• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಂಗಮನಿಗೇಕಯ್ಯಾ ಸ್ಥಾವರದ ಹೊನ್ನಶೂಲೆ ?

By Staff
|

ಬುದ್ಧನ ನಂತರ ಅದೇ ವಿಚಾರಧಾರೆಯ (ಸನ್ಯಾಸ ಮತ್ತಿತರ ವಿಷಯಗಳನ್ನು ಬಿಟ್ಟು) ಪ್ರಭಾವಶಾಲಿ ಸಮಾಜ ಸುಧಾಕರನನ್ನು ಭಾರತ ದೇಶ ಕಂಡಿದ್ದು ಬಸವಣ್ಣನವರಲ್ಲಿ . ಇವರ ಪ್ರಭಾವ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶಗಳಲ್ಲಿಯೂ ಕಾಣಬಹುದು. ಕಾಣದ ದೇವರ ಭಕ್ತನಾಗಿದ್ದರೂ, ತನ್ನ ವಿಚಾರಶೀಲತೆಯನ್ನು ಸನಾತನಿಗಳಿಗೆ, ಪಟ್ಟಭದ್ರರಿಗೆ, ಸಮಾಜದ ಅತಿಹೀನ ನಡವಳಿಕೆಗಳಿಗೆ ಸಡ್ಡು ಹೊಡೆಯುವುದನ್ನು ಬಿಡಲಿಲ್ಲ ಕ್ರಾಂತಿಕಾರಿ ಬಸವಣ್ಣ. ದ್ವಿಜ-ಅಂತ್ಯಜರ ನಡುವೆ ಇದ್ದ ಅನೇಕ ಜಾತಿಗಳ, ವರ್ಗಗಳ, ಕುಲಗಳ ಅಂತರವನ್ನು ಹೋಗಲಾಡಿಸಲು, ಸಂಸ್ಕೃತ ಓದಿದ್ದವನ ಮಗಳನ್ನು ಬರೀ ಕನ್ನಡ ಮಾತ್ರ ತಿಳಿದಿದ್ದವನ ಮಗನಿಗೆ, ವಾಸ್ತವದ ವಿರೋಧದ ಕಟುಪರಿಚಯವಿಲ್ಲದೆ, ತನ್ನ ಮೂವತ್ತಾರನೆಯ ಬಿಸಿರಕ್ತದ ವಯಸ್ಸಿನಲ್ಲಿ ಕಲ್ಯಾಣ ಮಾಡಿಸಲು ಹೋಗಿ, ಅದಕ್ಕೆ ಪಟ್ಟಭದ್ರರಿಂದ, ಶೋಷಕರಿಂದ ಪ್ರತಿಭಟನೆ, ದೊಂಬಿ ಶುರುವಾಗಲು ಕಲ್ಯಾಣವನ್ನು ಬಿಡಬೇಕಾಗಿ ಬಂದು ಮಲಪ್ರಭೆ-ಕೃಷ್ಣೆಯರ ಸಂಗಮದಲ್ಲಿ ಅಕಾಲ ಸಾವಿಗೆ ಈಡಾಗುತ್ತಾನೆ.

ಈ ನೈಜಸತ್ಯವನ್ನು ಯಾವುದೇ ವಿಕಾರವಿಲ್ಲದೆ ಹೇಳುವ ‘ತಲೆದಂಡ’ದ ಕಾರ್ನಾಡ, ‘ಸಂಕ್ರಾಂತಿ’ಯ ಲಂಕೇಶ್‌ ಮತ್ತಿತರರನ್ನು ಈಗಿನ ಸಮಾಜ ಶೋಷಕರು ಒಪ್ಪಿಕೊಳ್ಳುವುದಿಲ್ಲ . ವ್ಯಕ್ತಿ ಹಾಗೂ ವಾದ ಇಷ್ಟವಾಗದಿದ್ದರೇನು, ಸತ್ಯ ಇಷ್ಟವಾಗಬಾರದೇಕೆ ?

