ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ನಾ ಕಳೆಯುತ್ತಿದ್ದ ಭಾನುವಾರಗಳು..

By Staff
|
Google Oneindia Kannada News
  • ರಾಮಪ್ರಸಾದ್‌, ಫ್ರೀಮಾಂಟ್‌, ಕ್ಯಾಲಿಫೋರ್ನಿಯಾ.
    [email protected]
ಭಾನುವಾರವಾದ್ದರಿಂದ ಎಚ್ಚರಿಕೆ ಆಗಿದ್ದರೂ ಏಳಲು ಏನೋ ಸೋಮಾರಿತನ. ಹೊರಗಿನ ತರಕಾರಿಯವನ ಕೂಗು ‘ಹುರಳೀಕಾಯಿ, ಬೆಂಡೇಕಾಯಿ, ಪಡವಲಕಾಯಿ, ಈರುಳ್ಳಿ, ಸೊಪ್ಪೂ....’, ಮನೆಯ ಹಿಂದುಗಡೆ ಕೆಲಸದವಳು, ಬಂಡೆ ಮೇಲೆ ಬಟ್ಟೆ ಒಗೆಯುವ ‘ಟಪ್ಪ್‌..ಟಪ್ಪ್‌..’ ಸದ್ದು, ದೂರದಲ್ಲೆಲ್ಲೋ ಸಣ್ಣದಾಗಿ ಕನ್ನಡ ರೇಡಿಯೋ ಸಂಗೀತ, ಇದರ ಜೊತೆಗೆ ‘ಆಗ್ಲೆ ಎಂಟು ಗಂಟೇ ಆಯಿತು ಏಳ್ರೊ...’ ಎಂಬ ನಮ್ಮಮ್ಮನ ಸುಪ್ರಭಾತದೊಂದಿಗೆ ಶುರುವಾಗುತ್ತಿತ್ತು.. ಭಾನುವಾರ !

ಎದ್ದ ತಕ್ಷಣ ಮುಖ ತೊಳೆಯಲು ಅಕ್ಕ ತಮ್ಮಂದಿರೊಂದಿಗೆ ಪೈಪೋಟಿ. ನಂತರ ಭಾನುವಾರದ ಪೇಪರ್ಗೆ ಜಗಳ. ನಮ್ಮ ತಮ್ಮನಿಗೆ ಸ್ಪೋರ್ಟ್ಸ್‌ ಹುಚ್ಚು, ನಮ್ಮ ತಂದೆಗೆ ಪಾಲಿಟಿಕ್ಸ್‌, ನನಗೆ ಕನ್ನಡ ಸಿನಿಮಾ ಪುಟ.... ಹೀಗೆ ಪೇಪೆರ್ನ ಒಂದೊಂದು ಭಾಗ ಒಬ್ಬೊಬ್ಬರ ಬಳಿ. ಪಾಪ...ಇದೆಲ್ಲದರ ಜೊತೆಗೆ ನಮ್ಮ ತಾಯಿ, ನಾವು ಕುಳಿತಲ್ಲಿಗೆ ಮಾಡುತ್ತಿದ್ದ ಬಿಸಿ ಬಿಸಿ ಸ್ಟ್ರಾಂಗ್‌ ಕಾಫೀ ಸರಬರಾಜು..

Ram Prasadಭಾನುವಾರ 8.30 ರಿಂದ 9.30 ಬೆಳಿಗ್ಗೆ ವಿವಿಧಭಾರತಿಯ ನಂದನ ಕಾರ್ಯಕ್ರಮದಲ್ಲಿ, ಹಳೆಯ ಕನ್ನಡ ಚಿತ್ರಗೀತೆಗಳು... ಆದಿನ ತಪ್ಪದೆ ನಮ್ಮ ತಾಯಿ ನಮ್ಮೆಲ್ಲರ ನೆತ್ತಿಯ ಮೇಲೆ ರಾಶಿ ರಾಶಿ ಹರಳೆಣ್ಣೆ ಲಪ್ಪಟಿಸಿ ಪಟಪಟನೆ ಸದ್ದು ಬರುವಂತೆ ತಟ್ಟುತ್ತಿದ್ದರು. ಆದಿನ ಬಚ್ಚಲುಮನೆಯ ಬಾಯ್ಲರ್ಗೆ ರೆಸ್ಟು. ಬಚ್ಚಲು ಮನೆ ಮೂಲೆಯಲ್ಲಿದ್ದ ಹಂಡೆಗೆ ಸೌದೆ, ಒಣಗಿದ ತೆಂಗಿನ ಗರಿ, ಇನ್ನೂ ಏನೇನೋ ಹಾಕಿ ನೀರನ್ನು ಕಾಯಿಸುತ್ತಿದ್ದರು.

