ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರಿದಾಸ ಸಾಹಿತ್ಯದ ಆದ್ಯ ಪ್ರವರ್ತಕ ಮಹರ್ಷಿಶ್ರೀಪಾದರಾಜರು

By Staff
|
Google Oneindia Kannada News
  • ಮಧುಸೂದನ ಭೀಮಸೇನರಾವ್‌, ಕನೆಕ್ಟಿಕಟ್‌, ಅಮೇರಿಕ
    [email protected]
ಶ್ರೀಪಾದರಾಜರು ಸುಮಾರು 14 ನೇ ಶತಮಾನದಲ್ಲಿ ಅವತರಿಸಿದ್ದ ಮಹಾನುಭಾವರು. ಮಧ್ವಾಚಾರ್ಯರ ಪರಂಪರೆಯಲ್ಲಿ ಬಂದ ಇವರು ಅಗಿನ ಕಾಲದಲ್ಲಿ ,ಕನ್ನಡವೆಂದರೆ ಮೂಗು ಮುರಿಯುತ್ತಿದ್ದ ವಾತಾವರಣದಲ್ಲಿ, ಸಕಲ ವೇದಗಳ, ಉಪನಿಷತ್ತುಗಳ, ಮಧ್ವಾಚಾರ್ಯರ ತತ್ತ್ವವಾದವನ್ನು ಸಂಸ್ಕೃತ ಭಾಷೆಯ ಮತ್ತು ಶಾಸ್ತ್ರದ ಅರಿವಿಲ್ಲದ ಸಾಮಾನ್ಯ ಜನರಿಗೋಸ್ಕರವಾಗಿ, ಸರಳ ಕನ್ನಡದಲ್ಲೇ ಹಾಡು, ಉಗಾಭೋಗ ಮತ್ತು ಸುಳಾದಿಗಳನ್ನು ರಚಿಸಿ ಮಾಡಿದ ಉಪಕಾರ ಸ್ಮರಣೀಯವಾದುದು.ಇವರ ಶಿಷ್ಯರೇ ವಿಜಯನಗರದ ಸಾಮ್ರಾಜ್ಯದ ಅಧಿಪತಿಯಾಗಿದ್ದ ಕೃಷ್ಣದೇವರಾಯನ ರಾಜಗುರುಗಳಾಗಿದ್ದ ವ್ಯಾಸರಾಜರು.

Sripadarajaruವ್ಯಾಸರಾಜರ ಶಿಷ್ಯರೇ ಕರ್ನಾಟಕ ಸಂಗೀತ ಪಿತಾಮಹರೆಂದು ಪ್ರಸಿದ್ಧಿ ಪಡೆದ ಪುರಂದರದಾಸರು. ಹರಿದಾಸ ಸಾಹಿತ್ಯ ಉದಯವಾದದ್ದೇ, ಮಧ್ವಾಚಾರ್ಯರಿಂದ. ಅವರ ದ್ವಾದಶ ಸ್ತೋತ್ರಗಳಿಂದ ಸ್ಫೂರ್ತಿಗೊಂಡ ಅವರ ಸಾಕ್ಷಾತ್‌ ಶಿಷ್ಯರಾದ ನರಹರಿ ತೀರ್ಥರು ಕನ್ನಡದಲ್ಲಿ ರಚಿಸಿದ ದೇವರನಾಮಗಳು ಇಂದಿಗೂ ಸಹ ಲಭ್ಯವಿದೆ. ಪೂರ್ಣಪ್ರಮಾಣದಲ್ಲಿ ಹರಿದಾಸ ಸಾಹಿತ್ಯ ರೂಪುಗೊಂಡದ್ದು ಶ್ರೀಪಾದರಾಜರಿಂದ. ಸಂಸ್ಕೃತದಲ್ಲಿ ಅವರು ರಚಿಸಿದ ‘ವಾಗ್ವಜ್ರ’ ಗ್ರಂಥವೊಂದರ ಉಲ್ಲೇಖದ ಹೊರತು ಮಿಕ್ಕೆಲ್ಲ ಅವರ ಕೃತಿಗಳು ಕನ್ನಡಲ್ಲೇ. ಅವರ ಕೃತಿಗಳನ್ನು ಅವಲೋಕಿಸಿದಾಗ ಆಗುವ ಅನುಭವವೇ ಬೇರೆ. ಪರಮಾತ್ಮನನ್ನು ಅತಿಶಯ ಪ್ರೀತಿಯಿಂದ ಕರೆಯುವ ‘ಬಾರೋ ಮನೆಗೆ ಗೋವಿಂದ’, ಮನುಷ್ಯರಿಗೆ ಏನು ಭೂಷಣ ? ಎಂದು ವರ್ಣಿಸುವ ‘ಭೂಷಣಕೆ ಭೂಷಣ’, ‘ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ’ ಕೃತಿಗಳು ಮನಸೆಳೆಯುತ್ತವೆ.