ಧರ್ಮದ್ರೋಹಿಗಳಿಗೆ ಸತ್ಯ ಅಪಥ್ಯ. ಬಸವಣ್ಣನ ಚರಿತ್ರೆಯನ್ನು ಪುರಾಣೀಕರಣ ಮಾಡಿ, ಪರಶಿವನ ವಾಹನವಾದ ನಂದಿಯ ಅಪರಾವತಾರ ಎಂತಲೂ, ಎಂತೆಂತಹುದೊ ಪವಾಡ ಮೆರೆದನೆಂದೋ, ಕೂಡಲಸಂಗಮದಲ್ಲಿ ಐಕ್ಯನಾದನೆಂತಲೊ ಹೇಳುವ ಮೂಲಕ- ಮನುಷ್ಯಮಾತ್ರರು ಬಸವಣ್ಣನವರಂತೆ ಬದುಕಲು ಸಾಧ್ಯವಿಲ್ಲ ಎನ್ನುವ ಅಸಹಜ ಅವೈಜ್ಞಾನಿಕ ವಾದಿಗಳಿಗೆ ಎಲ್ಲೆಡೆಯೂ ಮನ್ನಣೆ. ಇದನ್ನೆಲ್ಲ ಪ್ರೋತ್ಸಾಹಿಸುವ ಕರ್ಮಠರಿಗೆ, ಬಸವಣ್ಣನ ಅನುಯಾಯಿಗಳೆಂದು ಹೇಳುವವರಿಗೆ, ತಾವು ಬಸವಣ್ಣನಿಗೆ, ಸತ್ಯಕ್ಕೆ, ಮಾನವೀಯತೆಗೆ ಮೋಸ ಮಾಡುತ್ತಿದ್ದೇವೆಂಬ ತಿಳಿವಳಿಕೆ ಇಲ್ಲದಿಲ್ಲ. ಈ ಬುದ್ದಿವಂತರು ಅವನ್ನೆಲ್ಲ ಮುಚ್ಚಿಡಲು ಜಂಗಮನ ಪ್ರತಿಮೆಯನ್ನು ಊರೂರಿನಲ್ಲಿ ಸ್ಥಾವರಿಸಿ, ಮಠ-ಮನೆ-ಮನಕ್ಕೆ ಕದವಿಕ್ಕಿಕೊಳ್ಳುತ್ತಾರೆ.

ದೆಹಲಿಯ ಸಂಸತ್‌ ಭವನದ ಬಳಿ ಇತ್ತೀಚೆಗೆ ಸ್ಥಾಪಿಸಲಾದ ಬಸವಣ್ಣನವರ ಪ್ರತಿಮೆ ಯಾರಿಗೂ ಕಾಣಿಸದ ಜಾಗದಲ್ಲಿದೆ ಎಂದು ರಾಜಕಾರಣಿಗಳು, ಸಾಂಸ್ಕೃತಿಕ ಕ್ಷೇತ್ರದ ಗಣ್ಯರು ಅಪಸ್ವರ ತೆಗೆದಿದ್ದ ಸುದ್ದಿ ನಿಮಗೆ ನೆನಪಿರಬೇಕು. ಇವರಲ್ಲಿ ಬೆಳಗಾವಿ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದ ಪಾಟೀಲ್‌ ಪುಟ್ಟಪ್ಪನವರೂ ಒಬ್ಬರು. ಬಸವಣ್ಣನವರ ವಚನಗಳ ಅಂಕಿತದ ಮೇಲೆ ತಮ್ಮ ಲಿಂಗಾನಂದದ ಪ್ರೇಮ-ಕಾಮದಿಂದಾಗಿ ಪ್ರತಿದಿನವೂ ದಾಳಿ ಮಾಡುತ್ತಿರುವ ಮಾತೆ ಮಹಾದೇವಿಯವರನ್ನು ಭಯಂಕರವಾಗಿ ಟೀಕಿಸಿದ್ದ ಪಾಪುರವರು, ನಂತರ ಮಹಾದೇವಿಯವರು ತಮ್ಮ ಮನೆಗೇ ಬಂದು ಸತ್ಕರಿಸಿದ ಮೇಲೆ ಸುಮ್ಮನಾದವರು. ಜನರಲ್ಲಿ ಬೇರೆಯವರ ಪ್ರಾಮಾಣಿಕತೆಯ ಬಗ್ಗೆ ಇರಲೇಬೇಕಾದ ಆರೋಗ್ಯಕರ ಸಂಶಯವನ್ನು ನಿಸ್ಸಂಶಯವನ್ನಾಗಿಸಲು, ಹೀಗೆ ತಮ್ಮ ಕೈಲಾದ ಕಾಯಕಸೇವೆ ಸಲ್ಲಿಸಿದವರು. ದೊಡ್ಡವರ ದೊಡ್ಡ ಗುಣಗಳ ಬಗ್ಗೆ ಪತ್ರಿಕೆಗಳಲ್ಲಿ ವರ್ಷಗಟ್ಟಲೆ ಅಂಕಣಗಳನ್ನು ಬರೆದ ಪಾಪು, ಹೀಗೆ ತಮ್ಮ ನಡವಳಿಕೆಯಿಂದ ಜನರಲ್ಲಿ ಜಿಗುಪ್ಸೆ , ಸಿನಿಕತೆ, ಅದರಿಂದಾಗಿ ಬೆಳೆಯುವ ಸಾಮಾಜಿಕ-ಸೋಮಾರಿತನಕ್ಕೆ ನೀರೆರೆದವರು. ಇಂತಹವರು, ತಮ್ಮಲ್ಲಿ ಇನ್ನೂ ಉಳಿದಿರುವ ಸಜ್ಜನಿಕೆಯಿಂದಾಗಿಯೋ ಅಥವಾ ವೇದಿಕೆಯ ಕೆಳಗಿರುವ ಜನರಿಂದ ಚಪ್ಪಾಳೆ ಗಿಟ್ಟಿಸಲೊ ಸತ್ಯವಾದ ಮಾತು ಹೇಳಿದರೂ ಅದು ಒಂದು ರೀತಿಯಲ್ಲಿ ಕಳಂಕ ಅಂಟಿಸಿಕೊಂಡಂತೆ ಕಾಣಿಸುತ್ತದೆ.

