ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರೆಯೋಣ ಬನ್ನಿ , ಕನ್ನಡದಲ್ಲಿ ವಿ-ಅಂಚೆ

By Staff
|
Google Oneindia Kannada News
Kiranaಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಸ್ನೇಹಿತರೊಡನೆ, ಸಹಪಾಠಿ-ಸಹೋದ್ಯೋಗಿಗಳೊಡನೆ, ಬಂಧು-ಬಾಂಧವರೊಡನೆ ಸಂಪರ್ಕವನ್ನಿಟ್ಟುಕೊಳ್ಳಲು ನಾವೆಲ್ಲರೂ ವಿದ್ಯುನ್ಮಾನಿಕ ಅಂಚೆಗಳನ್ನು (ವಿ-ಅಂಚೆ ಥವಾ ಇ-ಮೇಲ್‌) ಹೆಚ್ಚು ಹೆಚ್ಚು ಉಪಯೋಗಿಸುತ್ತಿದ್ದೇವೆ.

ಇಂದು ನಮಗೆ ಓದಲು ಸಿಗುವ ಅನೇಕ ಕನ್ನಡಭಾಷಾ ಅಂತರ್ಜಾಲ ತಾಣಗಳಲ್ಲಿ ಕನ್ನಡ ಲಿಪಿ ಉಪಯೋಗವಾಗುತ್ತಿದೆ. ಕನ್ನಡ ಲಿಪಿಯನ್ನು ಅವುಗಳಲ್ಲಿ ಅಳವಡಿಸಲು ಅನೇಕ ಕಷ್ಟಗಳನ್ನು ಪಡುತ್ತಾರೆ ಎನ್ನುವುದು ನಮಗೆಲ್ಲರಿಗೂ ಗೊತ್ತಿರುವ ಮಾತು. ಈ ಕಷ್ಟವನ್ನು ಪತ್ರಿಕೆಯವರು, ಅಥವ ವಾರಕ್ಕೊಮ್ಮೆಯೋ ತಿಂಗಳಿಗೊಮ್ಮೆಯೋ ಹೊಸ ಆವೃತ್ತಿಯನ್ನು ಪ್ರಕಟಿಸುವಂಥವರು ಪಡಲು ಸಿದ್ಧರಿದ್ದಾರೆ. ಆದರೆ ಒಂದು ಕ್ಷಣದಲ್ಲಿ ಸಣ್ಣದೊಂದು ಸಂದೇಶವನ್ನು ಬರೆದು ಕಳಿಸಲು ಇಚ್ಛಿಸುವ ವಿ-ಅಂಚೆಯನ್ನು ಉಪಯೋಗಿಸುವ ನಮ್ಮಂತಹ ಸಾಮಾನ್ಯ ಜನರು ಅಷ್ಟೆಲ್ಲ ಕಷ್ಟವನ್ನು ಪಡುವುದಕ್ಕೆ ಹೋಗುವುದಿಲ್ಲ. ಅಷ್ಟು ಸಮಯ ಹಾಗೂ ಸಾವಧಾನ ಯಾರಿಗಿದೆ ?

ಕನ್ನಡ ಲಿಪಿಯಲ್ಲೇ ವಿ-ಅಂಚೆಗಳನ್ನು ಕಳಿಸಲು ವ್ಯವಸ್ಥೆ ಮಾಡಿಕೊಟ್ಟಿರುವ ಅನೇಕ ಅಂತರ್ಜಾಲ ತಾಣಗಳೂ ಇವೆ. ಆದರೆ ಅವುಗಳನ್ನು ಹೆಚ್ಚು ಜನ ಉಪಯೋಗಿಸುವುದಿಲ್ಲ . ಏಕೆ ?
ಏಕೆಂದರೆ-

