ಮಾಡಲಿ, ಅವರು ಕೇಳುತ್ತಿದ್ದುದು - ಅದೇನೋ ಅಕ್ಕ ಅಂತೆ, ಅಶ್ವಥ್‌ಗೆ ದುಡ್ಡೇ ಕೊಟ್ಟಿಲ್ಲವಂತೆ ಏನು ಸಮಾಚಾರ? ನಮ್ಮ ಬಡ ಕಲಾವಿದರಿಗೆಲ್ಲಾ ಯಾಕೆ ಮೋಸ ಮಾಡ್ತಾ ಇದೀರಾ?’ ...... ಹೀಗೆ.

ಅಶ್ವಥ್‌ ಪ್ರಕರಣದಿಂದಾಗಿ ಅಕ್ಕ brand ಜನರ ಮನಸ್ಸಿನಲ್ಲಿ ಅಚ್ಚಾಗಿ ಉಳಿಯಿತು. ಬಹುಶಃ ಇಷ್ಟು ಪ್ರಚಾರ ಅಕ್ಕಾಗೆ ಸಿಗಬೇಕಾಗಿದ್ದರೆ, ಐದಾರು ಒಳ್ಳೆಯ ಸಮ್ಮೇಳನಗಳನ್ನೇ ಮಾಡಬೇಕಾಗಿತ್ತೋ ಏನೋ? ಸುಲಭವಾಗಿ ದೊರೆತ ಈ ಪ್ರಚಾರಕ್ಕಾಗಿ ಯಾರಿಗೆ ವಂದಿಸುವುದು? ಯಾರ ಮೇಲೆ ಮುನಿಸಿಕೊಳ್ಳುವುದು? ಏನೇ ಆಗಲಿ ಅಶ್ವಥ್‌ ಪ್ರಕರಣ ಅಕ್ಕಾಗೆ ಒಳ್ಳೆಯದೇ ಆಯಿತೆಂದು ಕಾಣಿಸುತ್ತದೆ.

ಡೆಟ್ರಾಯಿಟ್‌ನಲ್ಲಿ ಅಕ್ಕ !

2002ರ ಡೆಟ್ರಾುಟ್‌ ಸಮ್ಮೇಳನ ನ್ಯೂಯಾರ್ಕ್‌ನಲ್ಲಿ ನಡೆಯಬೇಕಾಗಿತ್ತು . ಆದರೆ, ಮೊದಲಿನಿಂದಲೇ ಅಲ್ಲಿಯ ಕನ್ನಡ ಹುರಿಯಾಳುಗಳಲ್ಲಿ ಯಾವುದೇ ಉತ್ಸಾಹವಿರಲಿಲ್ಲ . ಸಮ್ಮೇಳನವನ್ನು ನಡೆಸಲು ಸಾಧ್ಯವಾಗುವುದಿಲ್ಲ ಎಂದು ನ್ಯೂಯಾರ್ಕ್‌ ಕನ್ನಡಿಗರು ಹೇಳುವ ಹೊತ್ತಿಗೆ- ’ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ’ ಅನ್ನೋಹಾಗೆ, ಸೆಪ್ಟೆಂಬರ್‌ 11ರ ಘಟನೆ.

ಸರಿ ಮುಂದೇನು ಮಾಡುವುದು ? ಇನ್ನೊಂದು ವರ್ಷದಲ್ಲಿ ಹಣವನ್ನು ಸಂಗ್ರಹಿಸಿ, ಕಾರ್ಯಕ್ರಮಗಳನ್ನು ಸಿದ್ಧಪಡಿಸಬೇಕು. ಯಾರು ಆ ಮಹತ್ತರ ಹೊಣೆಯನ್ನು ಹೊರುತ್ತಾರೆ? ಪ್ರತಿ ಎರಡು ವರ್ಷಕ್ಕೊಮ್ಮೆ ಸಮ್ಮೇಳನ ನಡೆಯಬೇಕು ಅಂದುಕೊಂಡಿದ್ದು, ಅಕ್ಕ ಮೊಳೆಯುವ ಚಿಗುರಲ್ಲೇ ಮುರಿಯುವಂತಾುತು.