ಯಾವುದೇ ಕಾಲದಲ್ಲಿ, ಯಾವುದೇ ವಿಧದಲ್ಲಿ, ತನ್ನ ಸ್ವಾರ್ಥಸಾಧನೆಗಾಗಿ ಪರರಿಗೆ ನೋವುಂಟು ಮಾಡುವ ಮಾತು-ಕೃತಿಯಲ್ಲಿ ತೊಡಗುವವನು ಮಾನವದ್ವೇಷಿ ಎನ್ನುವುದರಲ್ಲಿ ಎರಡನೇ ಮಾತಿಲ್ಲ . ಆದರೆ ಮನುಷ್ಯ ಇತಿಹಾಸದಲ್ಲಿ ಕೆಟ್ಟದ್ದು ಇರದೇ ಇದ್ದ ಸಮಾಜವಾಗಲಿ, ದುಷ್ಟರು ಇರದೇ ಇದ್ದ ನಾಡಾಗಲಿ ಇಲ್ಲ . ಈಗಲೂ ಇಲ್ಲ. ಮುಂದೆಯೂ ಇರುವುದಿಲ್ಲವೇನೊ. ಮಾನವ ಜೀವನದ ಭೂತ, ವರ್ತಮಾನ, ಭವಿಷ್ಯ ಎಲ್ಲವೂ ಒಳಿತು-ಕೆಡುಕುಗಳ ಸಂಘರ್ಷಮಯ ಮತ್ತು ಇದು ಮೃತ್ಯುವಿಲ್ಲದ್ದೂ ಇರಬಹುದು. ಇಡೀ ಇತಿಹಾಸವನ್ನು ಅಸಂಖ್ಯ ಬಾರಿ ಕೆದಕಿ ಬೆದಕಿದರೂ, ನಮಗೆ, ಅಕ್ಷರಶಃ ಅಜಾತಶತ್ರುವಾಗಿದ್ದ, ಯಾರನ್ನೂ ನೋಯಿಸಿರದ ಯಾವೊಬ್ಬ ಶ್ರೇಷ್ಠಜೀವಿಯೂ ಸಿಗುವುದಿಲ್ಲ. ದುಷ್ಟ-ದುಷ್ಟತೆಯ ವಿರುದ್ಧ ಎದೆ ಸೆಟೆಸಿ ನಿಂತವರೇ ಶ್ರೇಷ್ಠರೆನಿಸಿಕೊಂಡಿದ್ದು. ಅವರನ್ನೇ ಸಜ್ಜನರು ಉಲ್ಲೇಖಿಸುವುದು; ಸಾಮಾನ್ಯರು ಸ್ಫೂರ್ತಿ ಪಡೆಯುವುದು. ಪುರಾಣಗಳಲ್ಲಿ ಅಜಾತಶತ್ರು ಎನ್ನಿಸಿಕೊಳ್ಳುವ ಯುಧಿಷ್ಠಿರನೇ, ತನ್ನ ಗುರುವನ್ನು ಕೊಲ್ಲಲು ವಂಚನೆಯ ಮಾತನ್ನು ಉಚ್ಚರಿಸಿ ಗುರುಮಗನ ಶತ್ರುವಾದನು. ದಯೆಯೇ ಧರ್ಮದ ಮೂಲವಯ್ಯ ಎನ್ನುವ ಬಸವಣ್ಣನವರೂ, ತುಂಬ ಖಡಕ್ಕಾಗಿ-

