• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಡಲಾಚೆಗಿನ ಕನ್ನಡತನ ಒರೆಗೆ

By Staff
|

*ವಿಶಾಖ ಎನ್‌.

Dr.B.C.Ramachandra Sharma
  • ಹರಿಹರೇಶ್ವರರು ಇಲ್ಲಿ ಬಂದು ಅಮೆರಿಕಾದವರು ಬರೆದಿರುವ ಒಂದಿಪ್ಪತ್ನಾಲ್ಕು ಪುಸ್ತಕಗಳನ್ನು ತೋರಿಸಿದ ಮಾತ್ರಕ್ಕೆ ಅಲ್ಲಿ ಕನ್ನಡ ಚಲನಶೀಲ ಭಾಷೆಯಾಗಿದೆ ಅನ್ನೋಕಾಗಲ್ಲ.
  • ಒಮ್ಮೆ ಅಮೆರಿಕೆಯಲ್ಲಿ ವೀರಶೈವರ ಸಭೆಯಲ್ಲಿ ಭಾಷಣ ಮಾಡೋಕೆ ಹೋಗಿದ್ದೆ . ಅಡಿಗರ ಹೆಸರನ್ನು ಹೇಳಿದೆ. ಯಾರೂ ಕೇಳಿಸಿಕೊಳ್ಳಲೇ ಇಲ್ಲ. ಯಾಕೆಂದರೆ, ಅರುವತ್ತರ ದಶಕದಲ್ಲಿ ಅಮೆರಿಕಾಗೆ ಹೋದವರಿಗೆ ಅಡಿಗರೇ ಗೊತ್ತಿಲ್ಲ. ರಾಮಚಂದ್ರ ಶರ್ಮ ಬದುಕಿದ್ದಾನೋ ಇಲ್ಲವೋ ಅನ್ನೋದು ಗೊತ್ತಿರಲು ಸಾಧ್ಯವೇ ಇರಲಿಲ್ಲ. ಅಲ್ಲಿ ವಧು- ವರರ ಸಮಾವೇಶದ್ದೇ ಗುಸುಗುಸು. ಕನ್ನಡ ಸಾಹಿತ್ಯವನ್ನ ಕೇಳಿಸಿಕೊಳ್ಳುವ ಮನಸ್ಸು ಯಾರಲ್ಲೂ ಇರಲಿಲ್ಲ.
  • ಅಮೆರಿಕಾದಲ್ಲಿ ಒಬ್ಬರು, (ಅವರ ಹೆಸರನ್ನು ಹೇಳೋದಿಲ್ಲ ) ತಮ್ಮ ಹೆಂಡತಿ ಹಾಗೂ ಮಕ್ಕಳಿಂದ ಬಲವಂತವಾಗಿ ‘ರಾಮಾಯಣ ದರ್ಶನಂ’ ಕೃತಿಗೆ ಅರಿಶಿನ- ಕುಂಕುಮ ಹಾಕಿ, ಪೂಜೆ ಮಾಡಿಸುತ್ತಾರೆ. ಆದರೆ, ಯಾರೂ ಅದರ ಒಂದೇ ಒಂದು ಪುಟವನ್ನೂ ಓದಿಲ್ಲ.
  • ಕನ್ನಡ ಪ್ರೀತಿ ತೆವಲಾಗಬಾರದು. ಕಾಲು ಕುಸಿಯುವಾಗ ನೆನಪಿಗೆ ಬರುವ ಆಧ್ಯಾತ್ಮ, ಪರಂಪರೆ, ಭಾಷೆಯ ಪ್ರೀತಿ ಸಹಜವಾದ ಕನ್ನಡ ಪ್ರೀತಿಯಲ್ಲ....