ನಂದನ ಕಾರ್ಯಕ್ರಮ ಮುಗಿದ ಮೇಲೆ ತಲೆಗೆ ನೀರು ಹಾಕಿಕೊಳ್ಳುವ ಸಂಭ್ರಮ. ಬಚ್ಚಲು ಮನೇಲಿ ಹೊಗೆ ತುಂಬಿ, ಕಣ್ಣೆಲ್ಲ ಉರಿ, ನೀರು... ಹಾಗೆ ಬಿಸಿ ಬಿಸಿಯಾಗಿ ನೀರು ಹಾಕಿಕೊಂಡು, ಪಂಚೆ ಉಟ್ಟುಕೊಂಡು ಆಚೆ ಬರುತ್ತಿದಂತೆ, ‘ಎಣ್ಣೆ ನೀರು ಹಾಕಿಕೊಂಡಿದ್ದೀರ, ಹಣೆಗೆ ದೇವರ ಕುಂಕುಮ ಇಟ್ಕೊಳ್ರೊ’ ಎಂಬ ನಮ್ಮಜ್ಜಿ ಕೂಗು. ಅಷ್ಟರಲ್ಲಿ ಅಡುಗೆ ಮನೇಯಿಂದ ಘಮಾ ಘಮಾ ಎಂಬ ಉಪ್ಪಿಟ್ಟಿನದೋ, ದೊಸೇದೋ ವಾಸನೆ.

ಒಂದು ತಟ್ಟೆಯಲ್ಲಿ ತಿಂಡಿ ಇಟ್ಟುಕೊಂಡು ಹಾಲಿಗೆ ಬಂದು ಟೀವಿ ಮುಂದೆ ‘ಭಾನುವಾರದ ಪ್ರೋಗ್ರಾಂ’ ನೋಡಲು ಕುಳಿತು ಕೊಳ್ಳುತ್ತಿದ್ದೆವು. ಆ ಸಮಯದಲ್ಲಿ ‘ರಾಮಾಯಣ, ಮಹಾಭಾರತ’ ಬರುತ್ತಿದ್ದುದರಿಂದ, ಎಲ್ಲರಿಗೂ ಮುಂಚೆ ನಮ್ಮ ಅಜ್ಜಿ ರೆಡಿಯಾಗಿ, ಭಕ್ತಿಯಿಂದ ಕುಳಿತಿರುತ್ತಿದರು. (ಅವರು ಬೆಳಗಿನ ಜಾವ ಎದ್ದು ಸ್ನಾನ, ಪೂಜೆ ಎಲ್ಲ ಮುಗಿಸಿಬಿಟ್ಟಿರುತ್ತಿದ್ದರು)

ನಾವೆಲ್ಲ ಕೈಯಲ್ಲಿ ತಿಂಡಿ ತಟ್ಟೆಗಳನ್ನು ಹಿಡಿದು ಬರುವುದನ್ನು ನೊಡುತ್ತಿದಂತೆಯೆ ಶುರೂ.. ‘ಏನ್ರೊ ಮುಸುರೆ, ಮೈಲಿಗೆ ಎಲ್ಲ ಬಿಟ್ಬಿಟ್ಟಿದ್ದೀರಲ್ಲೊ. ಅಚ್ಚುಕಟ್ಟಾಗಿ ಅಲ್ಲೇ ತಿಂದು, ಕೈತೊಳ್ಕೊಂಡು ಬರಬಾರದ ?.. ದೊಡ್ಡೊವ್ರಾಗ್ತಾ ಆಗ್ತ ಯಾಕೊ ಕೆಟ್ಟ್ಹೋದ್ರಿ.. ಮಕ್ಳಾಗಿದ್ದಾಗ್ಲೇ ವಾಸಿ .. ಹೇಳಿದ್‌ ಹಾಗೆ ಕೇಳ್ತಿದ್ದ್ರಿ... ಏನೋಪ್ಪ...’ ಎಂಬ ರಾಗದ ಬುದ್ಧಿವಾದ.