  1. ಮೊದಲಾಗಿ ಕನ್ನಡದಲ್ಲಿ ಬರೆಯುವುದಕ್ಕೆಂದೇ ಒಂದು ವಿಶೇಷ ಅಂತರ್ಜಾಲ ತಾಣಕ್ಕೆ ಹೋಗಬೇಕು.
  2. ಅದರ ಲಿಪ್ಯಂತರಣ ಕ್ರಮವನ್ನು ಕಲಿಯಬೇಕು.
  3. ಜೊತೆಗೆ ಆ ತಾಣದಿಂದ ಕಳಿಸಿದ ಅಂಚೆಯನ್ನು ಕನ್ನಡದಲ್ಲಿ ಓದಲು ಅದೇ ತಾಣಕ್ಕೆ ಮತ್ತೊಮ್ಮೆ ಹೋಗಬೇಕು.
  4. ಆಂಗ್ಲಭಾಷೆಯಲ್ಲಿ ವಿ-ಅಂಚೆಯನ್ನು ಬರೆಯುವುದಕ್ಕೆ ಮತ್ತೊಂದು ತಾಣಕ್ಕೆ ಹೋಗಬೇಕು.
ಈ ಮೇಲಿನ ತಲೆನೋವುಗಳನ್ನು ಸಹಿಸಿಕೊಂಡೂ ಕನ್ನಡ ಲಿಪಿಯಲ್ಲೇ ವಿ-ಅಂಚೆಗಳನ್ನು ಕಳಿಸುವ ಜನ ಬಹಳ, ಬಹಳ ಕಡಿಮೆ.

‘ಬರಹ’ ತಂತ್ರಾಂಶದಿಂದ ನೇರವಾಗಿ ವಿ-ಅಂಚೆಗಳನ್ನು ಕಳಿಸುವ ವ್ಯವಸ್ಥೆ ಇದೆ. ಅದನ್ನು ಕೂಡ ಜನ ಉಪಯೋಗಿಸುವುದಿಲ್ಲ . ಮತ್ತದೇ ತಲೆನೋವು. ಕನ್ನಡದಲ್ಲಿ ಬರೆಯುವುದಕ್ಕೆ ಒಂದು ವಿ-ಅಂಚೆ ತಂತ್ರಾಂಶ, ಆಂಗ್ಲಭಾಷೆಯಲ್ಲಿ ಬರೆಯುವುದಕ್ಕೆ ಮತ್ತೊಂದು ತಂತ್ರಾಂಶವನ್ನು ಉಪಯೋಗಿಸಲು ಯಾರೂ ಹೋಗುವುದಿಲ್ಲ.

ಪರಿಣಾಮ: ಕನ್ನಡದಲ್ಲಿ ವಿ-ಅಂಚೆಗಳನ್ನು ಯಾರೂ ಬರೆಯುತ್ತಿಲ್ಲ.

ಯಾವ ಭಾಷೆ ಜನರ ಸಣ್ಣಪುಟ್ಟ ವಿಷಯಗಳನ್ನು ಇತರರಿಗೆ ತಿಳಿಸಲು ಉಪಯೋಗವಾಗುವುದಿಲ್ಲವೋ ಆ ಭಾಷೆಯ ಭವಿಷ್ಯ ಕತ್ತಲೆಯಿಂದ ತುಂಬಿರುತ್ತದೆ. ಕೇವಲ ಪುಸ್ತಕಗಳಲ್ಲಿ , ಚರಿತ್ರೆಯಲ್ಲಿ ಮಾತ್ರ ಕಾಣುವಂತಹ ಭಾಷೆಯಾಗಿಹೋಗುತ್ತದೆ ಅಂತಹ ಭಾಷೆ . ವಿ-ಅಂಚೆಗಳನ್ನು ಉಪಯೋಗಿಸುವ ಕನ್ನಡಿಗರ ಜೀವನದಿಂದ ಕನ್ನಡಭಾಷೆಯು ಕಾಣೆಯಾಗುತ್ತಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಕನ್ನಡವನ್ನು ಮತಾಡಲು, ಬರೆಯಲು ಬಂದರೆ ಸಾಲದು, ಕನ್ನಡದಲ್ಲಿ ಮಾತಾಡುತ್ತಲೇ, ಬರೆಯುತ್ತಲೇ ಇರಬೇಕು. ಆಗಲೇ ಕನ್ನಡ ಉಳಿದೀತು.