ಕವಿ, ವಿಮರ್ಶಕ ಡಾ.ಬಿ.ಸಿ.ರಾಮಚಂದ್ರ ಶರ್ಮ ಮಾತಿನ ಕತ್ತಿ ಝಳಪಿಸುತ್ತಿದ್ದರೆ, ವೇದಿಕೆ ಮೇಲಿದ್ದ ಅಮೆರಿಕನ್ನಡಿಗರಾದ ಶಿಕಾರಿಪುರ ಹರಿಹರೇಶ್ವರ, ನಾಗ ಐತಾಳ್‌, ಇವರನ್ನು ಬಾಯಿತುಂಬಾ ಹೊಗಳಿದ್ದ ಡಾ. ಎನ್‌.ಎಸ್‌.ಲಕ್ಷ್ಮಿ ನಾರಾಯಣ ಭಟ್ಟ, ಹೊಗಳಲು ಸಿದ್ಧರಾಗಿದ್ದ ಕವಿ ಜಿ.ಎಸ್‌.ಶಿವರುದ್ರಪ್ಪ ತಮ್ಮ ತಮ್ಮಲ್ಲೇ ಕಿವಿಮಾತಿಗೆ ತೊಡಗಿದ್ದರು.

ಎರಡು ತಿಂಗಳ ಹಿಂದಷ್ಟೇ ಪಾರ್ಕಿನ್ಸನ್‌ ಕಾಯಿಲೆಯ ಕಾರಣಕ್ಕೆ ಮೂರನೆಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ವೈ.ಆರ್‌.ಮೋಹನ್‌ರ ‘ಅಮೆರಿಕಾಯಣ’ ಪುಸ್ತಕ ಬಿಡುಗಡೆಯಾದ ಸಮಾರಂಭವದು. ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಕೃತಿಯ ಕರ್ತೃ ಮೋಹನ್‌ ಅವರ ಸೋದರಿಯರು ಹಾಗೂ ಕೆಲವು ಬಂಧುಗಳಿದ್ದರು. ಉಳಿದಂತೆ ಒಂದಿಷ್ಟು ಸಹೃದಯರು. ಅಮೆರಿಕದಲ್ಲಿ ವರ್ಷಗಳ ಕಾಲ ಸವೆಸಿರುವ ಹಾಗೂ ಅಮೆರಿಕೆಯನ್ನು ಪದೇ ಪದೇ ನೋಡಿ ಬಂದಿರುವ ಸಾಹಿತ್ಯಿಕ ಮನಸ್ಸುಗಳನ್ನು ಇದೇ ಸಂದರ್ಭದಲ್ಲಿ ಕಲೆ ಹಾಕಿ ‘ಹೊರದೇಶಗಳಲ್ಲಿ ಕನ್ನಡ ಸ್ಥಿತಿ ಗತಿ’ ಎಂಬ ವಿಚಾರ ಸಂಕಿರಣವನ್ನೂ ನಡೆಸಲಾಯಿತು.

25 ವರ್ಷಗಳ ಕಾಲ ಇಂಗ್ಲೆಂಡ್‌ ಹಾಗೂ ಯೂರೋಪ್‌ನಲ್ಲಿ ಜೀವಿಸಿ, ಈಗ ಬೆಂಗಳೂರಲ್ಲಿ ತಳವೂರಿರುವ ಡಾ. ಬಿ.ಸಿ.ರಾಮಚಂದ್ರ ಶರ್ಮ ವಿಚಾರ ಸಂಕಿರಣದಲ್ಲಿ ನೇರವಾಗಿ ವಿದೇಶೀ ಕನ್ನಡ ಮನಸ್ಸುಗಳನ್ನು ಕೆಣಕಿದರು. ತಾವು ಯೂರೋಪಲ್ಲಿದ್ದಾಗ ತಮ್ಮ ಮಕ್ಕಳು ಕನ್ನಡ ಕಲಿಯದ್ದನ್ನು ಪ್ರಾಮಾಣಿಕವಾಗಿ ಹೇಳಿಕೊಂಡರು. ಯಾವ ಮನುಷ್ಯ ಎಲ್ಲಿ ಮನೆ ಕಟ್ಟುತ್ತಾನೋ ಅಲ್ಲೇ ಬೇರು ಬಿಡುತ್ತಾನೆ ಎಂಬ ನಂಬಿಕೆ ಇಟ್ಟುಕೊಂಡಿರುವ ಶರ್ಮ, ಸ್ವಂತವಾಗಿ ಏನೇ ಬರೆದರೂ ಕನ್ನಡದಲ್ಲೇ ಬರೆಯುತ್ತೇನೆ ಎಂದು ವ್ರತ ಹೂಡಿದ್ದರಂತೆ. ಹಾಗಾಗಿ ತಮ್ಮಲ್ಲಿ ಕನ್ನಡ ಜೀವಂತವಾಗಿದೆ ಎಂದ ಅವರು, ಇಂಗ್ಲಿಷ್‌ ಎಷ್ಟು ಸಾಕು ಅನ್ನುವುದನ್ನು ಜಿಪ್ಸಿ ಎಂಬ ಕವನದ ಸಾಲುಗಳ ಮೂಲಕ ಹೇಳಿದ್ದು ಹೀಗೆ-

