ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧುನಿಕ ಕನ್ನಡ ಸಾಹಿತ್ಯ ಮತ್ತು ನವ್ಯೋತ್ತರ ಕವಿತೆ

By ಪುರುಷೋತ್ತಮ ರಾವ್‌ ಉಡುಪಿ
|
Google Oneindia Kannada News

ಪದ್ಯ ಮತ್ತು ಗದ್ಯಕ್ಕಿರುವ ವ್ಯತ್ಯಾಸ ಏನು ?

ಛಂದಸ್ಸು, ಪ್ರಾಸ, ಚರಣ ಅಂತೆಲ್ಲಾ ನಮ್ಮ ವಯ್ಯಾಕರಣಿಗಳು ಸಿದ್ಧ ಸೂತ್ರಗಳನ್ನು ಮುಂದಿಡುತ್ತಾ ಹೋಗಬಹುದು. ಆದರೆ ದಟ್ಸ್‌ಕನ್ನಡ.ಕಾಂನಲ್ಲಿ ಪ್ರಕಟವಾದ 'ಸುಬ್ಬು ಲೇಖನ ಮಾಲಿಕೆ'ಯ ಸತೀಶ್‌ಕುಮಾರ್‌ ಅವರು ಹೇಳೋದೆ ಬೇರೆ. 'ಪದಗಳನ್ನು ಒಂದರ ಪಕ್ಕದಲ್ಲಿ ಇನ್ನೊಂದರಂತೆ ಬರೆದರೆ ಅದು ಗದ್ಯ, ಒಂದರ ಕೆಳಗೆ ಇನ್ನೊಂದರಂತೆ ಬರೆದರೆ ಅದು ಪದ್ಯ' ಎಂದು ಸತೀಶ್‌ ವ್ಯಾಖ್ಯಾನಿಸುತ್ತಾರೆ. ಈ ಮಾತನ್ನು ಸತೀಶ್‌ ತಮಾಷೆಯಾಗಿ ಹೇಳುತ್ತಾರಾದರೂ, ಸದ್ಯದ ಕನ್ನಡ ಕಾವ್ಯ ಇಂಥದೊಂದು ಸುಲಭದ ಹಾದಿಯಲ್ಲಿ ನಡೆಯುತ್ತಿರುವ ಉದಾಹರಣೆಗಳನ್ನು ನಾವು ಪ್ರತಿ ಭಾನುವಾರ ಪತ್ರಿಕೆಯ ಪುರವಣಿಗಳಲ್ಲಿ ಕಾಣುತ್ತಿದ್ದೇವೆ. ಈ ಮಾತು ಪಕ್ಕಕ್ಕಿಡಿ ; ಸತೀಶ್‌ಕುಮಾರ್‌ ಮುಂದಿನ ಮಾತುಗಳನ್ನು ಕೇಳಿ.

ಕಳೆದ ಭಾನುವಾರ, ಜನವರಿ 12 ರಂದು- ಬಾವರ್‌ ಕಮ್ಯೂನಿಟಿ ಸೆಂಟರ್‌ನಲ್ಲಿ ನಡೆದ ಭೂಮಿಕಾದ ವಿಚಾರಗೋಷ್ಠಿಯಲ್ಲಿ ಸತೀಶ್‌ಕುಮಾರ್‌ ಮಾತನಾಡುತ್ತಿದ್ದರು. 'ಆಧುನಿಕ ಕನ್ನಡ ಸಾಹಿತ್ಯ - ನವ್ಯೋತ್ತರ ಕವಿತೆ ಮತ್ತು ಕಾವ್ಯ' ಎನ್ನುವುದು ಅವರ ಮಾತಿನ ವಿಷಯ. ಜಟಿಲವಾದ ಆಧುನಿಕ ಕನ್ನಡ ಸಾಹಿತ್ಯದ ಕುರಿತು ಸತೀಶ್‌ ಸರಳ ಶೈಲಿಯಲ್ಲಿ ಮಾತನಾಡಿದ್ದು - ಕಾರ್ಯಕ್ರಮದಲ್ಲಿ ನೆರೆದಿದ್ದ ಆಸಕ್ತರಿಗೆ ಸುಲಭವಾಗಿ ಜೀರ್ಣವಾಯಿತು. ಅಂದಮೇಲೆ, ಕಾರ್ಯಕ್ರಮ ಯಶಸ್ವಿ ಅನ್ನಲಡ್ಡಿಯಿಲ್ಲವಲ್ಲ !