ಅಕ್ಕಾದ ಪದಾಧಿಕಾರಿಗಳಲ್ಲಿ ಒಂದು ಚಿಂತನೆ ಪ್ರಾರಂಭವಾುತು. ಈಗಿನ ಸಮ್ಮೇಳನ ಸಣ್ಣದಾಗಿ ಮಾಡಲು ಸಾಧ್ಯವಿಲ್ಲ. ಹ್ಯೂಸ್ಟನ್‌ ಸಮ್ಮೇಳನದ ಬಗ್ಗೆ ಅಮೇರಿಕನ್ನಡಿಗರಲ್ಲಿ ಹೆಚ್ಚಿನ ಉತ್ಸಾಹ ಮೂಡಿಸಿದ್ದು , ಮುಂದೆ ನಡೆಯುವ ಸಮ್ಮೇಳನಗಳ ಬಗ್ಗೆ ಅಪಾರ ನಿರೀಕ್ಷೆ ಮೂಡಿಸಿದೆ. ಆದರೆ ಸಮ್ಮೇಳನದ ಮುಂದಾಳತ್ವ ಯಾರು ಹೊರುತ್ತಾರೆ? ಈ ದಿಶೆಯಲ್ಲಿ ಡೆಟ್ರಾಯಿಟ್‌ನ ಕನ್ನಡ ಧುರೀಣರು ಇಟ್ಟ ದಿಟ್ಟ ಹೆಜ್ಜೆ ನಿಜವಾಗಲೂ ಪ್ರಶಂಸಾರ್ಹ.

ಹಣ ಕೂಡಿಸಿದ್ದೂ ಆಯಿತು. ಪ್ರಕಟಿಸಿದಂತೆ ಆಗಸ್ಟ್‌ 30, 31 ಮತ್ತು ಸೆ. 1 ರಂದು ಅದ್ಧೂರಿಯಾದ ಜಾತ್ರೆಯಂತೆ ಸಮ್ಮೇಳನ ನಡೆದೇ ಹೋಯಿತು. ಸಮ್ಮೇಳನಕ್ಕೆ ಜನ ಹ್ಯೂಸ್ಟನ್‌ಗಿಂತಲೂ ಅಧಿಕವಾಗಿ ಬಂದಿದ್ದರು. ಎಲ್ಲ ತರಹದ ವ್ಯವಸ್ಥೆಗಳನ್ನೂ ಮಾಡಿದ್ದರೂ, ಅಲ್ಲಲ್ಲಿ ನಿರೀಕ್ಷೆಗಿಂತ ಹೆಚ್ಚು ಜನ ಬಂದಿದ್ದು ಕೆಲವೆಡೆ ತೊಂದರೆಗೆ ಕಾರಣವಾಯಿತು. ಹ್ಯೂಸ್ಟನ್‌ನಲ್ಲಿ ಇದ್ದ ಸ್ವಯಂ ಸೇವಕರ ಪ್ರವಾಹ ಇಲ್ಲಿರಲಿಲ್ಲ. ಇದರಿಂದಾಗಿ ಕೆಲವು ವ್ಯವಸ್ಥೆಗಳು ಅವ್ಯವಸ್ಥೆಗಳಾಗಿದ್ದವು. ಕರ್ನಾಟಕದಲ್ಲಿ ತಲೆದೋರಿದ ಬರಗಾಲದ ಪ್ರಯುಕ್ತ, ಡೆಟ್ರಾಯಿಟ್‌ನಲ್ಲಿ ಕರ್ನಾಟಕದ ವೃತ್ತಿ ಕಲಾವಿದರಿಗೆ ಬರ ಬಂದಿತ್ತು. ಆದರೆ ರಾಜಕಾರಣಿಗಳಿಗೆ ಬರವಿದ್ದಂತೆ ಕಾಣಲಿಲ್ಲ !