ಹುಳಿ ಹಿಂಡಿ ಒಡೆದ ಹಗಲಲ್ಲಿ ಕಲಿತ ಮಾತೇ ಸಾಕು

ಸಂಜೆ ಪಬ್ಬಿಗೆ ಸಾಕು

ಸತ್ತವರ ಜತೆ ಸರಸಕ್ಕೆ ಸಾಕು

ಬೆಳೆದು ಭುಜಕ್ಕೆ ಬಂದ ಮಕ್ಕಳ ಜತೆ ವಿರಸಕ್ಕೆ ಸಾಕು ।।

Dr.U.R.Ananthamurthyಇದಕ್ಕೂ ಮುನ್ನ ವಿಚಾರ ಸಂಕಿರಣದಲ್ಲಿ ಮಾತನಾಡಿದ ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಯು.ಆರ್‌.ಅನಂತಮೂರ್ತಿ, ‘ಒಂದು ಡಾಲರ್‌= ಒಂದು ರುಪಾಯಿಯಾಗಬೇಕು. ಆಗ ಕನ್ನಡ ವ್ಯಾವಹಾರಿಕ ಹಾಗೂ ಭಾವನಾತ್ಮಕ ಭಾಷೆಯಾಗಿ ಅಮೆರಿಕಾದಲ್ಲೂ ಜೀವಂತವಾಗೇ ಇರುತ್ತೆ. ವಿನಾಶದ ಹಾದಿಯಲ್ಲಿರುವ ಬುಶ್‌ ಇನ್ನಷ್ಟು ವರ್ಷ ಅಧಿಕಾರದಲ್ಲಿದ್ದರೆ ಇದು ಸಾಧ್ಯವಾಗುತ್ತೆ’ ಎಂದು ವ್ಯಂಗ್ಯವಾಗಿ ಹೇಳುವ ಮೂಲಕ ವ್ಯಾವಹಾರಿಕವಾಗಿ ಕನ್ನಡ ವಿದೇಶಗಳಲ್ಲಿ ಬೆಳೆಯುವ ತುರ್ತು ಇದೆಯೆಂಬುದನ್ನು ಪ್ರತಿಪಾದಿಸಿದರು.

ವಿದೇಶಗಳಲ್ಲಿ ಕನ್ನಡದ ಸ್ಥಿತಿ ಗತಿ ಕುರಿತು ಅನಂತ ಲಹರಿ ಹರಿದದ್ದು ಹೀಗೆ...

‘ಪ್ರಪಂಚದ ಬಹು ಮುಖ್ಯ ಭಾಷೆಯಾದರೂ ತಮಿಳಿನಂತೆ ಕನ್ನಡ ಚಲನಶೀಲವಾಗಿಲ್ಲ . ಗುಜರಾತಿಗಳು ಸಂಸಾರ ಸಮೇತರಾಗಿ ವಿದೇಶಕ್ಕೆ ಹೋಗಿ ವ್ಯಾಪಾರ ಶುರುವಿಟ್ಟುಕೊಳ್ಳುತ್ತಾರೆ. ತಮ್ಮದೇ ಭಾಷೆಯಲ್ಲಿ ಮಾತಾಡುತ್ತಾರೆ. ತಮ್ಮದೇ ಹಬ್ಬಗಳನ್ನು ಮಾಡುತ್ತಾರೆ. ಹೀಗಾಗಿ ವ್ಯಾವಹಾರಿಕವಾಗಿ ಗುಜರಾತಿ ಚಲಾವಣೆಯಲ್ಲಿರುತ್ತದೆ. ಭಾಷೆ ಬದುಕುತ್ತದೆ. ಆದರೆ ಕನ್ನಡ ವಿದೇಶಗಳಲ್ಲಿ ಭಾವನಾತ್ಮಕವಾಗಿ ಮಾತ್ರ ಬೆಳೆಯಬೇಕಾಗಿದೆ.