ಶ್ರೀಪಾದರಾಜರು ಕೃಷ್ಣನ ಮೇಲೆ ಅನೇಕ ಕೃತಿಗಳನ್ನು ರಚಿಸುತ್ತಾ, ಭಾಗವತದ ದಶಮ ಸ್ಕಂದವನ್ನೇ ನಮ್ಮ ಮುಂದಿಟ್ಟಿರುತ್ತಾರೆ. ಕೃಷ್ಣ ಆಟವಾಡಿ ಮನೆಗೆ ಬಂದಾಗ ‘ಎಲ್ಲಾಡಿ ಓಡಿ ಬಂದೆ ರಂಗಯ್ಯ’, ಯಶೋದೆ ಕೃಷ್ಣನನ್ನು ಹುಡುಕಿ ಹುಡುಕಿ ಸುಸ್ತಾಗಿ ಕೊನೆಗೆ ಅವನನ್ನು ಕಂಡಾಗ ‘ಅಷ್ಟ ದಿಕ್ಕಿನಲ್ಲರಸಿ ಕಾಣದೇ ಬಲು ಕಷ್ಟಪಟ್ಟೆನೋ ನಿನ್ನ ನೋಡದೇ’ ಎಂದು ಪರಿತಪಿಸುವ ಪರಿಯನ್ನು ವರ್ಣಿಸಿದ್ದಾರೆ. ಈ ಕೃತಿಯಲ್ಲಿ ಪರಮಾತ್ಮನ ಸರ್ವೋತ್ತಮತ್ವವನ್ನೂ ಸಾರಿದ್ದಾರೆ. ಗೋಪಿಕಾ ಸ್ತ್ರೀಯರು ಕೃಷ್ಣನನ್ನು ‘ಪೋಪು ಹೋಗೋಣ ಬಾರೋ ರಂಗ’ ಎಂದು ಕರೆಯುವ ಶೈಲಿಯನ್ನು ಬಹಳ ಸುಂದರವಾಗಿ ಚಿತ್ರಿಸಿದ್ದಾರೆ. ಶ್ರೀಪಾದರಾಜರ ಕೃತಿ ‘ಕಾಡ ಬೆಳದಿಂಗಳು ಈ ಸಂಸಾರ ಕತ್ತಲೆ ಬೆಳದಿಂಗಳು’ ಬಹಳ ಪರಿಣಾಮಕಾರಿಯಾಗಿ ನೈಜ ವಿರಕ್ತಿ ಹುಟ್ಟಿಸುತ್ತದೆ.