ರಾಜಕಾರಣಿಗಳು ಅವರವರ ಹಣದಲ್ಲೇ ಬಂದಿದ್ದರೂ, ಅವರಿಗೆ ಸಿಕ್ಕ ವೇದಿಕೆಯ ಮೇಲಿನ ಅವಕಾಶಗಳನ್ನು ನೋಡಿ, ಅವರನ್ನು ಸರಕಾರದವರೇ ಕಳುಹಿಸಿದ್ದರೇನೋ ಎಂದು ತಪ್ಪು ತಿಳಿದ ಕೆಲವು ಮಂದಿ ’ಕಲಾವಿದರನ್ನು ಕಳುಹಿಸಲು ಸರಕಾರಕ್ಕೆ ಬರವಂತೆ, ಈ ರಾಜಕಾರಣಿಗಳಿಗೆ ಎಲ್ಲಿಂದ ಬಂತು ದುಡ್ಡು’ ಎಂದು ಟೀಕಿಸುತ್ತಿದ್ದರು.

ಮುಖ್ಯಮಂತ್ರಿಗಳ ನೇರ ಭಾಷಣ, ರಂಗದಮೇಲೆ ಇನ್ನೊಂದು ಕಾರ್ಯಕ್ರಮವನ್ನು ನಿಲ್ಲಿಸಿ ಈ ರಾಜಕಾರಣಿಗಳಿಗೆ ಮಾತನಾಡಲು ಅವಕಾಶ, ಸಮ್ಮೇಳನದ ಕಡೆಯ ದಿವಸ ನಡೆದ ಶಾಲು ಹೊದಿಸುವಿಕೆ, ಕಾರ್ಯಕ್ರಮದ ನಡುವೆ ಚಲನ ಚಿತ್ರಕ್ಕಾಗಿ ನಡೆದ ಚಿತ್ರೀಕರಣ ಕೆಲವರಲ್ಲಿ ಈ ಕನ್ನಡದ ವೇದಿಕೆಯನ್ನು ಹೀಗೇಕೆ ದುರುಪಯೋಗಪಡಿಸಿಕೊಳ್ಳ ಹೊರಟಿದ್ದಾರೆ ಎನ್ನುವ ಅಸಮಾಧಾನ ಮೂಡಿಸಿತು.

ಸಮ್ಮೇಳನಕ್ಕೆ ಮುಂಚೆ ಕೆಲ ಅಕ್ಕ ಪಧಾದಿಕಾರಿಗಳ ಬೆಂಗಳೂರಿನ ಪತ್ರಿಕಾಗೋಷ್ಠಿ , ಕೆಲವು ಪಧಾದಿಕಾರಿಗಳ ಉಚ್ಚಾಟನೆ ಹಾಗೂ ಇತರೇ ಕೆಲವು ಪ್ರಸಂಗಗಳಿಂದಾಗಿ ಕೆಲವರು ಅಕ್ಕಾಳ ಬಗ್ಗೆ ಮಾತನಾಡಲೂ ಇಷ್ಟಪಡುತ್ತಿರಲಿಲ್ಲ.

ನನ್ನ ದೃಷ್ಟಿಯಲ್ಲಿ ಇಂತಹ ದೊಡ್ಡ ಸಮ್ಮೇಳನ, ಅದೂ ಇನ್ನೂ ಎರಡನೇ ಸಮ್ಮೇಳನದಲ್ಲಿ ಆದ ತಪ್ಪುಗಳು ಮುಂದಿನ ಸಮ್ಮೇಳನದಲ್ಲಿ ತಿದ್ದಿಕೊಳ್ಳಬಹುದಾದಂತ ತಪ್ಪುಗಳು. ಕಡಿಮೆ ಕಾಲಾವಧಿಯಲ್ಲಿ, ಸೆಪ್ಟೆಂಬರ್‌ 11ರ ಘಟನೆಯ ನಂತರವೂ, ಕಳೆದ ಸಮ್ಮೇಳನದ ಘನತೆಯನ್ನು ಉಳಿಸಲು ಮಾಡಿದ ಕೆಲಸ ನಿಜವಾಗಲೂ ಸ್ತುತ್ಯಾರ್ಹ. ತಪ್ಪುಗಳನ್ನು ಮಾಡಿಲ್ಲವೆಂದಲ್ಲ, ತಪ್ಪುಗಳು ಗೊತ್ತಿಲ್ಲದೇ ಮಾಡಿದ್ದಾರೋ ಅಥವಾ ಸಮ್ಮೇಳನದ ಸಫಲತೆಯ ಉದ್ದೇಶದ ಉತ್ಸುಕತೆಯಿಂದ ಮಾಡಿದ್ದಾರೋ- ಅವೆಲ್ಲವೂ ಕ್ಷಮಿಸಲರ್ಹ.