‘ಗಲ್ಫ್‌ನಲ್ಲಿ ಅರಬ್‌ ಭಾಷೆ ಬಳಕೆಯಲ್ಲಿರುವುದರಿಂದ, ಕನ್ನಡ ಅದಕ್ಕಿಂತ ಸುಪೀರಿಯರ್ರು ಎಂಬ ಭಾವನೆಯಿದೆ. ಹೀಗಾಗಿ ಅಲ್ಲಿ ಕನ್ನಡ ಸಂಸ್ಕೃತಿ ಉಳಿಯುತ್ತೆ. ಯಕ್ಷಗಾನ ಕೂಡ ನಡೆಯುತ್ತೆ. ಆದರೆ ಅಮೆರಿಕೆಯಲ್ಲಿ ಇಂಥಾ ಅಗತ್ಯ ಇಲ್ಲ. ರಿಪೀಟೆಡ್‌ ಕೆಲಸ ಮಾಡುವ ‘ಕಂಪ್ಯೂಟರ್‌ ಕೂಲಿ’ಗಳಲ್ಲಾಗಲೀ, ವೃತ್ತಿಪರರಲ್ಲಾಗಲೀ ಸಂಸ್ಕೃತಿ ಉಳಿಸಿಕೊಳ್ಳುವ ಒತ್ತಡ ಇರುವುದಿಲ್ಲ. ಸಂಸ್ಕೃತಿ ಇರುವುದು ರೈತರಲ್ಲಿ, ಗಾರೆ ಕೆಲಸ ಮಾಡುವವರಲ್ಲಿ. ಅತ್ಯಾಧುನಿಕರಾಗುವವರಲ್ಲಿ ಭಾವನಾತ್ಮಕತೆಯೂ ತೆಳುವಾಗುತ್ತಾ ಹೋಗುತ್ತದೆ. ಅಮೆರಿಕಾದಲ್ಲಿರುವವರು ಕರಿಯರ ಜತೆ ಸಮೀಕರಿಸಿಕೊಂಡು ನೋಡುವ ಗೊಡವೆಗೆ ಹೋಗೋದಿಲ್ಲ. ಹಾಗೆ ಮಾಡಿದರೆ, ನಮ್ಮ ದಲಿತ ಸಾಹಿತ್ಯ ನೆನಪಿಗೆ ಬರುತ್ತೆ. ಸಂಸ್ಕೃತಿಯ ಬೇರುಗಳು ಕೆಣಕುತ್ತವೆ. ಆದರೆ, ಮುಂದಿನ ಜನಾಂಗ ಅಲ್ಲಿ ಕನ್ನಡ ಉಳಿಸಿಕೊಳ್ಳುವ ಅನುಮಾನದ ಆತಂಕವಿದೆ.

‘ಯೂರೋಪ್‌ ಕನ್ನಡವನ್ನು ಒಳಗೊಳ್ಳುತ್ತಿದೆ. ಕನ್ನಡದ ಸಾಹಿತ್ಯ ಅಲ್ಲಿ ಇಂಗ್ಲಿಷ್‌ಗೆ ತರ್ಜುಮೆಯಾಗಿ, ಕೃತಿಗಳ ಬಗ್ಗೆ ಅನೇಕ ಪ್ರಬಂಧಗಳು ಬರುತ್ತಿವೆ. ಅಮೆರಿಕಾದಲ್ಲೂ ಹೀಗಾಗಬೇಕು. ಕರ್ನಾಟಕದ ಎಲ್ಲರೂ ಸಾಕ್ಷರರಾಗಬೇಕು, ಎಂಎನ್‌ಸಿಗಳಿಗೆ ಕಡ್ಡಾಯವಾಗಿ ಕನ್ನಡ ಬರಬೇಕು ಅಂತ ಕೃಷ್ಣ ಅಪ್ಪಣೆ ಕೊಡಿಸಬೇಕು- ಹೀಗಾದರೆ ಅಮೆರಿಕಾದಲ್ಲೂ ಕನ್ನಡ ಉಳಿಯುತ್ತೆ’.