ಹಾಗಾದರೆ ಇದಕ್ಕೆ ಪರಿಹಾರವೇನು?

ಸದ್ಯಕ್ಕೆ ಇರುವುದು ಒಂದೇ ಪರಿಹಾರ: ಎಲ್ಲರೂ ಒಂದೇ ಲಿಪ್ಯಂತರಣ ಕ್ರಮವನ್ನು ಬಳಸಿ ರೋಮನ್‌ ಅಕ್ಷರಗಳಲ್ಲೇ ಕನ್ನಡವನ್ನು ಬರೆಯುವುದು. ಈಗಾಗಲೇ ಪ್ರಚಲಿತವಾಗಿರುವ ‘ಬರಹ 5.0’ ಲಿಪ್ಯಂತರಣ ಕ್ರಮವನ್ನು ಉಪಯೋಗಿಸಿ ಬರೆಯುವುದೇ ಅತ್ಯುತ್ತಮ.

‘ಬರಹ 5.0’ ಅನ್ನು ಕರ್ನಾಟಕ ಸರ್ಕಾರದವರು ಅಂಗೀಕರಿಸಿರುವುದರಿಂದ ಈ ನಿರ್ಧಾರಕ್ಕೆ ಮತ್ತಷ್ಟು ಹುರುಳು. ಕನ್ನಡ ಲಿಪಿಯಲ್ಲಿ ವಿ-ಅಂಚೆಗಳನ್ನು ಬರೆಯಲಾಗುತ್ತಿಲ್ಲ ಎನ್ನುವ ಕಾರಣಕ್ಕೆ ಕನ್ನಡವನ್ನೇ ಬಿಡುವ ಅಗತ್ಯವಿಲ್ಲ. ಕನ್ನಡವನ್ನು ರೋಮನ್‌ ಅಕ್ಷರಗಳಲ್ಲೇ ಬರೆಯಲಾಗುವುದರಿಂದ ಆ ಮೂಲಕವಾದರೂ ವಿ-ಅಂಚೆಗಳಲ್ಲಿ ಕನ್ನಡವನ್ನು ಜೀವಂತವಾಗಿಟ್ಟುಕೊಳ್ಳಬಹುದು. ಕನ್ನಡಿಗರಿಗೆ ವಿ-ಅಂಚೆಗಳನ್ನು ಕಳಿಸುವಾಗ ಆಂಗ್ಲಭಾಷೆಗೆಂದು ಉಪಯೋಗಿಸುವ ತಂತ್ರಾಂಶವನ್ನೇ ಉಪಯೋಗಿಸಿ ಕನ್ನಡದಲ್ಲಿ ಬರೆಯಬಹುದು. ಲಿಪಿ ಬೇರೆಯಾದರೇನು, ಭಾಷೆಯಂತೂ ಕನ್ನಡವೇ ಅಲ್ಲವೆ ? ಅಷ್ಟೇ ಅಲ್ಲದೆ, ಕನ್ನಡ ಲಿಪಿಯನ್ನೇನು ನಾವು ಸಂಪೂರ್ಣವಾಗಿ ಮರೆಯಬೇಕಿಲ್ಲ. ಅಂತರ್ಜಾಲದಲ್ಲಿರುವ ಅನೇಕ ತಾಣಗಳು ಕನ್ನಡ ಲಿಪಿಯಲ್ಲೇ ಇರುವುದರಿಂದ ಅಂತರ್ಜಾಲದಿಂದ ಕನ್ನಡ ಲಿಪಿ ಮಾಯವಾಗಲು ಸಾಧ್ಯವೇ ಇಲ್ಲ. ನಾನು ಸೂಚಿಸುತ್ತಿರುವ ಪರಿಹಾರದಿಂದ ನಮ್ಮ ವಿ-ಅಂಚೆಗಳಿಂದ ಕನ್ನಡ ಮಾಯವಾಗುತ್ತಿರುವುದು ನಿಲ್ಲುತ್ತದೆ, ಅಷ್ಟೆ. ಬೇರೆ ಕಡೆಗಳಲ್ಲಿ ಕನ್ನಡ ಲಿಪಿಯೇ ಉಪಯೋಗವಾಗಲಿ.