ಹಣದ ದುರುಪಯೋಗವಾಗಿದೆ ಎನ್ನುವ ಮಾತು ಸುಳ್ಳು ಅನ್ನುವುದು ನನ್ನ ಭಾವನೆ. ಕೆಲವರು- ಸಮ್ಮೇಳನಕ್ಕೆಂದು ಸಂಗ್ರಹಿಸಿದ್ದ ಹಣದಲ್ಲಿ 50,000 ಡಾಲರ್‌ ಮುಖ್ಯಮಂತ್ರಿಗಳ ನೇರ ಭಾಷಣಕ್ಕೆ ಖರ್ಚಾಯಿತು. ಅದು ಸುಮ್ಮನೆ ದಂಡ ಎಂದು ಹೇಳಿದ ಮಾತು ಕಿವಿಗೆ ಬಿತ್ತು. ಆದರೆ ನನ್ನ ಅಭಿಪ್ರಾಯದ ಪ್ರಕಾರ- ಮುಖ್ಯಮಂತ್ರಿಯವರ ಭಾಷಣದ ಸಮಯದಲ್ಲಿ ಭರತನಾಟ್ಯ ಕಾರ್ಯಕ್ರಮ ಏರ್ಪಡಿಸುತ್ತೇವೆ ಅಂದಿದ್ದರೆ ಈ ನಿಧಿ ಸಂಗ್ರಹವಾಗುತ್ತಿರಲಿಲ್ಲ . ಅದು ಚರ್ಚೆಯ ವಿಷಯ. ಕೆಲವು ಸದಸ್ಯರಲ್ಲಿ ಅಕ್ಕ ಚುನಾವಣೆ ಏಕೆ ಮಾಡಿಲ್ಲ , ಸಂಘದ ಸಂವಿದಾನ ಸರಿಯಾಗಿಲ್ಲ , ಕನ್ನಡ ಸಂಘದ ನಾಮಕರಣದ ಸದಸ್ಯರಿಗೆ ಸಲಹೆಗಳನ್ನು ಕಾರ್ಯರೂಪಕ್ಕೆ ತರಲು ಅವಕಾಶವಿಲ್ಲ - ಹೀಗೆ ಹಲವಾರು ಆರೋಪಗಳ ಪಟ್ಟಿಯೇ ಸಿದ್ಧವಿತ್ತು . ಎಲ್ಲರಿಗೂ ತಿಳಿದಂತೆ ಒಂದಕ್ಕೆ ಎರಡಾಯಿತು. ಮನೆ ಒಡೆಯಿತು.

ಯಾವುದು ನಿಜವಾದ ಅಕ್ಕ ? ಯಾರು ಯಾರ ಪಕ್ಕ ?

ಅಮೇರಿಕನ್ನಡಿಗನಿಗೀಗ ಗೊಂದಲ. ಯಾರು ನಮ್ಮ ಅಕ್ಕ? ಯಾರು ಯಾರ ಪಕ್ಕ ? ಎಂದು. ನಾವು ಈ ಕಡೆ, ನಾವು ಅವರ ಕಡೆ ಎಂದು ನಾಯಕರುಗಳು ಇ-ಪತ್ರಗಳನ್ನೇನೋ ಕಳುಹಿಸಿದರು. ಆದರೆ, ಸಾಮಾನ್ಯ ಕನ್ನಡಿಗನ ಮನಸ್ಸಿನಲ್ಲಿ ಗೊಂದಲ ಬಗೆಹರಿದಿಲ್ಲ .