Shikaripura Harihareshwaraಅಮೆರಿಕೆಯ ಕನ್ನಡ ಮನಸ್ಸುಗಳನ್ನು ಕೆಣಕಿದ ಅನಂತಮೂರ್ತಿಯವರಿಗೆ ಉತ್ತರ ಕೊಡುವ ಆತ್ಮವಿಶ್ವಾಸ ತುಂಬಿಕೊಂಡ ಶಿಕಾರಿಪುರ ಹರಿಹರೇಶ್ವರ, ಕಡಲಾಚೆ ಆಗಿರುವ ಕನ್ನಡದ ಕೆಲಸಗಳನ್ನು ಪುಂಖಾನುಪುಂಖ ಬಿಚ್ಚಿಟ್ಟರು. ಅಲ್ಲಿ ಪ್ರಕಟವಾಗಿರುವ ಹಾಗೂ ಪ್ರಶಸ್ತಿ ಪಡೆದು ಶಹಬ್ಭಾಸ್‌ಗಿರಿ ಪಡೆದಿರುವ ಒಂದೊಂದೂ ಪುಸ್ತಕಗಳನ್ನು ಲೇಖಕ/ಕವಿಗಳ ಹೆಸರಿನ ಸಮೇತ ಸಭಿಕರಿಗೆ ತೋರಿಸಿದರು. ಅಲ್ಲಿ ಪ್ರಕಟವಾಗಿರುವ ಎಲ್ಲಾ ಸ್ಮರಣ ಸಂಚಿಕೆಗಳನ್ನು ಎತ್ತಿ ತೋರಿಸಿದರು. ಕೃತಿಗಳನ್ನು ತೋರಿಸುವ ಮೂಲಕವೇ ಅಮೆರಿಕೆಯಲ್ಲಿ ಕನ್ನಡ ಗಟ್ಟಿಯಾಗಿದೆ, ಗಟ್ಟಿಯಾಗಿರುತ್ತೆ ಎಂದು ಭರಪೂರ ಆತ್ಮವಿಶ್ವಾಸದಿಂದ ಹರಿಹರೇಶ್ವರ ಹೇಳಿದರು.

Naga Aithalವಿದೇಶಗಳ ಅಪ್ಪ- ಅಮ್ಮಂದಿರು ತಮ್ಮ ಮಕ್ಕಳಿಗೆ ಕಷ್ಟ ಪಟ್ಟಾದರೂ ಸರಿ, ಕನ್ನಡ ಕಲಿಸಬೇಕಾದ ಅಗತ್ಯತೆಯನ್ನು ಪ್ರಾಮಾಣಿಕವಾಗಿ ಹೇಳಿದ ಇನ್ನೊಬ್ಬ ಅಮೆರಿಕನ್ನಡಿಗ ನಾಗ ಐತಾಳರು ಅಮೆರಿಕೆಯಲ್ಲಿ ಕನ್ನಡತನ ಜತನದಿಂದ ಉಳಿದು ಬಂದ ಬಗೆಯನ್ನು ತಿಳಿಸಿದರು. ಊಟದ ಕೂಟಗಳು ಸಂಘಗಳಾಗಿ, ಅವುಗಳ ಸಾಂಸ್ಕೃತಿಕ ಚಟುವಟಿಕೆಗಳ ಹರಹು ವಿಸ್ತರಣೆಯಾದದ್ದನ್ನು ಅನುಭವಗಳ ಮೂಲಕ ಹೇಳಿದರು. ಅಮೆರಿಕಾದ ಶಾಲೆಗಳ ಪೇರೆಂಟ್ಸ್‌ ಟೀಚರ್ಸ್‌ ಅಸೋಸಿಯೇಷನ್‌ನಲ್ಲಿ ನಮ್ಮ ಸಂಸ್ಕೃತಿಯ ಒಂದೆರಡು ಕಾರ್ಯಕ್ರಮಗಳನ್ನಾದರೂ ಆಯಾ ಶಾಲೆಗಳಲ್ಲಿ ನಡೆಸಲು ಅನುಮತಿ ಕೊಡುವಂತೆ ಕೋರಬೇಕೆಂಬ ಕಿವಿ ಮಾತು ಹಾಕಿದರು. ಕನ್ನಡ ಉಳಿಸಲು ಮುಂದೇನು ಮಾಡಬೇಕೆಂದು ಶೃಂಗಸಭೆ ಕರೆಯಬೇಕು ಎಂದು ಸಲಹೆಯಿತ್ತರು.