ಪ್ರಾಥಮಿಕ ತರಗತಿಯ ಪ್ರಶ್ನೆ ಪತ್ರಿಕೆಯಲ್ಲಿ ಕೇಳಿದ ಹಾಗೆ ಸತೀಶ್‌ರ ಉಪನ್ಯಾಸವನ್ನು ಒಂದು ಸಾಲಿನಲ್ಲಿ ಬಣ್ಣಿಸುವುದಾದರೆ- ಸತೀಶರು ನಡೆಸಿದ್ದು 'ನವ್ಯೋತ್ತರ ಸಾಹಿತ್ಯದ ಪಕ್ಷಿನೋಟ'.

ಸಾಹಿತ್ಯ ಕಥನದ ಲಾಭನಷ್ಟದ ವಿಶ್ಲೇಷಣೆ

ಒಂದು ಜನಾಂಗದ ಕಣ್ಣು ತೆರೆಸಿದ ನವ್ಯದ ಶ್ರೇಷ್ಠದ ಲೇಖಕ ಗೋಪಾಲಕೃಷ್ಣ ಅಡಿಗರಿಂದ ಹಿಡಿದು ಇಂದಿನ ಜ್ಯೋತಿ ಮಹಾದೇವ ಅವರವರೆಗೆ ವಿಸ್ತರಿಸಿರುವ ನವ್ಯೋತ್ತರ ಕಾವ್ಯ ಮತ್ತು ಕವಿತೆಯ ಸ್ವರೂಪವನ್ನು ವಿಶ್ಲೇಷಿಸುವುದು ಸುಲಭದ ಮಾತಲ್ಲ. ಆಧುನಿಕ ಕನ್ನಡ ಸಾಹಿತ್ಯದ ವಿವಿಧ ಮಜಲುಗಳಾದ ನವೋದಯ, ಪ್ರಗತಿಶೀಲ, ರಮ್ಯ, ನವ್ಯ, ನವ್ಯೇತರ, ನವ್ಯೋತ್ತರ, ಬಂಡಾಯ ಸಾಹಿತ್ಯದ ಪದರುಗಳ ಬಿಡಿಸುತ್ತಾ ಹೋದ ಸತೀಶ್‌ ಕುಮಾರ್‌- ನವ್ಯೋತ್ತರ ಕಾವ್ಯ ಮತ್ತು ಕವಿತೆ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸಿದರು.

ಇತರ ಭಾಷೆಗಳಿಂದ ಕನ್ನಡ ನವ್ಯೋತ್ತರ ಸಾಹಿತ್ಯಕ್ಕೆ ಉಂಟಾದ ಲಾಭ-ನಷ್ಟದ ಕುರಿತು ಚುಟುಕಾಗಿ ವಿವರಿಸಿದರು. ಕನ್ನಡಕ್ಕೆ ಆಧುನಿಕ ಸಾಹಿತ್ಯದ ಗಾಳಿ ಬೀಸಿದ್ದೇ ಆಂಗ್ಲ ಶಿಕ್ಷಕರ ಮೂಲಕ ಎಂದ ಸತೀಶ್‌, ಕನ್ನಡದ ಶ್ರೇಷ್ಠ ವಿಮರ್ಶಕರಾದ ಡಿ.ಆರ್‌. ನಾಗರಾಜ್‌ ಅವರ 'ಸಾಹಿತ್ಯ ಕಥನ' ಕೃತಿಯಿಂದ ಹಲವಾರು ವಿಚಾರಗಳನ್ನು ಪ್ರಸ್ತಾಪಿಸಿದರು. (ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ದಿವಂಗತ ಡಿ.ಆರ್‌.ನಾಗರಾಜ್‌ ಅವರ ಬರಹಗಳ ಸಂಗ್ರಹ ರೂಪವೇ- ಸಾಹಿತ್ಯ ಕಥನ. ಕನ್ನಡ ಪುಸ್ತಕ ಪ್ರಾಧಿಕಾರ ಈ ಮಹತ್ವದ ಪುಸ್ತಕವನ್ನು ಪ್ರಕಟಿಸಿದೆ. ಸಂಪಾದಕರು ಅಗ್ರಹಾರ ಕೃಷ್ಣಮೂರ್ತಿ).