ಕೆಲ ಸದಸ್ಯರದು- ಅಕ್ಕ ಯಾರಾದರೇನು. ಸಮ್ಮೇಳನ ಯಾರಾದರೂ ಮಾಡಲಿ. ಸಮ್ಮೇಳನ ಆದರೆ ಹೋಗೋಣ ಎನ್ನುವ ನಿಲುವು. ಇರೋ ಇಪ್ಪತ್ತ್‌ ಮಂದೀಲಿ ಅದ್ಯಾಕ್ರೀ ಜಗಳ ಆಡ್ತಾರೆ. ಅದರಲ್ಲಿ ದುಡ್ಡಿಲ್ಲ ಏನಿಲ್ಲ ಎಂದು ಕೆಲವರು ಮೂಗು ಮುರಿದರೆ, ಇನ್ನು ಕೆಲವರು- ಅದೇನೋ ಅಕ್ಕಾದಲ್ಲಿ ಜಗಳ ಅಂತೆ, ಇವತ್ತು ಬೆಂಗಳೂರಿಗೆ ಫೋನ್‌ ಮಾಡಿದಾಗ ನಮ್ಮ ಅಮ್ಮ ಕೇಳ್ತಾ ಇದ್ರು, ಏನದು ಅಂತ ಎಂದು ರಾಗ ಎಳೆಯುವವರು.

ಅಮೆರಿಕದಲ್ಲಿ ಕನ್ನಡ ಕಾರ್ಯಕ್ರಮ ಮಾಡುವುದು ಸುಲಭವಲ್ಲ . ಕನ್ನಡ ಸಂಘಗಳ ಕನ್ನಡ ಕಾರ್ಯಕ್ರಮಕ್ಕೆ ಬರಬೇಕಾದರೆ- ಊಟ ಇದೆಯಾ? ಅಷ್ಟು ದೂರ ಯಾಕಿ , ನಮ್ಮ ಮನೆ ಹತ್ತಿರ ಯಾವುದೂ ಸ್ಕೂಲ್‌ ಸಿಗಲಿಲವೇನ್ರಿ? ಹೀಗೆ ಹಲವಾರು ಟೀಕೆಗಳು. ಪರಿಸ್ಥಿತಿ ಹೀಗಿರುವಾಗ, ಜಗಳವಾಡಿ ಸಮ್ಮೇಳನಕ್ಕೆ ಬನ್ನಿ ಎಂದರೆ ಹೇಗೆ ಜನ ಬರುತ್ತಾರೆ ಹೇಳಿ? ಅಕ್ಕದ ಪದಾಧಿಕಾರಿಗಳು ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು.

ಅಮೇರಿಕನ್ನಡಿಗ ಈಗ ಏನು ಮಾಡಬೇಕು ?

ಗೊಂದಲದಲ್ಲಿರುವ ಅಮೆರಿಕನ್ನಡಿಗ ಬೆಂಗಳೂರಿನಲ್ಲಿನ ಅಥವ ಕರ್ನಾಟಕದಲ್ಲಿನ ಪ್ರತಿಕ್ರಿಯೆಗಳಿಗೆ ಬೆಲೆಕೊಡಬೇಕೆ ಎನ್ನುವುದು ಈಗ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ . ಸರಕಾರವಂತೂ ಯಾವ ಹಣಕಾಸು ಸಹಾಯ ಮಾಡುವುದಿಲ್ಲ, ಅಕ್ಕ ಅದನ್ನು ನಿರೀಕ್ಷಿಸಿಯೂ ಇಲ್ಲ. ಸರಕಾರ ಕಲಾವಿದರನ್ನು ಕಳುಹಿಸಲಿಕ್ಕಾಗುವುದಿಲ್ಲ ಎಂದರೂ, ಸ್ವಂತ ಖರ್ಚಿನಿಂದ ಕರೆಸಿಕೊಳ್ಳುವ ಶಕ್ತಿ ಅಕ್ಕಳಿಗಿದೆ. ಹಾಗಾದರೆ ಅಮೇರಿಕನ್ನಡಿಗರ ಮತ್ತು ಕರ್ನಾಟಕ ಜನತೆ ಮತ್ತು ಸರಕಾರದ ಯಾವ ನಂಟು?