ಅಲ್ಲ , ಭಾನುವಾರ ಟೀವಿ ನೋಡ್ತಾ ತಿಂಡಿ ತಿನ್ನದೆ ಇದ್ರೆ ಏನು ಚೆನ್ನಾಗಿರುತ್ತೆ ? ಈ ದೊಡ್ಡೊರ್ಗೆ ಏನೂ ಗೊತ್ತೇ ಆಗೊಲ್ಲ.

ಪ್ರತೀ ವಾರಾನು ಇದನ್ನೇ ಕೇಳಿ ಕೇಳಿ ಅಭ್ಯಾಸ ಆಗಿ, ಅದಕ್ಕೆ ಹೆಚ್ಚು ಗಮನ ಕೊಡದೆ ನಾವು ಟೀವೀ ನೋಡುತ್ತ ಸುಮ್ಮನೆ ಅಲ್ಲೇ ಕುಳಿತು ಕೊಳ್ಳುತ್ತಿದ್ದೆವು. ನಾವು ಕೇಳುವುದಿಲ್ಲ ಎಂದು ಗೊತ್ತಿದರೂ ಕೂಡ ನಮ್ಮಜ್ಜಿ ಹೇಳುವುದನ್ನು ಮಾತ್ರ ಬಿಡುತ್ತಿರಲಿಲ್ಲ.

ಮಹೇಂದ್ರ ಕಪೂರನ ಕಂಠದಿಂದ ಬರುತ್ತಿದ ‘ಮಹಾ..... ಭಾರತ್‌......’ ಹಾಡು ಶುರು ಆಗಿ, ಶ್ರಿ ಕೃಷ್ಣ ಶಂಖ ಊದುತ್ತಿರುವ ಚಿತ್ರ ಟೀವಿ ಪರದೆ ಮೆಲೆ ಬರುತ್ತಿದಂತೆ, ನಮ್ಮಜ್ಜಿ, ಚಾಚಿದ್ದ ಕಾಲನ್ನು ಮಡಚಿ, ಭಕ್ತಿಯಿಂದ ಟೀವೀಗೆ ಕೈಮುಗಿದುಬಿಡುತ್ತಿದ್ದರು. ಈ ಹಾಡನ್ನು ಕೇಳಿ ಅಡಿಗೆ ಮನೆಯಿಂದ ನಮ್ಮ ತಾಯಿ, ರೂಮಿನಿಂದ ನಮ್ಮ ತಂದೆ... ಜೊತೆಗೆ ಹಿಂದೆ ಮುಸುರೆ ತಿಕ್ಕುತ್ತಿದ್ದ ಬೋರಮ್ಮ ಕೂಡ ಬಂದು ಕುಳಿತು ಬಿಡುತಿದ್ದಳು. ನಮಗೆ ಬರುತ್ತಿದ್ದ ಹಿಂದಿ ಅಷ್ಟರಲ್ಲೆ ಇದೆ, ಆದರೂ ಕಾಲೇಜಿಗೆ ಹೋಗುವ ಹುಡುಗರೆಂದು ನಮ್ಮ ಹಿಂದಿ ಮೇಲೆ, ನಮ್ಮ ತಾಯಿ ಹಾಗು ಅಜ್ಜೀಗೆ ಎಲ್ಲಿಲ್ಲದ ನಂಬಿಕೆ. ಅದರಿಂದಾಗಿ, ಮಧ್ಯೆ ಮಧ್ಯೆ ‘ಏನಂತೊ?.... ಏನಂತೊ?....’ ಎಂಬ ಪ್ರಶ್ನೆಗಳು. ನಾವು ನಮಗೆ ತಿಳಿದಷ್ಟು ಅವರಿಗೆ ಹೇಳುತ್ತಿದ್ದೆವು.