ಎಲ್ಲರೂ ಬರಹ 5.0 ಲಿಪ್ಯಂತರಣ ಕ್ರಮವನ್ನೇ ಉಪಯೋಗಿಸಿ ರೋಮನ್‌ ಅಕ್ಷರಗಳಲ್ಲಿ ಕನ್ನಡವನ್ನು ಬರೆಯುವುದರಿಂದ ಆಗುವ ಲಾಭಗಳು ಹೀಗಿವೆ:

  1. ಎಲ್ಲರೂ ಒಂದೇ ಲಿಪ್ಯಂತರಣ ಕ್ರಮವನ್ನು ಉಪಯೋಗಿಸುವುದರಿಂದ ಕನ್ನಡದ ಅಕ್ಷರಗಳಷ್ಟೇ ಸುಲಭವಾಗುತ್ತದೆ ರೋಮನ್‌ ಅಕ್ಷರಗಳಲ್ಲಿ ಬರೆಯುವುರೂ ಸುಲಭವಾಗುತ್ತದೆ. ಯಾವ ಆಯಾಸವೂ ಇಲ್ಲದೆ ರೋಮನ್‌ ಲಿಪಿಯಲ್ಲಿ ಕನ್ನಡವನ್ನು ಬರೆಯುವುದು ಅಭ್ಯಾಸವಾಗುತ್ತದೆ.
  2. ಬರಹ 5.0 ಅನ್ನು ಕರ್ನಾಟಕ ಸರ್ಕಾರ ಅಂಗೀಕರಿಸಿರುವುದರಿಂದ ಭವಿಷ್ಯದಲ್ಲಿ ಕನ್ನಡ ಲಿಪಿಯಲ್ಲೇ (ತಲೆನೋವಿಲ್ಲದೆ!) ಬರೆಯುವ ಅವಕಾಶ ಸಿಕ್ಕರೆ ಲಿಪ್ಯಂತರಣ ಕ್ರಮವನ್ನು ಬದಲಾಯಿಸಬೇಕಾಗುವುದಿಲ್ಲ.
  3. ಗಣಕಯಂತ್ರದಲ್ಲಿ ಕನ್ನಡದೊಡನೆ ಆಂಗ್ಲಭಾಷೆಯ ಪ್ರಯೋಗವೂ ಬಹಳ ಆಗುವುದರಿಂದ ಕನ್ನಡವನ್ನು ಬರೆಯುವುದಕ್ಕಾಗಿ ಬೇರೆಯ ತಂತ್ರಾಂಶವನ್ನು ಉಪಯೋಗಿಸುವುದು ತಲೆನೋವಿನ ಕೆಲಸ. ರೋಮನ್‌ ಅಕ್ಷರಗಳಲ್ಲಿ ಬರೆಯುವುದೇ ಸುಲಭ.
  4. ಈ ಲಿಪ್ಯಂತರಣ ಕ್ರಮವನ್ನು ಉಪಯೋಗಿಸಿ ಬರೆದ ವಿ-ಅಂಚೆಗಳನ್ನು ನೇರವಾಗಿ ಬರಹ ತಂತ್ರಾಂಶಕ್ಕೆ ತೆಗೆದುಕೊಂಡು ಹೋಗಬಹುದು, ತನ್ಮೂಲಕ ಕನ್ನಡ ಲಿಪಿಯಲ್ಲೇ ಓದಬಹುದು.
  5. ಮೊದಮೊದಲು ಮಾತ್ರ ಲಿಪ್ಯಂತರಣಕ್ಕೆ ‘ತಲೆ’ ಉಪಯೋಗಿಸಬೇಕಾದದ್ದು. ಒಮ್ಮೆ ಆ ಹಂತವನ್ನು ದಾಟಿದರೆ ರೋಮನ್‌ ಲಿಪಿಯಲ್ಲಿ ಕನ್ನಡವನ್ನು ಬರೆಯುವುದು ಕಷ್ಟವಾಗುವುದಿಲ್ಲ .
  6. ಮುಂದೆ ಕನ್ನಡ ಅಕ್ಷರಗಳಲ್ಲೇ ಕನ್ನಡವನ್ನು ಬರೆಯುವ ಅನುಕೂಲ ಒದಗಿಬಂದಾಗ ಅಂತರ್ಜಾಲವನ್ನು ಸಮರ್ಪಕ ಸಾಧನವಾಗಿ ಬಳಸುವ ನಾವು ಕನ್ನಡವನ್ನೇ ಮರೆತಿರುವುದಿಲ್ಲ !
ಕನ್ನಡ ಕನ್ನಡಿ ಯಾಹೂ ಬಳಗ :