ಪ್ರತಿ ಅಮೇರಿಕನ್ನಡಿಗನಿಗೆ ಕರ್ನಾಟಕವೇ ತವರು. ತವರಲ್ಲಿ ನಮ್ಮ ಹೆಸರು ಕೆಡಿಸಿಕೊಳ್ಳಲಾಗುತ್ತದೆಯೇ? ಎಲ್ಲರೂ ಮಾಡುವ ಯೋಚನೆ ಇದೇನೆ! ಹೇಗಾದರೂ ಮಾಡಿ ಈ ಇಬ್ಬರು ಅಕ್ಕಂದಿರನ್ನು ಒಂದು ಮಾಡಬೇಕೆಂಬ ಹಂಬಲ ಕೆಲವರಿಗೆ. ಕೆಲವರು- ಇರಲಿ ಬಿಡಿ ಎರಡು ಸಂಘಗಳು, ಇನ್ನೊಂದನ್ನು ಬೇರೆ ಹೆಸರಲ್ಲಿ ಕರೆದರಾಯಿತು ಎನ್ನುತ್ತಿದ್ದಾರೆ. ಹಾಗಾದರೆ ಈಗ ಏನು ಮಾಡಬಹುದು?

ಕೆಲವು ಹಿತೈಷಿಗಳ ಸಲಹೆಗಳನ್ನು ನಿಮ್ಮ ಮುಂದೆ ಇಟ್ಟಿದ್ದೇನೆ:

  • ಎರಡು ತಂಡದವರು ತಮ್ಮ ತಮ್ಮ ಗದ್ದುಗೆಯಿಂದ ಮೊದಲು ಇಳಿಯಬೇಕು.
  • ಹಿಂದಿನ ಎಲ್ಲ ತಂಡದವರು ಮಾಡಿರಬಹುದಾದ ತಪ್ಪುಗಳನ್ನೆಲ್ಲಾ ಮರೆತು ಒಂದೆಡೆ ಸೇರಬೇಕು.
  • ಎಲ್ಲರಿಗೂ ಒಪ್ಪಿಗೆಯಾಗುವ ರೀತಿ ಹೊಸ ಸಂವಿಧಾನವನ್ನು ಬರೆದು ಅಂಗೀಕರಿಸಬೇಕು.

ದಯವಿಟ್ಟು ತವರು ಕರ್ನಾಟಕದ ತಂದೆ ತಾಯಿಗಳ, ಸಹೋದರ ಸಹೋದರಿಯರ ಬಾಯಲ್ಲಿ ನಗೆಪಾಟಲಾಗಬೇಡಿ ಎನ್ನುವುದು ನನ್ನ ಕಳಕಳಿಯ ಕೋರಿಕೆ.

ಕೋರ್ಟಿನ ಮೆಟ್ಟಿಲು ಹತ್ತುವುದನ್ನು ಯಾರೂ ಯೋಚಿಸುವುದು ಬೇಡ. ಯಾವ ಸಂಘ ಸಂಸ್ಥೆ ಕೋರ್ಟು ಕಚೇರಿ ಎನ್ನುತ್ತದೋ, ಆ ಸಂಘದ ಕಡೆ ಯಾವ ಅಮೇರಿಕನ್ನಡಿಗನೂ ತಿರುಗಿಯೂ ಸಹ ನೋಡುವುದಿಲ್ಲ. ತಂತಮ್ಮ ವೈಯಕ್ತಿಕ ಭಿನ್ನಾಭಿಪ್ರಾಯಗಳೇ ಇದ್ದರೂ ಅದನ್ನು ದೂರ ಮಾಡಿ, ಕನ್ನಡದ ಸೇವೆಗೋಸ್ಕರ, ಮುಂದಿನ ಪೀಳಿಗೆಗೆ ಒಳ್ಳೆಯ ಹಾದಿಗೆ ನಾಂದಿಯಾಗಲು ಒಂದಾಗೋಣ.

ಇತಿ,

- ನೊಂದ ಅಮೇರಿಕನ್ನಡಿಗ

17 ಜೂನ್‌ 2003

(ನೊಂದ ಅನೇಕ ಅಮೇರಿಕನ್ನಡಿಗರ ಪರವಾಗಿ)

ಮುಖಪುಟ / ಎನ್‌ಆರ್‌ಐ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more