ಮಹಾಭಾರತ ಮುಗಿದ ಮೇಲೆ ನಮ್ಮಮ್ಮ, ಅಜ್ಜಿ ಎದ್ದು ಅಂದಿನ ಅಡಿಗೆಗೆಂದು ಒಳಗೆ ಹೊರಟು ಹೋಗುತ್ತಿದ್ದರು. ನಾವು ಟೀವಿ ನೋಡಲು ಮುಂದುವರಿಸುವುದೊ, ಅಥವ ಅಂದಿನ ಪೇಪರ್‌ ಮುಗಿಸಿ ಮುಖ್ಯ ಸುದ್ದಿಗಳ ಬಗ್ಗೆ ಚರ್ಚಿಸುವುದೊ, ಅಥವಾ ಮನೆಗೆ ಬಂದ ಕ್ಲಾಸ್‌ ಮೆಟ್ಸ್‌ ಅಥವಾ ಫ್ರೆಂಡ್ಸ್‌ ಜೊತೆ ಕೆಲಸಕ್ಕೆ ಬಾರದ ಹರಟೆ ಹೊಡೆಯುವುದೊ ಮಾಡುತ್ತಿದ್ದಂತೆ ಮದ್ಯಾನ ಒಂದೂ ಒಂದೂವರೆ ಆಗುತ್ತಿತ್ತು. ಅಷ್ಟರಲ್ಲಿ ಅಡಿಗೆ ಮನೆಯಿಂದ ಒಗ್ಗರಣೆ ಹಾಕಿದ ಸದ್ದು, ಅದರ ಹಿಂದೇನೆ ‘ಘಮ ಘಮ ಇಂಗು ವಾಸನೆ...’

ಆಂದು ಭಾನುವಾರದ ಸ್ಪೆಶಲ್‌ ಎಂದು ಹಪ್ಪಳಾನೊ... ಸಂಡಿಗೇನೊ... ಕರಿದಿರುತ್ತಿದ್ದರು. ಎಲ್ಲ ಸಾಲಾಗಿ ಕುಳಿತು ಹರಟೆ ಹೊಡೆಯುತ್ತ, ಪೊಗದಸ್ತಾಗಿ ಊಟಮಾಡಿ ಸೀದಾ ರೂಂಗೆ ಹೋಗಿ ಮತ್ತೊಂದು ಸಾರಿ ಮಲಗಿದೆವೆಂದರೆ ಏಳುವಷ್ಟರಲ್ಲಿ ಸಾಯಂಕಾಲ 4.30, 5.00.

ಸಾಯಂಕಾಲ ಎದ್ದು, ಇಲ್ಲ ಫ್ರೆಂಡ್ಸ್‌ ಜೊತೆ ಗಾಂಧಿಬಜಾರ್ಗೆ ವಾಕಿಂಗ್‌ ಹೋಗುವುದು ಅಥವಾ, ಮನೆ ಮುಂದೆ ಲಾನ್‌ ಮೇಲೆ ಕುಳಿತು ಮಾತು ಕಥೆ, ನಂತರ ರಾತ್ರಿ ಟೀವೀಲಿ ಬರುವ ಹಿಂದಿ ಸಿನಿಮ.... ಸಿನಿಮ ಚೆನ್ನಾಗಿರದಿದ್ದರೆ ವಿವಿಧಭಾರತಿಯ ಬೃಂದಾವನ ಕಾರ್ಯಕ್ರಮದಲ್ಲಿ ಬರುವ ‘ನಿಮ್ಮ ಮೆಚ್ಚಿನ ಚಿತ್ರ ಗೀತೆಗಳು...’. ನಂತರ ಊಟ ನಿದ್ದೆ...(ಮತ್ತೆ ಬೆಳಗೆದ್ದು ಓದುವುದು, ಕಾಲೇಜಿಗೆ ಹೊಗುವುದು, ಇತ್ಯಾದಿ ಇತ್ಯಾದಿ ಇರುತ್ತಿತ್ತಲ್ಲ...’).

ಆಹ ! ಎಂತ ಕಾಲಾರಿ? ಎಲ್ಲಿ ಹೋಯ್ತು ಆ ಲೈಫೂ...???

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X