ಕವಿ ಎನ್‌.ಎಸ್‌.ಲಕ್ಷ್ಮಿನಾರಾಯಣ ಭಟ್ಟ ಅಮೆರಿಕೆಯ ದೇವಸ್ಥಾನ ಸಂಸ್ಕೃತಿ ಹಾಗೂ ಅಲ್ಲಿ ಜೀವಂತವಾಗಿರುವ ಕನ್ನಡ ತುಡಿತವನ್ನು ಮನಸಾರೆ ಕೊಂಡಾಡಿದರು. ಸಂಕಿರಣದ ಅಧ್ಯಕ್ಷತೆ ವಹಿಸಿದ್ದ ಕವಿ ಜಿಎಸ್ಸೆಸ್‌ ‘ಷಣ್ಮುಖ ಸಾಹಸಿ’ಗಳಾದ ವಿದೇಶೀ ಕನ್ನಡಿಗರನ್ನು ವಾಚಾಮಗೋಚರ ಹೊಗಳಿದರು. ಹಾಗೆ ನೋಡಿದರೆ, ಇಲ್ಲಿನ ಕನ್ನಡಿಗರಿಗಿಲ್ಲದ ವಿಶೇಷ ಪ್ರೀತಿ ಅಲ್ಲಿದೆ ಎಂದರು.

Y.R.Mohan, The Author of Amerikayanaಮೋಹನ್‌ರ ‘ಅಮೆರಿಕಾಯಣ’ ಪುಸ್ತಕವನ್ನು ಡಾ. ಪ್ರಭುಶಂಕರ್‌ ಪರಿಚಯ ಮಾಡಿಕೊಟ್ಟರು. ಪಾರ್ಕಿಸನ್‌ ಕಾಯಿಲೆಯ ತೊಂದರೆಯ ನಡುವೆಯೂ ಅವರು 1000 ಪುಟಗಳ ಅಮೆರಿಕೆಯ ಇತಿಹಾಸವನ್ನು ಕಾದಂಬರಿ ಧಾಟಿಯಲ್ಲಿ ಬರೆದ್ದಾರೆ. ಇಂತಹ ಚರಿತ್ರೆಯಿರುವ ಪುಸ್ತಕವನ್ನು ಈವರೆಗೆ ಯಾರೂ ಬರೆದಿಲ್ಲ ಎಂದು ಚರಿತ್ರೆಯ ಅಧ್ಯಾಪಕರು ಮೊಹರು ಒತ್ತಿದ್ದಾರೆ ಎಂದ ಪ್ರಭುಶಂಕರ್‌, ಈ ಕೃತಿ ರಚನೆ ಒಂದು ಅದ್ಭುತ ಕೆಲಸ ಎಂದರು.