ಆರು ಮುನಿದು ಎಮ್ಮನೇನು ಮಾಡುವರು ?

ಊರು ಮುನಿದು ನಮ್ಮನೆಂತು ಮಾಡುವುದು ?

ನಮ್ಮ ಕುನ್ನಿಗೆ ಕೂಸ ಕೊಡಬೇಡ !

ನಮ್ಮ ಸೊಣಗಂಗೆ ತಣಿಗೆಯಲಿಕ್ಕಬೇಡ !

ಆನೆಯ ಮೇಲೆ ಹೋಹನ ಶ್ವಾನ ಕಚ್ಚ ಬಲ್ಲುದೆ ?

ಎಂದು, ತಮ್ಮನ್ನು ಸಂಶಯಿಸಿದವರ, ವಿರೋಧಿಸಿದವರ ವಿರುದ್ಧ ಗುಡುಗುತ್ತಾರೆ.

ಬುದ್ಧ , ಬಸವಣ್ಣ , ಗಾಂಧಿ, ಅಂಬೇಡ್ಕರ್‌ ಮತ್ತಿತರ ಎಲ್ಲಾ ದಾರ್ಶನಿಕರು ಯಾವೊಂದು ಜಾತಿಯ, ಭಾಷೆಯ, ನಾಡಿನ ಸ್ವತ್ತಲ್ಲ. ಬದಲಿಗೆ ಮಾನವ ಜಾತಿಗೆ ಸಂದ ವಿಶ್ವಮಾನವರು. ಇಂಥಹವರ ಪ್ರಭಾವ ಕ್ಷೀಣಿಸಿದ ಸಮಯದಲ್ಲಿ, ಸಾಮೂಹಿಕವಾಗಿ ಇಡೀ ನಾಡು ಪ್ರಶ್ನಿಸುವ ಮತ್ತು ಶೋಧಿಸುವ ಎದೆಗಾರಿಕೆ, ವೈಚಾರಿಕತೆ, ವೈಜ್ಞಾನಿಕತೆ ಕಳೆದುಕೊಂಡದ್ದರ ಪರಿಣಾಮವಾಗಿ ಕಳೆದ ಹತ್ತು ಶತಮಾನಗಳಲ್ಲಿ ಇವುಗಳಲ್ಲಿ ನಮಗಿಂತ ಮುಂದುವರಿದವರಿಂದ ನಿರಂತರ ದಾಳಿ, ದಾಸ್ಯ, ಅತ್ಯಾಚಾರಕ್ಕೆ ದೇಶ ಒಳಗಾಯಿತು. ನಮ್ಮಲ್ಲಿನ ಪುಡಿ ಪಾಳೆಯಗಾರರಿಗಿಂತ ಸಣ್ಣ ನಾಡಿನಿಂದ ಬಂದವರು ನಮ್ಮನ್ನು ಶತಮಾನಗಟ್ಟಲೆ ಆಳಿದ್ದು ನಮ್ಮ ಸಮಾಜದಲ್ಲಿನ ಹುಳುಕುಗಳನ್ನು, ತಾರತಮ್ಯಗಳನ್ನು ಉಪಯೋಗಿಸಿಕೊಂಡು.