ಶ್ರೀಪಾದರಾಜರು ಹಾಡುಗಳಲ್ಲದೇ ಭಾಗವತದ ‘ಭ್ರಮರಗೀತೆ’ಯನ್ನು ಸರಳಸುಂದರವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ನರಸಿಂಹ ದಂಡುಕ, ಹಳೆಗನ್ನಡದಲ್ಲಿದ್ದು ಪಂಪ-ರನ್ನರ ಕೃತಿಗಳನ್ನು ನೆನಪಿಸುತ್ತದೆ.ಇವರು ತಮ್ಮ ‘ಇಟ್ಟಾಗೆ ಇರುವೆನೋ ಹರಿಯೇ ಎನ್ನ ದೊರೆಯೇ’ ಕೃತಿಯಲ್ಲಿ ಜೀವನ ಅಸ್ವಾತಂತ್ರ್ಯವನ್ನು , ಪರಮಾತ್ಮನ ಸ್ವಾತಂತ್ರ್ಯವನ್ನು ಬಹಳ ಸುಂದರವಾಗಿ, ಅನುಭವದ ನುಡಿಗಳಿಂದ ಪ್ರತಿಪಾದಿಸಿದ್ದಾರೆ. ಶ್ರೀಪಾದರಾಜರು ಹರಿದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿ, ಭಕ್ತಿಯ ಮಹತ್ವವನ್ನು ಸಾರಿ ಸಜೀವವಾಗಿ ವೃಂದಾವನವನ್ನು ಶಾ.ಶ. 1416 ಜೇಷ್ಠ ಶುದ್ಧ ಚತುರ್ದಶಿ ದಿನದಂದು ಪ್ರವೇಶಿಸಿದರು.

ಶ್ರೀಪಾದರಾಜರ ಆರಾಧನೆಯ ಪ್ರಯುಕ್ತವಾಗಿ ಅವರ ಸಮಗ್ರ ಕೃತಿಗಳನ್ನೊಳಗೊಂಡ E-Book ನ್ನು ಹರಿದಾಸ ಸಂಪುಟ ಅಂತರ್ಜಾಲ ತಾಣದಲ್ಲಿ ಪ್ರಕಟಿಸಲು ಹರ್ಷಿಸುತ್ತೇವೆ.(ಸಂಗ್ರಹ ಮತ್ತು ಸಂಕಲನ: ಮಧುಸೂದನರಾವ್‌ . ಸಿ.ಆರ್‌,ಬೆಂಗಳೂರು)

ಶ್ರೀಪಾದರಾಜರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಅಂತರಜಾಲ ತಾಣಗಳಿಗೆ ಭೇಟಿ ಕೊಡಿ.
1. ಶ್ರೀಪಾದರಾಜರ ಜೀವನ ಚರಿತ್ರೆ ಕನ್ನಡದಲ್ಲಿ ‰‰.. ತತ್ತ್ವವಾದ ಮತ್ತು ಹರಿದಾಸ ಸಂಪುಟ
2. ಶ್ರೀಪಾದರಾಜರ ಜೀವನ ಚರಿತ್ರೆ ಇಂಗ್ಲೀನಲ್ಲಿ ತತ್ತ್ವವಾದ ಅಂತರಜಾಲ ತಾಣದಲ್ಲಿ (ಭಕ್ತಕುಂಬಾರ,ಬಬ್ರುವಾಹನದಂತಹ ಉತ್ತಮ ಚಿತ್ರಗಳನ್ನು ಕನ್ನಡ ಬೆಳ್ಳಿ ತೆರೆಗಿತ್ತ ದಿ. ಹುಣಸೂರು ಕೃಷ್ಣಮೂರ್ತಿಯವರ ಪುತ್ರ ಶೀ ಹುಣಸೂರು ಶ್ರೀಪ್ರಸಾದರ ಪ್ರಬುದ್ಧ ಲೇಖನ)
3. ಶ್ರೀಪಾದರಾಜರು ಶ್ರೀ ಮಧ್ವಾಚಾರ್ಯರನ್ನು ಕುರಿತು ರಚಿಸಿರುವ ಮಧ್ವನಾಮದ ಆಂಗ್ಲ ಅವತರಣಿಕೆ

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X