ಪ್ರಸಕ್ತ ವಿದ್ಯಮಾನಗಳು ವರ್ತಮಾನ ಸಾಹಿತ್ಯದ ಮೇಲೆ ಬೀರುವ ಪರಿಣಾಮಗಳ ಕುರಿತು ಉದಾಹರಣೆ ಸಮೇತವಾಗಿ ಸತೀಶ್‌ ವಿವರಿಸಿದ್ದು ಕೇಳುವಂತಿತ್ತು. ಚಂದ್ರಶೇಖರ ಕಂಬಾರರಂತವರ ಸಾಹಿತ್ಯದಲ್ಲಿ ಹೇಗೆ ಗ್ರಾಮೀಣ ಜನ ಜೀವನದ ಸೊಗಡು ಹಾಸುಹೊಕ್ಕಾಗಿದೆ ಎನ್ನುವುದನ್ನು ಹೇಳತೇನ ಕೇಳ ಎಂದು ಬಣ್ಣಿಸಿದರು.

ದಟ್ಸ್‌ಕನ್ನಡ ಕವನ ಸ್ಪರ್ಧೆ ಬಹುಮಾನಿತ ಕವನಗಳ ವಾಚನ

ದಟ್ಸ್‌ ಕನ್ನಡ ಡಾಟ್‌ಕಾಮ್‌ ಹಾಗೂ ಸಪ್ನ ಬುಕ್‌ಹೌಸ್‌ ನಡೆಸಿದ ಜಾಗತಿಕ ಕವನ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಕವನಗಳನ್ನು ಸತೀಶ್‌ಕುಮಾರ್‌ ವಾಚಿಸಿದ್ದು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತ್ತು . ತಾವು ಅಮೇರಿಕಾಕ್ಕೆ ಬಂದ ಹೊಸತಿನಲ್ಲಿ ಬರೆದ 'ದಿಗ್ಗಜರ ನಡುವೆ' ಎಂಬ ಕವಿತೆಯನ್ನು ಸಹ ಸತೀಶ್‌ ವಾಚಿಸಿದರು.

ಕಾರ್ಯಕ್ರಮದ ಕೊನೆಗೆ ಮುಕ್ತ ಚರ್ಚೆಗೆ ಅವಕಾಶವಿದ್ದು , ಸಾಹಿತ್ಯಾಸಕ್ತರಿಗೆ ತಮ್ಮ ತಮ್ಮ ಅನುಭವ ಅನುಮಾನಗಳನ್ನು ಹಂಚಿಕೊಳ್ಳಲು ಅನುವಾಯಿತು. ಪದ್ಮಜಾ ಪ್ರಭಾಕರ್‌ ಅವರು ಮಾಡಿಕೊಂಡು ಬಂದ ಸಿಹಿ ತಿಂಡಿಯ ಸ್ವಾದವನ್ನು ಇಲ್ಲಿ ತಪ್ಪದೇ ನೆನೆಯಬೇಕು.

English summary
Satish kumar Alexandriya speaks on modern kannada literature in bhoomika
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X