ದೇಶದಲ್ಲಿ ಅಕ್ಷರಸ್ಥರು ಬೆಳೆಯುತ್ತಿರುವ ಮತ್ತು ವಿವಿಧೆಡೆಗಳಿಂದ ಸವಾಲುಗಳು ಎದುರಾಗುತ್ತಿರುವ ಸಂದರ್ಭದಲ್ಲಿ ಸತ್ಯ-ಸಹಜತೆ ಬಿಟ್ಟು, ಬುದ್ಧ-ಬಸವಣ್ಣನವರಿಗೆ ದ್ರೋಹ ಬಗೆಯುತ್ತ ಕಂದಾಚಾರಕ್ಕೆ ಜೋತುಬಿದ್ದರೆ- ನಗುವವರ, ಸಮಯ ಸಾಧಕರ ಮುಂದೆ ಪದೇಪದೆ ಎಡವಿ ಬೀಳುವ ಅಪಮಾನ, ಅಪಹಾಸ್ಯ, ದಾಸ್ಯ ತಪ್ಪದು. ಈಗ ಎಷ್ಟೇ ಪ್ರತಿಮೆ ಸ್ಥಾಪಿಸಿದರೇನು, ಮುಂದೆ ಇನ್ನೊಬ್ಬ ಮೂರ್ತಿಭಂಜಕ ಬರುವುದಿಲ್ಲ ಎನ್ನುವುದಕ್ಕೆ ಖಾತ್ರಿಯೇನು? ಆದ್ದರಿಂದ ನಮ್ಮಲ್ಲಿ ಇನ್ನೂ ಬೇರೂರಿರುವ ಹುಳುಕುಗಳಿಗೆ ಚಿಕಿತ್ಸೆಯತ್ತ ಕಾರ್ಯೋನ್ಮುಖರಾಗಬೇಕೆ ವಿನಃ ಬಸವಣ್ಣನವರು ಇಷ್ಟಪಡದದ್ದರ ಬಗ್ಗೆ ಅಲ್ಲ. ಶರಣರಂದಂತೆ, ‘ಬೆತ್ತಲಾಗದೆ ಬಯಲು ಸಿಗದಿಲ್ಲಿ’; ಅವಕಾಶ ಕಳೆದುಕೊಂಡರೆ ಈಗಿನ ಹಾಗೆ ಗತ ಇತಿಹಾಸದ ವೈಭವದ ಗುಂಗಿನಲ್ಲಿ ಮುಂದೆಯೂ ಕಾಲ ಕಳೆಯಬೇಕಾದೀತು.

ನಮ್ಮಲ್ಲಿ ಒಂದು ವಾದವಿದೆ ; ನಮ್ಮವರು ಯುದ್ಧ ಮತ್ತು ಕಾವ್ಯರಚನೆಯಲ್ಲಿ ಪರಿಣಿತರಾಗಿದ್ದ ಸಮಯದಲ್ಲಿ ಇಂಗ್ಲೆಂಡಿನವರು ಇನ್ನೂ ಮರ-ಗುಹೆಗಳಲ್ಲಿ ಜೀವಿಸುತ್ತಿದ್ದರು ಎಂದು. ಹೌದು ಸ್ವಾಮಿ! ಅವರು ಮದ್ದುಗುಂಡು ಫಿರಂಗಿಗಳೊಡನೆ ನಮ್ಮ ದೇಶಕ್ಕೆ ಬಂದಾಗ ನಾವು ಬರಿಗಾಲಲ್ಲಿ ಬಿಲ್ಲು ಬಾಣ ಭರ್ಜಿ ಕತ್ತಿ ಹಿಡಿದು ಎದುರಿಸಿದೆವು. ಅಲ್ಲಿಗೆ ಇತಿಹಾಸ ಒಂದು ಸುತ್ತು ಬೆಂಕಿ-ಗಿರಕಿ ಹೊಡೆಯಿತಲ್ಲವೆ?

ಸ್ವಾತಂತ್ರ್ಯ ದಿನದ ಆಚರಣೆ ಎಂದರೆ ಸದ್ದುಗದ್ದಲದ ಗೌಜಿಯಲ್ಲ ; ಆತ್ಮಾವಲೋಕದನ ಒಂದು ಸಂದರ್ಭವಲ್ಲವೇ ?

ಪ್ರತಿಕ್ರಿಯೆಗಳಿಗೆ ಸ್ವಾಗತ

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more