ತಮ್ಮ ಬಾಲ್ಯದ ಗೆಳೆಯ ಮೋಹನ್‌ ಪೂರ್ಣ ಆರೋಗ್ಯ ಇದ್ದಾಗ ಇಂಥಾ ಕೃತಿ ಬರೆದಿದ್ದರೂ ಸಹ ಅದು ಮಹತ್ತರವಾದದ್ದೇ ಆಗಿರುತ್ತಿತ್ತು. ಆತ ಭಾರತದಲ್ಲೇ ಇದ್ದಿದ್ದರೆ ಸಮಾಜಶಾಸ್ತ್ರ ಇನ್ನೂ ಶ್ರೀಮಂತವಾಗುತ್ತಿತ್ತು (ಮೋಹನ್‌ ಸಮಾಜಶಾಸ್ತ್ರದ ಪ್ರೊಫೆಸರ್‌!) ಎಂದು ಅನಂತಮೂರ್ತಿ ಹೇಳಿದಾಗ ಅವರ ಕಣ್ಣಾಲಿಯಲ್ಲಿ ಸಣ್ಣಗೆ ನೀರು ತುಂಬಿತ್ತು.

ಅಂದಹಾಗೆ, ಅಮೆರಿಕೆಯ ಅನೇಕ ಕನ್ನಡ ಮನಸ್ಸುಗಳ ಹೆಮ್ಮೆಯ ಆಗರವಾಗಿದ್ದ ‘ಅಕ್ಕ’ದಲ್ಲಿ ಕಾಣಿಸಿಕೊಂಡಿರುವ ಬಿರುಕಿನ ಬಗ್ಗೆ ಯಾರೊಬ್ಬರೂ ತುಟಿ ಪಿಟಿಕ್ಕನ್ನದಿದ್ದುದು ಸಂಕಿರಣದ ವಿಷಯ ವ್ಯಾಪ್ತಿಯನ್ನು ಸೀಮಿತಗೊಳಿಸಿತು. ವರ್ತಮಾನಕ್ಕೆ ಸಂವಾದಿಯಾಗದ ಇಂಥ ಸಂಕಿರಣ ಪರಿಪೂರ್ಣವಾಗದು ಎಂದು ಸಭಿಕರೊಬ್ಬರು ಗೊಣಗಿದ್ದು ಕಿವಿಗೆ ಬಿತ್ತು. ಸಂಕಿರಣದಲ್ಲಿ ಪಾಲ್ಗೊಂಡಿದ್ದ ಒಟ್ಟು 6 ಮಂದಿಯ ಸರಾಸರಿ ವಯಸ್ಸು 68 ! ಈ ತಲೆಮಾರಿನ ಯಾರೊಬ್ಬರಿಗೂ ಸಂಕಿರಣದಲ್ಲಿ ಭಾಗವಹಿಸುವ ಅವಕಾಶ ಕೊಡದಿದ್ದುದು ಈ ಸಂಕಿರಣ ಸಾಹಸದ ಒಂದು ದೋಷ. ಹಳಬರು ಚರ್ವಿತ ಚರ್ವಣ ಮಾಡುತ್ತಲೇ ಇದ್ದರೆ ಹೊಸ ಸವಾಲುಗಳನ್ನು ಮಂಡಿಸುವವರು ಯಾರು ?

ಅಭಿನವ ಪ್ರಕಾಶನ ಪ್ರಕಟಿಸಿರುವ ವೈ.ಆರ್‌.ಮೋಹನ್‌ರ ‘ಅಮೆರಿಕಾಯಣ’ ಕೃತಿಯ ಬೆಲೆ 650 ರುಪಾಯಿ.

ಶರ್ಮ ಹಾಗೂ ಅನಂತಮೂರ್ತಿ ವಿಚಾರಗಳನ್ನು ನೀವು ಒಪ್ಪುವಿರಾ ?

ಇವನ್ನೂ ಓದಿ

ಮೇ14ಕ್ಕೆ ಮೋಹನ್‌ರ ‘ಅಮೆರಿಕಾಯಣ’ ಬಿಡುಗಡೆ

ನಾನು ಓದಿದ ಪುಸ್ತಕ ವೈ.ಆರ್‌. ಮೋಹನ್‌ರ ‘ನೆನಪುಗಳು’

ಇದು ನಾಗ ಐತಾಳರ ಪುಸ್ತಕ ಮಾತ್ರವಲ್ಲ ; ಪ್ರತಿಯಾಬ್ಬ ಅಮೆರಿಕನ್ನಡಿಗನ ಅನುಭವ ಕಥನ

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more