ಕನ್ನಡವನ್ನು ಬರಹ 5.0 ಲಿಪ್ಯಂತರಣ ಕ್ರಮವನ್ನು ಉಪಯೋಗಿಸಿ ರೋಮನ್‌ ಅಕ್ಷರಗಳಲ್ಲೇ ಬರೆಯುವುದನ್ನು ಪ್ರಸಿದ್ಧಿ ಪಡಿಸುವುದಕ್ಕೆಂದೇ ಮೀಸಲಾಗಿರುವ ಒಂದು ಗುಂಪು- [email protected].
ಒಮ್ಮೆ ಭೇಟಿ ಕೊಡಿ : http://groups.yahoo.com/group/kannaDakannaDi/ ಅಥವಾ (ರೋಮನ್‌ ಲಿಪಿಯನ್ನುಪಯೋಗಿಸಿ ಕನ್ನಡದಲ್ಲೇ!) ವಿ-ಅಂಚೆಯನ್ನು ಈ ವಿಳಾಸಕ್ಕೆ ಕಳುಹಿಸಿ : [email protected]

ನಮ್ಮ ಅಂತರಂಗವನ್ನು ಬಿಂಬಿಸುವುದರಿಂದ, ನಮ್ಮ ಸಂಸ್ಕೃತಿಯ ಪ್ರತೀಕವಾಗಿರುವುದರಿಂದ, ನಮ್ಮ ಜನರನ್ನು ಅರಿಯಲು ಸಹಾಯಕವಾಗಿರುವುದರಿಂದ, ನಮ್ಮ ನಾಡಿನ ನುಡಿಯೇ ಆಗಿರುವುದರಿಂದ ಕನ್ನಡವೇ ನಮಗೆ ಕನ್ನಡಿ. ಗಾಜಿನ ಕನ್ನಡಿಯಲ್ಲಿ ಹೇಗೆ ನಮ್ಮ ದೇಹದ ಬಿಂಬ ಮೂಡುವುದೋ ಹಾಗೆ ಕನ್ನಡಕನ್ನಡಿಯಲ್ಲಿ ಕರ್ನಾಟಕದ, ಕನ್ನಡಸಂಸ್ಕೃತಿಯ ಬಿಂಬ ಮೂಡಿಬರುತ್ತದೆ.

ಅಂತಿಮವಾಗಿ ಕನ್ನಡ ವಿ-ಅಂಚೆಯನ್ನು ಜನಪ್ರಿಯಗೊಳಿಸಲು ಇರುವ ಪ್ರಮುಖ ಮಾರ್ಗವೆಂದರೆ, ಆ ಕುರಿತು ಆಸಕ್ತಿ ಬೆಳೆಸಿಕೊಳ್ಳುವುದು.

ಕನ್ನಡ ಕನ್ನಡಿಯಲ್ಲಿ ಸಿಗೋಣ! ಜೈ ಕನ್ನಡ! ಜೈ ಕರ್ನಾಟಕ!

ನೀವು ಬರೆಯಿರಿ...
ಕನ್ನಡದಲ್ಲಿ ವಿ- ಅಂಚೆಯ ಬಳಕೆ : ನಿಮ್ಮ ಅನುಭವ, ಅಭಿಪ್ರಾಯಗಳೇನು ?

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X